Tag: spacex

  • ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

    ಅಂತರಿಕ್ಷ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ – ಭಾರತದಿಂದ ‘ಸಪ್ತ ಸಂಶೋಧನೆ’

    ನವದೆಹಲಿ: ಬಹುನಿರೀಕ್ಷಿತ ಆಕ್ಸಿಯಮ್-4 ಮಿಷನ್‌ನ (Axiom-4 Mission) ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್ ಸುದೀರ್ಘ ಪ್ರಯಾಣದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದೆ. ಭಾರತೀಯ ಕಾಲಮಾನ ಸಂಜೆ 5:50ರ ಹೊತ್ತಿಗೆ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ (Shubhanshu Shukla) ಪಾತ್ರವಾಗಿದ್ದಾರೆ.

    ಅಂತರಿಕ್ಷ ತಲುಪಿದ ಗಗನಯಾತ್ರಿಗಳಿಗೆ ವೆಲ್‌ಕಮ್ ಡ್ರಿಂಕ್ ಕೊಟ್ಟು ಬರ ಮಾಡಿಕೊಳ್ಳಲಾಯಿತು. ನಾಲ್ವರು ಗಗನಯಾತ್ರಿಗಳು 14 ದಿನ ಅಂತರಿಕ್ಷದಲ್ಲಿ ಉಳಿಯಲಿದ್ದಾರೆ. ಈ ಅವಧಿಯಲ್ಲಿ ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ ಪ್ರದರ್ಶನ, ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಿದೆ. ಈ ತಂಡವು 31 ದೇಶಗಳನ್ನು ಒಳಗೊಂಡ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ಇದನ್ನೂ ಓದಿ: ಇಲ್ಲಿಂದ ಭೂಮಿಯನ್ನು ನೋಡುವುದೇ ಸೌಭಾಗ್ಯ – ಬಾಹ್ಯಾಕಾಶ ನಿಲ್ದಾಣದಿಂದ ಶುಭಾಂಶು ಮೊದಲ ಸಂದೇಶ!

    ಇವುಗಳಲ್ಲಿ ಜೈವಿಕ ವಿಜ್ಞಾನ, ಭೂಮಿಯ ವೀಕ್ಷಣೆ, ಮತ್ತು ವಸ್ತು ವಿಜ್ಞಾನ ಸೇರಿವೆ. ಭಾರತ ಇಲ್ಲಿ ಏಳು ಸಂಶೋಧನೆಗಳನ್ನು ಮಾಡಲಿದ್ದು ಇದು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ಆಕ್ಸಿಯಮ್-4 ಭಾರತದ ಮೈಕ್ರೋಗ್ರಾವಿಟಿ ಪ್ರಯೋಗಗಳು
    1.ತಿನ್ನಬಹುದಾದ ಸೂಕ್ಷ್ಮಪಾಚಿ ಅಧ್ಯಯನ (ಐಸಿಜಿಇಬಿ& ಬ್ರಿಕ್-ನವದೆಹಲಿ)
    *ತಿನ್ನಬಹುದಾದ ಸೂಕ್ಷ್ಮಪಾಚಿ ಜಾತಿಗಳ ಬೆಳವಣಿಗೆ ಅಧ್ಯಯನ
    *ಆಹಾರ ಉತ್ಪಾದನೆ, ಇಂಗಾಲ, ಆಮ್ಲಜನಕ ಉತ್ಪಾದನೆ ಸಾಮರ್ಥ್ಯಗಳ ಪರೀಕ್ಷೆ

    2.ಮೊಳಕೆ ಕಾಳುಗಳ ಅಧ್ಯಯನ (ಯುಎಸ್, ಐಐಟಿ ಧಾರವಾಡ)
    *ಮೊಳಕೆ ಕಾಳುಗಳ ಬೆಳವಣಿಗೆ & ಪೋಷಕಾಂಶಗಳ ಅಧ್ಯಯನ
    *ಚಂದ್ರ, ಇತರೆ ಗ್ರಹಗಳಲ್ಲಿ ಬೆಳೆ ಬೆಳೆಯುವ ಸಾಧ್ಯತೆಯ ಅನ್ವೇಷಣೆ

    3.ಸ್ನಾಯುಗಳ ಅಧ್ಯಯನ (ಬ್ರಿಕ್,ಇನ್‌ಸ್ಟೆಮ್ ಬೆಂಗಳೂರು)
    *ಸ್ನಾಯುಗಳ ಅಧ್ಯಯನ & ಸ್ನಾಯು ನಷ್ಟ ಪರಿಹಾರಗಳ ಅಭಿವೃದ್ಧಿ
    *ದೀರ್ಘಕಾಲೀನ ಬಾಹ್ಯಾಕಾಶ ಪ್ರಯಾಣದಲ್ಲಿ ಸಂಭವಿಸುವ ಸ್ನಾಯು ಕ್ಷಯ ಅಧ್ಯಯನ

    4.ಟಾರ್ಡಿಗ್ರೇಡ್ಸ್ – ನೀರಿನ ಕರಡಿಗಳು (ಐಐಎಸ್‌ಸಿ ಬೆಂಗಳೂರು)
    *ನೀರಿನ ಕರಡಿಗಳ ಜೀವನ ಮತ್ತು ಪ್ರಯೋಜನ ಸಾಮರ್ಥ್ಯ ಅಧ್ಯಯನ
    *ಮಾನವರ ಬಾಹ್ಯಾಕಾಶ ಉಳಿವಿಗೆ ತಂತ್ರಗಳ ಅಭಿವೃದ್ಧಿಗೆ ಸಹಾಯ

    5.ಎಲೆಕ್ಟ್ರಾನಿಕ್ ಡಿಸ್‌ಪ್ಲೇ (ಐಐಎಸ್‌ಸಿ, ಬೆಂಗಳೂರು)
    *ಮಾನವ-ಯಂತ್ರ ಸಂವಾದ & ಎಲೆಕ್ಟಾçನಿಕ್ ಡಿಸ್‌ಪ್ಲೇಗಳ ಪರಿಣಾಮ ಅಧ್ಯಯನ
    *ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವಾಗ ಎದುರಿಸುವ ಸವಾಲುಗಳ ಅನ್ವೇಷಣೆ

    6.ಸಯಾನೋಬ್ಯಾಕ್ಟೀರಿಯಾ – ನೀಲಿ, ಹಸಿರು ಪಾಚಿ (ಐಸಿಜಿಇಬಿ, ನವದೆಹಲಿ)
    *ಸಯಾನೋಬ್ಯಾಕ್ಟೀರಿಯಾ ಬೆಳವಣಿಗೆ & ನೈಟ್ರೋಜನ ಮೂಲದೊಂದಿಗೆ ಸಂವಾದ
    *ಬಾಹ್ಯಾಕಾಶದಲ್ಲಿ ನೈಟ್ರೋಜನ ಚಕ್ರೀಕರಣದ ಸಾಮರ್ಥ್ಯವನ್ನು ಅನ್ವೇಷಿಸುತ್ತದೆ

    7.ಆಹಾರ ಬೀಜಗಳು (ಐಐಎಸ್‌ಟಿ&ಕೆಎಯು, ತಿರುವನಂತಪುರ)
    *ಮೆಣಸು, ಕಾಳು, ಟೊಮೋಟೋ, ಬೀಜಗಳ ಬೆಳವಣಿಗೆ ಅಧ್ಯಯನ
    *ಬಾಹ್ಯಾಕಾಶ ಕೃಷಿಗೆ ಮಾರ್ಗ ತೋರಿಸುವ ಅಧ್ಯಯನ

  • ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ

    ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ

    – ರಾಕೇಶ್ ಶರ್ಮಾ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಲಿರುವ ಎರಡನೇ ಗಗನಯಾತ್ರಿ ಶುಭಾಂಶು ಶುಕ್ಲಾ
    – ಶುಕ್ಲಾಗಿದೆ ಬೆಂಗಳೂರು ಸಂಬಂಧ

    ನವದೆಹಲಿ: ಬಾಹ್ಯಾಕಾಶ ಯೋಜನೆಯ ಪ್ರಮುಖ ಯೋಜನೆ ಆಕ್ಸಿಯಮ್ 4ಕ್ಕೆ (Axiom-4) ಮತ್ತೆ ಮೂಹೂರ್ತ ಫಿಕ್ಸ್ ಆಗಿದೆ. ನಾಳೆ ಮತ್ತೆ ಯೋಜನೆ ಚಾಲನೆಯಾಗಲಿದ್ದು, ಖುದ್ದು ನಾಸಾ (NASA) ಮತ್ತು ಸ್ಪೇಸ್ ಎಕ್ಸ್ (SpaceX)  ಈ ಕುರಿತು ಮಾಹಿತಿ ನೀಡಿದೆ.

    ಈ ಹಿಂದೆ ತಾಂತ್ರಿಕ ದೋಷದಿಂದ ಎರಡು ಬಾರಿ ಮುಂದೂಡಿಕೆಯಾಗಿತ್ತು. ಈ ಬಾರಿ ಮತ್ತೆ ಯಾವುದೇ ಸಮಸ್ಯೆ ಇಲ್ಲದೇ ಯಶಸ್ವಿ ಉಡಾವಣೆಯ ಬಗ್ಗೆ ನಾಸಾ ಕೂಡ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನೂ ಈ ಬಾರಿಯ ಬಾಹ್ಯಾಕಾಶ ಯೋಜನೆಯಲ್ಲಿ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ನೇತೃತ್ವ ವಹಿಸಿರೋದು ಮತ್ತೊಂದು ವಿಶೇಷ.

    ತಾಂತ್ರಿಕ ತೊಂದರೆಗಳ ಕಾರಣಕ್ಕೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯನ್ನು, ಎಲ್ಲಾ ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡಿದ ಬಳಿಕ ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ. ಬುಧವಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ನಾಸಾ ಮತ್ತು ಸ್ಪೇಸ್ ಎಕ್ಸ್ ಮೂಲಗಳು ಖಚಿತಪಡಿಸಿವೆ. ಬುಧವಾರ ಮಧ್ಯಾಹ್ನ ಭಾರತೀಯ ಕಾಲಮಾನ 12:01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಫಾಲ್ಕನ್-9 ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಚಿಮ್ಮಲಿದೆ.

    ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಸಂಕೀರ್ಣ 39ಎ ನಿಂದ ಉಡಾವಣೆ ಕಾಣಲಿದೆ. ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಬಳಿಕ ಹೊಸ ಸ್ಪೇಸ್‌ಎಕ್ಸ್ ಡ್ರ‍್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ, ಆಕ್ಸಿಯಮ್-4 ಮಿಷನ್‌ನ ಸಿಬ್ಬಂದಿ ಕಕ್ಷೆಯಲ್ಲಿರುವ ಪ್ರಯೋಗಾಲಯವನ್ನು ತಲುಪಲಿದ್ದಾರೆ. ಉದ್ದೇಶಿತ ಡಾಕಿಂಗ್ ಅನ್ನು ಜೂನ್ 26 ಗುರುವಾರ ಸಂಜೆ ಭಾರತೀಯ ಕಾಲಮಾನ 4:30ಕ್ಕೆ ಕೈಗೊಳ್ಳಲಾಗುವ ಬಗ್ಗೆ ನಾಸಾ ಮಾಹಿತಿ ನೀಡಿದೆ.

    ಈ ಹಿಂದೆ ಎರಡು ಬಾರಿ ಪ್ರಯತ್ನ ವಿಫಲ:
    ಈ ಹಿಂದೆ ಮೊದಲ ಉಡಾವಣೆ ದಿನಾಂಕವನ್ನು ಕಳೆದ ತಿಂಗಳ ಮೇ 29ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಫ್ಲೋರಿಡಾದಲ್ಲಿ ಹವಾಮಾನ ಸಮಸ್ಯೆ ಎದುರಾಗಿದ್ದ ಹಿನ್ನೆಲೆ ಉಡಾವಣೆಯನ್ನು ಮುಂದೂಡಲಾಗಿತ್ತು. ಅದಾದ ಬಳಿಕ ಅಂದರೆ ಜೂನ್ 8, 10, 11, 19 ಮತ್ತು 22 ಕ್ಕೆ ಸತತವಾಗಿ ಮುಂದೂಡಲಾಯಿತು. ಕಾರಣ ಸ್ಪೇಸ್‌ಎಕ್ಸ್ ಫಾಲ್ಕನ್ -9 ರಾಕೆಟ್‌ನ ಮೊದಲ ಹಂತದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿತ್ತು. ಫಾಲ್ಕನ್ -9 ರಾಕೆಟ್‌ನಲ್ಲಿ ಥ್ರಸ್ಟರ್ ಮತ್ತು ಆಕ್ಸಿಡೈಸರ್ ಸೋರಿಕೆಯ ಸಮಸ್ಯೆಗಳು ಕಂಡುಬಂದಿದ್ದರಿಂದ, ಉಡಾವಣೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿದ್ದಾಗಿ ಸ್ಪೇಸ್‌ಎಕ್ಸ್ ತಿಳಿಸಿತ್ತು. ರಾಕೆಟ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆ ಪರಿಣಾಮವಾಗಿ ರಾಕೆಟ್‌ನ ದುರಸ್ತಿ ಕಾರ್ಯಕ್ಕೆ ಸ್ಪೇಸ್‌ಎಕ್ಸ್ ಮುಂದಾಗಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಸ್ರೋ ಅಧ್ಯಕ್ಷ ಡಾ.ವಿ. ನಾರಾಯಣನ್ ನೇತೃತ್ವದ ಭಾರತೀಯ ವಿಜ್ಞಾನಿಗಳ ತಂಡ, ರಾಕೆಟ್‌ನ ಪೂರ್ಣ ದುರಸ್ತಿಯ ದೃಢೀಕರಣವನ್ನು ಬಯಸಿತ್ತು. ಇಸ್ರೋದ ಒತ್ತಡಕ್ಕೆ ಮಣಿದ ಸ್ಪೇಸ್‌ಎಕ್ಸ್ ರಾಕೆಟ್‌ನ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದೀಗ ಜೂನ್ 25ರಂದು ಅಂದರೆ ನಾಳೆ ಉಡಾವಣೆಗೆ ಸಿದ್ಧತೆ ಮಾಡಿಕೊಂಡಿದೆ.

    ಕ್ರ‍್ಯೂ ಮೆಂಬರ್ಸ್:
    ಪೆಗ್ಗಿ ವಿಟ್ಸನ್, ಪೈಲಟ್ ಶುಭಾಂಶು ಶುಕ್ಲಾ, ಮತ್ತು ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿವ್ಸ್ಕಿ ಮತ್ತು ಟಿಬೋರ್ ಕಮು, ಸೇರಿದಂತೆ ಮಿಷನ್ ತಜ್ಞರು ಮತ್ತು ಸಿಬ್ಬಂದಿ ಫ್ಲೋರಿಡಾದಲ್ಲಿ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಬಾಹ್ಯಾಕಾಶಕ್ಕೆ ಹೊರಟ ಸಿಬ್ಬಂದಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳವರೆಗೆ ಇರಲಿದ್ದು, ವೈಜ್ಞಾನಿಕ ಪ್ರಯೋಗಗಳನ್ನು ಮಾಡಲಿದ್ದಾರೆ.

    ಶುಭಾಂಶು ಶುಕ್ಲಾ ಹಿನ್ನೆಲೆ:
    ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾರ 1984ರ ಕಾರ್ಯಾಚರಣೆಯ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಲಿದ್ದಾರೆ.

    39 ವರ್ಷದ ಶುಕ್ಲಾ ಮೂಲತಃ ಉತ್ತರಪ್ರದೇಶದ ಲಕ್ನೋದವರು. ಅಲಿಗಂಜ್‌ನ ಮಾಂಟೆಸ್ಸರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾದ ಶುಕ್ಲಾರವರು, ಸ್ವತಂತ್ರವಾಗಿ ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಉತ್ತೀರ್ಣರಾಗಿದ್ದರು. ಬಳಿಕ ಮಿಲಿಟರಿ ತರಬೇತಿಯನ್ನು ಪೂರ್ಣಗೊಳಿಸಿ 2005ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದರು.

    ಬಳಿಕ ಅವರು ಫ್ಲೈಯಿಂಗ್ ಬ್ರಾಂಚ್‌ಗೆ ಆಯ್ಕೆಯಾದರು ಮತ್ತು ಭಾರತೀಯ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಜೂನ್ 2006ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಫ್ಲೈಯಿಂಗ್ ಆಫೀಸರ್ ಆಗಿ ನಿಯೋಜನೆಯಾದರು.

    ಶುಕ್ಲಾ ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ, ಭಾರತೀಯ ವಾಯುಪಡೆಯ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ಗೆ 2019ರಲ್ಲಿ ಶುಕ್ಲಾ ಅವರನ್ನು ಗಗನಯಾತ್ರಿಯಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಸೇರಿಸಿಕೊಂಡಿತು. ನಂತರ, ಅವರನ್ನು ಐಎಎಂ ಮತ್ತು ಇಸ್ರೋ ಅಂತಿಮ ನಾಲ್ಕರಲ್ಲಿ ಸೇರಿಸಿತು. ಬಳಿಕ 2020ರಲ್ಲಿ, ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಇತರ ಮೂವರು ಆಯ್ದಾ ಗಗನಯಾತ್ರಿಗಳೊಂದಿಗೆ ಮೂಲಭೂತ ತರಬೇತಿಗಾಗಿ ತೆರಳಿದ್ದರು. 2021ರಲ್ಲಿ ತರಬೇತಿ ಪೂರ್ಣಗೊಂಡಿತು. ನಂತರ ಭಾರತಕ್ಕೆ ಮರಳಿದ ಶುಕ್ಲಾ ಬೆಂಗಳೂರಿನಲ್ಲಿರುವ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು, ಇದೇ ಅವಧಿಯಲ್ಲಿ, ಬೆಂಗಳೂರಿನ ಐಐಎಸ್ಸಿಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

    ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ತಿರುವನಂತಪುರಂನಲ್ಲಿರುವ ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿ ತಂಡದ ಸದಸ್ಯರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ 2024 ಫೆಬ್ರವರಿ 27 ರಂದು ಘೋಷಿಸಿದಾಗ, ಗಗನಯಾತ್ರಿ ತಂಡದ ಸದಸ್ಯರಾಗಿ ಅವರ ಹೆಸರನ್ನು ಮೊದಲು ಅಧಿಕೃತವಾಗಿ ಸಾರ್ವಜನಿಕವಾಗಿ ಘೋಷಿಸಲಾಯಿತು.

    ಭಾರತೀಯ ವಾಯುಪಡೆ ಪೈಲಟ್ ಅಗಿರುವ ತಂಡದ ಕ್ಯಾಪ್ಟನ್ ಶುಭಾಂಶು ಶುಕ್ಲಾ ಈ ಹಿಂದೆ ಭಾರತೀಯ ವಾಯುಪಡೆಯಲ್ಲಿ ಮಿಗ್ -29 ಮತ್ತು ಸು -30, ಎಂಕೆಐನಂತಹ ಜೆಟ್‌ಗಳಲ್ಲಿ 2000ಕ್ಕಿಂತಲೂ ಹೆಚ್ಚು ಗಂಟೆಗಳ ಕಾಲ ಹಾರಟ ನಡೆಸಿದ ಅನುಭವ ಹೊಂದಿದ್ದು, ಈ ಬಾರಿಯ ಬಾಹ್ಯಾಕಾಶದ ಯೋಜನೆಯಲ್ಲಿ ಮಿಷನ್ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    ಶುಕ್ಲಾದಂತ ವೈದ್ಯರಾಗಿರುವ ಡಾ.ಕಮ್ನಾ ಮಿಶ್ರಾರನ್ನ ವಿವಾಹವಾಗಿದ್ದು, ಕಮ್ನಾ ಮಿಶ್ರ ಶುಕ್ಲಾರ ಬಾಲ್ಯ ಗೆಳತಿ ಕೂಡ. ದಂಪತಿಗೆ ಒಬ್ಬ ಮಗನಿದ್ದಾನೆ. ಶುಕ್ಲಾ ತಂದೆ ಶಂಭು ದಯಾಳ್ ಶುಕ್ಲಾ ನಿವೃತ್ತ ಸರ್ಕಾರಿ ಅಧಿಕಾರಿ, ತಾಯಿ ಆಶಾ ಶುಕ್ಲಾ ಗೃಹಿಣಿ. ಶುಕ್ಲಾರ ಅಕ್ಕ ನಿಧಿ ಎಂಬಿಎ ಪದವಿ ಪಡೆದಿದ್ದಾರೆ. ಇನ್ನೊಬ್ಬ ಅಕ್ಕ ಸುಚಿ ಮಿಶ್ರಾ ಶಾಲಾ ಶಿಕ್ಷಕಿಯಾಗಿದ್ದು, ಶುಕ್ಲಾ ಕಿರಿಯ ಮಗ.

  • ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಕಾಲ ಸನ್ನಿಹಿತ – ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಉಡಾವಣೆ

    ಗಗನಯಾತ್ರಿ ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್ ಕಾಲ ಸನ್ನಿಹಿತ – ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಉಡಾವಣೆ

    – ರಾಕೆಟ್‌ನಲ್ಲಿ ನಾಲ್ವರು ಹೊಸ ಗಗನಯಾತ್ರಿಗಳು

    ವಾಷಿಂಗ್ಟನ್‌: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ನಾಸಾ ಗಗನಯಾತ್ರಿಳಾದ ಸುನಿತಾ ವಿಲಿಯಮ್ಸ್‌ (Sunita Williams) ಮತ್ತು ಬುಜ್‌ ವಿಲ್ಮೋರ್‌ ಅವರನ್ನು ಭೂಮಿಗೆ ವಾಪಸ್‌ ಕರೆತರಲು ಸ್ಪೇಸ್‌ಎಕ್ಸ್‌ನ (SpaceX) ಫಾಲ್ಕನ್‌ 9 ರಾಕೆಟ್‌ ಉಡಾವಣೆ ಮಾಡಲಾಗಿದೆ.

    ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ ಸುಮಾರು 4:33 ಕ್ಕೆ ರಾಕೆಟ್‌ ಉಡಾವಣೆಗೊಂಡಿತು. ನಾಲ್ವರು ಹೊಸ ಗಗನಯಾತ್ರಿಗಳಿರುವ ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಇರುವ ಫಾಲ್ಕನ್ 9 ರಾಕೆಟ್ (Falcon 9 Rocket) ಇದಾಗಿದೆ. ಇದನ್ನೂ ಓದಿ: ರೈಲು ಹೈಜಾಕ್‌ನಲ್ಲಿ ಸೆರೆಯಾಗಿದ್ದ ಎಲ್ಲಾ 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ: ಬಿಎಲ್‌ಎ ಹೇಳಿಕೆ

    ಕ್ರೂ-10 ರ ಭಾಗವಾಗಿರುವ ನಾಲ್ವರು ಗಗನಯಾತ್ರಿಗಳು, ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿದಂತೆ ಕ್ರೂ-9 ಗಗನಯಾತ್ರಿಗಳನ್ನು ಬಿಡುಗಡೆ ಮಾಡಲಿದೆ. ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಸುನಿತಾ ವಿಲಿಯಮ್ಸ್ ಮತ್ತು ಬುಜ್‌ ಸಿಲುಕಿಕೊಂಡಿದ್ದಾರೆ. ಮುಂದಿನ ಬುಧವಾರಕ್ಕಿಂತ ಮುನ್ನ ವಾಪಸಾಗುವ ನಿರೀಕ್ಷೆ ಇದೆ.

    2024 ರಲ್ಲಿ ಜೂನ್‌ಗೆ ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ಸಮಸ್ಯೆಗಳಿಂದಾಗಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ISS ನಲ್ಲಿ ಸಿಲುಕಬೇಕಾಯಿತು. ಇದನ್ನೂ ಓದಿ: ಪಾಕ್ ಮಸೀದಿಯಲ್ಲಿ ಬಾಂಬ್ ಸ್ಫೋಟ – ನಾಲ್ವರಿಗೆ ಗಾಯ

  • Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್‌ಲಿಂಕ್‌: ಸಿಗುತ್ತಾ ಕೇಬಲ್‌, ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌? – ದರ ಎಷ್ಟು?

    Public TV Explainer: ಭಾರತಕ್ಕೆ ಎಂಟ್ರಿ ಕೊಡಲಿದೆ ಸ್ಟಾರ್‌ಲಿಂಕ್‌: ಸಿಗುತ್ತಾ ಕೇಬಲ್‌, ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌? – ದರ ಎಷ್ಟು?

    ಭಾರತದ ಇಂಟರ್ನೆಟ್‌ ವ್ಯವಸ್ಥೆಯಲ್ಲಿ ಕ್ರಾಂತಿ ಸೃಷ್ಟಿಸುವ ಕಾಲ ಸನ್ನಿಹಿತವಾಗಿದೆ. ಟವರ್‌ ರಹಿತ ಹೈಸ್ಪೀಡ್‌ ಇಂಟರ್ನೆಟ್‌ ಸೇವೆಯನ್ನು ಭಾರತಕ್ಕೆ ಪರಿಚಯಿಸಲು ದೇಶದ ಎರಡು ದೈತ್ಯ ಕಂಪನಿಗಳು ಮುಂದಾಗಿವೆ. ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ (Elon Musk) ಅವರ ಸ್ಟಾರ್‌ಲಿಂಕ್‌ (Starlink) ಜೊತೆ ಮಹತ್ವದ ಒಪ್ಪಂದಕ್ಕೆ ರಿಲಯನ್ಸ್‌ ಜಿಯೋ ಮತ್ತು ಭಾರ್ತಿ ಏರ್ಟೆಲ್‌ ಸಹಿ ಹಾಕಿವೆ. ಭಾರತಕ್ಕೆ ಉಪಗ್ರಹ ಆಧರಿತ ಇಂಟರ್ನೆಟ್‌ ಸೇವೆ ಒದಗಿಸಲು ಸಿದ್ಧತೆ ನಡೆಸಿರುವ ಕಂಪನಿಗಳು ಮೊದಲ ಹೆಜ್ಜೆಯನ್ನಿಟ್ಟಿವೆ. ಟೆಕ್ ಬಿಲಿಯನೇರ್ ಮಸ್ಕ್ ಅವರ ಇಂಟರ್ನೆಟ್ ಸೇವೆಯ ಸ್ಟಾರ್‌ಲಿಂಕ್ ಭಾರತೀಯ ಮಾರುಕಟ್ಟೆಯಲ್ಲಿ ಪಾದಾರ್ಪಣೆ ಮಾಡಲು ಸಜ್ಜಾಗಿದೆ.

    ಏನಿದು ಸ್ಟಾರ್‌ಲಿಂಕ್?‌ ಇದು ಹೇಗೆ ಕೆಲಸ ಮಾಡುತ್ತದೆ? ಇಂಟರ್ನೆಟ್‌ ಸ್ಪೀಡ್‌ ಹೇಗಿರುತ್ತೆ? ವೆಚ್ಚ ಎಷ್ಟಾಗುತ್ತೆ? ಭಾರತಕ್ಕೆ ಯಾವಾಗ ಬರುತ್ತೆ? ಒಪ್ಪಂದ ಏನು? ಭಾರತಕ್ಕೆ ಇದು ಯಾಕೆ ಮಹತ್ವದ್ದಾಗಿದೆ? ಬನ್ನಿ ತಿಳಿಯೋಣ.

    ಸ್ಟಾರ್‌ಲಿಂಕ್‌ ಎಂದರೇನು?
    ಸ್ಟಾರ್‌ಲಿಂಕ್‌ ಎನ್ನುವುದು ಸ್ಪೇಸ್‌ಎಕ್ಸ್ ನಿರ್ವಹಿಸುವ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯಾಗಿದೆ.

    ಪರಿಚಯಿಸಿದ್ದು ಯಾವಾಗ?
    ಎಲಾನ್‌ ಮಸ್ಕ್‌ ಸ್ಥಾಪಿಸಿದ ಏರೋಸ್ಪೇಸ್‌ ಕಂಪನಿ ಸ್ಪೇಸ್‌ಎಕ್ಸ್‌ನಿಂದ 2019ರಲ್ಲಿ ಪ್ರಾರಂಭಿಸಲಾಯಿತು.

    ಹೇಗೆ ಕೆಲಸ ಮಾಡುತ್ತೆ?
    ಬಳಕೆದಾರ ಸಾಧನವು (User Device) ಬಾಹ್ಯಾಕಾಶದಲ್ಲಿರುವ ಉಪಗ್ರಹಕ್ಕೆ ಸಂಕೇತಗಳನ್ನು ಕಳುಹಿಸುತ್ತದೆ. ಅದು ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಗ್ರೌಂಡ್‌ ಸ್ಟೇಷನ್‌ಗೆ ಡೇಟಾವನ್ನು ಪ್ರಸಾರ ಮಾಡುತ್ತದೆ. ಡೇಟಾವನ್ನು ಉಪಗ್ರಹಕ್ಕೆ ಹಿಂತಿರುಗಿಸಲಾಗುತ್ತದೆ. ಅದು ಮತ್ತೆ ಬಳಕೆದಾರರ ಮೋಡೆಮ್ ಮತ್ತು ಉಪಗ್ರಹ ಡಿಶ್‌ಗೆ ಹಿಂದಿರುಗುತ್ತದೆ. ಇದು ತಡೆರಹಿತ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೇಬಲ್‌ಗಳು, ಫೈಬರ್ ಅಥವಾ ಫೋನ್ ಲೈನ್‌ಗಳ ಅಗತ್ಯವಿರಲ್ಲ. ಕೇಬಲ್‌ಗಳು ಅಥವಾ ಫೈಬರ್-ಆಪ್ಟಿಕ್ ಮೂಲಸೌಕರ್ಯವನ್ನು ಅವಲಂಬಿಸಿರುವ ಸಾಂಪ್ರದಾಯಿಕ ಇಂಟರ್ನೆಟ್ ಪೂರೈಕೆದಾರರಂತಲ್ಲದೆ, ಸ್ಟಾರ್‌ಲಿಂಕ್ ಭೂಮಿಯ ಮೇಲೆ ಸುತ್ತುವ ಸಣ್ಣ ಉಪಗ್ರಹಗಳ ಸಮೂಹವನ್ನು ನೇರವಾಗಿ ಬಳಕೆದಾರರಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬೀಮ್ ಮಾಡಲು ಬಳಸುತ್ತದೆ. ಕೇಬಲ್‌ಗಳನ್ನು ಹಾಕುವುದು ಅಪ್ರಾಯೋಗಿಕ ಅಥವಾ ತುಂಬಾ ದುಬಾರಿಯಾಗಿರುವ ಗ್ರಾಮೀಣ, ದೂರದ ಅಥವಾ ತಲುಪಲು ಕಷ್ಟಕರವಾದ ಪ್ರದೇಶಗಳಿಗೆ ಇದು ಸೂಕ್ತ ಪರಿಹಾರವಾಗಿದೆ.

    ಇಂಟರ್ನೆಟ್‌ ಸ್ಪೀಡ್‌ ಎಷ್ಟಿರುತ್ತೆ?
    ಸ್ಟಾರ್‌ಲಿಂಕ್ ಇಂಟರ್ನೆಟ್‌ ವೇಗವು 220 Mbps ವರೆಗೆ ತಲುಪಿಸುತ್ತದೆ. ಇದು ವೀಡಿಯೊ ಕಾನ್ಫರೆನ್ಸಿಂಗ್, ಸ್ಟ್ರೀಮಿಂಗ್, ಗೇಮಿಂಗ್ ಮತ್ತು ವೃತ್ತಿಪರ ಕೆಲಸದಂತಹ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಇದು ನೆಲ-ಆಧಾರಿತ ಮೂಲಸೌಕರ್ಯವನ್ನು ಅವಲಂಬಿಸಿಲ್ಲದ ಕಾರಣ, ಭಾರತದ ವಿಶಾಲವಾದ ಗ್ರಾಮೀಣ ಭಾಗಗಳನ್ನು ಒಳಗೊಂಡಂತೆ ಇಂಟರ್ನೆಟ್ ಪ್ರವೇಶದೊಂದಿಗೆ ಆಗಾಗ್ಗೆ ಹೋರಾಡುವ ಸ್ಥಳಗಳಿಗೆ Starlink ಸೂಕ್ತವಾಗಿದೆ.

    ಪ್ರಸ್ತುತ ಎಲ್ಲೆಲ್ಲಿ ಬಳಕೆ?
    2024 ರ ಅಂತ್ಯದ ವೇಳೆಗೆ ವಿಶ್ವಾದ್ಯಂತ ಸುಮಾರು 7,000 ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. 100ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟಾರ್‌ಲಿಂಕ್‌ ಸೇವೆ ನೀಡುತ್ತಿದ್ದು, 46 ಲಕ್ಷ ಬಳಕೆದಾರರನ್ನು ಹೊಂದಿವೆ. ಭಾರತದಲ್ಲೂ ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಸೇವೆಗೆ ಮಾತುಕತೆ ನಡೆಯುತ್ತಿದೆ.

    ದರ ಎಷ್ಟಿದೆ?
    ಅಮೆರಿಕದಲ್ಲಿ ಪ್ರತಿ ತಿಂಗಳಿಗೆ ಪ್ರಮಾಣಿತ ಸೇವೆಗೆ 120 ಡಾಲರ್‌ (10,430 ರೂ.) ಇದೆ. ಉಪಕರಣಗಳಿಗೆ 349 ಡಾಲರ್ (30,334‌ ರೂ.) ಇದೆ. ಮೊಬೈಲ್ ಯೋಜನೆಗಳು ಅಗ್ಗವಾಗಿವೆ ಆದರೆ ಕಡಿಮೆ ವೇಗವನ್ನು ನೀಡುತ್ತವೆ.

    ಆಫ್ರಿಕಾ ದೇಶಗಳಲ್ಲಿ ಕಡಿಮೆ ದರ?
    ಕೀನ್ಯಾದಲ್ಲಿ ಪ್ರತಿ ತಿಂಗಳಿಗೆ 10 ಡಾಲರ್‌ (ಅಂದಾಜು 844 ರೂ.) ದರವನ್ನು ವಿಧಿಸಿದೆ. ಬೋಟ್ಸ್ವಾನಾ, ಮಡಗಾಸ್ಕರ್, ಜಾಂಬಿಯಾ ಮೊದಲಾದ ದೇಶಗಳಲ್ಲಿ ಅಂದಾಜು 2,433 ರೂ. ನಷ್ಟಿದೆ.

    ಭಾರತಕ್ಕೆ ಬಂದ್ರೆ ದರ ಎಷ್ಟಾಗಬಹುದು?
    ಸ್ಥಿರ ಬ್ರಾಡ್‌ಬ್ಯಾಂಡ್‌ನಿಂದ ಪ್ರತಿ ಬಳಕೆದಾರರಿಗೆ ಸರಾಸರಿ ದರ ಸುಮಾರು 6ರಿಂದ 8 ಡಾಲರ್‌ ಆಗುವ ಸಾಧ್ಯತೆ ಇದೆ. ಆದರೆ, ದರಕ್ಕೆ ಸಂಬಂಧಿಸಿದಂತೆ ಜಿಯೋ ಮತ್ತು ಏರ್‌ಟೆಲ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    5ಜಿ ಗಿಂತಲೂ ವೇಗ?
    5G ಸಾಮಾನ್ಯವಾಗಿ ಸ್ಟಾರ್‌ಲಿಂಕ್‌ಗಿಂತ ವೇಗವಾಗಿರುತ್ತದೆ. ಆದರೆ ಎರಡೂ ವೇಗದ ಸಂಪರ್ಕಗಳನ್ನು ನೀಡುತ್ತವೆ. ನಗರ ಪ್ರದೇಶಗಳಿಗೆ 5G ಉತ್ತಮವಾಗಿದ್ದರೆ, ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಉತ್ತಮವಾಗಿದೆ. 5ಜಿಯು 2 Gbps ವರೆಗಿನ ವೇಗವನ್ನು ತಲುಪಬಹುದು. ಸರಾಸರಿ ಡೌನ್‌ಲೋಡ್ ವೇಗ 50 Mbps ಮತ್ತು 1 Gbps ನಡುವೆ ಇರುತ್ತದೆ. ಸ್ಟಾರ್‌ಲಿಂಕ್‌, ಸಾಮಾನ್ಯವಾಗಿ 250 Mbps ವರೆಗಿನ ವೇಗವನ್ನು ತಲುಪುತ್ತದೆ. ನೆಟ್‌ವರ್ಕ್ ಲೋಡ್ ಮತ್ತು ಹವಾಮಾನವನ್ನು ಅವಲಂಬಿಸಿ ಬದಲಾಗಬಹುದು.

    ಭಾರತಕ್ಕೂ ಬರುತ್ತಾ ಸ್ಟಾರ್‌ಲಿಂಕ್?‌
    ದೇಶದ ಗ್ರಾಹಕರಿಗೆ ಸ್ಟಾರ್‌ಲಿಂಕ್‌ನ ಉಪಗ್ರಹ ಆಧಾರಿತ ಇಂಟರ್ನೆಟ್‌ ಸೇವೆ ಒದಗಿಸಲು ಮಸ್ಕ್‌ ಒಡೆತನದ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರಿಲಯನ್ಸ್‌ ಜಿಯೋ (Jio) ಮತ್ತು ಭಾರ್ತಿ ಏರ್‌ಟೆಲ್‌ (Airtel) ತಿಳಿಸಿವೆ. ಸ್ಪೇಸ್‌ಎಕ್ಸ್, ಭಾರತೀಯ ಗೃಹ ಸಚಿವಾಲಯದಿಂದ ಭದ್ರತಾ ಅನುಮತಿಗಾಗಿ ಅರ್ಜಿ ಸಲ್ಲಿಸಿದೆ. ಸಾಂಪ್ರದಾಯಿಕ ಮೂಲಸೌಕರ್ಯಗಳಿಗೆ ಸೀಮಿತವಾಗಿರುವ ಭಾರತದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ.

    ಭಾರತಕ್ಕೆ ಏಕೆ ಮುಖ್ಯ?
    ಭಾರತವು ಎರಡನೇ ಅತಿದೊಡ್ಡ ಇಂಟರ್ನೆಟ್ ಮಾರುಕಟ್ಟೆಯಾಗಿದೆ. ಆದರೆ 67 ಕೋಟಿ ಜನರಿಗೆ ಈಗಲೂ ಇಂಟರ್ನೆಟ್ ಪ್ರವೇಶವಿಲ್ಲ (2024ರ GSMA ವರದಿ ಪ್ರಕಾರ). ಸಾಂಪ್ರದಾಯಿಕ ನೆಟ್‌ವರ್ಕ್‌ಗಳು ವಿರಳವಾಗಿರುವ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಡಿಜಿಟಲ್ ಅಂತರವನ್ನು ಸ್ಟಾರ್‌ಲಿಂಕ್ ಕಡಿಮೆ ಮಾಡಬಹುದು. ಸ್ಟಾರ್‌ಲಿಂಕ್ ರಾಷ್ಟ್ರವ್ಯಾಪಿ ಸಂಪರ್ಕಕ್ಕೆ ಸಹಾಯ ಮಾಡುತ್ತದೆ. ಇಂಟರ್ನೆಟ್‌ ಸೌಲಭ್ಯದಿಂದ ವಂಚಿತವಾಗಿರುವ ಪ್ರದೇಶಗಳಿಗೆ ಇದು ತಲುಪಲು ಸಹಕಾರಿಯಾಗಿದೆ ಎಂಬುದು ಟೆಲಿಕಾಂ ಕಂಪನಿಗಳ ಅಭಿಪ್ರಾಯ.

    ವಿಳಂಬ ಯಾಕಾಯ್ತು?
    ಭಾರತದಲ್ಲಿ ಸ್ಟಾರ್‌ಲಿಂಕ್‌ನ ಪೂರ್ಣ-ಪ್ರಮಾಣದ ವಾಣಿಜ್ಯ ಉಡಾವಣೆಯು ಕೆಲವು ವಿಳಂಬಗಳನ್ನು ಎದುರಿಸಿದೆ. ಪ್ರಾಥಮಿಕವಾಗಿ ನಿಯಂತ್ರಕ ಸವಾಲುಗಳಿಂದಾಗಿ. ಕಂಪನಿಯು 2020 ರಿಂದ ಆಯ್ದ ಪ್ರದೇಶಗಳಲ್ಲಿ ಬೀಟಾ ಸೇವೆಗಳನ್ನು ನೀಡಲು ಆರಂಭಿಸಿತ್ತು. ಕೊನೆಗೆ ಸರ್ಕಾರ ಬೀಟಾ ಸೇವೆಯನ್ನು ನಿಲ್ಲಿಸಿತ್ತು. ವಿಶ್ವದಲ್ಲಿ ಉಪಗ್ರಹ ಆಧಾರಿತ ಸಂಪನ್ಮೂಲಗಳನ್ನು ಇಂಟರ್‌ನ್ಯಾಷನಲ್‌ ಟೆಲಿಕಾಂ ಯೂನಿಯನ್‌(ITU) ನೋಡಿಕೊಳ್ಳುತ್ತದೆ. ಭಾರತದಲ್ಲಿ ಉಪಗ್ರಹಗಳ (Satellite) ಬಳಕೆ ಮತ್ತು ಬಳಕೆದಾರರ ಲಿಂಕ್‌ಗಳನ್ನು ಸ್ಪೆಕ್ಟ್ರಂ ಹರಾಜು ಮೂಲಕವೇ ಹಂಚಿಕೆ ಮಾಡುತ್ತಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಜಿಯೋ ಹರಾಜು ಪ್ರಕ್ರಿಯೆ ಮೂಲಕವೇ ಪರವಾನಗಿ ಹಂಚಿಕೆಗೆ ಪಟ್ಟು ಹಿಡಿದಿದ್ದರಿಂದ ಬಿಕ್ಕಟ್ಟು ಸೃಷ್ಟಿಯಾಗಿತ್ತು.

    ಆತಂಕ ಏನು?
    ಅಮೆರಿಕ ಸರ್ಕಾರದ ಪ್ರಭಾವ: US ಸರ್ಕಾರ ಮತ್ತು ಅದರ ಗುಪ್ತಚರ ಏಜೆನ್ಸಿಗಳಿಗೆ ಸ್ಟಾರ್‌ಲಿಂಕ್‌ನ ನಿಕಟ ಸಂಬಂಧಗಳು ಕಣ್ಗಾವಲು ಮತ್ತು ಡೇಟಾ ಪ್ರತಿಬಂಧಕ್ಕೆ ಸಂಭಾವ್ಯವಾಗಿ ಅವಕಾಶ ನೀಡಬಹುದು. ಮಸ್ಕ್‌ನ ಕಂಪನಿಗಳು ಮತ್ತು US ಏಜೆನ್ಸಿಗಳ ನಡುವಿನ ಕೆಲವು ಒಪ್ಪಂದಗಳು ನಡೆದಿದೆ. ಇದು ಅಮೆರಿಕದ ಕಾನೂನಿನ ಅನ್ವಯವೇ ಕೆಲಸ ಮಾಡುತ್ತದೆ.‌

    ಡ್ಯುಯಲ್-ಯೂಸ್ ಟೆಕ್ನಾಲಜಿ: ನಾಗರಿಕ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ಸೇವೆ ಸಲ್ಲಿಸುವ ತಂತ್ರಜ್ಞಾನದ ಸಾಮರ್ಥ್ಯವು ಅದರ ಸಂಭಾವ್ಯ ದುರುಪಯೋಗದ ಬಗ್ಗೆ ಅಲ್ಲಗೆಳೆಯುವಂತಿಲ್ಲ.

    ಭೌಗೋಳಿಕ ರಾಜಕೀಯ ಪರಿಣಾಮಗಳು: ಸ್ಟಾರ್‌ಲಿಂಕ್‌ನ ಜಾಗತಿಕ ವ್ಯಾಪ್ತಿಯು ಮತ್ತು ಭೌಗೋಳಿಕ ರಾಜಕೀಯ ಡೈನಾಮಿಕ್ಸ್‌ನ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆ.

  • ಭಾರತಕ್ಕೆ ಶೀಘ್ರವೇ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಇಂಟರ್ನೆಟ್‌ – ಮಸ್ಕ್‌ ಕಂಪನಿ ಜೊತೆ ಜಿಯೋ, ಏರ್‌ಟೆಲ್‌ ಒಪ್ಪಂದ

    ಭಾರತಕ್ಕೆ ಶೀಘ್ರವೇ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಇಂಟರ್ನೆಟ್‌ – ಮಸ್ಕ್‌ ಕಂಪನಿ ಜೊತೆ ಜಿಯೋ, ಏರ್‌ಟೆಲ್‌ ಒಪ್ಪಂದ

    ನವದೆಹಲಿ: ಭಾರತದಲ್ಲಿ ಉಪಗ್ರಹ ಆಧರಿತ ವೇಗದ ಇಂಟರ್‌ನೆಟ್‌ ಸೌಲಭ್ಯ ಒದಗಿಸಲು ಎಲಾನ್‌ ಮಸ್ಕ್‌ (Elon Musk) ಅವರ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಏರ್‌ಟೆಲ್‌ ಮತ್ತು ಜಿಯೋ ತಿಳಿಸಿವೆ.

    ಭಾರತಕ್ಕೆ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯನ್ನು ತರಲು ಸ್ಪೇಸ್‌ಎಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಬಗ್ಗೆ ಏರ್‌ಟೆಲ್ (Airtel) ಘೋಷಣೆ ಮಾಡಿತ್ತು. ಅದರ ಬೆನ್ನಲ್ಲೇ, ಮುಖೇಶ್ ಅಂಬಾನಿಯವರ ಜಿಯೋ (Reliance Jio) ಬುಧವಾರ ಎಲಾನ್ ಮಸ್ಕ್ ಅವರ ಕಂಪನಿಯೊಂದಿಗೆ ಇದೇ ರೀತಿಯ ಒಪ್ಪಂದವನ್ನು ಘೋಷಿಸಿದೆ. ಇದನ್ನೂ ಓದಿ: ಮೊದಲ ಬಾರಿಗೆ ಆಪಲ್‌ ಉತ್ಪನ್ನ ತಯಾರಿಸಲು ಚೀನಾ, ವಿಯೆಟ್ನಾಂಗೆ ಎಲೆಕ್ಟ್ರಾನಿಕ್‌ ಭಾಗಗಳು ರಫ್ತು!

    ಈ ಒಪ್ಪಂದವು ಭಾರತದ ಅತ್ಯಂತ ಗ್ರಾಮೀಣ ಮತ್ತು ದೂರದ ಪ್ರದೇಶಗಳನ್ನು ಒಳಗೊಂಡಂತೆ ದೇಶಾದ್ಯಂತ ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ತಲುಪಿಸಲು ಸಹಾಯ ಮಾಡುತ್ತದೆ. ಜಿಯೋ ತನ್ನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸ್ಟಾರ್‌ಲಿಂಕ್ ಉಪಕರಣಗಳನ್ನು ನೀಡುವುದಲ್ಲದೆ, ಗ್ರಾಹಕ ಸೇವಾ ವಲಯದಲ್ಲಿ ಉತ್ತಮ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಜಿಯೋ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ಉಪಗ್ರಹ ಸೇವೆಗಳಿಗೆ ದೇಶವು ಸ್ಪೆಕ್ಟ್ರಮ್ ಅನ್ನು ಹೇಗೆ ನೀಡಬೇಕು ಎಂಬುದರ ಕುರಿತು ಎರಡು ಕಂಪನಿಗಳು ಪೈಪೋಟಿ ನಡೆಸಿದ ನಂತರ ಈ ಪಾಲುದಾರಿಕೆ ಬಂದಿದೆ. ರಿಲಯನ್ಸ್ ಹರಾಜಿಗೆ ಒತ್ತಾಯಿಸಿತ್ತು. ಆದರೆ ಭಾರತ ಸರ್ಕಾರವು, ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಆಡಳಿತಾತ್ಮಕವಾಗಿ ಅದನ್ನು ಹಂಚಿಕೆ ಮಾಡಬೇಕೆಂದು ಬಯಸಿದ್ದ ಮಸ್ಕ್ ಪರವಾಗಿ ನಿಂತಿತು.

    ಮಂಗಳವಾರ, ಭಾರತಿ ಏರ್‌ಟೆಲ್ ಕೂಡ ಸ್ಟಾರ್‌ಲಿಂಕ್ ಇಂಟರ್ನೆಟ್ (Starlink internet) ಅನ್ನು ಭಾರತಕ್ಕೆ ತರಲು ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿತ್ತು. ಇದು ಭಾರತದಲ್ಲಿ ಸಹಿ ಮಾಡಲಾದ ಮೊದಲ ಒಪ್ಪಂದವಾಗಿದ್ದು, ದೇಶದಲ್ಲಿ ಸ್ಟಾರ್‌ಲಿಂಕ್ ಅನ್ನು ಮಾರಾಟ ಮಾಡಲು ಸ್ಪೇಸ್‌ಎಕ್ಸ್ ತನ್ನದೇ ಆದ ಅಧಿಕಾರವನ್ನು ಪಡೆದರೆ ಮಾತ್ರ ಇದು ಅನ್ವಯವಾಗುತ್ತದೆ.‌ ಇದನ್ನೂ ಓದಿ: ಭಾರತ ಸೇರಿ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಡೌನ್‌

    ‘ಭಾರತದ ಗ್ರಾಮೀಣ ಪ್ರದೇಶಗಳಲ್ಲಿರುವ ಏರ್‌ಟೆಲ್‌ ಗ್ರಾಹಕರಿಗೂ ಸ್ಟಾರ್‌ಲಿಂಕ್‌ ಸೇವೆ ನೀಡಲು ಸ್ಪೇಸ್‌ಎಕ್ಸ್‌ನೊಂದಿಗೆ ಕೆಲಸ ಮಾಡುವುದು ಮಹತ್ವದ ಮೈಲುಗಲ್ಲಾಗಿದ್ದು, ಮುಂದಿನ ಪೀಳಿಗೆಯ ಉಪಗ್ರಹ ಸಂಪರ್ಕಕ್ಕೆ ಕಂಪನಿಯ ಬದ್ಧತೆ ಪ್ರದರ್ಶಿಸುತ್ತದೆ’ ಎಂದು ಏರ್‌ಟೆಲ್‌ ತಿಳಿಸಿತ್ತು.

  • ಸುನೀತಾ ವಿಲಿಯಮ್ಸ್‌ ಕರೆತರಲು ಇಂದು ನಭಕ್ಕೆ ನೆಗೆಯಲಿದೆ ಕ್ರ್ಯೂ -9

    ಸುನೀತಾ ವಿಲಿಯಮ್ಸ್‌ ಕರೆತರಲು ಇಂದು ನಭಕ್ಕೆ ನೆಗೆಯಲಿದೆ ಕ್ರ್ಯೂ -9

    ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆ ತರುವ ನಿಟ್ಟಿನಲ್ಲಿ ನಾಸಾ (NASA) ಮತ್ತು ಸ್ಪೇಸ್ ಎಕ್ಸ್ (SpaceX ) ಸಿದ್ಧತೆ ನಡೆಸಿದೆ.

    ಅಮೆರಿಕದ ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ‌ ಸ್ಪೇಸ್‌ ಎಕ್ಸ್ ಕ್ರ್ಯೂ-9 ಮಿಷನ್ ಪ್ರಾರಂಭಿಸಲು ಸಿದ್ಧವಾಗಿವೆ. ಭಾರತೀಯ ಕಾಲಮಾನ ರಾತ್ರಿ 10:47ಕ್ಕೆ ಉಡಾವಣೆಗೆ ಸಮಯ ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಮ್ಯಾಪ್‌ ತೋರಿಸಿ ಭಾರತ ವರ, ಇರಾನ್‌ ಶಾಪ ಎಂದ ಇಸ್ರೇಲ್‌ ಪ್ರಧಾನಿ ನೆತನ್ಯಾಹು

    ಈ ಮೊದಲು ಸೆ.26 ರಂದು ಉಡಾವಣೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಹೆಲೆನ್ ಚಂಡಮಾರುತದಿಂದ ಉಂಟಾದ ಪ್ರತಿಕೂಲ ಹವಾಮಾನದ ಕಾರಣ ಉಡಾವಣೆಯನ್ನು ಮುಂದೂಡಲಾಗಿತ್ತು. ಇದನ್ನೂ ಓದಿ: ಮತ್ತೆ ಸಿಎಂ ಆಸೆ ವ್ಯಕ್ತಪಡಿಸಿದ ಡಿಸಿಎಂ ಡಿಕೆಶಿ

    ಜೂನ್ ತಿಂಗಳಲ್ಲಿ 8 ದಿನಗಳ ಬಾಹ್ಯಾಕಾಶ ಯಾತ್ರೆ ತೆರಳಿದ್ದ ಇಬ್ಬರು ಗಗನಯಾತ್ರಿಗಳು ಬೋಯಿಂಗ್ ಸ್ಟಾರ್ ಲೈನರ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ.

     

  • ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್

    ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್

    ವಾಷಿಂಗ್ಟನ್: ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾಗಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ (Starship) ವಾರಗಳ ಹಿಂದೆ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡಿತ್ತು. ಇದೀಗ ದೈತ್ಯ ರಾಕೆಟ್ ಅನ್ನು ಕಂಪನಿ ಮತ್ತೆ ನಿರ್ಮಾಣ ಮಾಡಲು ಮುಂದಾಗಿದ್ದು, ಕೇವಲ 6-8 ವಾರಗಳಲ್ಲಿ ಇದು ಸಿದ್ಧಗೊಳ್ಳಲಿದೆ ಎಂದು ಸ್ಪೇಸ್‌ಎಕ್ಸ್‌ನ (SpaceX) ಸಿಇಒ ಎಲೋನ್ ಮಸ್ಕ್ (Elon Musk) ತಿಳಿಸಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಇತ್ತೀಚೆಗೆ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟಗೊಂಡಿದ್ದ ಸ್ಟಾರ್‌ಶಿಪ್ ರಾಕೆಟ್‌ನ (Rocket) ಹಾನಿ ಸಣ್ಣಮಟ್ಟಾಗಿದೆ ಎಂಬುದನ್ನು ತಿಳಿಸಲು ಸಂತಸಪಡುತ್ತೇನೆ. ಇದರ ಮತ್ತೆ ಉಡಾವಣೆಗೆ ಅಗತ್ಯವಾದ ಮೂಲಸೌಕರ್ಯವನ್ನು ಪಡೆಯಲು 6 ರಿಂದ 8 ವಾರಗಳು ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

    ಏಪ್ರಿಲ್ 17ರಂದು ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣದಿಂದ ಸ್ಟಾರ್‌ಶಿಪ್ ಅನ್ನು ಉಡಾವಣೆ ಮಾಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದ ದೈತ್ಯ ರಾಕೆಟ್‌ನ ಪರೀಕ್ಷಾರ್ಥ ಉಡಾವಣೆಯನ್ನು ನಿಗದಿಪಡಿಸಲಾಗಿದ್ದ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಿ 3 ದಿನಗಳ ಕಾಲ ಮುಂದೂಡಲಾಯಿತು. ಇದನ್ನೂ ಓದಿ: ಕಾಕ್‍ಪಿಟ್‍ಗೆ ಸ್ನೇಹಿತೆ ಕರೆದೊಯ್ದ ಪೈಲೆಟ್ – ಏರ್ ಇಂಡಿಯಾ ಸಿಇಒಗೆ ಶೋಕಾಸ್ ನೋಟಿಸ್

    ಬಳಿಕ ಏಪ್ರಿಲ್ 20ರಂದು ಸ್ಟಾರ್‌ಶಿಪ್ ಅನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸಿದಾಗ ಅದು ಸ್ಫೋಟಗೊಂಡಿತ್ತು. ರಾಕೆಟ್ 3 ನಿಮಿಷಗಳ ಉಡಾವಣೆಯಾದ ಬಳಿಕ ಸ್ಟಾರ್‌ಶಿಪ್ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‌ಎಕ್ಸ್ ತಿಳಿಸಿತ್ತು.

    ಇದೀಗ ಮಸ್ಕ್ ತಿಳಿಸಿದಂತೆ ಸ್ಟಾರ್‌ಶಿಪ್ ಅನ್ನು 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧಪಡಿಸಿದರೂ ಅಮೆರಿಕ ಸರ್ಕಾರದ ಫೆಡರಲ್ ಏವಿಯೇಷನ್ ಅಥಾರಿಟಿ (FAA) ಸ್ಟಾರ್‌ಶಿಪ್ ಸ್ಫೋಟದ ಬಗ್ಗೆ ತನಿಖೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದೆ ಎಂಬುದು ಗಮನಾರ್ಹ ವಿಚಾರ. ಆ ತನಿಖೆ ಮುಗಿಯುವವರೆಗೂ ಸ್ಪೇಸ್‌ಎಕ್ಸ್‌ಗೆ ಮತ್ತೊಂದು ಸ್ಟಾರ್‌ಶಿಪ್‌ನ ಉಡಾವಣೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಸೋಲಿಗೆ ಕಾರಣವನ್ನು ಕನ್ನಡಿಯಲ್ಲಿ ಹುಡುಕಲಿ: ವಾರ್ನರ್ ವಿರುದ್ಧ ಭಜ್ಜಿ ಕಿಡಿ

  • ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ

    ಸ್ಪೇಸ್‌ಎಕ್ಸ್‌ನ ದೈತ್ಯ ರಾಕೆಟ್ ಪರೀಕ್ಷಾರ್ಥ ಹಾರಾಟದ ವೇಳೆ ಸ್ಫೋಟ

    ಟೆಕ್ಸಾಸ್‌:  ಬಾಹ್ಯಾಕಾಶ ಅಧ್ಯಯನಕ್ಕೆ ಗಗನಯಾತ್ರಿಗಳನ್ನು ಕಳುಹಿಸಲು ಎಲೋನ್‌ ಮಸ್ಕ್‌ ಸ್ಪೇಸ್‍ಎಕ್ಸ್ (Space X) ವಿನ್ಯಾಸಗೊಳಿಸಿದ್ದ ಅತ್ಯಂತ ಶಕ್ತಿಶಾಲಿ ರಾಕೆಟ್(Rocket) ಸ್ಟಾರ್‌ಶಿಪ್‌ನ (Starship) ಪರೀಕ್ಷಾರ್ಥ ಹಾರಾಟದ ವೇಳೆ ಗುರುವಾರ ಸ್ಫೋಟಗೊಂಡಿದೆ.

    ಟೆಕ್ಸಾಸ್‍ನ (Texas) ಬೊಕಾ ಚಿಕಾದಲ್ಲಿರುವ (Boca Chica) ಸ್ಪೇಸ್‍ಎಕ್ಸ್ ಬಾಹ್ಯಾಕಾಶ ಕೇಂದ್ರದಿಂದ ಸ್ಟಾರ್‌ಶಿಪ್‌ನ ಮೊದಲ ಪರೀಕ್ಷಾರ್ಥ ಹಾರಾಟ ಬೆಳಗ್ಗೆ 8:33ಕ್ಕೆ ನಡೆಯಿತು. ಇದನ್ನೂ ಓದಿ: ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ

    ರಾಕೆಟ್ ಮೂರು ನಿಮಿಷಗಳ ಉಡಾವಣೆಯಾದ ಬಳಿಕ ಸ್ಟಾರ್‌ಶಿಪ್‌ ಬಾಹ್ಯಾಕಾಶ ನೌಕೆಯನ್ನು ಮೊದಲ ಹಂತದಲ್ಲಿ ಬೇರ್ಪಡಿಸಲು ನಿಗದಿಪಡಿಸಲಾಗಿತ್ತು. ಆದರೆ ಬೇರ್ಪಡಿಸಲು ವಿಫಲವಾಗಿ ರಾಕೆಟ್ ಸ್ಫೋಟಗೊಂಡಿತು ಎಂದು ಸ್ಪೇಸ್‍ಎಕ್ಸ್ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ. ಸ್ಟಾರ್‌ಶಿಪ್‌ನ್ನು ಚಂದ್ರ ಹಾಗೂ ಮಂಗಳನಲ್ಲಿಗೆ (Mars) ಕಳುಹಿಸುವ ಯೋಜನೆ ರೂಪಿಸಲಾಗಿತ್ತು. ಇದನ್ನೂ ಓದಿ: 8 ವರ್ಷಗಳ ಬಳಿಕ ಭಾರತದ ನೆಲಕ್ಕೆ ಕಾಲಿಡುತ್ತಿರುವ ಪಾಕ್ ಸಚಿವ

  • ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ಹಾರಾಟಕ್ಕೆ ಕೆಲವೇ ಕ್ಷಣಗಳಿದ್ದಾಗ ವಿಶ್ವದ ಅತಿ ದೊಡ್ಡ ಸ್ಟಾರ್‌ಶಿಪ್ ರಾಕೆಟ್ ಪರೀಕ್ಷೆ ರದ್ದು

    ವಾಷಿಂಗ್ಟನ್: ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾದ ಹಾಗೂ ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್‌ನ (Starship) ಮೊದಲ ಪರೀಕ್ಷಾ ಹಾರಾಟವನ್ನು ಸ್ಪೇಸ್‌ಎಕ್ಸ್ (SpaceX) ಸೋಮವಾರ ಮುಂದೂಡಿದೆ.

    ಬೂಸ್ಟರ್ ಹಂತದಲ್ಲಿ ಒತ್ತಡದ ಸಮಸ್ಯೆಯಿಂದಾಗಿ ಸ್ಟಾರ್‌ಶಿಪ್ ರಾಕೆಟ್‌ನ (Rocket) ಲಿಫ್ಟ್ಆಫ್ ಅನ್ನು ಉಡಾವಣೆಗೆ ನಿಗದಿಪಡಿಸಲಾಗಿದ್ದ ಸಮಯಕ್ಕಿಂತ ಕೆಲವೇ ನಿಮಿಷಗಳ ಮೊದಲು ಸ್ಥಗಿತಗೊಳಿಸಲಾಯಿತು ಎಂದು ಸ್ಪೇಸ್‌ಎಕ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

    ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿರುವ ಸ್ಪೇಸ್‌ಎಕ್ಸ್ ಬಾಹ್ಯಾಕಾಶ ನಿಲ್ದಾಣವಾದ ಸ್ಟಾರ್‌ಬೇಸ್‌ನಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 8:20ರ ವೇಳೆಗೆ ಸ್ಟಾರ್‌ಶಿಪ್ ಹಾರಾಟವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ ತಾತ್ಕಾಲಿಕವಾಗಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಕನಿಷ್ಠ 48 ಗಂಟೆ ವಿಳಂಬವಾಗಲಿದೆ ಎಂದು ಸ್ಪೇಸ್‌ಎಕ್ಸ್ ತಿಳಿಸಿದೆ.

    ಸ್ಟಾರ್‌ಶಿಪ್ ವಿಶೇಷತೆಗಳೇನು?
    ಸ್ಟಾರ್‌ಶಿಪ್ ಗಗನಯಾತ್ರಿಗಳು ಹಾಗೂ ಸರಕುಗಳನ್ನು ಸಾಗಿಸುವ ಮರುಬಳಕೆ ಮಾಡಬಹುದಾದ ಕ್ಯಾಪ್ಸುಲ್ ಮತ್ತು ಮೊದಲ ಹಂತದ ಸೂಪರ್ ಹೆವಿ ಬೂಸ್ಟರ್ ರಾಕೆಟ್ ಅನ್ನು ಒಳಗೊಂಡಿದೆ. ಸುಮಾರು 164 ಅಡಿ ಎತ್ತರದ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ 230 ಅಡಿ ಎತ್ತರದ ಭಾರೀ ತೂಕದ ರಾಕೆಟ್‌ನ ಮೇಲೆ ನೆಲೆನಿಂತಿದೆ. ಇದನ್ನೂ ಓದಿ: ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2025ರ ಅಂತ್ಯದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಸಾಗಿಸಲು ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯನ್ನು ಆರಿಸಿದೆ. ಕಳೆದ ಫೆಬ್ರವರಿಯಲ್ಲಿ ಸ್ಟಾರ್‌ಶಿಪ್‌ನ ಮೊದಲ ಹಂತದ ಬೂಸ್ಟರ್‌ನಲ್ಲಿ ಸ್ಪೇಸ್‌ಎಕ್ಸ್ 33 ರಾಪ್ಟರ್ ಎಂಜಿನ್‌ಗಳ ಯಶಸ್ವಿ ಪರೀಕ್ಷಾ ಉಡಾವಣೆ ನಡೆಸಿತ್ತು. ಇದೀಗ ಮೊದಲ ಪರೀಕ್ಷಾರ್ಥ ಉಡಾವಣೆ ಸೋಮವಾರ ನಡೆಯಬೇಕಿತ್ತು. ಆದರೆ ಇದೀಗ ಸೂಪರ್ ಹೆವಿ ಬೂಸ್ಟರ್‌ನ ಒತ್ತಡದ ಸಮಸ್ಯೆಯಿಂದಾಗಿ ಹಾರಾಟವನ್ನು ಮುಂದೂಡಲಾಗಿದೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

  • ಇಸ್ರೋ ಸಾಧನೆ – ಮರುಬಳಕೆ ಮಾಡಬಹುದಾದ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ

    ಇಸ್ರೋ ಸಾಧನೆ – ಮರುಬಳಕೆ ಮಾಡಬಹುದಾದ ರಾಕೆಟ್ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ

    ಚಿತ್ರದುರ್ಗ/ನವದೆಹಲಿ: ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಮರಳಿ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ (Rocket) ಅಭಿವೃದ್ಧಿ ಪಡಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವದ ಸಾಧನೆ ಮಾಡಿದೆ.

    ಭಾನುವಾರ ಕರ್ನಾಟಕದ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ATR) ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ (RLV) ಲ್ಯಾಂಡಿಂಗ್ ಪರೀಕ್ಷೆ  ಯಶಸ್ವಿಯಾಗಿ ನಡೆದಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೋ, ಭಾರತ ಪ್ರಮುಖವಾದ ಮತ್ತೊಂದು ಸಾಧನೆಯನ್ನು ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಜೊತೆಗೂಡಿ ಏಪ್ರಿಲ್ 2 ರಂದು ಮುಂಜಾನೆ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಮರುಬಳಕೆ ಮಾಡಬಹುದಾದ ಲಾಂಚ್ ವೆಹಿಕಲ್ ಆಟಾನಮಸ್ ಲ್ಯಾಂಡಿಂಗ್ ಮಿಷನ್ (RLV LVX) ಅನ್ನು ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದೆ.

    ಪರೀಕ್ಷೆ ಹೇಗಾಯ್ತು?
    ಭಾರತೀಯ ವಾಯುಪಡೆ ಚಿನೂಕ್ ಹೆಲಿಕಾಪ್ಟರ್ ಆರ್‌ಎಲ್‌ವಿ ಎತ್ತಿಕೊಂಡು ಬೆಳಗ್ಗೆ 7:10ರ ವೇಳೆಗೆ ಟೇಕ್ ಆಫ್ ಆಗಿದೆ. 4.5 ಕಿ.ಮೀ ಎತ್ತರದಲ್ಲಿ ಹೆಲಿಕಾಪ್ಟರ್ ಆರ್‌ಎಲ್‌ವಿಯನ್ನು ಬಿಡುಗಡೆ ಮಾಡಿದೆ. ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಹಾಗೂ ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು 7:40ರ ವೇಳೆಗೆ ಆರ್‌ಎಲ್‌ವಿ ಏರ್‌ಸ್ಟ್ರಿಪ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಇದನ್ನೂ ಓದಿ: ಇಟಲಿಯಲ್ಲಿ ಇಂಗ್ಲಿಷ್ ಭಾಷೆ ಬ್ಯಾನ್ – ಸಂವಹನ ನಡೆಸಿದರೆ ಭಾರೀ ದಂಡ

    ಒಂದು ವೇಳೆ ಬಾಹ್ಯಾಕಾಶದಿಂದ ರಾಕೆಟ್ ಬಂದರೆ ಯಾವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆಯೋ ಅಂಥದ್ದೇ ಪರಿಸ್ಥಿತಿಯಲ್ಲಿ ಮರು ಬಳಕೆ ಮಾಡಬಹುದಾದ ಉಡಾವಣಾ ವಾಹನದ ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಅಂದರೆ ಮಾನವ ರಹಿತ ರಾಕೆಟ್, ಲ್ಯಾಂಡಿಂಗ್ ಹೈ ಸ್ಪೀಡ್ ಮತ್ತು ರಿಟರ್ನಿಂಗ್ ಸೇಮ್ ಪಾಥ್‌ನ ಸ್ಥಿತಿಗಳಲ್ಲಿ ಈ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ. ಸ್ವಾಯತ್ತ ಲ್ಯಾಂಡಿಂಗ್ ಪರೀಕ್ಷೆಗೆ ಸ್ಥಳೀಯ ನ್ಯಾವಿಗೇಷನ್, ಉಪಕರಣಗಳು, ಸಂವೇದಕಗಳು ಸೇರಿದಂತೆ ಇತ್ಯಾದಿ ಸ್ಥಳೀಯ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ಇಸ್ರೋ ಅಭಿವೃದ್ಧಿಪಡಿಸಿದೆ.

    ಭಾರತೀಯ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನದ ಕನಸು ವಾಸ್ತವಕ್ಕೆ ಬರುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆಗೆ ಕೈ ಹಾಕಿದ್ದು ಯಾಕೆ?
    ಪ್ರಸ್ತುತ ಇಸ್ರೋ ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುತ್ತದೆ. ಆದರೆ ರಾಕೆಟ್ ಮರಳಿ ಬರುವುದಿಲ್ಲ. ಒಂದೊಂದೆ ಹಂತ ದಾಟುತ್ತಿದ್ದಂತೆ ಹೊತ್ತಿ ಉರಿದು ಬೀಳುತ್ತದೆ. ಒಂದು ರಾಕೆಟ್ ನಿರ್ಮಾಣಕ್ಕೆ ಕೋಟ್ಯಂತರ ರೂ. ವೆಚ್ಚವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವದೆಲ್ಲೆಡೆ ಮರಳಿ ಭೂಮಿಗೆ ಲ್ಯಾಂಡ್ ಆಗುವ ರಾಕೆಟ್ ಅಭಿವೃದ್ಧಿ ಪಡಿಸಲಾಗುತ್ತದೆ. ಟೆಸ್ಲಾ ಕಂಪನಿಯ ಸಂಸ್ಥಾಪಕ, ಟ್ವಿಟ್ಟರ್ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿ ಈಗಾಗಲೇ ಮರುಬಳಕೆ ಮಾಡುವ ರಾಕೆಟ್ ಅಭಿವೃದ್ಧಿ ಪಡಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಪ್ರಯೋಗ ನಡೆಸುತ್ತಿದೆ. ಇದನ್ನೂ ಓದಿ: ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ