Tag: space

  • ಗಗನಯಾನಕ್ಕೆ ಹಸಿರು ನಿಶಾನೆ-ಭಾರತದಿಂದ ಮೂವರು ಬಾಹ್ಯಾಕಾಶಕ್ಕೆ ಪಯಣ

    ಗಗನಯಾನಕ್ಕೆ ಹಸಿರು ನಿಶಾನೆ-ಭಾರತದಿಂದ ಮೂವರು ಬಾಹ್ಯಾಕಾಶಕ್ಕೆ ಪಯಣ

    ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಗಗನಯಾನಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ 10 ಸಾವಿರ ಕೋಟಿ ವೆಚ್ಚದಿಂದ ಭಾರತದ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಕೇಂದ್ರ ಮುದ್ರೆಯನ್ನು ಒತ್ತಿದೆ.

    ಗಗನಯಾನದಲ್ಲಿ ಮೂವರು ಚಾಲಕ ಸಿಬ್ಬಂದಿ ಒಟ್ಟು ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇರಲಿದ್ದಾರೆ. ಗಗನಯಾನಕ್ಕೆ ಮಾನವ ಕ್ರಮಾಂಕದ ಜಿಎಸ್‍ಎಲ್‍ವಿ ಎಂಕೆ-111 ಬಳಕೆ ಮಾಡಲಾಗುತ್ತಿದೆ. ಈ ಬಾಹ್ಯಾಕಾಶ ನೌಕೆಯಲ್ಲಿ ಏಳು ದಿನ ಮೂವರು ಯಾನಿಗಳಿಗೆ ವಿಹರಿಸಲು ಅವಕಾಶವಿದೆ. ಈ ಯೋಜನೆಗಾಗಿ ಸರ್ಕಾರ 10 ಸಾವಿರ ಕೋಟಿ ರೂ. ಹಣವನು ಮೀಸಲಿರಿಸಿದೆ. ಯೋಜನೆಯ ತಂತ್ರಜ್ಞಾನ ಅಭಿವೃದ್ಧಿ, ಹಾರ್ಡ್ ವೇರ್ ಅಳವಡಿಕೆ, ಅವಶ್ಯಕ ಮೂಲಸೌಕರ್ಯ ಸೇರಿದಂತೆ ಎಲ್ಲ ವೆಚ್ಚಕ್ಕಾಗಿ 10 ಸಾವಿರ ಕೋಟಿ ಬಳಕೆಯಾಗಲಿದೆ.

    ಎರಡು ಮಾನವ ರಹಿತ ಹಾರಾಟ ಮತ್ತು ಮಾನವ ಸಹಿತ ಹಾರಟವನ್ನು ಗಗನಯಾನ ಭಾಗವಾಗಿ ಕೈಗೊಳ್ಳಲಾಗುತ್ತಿದೆ. ಗಗನಯಾನ ಕಾರ್ಯಕ್ರಮವನ್ನು ಕೆಲಸವನ್ನು ಇಸ್ರೋ, ಅಕ್ಯಾಡೆಮಿಯಾ, ನ್ಯಾಶನಲ್ ಏಜೆನ್ಸಿ, ಕೈಗಾರಿಗೆಗಳು ಒಳಗೊಂಡಂತೆ ವೈಜ್ಞಾನಿಕ ಸಂಘ, ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾಗುತ್ತಿದೆ.

    ಈ ವಿಶೇಷ ಯೋಜನೆ ಉದ್ಯೋಗ ಸೃಷ್ಟಿಸಲಿದ್ದು, ಹೊಸ ಹೊಸ ತಂತ್ರಜ್ಞಾನ, ಯುವ ವಿಜ್ಞಾನಿಗಳ ಸಾಧನೆಗೆ ನಾಂದಿಯಾಲಿದೆ ಎಂದು ಹೇಳಲಾಗುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಈ ಒಂದು ಯೋಜನೆ ಮುಂಬರುವ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ಳು ಕೇಸ್ ಹಾಕಿದ್ದಕ್ಕೆ ಇಸ್ರೋ ವಿಜ್ಞಾನಿಗೆ 50 ಲಕ್ಷ ಪರಿಹಾರ ನೀಡಿ – ಕೇರಳಕ್ಕೆ ಸುಪ್ರೀಂ ಆದೇಶ

    ಸುಳ್ಳು ಕೇಸ್ ಹಾಕಿದ್ದಕ್ಕೆ ಇಸ್ರೋ ವಿಜ್ಞಾನಿಗೆ 50 ಲಕ್ಷ ಪರಿಹಾರ ನೀಡಿ – ಕೇರಳಕ್ಕೆ ಸುಪ್ರೀಂ ಆದೇಶ

    ನವದೆಹಲಿ: ಇಸ್ರೊ ಬೇಹುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿ ವಿಜ್ಞಾನಿ ನಂಬಿ ನಾರಾಯಣನ್ ಸುಳ್ಳು ಕೇಸ್ ದಾಖಲಿಸಿದ್ದಕ್ಕಾಗಿ ಅವರಿಗೆ 50 ಲಕ್ಷ ರೂ. ಪರಿಹಾರ ಧನವನ್ನು ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಎಎಂ ಖಾನ್ವಿಲ್ಕರ್, ಚಂದ್ರಚೂಡ್ ನೇತೃತ್ವದ ಪೀಠ ಈ ತೀರ್ಪು ಪ್ರಕಟಿಸಿದ್ದು, ಪರಿಹಾರ ಧನವನ್ನು 8 ವಾರದ ಒಳಗಡೆ ನೀಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ನಂಬಿ ನಾರಾಯಣನ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದ ಕೇರಳ ಪೊಲೀಸರ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಡಿಕೆ ಜೈನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

    ಏನಿದು ಪ್ರಕರಣ?
    ಇಸ್ರೋದ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದ್ದಾಗ ಈ ತಂತ್ರಜ್ಞಾನವನ್ನು ನಂಬಿ ನಾರಾಯಣನ್ ಮಾಲ್ಡಿವ್ಸ್ ಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ 1994ರ ನವೆಂಬರ್ 30 ರಂದು ಕೇರಳ ಪೊಲೀಸರು ನಂಬಿ ನಾರಾಯಣನ್ ಅವರನ್ನು ಬಂಧಿಸಿದ್ದರು. ನಂತರ ಸಿಬಿಐ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಬೇಹುಗಾರಿಕೆ ನಡೆದಿಲ್ಲ ಎಂದು ಸಿಬಿಐ ಹೇಳಿತ್ತು. ನಂತರ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ 1998ರಲ್ಲಿ ಈ ಪ್ರಕರಣದಲ್ಲಿ ಆಪಾದಿತರೆಂದು ಪರಿಗಣಿಸಲಾಗಿರುವ ನಂಬಿ ನಾರಾಯಣನ್, ಇಸ್ರೊ ವಿಜ್ಞಾನಿ ಡಿ. ಶಶಿಕುಮಾರನ್ ಮತ್ತು ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳಾದ ಎಸ್.ಕೆ. ಶರ್ಮಾ ಮತ್ತು ಚಂದ್ರಶೇಖರನ್, ಮಾಜಿ ಐಜಿಪಿ ಶ್ರೀವಾತ್ಸವ ಹಾಗೂ ಮಾಲ್ಡೀವ್ಸ್ ನ ಇಬ್ಬರು ಮಹಿಳೆಯರಾದ ಮ್ಯಾರಿಯಮ್ ರಶೀಡಾ ಮತ್ತು ಫೌಜಿಯಾ ಹಸನ್ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು.

    ಇದಾದ ಬಳಿಕ ನಾರಾಯಣನ್ ಅವರು, ತಮ್ಮ ವೃತ್ತಿ ಜೀವನಕ್ಕೆ ಕಳಂಕ ತಂದ ಸರಕಾರದ ಕ್ರಮವನ್ನು ಪ್ರಶ್ನಿಸಿ 10 ಲಕ್ಷ ರೂ. ಪರಿಹಾರ ಧನಕ್ಕೆ ಆಗ್ರಹಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ(ಎನ್‍ಎಚ್‍ಆರ್’ಸಿ) ಮೊರೆ ಹೋಗಿದ್ದರು. ಎನ್‍ಎಚ್‍ಆರ್‍ಸಿ 10 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಕೇರಳ ಹೈಕೋರ್ಟ್ ಸಹ ನಂಬಿ ನಾರಾಯಣನ್ ಪರವಾಗಿ ತೀರ್ಪು ನೀಡಿ ಕೇರಳ ಸರ್ಕಾರಕ್ಕೆ 10 ಲಕ್ಷ ರೂ. ನೀಡುವಂತೆ ಸೂಚಿಸಿತ್ತು. ಈ ಪ್ರಕರಣವು ಕೇರಳದ ಮುಖ್ಯಮಂತ್ರಿ ಆಗಿದ್ದ ಕೆ.ಕರುಣಾಕರನ್ ಅವರ ಹುದ್ದೆಗೆ ಆಗ ಕುತ್ತು ತಂದಿತ್ತು.

    ನಂಬಿ ನಾರಾಯಣನ್ ಬಂಧನದಿಂದಾಗಿ ಕ್ರಯೋಜೆನಿಕ್ ಯೋಜನೆ, ಜಿಎಸ್‍ಎಲ್‍ವಿ, ಪಿಎಸ್‍ಎಲ್‍ವಿ ರಾಕೆಟ್ ಅಭಿವೃದ್ಧಿ ಸೇರಿದಂತೆ ಇಸ್ರೊದ ಹತ್ತಾರು ಯೋಜನೆಗಳು ಹಿಂದಕ್ಕೆ ಬಿದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

    ಮಾನವ ಸಹಿತ ಬಾಹ್ಯಾಕಾಶ ಪ್ರಯಾಣ ಮತ್ತಷ್ಟು ಹತ್ತಿರ: ಇಸ್ರೋ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಕನಸಿನ ಯೋಜನೆ `ಮಾನವ ಸಹಿತ ಬಾಹ್ಯಾಕಾಶ ಪಯಣ’ ಮತ್ತಷ್ಟು ಹತ್ತಿರವಾಗಿದ್ದು, ಇಸ್ರೋ ನಡೆಸಿದ ಪರೀಕ್ಷೆ ಅಭೂತಪೂರ್ವ ಯಶಸ್ಸು ಸಾಧಿಸಿದೆ.

    ಇಂದು ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಇಸ್ರೋ ಈ ಪರೀಕ್ಷೆ ಮಾಡಿದ್ದು, ನಿರೀಕ್ಷೆಯಂತೆಯೇ ನೌಕೆ ಉಡಾವಣಾ ವಾಹಕದಿಂದ ಬೇರ್ಪಟ್ಟು ಪ್ಯಾರಾಚೂಟ್ ಗಳ ಮೂಲಕ ಸುರಕ್ಷಿತವಾಗಿ ಭೂಮಿಗೆ ಇಳಿದಿದೆ.

    ಭವಿಷ್ಯದಲ್ಲಿ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಮುಂದಾಗಿರುವ ಇಸ್ರೋ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು ಯಾನಿಗಳ ಮಾದರಿಗಳನ್ನು ಹೊತ್ತ ನೌಕೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಬಾಹ್ಯಾಕಾಶ ಪಯಣದ ವೇಳೆ ತುರ್ತು ಪರಿಸ್ಥಿತಿಯಲ್ಲಿ ತುರ್ತು ನಿರ್ಗಮನ ಮಾಡುವುದು ಹೇಗೆ ಎಂಬ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿದೆ.

    ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾದ ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ ಶಿವನ್, ನೌಕೆಯನ್ನು ರಾಕೆಟ್ ಇಂಜಿನ್‍ಗೆ ನೌಕೆಯನ್ನು  ಜೋಡಣೆಮಾಡಲಾಗಿತ್ತು. ಈ ನೌಕೆಯಲ್ಲಿ ಅಂತರಿಕ್ಷ ಯಾನಿಗಳ ದೇಹದ ಮಾದರಿಗಳನ್ನು ಇರಿಸಿ ಉಡಾವಣೆ ಮಾಡಲಾಯಿತು. ಕೆಲವೇ ಕ್ಷಣಗಳಲ್ಲಿ ರಾಕೆಟ್‍ನಿಂದ ಬೇರ್ಪಟ್ಟ ನೌಕೆ ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಯಿತು ಎಂದು ಹೇಳಿದರು.

    ಪ್ರಯೋಗಾರ್ಥವಾಗಿ ನಡೆದ ಪರೀಕ್ಷೆ ಯಶಸ್ವಿಯಾಗಿದ್ದು, 259 ಸೆಕೆಂಡ್‍ಗಳ ಕಾಲ ನಡೆದ ಪರೀಕ್ಷೆಯ ಯಶಸ್ವಿನೊಂದಿಗೆ ಮುಂದಿನ ದಿನಗಳಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಹಾಯಕವಾಗುತ್ತದೆ. ಅಂತರಿಕ್ಷಯಾನಕ್ಕೆ ಇನ್ನಷ್ಟು ಹಾದಿ ಸುಗಮವಾಗಿದೆ. ಉಡಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ನೌಕೆ ಒಳಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ನಿಟ್ಟಿನಲ್ಲಿ ನಡೆಸಿದ ಮೊದಲ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

    1962ರಲ್ಲಿ ಪ್ರಾರಂಭಗೊಂಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲು ಹಲವಾರು ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ವಿಶ್ವದಲ್ಲಿ ಇಲ್ಲಿಯವರೆಗೂ ಕೇವಲ ಮೂರು ರಾಷ್ಟ್ರಗಳಾದ ರಷ್ಯಾ, ಅಮೆರಿಕ ಹಾಗೂ ಚೀನಾವು ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದವು. ಇಂದು ನಡೆದ ಪ್ರಯೋಗ ಯಶಸ್ವಿಯಾಗಿದ್ದರಿಂದ ಭಾರತದ ಮಾನವಸಹಿತ ಅಂತರಿಕ್ಷ ಯಾನದ ಕನಸು ನನಸಾಗುವ ಸಮಯಯ ಸನ್ನಿಹಿತವಾಗಿದೆ.

     

  • ರಾಜ್ಯಪಾಲನಾಗಲ್ಲ, ವಿಜ್ಞಾನಿಯಾಗಿಯೇ ಇರ್ತೀನಿ: ಕೇಂದ್ರದ ಆಫರ್ ತಿರಸ್ಕರಿಸಿದ್ದ ಯು.ಆರ್.ರಾವ್

    ರಾಜ್ಯಪಾಲನಾಗಲ್ಲ, ವಿಜ್ಞಾನಿಯಾಗಿಯೇ ಇರ್ತೀನಿ: ಕೇಂದ್ರದ ಆಫರ್ ತಿರಸ್ಕರಿಸಿದ್ದ ಯು.ಆರ್.ರಾವ್

    ಉಡುಪಿ: ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಯು. ಆರ್ ರಾವ್ ಅವರಿಗೆ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗುವ ಅವಕಾಶ ಸಿಕ್ಕಿತ್ತು. ಆದರೆ ನಾನು ವಿಜ್ಞಾನಿಯಾಗಿಯೇ ಮುಂದುವರೆಯುತ್ತೇನೆ. ರಾಜಕಾರಣಿಯಾಗುವುದಿಲ್ಲ ಎಂದು ಹೇಳಿ ತನಗೆ ಸಿಕ್ಕಿದ್ದ ಆಫರ್ ಅನ್ನು ಅವರು ನಯವಾಗಿ ತಿರಸ್ಕರಿಸಿದ್ದರು.

    ಯು.ಆರ್ ರಾವ್ ಉಡುಪಿ ಜಿಲ್ಲೆಯ ಅದಮಾರು ಗ್ರಾಮದವರು. ಬಾಲ್ಯದ ಶಿಕ್ಷಣ ಉಡುಪಿಯಲ್ಲಿ ಮುಗಿಸಿದ ಉಡುಪಿ ರಾಮಚಂದ್ರ ರಾವ್ ಅವರಿಗೆ ಮಹಾರಾಷ್ಟ್ರ ರಾಜ್ಯಪಾಲರಾಗುವ ಅವಕಾಶ ಸಿಕ್ಕಿತ್ತು ಎನ್ನುವ ಮಾಹಿತಿಯನ್ನು ರಾವ್ ಕುಟುಂಬಸ್ಥರು ಹೊರಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ರಾವ್ ಸಂಬಂಧಿ ಅದಮಾರು ಶ್ರೀಪತಿ ಆಚಾರ್ಯ, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ರಾವ್ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆಯ ಆಫರ್ ಕೊಟ್ಟಿದ್ದರು. ನಾನು ವಿಜ್ಞಾನಿ. ರಾಜಕಾರಣಿಯಾಗಲು ಬಯಸುವುದಿಲ್ಲ ಎಂದು ಪ್ರಧಾನಿಯಿಂದ ಬಂದ ನಿವೇದನೆಯನ್ನು ನಯವಾಗಿ ತಿರಸ್ಕರಿಸಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ. ಪ್ರೊಫೆಸರ್ ರಾವ್ ಅವರು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಅವರಿಂದ ದೇಶಕ್ಕೆ- ವಿಶ್ವಕ್ಕೆ ಸಿಕ್ಕ ಕೊಡುಗೆ ಮಹತ್ತರವಾದದ್ದು ಎಂದು ಅವರು ಹೇಳಿದರು.

    ಯು. ಆರ್ ರಾವ್ ಪ್ರೌಢಶಿಕ್ಷಣವನ್ನು ಉಡುಪಿಯ ಮಿಷನ್ ಕಂಪೌಡಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಪೂರೈಸಿದ್ದರು. ತಾಯಿ ಕೃಷ್ಣವೇಣಿ ಅವರ ಮನೆ ಉಡುಪಿಯ ಅದಮಾರುವಿನಲ್ಲಿತ್ತು. ಅಲ್ಲೇ ರಾವ್ ಅವರ ಶಿಕ್ಷಣ ಆರಂಭವಾಗಿತ್ತು. ಅದಮಾರುವಿನ ಮನೆ ಸದ್ಯ ಬಿದ್ದು ಹೋಗಿದೆ. ರಾವ್ ಅವರ ತಂದೆ ಕಟ್ಟಿಸಿದ ಉಡುಪಿಯ ಬನ್ನಂಜೆಯ ಮನೆಯನ್ನು ಯು.ಆರ್ ರಾವ್ ಬಾವ ಖರೀದಿ ಮಾಡಿ ಸದ್ಯ ಅಲ್ಲೇ ನೆಲೆಸಿದ್ದಾರೆ.

    ಅಡುಗೆ ಭಟ್ಟನ ಮಗ ವಿಜ್ಞಾನಿ: ಯು.ಆರ್ ರಾವ್ ತಂದೆ ಲಕ್ಷ್ಮೀನಾರಾಯಣ ಅವರು ಬಹಳ ಚೆನ್ನಾಗಿ ಆಡುಗೆ ಮಾಡುತ್ತಿದ್ದರು. ಚೆನ್ನಾಗಿ ಅಡುಗೆ ಮಾಡಿ- ಅದರಲ್ಲಿ ಬಂದ ದುಡ್ಡಿನಲ್ಲಿ ಯು.ಆರ್ ರಾವ್ ಅವರಿಗೆ ಶಿಕ್ಷಣ ಕೊಡಿಸಿದ್ದರು. ಬಳ್ಳಾರಿಯಲ್ಲಿ ಕ್ಯಾಟರಿಂಗ್ ಬ್ಯುಸಿನೆಸ್ ಮಾಡುತ್ತಿದ್ದ ರಾಜ್ ತಂದೆ, ಆ ಭಾಗದಲ್ಲಿ ಅಡುಗೆ ವಿಚಾರದಲ್ಲಿ ಭಾರೀ ಹೆಸರುವಾಸಿಯಾಗಿದ್ದರು. ಕುಟುಂಬವನ್ನು ಸಾಕಿ ಸಲಹಿದ್ದು, ಮಕ್ಕಳ ವಿದ್ಯಾಭ್ಯಾಸ ಮಾಡಿಸಿದ್ದು, ಮನೆ ಕಟ್ಟಿಸಿದ್ದು ಎಲ್ಲವೂ ಬಾಣಸಿಗ ವೃತ್ತಿಯಿಂದಲೇ.

    ಭಾರತ ರತ್ನ ಸಿಗಬೇಕಿತ್ತು: ಯು.ಆರ್ ರಾವ್ ಅವರಿಗೆ ಭಾರತ ರತ್ನ ಗೌರವ ನೀಡಬೇಕಿತ್ತು. ಪದ್ಮ ಪ್ರಶಸ್ತಿ ನೀಡಿದ್ದು ಗೌರವದ ಸಂಗತಿಯೇ ಆಗಿದೆ. ಆದ್ರೆ ಇದಕ್ಕಿಂತ ಹೆಚ್ಚಿನ ಸನ್ಮಾನ ರಾವ್ ಅವರಿಗೆ ಸಿಗಬೇಕಿತ್ತು ಎಂದು ಹೇಳಿದರು. ಅವರು ಭಾರತಕ್ಕೆ ಬರುವ ಮನಸ್ಸು ಮಾಡಿದ್ದೇ ದೊಡ್ಡ ವಿಚಾರ. ಅಮೆರಿಕದಲ್ಲಿ ಇರುತ್ತಿದ್ದರೆ ಇನ್ನಷ್ಟು ಉನ್ನತ ಹುದ್ದೆಗೆ ಹೋಗುತ್ತಿದ್ದರೋ ಏನೋ..? ಎಲ್ಲವನ್ನೂ ತ್ಯಜಿಸಿ ಅವರು ತಾಯ್ನಾಡಿನ ಸೇವೆಗೆ ಬಂದಿದ್ದು ದೊಡ್ಡ ವಿಷಯ ಎಂದು ಶ್ರೀಪತಿ ಆಚಾರ್ಯ ತಿಳಿಸಿದರು.

     

    ಯು.ಆರ್.ರಾವ್ ಸೋಮವಾರ ಬೆಳಗಿನ ಜಾವ ಸುಮಾರು 2.30ರ ಸಮಯದಲ್ಲಿ ಮೃತಪಟ್ಟಿದ್ದಾರೆ. ವಿಜ್ಞಾನಿಯ ನಿಧನಕ್ಕೆ ನಾಡಿನ ಗಣ್ಯರೆಲ್ಲ ಸಂತಾಪ ಸೂಚಿಸಿದ್ದಾರೆ. ರಾವ್ ಭಾರತದ ಮೊದಲ ಕೃತಕ ಉಪಗ್ರಹ ಆರ್ಯಭಟ ದಲ್ಲಿಯೂ ಕೆಲಸ ನಿರ್ವಹಿಸಿದ್ದರು. ಇದೇ ತಿಂಗಳು ಹೃದಯ ಸಂಬಂಧಿ ಕಾಯಿಲೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು.

    1984 ಮತ್ತು 1994ರ ಅವಧಿಯಲ್ಲಿ ರಾವ್ ಇಸ್ರೋದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದಕ್ಕೂ ಮೊದಲು ಸತೀಶ್ ಧವನ್ ಸಂಸ್ಥೆಯ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದರು. ರಾವ್ ಉಡುಪಿ ಜಿಲ್ಲೆಯ ಆದ್ಮಾಪುರ ಗ್ರಾಮದಲ್ಲಿ ಜನಸಿದ್ದರು. ರಾವ್ ಅವರು ದೇಶದ ಶ್ರೇಷ್ಠ ವಿಜ್ಞಾನಿಗಳಾದ ಸತೀಶ್ ಧವನ್, ವಿಕ್ರಂ ಸಾರಾಭಾಯ್, ಎಂ.ಜಿ.ಕೆಮೆನನ್ ಅವರ ಅನೇಕ ಪ್ರೊಜೆಕ್ಟ್ ನಲ್ಲಿ ಭಾಗಿಯಾಗಿದ್ದರು.

    ಇದೇ ವರ್ಷ ರಾವ್ ಅವರಿಗೆ ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿ ಬಂದ ವೇಳೆ `ಇದು ನನಗೆ ಮರಣೋತ್ತರವಾಗಿ ನೀಡಲಾಗುತ್ತದೆ ಎಂದು ತಿಳಿದಿದ್ದೆ’ ಎಂದು ರಾವ್ ಹಾಸ್ಯ ಮಾಡಿದ್ದರು.