ಶ್ರೀಹರಿಕೋಟಾ: ಚಂದ್ರಯಾನ-2ಕ್ಕೆ ನಾಲ್ಕು ಹೆಜ್ಜೆ ಮಾತ್ರ ದೂರ ಇದ್ದೇವೆ. ಜುಲೈ 22ಕ್ಕೆ ಭೂ ಕಕ್ಷೆಯಿಂದ ದೂರವಾಗಿ ಚಂದ್ರನ ಕಕ್ಷೆಯನ್ನು ತಲುಪಿದ್ದೇವೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾಲ್ಕು ಕಕ್ಷೆಗಳನ್ನು ಪೂರ್ಣಗೊಳಿಸಿ ಸೆಪ್ಟೆಂಬರ್ 7ರ ರಾತ್ರಿ 1 ಗಂಟೆಗೆ 55 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಇಂದು ಬೆಳಗ್ಗೆ 9 ಗಂಟೆಗೆ ಚಂದ್ರಯಾನ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ. ಈ ವೇಳೆ 30 ನಿಮಿಷ ನನ್ನ ಹೃದಯ ಬಡಿತವೇ ನಿಂತ ಅನುಭವ ನನಗೆ ಆಯ್ತು. ಇದೀಗ ಚಂದ್ರಯಾನ ಚಂದ್ರನ ಪರಿಭ್ರಮಣೆ ನಡೆಸುತ್ತಿದೆ ಎಂದು ಶಿವನ್ ಹೇಳಿದರು.
ನಮ್ಮ ತಂಡ ಅತ್ಯಂತ ನಿಖರತೆಯಿಂದ ಕೆಲಸ ಮಾಡುತ್ತಿದ್ದು, ಮಿಶನ್ ಚಂದ್ರಯಾನ-2ನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಮಾಡುವತ್ತ ಕಾರ್ಯ ನಿರ್ವಹಿಸುತ್ತಿದೆ. ಆಗಸ್ಟ್ 28, 30 ಮತ್ತು ಸೆಪ್ಟೆಂಬರ್ 1ರಂದು ಚಂದ್ರಯಾನ-2ನ್ನು 18 ಸಾವಿರ ಕಿಲೋಮೀಟರ್ ಅಂತರದಿಂದ 100/100 ಕಿಲೋಮೀಟರ್ ಎತ್ತರದವರೆಗೆ ತರಲಾಗುವುದು ಎಂದರು.
ಸೆಪ್ಟೆಂಬರ್ 1ರಂದು ಆರ್ಬಿಟರ್ ಲ್ಯಾಂಡರ್ ನಿಂದ ಪ್ರತ್ಯೇಕಗೊಳ್ಳಲಿದೆ. ಈ ಸಮಯದಲ್ಲಿ ಲ್ಯಾಂಡರ್ ಮೇಲೆ ಎಲ್ಲರ ಗಮನ ಕೇಂದ್ರಕೃತವಾಗಿರುತ್ತದೆ. ಸೆಪ್ಟೆಂಬರ್ 3ರಂದು ಲ್ಯಾಂಡರ್ ನ್ನು ಪೂರ್ಣವಾಗಿ ಪರಿಶೀಲನೆ ನಡೆಸಲಾಗುವುದು. ಮದುವೆಯ ಸಂದರ್ಭದಲ್ಲಿ ವಧುವನ್ನು ಹೇಗೆ ತಾಯಿ-ತಂದೆಯಿಂದ ದೂರ ಮಾಡಿ ವರನ ಮನೆಗೆ ಕರೆದುಕೊಂಡು ಹೋಗಲಾಗುತ್ತದೋ ಅದೇ ರೀತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ ಎಂದು ಉದಾಹರಣೆಯೊಂದಿಗೆ ಶಿವನ್ ವಿವರಿಸಿದರು.
ಸೆಪ್ಟೆಂಬರ್ 7ಕ್ಕೆ ಪವರ್ ಮಿಶನ್: ಸೆಪ್ಟೆಂಬರ್ 7ರ ರಾತ್ರಿ ಪವರ್ ಮಿಶನ್ ಆರಂಭಗೊಳ್ಳಲಿದೆ. ರಾತ್ರಿ 1.55 ನಿಮಿಷಕ್ಕೆ ಚಂದ್ರನ 27 ಡಿಗ್ರಿ ದಕ್ಷಿಣ, 22 ಡಿಗ್ರಿ ಪೂರ್ವಕ್ಕೆ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡ್ ಮಾಡಲಾಗುಗುವುದು. 3 ಗಂಟೆ 10 ನಿಮಿಷಕ್ಕೆ ರೋವರಿನನ ಸೋಲಾರ್ ಪ್ಯಾನಲ್ ತನ್ನ ಕಾರ್ಯವನ್ನು ಆರಂಭಿಸುತ್ತದೆ. 3 ಗಂಟೆಯ ನಂತರ ರೋವರ್ ಪ್ರಜ್ಞಾನನ್ನು ಲ್ಯಾಂಡರ್ ನಿಂದ ಪ್ರತ್ಯೇಕಗೊಳಿಸಲಾಗುವುದು. 4 ಗಂಟೆಯ ನಂತರ ರೋವರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.
ಪ್ರಧಾನಿಗಳಿಗೆ ಆಹ್ವಾನ: ಸೆಪ್ಟೆಂಬರ್ 7ರ ರಾತ್ರಿ 1.55ಕ್ಕೆ ಚಂದ್ರನ ಮೇಲ್ಮೈ ಯಶಸ್ವಿಯಾಗಿ ಪ್ರವೇಶಿಸಲಿದ್ದೇವೆ. ತದನಂತರ ಎರಡನೇ ಹಂತದ ಕೆಲಸಗಳು ನಡೆಯಲಿವೆ. ಚಂದ್ರಯಾನ-2ರ ಟಚ್-ಡೌನ್ ವೀಕ್ಷಣೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಆಹ್ವಾನಿಸಲಾಗಿದೆ. ಈ ಸಂಬಂಧ ಪ್ರಧಾನಿಗಳ ಕಾರ್ಯಾಲಯದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ಶಿವನ್ ಮಾಹಿತಿ ನೀಡಿದರು.
ಸೇಫ್ ಲ್ಯಾಡಿಂಗ್ ಕಷ್ಟ: ಚಂದ್ರನ ಮೇಲೆ ಲ್ಯಾಡಿಂಗ್ ಮಾಡುವ ಕೆಲಸ ಅತ್ಯಂತ ಕ್ಲಿಷ್ಟ ಮತ್ತು ಕಷ್ಟಕರವಾಗಿದೆ. ಕಾರಣ ಮೊದಲ ಬಾರಿಗೆ ಈ ಸಾಹಸ ಕಾರ್ಯಕ್ಕೆ ಇಸ್ರೋ ಮುಂದಾಗಿದ್ದು, ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ನಂಬಿಕೆಯನ್ನು ಹೊಂದಿದ್ದೆವೆ. ಸಾಫ್ಟ್ ಲ್ಯಾಂಡಿಂಗ್ ನಲ್ಲಿ ಸಕ್ಸಸ್ ರೇಟ್ ಶೇ.37ರಷ್ಟು ಮಾತ್ರ ಇದೆ. ಆದರೂ ನಾವು ಮಿಶನ್ ನಲ್ಲಿ ಯಶಸ್ವಿಯಾಗಲಿದ್ದೇವೆ. ಈ ಸಂಬಂಧ ಎಲ್ಲ ಆಯಾಮಗಳಿಂದಲೂ ನಾವು ಸಿದ್ಧಗೊಂಡಿದ್ದೇವೆ ಎಂದು ಶಿವನ್ ಸ್ಪಷ್ಟಪಡಿಸಿದರು.
ಲ್ಯಾಂಡಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಚಂದ್ರಯಾನವನ್ನು ಲ್ಯಾಂಡರ್ ನಿಂದ ಇಳಿಸುವ ಮುನ್ನ ಪೃಥ್ವಿಯಿಂದ ಎರಡು ಸಂದೇಶಗಳನ್ನು ಕಳುಹಿಸಲಾಗುವುದು. ಲ್ಯಾಂಡರ್ ವೇಗ ಮತ್ತು ದಿಕ್ಕು ಸುಧಾರಣೆಯಾಗಿ ನಿಧಾನವಾಗಿ ಚಂದ್ರನ ಮೇಲ್ಮೈ ಪ್ರವೇಶಿಸುವ ಸಂದೇಶವನ್ನು ಕಮಾಂಡ್ ಒಳಗೊಂಡಿರುತ್ತದೆ. ಅರ್ಬಿಟರ್ ಮತ್ತು ಲ್ಯಾಂಡರ್ ನಲ್ಲಿಯ ಕ್ಯಾಮೆರಾದಲ್ಲಿ ನಿಖರ ಸಮಯ ದಾಖಲಾಗಲಿದೆ. ಲ್ಯಾಂಡರ್ ಕೆಳಭಾಗದಲ್ಲಿ ಅಳವಡಿಸಲಾಗಿರುವ ಚಂದ್ರನ ಮೇಲ್ಮೈ ಸ್ಪರ್ಶಿಸುವ ಸಮಯ ಮತ್ತು ದೃಶ್ಯಗಳನ್ನು ದಾಖಲಿಸಿಕೊಳ್ಳಲಿದೆ. ಒಂದು ವೇಳೆ ಚಂದ್ರನ ಮೇಲ್ಮೈ ಸ್ಪರ್ಶಿಸುವಾಗ ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ.
ಭೂಮಿ ಮತ್ತು ಚಂದ್ರನ ನಡುವೆ ಅಂದಾಜು 3 ಲಕ್ಷ 84 ಸಾವಿರ ಕಿಲೋಮೀಟರ್ ಅಂತರವಿದೆ. ಚಂದ್ರಯಾನ-2ರಲ್ಲಿ ಲ್ಯಾಂಡರ್-ವಿಕ್ರಂ ಮತ್ತು ರೋವರ್-ಪ್ರಜ್ಞಾನ ಚಂದ್ರನ ಸನಿಹದವರೆಗೂ ಹೋಗಲಿವೆ. ಚಂದ್ರನ ಮೇಲ್ಮೈ ಪ್ರವೇಶಿಸುವ ನಾಲ್ಕು ದಿನ ಮುನ್ನವೇ ರೋವರ್ ‘ವಿಕ್ರಂ’ ಲ್ಯಾಂಡಿಂಗ್ ಸ್ಥಳದ ಪರಿಶೀಲನೆ ನಡೆಸಿ ಸ್ಕ್ಯಾನ್ ಮಾಡಲಿದೆ. ಸ್ಥಳ ಅಂತಿಮಗೊಂಡ ಬಳಿಕ ಸೆಪ್ಟೆಂಬರ್ 6-8ರ ನಡುವೆ ಈ ಲ್ಯಾಂಡಿಂಗ್ ಚಟುವಟಿಕೆ ನಡೆಯಲಿದೆ.
ಲ್ಯಾಡಿಂಗ್ ಬಳಿಕ ಆರು ಚಕ್ರಗಳುಳ್ಳ ರೋವರ್-ಪ್ರಜ್ಞಾನ ಲ್ಯಾಂಡರ್ ನಿಂದ ಪ್ರತ್ಯೇಕಗೊಳ್ಳುತ್ತದೆ. ಪ್ರತ್ಯೇಕಗೊಳ್ಳುವ ಪ್ರಕ್ರಿಯೆ 4 ಗಂಟೆ ಸಮಯ ವ್ಯಯವಾಗುತ್ತದೆ. ಅಂದರೆ 1 ಸೆಂಟಿಮೀಟರ್ ಪ್ರತಿ ಸೆಕೆಂಡ್ ಗೆ 500 ಮೀಟರ್ ವರೆಗೆ ದೂರವಾಗುತ್ತಾ ಹೋಗುತ್ತದೆ. ಬೇರ್ಪಟ್ಟ ರೋವರ್ ಚಂದ್ರನ ಮೇಲ್ಮೈ ಚಿತ್ರಗಳು, ಲಭ್ಯವಿರುವ ಖನಿಜ ಸಂಪನ್ಮೂಲಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯ ನಡೆಸಲಿದೆ.