Tag: sp

  • ಡಿಸಿ, ಎಸ್‌ಪಿ, ನೋಡಿ ಮನೆ ಮೇಲೆ ಹತ್ತಿ ಕೂತ್ರೂ ಕೇಸ್ ಬಿತ್ತು

    ಡಿಸಿ, ಎಸ್‌ಪಿ, ನೋಡಿ ಮನೆ ಮೇಲೆ ಹತ್ತಿ ಕೂತ್ರೂ ಕೇಸ್ ಬಿತ್ತು

    – ಗುಂಪಾಗಿ ಕುಳಿತವರ ಮೇಲೆ ಕೇಸ್

    ಚಿಕ್ಕಮಗಳೂರು: ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಆದರೆ ಕೆಲವರು ಮಾತ್ರ ಗುಂಪು ಸೇರುತ್ತಿದ್ದಾರೆ. ಹೀಗೆ ಸೇರುತ್ತಿರುವವರನ್ನು ಹುಡುಕಿ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

    ಜಿಲ್ಲೆಯ ಆಲ್ದೂರು ಸಮೀಪದ ಬನ್ನೂರಿನಲ್ಲಿ ಅಂಗಡಿ ಮುಂದೆ ಸುಮಾರು ಎಂಟತ್ತು ಜನ ಗುಂಪಾಗಿ ಸೇರಿ ಹರಟೆ ಹೊಡೆಯುತ್ತಿದ್ದರು. ಇದೇ ವೇಳೆ, ಜಿಲ್ಲಾ ಕೇಂದ್ರದಿಂದ ಶೃಂಗೇರಿಗೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಎಸ್‌ಪಿ ಹರೀಶ್ ಪಾಂಡೆ ಅಂಗಡಿ ಬಳಿಯ ಗುಂಪನ್ನು ನೋಡಿ ಗಾಡಿ ನಿಲ್ಲಿಸಿದ್ದಾರೆ. ಇದನ್ನು ಕಂಡ ಜನ ಎದ್ವೋ-ಬಿದ್ವೋ ಅಂತ ಓಡಿದ್ದಾರೆ.

    ಹೀಗೆ ಓಡಿ ಹೋದವರು ಹೆಂಚಿನ ಮನೆ ಹಾಗೂ ಶೀಟಿನ ಮನೆ ಮೇಲೆ ಹತ್ತಿ ಕೂತಿದ್ದಾರೆ. ಮನೆ ಮೇಲೆ ಕೂತಿದ್ದ ಜನರಿಗೆ ಕೆಳಗಿಳಿಯುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಕೆಳಗೆ ಇಳಿದಿಲ್ಲ. ಮನೆಯ ಒಂದು ತುದಿಯಲ್ಲಿ ಲಾಠಿ ಹಿಡಿದ ಪೊಲೀಸರು ಕೆಳಗೆ ಇಳಿಯುತ್ತಿಯೋ ಇಲ್ಲ ಮೇಲೆ ಬಂದು ಬಾರಿಸಬೇಕೋ ಎಂದು ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಆದರೂ ಇಳಿದಿಲ್ಲ. ಹೀಗೆ ಅಧಿಕಾರಿಗಳು ಹೋಗುವವರೆಗೂ ಮನೆ ಮೇಲೆಯೇ ಕುಳಿತಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಕೆಳಗಿಳಿಸಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಗುಂಪು ಸೇರಲು ಕಾರಣಕರ್ತರಾದ ಅಂಗಡಿ ಮಾಲೀಕ ಹಾಗೂ ಓಡಿ ಹೋದ ಇಬ್ಬರು ಸೇರಿ ಮೂವರ ಮೇಲೆ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು

    100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು

    ಧಾರವಾಡ: ಕೊರೊನಾ ಭೀತಿಯಿಂದ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೇರಿದಂತೆ ಕರ್ತವ್ಯದ ಮಧ್ಯೆಯೂ ಅನೇಕ ಪೊಲೀಸರು ಊಟ ಹಾಕಿ ಮಾನವೀಯತೆ ಮೆರೆದಿದ್ದಾರೆ.

    ಶಿವಮೊಗ್ಗದಿಂದ ರಾಜಸ್ಥಾನಕ್ಕೆ ನಡೆದುಕೊಂಡೇ ಹೊರಟಿದ್ದ ಅನೇಕ ಕಾರ್ಮಿಕರು ಹಾಗೂ ಕಾರಿನಲ್ಲಿ ಹೊರಟಿದ್ದ ರಾಜಸ್ಥಾನ ಮೂಲದ ಕುಟುಂಬಗಳಿಗೆ ತೆಗೂರ ಬಳಿ ಖುದ್ದು ಎಸ್‍ಪಿಯೇ ಊಟ ಬಡಿಸಿ ಎಲ್ಲರ ಉಪಚಾರ ಮಾಡಿದರು. ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಟೋಲ್ ಗೇಟ್‍ನಲ್ಲಿ ಕೂಲಿ ಕಾರ್ಮಿಕರಿಗೆ ಖಾಕಿ ಪಡೆ ಒಂದು ಹೊತ್ತಿನ ಊಟದ ವ್ಯವಸ್ಥೆ ಮಾಡಿದ್ದರು.

    ಧಾರವಾಡದ ಹೊರವಲಯದ ನರೇಂದ್ರ ಕ್ರಾಸ್ ಬಳಿ ಇರುವ ಟೋಲ್ ಗೇಟ್‍ನಲ್ಲಿ ಡಿವೈಎಸ್‍ಪಿ, ಪಿಎಸ್‍ಐ ಅವರಿಂದ ನೂರಾರು ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದರು. ಬಳಿಕ ಅವರನ್ನು ಸ್ಥಳೀಯ ಹಾಸ್ಟೇಲ್‍ನಲ್ಲಿ ಆಶ್ರಯಕ್ಕಾಗಿ ಕಳುಹಿಸಲಾಗಿದೆ. ಕಳೆದ 5 ದಿನಗಳ ಹಿಂದೆಯೇ ಶಿವಮೊಗ್ಗದಿಂದ ರಾಜಸ್ಥಾನಕ್ಕೆ ಹೊರಟ 30 ಜನರ ತಂಡ, ಬಿಸಿಲಿನಿಂದ ತೊಂದರೆ ಅನುಭವಿಸುತ್ತಿತ್ತು. ಅವರನ್ನು ಪೊಲೀಸ್ ವಾಹನದಲ್ಲಿ ತೆಗೂರ ಬಳಿ ಕರೆಸಿ ಎಸ್‍ಪಿ ಅವರು ಊಟ ಬಡಿಸಿದ್ದಾರೆ.

    ರಾಜಸ್ಥಾನಕ್ಕೆ ಹೋಗಲು ಚೆನ್ನೈದಿಂದ ಬಂದ ಎರಡು ಕುಟುಂಬ ಎರಡು ದಿನಗಳಿಂದ ಹೋಗೋಕೆ ಆಗದೇ ರಸ್ತೆಯಲ್ಲೇ ಪರದಾಟ ಮಾಡಿತ್ತು. ಇದರ ಜೊತೆಗೆ ಬೆಳಗಾವಿಯ ಸಂಕೇಶ್ವರದಿಂದ ಬೆಂಗಳೂರ ಕಡೆ ಹೊರಟಿದ್ದ 30 ಜನರನ್ನ ಚೆಕ್‍ಪೋಸ್ಟನಲ್ಲಿ ತಡೆದು ಅವರಿಗೂ ಕೂಡ ಊಟಕ್ಕೆ ಹಾಕಲಾಗಿದೆ. ಆದರೆ ಬೇರೆ ಜಿಲ್ಲೆಗಳಿಂದ ಬಂದವರಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ಇಲ್ಲದ ಕಾರಣ ಗಡಿಯಲ್ಲೇ ಅವರನ್ನ ನಿಲ್ಲಿಸಲಾಗುತ್ತಿದೆ. ಸದ್ಯ ಎಸ್‍ಪಿ ವರ್ತಿಕಾ ಕಟಿಯಾರ್ ಈ ಜನರಿಗೆ ಒಂದು ಕಡೆ ಉಳಿಯಲು ಜಿಲ್ಲಾಡಳಿತದ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

  • ಅರ್ಚಕರಿಗೆ ಲಾಠಿ ಏಟು – ಪೇದೆಯನ್ನು ಅಮಾನತುಗೊಳಿಸಿದ ಎಸ್‍ಪಿ

    ಅರ್ಚಕರಿಗೆ ಲಾಠಿ ಏಟು – ಪೇದೆಯನ್ನು ಅಮಾನತುಗೊಳಿಸಿದ ಎಸ್‍ಪಿ

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದ ಅರ್ಚಕರಿಗೆ ಲಾಠಿ ಏಟು ಕೊಟ್ಟ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‍ಪಿ ಆದೇಶ ಹೊರಡಿಸಿದ್ದಾರೆ.

    ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಶಂಕರ್ ಸಂಸಿಯನ್ನು ಎಸ್‍ಪಿ ಎಂ. ಲಕ್ಷ್ಮೀ ಪ್ರಸಾದ್ ಅವರು ಅಮಾನತುಗೊಳಿಸಿದ್ದಾರೆ. ಮೇಲ್ನೋಟಕ್ಕೆ ದುರ್ವರ್ತನೆ ಕಂಡುಬಂದ ಹಿನ್ನೆಲೆಯಲ್ಲಿ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆದಿ ಸುಬ್ರಹ್ಮಣ್ಯದ ಅರ್ಚಕ ಶ್ರೀನಿವಾಸ್ ಮೇಲೆ ಶಂಕರ್ ಲಾಠಿ ಬೀಸಿದ್ದರು. ಸಂಜೆಯ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿವುದಾಗಿ ದೇವಾಲದ ಕೀಯನ್ನು ತೋರಿಸಿದರೂ ಥಳಿಸಿದ್ದರು. ಇದರಿಂದ ಕೋಪಗೊಂಡ ಅರ್ಚಕ ವರ್ಗ ಎಸ್‍ಪಿ ಸಹಿತ ಐಜಿಪಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೇದೆ ಶಂಕರ್ ಅವರನ್ನು ಅಮಾನತುಗೊಳಿಸಲಾಗಿದೆ.

  • ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಹಾಸನ: ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಹಾಸನದ ಎಸ್‍ಪಿ ಶ್ರೀನಿವಾಸ್ ಗೌಡ ಜನರ ಮನ ಗೆದ್ದಿದ್ದಾರೆ.

    ಲಾಕ್‍ಡೌನ್ ಉಲ್ಲಂಘಿಸಿ ನಗರದ ಮೈದಾನದಲ್ಲಿ ಗುಂಪು ಗುಂಪಾಗಿ ಜನರು ವಾಕ್ ಮಾಡುತ್ತಿದ್ದಾರೆ. ಎಷ್ಟು ತಿಳಿ ಹೇಳಿದರೂ ಹಾಸನದ ಜನ ಬೆಳಗ್ಗೆ ಮೈದಾನಕ್ಕೆ ತೆರಳಿ ವಾಕ್ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಈ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಸ್ವತಃ ಕಾರ್ಯಾಚರಣೆಗಿಳಿದ್ದಾರೆ.

    ಶ್ರೀನಿವಾಸ್ ಗೌಡ ಅವರು ಇಂದು ತಮ್ಮ ತಂಡದೊಂದಿಗೆ ಮೈದಾನಕ್ಕೆ ತೆರಳಿ ವಾಕ್ ಮಾಡುತ್ತಿದ್ದವರನ್ನು ಪೊಲೀಸ್ ವಾಹನದಲ್ಲಿ ಡಿಆರ್ ಮೈದಾನಕ್ಕೆ ಕರೆ ತಂದಿದ್ದರು. ಅಲ್ಲಿಗೆ ಒಬ್ಬರು ಯೋಗ ಗುರುಗಳನ್ನು ಕರೆಸಿ ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮ ಮತ್ತು ಯೋಗಾಸನಗಳ ಬಗ್ಗೆ ತಿಳಿಸಿಕೊಟಿದ್ದಾರೆ.

    ಎಸ್‍ಪಿಯವರೇ ಸ್ವತಃ ಜನರೊಂದಿಗೆ ಕುಳಿತು ಯೋಗ ಮಾಡಿದ್ದಲ್ಲದೆ, ಇನ್ನು ಮುಂದೆ ಮನೆಯಲ್ಲೇ ಇದ್ದು ವ್ಯಾಯಾಮ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಅಂದ್ರೆ ಭಯದಿಂದ ನೋಡುತ್ತಿದ್ದ ಜನ, ಹಾಸನ ಎಸ್‍ಪಿಯವರ ಸರಳ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಲಾಕ್‍ಡೌನ್ ಮುಗಿಯವವರೆಗೆ ಮಾರ್ಕೆಟ್‍ಗೆ ಯಾರೂ ಬರಬೇಡಿ: ಗದಗ ಎಸ್.ಪಿ ಯತೀಶ್

    ಲಾಕ್‍ಡೌನ್ ಮುಗಿಯವವರೆಗೆ ಮಾರ್ಕೆಟ್‍ಗೆ ಯಾರೂ ಬರಬೇಡಿ: ಗದಗ ಎಸ್.ಪಿ ಯತೀಶ್

    – ಮನೆ ಬಾಗಿಲಿಗೆ ತರಕಾರಿ, ಹೂ, ಹಣ್ಣು ಬರುತ್ತೆ

    ಗದಗ: ಲಾಕ್‍ಡೌನ್ ಮುಗಿಯುವರೆಗೆ ತರಕಾರಿ ಮಾರ್ಕೆಟ್ ಬಂದ್ ಮಾಡಲಾಗಿದ್ದು, ವ್ಯಾಪಾರಸ್ಥರು ತಳ್ಳುವ ಗಾಡಿ ಮೂಲಕ ನಗರದ ವಾರ್ಡ್‍ಗಳಿಗೆ ಸಂಚರಿಸಿ ಮಾರಾಟ ಮಾಡಬೇಕು ಎಂದು ಎಸ್.ಪಿ ಯತೀಶ್ ತಿಳಿಸಿದರು.

    ನಗರಸಭೆ ಆವರಣದಲ್ಲಿ ತರಕಾರಿ ಹಾಗೂ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿದರು. ಈ ಸಭೆನಲ್ಲಿ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಅಂತರ ಕಾಯ್ದುಕೊಂಡಿದ್ದರು. ಪ್ರತಿ ವಾರ್ಡ್‍ಗೆ ಎಂಟು ಜನ ತರಕಾರಿ ಮಾರಾಟಗಾರರನ್ನು ನೇಮಕ ಮಾಡಲಾಗುತ್ತದೆ. ಯಾರ್ಯಾರು ಯಾವ ಯಾವ ಏರಿಯಾ ಎಂಬುದನ್ನು ತರಕಾರಿ ಹಾಗೂ ಬೀದಿಬದಿ ವ್ಯಾಪಾರಿಗಳು ನಿರ್ಧರಿಸಬೇಕು. ಅಂತಹ ಮಾರಾಟಗಾರರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಗುರುತಿನ ಪಾಸ್ ನೀಡಲಾಗುತ್ತೆ. ಕೊಡುವ ತೆಗೆದುಕೊಳ್ಳುವ ವ್ಯವಹಾರದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಜನರು ಅವರ ಮನೆ ಬಳಿ ತರಕಾರಿ ಖರೀದಿಸಿದರೆ ಜನಸಂದಣಿಯೂ ಆಗುವುದಿಲ್ಲ. ಸೋಂಕು ಹರಡುವ ಅವಕಾಶವನ್ನು ತಡೆಯಬಹುದು ಎಂದರು.

    ನಗರದಲ್ಲಿ ಎರಡು ದಿನಗಳಿಂದ ತರಕಾರಿ, ಹೂ, ಹಣ್ಣಿನ ಮಾರುಕಟ್ಟೆಯಲ್ಲಿ ಜನ ಜಂಗುಳಿ ಹೆಚ್ಚಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ಲಾಠಿ ರುಚಿ ತೋರಿಸುವ ಮೂಲಕ ಜನರನ್ನು, ವ್ಯಾಪಾರಸ್ಥರನ್ನು ಚದುರಿಸಬೇಕಾಗಿದೆ ಎಂದು ಎಸ್.ಪಿ ಹೇಳಿದರು.

    ಈ ಸಭೆನಲ್ಲಿ ನಗರಸಭೆ ಆಯುಕ್ತ ಮನ್ಸೂರ್ ಅಲಿ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಡಿವೈಎಸ್‍ಪಿ ಪ್ರಹ್ಲಾದ್, ಸಿಪಿಐ ದೇಸಾಯಿ, ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರು, ತರಕಾರಿ ಮತ್ತು ಬೀದಿಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

  • ‘ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಣೆಯಾಗಿದ್ದಾರೆ’ – 10 ದಿನಗಳಲ್ಲಿ ಹುಡುಕಿಕೊಡಿ ಎಂದ ಜೆಡಿಎಸ್ ಕಾರ್ಯಕರ್ತರು

    ‘ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಕಾಣೆಯಾಗಿದ್ದಾರೆ’ – 10 ದಿನಗಳಲ್ಲಿ ಹುಡುಕಿಕೊಡಿ ಎಂದ ಜೆಡಿಎಸ್ ಕಾರ್ಯಕರ್ತರು

    – ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ

    ಮಡಿಕೇರಿ: ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಬಾರದಿರುವ ಉಸ್ತುವಾರಿ ಸಚಿವರು ಮತ್ತು ಕೊಡಗು ಸಂಸದರನ್ನು ಹುಡುಕಿಕೊಡುವಂತೆ ಕೊಡಗು ಜೆಡಿಎಸ್ ಜಿಲ್ಲಾ ಘಟಕದ ಮುಖಂಡರು ಎಸ್‍ಪಿಗೆ ದೂರು ನೀಡಿದ್ದಾರೆ.

    ಉಸ್ತುವಾರಿ ಸಚಿವ ವಿ. ಸೋಮಣ್ಣ ಮತ್ತು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಳೆದ ಎರಡು ತಿಂಗಳಿಂದ ಜಿಲ್ಲೆಗೆ ಆಗಮಿಸಿಲ್ಲ. ರಾಜ್ಯದಲ್ಲಿ ಕೊರೊನಾ ಆತಂಕ ತೀವ್ರವಾಗಿದ್ದು, ಜಿಲ್ಲೆಯಲ್ಲಿಯೂ ಈಗಾಗಲೇ ನಾಲ್ಕು ಸೋಂಕಿತ ಪ್ರಕರಣಗಳು ದಾಖಲಾಗಿವೆ. ಮತ್ತೊಂದೆಡೆ ನೆರೆಯ ಕೇರಳದಲ್ಲಿ ಮತ್ತು ಪಕ್ಕದ ಜಿಲ್ಲೆ ಮೈಸೂರಿನಲ್ಲಿ ಹಕ್ಕಿ ಜ್ವರ ಕೂಡ ತೀವ್ರಗೊಂಡಿದೆ. ಇಷ್ಟೆಲ್ಲಾ ಆದರೂ ಉಸ್ತುವಾರಿ ಸಚಿವರು ಮತ್ತು ಸಂಸದರು ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕು ಎದುರಿಸುವುದಕ್ಕೆ ಅಗತ್ಯ ಔಷಧಿಗಳಿವೆಯಾ? ಅಥವಾ ಸೌಲಭ್ಯಗಳಿವೆಯಾ ಎಂದು ಪರಿಶೀಲನೆಯನ್ನೂ ಮಾಡಿಲ್ಲ. ಈ ಇಬ್ಬರನ್ನು ಯಾರಾದರೂ ಅಪಹರಣ ಮಾಡಿದ್ದಾರಾ? ಇಲ್ಲಾ ಕೊರೊನಾ ರೋಗವೇನಾದರೂ ಬಂದಿದೆಯಾ? ಇವೆಲ್ಲವನ್ನೂ ಪರಿಶೀಲಿಸಿ ಹುಡುಕಿಕೊಡಬೇಕು ಎಂದು ಎಸ್‍ಪಿಗೆ ಜೆಡಿಎಸ್ ಕಾರ್ಯಕರ್ತರು ದೂರು ನೀಡಿದ್ದಾರೆ. 10 ದಿನಗಳಲ್ಲಿ ಉಸ್ತವಾರಿ ಸಚಿವ ಹಾಗೂ ಸಂಸದರನ್ನು ಹುಡುಕಿಕೊಡಬೇಕು ಇಲ್ಲದಿದ್ದರೆ ರಾಜ್ಯ ಉಚ್ಛನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಎಸ್‍ಪಿ ಸುಮನ್ ಡಿ.ಪಿ ಅವರಿಗೆ ಕೊಟ್ಟ ದೂರಿನಲ್ಲಿ ಉಲ್ಲೇಖಿಸಲಾಗಿದೆ.

  • ಬಿಗಿ ಭದ್ರೆತೆ ನಡುವೆಯೂ ಬಿತ್ತು ಕೋಣ ಬಲಿ

    ಬಿಗಿ ಭದ್ರೆತೆ ನಡುವೆಯೂ ಬಿತ್ತು ಕೋಣ ಬಲಿ

    ದಾವಣಗೆರೆ: ನಗರ ದೇವತೆ ದುಗ್ಗಮ್ಮನ ಜಾತ್ರೆ ಎರಡು ವರ್ಷಗಳಿಗೊಮ್ಮೆ ನಡೆಯಲಿದ್ದು, ಇಲ್ಲಿ ದೇವತೆಗೆ ಕೋಣ ಬಲಿ ನೀಡುವುದೇ ಈ ಜಾತ್ರೆಯ ವಿಶೇಷ. ಆದರೆ ಜಿಲ್ಲಾಡಳಿತ ಪ್ರಾಣಿ ಬಲಿಯನ್ನು ಸಂಪೂರ್ಣ ನಿಷೇಧ ಮಾಡಿದೆ. ಅಲ್ಲದೆ ದುಗ್ಗಮ್ಮ ದೇವಸ್ಥಾನ ಸುತ್ತ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡು ಪ್ರಾಣಿ ಬಲಿ ನಿಷೇಧದ ನಡುವೆಯೂ ದಾವಣಗೆರೆ ನಗರ ದುಗ್ಗಮ್ಮನಿಗೆ ಕೋಣ ಬಲಿ ನೀಡಲಾಗಿದೆ.

    ನಗರದ ದುಗ್ಗಮ್ಮ ದೇವಸ್ಥಾನ ಸಮೀಪದಲ್ಲೇ ಇರುವ ಸೀಮೆಎಣ್ಣೆ ಬಂಕ್ ಬಳಿಯಲ್ಲಿ ಕೋಣವನ್ನು ಬಲಿ ನೀಡಲಾಗಿದೆ ಎನ್ನಲಾಗಿದೆ. ಕೋಣ ಬಲಿ ನೀಡದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿತ್ತು. ಡಿಸಿ ಮಹಾಂತೇಶ್ ಬೀಳಗಿ, ಎಸ್‍ಪಿ ಹನುಮಂತರಾಯ ರಾತ್ರಿಯಲ್ಲೇ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಅದೇಗೋ ಬೇರೊಂದು ಸ್ಥಳದಲ್ಲಿ ಕೋಣ ಬಲಿ ನೀಡಲಾಗಿದೆ.

    ಜಾತ್ರೆಯಲ್ಲಿ ಕೋಣ ಬಲಿ ನೀಡಿದರೆ ಮಾತ್ರ ತಾಯಿ ಸಂತುಷ್ಟಿಯಾಗುತ್ತಾಳೆ ಎನ್ನುವ ನಂಬಿಕೆಯೊಂದಿಗೆ ದೇವಸ್ಥಾನ ಪ್ರದೇಶ ಬಿಟ್ಟು ಇನ್ನೊಂದು ಪ್ರದೇಶದಲ್ಲಿ ಊಧೋ ಊಧೋ ಎಂದು ಭಕ್ತರು ಕೋಣವನ್ನು ಬಲಿ ಕೊಟ್ಟಿದ್ದಾರೆ ಎನ್ನಲಾಗಿದ್ದು ಬಳಿಕ ಕೋಣದ ರಕ್ತದಲ್ಲಿ ಚರಗ ಹಾಕಿದ್ದಾರೆ. ಅಲ್ಲದೆ ರಾತ್ರಿ ದುಗ್ಗಮ್ಮ ದೇವಿಗೆ ಬಿಟ್ಟಂತಹ ಕೋಣದಿಂದ ಸಿರಂಜ್ ಮೂಲಕ ವೈದ್ಯರು ರಕ್ತವನ್ನು ತೆಗೆದು ದುಗ್ಗಮ್ಮ ದೇವಿಗೆ ಅರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ಕೋಣವನ್ನು ಬಲಿ ನೀಡುತ್ತಾರೆ ಎನ್ನುವ ಮಾಹಿತಿಯಿಂದ ಇಡೀ ರಾತ್ರಿ ದೇವಸ್ಥಾನ ಆವರಣದಲ್ಲಿ ಜಿಲ್ಲಾಧಿಕಾರಿ, ಎಸ್‍ಪಿ ಸೇರಿದಂತೆ ಹಲವು ಅಧಿಕಾರಿಗಳು ಜಾಗರಣೆ ಮಾಡಿದರು. ಆದರೂ ಕೂಡ ದೇವಸ್ಥಾನದಿಂದ ದೂರದಲ್ಲಿ ದೇವರ ಕೋಣವನ್ನು ಬಲಿಕೊಟ್ಟು ದೇವತೆಗೆ ಭಕ್ತಿಯಿಂದ ಕೋಣದ ತಲೆ ಮೇಲೆ ದೀಪವಿಟ್ಟು ನೈವೇದ್ಯ ಅರ್ಪಿಸಿದರು.

  • ಅರೆ ಬೆತ್ತಲೆಯಾಗಿ ಬೇವಿನ ಸೀರೆ ಹರಕೆ – ಕೋಣದ ಬಲಿ ತಡೆಯಲು ಅಧಿಕಾರಿಗಳ ಜಾಗರಣೆ

    ಅರೆ ಬೆತ್ತಲೆಯಾಗಿ ಬೇವಿನ ಸೀರೆ ಹರಕೆ – ಕೋಣದ ಬಲಿ ತಡೆಯಲು ಅಧಿಕಾರಿಗಳ ಜಾಗರಣೆ

    ದಾವಣಗೆರೆ: ಎರಡು ವರ್ಷಗಳಿಗೊಮ್ಮೆ ನಡೆಯುವ ದಾವಣಗೆರೆ ನಗರ ದೇವತೆ ದುಗ್ಗಮ್ಮನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದ್ದು, ಭಕ್ತರು ದೇವಿಯ ಕೃಪೆಗೆ ಪಾತ್ರರಾಗಲು ಹರಕೆ ತೀರುಸುತ್ತಿದ್ದಾರೆ. ಈ ನಡುವೆ ಮಕ್ಕಳು ಹಾಗೂ ಮಹಿಳೆಯರಿಗೆ ಅರೆ ಬೆತ್ತಲೆಯಾಗಿ ಬೇವಿನ ಸೀರೆ ಉಟ್ಟು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಿದ್ದರು. ಈ ಆಚರಣೆಯನ್ನು ಕಂಡು ಡಿಸಿ ಮಹಾಂತೇಶ್ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ಇದನ್ನು ಪಾಲಿಸುತ್ತಿದ್ದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ದಾವಣಗೆರೆ ನಗರದ ದೇವತೆ ದುಗ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಮಕ್ಕಳನ್ನು ಬೆತ್ತಲೆ ಮಾಡಿ ನೀರು ಹಾಕಿ ಬೇವಿನ ಸೀರೆ ಉಡಿಸುತ್ತಿದ್ದ ಪೋಷಕರಿಗೆ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಲ್ಲದೆ, ಈ ರೀತಿ ಮೂಡ ನಂಬಿಕೆಯಿಂದ ಮಕ್ಕಳಿಗೆ ಹಿಂಸೆ ನೀಡಬಾರದು ಎಂದು ತಿಳಿಹೇಳಿದ್ದಾರೆ. ಅಲ್ಲದೆ ಎಸ್‍ಪಿ ಹನುಮಂತರಾಯ ಕರ್ತವ್ಯದಲ್ಲಿ ಇದ್ದ ಪೋಲೀಸ್ ಸಿಬ್ಬಂದಿಗೆ ಕೂಡ ತರಾಟೆಗೆ ತೆಗೆದುಕೊಂಡರು.

    ಇತ್ತ ದೇವರಿಗೆ ಕೋಣದ ಬಲಿ ತಡೆಯಲು ಡಿಸಿ, ಎಸ್‍ಪಿ ಸೇರಿದಂತೆ ಅಧಿಕಾರಿಗಳು ದೇವಸ್ಥಾನದ ಎದುರು ಇಡೀ ರಾತ್ರಿ ಜಾಗರಣೆ ಮಾಡಿದರು. ಸರ್ಕಾರದ ಆದೇಶದಂತೆ ದೇವಿಗೆ ಬಿಟ್ಟ ಕೋಣದ ರಕ್ತ ಸಿರಿಂಜ್‍ನಿಂದ ತೆಗೆದು ದೇವಿಗೆ ಅರ್ಪಣೆ ಮಾಡಿದ್ದಲ್ಲದೆ, ಧಾನ್ಯದಲ್ಲಿ ಬೆರಸಿ ಇಡೀ ನಗರಕ್ಕೆ ಚರಕ ಚಲ್ಲಿದರು. ಅಲ್ಲದೆ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಯುಕ್ತ ದೇವಿಗೆ ಕೋಣ ಬಲಿ ಕೊಡುವುದು ಇಲ್ಲಿಯ ಸಂಪ್ರದಾಯವಾಗಿದ್ದು, ಈ ಬಾರಿ ಸಂಪೂರ್ಣ ನಿಷೇಧ ಮಾಡಿದ್ದಲ್ಲದೆ ದೇವಸ್ಥಾನ ಧರ್ಮದರ್ಶಿ ಸಮಿತಿಯ ಸಹಕಾರದೊಂದಿಗೆ ಜಿಲ್ಲಾಡಳಿತ ಕೋಣ ಬಲಿ ತಡೆಯೊಡ್ಡಿದೆ.

    ದೇವಸ್ಥಾನ ಸುತ್ತಲು 100 ಮೀಟರ್ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿ ನಡೆಯದಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಮುತ್ತ 1 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜಿಸಲಾಗಿದೆ. ಅಲ್ಲದೆ ರಾತ್ರಿಯಿಡಿ ಭಕ್ತರು ದೀಡ್ ನಮಸ್ಕಾರ, ಉರುಳುಸೇವೆ ಮಾಡಿ ದೇವಿಗೆ ಹರಕೆ ತೀರಿಸಿದರು.

  • ಸ್ಥಳ ಪರಿಶೀಲನೆಗೆ ಸೈಕಲಿನಲ್ಲಿ ಆಗಮಿಸಿ ಗಮನ ಸೆಳೆದ ಚಿತ್ರದುರ್ಗ ಎಸ್‍ಪಿ

    ಸ್ಥಳ ಪರಿಶೀಲನೆಗೆ ಸೈಕಲಿನಲ್ಲಿ ಆಗಮಿಸಿ ಗಮನ ಸೆಳೆದ ಚಿತ್ರದುರ್ಗ ಎಸ್‍ಪಿ

    ಚಿತ್ರದುರ್ಗ: ಸಾಮಾನ್ಯವಾಗಿ ಪೊಲೀಸರು ಎಂದರೆ ಖಾಕಿ ಧರಿಸಿ ಲಾಠಿ ಹಿಡಿದು ಜೀಪಿನಲ್ಲಿ ಬೀಟ್ ಹೋಗೋದು ಸಹಜ. ಆದರೆ ಕೋಟೆನಾಡು ಚಿತ್ರದುರ್ಗದ ಲೇಡಿ ಸಿಂಗಂ ಎನಿಸಿರುವ ಎಸ್‍ಪಿ ರಾಧಿಕಾ ಅವರು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯ ಸಿದ್ಧತೆ ವೀಕ್ಷಿಸಲು ಸಿಬ್ಬಂದಿ ಜೊತೆ ಸೈಕಲಿನಲ್ಲಿ ಬೀಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಮಧ್ಯ ಕರ್ನಾಟಕದ ಐತಿಹಾಸಿಕ ಹಿನ್ನೆಲೆಯ ಅತಿ ದೊಡ್ಡ ಜಾತ್ರೆ ಎನಿಸಿರುವ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಹೀಗಾಗಿ ಪ್ರತಿ ವರ್ಷದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳ ಪರಿಶೀಲನೆಗಾಗಿ ಎಸ್‍ಪಿ ರಾಧಿಕಾ ಅವರು ಸೈಕಲಿನಲ್ಲಿ ಆಗಮಿಸಿದರು. ಚಿತ್ರದುರ್ಗದಿಂದ ಮನಮಯ್ಯನಹಟ್ಟಿ ಗೇಟ್‍ವರೆಗೆ ಕಾರಿನಲ್ಲಿ ಬಂದ ಅವರು, ನಾಯಕನಟ್ಟಿಯವರೆಗೆ ಸೈಕ್ಲಿಂಗ್ ಕ್ರೀಡಾಪಟುವಂತೆ ಆಗಮಿಸಿದರು.

    ಸೈಕಲ್ ಸವಾರಿ ಬಗ್ಗೆ ಸಿಬ್ಬಂದಿಯನ್ನು ಕೇಳಿದಾಗ, ಜಾತ್ರೆ ನಡೆಯುವ ಪ್ರತಿಯೊಂದು ಸೊಂದಿಗೊಂದಿಗಳ ಸ್ಥಳಕ್ಕೂ ಕಾರಿನಲ್ಲಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಸೈಕಲಿನಲ್ಲಿ ಸ್ಥಳ ಪರಿಶೀಲನೆ ನಡೆಸುವ ತಂತ್ರ ಅನುಸರಿಸಿ ಎಂಬುದಾಗಿ ಎಸ್‍ಪಿ ರಾಧಿಕಾ ಅವರು ಸೂಚಿಸಿದ್ದರು. ಅಲ್ಲದೆ ಜಾತ್ರೆಯಲ್ಲಿ ಪಾರ್ಕಿಂಗ್, ಚೆಕ್ ಪೋಸ್ಟ್‍ಗಳು ಹಾಗೂ ಬಿಗಿ ಭದ್ರತೆ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಹೇಳಿದ್ದರು ಎಂದರು.

    ಪ್ರತಿ ವರ್ಷಕ್ಕಿಂತ ಈ ಬಾರಿ ಚೆಕ್ ಪೋಸ್ಟ್ ಗಳ ಸಂಖ್ಯೆ ಹೆಚ್ಚಿಸಿದ್ದು, ಈ ಬಾರಿ 24 ಚೆಕ್ ಪೋಸ್ಟ್ ಗಳು ಕಾರ್ಯ ನಿರ್ವಹಿಸಲಿವೆ. ಅಲ್ಲದೆ ಜಾತ್ರೆಯ ರಥೋತ್ಸವದ ವೇಳೆ ಅಡಚಣೆಯಾಗದಂತೆ ವಿಶೇಷ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವಂತೆ ಸಹ ರಾಧಿಕಾ ಅವರು ತಾಕೀತು ಮಾಡುವ ಮೂಲಕ ಭಕ್ತರ ಗಮನ ಸೆಳೆದಿದ್ದಾರೆ. ಬೆಳಗ್ಗೆ ಎಸ್‍ಪಿ ರಾಧಿಕಾ ಅವರಿಗೆ ಎಎಸ್‍ಪಿ ನಂದಗಾವಿ, ಡಿವೈಎಸ್‍ಪಿ ರೋಷನ್ ಬೇಗ್, ಪಿಎಸ್‍ಐ ರಘುನಾಥ್ ಸೇರಿದಂತೆ ಸಿಬ್ಬಂದಿ ಸಾಥ್ ನೀಡಿದರು.

  • ಜನಸ್ನೇಹಿ ಕಾರ್ಯಕ್ರಮ ರೂಪಿಸಿದ ಹಾಸನ ಪೊಲೀಸ್ ಇಲಾಖೆ

    ಜನಸ್ನೇಹಿ ಕಾರ್ಯಕ್ರಮ ರೂಪಿಸಿದ ಹಾಸನ ಪೊಲೀಸ್ ಇಲಾಖೆ

    ಹಾಸನ: ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ಹಾಸನ ಎಸ್‍ಪಿ ಜಿಲ್ಲೆಯಲ್ಲಿ ವಿನೂತನ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಪ್ರತಿ ಎರಡು ವಾರಗಳಿಗೊಮ್ಮೆ ಶುಕ್ರವಾರದಂದು ಹಾಸನ ಎಸ್‍ಪಿ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಹಾಸನ ಜಿಲ್ಲೆಯ ಯಾರೇ ಆದರೂ ತಮಗಾಗುತ್ತಿರುವ ಅಥವಾ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳನ್ನು ಫೋನ್ ಮೂಲಕ ಎಸ್‍ಪಿಯವರಿಗೆ ತಿಳಿಸಬಹುದಾಗಿದೆ. ಸ್ವತಃ ಎಸ್‍ಪಿಯವರೇ ಖುದ್ದು ಫೋನ್ ರಿಸೀವ್ ಮಾಡಿ ಮಾತನಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸಲಿದ್ದಾರೆ.

    ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ನಿರಂತರವಾಗಿ ನಡೆಯಲಿದೆ. ಪ್ರತಿ ಎರಡು ವಾರಗಳಿಗೆ ಒಮ್ಮೆ ನಡೆಯುವ ಫೋನ್ ಇನ್ ಕಾರ್ಯಕ್ರಮದಲ್ಲಿ, ಒಮ್ಮೆ ತಾವು ಹೇಳಿಕೊಂಡ ಸಮಸ್ಯೆ ಬಗೆಹರಿಯದಿದ್ರೆ, ಮತ್ತೆ ಕರೆ ಮಾಡುವ ಮೂಲಕ ಎಸ್‍ಪಿಯವರ ಬಳಿ ತಮ್ಮ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಾರ್ವಜನಿಕರು ನೆನಪಿಸಬಹುದಾಗಿದೆ.

    ಹಾಸನ ಎಸ್‍ಪಿಯವರ ಫೋನ್ ಇನ್ ಕಾರ್ಯಕ್ರಮದ ಬಗ್ಗೆ ಜನ ಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದಾಗ ಅಲ್ಲಿ ನಮಗೆ ಸರಿಯಾದ ಸ್ಪಂದನೆ ಸಿಗದಿರಬಹುದು ಅಥವಾ ಕೆಲವೊಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಭಯಪಡಬಹುದು. ಇಂತಹ ಸಮಯದಲ್ಲಿ ನಾವೇ ನೇರವಾಗಿ ಎಸ್‍ಪಿಯವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಬಹುದಾಗಿದೆ. ಆಗ ಎಸ್‍ಪಿಯವರೇ ಖುದ್ದು ನಮ್ಮ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಮಸ್ಯೆ ಬಗೆಹರಿಸಲು ಸೂಚಿಸುತ್ತಾರೆ. ಇದರಿಂದ ಪೊಲೀಸ್ ಇಲಾಖೆಯ ಬಗ್ಗೆ ಜನ ಸಾಮಾನ್ಯರಿಗೆ ಗೌರವ ಹೆಚ್ಚಾಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.