Tag: sp

  • ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ ಪಡೆದು ಪ್ಲಾಟ್‍ಫಾರ್ಮ್‍ನಲ್ಲೇ ಹೆರಿಗೆ ಮಾಡಿಸಿದ ಎಸ್‍ಐ

    ವಿಡಿಯೋ ಕಾಲ್ ಮೂಲಕ ವೈದ್ಯರ ಸಲಹೆ ಪಡೆದು ಪ್ಲಾಟ್‍ಫಾರ್ಮ್‍ನಲ್ಲೇ ಹೆರಿಗೆ ಮಾಡಿಸಿದ ಎಸ್‍ಐ

    ಲಕ್ನೋ: ಮಹಿಳಾ ಎಸ್‍ಪಿಯೊಬ್ಬರು ವಿಡಿಯೋ ಕಾಲ್‍ನಲ್ಲಿ ವೈದ್ಯರ ಸಲಹೆ ಪಡೆದು ರೈಲ್ವೆ ಪ್ಲಾಟ್‍ಫಾರ್ಮ್ ಮೇಲೆಯೇ ಮಹಿಳೆಗೆ ಹೆರಿಗೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಗ್ವಾಲಿಯರ್-ಗೋವಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಪೂಜಾ ಕುಮಾರಿಗೆ ಝಾನ್ಸಿ ರೈಲ್ವೇ ನಿಲ್ದಾಣಕ್ಕೆ ಆಗಮಿಸುವ ವೇಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಕೆಯ ಪತಿ ವೈದರ ನೆರವಿಗಾಗಿ ಫ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರ ಸಹಾಯಕೋರಿದ್ದರು.

    ರಾತ್ರಿಯ ಸಮಯವಾದ ಕಾರಣ ವೈದ್ಯರ ನೆರವು ಲಭಿಸುವುದು ಕಷ್ಟಸಾಧ್ಯವಾಗಿತ್ತು. ಅಲ್ಲದೇ ಆ ವೇಳೆಗೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾದ ಕಾರಣದಿಂದ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಎಸ್‍ಪಿ ರಾಜ್ ಕುಮಾರಿ ಗಜ್ಜಾರ್ ನೆರವಿಗೆ ಧವಿಸಿದ್ದರು. ತಮಗೆ ತಿಳಿದಿದ್ದ ವೈದ್ಯರಿಗೆ ವಿಡಿಯೋ ಕಾಲ್ ಮಾಡಿ ಮಾರ್ಗದರ್ಶನ ಪಡೆದು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

    ಹೆರಿಗೆ ಬಳಿಕ ಆಂಬುಲೆನ್ಸ್ ನೆರವಿನಿಂದ ತಾಯಿ-ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಘಟನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳಾ ಎಸ್‍ಐ ಕಾರ್ಯಕ್ಕೆ ಭಾರೀ ಪ್ರಶಂಸೆ ಲಭಿಸಿದೆ. ಇತ್ತ ದಂಪತಿಗಳು ಕೂಡ ಪೊಲೀಸರ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.

  • ಸರಿಯಾಗಿ ಕೆಲಸ ಮಾಡೋದಾದ್ರೆ ಮಾಡಿ, ಇಲ್ಲ ಹೊರಡಿ: ಎಸ್‍ಪಿ ವಿರುದ್ಧ ಈಶ್ವರಪ್ಪ ಗರಂ

    ಸರಿಯಾಗಿ ಕೆಲಸ ಮಾಡೋದಾದ್ರೆ ಮಾಡಿ, ಇಲ್ಲ ಹೊರಡಿ: ಎಸ್‍ಪಿ ವಿರುದ್ಧ ಈಶ್ವರಪ್ಪ ಗರಂ

    ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಪರಾಧ ತಡೆಗಟ್ಟುವಲ್ಲಿ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ಸರಿಯಾಗಿ ಕೆಲಸ ಮಾಡುವುದಾದರೆ ಮಾಡಿ, ಇಲ್ಲದಿದ್ದರೆ ಹೊರಡಿ. ಜಿಲ್ಲೆಗೆ ಬೇರೆಯವರನ್ನು ಹಾಕಿಸಿಕೊಳ್ಳುತ್ತೇವೆ ಎಂದು ಸಚಿವ ಈಶ್ವರಪ್ಪ ಎಸ್‍ಪಿ ವಿರುದ್ದ ಫುಲ್ ಗರಂ ಆಗಿದ್ದಾರೆ.

    ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯಲ್ಲಿ ಗುರುವಾರ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ವಾಹನಗಳಿಗೆ ಬೆಂಕಿ ಬಿದ್ದಿದ್ದ ಪ್ರದೇಶಕ್ಕೆ ಸಚಿವ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ಮಾತನಾಡಿದ ಸಚಿವರು, ಕಳೆದ ವಾರ ಸಹ ಶಿವಮೊಗ್ಗದ ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್ ಹಾಗೂ ಲಾರಿಗೆ ಬೆಂಕಿ ಹಚ್ಚಲಾಗಿದೆ. ಕೊಲೆ ಪ್ರಕರಣಗಳು ನಡೆಯುತ್ತಿವೆ. ಹೀಗಿದ್ದರೂ ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ, ಇಂತಹ ಪ್ರಕರಣ ತಡೆಗಟ್ಟುವಲ್ಲಿ ಮುಂದಾಗಿಲ್ಲ ಎಂಬ ಅಸಮಾಧಾನ ಹೊರಹಾಕಿದರು.

    ಇದೇ ವೇಳೆ ಸರಿಯಾಗಿ ಕೆಲಸ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ಹೊರಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಎಚ್ಚರಿಕೆ ಸಹ ನೀಡಿದ್ದಾರೆ.

  • ಕೊಡಗು ಜಿಲ್ಲೆಯ ಎಸ್‍ಪಿ.ಸುಮನ್ ಡಿ.ಪನ್ನೇಕರ್ ವರ್ಗಾವಣೆ

    ಕೊಡಗು ಜಿಲ್ಲೆಯ ಎಸ್‍ಪಿ.ಸುಮನ್ ಡಿ.ಪನ್ನೇಕರ್ ವರ್ಗಾವಣೆ

    ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಅವರನ್ನು ಬೆಂಗಳೂರಿನ ಡೆಪ್ಯುಟಿ ಕಮಿಷನ್ ಆಫ್ ಪೊಲೀಸ್ ಸಿಎಆರ್ (ಸಿಟಿ ಆರ್ಮಡ್ ರಿಸರ್ವ್) ಯುನಿಟ್ಸ್ ಹೆಡ್ ಕ್ವಾಟರ್ಸ್‍ಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ.

    ಜಿಲ್ಲೆಗೆ ನೂತನ ಎಸ್ಪಿಯಾಗಿ 2016ರ ಐಪಿಎಸ್ ಕೇಡರ್ ನ ಕ್ಷಮಾ ಮಿಶ್ರಾ ಅರವನ್ನು ನಿಯೋಜಿಸಿದೆ. ಕ್ಷಮಾ ಅವರು ಮೊದಲು ಬೆಂಗಳೂರಿನ ಸಿಐಡಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸದ್ಯವೇ ಕೊಡಗಿನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

    2018ರಲ್ಲಿ ಜಿಲ್ಲೆಯ ಆಗಮಿಸಿದ್ದ ಡಾ.ಸುಮನ್ ಡಿ.ಪನ್ನೇಕರ್ ಅವರು ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದರು. 2018 ಹಾಗೂ 19 ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರವಾಹದ ವೇಳೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದರು. ಅಲ್ಲದೆ ಟಿಂಬರ್ ಮಾಫಿಯಾ, ಗಾಂಜಾ ಹಾಗೆಯೇ ಮರಳು ದಂಧೆ ಕೋರರನ್ನು ಹೆಡೆಮುರಿ ಕಟ್ಟಿದ್ದರು.

    ಕೊರೊನಾ ಪರಿಸ್ಥಿತಿಯಲ್ಲಿ ನೆರೆಯ ಗಡಿ ಜಿಲ್ಲೆಗಳನ್ನು ಬಂದ್ ಮಾಡಿ ಸುಮನ್ ಡಿ.ಪನ್ನೇಕರ್ ಜಿಲ್ಲೆಯ ಜನತೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇತ್ತೀಚೆಗೆ 2020ರ ಮಳೆಗಾಲದ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಎನ್‍ಡಿಆರ್‍ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಜೊತೆಗೆ ಜಂಟಿ ಕಾರ್ಯಾಗಾರ ನಡೆಸಿದ್ದರು.

  • ಮಳೆಯಲ್ಲಿ ನೆನೆಯುತ್ತಾ ಮಹಿಳೆ ಧರಣಿ, ಪೊಲೀಸರ ಕರ್ತವ್ಯ ಲೋಪವಿಲ್ಲ: ಎಸ್ಪಿ ಸ್ಪಷ್ಟನೆ

    ಮಳೆಯಲ್ಲಿ ನೆನೆಯುತ್ತಾ ಮಹಿಳೆ ಧರಣಿ, ಪೊಲೀಸರ ಕರ್ತವ್ಯ ಲೋಪವಿಲ್ಲ: ಎಸ್ಪಿ ಸ್ಪಷ್ಟನೆ

    ಚಾಮರಾಜನಗರ: ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮುಂದೆ ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸಿರುವ ಬಗ್ಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಸುದ್ದಿಗೋಷ್ಠಿ ನಡೆಸಿ ಹಲವು ಸ್ಪಷ್ಪನೆ ಕೊಟ್ಟಿದ್ದಾರೆ.

    ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಜಮೀನನ್ನು ಪಕ್ಕದ ಜಮೀನು ಮಾಲೀಕ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸುಶೀಲ ಅವರು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಎದುರು ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸಿದ್ದರು.

    ಪ್ರತಿಭಟನೆಗೂ ಮುನ್ನ ಮೊದಲೇ ನಮ್ಮ ಪೊಲೀಸರು ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಯಾರ ಮಾತಿಗೂ ಒಪ್ಪದೆ ಮಳೆಯಲ್ಲೇ ಧರಣಿ ನಡೆಸಿದ್ದಾರೆ. ಆಕೆ ಹೇಳುವ ಜಮೀನು ಒತ್ತುವರಿಯಾಗಿಲ್ಲ, ಇದು ಸಂಪೂರ್ಣ ಸಿವಿಲ್ ವ್ಯಾಜ್ಯವಾಗಿದ್ದು ಜಿಲ್ಲಾಧಿಕಾರಿಗಳು ಈಗಾಗಲೇ ಈ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಆದರೂ ಆಕೆ ಸರ್ವೆ ನಂಬರ್ 1/134 ರಲ್ಲಿ ಇರುವ ಜಮೀನು ತನ್ನದು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.

    ಕಾನೂನು ಪ್ರಕಾರ ಈ ಜಮೀನು ಬಿಡಿಸಿಕೊಡಲು ಸಾಧ್ಯವಿಲ್ಲ. ಆದರೂ ಆಕೆ ಈ ಜಮೀನಿನಲ್ಲಿ ಉಳುಮೆ ಮಾಡಲು ರಕ್ಷಣೆ ಬೇಕು ಎಂದು ಠಾಣೆಗೆ ಬಂದು ಮಳೆಯಲ್ಲೇ ನೆನೆಯುತ್ತಾ ಧರಣಿ ನಡೆಸಿದ್ದಾರೆ. ಧರಣಿ ಪ್ರಕರಣದ ಬಗ್ಗೆ ವರದಿ ತರಿಸಿಕೊಂಡು ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ನಿರ್ಧಾಕ್ಷಿಣ್ಯ ಕ್ರಮ ವಹಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ತಿಳಿಸಿದ್ದಾರೆ.

  • ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 50 ಸಾವಿರ ರೂ. ನೀಡಿದ ಬೆಳಗಾವಿ ಎಸ್‍ಪಿ

    ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 50 ಸಾವಿರ ರೂ. ನೀಡಿದ ಬೆಳಗಾವಿ ಎಸ್‍ಪಿ

    ಚಿಕ್ಕೋಡಿ: ಸಾಲ ಬಾದೆ ತಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಬೆಳಗಾವಿ ಎಸ್‍ಪಿ ಹಣ ಸಹಾಯ ಮಾಡಿದ್ದಾರೆ.

    ಒಂದು ತಿಂಗಳ ಹಿಂದೆ ತಾನು ಕೊರೆಸಿದ ಕೊಳವೆ ಬಾವಿಯಲ್ಲಿ ನೀರು ಬಾರದ ಕಾರಣ ಸಾಲದ ಸುಳಿಗೆ ಸಿಲುಕಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಕುಟುಂಬದ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಂಡು ಅವರ ಕುಟುಂಬದ ಆಸರೆಗಾಗಿ ಹಾಗೂ ಇಬ್ಬರ ಮಕ್ಕಳ ಶಿಕ್ಷಣಕ್ಕಾಗಿ ಅನಕೂಲವಾಗಲು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ 50 ಸಾವಿರ ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಲ್ತಾನಪೂರ ಗ್ರಾಮದ ರೈತ ಲಕ್ಕಪ್ಪ ಸಂಗಪ್ಪ ದೊಡ್ಡಮನಿ ಅವರು ತಿಂಗಳ ಹಿಂದೆ ತಾನು ಕೊರೆಯಿಸಿದ ಕೊಳವೆ ಬಾವಿಯಲ್ಲಿ ನೀರು ಬಾರದೆಯಿದ್ದಾಗ ಸಾಲದ ಸುಳಿಯಲ್ಲಿ ಸಿಲುಕಿ ಮನನೊಂದು ಅದೇ ಕೊಳವೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಡೆದ ಕೆಲ ಗಂಟೆಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು.

    ಮೃತ ರೈತನ ಕುಟುಂಬದ ಸ್ಥಿತಿ ಚಿಂತಾಜನಕವಾಗಿರುವುದನ್ನು ಕಣ್ಣಾರೆ ಕಂಡು 50 ಸಾವಿರ ರೂಪಾಯಿಯನ್ನು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ವೈಯಕ್ತಿವಾಗಿ ನೀಡಿದ್ದಾರೆ. ನಿಂಬರಗಿ ಅವರ ಪರವಾಗಿ ರಾಯಬಾಗ ವೃತ್ತ ನಿರೀಕ್ಷಕ (ಸಿ.ಪಿ.ಐ) ಕೆ.ಎಸ್.ಹಟ್ಟಿ ಬಂದು ಮೃತ ರೈತನ ಪತ್ನಿ ಕಸ್ತೂರಿ ಲಕ್ಕಪ್ಪ ದೊಡ್ಡಮನಿ, ಪುತ್ರ ಸಂಗಮೇಶ ದೊಡ್ಡಮನಿ ಹಾಗೂ ಪುತ್ರಿ ಜಯಶ್ರೀ ದೊಡ್ಡಮನಿ ಅವರಿಗೆ ನಗದು ಹಣ ನೀಡಿದ್ದಾರೆ.

  • ತಬ್ಲಿಘಿ ಬಳಿಕ ಅಜ್ಮೀರ ನಂಜು – ಬೆಳಗಾವಿ ಎಸ್‍ಪಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ತಬ್ಲಿಘಿ ಬಳಿಕ ಅಜ್ಮೀರ ನಂಜು – ಬೆಳಗಾವಿ ಎಸ್‍ಪಿ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ/ಚಿಕ್ಕೋಡಿ: ಭಾನುವಾರ ಬೆಳಗಾವಿ ಜಿಲ್ಲೆಯ ಜನ ಸಂಡೇ ಮೂಡ್‍ನಲ್ಲಿರುವಾಗಲೇ ರಾಜ್ಯದ ಹೆಲ್ತ್ ಬುಲೆಟಿನ್ ದೊಡ್ಡ ಆಘಾತವನ್ನೇ ನೀಡಿದೆ. ಇಂದು ಬಿಡುಗಡೆಯಾದ ಮಿಡ್ ಡೇ ಹೆಲ್ತ್ ಬುಲೆಟಿನ್ ನಲ್ಲಿ ಅಜ್ಮೀರದಿಂದ ಬೆಳಗಾವಿಗೆ ಮರಳಿ ಬಂದ 22 ಜನರಿಗೆ ಕೊರೊನಾ ಸೋಂಕು ಇರುವದು ದೃಢವಾಗಿದ್ದು, ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

    ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿ 107ಕ್ಕೇ ಏರಿದೆ. ಕೊರೊನಾ ವೈರಸ್ ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹಾ ದಾಳಿ ನಡೆಸಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ 22 ಸೋಂಕಿತರು ಪತ್ತೆಯಾಗಿದ್ದು, ಇವರೆಲ್ಲರೂ ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ ಭಾಗದವರು ಎಂದು ತಿಳಿದು ಬಂದಿದೆ.

    ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರವಾಸಿ ಮಂದಿರಗಳಲ್ಲಿ ಅಡುಗೆ ಕೆಲಸವನ್ನು ಈ ಕುಟುಂಬಗಳು ಮಾಡುತ್ತಿದ್ದವು. ತಬ್ಲಿಘ್ ಜಮಾತ್ ನಂಟಿನ ಬಳಿಕ ಈಗ ಬೆಳಗಾವಿ ಜಿಲ್ಲೆಗೆ ಅಜ್ಮೀರ್ ರಿಟರ್ನ್ ನಂಟು ಶುರುವಾಗಿದೆ. ಅಜ್ಮೀರ್ ದರ್ಗಾ ದರ್ಶನಕ್ಕೆ ಹೋಗಿದ್ದ ಬೆಳಗಾವಿ ಜಿಲ್ಲೆಯ ಜನರಿಗೆ ಕೊರೊನಾ ಸೋಂಕು ಇರೋದು ದೃಢವಾಗಿದೆ. ಅಜ್ಮೀರ ಪ್ರವಾಸಕ್ಕೆ ತೆರಳಿ ವಾಪಸ್ ರಾಜ್ಯಕ್ಕೆ ಆಗಮಿಸಿದ್ದ 38 ಜನ ಪ್ರವಾಸಿಗರಲ್ಲಿ 31 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಬೆಳಗಾವಿಯ 22 ಜನ ಹಾಗೂ 8 ಬಾಗಲಕೋಟೆಯವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ.

    ಮಾರ್ಚ್ 17ರಂದು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ 7 ಕುಟುಂಬಗಳ 38 ಜನ ಸೇರಿ ಅಜ್ಮೀರಕ್ಕೆ ಬೆಳಗಾವಿಯಿಂದ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು. ಮೂರು ದಿನ ಅಜ್ಮೀರ ಪ್ರವಾಸದ ಬಳಿಕ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ 40ಕ್ಕೂ ಹೆಚ್ಚು ದಿನಗಳ ಕಾಲ ಅಜ್ಮೀರದಲ್ಲಿಯೇ ಉಳಿದಿದ್ದರು. ಬಳಿಕ ಅಜ್ಮೀರದಿಂದ ಅನುಮತಿ ಪಡೆದು ಮೇ. 3ರಂದು ಬೆಳಗಾವಿ ಗಡಿಯ ಕುಗನೊಳ್ಳಿಗೆ ಆಗಮಿಸಿದ್ದರು. ಬಳಿಕ ಜಿಲ್ಲಾಡಳಿತ ಅಜ್ಮೀರದಿಂದ ಬಂದ ಎಲ್ಲರನ್ನೂ ನಿಪ್ಪಾಣಿಯ ಗವಾನಿ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

    ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಹಾರಾಷ್ಟ್ರದ ಗಡಿಯಿಂದ ಈ ಕುಟುಂಬಗಳನ್ನು ಕರ್ನಾಟಕಕ್ಕೆ ಪ್ರವೇಶ ನೀಡಿ ಕ್ವಾರಂಟೈನ್ ಮಾಡಿಸಿದ್ದರು. ಹೀಗಾಗಿ ಎಸ್‍ಪಿ ಅವರ ಈ ನಿರ್ಧಾರದಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ನಿಪ್ಪಾಣಿಯ ಕುಗನೊಳ್ಳಿ ಚೆಕ್ ಪೋಸ್ಟ್ ಬಳಿ ಈ ಕುಟುಂಬಗಳು ಬಂದ ಸಂದರ್ಭದಲ್ಲಿ ಇವರ ಕೆಲ ಸಂಬಂಧಿಗಳು ಹಾಗೂ ಅವರ ಸ್ನೇಹಿತರು ಅವರನ್ನು ಭೇಟಿ ಆಗಿ ಊಟ ನೀಡಿ ಬಂದಿದ್ದಾರೆ. ಈಗ ಅವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ.

  • ಹೆಲ್ಮೆಟ್ ಹಾಕದ ಎಎಸ್‍ಐ- ಫೈನ್ ಹಾಕಲು ಸೂಚಿಸಿದ ಎಸ್‍ಪಿ

    ಹೆಲ್ಮೆಟ್ ಹಾಕದ ಎಎಸ್‍ಐ- ಫೈನ್ ಹಾಕಲು ಸೂಚಿಸಿದ ಎಸ್‍ಪಿ

    ಹಾಸನ: ಸಂಚಾರಿ ನಿಯಮ ಮಾಲಿಸುವ ಕುರಿತು ಅರಿವು ಮೂಡಿಸಬೇಕಾದ ಪೊಲೀಸರೇ ಹೆಲ್ಮೆಟ್ ಹಾಕದಿದ್ದರೆ ಹೇಗೆ ಅಲ್ಲವೆ, ಹೀಗಾಗಿ ಹಾಸನ ಎಸ್‍ಪಿ ಶ್ರೀನಿವಾಸ್‍ಗೌಡ ಅವರು ಎಎಸ್‍ಐಗೆ ತಕ್ಕ ಪಾಠ ಕಲಿಸಿದ್ದು, ಹೆಲ್ಮೆಟ್ ಧರಿಸದ್ದಕ್ಕೆ ಅವರಿಗೂ ಫೈನ್ ಹಾಕುವಂತೆ ಸೂಚಿಸಿದ್ದಾರೆ.

    ಹಾಸನದ ಸಂತೆ ಪೇಟೆ ಸರ್ಕಲ್ ಬಳಿ ಅನವಶ್ಯಕವಾಗಿ ಓಡಾಡುತ್ತಿದ್ದ ವಾಹನಗಳನ್ನು ಎಸ್‍ಪಿ ಶ್ರೀನಿವಾಸಗೌಡ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಎಎಸ್‍ಐ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಆಗಮಿಸುತ್ತಿದ್ದ ರು. ಇದನ್ನು ಗಮನಿಸಿದ ಎಸ್‍ಪಿ, ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಹೆಲ್ಮೆಟ್ ಹಾಕದ್ದನ್ನು ಕಂಡು ಇವರಿಗೆ ದಂಡ ವಿಧಿಸಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಮೂಲಕ ಪೊಲೀಸರು ಸಹ ಬೇಕಾಬಿಟ್ಟಿಯಾಗಿ ಓಡಾಡದೆ, ಸಂಚಾರಿ ನಿಯಮಗಳನ್ನು ಪಾಲಿಸಿ ಶಿಸ್ತು ಕಾಪಾಡಬೇಕು ಎಂದು ತಿಳಿಸಿದ್ದಾರೆ.

    ಮಂಗಳವಾರ ಈ ಘಟನೆ ನಡೆದಿದ್ದು, ನಮ್ಮ ಇಲಾಖೆಯವರು ಇತರರಿಗೆ ಮಾದರಿಯಾಗಬೇಕು. ಹೀಗಾಗಿ ಯಾರನ್ನೂ ಬಿಡುವುದಿಲ್ಲ. ಇವರಿಗೆ ಫೈನ್ ಹಾಕಿ ಎಂದು ಸೂಚಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

  • ಪೊಲೀಸರ ಕುಟುಂಬಗಳಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಎಸ್ಪಿ

    ಪೊಲೀಸರ ಕುಟುಂಬಗಳಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದ ಎಸ್ಪಿ

    ತುಮಕೂರು: ಕಿಲ್ಲರ್ ಕೊರೊನಾ ಕಾಲಿಟ್ಟಾಗಿನಿಂದ ಪೊಲೀಸರು ಕೂಡ ಕಾಲಿಗೆ ಚಕ್ರಕಟ್ಟಿಕೊಂಡು ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತಿದ್ದಾರೆ. ಆದರೆ ಅವರನ್ನೇ ನಂಬಿಕೊಂಡಿರುವ ಅವರ ಕುಟುಂಬದವರು ದಿನ ನಿತ್ಯ ಆತಂಕದಲ್ಲೇ ದಿನ ದೂಡುತಿದ್ದಾರೆ.

    ಈ ನಡುವೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನವಂಶಿಕೃಷ್ಣ ಅವರ ಕುಟುಂಬದವ ಆತ್ಮಸ್ಥೈರ್ಯ ತುಂಬವ ಕೆಲಸಕ್ಕೆ ಮಾಡಿದ್ದಾರೆ. ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಹಾಗೂ ವಿವಿಧಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕುಟುಂಬದವರಿಗೆ ಮೊಬೈಲ್ ಮೂಲಕ ವಿಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ.

    ತುಮಕೂರು ಎಸ್ಪಿಯ ನೂತನ ಪ್ರಯೋಗಕ್ಕೆ ಕುಟುಂಬದವರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಸ್ವತಃ ಎಸ್ಪಿ ವಿಡಿಯೋ ಕಾಲ್ ಮಾಡಿ ತಮ್ಮ ತಮ್ಮ ಕುಟುಂಬದ ಪೊಲೀಸ್ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನೀವು ಕುಟುಂಬದ ಸದಸ್ಯರು ಮನೆಯಲ್ಲೇ ಉಳಿದು ತಮ್ಮವರಿಗೆ ಬೆಂಬಲ ಸೂಚಿಸಿ ಎಂದು ಮನವಿ ಮಾಡಿದ್ದಾರೆ.

  • ಹಾಡು ಹಾಡಿ ಜನರನ್ನ ಮನೆಗೆ ಕಳುಹಿಸಿದ ರಾಯಚೂರು ಎಸ್‍ಪಿ

    ಹಾಡು ಹಾಡಿ ಜನರನ್ನ ಮನೆಗೆ ಕಳುಹಿಸಿದ ರಾಯಚೂರು ಎಸ್‍ಪಿ

    ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಡೀ ದೇಶವೇ ಲಾಕ್‍ಡೌನ್ ಆಗಿದ್ದರೂ ಜನ ರಸ್ತೆಯಲ್ಲಿ ಓಡಾಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ರಾಯಚೂರು ಪೊಲೀಸರು ವಿನೂತನ ಪ್ರಯತ್ನಗಳಿಗೆ ಮುಂದಾಗುತ್ತಿದ್ದಾರೆ.

    ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಸ್ವತಃ ನಗರದ ಪ್ರಮುಖ ವೃತ್ತಗಳಲ್ಲಿ ಕೊರೊನಾ ಜಾಗೃತಿ ಹಾಡು ಹಾಡಿ ಜನರನ್ನ ಮನೆಗೆ ಕಳುಹಿಸುತ್ತಿದ್ದಾರೆ. ನಗರದ ತೀನ್ ಕಂದಿಲ್, ಗಂಜ್ ವೃತ್ತ ಸೇರಿ ವಿವಿಧೆಡೆ ವೇದಮೂರ್ತಿ ಅವರು ಹಾಡು ಹೇಳುವ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಕೊರೊನಾ ಹಿನ್ನೆಲೆ ಲಾಕ್‍ಡೌನ್ ಇದ್ದರೂ ನಗರದಲ್ಲಿ ಜನ ಓಡಾಡುವುದು ಕಡಿಮೆಯಾಗಿಲ್ಲ. ಲಾಠಿ ಏಟಿಗೂ ಬಗ್ಗಲಿಲ್ಲ, ಬೈಕ್ ಜಪ್ತಿ ಮಾಡಿದರೂ ಜನ ಜಗ್ಗಲಿಲ್ಲ. ಹೀಗಾಗಿ ಕೊನೆಗೆ ಕರೊಕೆ ಹಾಡು ಹೇಳುವ ಮೂಲಕ ಜಾಗೃತಿಗೆ ಮೂಡಿಸುತ್ತಿದ್ದಾರೆ.

    ಒಳಿತು ಮಾಡು ಮನುಸ, ನೀ ಇರೋದು ಮೂರು ದಿವಸ ಹಾಡಿನ ದಾಟಿಯಲ್ಲೇ ‘ಮನೆಯಲ್ಲಿಯೋ ಮನುಸ ಬಂದೈತೋ ಕೊರೊನಾ ವೈರಸಾ… ಕಾಲ ಕಾಲಕ್ಕೆ ಕೈತೊಳೆಯಬೇಕು ಎಂದು ಹಾಡುವ ಮೂಲಕ ಜನ ಜಾಗೃತಿ ಕೈಗೊಂಡಿದ್ದಾರೆ.

    ಈಗಾಗಲೇ ಡ್ರೋಣ್ ಕ್ಯಾಮೆರಾ ಬಳಸುವ ಮೂಲಕ ನಗರದ ಬಡಾವಣೆಗಳಲ್ಲಿ ಜನ ಸೇರದಂತೆ ತಡೆಯಲು ಕ್ರಮವಹಿಸಲಾಗಿದೆ. ಡ್ರೋಣ್ ಕ್ಯಾಮೆರಾ ಮೂಲಕ ಜನರನ್ನು ಚದುರಿಸುವ ಕೆಲಸವನ್ನೂ ಪೊಲೀಸ್ ಇಲಾಖೆ ಮಾಡುತ್ತಿದೆ.

  • ದೆಹಲಿಗೆ ಧಾರ್ಮಿಕ ಸಭೆಗೆ ಹೋದವರು ಕೊಡಗಿಗೆ ಬಂದಿಲ್ಲ: ಎಸ್‍ಪಿ ಸ್ಪಷ್ಟನೆ

    ದೆಹಲಿಗೆ ಧಾರ್ಮಿಕ ಸಭೆಗೆ ಹೋದವರು ಕೊಡಗಿಗೆ ಬಂದಿಲ್ಲ: ಎಸ್‍ಪಿ ಸ್ಪಷ್ಟನೆ

    ಮಡಿಕೇರಿ: ದೆಹಲಿಯ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೆ ಕೊಡಗಿನಿಂದ ಭಾಗವಹಿಸಿದ್ದವರು ಕೊಡಗಿಗೆ ವಾಪಸ್ ಬಂದೇ ಇಲ್ಲ. ಹೀಗಾಗಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೊಡಗು ಎಸ್‍ಪಿ ಸುಮನ್ ಡಿ ಪನ್ನೇಕರ್ ಸ್ಪಷ್ಟಪಡಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಸಭೆಯಲ್ಲಿ 11 ಜನರು ಭಾಗವಹಿಸಿದ್ದವರು. ಜೊತೆಗೆ ವಾಪಸ್ ಬರಲು ಟಿಕೆಟ್ ಕೂಡ ಬುಕ್ ಮಾಡಿದ್ದರು. ಆದರೆ ದೇಶದಲ್ಲಿ ಲಾಕ್ ಡೌನ್ ಆಗಿದ್ದರಿಂದ ಯಾರೂ ಕೂಡ ವಾಪಸ್ ಬಂದಿಲ್ಲ. 11 ಜನರಲ್ಲಿ ಮುಖ್ಯವಾಗಿ 7 ಜನರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲರೂ ದೆಹಲಿಯ ಆಸ್ಪತ್ರೆಗಳಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

    11 ಜನರಲ್ಲಿ ಇಬ್ಬರು ಸಭೆಗೆ ಭಾಗವಹಿಸಲು ಹೋಗಿದ್ದವರಲ್ಲ. ಬದಲಾಗಿ ಸಭೆ ನಡೆದ ಪ್ರದೇಶದಲ್ಲಿ ಇದ್ದವರು. ಇವರು ಮಾರ್ಚ್ 9ರಂದೇ ಕೊಡಗಿಗೆ ವಾಪಸ್ ಆಗಿದ್ದು, ಅಂದಿನಿಂದ ಹೋಂ ಕ್ವಾರಂಟೈನ್ ಮಾಡಿ ಆ ಅವಧಿಯನ್ನು ಮುಗಿಸಿ ಆರೋಗ್ಯವಾಗಿದ್ದಾರೆ. ಇಬ್ಬರು ಸೈನಿಕರು ಧರ್ಮ ಸಭೆಯ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿ, ಕೊಡಗಿಗೆ ವಾಪಸ್ ಆಗಿದ್ದು, ಅವರಲ್ಲಿ ಒಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಇನ್ನೊಬ್ಬರು ಹಾಸನದ ಅವರ ಸಂಬಂಧಿಕರ ಮನೆಗೆ ತೆರಳಿದ್ದು, ಅಲ್ಲಿಯೇ ಇದ್ದಾರೆ. ಈ ಕುರಿತು ಅಲ್ಲಿನ ಎಸ್‍ಪಿ ಅವರೊಂದಿಗೆ ಮಾತನಾಡಿ ಮಾಹಿತಿ ನೀಡಲಾಗಿದೆ. ಕೆಲವು ಮಾಧ್ಯಮಗಳಲ್ಲಿ ಕೊಡಗಿನಲ್ಲೇ ಇದ್ದಾರೆ ಎಂದು ಸುಳ್ಳು ಸುದ್ದಿ ಪ್ರಕಟವಾಗಿದೆ. ಇದು ಎಲ್ಲವು ಸುಳ್ಳು ಜನರು ಯಾರು ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಎಸ್‍ಪಿ ಹೇಳಿದರು.