Tag: sp

  • ನಗ್ತೀಯಾ ತಗೋ – ರೌಡಿಶೀಟರ್‌ಗೆ ಎಸ್‍ಪಿಯಿಂದ ಕಪಾಳಮೋಕ್ಷ

    ನಗ್ತೀಯಾ ತಗೋ – ರೌಡಿಶೀಟರ್‌ಗೆ ಎಸ್‍ಪಿಯಿಂದ ಕಪಾಳಮೋಕ್ಷ

    ಚಾಮರಾಜನಗರ: ಪರೇಡ್ ವೇಳೆ ರೌಡಿಶೀಟರ್‌ಗೆ ಎಸ್‍ಪಿ ಹೆಚ್.ಡಿ ಆನಂದ್ ಕುಮಾರ್ ಅವರು ಕಪಾಳಮೋಕ್ಷ ಮಾಡಿದ್ದಾರೆ.

    ಗೌರಿ-ಗಣೇಶ, ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಎಸ್‍ಪಿ ರೌಡಿಗಳ ಪರೇಡ್ ಆಯೋಜಿಸಿದರು. ಈ ವೇಳೆ ಎಸ್‍ಪಿ ರೌಡಿಶೀಟರ್‌ಗಳಿಗೆ ಪ್ರಶ್ನೆ ಕೇಳುತ್ತಿದ್ದರು. ಆದರೆ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಹುಸಿ ನಗುತ್ತಿದ್ದನು. ಇದರಿಂದ ಕೋಪಗೊಂಡ ಎಸ್‍ಪಿ ಕಪಾಳಮೋಕ್ಷ ಮಾಡಿದ್ದಾರೆ.

    ಚಾಮರಾಜನಗರದ ಪೊಲೀಸ್ ಕವಾಯಿತು ಮೈದಾನನಲ್ಲಿ ಎಸ್‍ಪಿ ಹೆಚ್.ಡಿ ಆನಂದ್ ಕುಮಾರ್ ನೇತೃತ್ವದಲ್ಲಿ ರೌಡಿಗಳ ಪರೇಡ್ ನಡೆಯಿತು. ಈ ವೇಳೆ ಚಾಮರಾಜನಗರ ವಿಭಾಗದ 150ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪರೇಡ್‍ನಲ್ಲಿ ಭಾಗಿಯಾದರು.

    ಬಳಿಕ ಎಸ್‍ಪಿ ಆನಂದ್ ಕುಮಾರ್ ಅವರು ಸಮಾಜ ದ್ರೋಹಿ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್‍ಗಳಿಗೆ ಬಿಸಿ ಮುಟ್ಟಿಸುವ ಮೂಲಕ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

  • ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ ಎಸ್‍ಪಿ – ಕೇವಲ 6 ತಿಂಗ್ಳಲ್ಲಿ ಸಾವಿರ ರೇಡ್

    ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ ಎಸ್‍ಪಿ – ಕೇವಲ 6 ತಿಂಗ್ಳಲ್ಲಿ ಸಾವಿರ ರೇಡ್

    -ಎಸ್‍ಪಿಗೆ ಅಬಕಾರಿ ಅಧಿಕಾರಿಗಳು ಒತ್ತಡ
    -ಕ್ಯಾರೇ ಎನ್ನದ ಎಸ್‍ಪಿಗೆ ಜನರಿಂದ ಮೆಚ್ಚುಗೆ

    ಚಿಕ್ಕಬಳ್ಳಾಪುರ: ಜಿಲ್ಲೆಗೆ ಬಂದ ನೂತನ ಅಧಿಕಾರಿಯೊಬ್ಬರು ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರ ಸಾರಿದ್ದು, ಕೇವಲ 6 ತಿಂಗಳಲ್ಲೇ ಮಾರಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.

    ಜಿಲ್ಲೆಯಲ್ಲಿ ಒಂದು ಕಡೆ ಮಳೆಯಿಲ್ಲ, ಮತ್ತೊಂದೆಡೆ ಮಳೆಯಿಲ್ಲದೆ ಬೆಳೆಯೂ ಇಲ್ಲ. ಇತ್ತ ಸರ್ಕಾರ ಕುಡಿಯೋಕೆ ನೀರು ಕೊಡದಿದ್ದರೂ ಆ ಜಿಲ್ಲೆಗೆ ಸಾಕು ಎನ್ನುವಷ್ಟು ಮದ್ಯ ಸರಬರಾಜಾಗುತ್ತಿದೆ. ಹೀಗಾಗಿ ಪ್ರತಿ ಹಳ್ಳಿಯಲ್ಲಿರುವ ಚಿಲ್ಲರೆ ಅಂಗಡಿಗಳು ಮದ್ಯ ಮಾರಾಟ ಅಂಗಡಿಗಳಾಗಿ ಮಾರ್ಪಾಡಾಗಿದ್ದವು. ಇದರಿಂದ ಗ್ರಾಮೀಣ ಭಾಗದ ಬಹಳಷ್ಟು ಮಂದಿ ಹಳ್ಳಿಗಳಲ್ಲಿನ ಚಿಲ್ಲರೆ ಅಂಗಡಿಗಳಲ್ಲೇ ಸಿಗುತ್ತಿದ್ದ ಮದ್ಯದ ಚಟಕ್ಕೆ ದಾಸರಾಗಿ ಬದುಕು ಹಾಳು ಮಾಡಿಕೊಂಡಿದ್ದರು.

    ಈ ಬಗ್ಗೆ ಜಿಲ್ಲೆಗೆ ಬಂದ ನೂತನ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅವರಿಗೆ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಕರೆ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿಸುವಂತೆ ಮನವಿ ಮಾಡಿಕೊಂಡಿದ್ದರು. ಇದರಿಂದ ಎಚ್ಚೆತ್ತ ಎಸ್‍ಪಿ ಸಂತೋಷ್ ಬಾಬು, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ ಹಗಲು ರಾತ್ರಿ ಎನ್ನದೆ ಅಕ್ರಮ ಮದ್ಯ ಮಾರಾಟ ಹಾಗೂ ಸರಬರಾಜು ಕಂಡು ಬಂದರೆ ಸಾಕು ನಿರ್ಧಾಕ್ಷಿಣ್ಯವಾಗಿ ಕ್ರಮಕೈಗೊಂಡು ಕೇಸ್ ಮಾಡುವಂತೆ ತಾಕೀತು ಮಾಡಿದರು. ಹೀಗಾಗಿ ಕೇವಲ 6 ತಿಂಗಳಲ್ಲಿ 1000ಕ್ಕೂ ಹೆಚ್ಚು ಅಕ್ರಮ ಮದ್ಯ ಮಾರಾಟದ ಕೇಸ್ ದಾಖಲಾಗಿದ್ದು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದಂತಾಗಿದೆ.

    ಜಿಲ್ಲೆಯ ಆರು ತಾಲೂಕುಗಳು, ಗಡಿಭಾಗದ ಹಳ್ಳಿಗಳಲ್ಲಂತೂ ಅಕ್ರಮ ಮದ್ಯ ಮಾರಾಟ ಬಲು ಜೋರಾಗಿಯೇ ಇತ್ತು. ಅದರಲ್ಲೂ ಅನುಮತಿ ಪಡೆದಿರುವ ಬಾರ್ ಮಾಲೀಕರೇ ಸ್ವತಃ ಅಬಕಾರಿ ಅಧಿಕಾರಿಗಳ ಕೊಡುವ ಟಾರ್ಗೆಟ್ ರೀಚ್ ಮಾಡೋಕೆ ಹಳ್ಳಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದರು. ಆದರೆ ಈಗ ಅದೆಲ್ಲಕ್ಕೂ ಕಡಿವಾಣ ಬಿದ್ದಿದ್ದು ಎಸ್‍ಪಿ ಸಂತೋಷ್ ಬಾಬು ಕಾರ್ಯಕ್ಕೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪೊಲೀಸರು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಬ್ರೇಕ್ ಹಾಕಿದ್ದೇ ತಡ ಅಬಕಾರಿ ಇಲಾಖಾಧಿಕಾರಿಗಳು ಸರ್ ಟಾರ್ಗೆಟ್ ರೀಚ್ ಮಾಡೋಕೆ ಕಷ್ಟ ಆಗುತ್ತದೆ. ಕುಡಿಯೋರು ಕುಡಿಯಲಿ ಬಿಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ ಅಬಕಾರಿ ಅಧಿಕಾರಿಗಳು ಏನೇ ಹೇಳಿದರೂ ಕೇಳದ ಎಸ್‍ಪಿ ಮಾತ್ರ ಪ್ರತಿ ದಿನ ಅಕ್ರಮ ಮದ್ಯ ಮಾರಾಟದ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದ್ದು, ಪ್ರತಿದಿನ ಹತ್ತಾರು ಕೇಸ್ ದಾಖಲಾಗುತ್ತಿವೆ.

  • ಬಿಜೆಪಿ ಬೆಂಬಲಿತರ ಅಂಗಡಿಯಲ್ಲಿ ಖರೀದಿ ಬೇಡ: ಮುಸ್ಲಿಂರಲ್ಲಿ ಶಾಸಕ ಮನವಿ

    ಬಿಜೆಪಿ ಬೆಂಬಲಿತರ ಅಂಗಡಿಯಲ್ಲಿ ಖರೀದಿ ಬೇಡ: ಮುಸ್ಲಿಂರಲ್ಲಿ ಶಾಸಕ ಮನವಿ

    ಲಕ್ನೋ: ಬಿಜೆಪಿ ಬೆಂಬಲಿತರ ಅಂಗಡಿಯಲ್ಲಿ ಯಾವ ವಸ್ತುವನ್ನು ಖರೀದಿಸಬೇಡಿ ಎಂದು ಕೈರನಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ನಾಹಿದ್ ಹಸನ್ ಮುಸ್ಲಿಂರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶಾಸಕರು ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

    ತಮ್ಮ ಕ್ಷೇತ್ರದ ಅತಿ ಹೆಚ್ಚು ಮುಸ್ಲಿಂ ಸಮುದಾಯದ ಜನರು ವಾಸವಾಗಿರುವ ಸ್ಥಳದಲ್ಲಿ ಶಾಸಕರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಬೆಂಬಲಿತರ ಅಂಗಡಿಗಳಲ್ಲಿ ನಾವು ಖರೀದಿ ಮಾಡುವುದರಿಂದ ಅವರ ಜೀವನ ನಡೆಯುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    ಕೈರನಾ ಮತ್ತು ಸುತ್ತಮುತ್ತಲಿನ ಗ್ರಾಮದ ನೀವು ಇಲ್ಲಿಯ ಬಿಜೆಪಿ ಬೆಂಬಲಿತರ ಅಂಗಡಿಯಲ್ಲಿ ಯಾವ ವಸ್ತುವನ್ನು ಖರೀದಿಸಬೇಡಿ ಎಂದು ಕೈ ಮುಗಿದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಹತ್ತು ಅಥವಾ ಒಂದು ತಿಂಗಳು ಕಷ್ಟವಾದರೂ ಪರವಾಗಿಲ್ಲ ಪಾಣಿಪತ್ ಗೆ ತೆರಳಿ ವಸ್ತುಗಳನ್ನು ಖರೀದಿಸಿ. ಮುಂದಿನ ಒಳ್ಳೆಯ ದಿನಕ್ಕಾಗಿ ಸ್ವಲ್ಪ ಕಷ್ಟ ಅನುಭವಿಸಬೇಕಿದೆ ಎಂದು ಶಾಸಕ ಹಸನ್ ಹೇಳಿದ್ದಾರೆ.

    ಬೇರೆ ಕಡೆಯಿಂದ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸುವದರಿಂದ ಬಿಜೆಪಿ ಅವರ ಆರೋಗ್ಯವೂ ಸುಧಾರಣೆ ಆಗಲಿದೆ. ನಾವು ಅವರ ಅಂಗಡಿಯಲ್ಲಿ ವಸ್ತುಗಳನ್ನು ಖರೀದಿ ಮಾಡುವದರಿಂದಲೇ ಬಿಜೆಪಿ ಬೆಂಬಲಿತರ ಮನೆ ನಡೆಯುತ್ತದೆ ಎಂಬುವುದು ಅರ್ಥವಾಗುತ್ತದೆ. ಇವರ ಮನೆಯ ನಡೆಯಲು ಕಾರಣವಾದ ನಮ್ಮ ಮೇಲೆಯೇ ಶೂ ಎಸೆಯಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

  • ಟೀಂ ಇಂಡಿಯಾದ ಹೊಸ ಜರ್ಸಿಗೆ ವಿಪಕ್ಷಗಳಿಂದ ಭಾರೀ ಟೀಕೆ

    ಟೀಂ ಇಂಡಿಯಾದ ಹೊಸ ಜರ್ಸಿಗೆ ವಿಪಕ್ಷಗಳಿಂದ ಭಾರೀ ಟೀಕೆ

    ನವದೆಹಲಿ: ಟೀಂ ಇಂಡಿಯಾದ ಕಿತ್ತಳೆ (ಕೇಸರಿ) ಬಣ್ಣದ ಜರ್ಸಿಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.

    ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಆಟಗಾರರು ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಿ ಮೈದಾನಕ್ಕೆ ಇಳಿಯಲಿದ್ದಾರೆ. ಕಿತ್ತಳೆ ಬಣ್ಣದ ಜರ್ಸಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ವಿಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.

    ಈ ಬಗ್ಗೆ ಅಸಮಾಧಾನ ಹೊರ ಹಾಕಿರುವ ಉತ್ತ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.

    ಫುಟ್ಬಾಲ್‍ನಲ್ಲಿರುವ ‘ಹೋಮ್’ ಮತ್ತು ‘ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಲಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

  • ಎಸ್‍ಪಿ ಜೊತೆ ಮೈತ್ರಿ ರಚಿಸಿದ್ದು ದೊಡ್ಡ ತಪ್ಪು: ಮಾಯಾವತಿ

    ಎಸ್‍ಪಿ ಜೊತೆ ಮೈತ್ರಿ ರಚಿಸಿದ್ದು ದೊಡ್ಡ ತಪ್ಪು: ಮಾಯಾವತಿ

    – ಅಖಿಲೇಶ್ ಯಾದವ್ ಅಪಕ್ವತೆಯಿಂದಾಗಿ ಸೋಲು
    – ಮುಂದಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ
    – ಮುಲಾಯಂ ಪರ ಮತ ಕೇಳಬಾರದಿತ್ತು

    ಲಕ್ನೋ: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸಮಾಜವಾದಿ ಪಾರ್ಟಿ(ಎಸ್‍ಪಿ) ಮತ್ತು ಬಹುಜನ ಸಮಾಜವಾದಿ ಪಾರ್ಟಿ(ಬಿಎಸ್‍ಪಿ) ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಚುನಾವಣಾ ಪೂರ್ವ ಮೈತ್ರಿ ರಚಿಸಿಕೊಂಡು ಕಣಕ್ಕಿಳಿದಿದ್ದ ಎರಡೂ ಪಕ್ಷಗಳು ಭಾರೀ ಹಿನ್ನಡೆಯನ್ನು ಅನುಭವಿಸಿದೆ. ಹೀಗಾಗಿ ಎರಡೂ ಪಕ್ಷಗಳ ನಾಯಕರು ಇಷ್ಟು ದಿನ ಬಹಿರಂಗವಾಗಿ ಸೋಲಿಗೆ ಮೈತ್ರಿಯೇ ಕಾರಣ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿಕೊಂಡು ಬಂದಿದ್ದರು. ಇದೀಗ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ದೊಡ್ಡ ತಪ್ಪೆಂದು ನೇರವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಮುಂದಿನ ವಿಧಾನಸಭೆಯ ಉಪ ಚುನಾವಣೆಯಲ್ಲಿ ಬಿಎಸ್‍ಪಿ ಏಕಾಂಗಿ ಸ್ಪರ್ಧಿಸಲಿದೆ ಎಂಬ ಅಂಶವನ್ನು ಮಾಯಾವತಿ ರಿವೀಲ್ ಮಾಡಿದ್ದಾರೆ. ಇದೇ ವೇಳೆ ಎಸ್‍ಪಿ ಮತ್ತು ನಾಯಕ ಮುಲಾಯಂ ಸಿಂಗ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಲೋಕಸಮರದ ಫಲಿತಾಂಶದ ಬಳಿಕ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಒಂದು ಬಾರಿ ಕರೆ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

    ಭಾನುವಾರ ಪಕ್ಷದ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಪಕ್ಷದ ಮುಖ್ಯಸ್ಥೆಯಾಗಿರುವ ಮಾಯಾವತಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಾರದಿತ್ತು. ಚುನಾವಣೆ ಸಂಬಂಧಿಸಿದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಸಭೆಯಲ್ಲಿ ಹೇಳಿದ್ದಾರೆಂದು ಮಾಧ್ಯಮಗಳು ಬಿತ್ತರಿಸಿವೆ.

     

    ಅಖಿಲೇಶ್ ಅಪರಿಪಕ್ವತೆಯ ನಾಯಕತ್ವ:
    ಅಖಿಲೇಶ್ ಯಾವದ್ ಅವರ ಅಪರಿಪಕ್ವತೆಯ ನಾಯಕತ್ವದಿಂದಲೇ ಸ್ಪರ್ಧಿಸಿದ್ದ ಬಹು ಕ್ಷೇತ್ರಗಳಲ್ಲಿ ಸೋಲು ಕಾಣಬೇಕಾಯ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಎಸ್‍ಪಿ ಜೊತೆ ಮೈತ್ರಿ ಉಳಿಸಿಕೊಳ್ಳುವ ಅಗತ್ಯ ಇಲ್ಲ. ಎಸ್‍ಪಿ ಸಹಯೋಗದಿಂದಲೇ ಬಿಎಸ್‍ಪಿ 10 ಸಂಸದರು ಗೆಲುವು ಕಂಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ರಾಜ್ಯದಲ್ಲಿ ಹರಡಲಾಗುತ್ತಿದೆ. ಹಾಗಾದರೆ ಯಾದವ್ ಕುಟುಂಬಸ್ಥರು ಚುಬನಾವಣೆಯಲ್ಲಿ ಸೋತಿದ್ದು ಯಾಕೆ ಎಂದು ಮಾಯಾವತಿ ಪ್ರಶ್ನೆ ಮಾಡಿದ್ದಾರೆ.

    ತಾಜ್ ಕಾರಿಡಾರ್ ಹಗರಣದಲ್ಲಿ ನನ್ನನ್ನು ಸಿಲುಕಿಸಲು ಕೇವಲ ಬಿಜೆಪಿ ಪ್ರಯತ್ನ ಮಾಡಿರಲಿಲ್ಲ. ಅದರಲ್ಲಿ ಮುಲಾಯಂ ಸಿಂಗ್ ಯಾದವ್ ಸಹ ಒಬ್ಬರಾಗಿದ್ದರು. ಇಂತಹ ಘಟನೆಗಳನ್ನು ಮರೆತು ಚುನಾವಣೆಯಲ್ಲಿ ಮುಲಾಯಂ ಸಿಂಗ್ ಪರ ಮತ ಯಾಚನೆ ಮಾಡಿದ್ದನ್ನು ಅಖಿಲೇಶ್ ಯಾವದ್ ಪರಿಗಣಿಸಲಿಲ್ಲ. ಲೋಕಸಮರದ ಫಲಿತಾಂಶದ ಬಳಿಕ ಅಖಿಲೇಶ್ ಯಾದವ್ ಒಂದು ಬಾರಿಯೂ ಕರೆ ಮಾಡಿ ಮಾತನಾಡಲಿಲ್ಲ. ಕೊನೆಗೆ ನಾನೇ ಕರೆ ಮಾಡಿ ಕುಟುಂಬಸ್ಥರೊಂದಿಗೆ ಮಾತನಾಡಿದೆ ಎಂದರು.

    ಎಸ್‍ಪಿ ಮತ ನಮ್ಗೆ ಬಂದಿಲ್ಲ:
    ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರೂ ಸಮಾಜವಾದಿ ಪಕ್ಷದ ಮತಗಳು ನಮ್ಮ ಅಭ್ಯರ್ಥಿಗಳಿಗೆ ಬಂದಿಲ್ಲ. ಹಾಗಾಗಿ ಈ ಮಹಾಮೈತ್ರಿ ಮೊದಲಿನಂತೆ ಮುಂದುವರಿಯುವುದು ಅನುಮಾನ. ಆದ್ರೆ ಬಿಎಸ್‍ಪಿಯ ಬಹುತೇಕ ಮತಗಳು ಎಸ್‍ಪಿ ಅಭ್ಯರ್ಥಿಗಳು ಪಾಲಾಗುವಂತೆ ನಮ್ಮ ಕಾರ್ಯಕರ್ತರು ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ವಿಷಯಗಳ ಬಗ್ಗೆ ಅಖಿಲೇಶ್ ಗೆ ತಿಳಿದಿದ್ದರೂ ಮೌನವಾಗಿದ್ದಾರೆ. ಉಪಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ನಾವು ಗೆಲುವು ಕಾಣಬೇಕಿದೆ ಎಂದು ಹೇಳಿದ್ದಾರೆ.

  • ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಪೊಲೀಸರೇನು ಹುಚ್ಚರಾ? ಪ್ರತಿಭಟನಾಕಾರರ ಮೇಲೆ ಯಾದಗಿರಿ ಎಸ್.ಪಿ ಗರಂ

    ಯಾದಗಿರಿ: ಪೊಲೀಸರೇನು ಹುಚ್ಚರಾ ಎಂದು ಪ್ರತಿಭಟನಾ ನಿರತರರಿಗೆ ಸಿನಿಮಾ ಸ್ಟೈಲ್‍ನಲ್ಲಿ ಯಾದಗಿರಿ ಎಸ್.ಪಿ ಋಷಿಕೇಶ್ ಭಗವಾನ್ ಗರಂ ಆಗಿದ್ದಾರೆ.

    ಇಂದು ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಅಂಬೇಡ್ಕರ್ ಭಾವಚಿತ್ರ ಸಹಿತ ನಾಮಫಲಕ ಹಾಕುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂರ್ಘಷ ಏರ್ಪಟಿತ್ತು. ಹೀಗಾಗಿ ಸ್ಥಳಕ್ಕೆ ಎಸ್.ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿದ್ದರು.

    ಈ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ಪೊಲೀಸರ ವಿರುದ್ಧ ಘೋಷಣೆ ಕೂಗಲು ಮುಂದಾದರು. ಇದರಿಂದ ಸಿಡಿಮಿಡಿಗೊಂಡ ಎಸ್.ಪಿ ಋಷಿಕೇಶ್ ಪೊಲೀಸರು ನಿಮಗೆ ಹಚ್ಚಾರ ತರ ಕಾಣುತ್ತೇವಾ? ನಾವು ಏನ್ ಮಾಡಿದ್ದೀವಿ ನಿಮಗೆ ಎಂದು ಪ್ರತಿಭಟನಾಕಾರರ ವಿರುದ್ಧ ಗರಂ ಆದರು.

    ಇದೇ ತಿಂಗಳ 8ರಂದು ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಮುಂದೆ ದಲಿತ ಸಮುದಾಯದಿಂದ ಅಂಬೇಡ್ಕರ್ ನಾಮಫಲಕ ಅಳವಡಿಕೆ ಮಾಡಲಾಗಿತ್ತು. ಆದರೆ ನಾಮ ಫಲಕ ಅಳವಡಿಕೆಗೆ ಅನುಮತಿ ಇಲ್ಲವೆಂದು ಪೊಲೀಸರು ಅದನ್ನು ತೆರವುಗೊಳಿಸಿದ್ದರು. ನಾಮ ಫಲಕವನ್ನು ಅನಧಿಕೃತವಾಗಿ ಅಳವಡಿಸಲಾಗಿದೆ ಎಂಬ ಆರೋಪದ ಮೇಲೆ 8 ಜನರ ಮೇಲೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ಈ ವಿಚಾರದಲ್ಲಿ ಪೊಲೀಸರಿಗೆ ಕುರುಬ ಸಮುದಾಯದ ಕುಮ್ಮಕ್ಕಿದೆ. ಅದ್ದರಿಂದ ನಾಮಫಲಕ ತೆರವುಗೊಳಿಸಿದ್ದಾರೆಂದು ದಲಿತ ಸಂಘಟನೆಗಳು ಆರೋಪಿಸಿ, ತೆರವುಗೊಳಿಸಿದ ಜಾಗದಲ್ಲಿಯೇ ನಾಮಫಲಕ ಹಾಕಬೇಕೆಂದು ಹಳೆ ಠಾಣೆ ಹಿಂಭಾಗದ ರಸ್ತೆ ತಡೆದು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ.

  • ಐದೇ ತಿಂಗಳಲ್ಲಿ ಮುರಿದು ಬಿತ್ತು ಎಸ್‍ಪಿ, ಬಿಎಸ್‍ಪಿ ಮೈತ್ರಿ

    ಐದೇ ತಿಂಗಳಲ್ಲಿ ಮುರಿದು ಬಿತ್ತು ಎಸ್‍ಪಿ, ಬಿಎಸ್‍ಪಿ ಮೈತ್ರಿ

    ಲಕ್ನೋ: ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು ಲೋಕಸಭಾ ಚುನಾವಣೆಯಲ್ಲಿ ಒಂದಾಗಿದ್ದ ಬಿಎಸ್‍ಪಿ, ಎಸ್‍ಪಿ ಮೈತ್ರಿಕೂಟ ಫಲಿತಾಂಶ ಬಂದ ಬಳಿಕ ಮುರಿದು ಬಿದ್ದಿದ್ದು, ಒಂಟಿಯಾಗಿಯೇ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಉಪಚುನಾವಣೆಯನ್ನು ಎದುರಿಸಲು ನಿರ್ಧರಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾವು ಶಾಶ್ವತವಾಗಿ ಮೈತ್ರಿಯನ್ನು ಮುರಿಯುತ್ತಿಲ್ಲ. ಭವಿಷ್ಯದಲ್ಲಿ ಎಸ್‍ಪಿ ರಾಜಕೀಯವಾಗಿ ಯಶಸ್ವಿಯಾದರೆ ನಾವು ಮತ್ತೆ ಒಂದಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಎಸ್‍ಪಿ ರಾಜಕೀಯವಾಗಿ ಯಶಸ್ಸು ಗಳಿಸಲು ವಿಫಲವಾದರೆ, ನಾವು ಬೇರೆಯಾಗುವುದೇ ಒಳ್ಳೆಯದು. ಹೀಗಾಗಿ ನಾವು ಉಪಚುನಾವಣೆಯನ್ನು ಒಂಟಿಯಾಗಿಯೇ ಎದುರಿಸಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಮಾಯಾವತಿಯ ಹೇಳಿಕೆಯ ಬೆನ್ನಲ್ಲೇ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ನಾವು ಸಹ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತೇವೆ. 11 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.

    ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಯಾವತಿ ಅವರು ಮುಂಬರುವ ಉಪಚುನಾವಣೆಗೆ ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ 403 ಕ್ಷೇತ್ರಗಳಲ್ಲಿಯೂ ಸ್ಫರ್ಧಿಸಲು ತಯಾರಾಗಿರಿ ಎಂದು ಬಿಎಸ್‍ಪಿ ನಾಯಕರಿಗೆ ತಿಳಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ನನಗೆ ತೃಪ್ತಿ ನೀಡಿಲ್ಲ. ಎಸ್‍ಪಿ ಸರಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿಲ್ಲ. ಅಖಿಲೇಶ್ ಯಾದವ್‍ರೊಂದಿಗಿನ ಮೈತ್ರಿ ನಮಗೂ ಮತ್ತು ನಮ್ಮ ಪಕ್ಷದ ಭವಿಷ್ಯಕ್ಕೂ ಮುಳ್ಳಾಗಬಹುದು ಎಂದು ಮಾಯಾವತಿ ಹೇಳಿದ್ದಾರೆ ಎಂದು ವರದಿಯಾಗಿದೆ.

    ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಕುರಿತು ಮಾತನಾಡಿ, ಎಸ್‍ಪಿ- ಬಿಎಸ್‍ಪಿ ಮೈತ್ರಿ ಮಾಡಿಕೊಂಡ ಬಳಿಕ ಅಖಿಲೇಶ್ ಯಾದವ್ ಹಾಗೂ ಅವರ ಪತ್ನಿ ಡಿಂಪಲ್ ಯಾದವ್ ನನಗೆ ಬಹಳ ಗೌರವ ನೀಡಿದ್ದಾರೆ. ದೇಶಕ್ಕಾಗಿ ನಾನು ನಮ್ಮ ಮಧ್ಯೆಯಿರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆಯುತ್ತೇನೆ. ಅವರು ನನಗೆ ನೀಡಿದ ಗೌರವಕ್ಕೆ ನಾನು ಬದ್ಧಳಾಗಿರುತ್ತೇನೆ. ನಮ್ಮ ಸಂಬಂಧ ಕೇವಲ ರಾಜಕೀಯಕ್ಕೇ ಮಾತ್ರ ಸೀಮಿತವಲ್ಲ, ನಾವು ನಮ್ಮ ಸ್ನೇಹವನ್ನು ಎಂದಿಗೂ ಮುಂದವರಿಸುತ್ತೇವೆ ಎಂದು ತಿಳಿಸಿದರು.

    ಸಮಾಜವಾದಿ ಪಕ್ಷದ ಅಂತರಿಕ ಜಗಳದ ಕಾರಣ ಯಾದವರ ಮತಗಳು ನಮಗೆ ದೊರಕಿಲ್ಲ. ಮುಸ್ಲಿಂ ಪ್ರಾಬಲ್ಯವಿರುವ ಪಕ್ಷ ಕ್ಷೇತ್ರದಲ್ಲಿ ಗೆದ್ದಿದೆ. ಚುನಾವಣೆಗೂ ಮುನ್ನ ಶಿವಪಾಲ್ ಪ್ರಗತಿಶೀಲ ಸಮಾಜವಾದಿ ಪಕ್ಷ ಸ್ಥಾಪಿಸಿದ್ದು, ಸಮಾಜವಾದಿ ಪಕ್ಷದ ಮತಗಳು ವಿಭಜನೆಯಾಗಲು ಕಾರಣವಾಯಿತು ಮತ್ತು ಅದು ಮಹಾಮೈತ್ರಿಗೆ ಹೊಡೆತಕೊಟ್ಟಿದೆ. ಇದರಿಂದ ಎಸ್‍ಪಿಯ ಪ್ರಬಲ ಅಭ್ಯರ್ಥಿ ಕೂಡ ಸೋಲು ಕಾಣುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮೂಲಗಳ ಪ್ರಕಾರ ಮಾಯಾವತಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಬಯಕೆ ಹೊಂದಿದ್ದರು. ಚುನಾವಣಾ ಫಲಿತಾಂಶದಿಂದ ಮಾಯವತಿ ಅಸಮಾಧಾನಗೊಂಡಿದ್ದಾರೆ. ನಾವು ಎಸ್‍ಪಿ ಪ್ರಯತ್ನವನ್ನು ಶ್ಲಾಘಿಸುತ್ತೇವೆ ಆದರೆ ಮೈತ್ರಿ ಗೆಲುವು ಮತಗಳ ವರ್ಗಾವಣೆಯಿಂದ ಮಾತ್ರ ಅಳೆಯಲು ಸಾಧ್ಯ ಆದರೆ ಅದೇ ಆಗಿಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

    ಭಾನುವಾರ ನಡೆದ ಸಭೆಯಲ್ಲಿ ಮಾಯಾವತಿ ಉತ್ತರ ಪ್ರದೇಶದ ಪಕ್ಷದ ಘಟಕದಲ್ಲಿ ಹಲವಾರು ಬದಲಾಣೆಗಳನ್ನು ಮಾಡಿದ್ದು, ರಾಜ್ಯವನ್ನು ಪಶ್ಚಿಮ, ಲಕ್ನೋ, ಗೋರಖ್‍ಪುರ್, ವಾರಣಾಸಿ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು. ಪಕ್ಷವನ್ನು ಬೇರುಮಟ್ಟದಿಂದ ಸದೃಢಗೊಳಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡ, ಬಿಹಾರ, ಒಡಿಶಾ, ಗುಜರಾತ್, ರಾಜಸ್ಥಾನ ಮತ್ತು ಜಾರ್ಖಂಡ್, ಡೆಲ್ಲಿ, ಮಧ್ಯಪ್ರದೇಶಗಳಲ್ಲಿ ಅಧ್ಯಕ್ಷರನ್ನು ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶವನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಬಿಎಸ್‍ಪಿ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿತ್ತು.

  • ಕೋಲಾರ ಎಸ್‍ಪಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಮಹಿಳಾ ಪೇದೆಗಳು

    ಕೋಲಾರ ಎಸ್‍ಪಿ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದ ಮಹಿಳಾ ಪೇದೆಗಳು

    ಕೋಲಾರ: ಸಾಮಾನ್ಯವಾಗಿ ಅಭಿಮಾನಿಗಳು ನೆಚ್ಚಿನ ನಟ-ನಟಿಯರು ಇಲ್ಲವಾದಲ್ಲಿ ರಾಜಕೀಯ ನಾಯಕರು, ಒಳ್ಳೆಯ ಪ್ರವಾಸಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಕಾಮನ್. ಆದರೆ ಕೋಲಾರದಲ್ಲಿ ತಮ್ಮ ನೆಚ್ಚಿನ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಹಿಳಾ ಪೊಲೀಸ್ ಪೇದೆಗಳು ಸೆಲ್ಫಿಗಾಗಿ ಮುಗಿಬಿದ್ದ ಪ್ರಸಂಗವೊಂದು ವೈರಲ್ ಆಗಿದೆ.

    ಕೋಲಾರ ಎಸ್‍ಪಿ ರೋಹಿಣಿ ಕಟೋಜ್ ಅವರೊಂದಿಗೆ ತಮ್ಮ ಕೈ ಕೆಳಗೆ ಕೆಲಸ ಮಾಡುವ ಮಹಿಳಾ ಪೊಲೀಸ್ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಟ್ಟಿದ್ದಾರೆ. ತಮ್ಮ ನೆಚ್ಚಿನ ಅಧಿಕಾರಿಯಾಗಿರುವ ಎಸ್‍ಪಿ ಮೇಡಂ ಜೊತೆಗೆ 30ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ನಗರದ ಕವಾಯತು ಮೈದಾನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

    ತಮ್ಮ ಕೆಳಗೆ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಎಸ್‍ಪಿ ರೋಹಿಣಿ ಕಟೋಜ್ ಖುಷಿಯಾಗಿ ಪೋಸ್ ಕೊಟ್ಟಿದ್ದಾರೆ. ಅಲ್ಲದೆ ಮತ್ತೊಮ್ಮ ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ.

  • ‘ಸೈಕಲ್‍ಗೆ ಮತ ಹಾಕಿ’ – ಬಿಜೆಪಿ ಕಾರ್ಯಕರ್ತರಿಂದ ಚುನಾವಣಾ ಅಧಿಕಾರಿಗೆ ಗೂಸಾ

    ‘ಸೈಕಲ್‍ಗೆ ಮತ ಹಾಕಿ’ – ಬಿಜೆಪಿ ಕಾರ್ಯಕರ್ತರಿಂದ ಚುನಾವಣಾ ಅಧಿಕಾರಿಗೆ ಗೂಸಾ

    ಲಕ್ನೋ: ಇವಿಎಂನಲ್ಲಿ ಸಮಾಜವಾದಿ ಪಕ್ಷದ (ಎಸ್‍ಪಿ) ಚಿಹ್ನೆ ಸೈಕಲ್ ಬಟನ್ ಒತ್ತುವಂತೆ ಮತದಾರರಿಗೆ ಹೇಳುತ್ತಿದ್ದ ಚುನಾವಣಾ ಅಧಿಕಾರಿಯನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮೊರಾದಾಬಾದ್ ಲೋಕಸಭಾ ಕ್ಷೇತ್ರದ ಬಿಲಾರಿ ಮತಗಟ್ಟೆ ಸಂಖ್ಯೆ 231ರ ಬೂತ್‍ನ ಮೊಹಮ್ಮದ್ ಜುಬೇದ್ ಥಳಿಕ್ಕೆ ಒಳಗಾಗದ ಅಧಿಕಾರಿ. ಜುಬೇದ್ ಅವರು ಸೈಕಲ್ ಚಿಹ್ನೆಯ ಬಟನ್ ಒತ್ತುವಂತೆ ಮಹಿಳಾ ಮತದಾರರಿಗೆ ಹೇಳುತ್ತಿದ್ದರು. ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ.

    ಸೈಕಲ್ ಚಿಹ್ನೆಯ ಬಟನ್ ಒತ್ತಿ ಅಂತ ಮೋಹದ್ ಜುಬೇದ್ ನಮಗೆ ಹೇಳಿದ್ದರು ಎಂದು ಕೆಲ ಮಹಿಳೆಯರು ಆರೋಪಿದ್ದರು. ಇದರಿಂದಾಗಿ ಮತಗಟ್ಟೆಗೆ ಬಂದ ಬಿಜೆಪಿ ಕಾರ್ಯಕರ್ತರು ಮೋಹದ್ ಜುಬೇದ್ ಅವರನ್ನು ಹೊರಗೆ ಎಳೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೊಹಮ್ಮದ್ ಜುಬೇದ್ ಅವರನ್ನು ಚುನಾವಣಾ ಕರ್ತವ್ಯದಿಂದ ವಜಾಗೊಳಿಸಲಾಗಿದೆ.

    ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದೆ. 13 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. 18 ಕೋಟಿ 85 ಲಕ್ಷ ಜನರು ಇಂದು 1,640 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಮೊರಾದಾಬಾದ್ ಸೇರಿದಂತೆ ಉತ್ತರ ಪ್ರದೇಶದ 10 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

  • ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಅಲಿ ಹೊಂದಿದ್ರೆ, ನಾವು ಭಜರಂಗಬಲಿ ಹೊಂದಿದ್ದೇವೆ: ಯೋಗಿ ಆದಿತ್ಯನಾಥ್

    ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಅಲಿ ಹೊಂದಿದ್ರೆ, ನಾವು ಭಜರಂಗಬಲಿ ಹೊಂದಿದ್ದೇವೆ: ಯೋಗಿ ಆದಿತ್ಯನಾಥ್

    ಲಕ್ನೋ: ವಿವಾದಾತ್ಮಕ ಹೇಳಿಕೆ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿಯಾಗುತ್ತಿದ್ದಾರೆ. ಭಾರತೀಯ ಸೈನ್ಯ ‘ಮೋದಿ ಸೈನ್ಯ’, ಮುಸ್ಲಿಂ ಲೀಗ್ ‘ವೈರಸ್’ ಎಂದು ಹೇಳಿದ್ದ ಅವರು ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಅಲಿ ಮೇಲೆ ನಂಬಿಕೆ ಹೊಂದಿದ್ದಾರೆ. ಆದರೆ ನಾವು ಭಜರಂಗಬಲಿ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಹೀಗಾಗಿ ಅವರು ಅಲಿಯನ್ನು ಹೊಂದಿದ್ದರೆ, ನಾವು ಭಜರಂಗಬಲಿಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಓದಿ: ಯೋಗಿ ಆದಿತ್ಯನಾಥ್‍ಗೆ ಚುನಾವಣಾ ಆಯೋಗ ಎಚ್ಚರಿಕೆ

    ಹಿಂದೂ ಧರ್ಮದಲ್ಲಿ ಭಜರಂಗಬಲಿ ಅಂದ್ರೆ ಹನುಮಂತ. ಮುಸ್ಲಿಂ ಧರ್ಮದಲ್ಲಿ ಅಲಿ ಅಂದ್ರೆ ಅಲ್ಲಾ. ಬಿಎಸ್‍ಪಿ ನಾಯಕಿ ಮಾಯಾವತಿ ಅವರು ಕಳೆದ ಎರಡು ಹಿಂದಷ್ಟೇ, ಮುಸ್ಲಿಂ ಸಮುದಾಯದ ಬಳಿ ಮತಯಾಚನೆ ಮಾಡಿದ್ದರು. ಈ ವೇಳೆ ನೀಡಿದ ಹೇಳಿಕೆಯಿಂದ ಮಾಯಾವತಿ ಅವರು, ನೀತಿ ಸಂಹಿತೆ ಉಲ್ಲಂಘನೆ ಆರೋಪ ಎದುರಿಸುತ್ತಿದ್ದಾರೆ. ಮಾಯಾವತಿ ಅವರು ಮುಸ್ಲಿಮರ ಬಳಿ ಮತಯಾಚನೆ ಮಾಡಿದ್ದರಿಂದಾಗಿ ಯೋಗಿ ಆದಿತ್ಯನಾಥ್ ತಿರುಗೇಟು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಓದಿ: ರಾಹುಲ್ ಗಾಂಧಿಗೆ ಮುಸ್ಲಿಂ ಲೀಗ್ ವೈರಸ್ ತಗುಲಿದೆ: ಯೋಗಿ ಆದಿತ್ಯನಾಥ್

    ಮಾಯಾವತಿ ಹೇಳಿದ್ದೇನು?:
    ಉತ್ತರ ಪ್ರದೇಶದ ದಿಯೋಬಂದ್‍ನಲ್ಲಿ ಭಾನುವಾರ ನಡೆದಿದ್ದ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಿಎಸ್‍ಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ್ದ ಮಾಯಾವತಿ ಅವರು, ಕಾಂಗ್ರೆಸ್ಸಿಗೆ ಮುಸ್ಲಿಮರು ಮತ ಹಾಕಬೇಡಿ. ಬಿಜೆಪಿಗೆ ಅನುಕೂಲ ಕಲ್ಪಿಸಲು ಕಾಂಗ್ರೆಸ್ ಕೆಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದರು.

    ಕೇಂದ್ರದ ಬಿಜೆಪಿ ಸರ್ಕಾರವು ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದರು.