Tag: sp balasubrahmanyam

  • ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೊತೆಗೆ ಕೋರಸ್ ಹಾಡಿದ ಅನುಭವ ಬಿಚ್ಚಿಟ್ಟ ನಯನ

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೊತೆಗೆ ಕೋರಸ್ ಹಾಡಿದ ಅನುಭವ ಬಿಚ್ಚಿಟ್ಟ ನಯನ

    ಬಿಗ್‍ಬಾಸ್ ಮೀನಿ ಸೀಸನ್ ಎಂಟ್ರಿಕೊಟ್ಟಿರುವ ನಟಿ ನಯನ ನಾಗರಾಜ್ ಬರೀ ನಟಿ ಮಾತ್ರ ಅಲ್ಲ. ಉತ್ತಮ ಗಾಯಕಿ ಕೂಡ ಆಗಿದ್ದಾರೆ. ವರ್ಷಗಳ ಹಿಂದೆಯೇ ಲೆಜೆಂಡರಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೊತೆಗೆ ನಯನ ನಾಗರಾಜ್ ಕೋರಸ್ ಹಾಡಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.

    ಮನೆಗೆ ಬರುವ ಸ್ಪರ್ಧಿಗಳನ್ನು ಅಕೂಲ್ ವೆಲ್ ಕಮ್ ಮಾಡುತ್ತಾ ಅವರ ಕುರಿತಾಗಿ ಸ್ಪರ್ಧಿಗಳಿಗೆ ತಮಗೆ ಗೊತ್ತಿರುವ ವಿಚಾರವನ್ನು ಹೇಳುತ್ತಾ ಪರಿಚಯ ಮಾಡಿಸುತ್ತಿದ್ದಾರೆ. ಈ ವೇಳೆ ನಯನಾ ಅವರು ಮಾಡಿರುವ ದೊಡ್ಡ ಸಾಧನೆ ಯಾವುದು ಎಂದರೆ ಏನು ಗೊತ್ತಾ? ಅವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜೊತೆ ಹಾಡು ಹೇಳಿದ್ದಾರೆ ಎಂದು ಅಕೂಲ್ ಹೇಳಿದಾಗ ನಯನ ಎಳೆಎಳೆಯಾಗಿ ಅವರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:  ನಾನು ಮಾಡಿದ ತಪ್ಪು ಯಾರು ಮಾಡಬೇಡಿ: ಚಂದನಾ

    2014ರಲ್ಲಿ ಇಳಯರಾಜ ಅವರ ಗೌರವಾರ್ಥಕವಾಗಿ ನಡೆದ ಲೈವ್ ಶೋನಲ್ಲಿ ಮೂರು ಹಾಡುಗಳನ್ನು ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಜೊತೆಗೆ ಕೋರಸ್ ಹಾಡಿದ್ದೇನೆ. ಕೇಳದೇ ನಿಮಗೀಗ.. ಹಾಡಿಗೆ ನಾವು ಹತ್ತು ಜನ ಕೋರಸ್ ಹಾಡಿದ್ವಿ. ಅವರು ನಮ್ಮ ಜೊತೆಗೆ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು. ನಾವು ಕೋರಸ್ ಹಾಡುತ್ತಾ ಇದ್ದೆವು. ಆಗ ಅವರು ಮಧ್ಯದಲ್ಲಿ ನಿಲ್ಲಿಸಿ ಎಂದು ಹೇಳಿ ಬಂದ್ರು, ನಾವು ಸಂಗೀತಗಾರರು ಎನೋ ತಪ್ಪು ಮಾಡಿದ್ರು ಎಂದು ಅಂದುಕೊಂಡಿದ್ದೇವು. ಆದರೆ ಅವರು ಬಂದು ಕ್ಷಮಿಸಿ ನಾನು ಒಂದು ಬೀಟ್ ತಡವಾಗಿ ಹಾಡಿ ಬಿಟ್ಟೆ ನೀವು ಸರಿಯಾಗಿ ಹಾಡಿದ್ದೀರ ಅಂತ ಹೇಳಿದರು ಎಂದು ಬಿಗ್‍ಬಾಸ್ ಮನೆಯಲ್ಲಿ ನಯನ ನಾಗರಾಜ್ ಹೇಳಿದರು. ಹಾಗೇ ಬಿಗ್‍ಬಾಸ್ ಮನೆಯಲ್ಲಿ ಕೇಳದೇ ನಿಮಗೀಗ.. ಹಾಡನ್ನು ನಯನ ನಾಗರಾಜ್ ಹಾಡಿದರು.

    ಸೀಂಗರ್, ಡಾನ್ಸರ್ ಆಗಿರುವ ನಯನ ಮೊದಲ ದಿನವೇ ಸ್ಪರ್ಧಿಗಳಿಗೆ ಮೋಡಿ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈಗಾಗಲೇ ಅವರು ಎಸ್.ಪಿ.ಬಿ ನೆನೆಪುಗಳನ್ನು ಮನೆ ಮಂದಿ ಜೊತೆಗೆ ಹಂಚಿಕೊಂಡಿದ್ದನು ಕೇಳಿ ವೀಕ್ಷಕರು ನಯನ ಅವರನ್ನು ಮೆಚ್ಚಿಕೊಂಡಿದ್ದಾರೆ.

  • ಎಸ್‍ಪಿಬಿ-ಲಕ್ಷ್ಮಿ ಅಭಿನಯದ ಸಿನಿಮಾ ರಿಲೀಸ್‍ಗೆ ಸಿದ್ಧತೆ

    ಎಸ್‍ಪಿಬಿ-ಲಕ್ಷ್ಮಿ ಅಭಿನಯದ ಸಿನಿಮಾ ರಿಲೀಸ್‍ಗೆ ಸಿದ್ಧತೆ

    – ಕನ್ನಡದಲ್ಲಿ ಡಬ್ ಆಗ್ತಿರೋ ಚಿತ್ರ

    ಬೆಂಗಳೂರು: ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಂದನದ ಗೊಂಬೆ ಲಕ್ಷ್ಮಿ ಅಭಿನಯದ ‘ಮಿಥುನಂ’ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ. ಕೇವಲ ಗಾಯಕರಾಗಿ ಅಲ್ಲದೇ ಎಸ್‍ಪಿಬಿ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಸೇರಿದಂತೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ಎಸ್‍ಪಿಬಿ ನಟಿಸಿದ್ದಾರೆ.

    8 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಮಿಥುನಂ ಕನ್ನಡದಲ್ಲಿ ಮಿಥುನನಾಗಿ ತೆರೆಗೆ ಅಪ್ಪಳಿಸಲಿದೆ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಎಸ್‍ಪಿಬಿ ಮತ್ತು ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಶ್ರೀರಮಣ ರಚಿತ ಮಿಥುನಂ ಕಾದಂಬರಿಯನ್ನ ನಿರ್ದೇಶಕ ತನಿಕೆಳ್ಳ ಭರಣಿ ತೆರೆಯ ಮೇಲೆ ತಂದು ಮೋಡಿ ಮಾಡಿದ್ದರು. ಕಾದಂಬರಿ ಆಧಾರಿತ ಈ ಸಿನಿಮಾ ನಾಲ್ಕು ರಾಜ್ಯ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿತ್ತು.

    ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯಗಳು ನಡೆದಿವೆ. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ರಾಜ್ಯಾದ್ಯಂತ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ರಿಲೀಸ್ ದಿನಾಂಕ ಅಂತಿಮವಾಗಬೇಕಿದೆ.

    ಅನ್‍ಲಾಕ್ ಬಳಿಕ ಕಳೆದ 15 ದಿನಗಳಿಂದ ಚಿತ್ರಮಂದಿರಗಳು ತೆರೆದಿವೆ. ಕೊರೊನಾ ಆತಂಕದ ನಡುವೆಯೂ ಜನರು ಸಹ ನಿಧಾನವಾಗಿ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಪ್ರೇಕ್ಷಕರ ಕೊರತೆ ಹಿನ್ನೆಲೆ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡಗಳು ಹಿಂದೇಟು ಹಾಕುತ್ತಿವೆ. ಹಾಗಾಗಿ ಹಳೆಯ ಸೂಪರ್ ಹಿಟ್ ಫಿಲಂಗಳನ್ನ ರೀ ರಿಲೀಸ್ ಮಾಡಲಾಗುತ್ತಿದೆ. ಕೆಲ ಬೇರೆ ಭಾಷೆಯ ಹೊಸ ಸಿನಿಮಾಗಳನ್ನ ಡಬ್ ಮಾಡಿ ಕನ್ನಡಕ್ಕೆ ತರಲಾಗ್ತಿದೆ. ಈ ಎಲ್ಲ ಬೆಳವಣಿಗೆಗಳ ಹಳೆ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ.

  • ಎಸ್‍ಪಿಬಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಜಗನ್ ಒತ್ತಾಯ

    ಎಸ್‍ಪಿಬಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಜಗನ್ ಒತ್ತಾಯ

    ನವದೆಹಲಿ: ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

    ಭಾರತದ ಸಿನಿ ರಂಗಕ್ಕೆ ಎಸ್‍ಪಿಬಿ ಅವರು ನೀಡಿರುವ ವಿಶೇಷ ಸೇವೆಗಳನ್ನು ಗುರುತಿಸಿ ಭಾರತ್ನ ರತ್ನ ಪ್ರಶಸ್ತಿ ನೀಡುವಂತೆ ಜಗನ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ನಮ್ಮ ರಾಜ್ಯದ ನೆಲ್ಲೂರು ಜಿಲ್ಲೆ ಎಸ್‍ಪಿಬಿ ಅವರ ಹುಟ್ಟೂರಾಗಿರುವುದು ನಮ್ಮ ಪುಣ್ಯ. ಅವರ ಅಗಲಿಕೆಯಿಂದ ರಾಜ್ಯ, ದೇಶಕ್ಕೆ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಅವರು 40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಆರು ಬಾರಿ ರಾಷ್ಟ್ರ ಪ್ರಶಸ್ತಿ, 25 ಬಾರಿ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಹಲವು ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ಅವರಿಗೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಪ್ರದಾನವಾಗಿದೆ. ಈ ಹಿಂದೆ ಹಲವು ಖ್ಯಾತ ಗಾಯಕರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವ ಎಸ್‍ಪಿಬಿ ಅವರಿಗೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದು ಸಿಎಂ ಜಗನ್ ತಿಳಿಸಿದ್ದಾರೆ.

    ಎಸ್‍ಪಿಬಿ ಅವರ ಅಂತ್ಯಸಂಸ್ಕಾರದ ವೇಳೆ ಹಾಜರಾಗಿದ್ದ ಆಂಧ್ರ ಪ್ರದೇಶ ಜಲಸಂಪನ್ಮೂಲ ಸಚಿವ ಅನಿಲ್ ಕುಮಾರ್ ಯಾದವ್ ಅವರು, ಎಸ್‍ಪಿಬಿ ಅವರು ಜನಿಸಿದ್ದ ನೆಲ್ಲೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಸೋಮವಾರ ಚೆನ್ನೈನಲ್ಲಿ ಮಾತನಾಡಿದ್ದ ಎಸ್‍ಪಿಬಿ ಪುತ್ರ ಚರಣ್ ಅವರು, ತಂದೆಯವರ ಸೇವೆಗಳನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿ ನೀಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೂಡ ಎಸ್‍ಪಿಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಕೂಗು ಜೋರಾಗಿದೆ. ಇದರ ನಡುವೆಯೇ ಸಿಎಂ ಜಗನ್ ಪತ್ರ ಬರೆದಿದ್ದಾರೆ.

  • ಎಸ್‍ಪಿಬಿ ನೆನಪು- ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿದ ಇಳಯರಾಜ

    ಎಸ್‍ಪಿಬಿ ನೆನಪು- ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿದ ಇಳಯರಾಜ

    ಚೆನ್ನೈ: ತಮ್ಮ ಗೆಳೆಯ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನೆನಪಿನಲ್ಲೇ ಇರುವ ಸಂಗೀತ ನಿರ್ದೇಶಕ ಇಳಯರಾಜ, ಶನಿವಾರ ರಾತ್ರಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿ ದೀಪ ಹಚ್ಚಿದ್ದಾರೆ.

    ಸರ್ಕಾರದ ಸೂಚನೆ ಹಿನ್ನೆಲೆ ಇಳಯರಾಜ ತಮ್ಮ ಪ್ರಾಣ ಸ್ನೇಹಿತನ ಅಂತಿಮ ದರ್ಶನದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿ ತಮ್ಮ ಗೆಳೆಯನನ್ನು ನೆನೆದಿದ್ದಾರೆ. ಅಲ್ಲದೆ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ, ಸದ್ಗತಿ ದೊರೆಯಲಿ ಎಂದು ಇಳಯರಾಜ ಬೇಡಿಕೊಂಡಿದ್ದಾರೆ.

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್ 25ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಹಾಗೂ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಚೆನ್ನೈನ ಫಾರ್ಮ್ ಹೌಸ್‍ನಲ್ಲಿ ಮಾಡಲಾಯಿತು. ಆದರೆ ಬಹುತೇಕ ಗಣ್ಯರು ಎಸ್‍ಪಿಬಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅದೇ ರೀತಿ ಇಳಯರಾಜ ಸಹ ಹೋಗಲಿಲ್ಲ. ಹೀಗಾಗಿ ದೇವಸ್ಥಾನಕ್ಕೆ ತೆರಳಿ ದೀಪ ಬೆಳಗಿಸಿ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    இசைஞானி இளையராஜா அவர்கள் திரு SP பாலசுப்ரமணியம் அவர்களின் ஆத்மா சாந்தி அடைய திருவண்ணாமலையில் சற்று முன் மோட்ச தீபம்…

    Posted by Ilaiyaraaja on Saturday, September 26, 2020

    ಸಿನಿಮಾ ರಂಗಕ್ಕೆ ಪ್ರವೇಶ ಮಾಡುವುದಕ್ಕೂ ಮುನ್ನವೇ ಇಳಯರಾಜ ಹಾಗೂ ಎಸ್‍ಪಿಬಿ ಸ್ನೇಹಿತರಾಗಿದ್ದರು. ಅಲ್ಲದೆ ಸಿನಿಮಾ ರಂಗಕ್ಕೆ ಬಂದ ನಂತರ ಇಳಯರಾಜ ನಿರ್ದೇಶನದ ಹಲವು ಸಿನಿಮಾಗಳ ಹಾಡುಗಳನ್ನು ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಹೀಗಾಗಿ ಇಳಯರಾಜ ಹಾಗೂ ಎಸ್‍ಪಿಬಿ ಮಧ್ಯೆ ಆಳವಾದ ಸ್ನೇಹವಿತ್ತು.

    ಎಸ್‍ಪಿಬಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಶ್ಚರ್ಯ ವ್ಯಕ್ತಪಡಿಸಿದ್ದ ಇಳಯರಾಜ, ಬಾಲು ನೀನೆಲ್ಲಿಗೆ ಹೋದೆ, ಯಾಕೆ ಹೋದೆ? ಬಾಲು ಬೇಗನೆ ಮರಳಿ ಬಾ, ನಿನಗಾಗಿ ನಾನು ಕಾಯುತ್ತಿದ್ದೇನೆ. ಆದರೆ ನೀನು ಕೇಳುತ್ತಿಲ್ಲ. ನೀನು ಹೋಗಿದ್ದೀಯಾ, ಎಲ್ಲಿಗೆ ಹೋದೆ, ಗಂಧರ್ವರಿಗೆ ಹಾಡು ಹೇಳಲು ಹೋದೆಯಾ? ಈಗ ಜಗತ್ತಿನಲ್ಲಿ ನನಗೆ ಏನನ್ನೂ ನೋಡಲು ಆಗುತ್ತಿಲ್ಲ. ಶಬ್ದಗಳನ್ನು ಕಳೆದುಕೊಂಡಿದ್ದೇನೆ, ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಯಾವುದೇ ದುಃಖಕ್ಕೆ ಒಂದು ಮಿತಿಯಿದೆ. ಆದರೆ ಈ ದುಃಖಕ್ಕೆ ಮಿತಿಯಿಲ್ಲ ಎಂದು ಹೇಳಿದ್ದರು.

  • ಅಭಿಮಾನಿ ಚಪ್ಪಲಿ ಎತ್ತಿಕೊಟ್ಟ ವಿಜಯ್- ಇಳಯದಳಪತಿ ಪ್ರೀತಿಗೆ ನೆಟ್ಟಿಗರು ಫಿದಾ

    ಅಭಿಮಾನಿ ಚಪ್ಪಲಿ ಎತ್ತಿಕೊಟ್ಟ ವಿಜಯ್- ಇಳಯದಳಪತಿ ಪ್ರೀತಿಗೆ ನೆಟ್ಟಿಗರು ಫಿದಾ

    ಚೆನ್ನೈ: ತಮಿಳು ನಟ ದಳಪತಿ ವಿಜಯ್ ಅಭಿಮಾನಿ ಬಳಗ ದೊಡ್ಡದು. ವಿದೇಶಗಳಲ್ಲಿಯೂ ಅವರ ಫ್ಯಾನ್ಸ್ ಇದ್ದಾರೆ. ವಿಜಯ್ ಸಹ ಅಷ್ಟೇ ಪ್ರೀತಿಯನ್ನು ಅಭಿಮಾನಿಗಳಿಗೆ ತೋರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತಿಮ ದರ್ಶನದ ವೇಳೆ ನಡೆದ ಘಟನೆಯೇ ಸಾಕ್ಷಿಯಾಗಿದೆ.

    ದಳಪಥಿ ವಿಜಯ್ ತಮ್ಮ ವಿಶಿಷ್ಟ ನಟನೆ ಮೂಲಕವೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಹೋದಲ್ಲೆಲ್ಲ ಜನ ಸಾಗರವೇ ಸೇರುತ್ತದೆ. ಹೀಗೆ ಇತ್ತೀಚೆಗೆ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದಾಗ ಅವರ ಅಂತಿಮ ದರ್ಶನಕ್ಕೆ ವಿಜಯ್ ಸಹ ಹೋಗಿದ್ದರು. ಈ ವೇಳೆ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಜಯ್ ಎಸ್‍ಪಿಬಿ ಅಂತಿಮ ದರ್ಶನ ಪಡೆದು ಹೊರ ಬರುತ್ತಿದ್ದ ವೇಳೆ ಹೆಚ್ಚು ಗದ್ದಲ ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಹೀಗೆ ನೂಕು ನುಗ್ಗಲ ಮಧ್ಯೆ ವಿಜಯ್ ಅವರಿಗೆ ಜಾಗ ಮಾಡಿ ಕೊಡುವ ವೇಳೆ ಅಭಿಮಾನಿಯೊಬ್ಬರ ಚಪ್ಪಲಿ ಕಾಲಿಗೆ ಸಿಕ್ಕಿಕೊಂಡು ಬಿದ್ದಿತ್ತು. ಇದನ್ನು ಕಂಡ ವಿಜಯ್ ಚಪ್ಪಲಿ ಮೇಲಕ್ಕೆ ಎತ್ತಿ ನೀಡಿದ್ದಾರೆ. ಇದು ಅವರ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳ ಕುರಿತು ಥಳಪತಿ ವಿಜಯ್ ಅವರಿಗೆ ಇರುವ ಪ್ರೀತಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

    ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ (74) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನಡೆಸಲಾಯಿತು. ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನ ರೆಡ್‍ಹಿಲ್ ಫಾರ್ಮ್ ಹೌಸ್‍ನಲ್ಲಿ ಎಸ್‍ಪಿಬಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಎಸ್‍ಪಿಬಿ ಪುತ್ರ ಚರಣ್ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದಾರಾಬಾದ್ ನಿಂದ ಪುರೋಹಿತರ ತಂಡ ಆಗಮಿಸಿತ್ತು.

  • ಚೆನ್ನೈ ಫಾರ್ಮ್‍ಹೌಸ್‍ನಲ್ಲಿ ಎಸ್‍ಪಿಬಿ ಅಂತ್ಯಸಂಸ್ಕಾರ- ಬೆಳಗ್ಗೆ 11 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ

    ಚೆನ್ನೈ ಫಾರ್ಮ್‍ಹೌಸ್‍ನಲ್ಲಿ ಎಸ್‍ಪಿಬಿ ಅಂತ್ಯಸಂಸ್ಕಾರ- ಬೆಳಗ್ಗೆ 11 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ

    – ಅಂತಿಮ ದರ್ಶನಕ್ಕಾಗಿ ಕಿಕ್ಕಿರಿದು ನೆರೆದ ಜನ

    ಚೆನ್ನೈ: ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಹ್ಮಣಂ ಅವರ ಅಂತ್ಯಸಂಸ್ಕಾರ ಇಂದು ಚೆನ್ನೈನ ರೆಡ್‍ಹಿಲ್ ಫಾರ್ಮ್ ಹೌಸ್‍ನಲ್ಲಿ ನಡೆಯಲಿದೆ.

    ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಫಾರ್ಮ್ ಹೌಸ್‍ನಲ್ಲಿ  ಎಸ್‍ಪಿಬಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದ್ದು, ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೂ ಸಾರ್ವಜನಿಕರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

    ತಿರುವಳ್ಳೂರ್ ಎಸ್‍ಪಿ ಎಸ್‍ಪಿಬಿ ಅವರ ಅಂತ್ಯಸಂಸ್ಕಾರದ ಕುರಿತ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ. ತಮ್ಮ ನೆಚ್ಚಿನ ಹಾಡುಗಾರನ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಉಳಿದಂತೆ ಅಂತ್ಯಸಂಸ್ಕಾರ ನಡೆಯುವ ಫಾರ್ಮ್ ಹೌಸ್‍ಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಸದ್ಯ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

    ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್‍ಪಿಬಿ ಅವರು ಕಳೆದ 51 ದಿನಗಳಿಂದ ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನ ವಿರುದ್ಧ ಸಾವು ಬದುಕಿನ ಹೋರಾಟ ನಡೆಸಿದ್ದ ಅವರಿಗೆ ಚಿಕಿತ್ಸೆ ಬಳಿಕ ಕೊರೊನಾ ನೆಗೆಟಿವ್ ದೃಢವಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನ 1.04ರ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದರು.

    ಎಸ್‍ಪಿಬಿ ನಿಧನದ ಹಿನ್ನೆಯಲ್ಲಿ ರಾಜ್ಯದಲ್ಲಿ ಶುಕ್ರವಾರ ಶೋಕಾಚರಣೆ ಆಚರಿಸಲಾಯಿತು. ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿತ್ತು. ವಿಧಾನಸಭಾ ಕಲಾಪದಲ್ಲೂ ದಿಗ್ಗಜ ಗಾಯಕನ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

  • ನಿರೂಪಕನಾಗಿ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತಂದ ಎಸ್‍ಪಿಬಿ

    ನಿರೂಪಕನಾಗಿ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತಂದ ಎಸ್‍ಪಿಬಿ

    ಬೆಂಗಳೂರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯಕ ಮಾತ್ರವಲ್ಲದೆ ನಟ, ಡಬ್ಬಿಂಗ್ ಆರ್ಟಿಸ್ಟ್ ಹೀಗೆ ಬೆಳ್ಳಿ ತೆರೆಯಲ್ಲಿ ಮಿಂಚಿ ನಂತರ ಕಿರುತೆರೆಗೂ ಕಾಲಿಟ್ಟು ಪ್ರಸಿದ್ಧಿ ಪಡೆದಿದ್ದರು. ಎದೆ ತುಂಬಿ ಹಾಡಿದೆನು ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು.

    90ರ ದಶಕದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಿರುತೆರೆಗೂ ಎಂಟ್ರಿ ಕೊಟ್ಟರು. ತೆಲುಗಿನ ಪಾಡುತಾ ತಿಯಗಾ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಮನೆಮಾತಾದರು. ಕನ್ನಡದಲ್ಲಿ ಸಹ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಆಗಿ ನಿರೂಪಕನಾಗಿ ಗಮನ ಸೆಳೆದರು. ಈ ಕಾರ್ಯಕ್ರಮಗಳಿಂದ ಅದೆಷ್ಟೋ ಸಂಗೀತ ಪ್ರತಿಭೆಗಳು ಬೆಳಕಿಗೆ ಬಂದವು. ಅಲ್ಲದೆ ಈ ಕಾರ್ಯಕ್ರಮದಿಂದ ಎಸ್‍ಪಿಬಿ ಕನ್ನಡಿಗರ ಮನೆ ಮಾತಾದರು.

    ಬಾಲು ಗಾನಕ್ಕೆ ಪ್ರಶಸ್ತಿಗಳ ಸುರಿಮಳೆ
    ಎಸ್‍ಪಿಬಿ ಗಾನಕ್ಕೆ ಮಂತ್ರಮುಗ್ಧರಾಗದೆ ಇರುವವರೇ ಇಲ್ಲ ಎನ್ನಬಹುದು. ಬಾಲು ಗಾಯನಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ಶಂಕರಾಭರಣಂ ಸಿನಿಮಾಗೆ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತು.್ತ ಹಿಂದಿಯ ಏಕ್ ದುಜೆ ಕೇಲಿಯೇ ಸಿನಿಮಾ, ಕನ್ನಡದ ಪಂಚಾಕ್ಷರಿ ಗವಾಯಿ, ತೆಲುಗಿನ ರುದ್ರವೀಣ, ತಮಿಳಿನ ಮಿನ್ನರ ಕನ್ನವು ಸಿನಿಮಾಗಳಿಗೂ ರಾಷ್ಟ್ರೀಯ ಪ್ರಶಸ್ತಿ ಅರಸಿ ಬಂದಿತ್ತು. ಮೈನೇ ಪ್ಯಾರ್ ಕಿಯಾ ಚಿತ್ರಕ್ಕೆ ಮೊದಲ ಬಾರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು. ಎನ್‍ಟಿಆರ್ ಪ್ರಶಸ್ತಿ, 8 ನಂದಿ ಪ್ರಶಸ್ತಿಗಳು ದಕ್ಕಿದ್ದವು. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಅದೇಕೋ ಬಾಲು ಹೆಸರನ್ನು ಪ್ರಶಸ್ತಿಗಳಿಗೆ ಪರಿಗಣಿಸಲೇ ಇಲ್ಲ ಎನ್ನುವುದು ಬೇಸರದ ಸಂಗತಿ.

  • ನಿರ್ದೇಶಕರು ಮಾತ್ರವಲ್ಲ ನಟರಿಂದಲೂ ಎಸ್‍ಪಿಬಿ ಹಾಡಿಗೆ ಪಟ್ಟು

    ನಿರ್ದೇಶಕರು ಮಾತ್ರವಲ್ಲ ನಟರಿಂದಲೂ ಎಸ್‍ಪಿಬಿ ಹಾಡಿಗೆ ಪಟ್ಟು

    ಬೆಂಗಳೂರು: ಕೇವಲ ಸಂಗೀತ ನಿರ್ದೇಶಕರು ಮಾತ್ರವಲ್ಲ. ತಮ್ಮ ಸಿನಿಮಾಗಳ ಹಾಡುಗಳಿಗೆ ಬಾಲು ಕಂಠ ಕಡ್ಡಾಯವಾಗಿ ಬೇಕೇಬೇಕು ಎಂದು ಖ್ಯಾತ ಸಿನಿಮಾ ನಟರು ಪಟ್ಟು ಹಿಡಿದು ಕುಳಿತುಕೊಳ್ಳುತ್ತಿದ್ದರು. ಬಾಲು ಧ್ವನಿಗಾಗಿ ತಿಂಗಳುಗಟ್ಟಲೇ ಕಾದಿದ್ದು ಉಂಟು.

    ಕನ್ನಡದಲ್ಲಿ ಶ್ರೀನಾಥ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‍ನಾಗ್, ಅನಂತ್‍ನಾಗ್, ರವಿಚಂದ್ರನ್ ಸಿನಿಮಾಗಳಲ್ಲಿ ಬಾಲು ಹಾಡುಗಳು ಇರಲೇಬೇಕಿತ್ತು. ತೆಲುಗಿನಲ್ಲಿ ಎನ್‍ಟಿಆರ್, ಎಎನ್‍ಆರ್,ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ತಮಿಳಿನಲ್ಲಿ ಎಂಜಿಆರ್, ಶಿವಾಜಿಗಣೇಶನ್, ಕಮಲ್ ಹಾಸನ್, ರಜಿನಿಕಾಂತ್ ಅವರ ಸಿನಿಮಾಗಳಿಗೂ ಎಸ್‍ಪಿಬಿ ಗಾಯನ ಕಡ್ಡಾಯವಾಗಿದ್ದ ಕಾಲವೊಂದಿತ್ತು. ಇದನ್ನೂ ಓದಿ: ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದ ಬಾಲುಗೆ ಪ್ರಶಸ್ತಿ ಸಿಕ್ಕಿತ್ತು

    ರಾಜ್‍ಕುಮಾರ್, ಶಿವರಾಜ್‍ಕುಮಾರ್ ಸಿನಿಮಾಗಳಲ್ಲೂ ಎಸ್‍ಪಿಬಿ ಹಾಡಿದ್ರು. ಎಷ್ಟೋ ದಿನಗಳು, ಮನೆಗೆ ಹೋಗಲಾಗದೇ ಬರೀ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಓಡಾಡುತ್ತಾ ಬ್ಯುಸಿ ಇದ್ದ ದಿನಗಳು ಇವೆ. ಒಂದೇ ದಿನದಲ್ಲಿ 10ರಿಂದ 15 ಹಾಡುಗಳನ್ನು ಹಾಡಿದ ಗರಿಮೆ ಕೇವಲ ಎಸ್ಪಿಬಿಗೆ ಮಾತ್ರ ದಕ್ಕುತ್ತದೆ. ಜೊತೆಗೆ ಒಂದೇ ಕುಟುಂಬದ ಮೂರು ತಲೆಮಾರುಗಳ ನಟರಿಗೆ ಹಾಡು ಹಾಡಿದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

    ತಮ್ಮ ಕಾಲಾವಧಿಯ ಖ್ಯಾತನಾಮ ಸಂಗೀತ ನಿರ್ದೇಶಕರೊಂದಿಗೆ ಹಾಡುವ ಅವಕಾಶ ಎಸ್‍ಪಿಬಿಗೆ ಸಿಕ್ಕಿತ್ತು. 1969ರಿಂದಲೇ ಬಾಲು ಫುಲ್ ಬ್ಯುಸಿ ಆದರು. ಪೆಂಡ್ಯಾಲ, ಎಂಎಸ್ ವಿಶ್ವನಾಥನ್, ಕೆವಿ ಮಹದೇವನ್, ಇಳಯರಾಜ, ಜಿಕೆ ವೆಂಟಕೇಶ್, ಚಕ್ರವರ್ತಿ, ರಾಜನ್-ನಾಗೇಂದ್ರ, ರಾಜ್-ಕೋಟಿ, ಕೀರವಾಣಿ, ಹಂಸಲೇಖ ಅವರಂತಹ ನಿರ್ದೇಶಕರ ಸಾರಥ್ಯದಲ್ಲಿ ಕೆಲವು ಸಾವಿರದಷ್ಟು ಮರೆಯಲಾಗದ ಹಾಡುಗಳನ್ನು ಬಾಲು ಹಾಡಿದ್ರು. ಇತ್ತೀಚಿನ ಸಂಗೀತ ನಿರ್ದೇಶಕರ ಜೊತೆಗೂ ಎಸ್‍ಪಿಬಿ ಕೆಲಸ ಮಾಡಿದ್ದರು.

  • ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದ ಬಾಲುಗೆ ಪ್ರಶಸ್ತಿ ಸಿಕ್ಕಿತ್ತು

    ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದ ಬಾಲುಗೆ ಪ್ರಶಸ್ತಿ ಸಿಕ್ಕಿತ್ತು

    ಬೆಂಗಳೂರು: ಗಾಯಕರಾಗಿ ಬಿಡುವಿಲ್ಲದ ದಿನಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೆಲಸ ಮಾಡುತ್ತಿದ್ದರು.

    ಹೌದು ಕೇವಲ ಗಾಯಕರಾಗಿ ಮಾತ್ರವಲ್ಲ ಡಬ್ಬಿಂಗ್ ಆರ್ಟಿಸ್ಟ್ ಆಗಿ, ಕಲಾವಿದರಾಗಿ ಸಹ ಎಸ್‍ಪಿಬಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕೆ.ಬಾಲಂಚಂದರ್ ನಿರ್ದೇಶನದ ಮನ್ಮಥಲೀಲ ಸಿನಿಮಾದಲ್ಲಿ ಕಮಲ್ ಹಾಸನ್ ಗಂಟಲು ಕೈಕೊಟ್ಟ ಹಿನ್ನೆಲೆಯಲ್ಲಿ ಎಸ್‍ಪಿಬಿ ಡಬ್ಬಿಂಗ್ ಆರ್ಟಿಸ್ಟ್ ಆಗಬೇಕಾಯ್ತು. ಮುಂದೆ ರಜಿನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ.ಭಾಗ್ಯರಾಜ್, ಅನಿಲ್ ಕಪೂರ್, ಗಿರೀಶ್ ಕಾರ್ನಾಡ್, ಜೆಮಿನಿ ಗಣೇಶನ್, ಅರ್ಜುನ್ ಸರ್ಜಾ, ರಘುವರನ್, ಸುಮನ್ ಸೇರಿ ಹಲವರಿಗೆ ಧ್ವನಿ ಆಗಿದ್ದರು.

    ದಶಾವತಾರಂ ಸಿನಿಮಾದಲ್ಲಿ ಕಮಲ್ ಹಾಸನ್ ಅವರ ಏಳು ಪಾತ್ರಗಳಿಗೆ ಎಸ್‍ಪಿಬಿ ಡಬ್ಬಿಂಗ್ ಹೇಳಿದ್ದು ವಿಶೇಷ. ಅನ್ನಮಯ್ಯ ಸಿನಿಮಾದಲ್ಲಿ ಸುಮನ್‍ಗೆ ಡಬ್ಬಿಂಗ್ ಹೇಳಿದ್ದ ಬಾಲುಗೆ ಉತ್ತಮ ಡಬ್ಬಿಂಗ್ ಆರ್ಟಿಸ್ಟ್ ಎಂದು ನಂದಿ ಅವಾರ್ಡ್ ನೀಡಲಾಗಿತ್ತು. ಗಾಂಧಿ ಸಿನಿಮಾದಲ್ಲಿ ಲೀಡ್ ರೋಲ್‍ನಲ್ಲಿ ನಟಿಸಿದ್ದ ಕಿಂಗ್ ಬೆನ್‍ಸ್ಲೇಗೂ ಎಸ್‍ಪಿಬಿ ಡಬ್ಬಿಂಗ್ ಹೇಳಿದ್ದರು. ಈ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು.

    ಎಸ್‍ಪಿಬಿಯೊಳಗಿನ ನಟ
    ತೆರೆ ಹಿಂದೆ ಗಾಯಕನಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೋಟಿ ಕೋಟಿ ಅಭಿಮಾನಿಗಳನ್ನು ರಂಜಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಟನಾಗಿ ಸಹ ಹಲವು ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಕನ್ನಡದಲ್ಲಿ ಬಾಳೊಂದು ಚದುರಂಗ, ತಿರುಗುಬಾಣ, ಸಂದರ್ಭ, ಹುಲಿಯಾ, ಮುದ್ದಿನ ಮಾವ, ನಾನು ನನ್ನ ಹೆಂಡ್ತಿ, ಮಾಂಗಲ್ಯಂ ತಂತುನಾನೇನಾ, ಹೆತ್ತರೆ ಹೆಣ್ಣನ್ನೇ ಹೇರಬೇಕು, ಮಹಾ ಎಡಬಿಡಂಗಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗಿನಲ್ಲಿ ಮಿಥುನಂ, ಪವಿತ್ರಬಂಧಂ ಸೇರಿ ನೂರಾರು ಸಿನಿಮಾಮಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಎಸ್‍ಪಿಬಿ ಬಣ್ಣ ಹಚ್ಚಿದ್ದು ತೆಲುಗಿನ ದೇವದಾಸು ಸಿನಿಮಾಗೆ.

  • ಸುದ್ದಿ ಕೇಳಿ ದುಃಖವಾಯಿತು, ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಲಿ- ಪೇಜಾವರಶ್ರೀ

    ಸುದ್ದಿ ಕೇಳಿ ದುಃಖವಾಯಿತು, ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಲಿ- ಪೇಜಾವರಶ್ರೀ

    ಉಡುಪಿ: ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ ವಿಚಾರ ತಿಳಿದು ಮನಸ್ಸಿಗೆ ಅತೀವ ಖೇದವಾಗಿದೆ. ಸಂಗೀತ ಲೋಕವನ್ನು ಪ್ರೀತಿಸುವ ಎಲ್ಲರಿಗೆ ಇದು ದುಃಖಕರ ವಿಚಾರ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪದ ಸೂಚಿಸಿದ್ದಾರೆ.

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಕುರಿತು ಮಾತನಾಡಿದ ಅವರು, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮನೆಮಾತಾಗಿದ್ದರು. ಕೋಟ್ಯಂತರ ಸಂಗೀತ ರಸಿಕರನ್ನು ಸೃಷ್ಟಿ ಮಾಡಿದ್ದರು. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾದದ್ದು. ಅವರ ಅನಾರೋಗ್ಯದ ಸಂದರ್ಭ ಕೂಡ ಬಹಳಷ್ಟು ಮಂದಿ ಅವರಿಗಾಗಿ ಪ್ರಾರ್ಥನೆ ಮಾಡಿದ್ದರು ಎಂದು ಸ್ವಾಮೀಜಿ ಹೇಳಿದರು.

    ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಬೇಕು. ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ. ಅವರ ಕುಟುಂಬಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಪೇಜಾವರಶ್ರೀ ಹೇಳಿದರು.