Tag: sp balasubhramandyam

  • ಗಮನಸೆಳೀತಿದೆ 5.8 ಅಡಿ ಎತ್ತರ, 339 ಕೆಜಿ ತೂಕದ ಎಸ್‍ಪಿಬಿ ಚಾಕ್ಲೇಟ್ ಪ್ರತಿಮೆ

    ಗಮನಸೆಳೀತಿದೆ 5.8 ಅಡಿ ಎತ್ತರ, 339 ಕೆಜಿ ತೂಕದ ಎಸ್‍ಪಿಬಿ ಚಾಕ್ಲೇಟ್ ಪ್ರತಿಮೆ

    ಚೆನ್ನೈ: ದಿವಂಗತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥವಾಗಿ ಚಾಕ್ಲೇಟ್ ಪ್ರತಿಮೆ ನಿರ್ಮಾಣವಾಗಿದೆ.

    ಹೌದು. ಪುದುಚೇರಿಯ ಅಂಗಡಿ ಮಾಲೀಕರೊಬ್ಬರು ಚಾಕ್ಲೇಟ್ ನಲ್ಲಿ ಗಾಯಕರ ಪ್ರತಿಮೆ ನಿರ್ಮಿಸಿದ್ದು, ಆಕರ್ಷಣೀಯವಾಗಿದೆ. 5.8 ಅಡಿ ಎತ್ತರ 339 ಕೆ.ಜಿ. ತೂಕದ ಎಸ್‍ಪಿಬಿ ಚಾಕ್ಲೇಟ್ ಪ್ರತಿಮೆ ಪುದುಚೇರಿಯ ಮಿಷನ್ ಸ್ಟ್ರೀಟ್‍ನಲ್ಲಿರುವ ಅಂಗಡಿಯಲ್ಲಿ ತಯಾರಿಸಿ ಪ್ರದರ್ಶಿಸಲಾಗಿದೆ. ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕ್ಲೇಟ್ ನಿಂದಲೇ ರೆಡಿ ಮಾಡಲಾಗಿದೆ.

    ಕ್ರಿಸ್‍ಮಸ್ ಮತ್ತು ಹೊಸ ವರ್ಷ ಹಿನ್ನೆಲೆಯಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲೀಕರು ಈ ಪ್ರತಿಮೆಯ ಪ್ರದರ್ಶನ ಏರ್ಪಡಿಸಿದ್ದಾರೆ. ಇದನ್ನು ಜನವರಿ 3 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ ಎಂದು ಪ್ರತಿಮೆಯನ್ನು ತಯಾರಿಸಿದ ರಾಜೇಂದ್ರನ್ ಹೇಳಿದ್ದಾರೆ.

    ಅಂಗಡಿಯಲ್ಲಿ ಗಣ್ಯರ ಪ್ರತಿಮೆಗಳನ್ನು ಪ್ರದರ್ಶನಕ್ಕೆ ಇಡುವುದು ಇದೇ ಮೊದಲಲ್ಲ. ಈ ಹಿಂದೆ ಎ.ಪಿ.ಜೆ ಅಬ್ದುಲ್ ಕಲಾಂ, ನಟ ರಜನಿಕಾಂತ್ ಹಾಗೂ ಕ್ರಿಕೆಟಿಗರ ಚಾಕ್ಲೇಟ್ ಪ್ರತಿಮೆಗಳನ್ನು ಕೂಡ ತಯಾರಿಸಿ ಪ್ರದರ್ಶಿಸಲಾಗಿತ್ತು.

  • ಯಮ ನಿಷ್ಕರುಣಿ, ಎಸ್‍ಪಿಬಿಗಾಗಿ ಮಾಡಿದ ಪ್ರಾರ್ಥನೆ ಫಲಿಸಲಿಲ್ಲ – ಡಿಕೆಶಿ ಸಂತಾಪ

    ಯಮ ನಿಷ್ಕರುಣಿ, ಎಸ್‍ಪಿಬಿಗಾಗಿ ಮಾಡಿದ ಪ್ರಾರ್ಥನೆ ಫಲಿಸಲಿಲ್ಲ – ಡಿಕೆಶಿ ಸಂತಾಪ

    ಬೆಂಗಳೂರು: ಖ್ಯಾತ ಬಹುಭಾಷಾ ಗಾಯಕ ಹಾಗೂ ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

    ‘ಈ ದೇಶ ಕಂಡ ದಿಗ್ಗಜ ಗಾಯಕ ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನು ಅಗಲಿರುವ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ. ಕಳೆದ ಮೂರು ದಿನಗಳಿಂದ ಒಂದಾದ ಮೇಲೊಂದರಂತೆ ಕೆಟ್ಟ ಸುದ್ದಿಗಳೇ ಬರುತ್ತಿರುವುದು ನೋವಿನ ವಿಚಾರ. ಅವರು ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿ 51 ದಿನಗಳು ಕಳೆದಿದ್ದು, ನಮ್ಮೆಲ್ಲರಿಗೂ ಅವರ ಆರೋಗ್ಯದ ಬಗ್ಗೆ ಚಿಂತೆ ಇತ್ತು. ಲಕ್ಷಾಂತರ ಅಭಿಮಾನಿಗಳು ಅವರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ ಆ ಯಮ ನಿಷ್ಕರುಣಿ. ಹೀಗಾಗಿ ನಮ್ಮ ಪ್ರಾರ್ಥನೆ ಫಲಿಸಲಿಲ್ಲ.

    ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಾಲಸುಬ್ರಹ್ಮಣ್ಯಂ ತಮ್ಮ ಕಂಠ ಸಿರಿಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳಿ ನಾವು ಬೆಳೆದಿದ್ದೇವೆ. ಅವರ ಸಾಧನೆಗೆ ಪದ್ಮ ಶ್ರೀ ಹಾಗೂ ಪದ್ಮ ಭೂಷಣ ಪ್ರಶಸ್ತಿ ಸೇರಿದಂತೆ 6 ಬಾರಿ ರಾಷ್ಟ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಾಯನ ನಿಲ್ಲಿಸಿದ ಎಸ್‌ಪಿ ಬಾಲಸುಬ್ರಹ್ಮಣ್ಯಂ

    ತಮ್ಮ ಸರಳತೆ, ವಿನಯತೆಯಿಂದಲೂ ಅಭಿಮಾನಿಗಳ ಮನಗೆದ್ದಿದ್ದ ಎಸ್‍ಪಿಬಿ ಅವರ ನಿಧನದಿಂದ ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಒಂದು ಅದ್ಭುತ ಯುಗವೇ ಅಂತ್ಯವಾದಂತಾಗಿದೆ. ಅವರ ಮುಗಿಲೆತ್ತರದ ಸಾಧನೆ ಹಾಗೂ ಹಾಡುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತವಾಗಿ ಇರುತ್ತಾರೆ.

    ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ಸದಸ್ಯರು, ಅಭಿಮಾನಿಗಳಿಗೆ ಈ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂಗೀತ ಕ್ಷೇತ್ರದ ಪ್ರಮುಖ ಕೊಂಡಿ ಕಳಚಿದಂತಾಗಿದೆ – ಎಸ್‍ಪಿಬಿ ನಿಧನಕ್ಕೆ ಸಿಎಂ ಸಂತಾಪ

    ಕೊರೊನಾ ಪಾಸಿಟಿವ್ ಬಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್‍ಪಿ ಅವರು ಇಂದು ಮಧ್ಯಾಹ್ನ 1.04ಕ್ಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಗಾನಗಾರುಡಿಗನ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.