Tag: SP Anup Shetty

  • ಎಸ್‍ಪಿ ವಿರುದ್ಧ ಡಿಕೆ ಸುರೇಶ್ ಮತ್ತೆ ಗರಂ: ಡಿಸಿ- ಶಾಸಕ ಮಂಜುನಾಥ್ ಮಾತಿನ ಚಕಮಕಿ

    ಎಸ್‍ಪಿ ವಿರುದ್ಧ ಡಿಕೆ ಸುರೇಶ್ ಮತ್ತೆ ಗರಂ: ಡಿಸಿ- ಶಾಸಕ ಮಂಜುನಾಥ್ ಮಾತಿನ ಚಕಮಕಿ

    ರಾಮನಗರ: ರಾಮನಗರದ ಎಸ್‍ಪಿ ಅನೂಪ್ ಶೆಟ್ಟಿ ವಿರುದ್ಧ ಕಳೆದ ನವೆಂಬರ್‌ನಲ್ಲಿ ಗರಂ ಆಗಿ ವಾರ್ನ್ ನೀಡಿದ್ದ ಸಂಸದ ಡಿ.ಕೆ.ಸುರೇಶ್ ಇಂದು ಕೂಡ ಗರಂ ಆಗಿದ್ದಲ್ಲದೇ, ಸಭೆಗೆ ಬರುವಂತೆ ಹೇಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಪ್ರಸಂಗ ರಾಮನಗರದ ಜಿಲ್ಲಾ ಪಂಚಾಯತ್‍ನಲ್ಲಿ ನಡೆಯಿತು.

    ಒಂದೆಡೆ ಎಸ್‍ಪಿ ವಿರುದ್ಧ ಸಂಸದ ಸುರೇಶ್ ಗರಂ ಆಗಿದ್ದರೆ, ಅದೇ ಸಭೆಯಲ್ಲಿ ಜೆಡಿಎಸ್ ಶಾಸಕ ಎ.ಮಂಜುನಾಥ್ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ವಿರುದ್ಧ ಕಿಡಿಕಾರಿದರು. ಅಷ್ಟೇ ಅಲ್ಲದೆ ದಿಶಾ ಸಭೆಯಲ್ಲಿಯೇ ನೇರಾನೇರವಾಗಿ ಮಾತಿನ ಚಕಮಕಿ ಸಹ ನಡೆಯಿತು. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಕರೆದಿದ್ದ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಕಾದಾಟಕ್ಕೆ ದಿಶಾ ಸಭೆ ವೇದಿಕೆಯಾಗಿತ್ತು.

    ಜಿಲ್ಲಾಡಳಿತದಿಂದ ಜನಪ್ರತಿನಿಧಿಗಳನ್ನ ನಿರ್ಲಕ್ಷ್ಯ ಮಾಡಲಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ನಡೆಯುವ ಕೆಲಸಗಳನ್ನು ಸಹ ತಮ್ಮ ಗಮನಕ್ಕೆ ತರದೇ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ತಮ್ಮ ಅನುದಾನದಲ್ಲಿ ಕೆಲಸ ಮಾಡುತ್ತಿರುವುದಲ್ಲ ಅದರ ಬಗ್ಗೆ ಮಾಹಿತಿ ನೀಡಬೇಕೆಂದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಎ.ಮಂಜುನಾಥ್ ಅಸಮಧಾನ ವ್ಯಕ್ತಪಡಿಸಿದರು.

    ಶಾಸಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು, ನಾನು ಹೇಳಿರುವುದನ್ನು ತಿರುಚಿ ಹೇಳುವುದಲ್ಲ. ಗದರಿ ಮಾತನಾಡಬೇಡಿ ಎಲ್ಲವನ್ನೂ ತಮ್ಮ ಗಮನಕ್ಕೆ ತಂದು ಕೆಲಸ ಮಾಡಬೇಕೆಂದೇನಿಲ್ಲ ಎಂದು ಪ್ರತ್ಯುತ್ತರ ನೀಡಿದರು. ಇಬ್ಬರ ಮಾತಿನ ಚಕಮಕಿ ನೋಡಿ ಸಂಸದ ಸುರೇಶ್ ಕೂಡ ಕೆಲಕಾಲ ತಬ್ಬಿಬ್ಬಾದರು.

    ಸಭೆಗೆ ಹಾಜರಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಸಂಸದ ಡಿ.ಕೆ.ಸುರೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ತಡಬಡಾಯಿಸಿದರು. ಅಧಿಕಾರಿಗಳಿಗೆ ಸಭೆಯಲ್ಲಿಯೇ ಚಳಿ ಬಿಡಿಸುವ ಮೂಲಕ ಸಂಸದ ಖಡಕ್ ಕ್ಲಾಸ್ ತೆಗೆದುಕೊಂಡರು.

    2019ರ ನವೆಂಬರ್‌ನಲ್ಲಿ ನಡೆದ ದಿಶಾ ಸಭೆಗೆ ಗೈರಾಗಿದ್ದ ರಾಮನಗರ ಎಸ್‍ಪಿ ಅನೂಪ್ ಎ ಶೆಟ್ಟಿ ಇಂದು ಕೂಡ ಗೈರಾಗಿದ್ದರು. ಹೀಗಾಗಿ ಎಸ್‍ಪಿ ಅನೂಪ್ ಶೆಟ್ಟಿ ವಿರುದ್ಧ ಗರಂ ಆದ ಡಿ.ಕೆ.ಸುರೇಶ್ ಅವರು, ಜಿಲ್ಲೆಯಲ್ಲಿ ಕ್ರೈಂ ರೇಟ್ ಜಾಸ್ತಿ ಇದೆ ಅಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಹೋಟೆಲ್, ಅಂಗಡಿಗಳನ್ನು ರಾತ್ರಿ 11 ಗಂಟೆ ನಂತರ ಬಂದ್ ಮಾಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಂತೆ ಎಸ್‍ಪಿಯನ್ನ ಸಭೆಗೆ ಕರೆಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಸ್ವತಃ ಜಿಲ್ಲಾಧಿಕಾರಿಯೇ ಎಸ್‍ಪಿಗೆ ಕರೆ ಮಾಡಿ ಬರುವಂತೆ ಮನವಿ ಮಾಡಿದರೂ ಎಸ್‍ಪಿ ಅನೂಪ್ ಶೆಟ್ಟಿ ಮಾತ್ರ ಸಭೆಗೆ ಬರಲೇ ಇಲ್ಲ.

    ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಲು ಕರೆಯಲಾಗಿದ್ದ ದಿಶಾ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಮಾತಿನ ಸಮರಕ್ಕೂ ವೇದಿಕೆಯಾಯಿತು. ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವಿನ ಸಮನ್ವಯತೆ ಇಲ್ಲ ಎಂಬುದು ಎದ್ದು ಕಾಣುತ್ತಿತ್ತು.

  • ಮಾಫಿಯಾಗಳಿಗೆ ಬ್ರೇಕ್ ಹಾಕಿ ಮಫ್ತಿಯಲ್ಲೇ ರೇಡ್ ಮಾಡೋ ಕೊಪ್ಪಳದ ಸೂಪರ್ ಕಾಪ್

    ಮಾಫಿಯಾಗಳಿಗೆ ಬ್ರೇಕ್ ಹಾಕಿ ಮಫ್ತಿಯಲ್ಲೇ ರೇಡ್ ಮಾಡೋ ಕೊಪ್ಪಳದ ಸೂಪರ್ ಕಾಪ್

    ಕೊಪ್ಪಳ: ತಾನು ರೈತ ಆಗಬೇಕು ಅಂದುಕೊಂಡಿದ್ದ ಇವರು ಎಂಎಸ್ಸಿ ಮಾಡಿದ ಬಳಿಕ ಹೈಬ್ರಿಡ್ ಟೊಮೆಟೋ ಬಗ್ಗೆ ಪಿಹೆಚ್‍ಡಿ ಮಾಡಿದ್ದರು. ಆದರೆ ಬದುಕಿನ ಮಗ್ಗಲು ವಾಲಿದ್ದು ಪೊಲೀಸ್ ವೃತ್ತಿ ಕಡೆಗೆ.

    ಹೌದು. ಕಾನೂನು ಸುವ್ಯವಸ್ಥೆ ಕಾಪಾಡಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿರೋ ಕೊಪ್ಪಳದ ಎಸ್‍ಪಿ ಆಗಿರೋ ಡಾ. ಅನೂಪ್ ಶೆಟ್ಟಿ ಇಂದಿನ ನಮ್ಮ ಪಬ್ಲಿಕ್ ಹೀರೋ. ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ. ಕೃಷಿ ಕುಟುಂಬದಲ್ಲಿ ಹುಟ್ಟಿದ ಕಾರಣದಿಂದ ಕೃಷಿ ಕಡೆ ಒಲವಿತ್ತು. ಎಂಎಸ್ಸಿ ಓದಿದ ಬಳಿಕ 2013 ರಲ್ಲಿ `ಹೈಬ್ರೀಡ್ ಡೆವಲಪ್ ಮೆಂಟ್ ಇನ್ ಟಮೋಟೋ’ ಎನ್ನುವ ವಿಷಯದಲ್ಲಿ ಪಿಹೆಚ್‍ಡಿ ಪಡೆದರು. ಇದೇ ಸಮಯದಲ್ಲಿ ಐಪಿಎಸ್ ಪಾಸ್ ಮಾಡಿ ಪೊಲೀಸ್ ವೃತ್ತಿಗೆ ಸೇರಿದರು.

    6 ತಿಂಗಳು ದಾವಣಗೆರೆ, ಭಟ್ಕಳದಲ್ಲಿ 1 ವರ್ಷ, ತೀರ್ಥಹಳ್ಳಿಯಲ್ಲಿ ಮೂರು ತಿಂಗಳು ಕೆಲಸ ಮಾಡಿದ ಬಳಿಕ ಕೊಪ್ಪಳ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೊಪ್ಪಳಕ್ಕೆ ಎಸ್ಪಿಯಾಗಿ ಬಂದಾಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಜೋರಾಗಿತ್ತು. ಮಫ್ತಿಯಲ್ಲೇ ಕೆಲಸ ಮಾಡಿ ಎಲ್ಲವನ್ನೂ ಮಟ್ಟ ಹಾಕಿದ್ದಾರೆ.

    ಅನೂಪ್ ಶೆಟ್ಟಿ ಅವರ ಸೇವೆ ನೋಡಿದ ತಿಗರಿ ಗ್ರಾಮದ ಗಂಗಾಧರ ಮತ್ತು ಶ್ರೀದೇವಿ ದಂಪತಿ ತಮ್ಮ ಮಗುವಿಗೆ ಅನೂಪ್ ಶೆಟ್ಟಿ ಅಂತ ನಾಮಕರಣ ಮಾಡಿದ್ದಾರೆ. ಇವರ ಅಭಿಮಾನಿಗಳು ಅನೂಪ್ ಶೆಟ್ಟಿ ಅವರ ಫೇಸ್ ಬುಕ್ ಪೇಜ್ ಕೂಡಾ ತೆರೆದಿದ್ದಾರೆ.

    ವಿಶೇಷ ಏನೆಂದರೆ ಡಾ.ಅನೂಪ್ ಶೆಟ್ಟಿ ಅವರ ಪತ್ನಿ ನಿಶಾ ಜೇಮ್ಸ್ ರಾಯಚೂರು ಜಿಲ್ಲೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡ್ತಿದ್ದಾರೆ.