Tag: sowjanya case

  • ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ – ಸೆರಗೊಡ್ಡಿ ನೆರೆದವರಲ್ಲಿ ನ್ಯಾಯ ಬೇಡಿದ ಸೌಜನ್ಯ ತಾಯಿ

    ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ – ಸೆರಗೊಡ್ಡಿ ನೆರೆದವರಲ್ಲಿ ನ್ಯಾಯ ಬೇಡಿದ ಸೌಜನ್ಯ ತಾಯಿ

    – ಅಮ್ಮ ನನ್ನನ್ನು ಬದುಕಿಸು ಎಂಬ ಕೂಗು ಈಗಲೂ ಕೇಳಿಸುತ್ತೆ ಎಂದ ಕುಸುಮಾವತಿ

    ಮಂಗಳೂರು: ಧರ್ಮಸ್ಥಳ (Dharmasthala) ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ (Sowjanya Case) ಸಂಬಂಧಪಟ್ಟಂತೆ ನೈಜ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಭಾನುವಾರ ಬೆಳ್ತಂಗಡಿಯಲ್ಲಿ (Beltangady) ಬೃಹತ್ ಸಮಾವೇಶ ನಡೆಸಲಾಯಿತು. ಈ ವೇಳೆ ಸೌಜನ್ಯ ತಾಯಿ ಕುಸುಮಾವತಿ ವೇದಿಕೆಯಿಂದ ಕೆಳಗಿಳಿದು ಸೆರಗೊಡ್ಡಿ ನೆರೆದವರಲ್ಲಿ ನ್ಯಾಯ ಬೇಡಿದ್ದಾರೆ.

    ಈ ವೇಳೆ ಮಾತನಾಡಿದ ಅವರು, ನನ್ನ ಮಗಳಿಗೆ ನ್ಯಾಯ ಕೊಡಿಸಲು ಇಡೀ ದೇಶವೇ ಕೂಡಿ ಬಂದಿದೆ. ನನ್ನ ಮಗಳಿಗೋಸ್ಕರ ಇಷ್ಟೊಂದು ಜನ ಸೇರಿದ್ದೀರಿ. ನಮ್ಮ ಮಗುವಿಗೋಸ್ಕರ ನ್ಯಾಯ ಕೇಳಲು ಇಂದು ನಮಗೆ ಪರ್ಮಿಷನ್ ಕೊಟ್ಟಿಲ್ಲ. ಬಜರಂಗದಳದವರೊಂದಿಗೆ ಅಣ್ಣಪ್ಪನಲ್ಲಿ ನ್ಯಾಯ ಕೇಳಲು ಹೋಗಿದ್ದೆ. ನನ್ನನ್ನು ಒಳಗೆ ಹೋಗಲು ಬಿಟ್ಟಿಲ್ಲ. ನನ್ನನ್ನು ಒಂದು ಗಂಟೆ ಹೊರಗಡೆ ಕಾಯಿಸಿದ್ದಾರೆ ಎಂದು ನೋವು ತೋಡಿಕೊಂಡರು.

    ಆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿಯನ್ನು ನಾನು ಇಲ್ಲಿ ನೋಡುತ್ತಿದ್ದೇನೆ. ಖಂಡಿತಾ ನಾನು ಗಟ್ಟಿಯಾಗಿ ಇದ್ದೇನೆ. ಇಷ್ಟು ಜನರ ಶಕ್ತಿ ನನ್ನಲ್ಲಿ ತುಂಬಿದೆ. ಅದು ಎಷ್ಟು ಬಾರಿ ನನ್ನ ಮಗಳನ್ನು ಅತ್ಯಾಚಾರ ಮಾಡಿದ್ರೋ, ನನ್ನ ಮಗಳು ಎಷ್ಟು ನೋವು ತಿಂದಳೋ, 5-6 ಜನ ಅತ್ಯಾಚಾರ ಮಾಡಿದ್ದಾರೆ. ನ್ಯಾಯ ಸಿಗುತ್ತೆ, ಅತ್ಯಾಚಾರಿಗಳು ಸಿಗುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಅಮ್ಮ ನನ್ನನ್ನು ಬದುಕಿಸು ಎಂಬ ಕೂಗು ನನಗೆ ಈಗಲೂ ಕೇಳಿಸುತ್ತೆ. ಅತ್ಯಾಚಾರ ಮಾಡಿ ಕಾಡಲ್ಲಿ ಬಿಸಾಡಿದ್ದಾರೆ. ಅತ್ಯಾಚಾರ ಮಾಡಿ ಬಿಟ್ಟಿದ್ರೂ ತೊಂದರೆ ಇರುತ್ತಿರಲಿಲ್ಲ. ಆದರೆ ಕೊಂದೇ ಬಿಟ್ಟರು. ಇವತ್ತು ನಿಮ್ಮ ಕಾಲ ಬುಡಕ್ಕೆ ಬಂದು ನ್ಯಾಯ ಕೇಳುತ್ತಿದ್ದೇನೆ. ಯಾವುದೇ ಹಣದ ಆಮಿಷಕ್ಕೆ ನ್ಯಾಯವನ್ನು ಬಲಿ ಕೊಡಬೇಡಿ ತಾಯಂದಿರೆ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಬಿಜೆಪಿಯಲ್ಲಿ ನಿಷ್ಠೆ ಬಿಟ್ಟು ಬಕೆಟ್ ಹಿಡಿದವರಿಗೆ ಮನ್ನಣೆ: ಪ್ರದೀಪ್ ಶೆಟ್ಟರ್

    ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಇಂದು ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ ನಡೆದಿದೆ. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸಮಾವೇಶ ನಡೆದಿದೆ. ಪ್ರತಿಭಟನೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ನ್ಯಾಯಾಲಯದ ಸುಪರ್ದಿಯಲ್ಲಿ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಬಿ.ಸಿ.ಪಾಟೀಲ್ ಗರಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌಜನ್ಯ ಪ್ರಕರಣದ ರಹಸ್ಯಗಳನ್ನು ಬಿಚ್ಚಿಟ್ರೆ ನನ್ನನ್ನೂ ಸಾಯಿಸ್ಬೋದು: ವಸಂತ ಬಂಗೇರ

    ಸೌಜನ್ಯ ಪ್ರಕರಣದ ರಹಸ್ಯಗಳನ್ನು ಬಿಚ್ಚಿಟ್ರೆ ನನ್ನನ್ನೂ ಸಾಯಿಸ್ಬೋದು: ವಸಂತ ಬಂಗೇರ

    – ನನ್ನ ಅಂತ್ಯದೊಳಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ

    ಮಂಗಳೂರು: ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ (Vasantha Bangera) ರಹಸ್ಯಗಳನ್ನು ಬಿಚ್ಚಿಟ್ಟರೆ ನನ್ನನ್ನು ಕೂಡ ಸಾಯಿಸಬಹುದು ಎಂದು ಬೆಳ್ತಂಗಡಿಯ (Belthangadi) ಮಾಜಿ ಶಾಸಕ ವಸಂತ ಬಂಗೇರ (Vasantha Bangera) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸಿಬಿಐ ತನಿಖೆಯ ದಾರಿ ತಪ್ಪಿಸಲಾಗಿತ್ತು. ನಾನು ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಸೌಜನ್ಯ ಕೇಸ್ ಸಿಬಿಐಗೆ ವಹಿಸಲು ಆಗ್ರಹಿಸಿದ್ದೆ. ಸಿದ್ದರಾಮಯ್ಯನವರೂ ಕೆಲವರನ್ನು ತುಂಬಾ ಒಳ್ಳೆಯವರು ಎಂದು ನಂಬಿದ್ದರು. ನನ್ನನ್ನು ಕರೆದು ಹೇಳಿದ್ರು ಇದನ್ನು ಪ್ರಸ್ತಾಪ ಮಾಡಬೇಡ, ಈ ಕೇಸನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದರು. ನಾನು ಸುಮಾರು 1 ಗಂಟೆಗೂ ಅಧಿಕ ಕಾಲ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೆ. ಕೇವಲ ಸೌಜನ್ಯ ಪ್ರಕರಣ ಮಾತ್ರವಲ್ಲ, ಬೆಳ್ತಂಗಡಿಯಲ್ಲಿ ನಡೆದ ಅಮಾನುಷ ಹತ್ಯೆಗಳ ಬಗ್ಗೆ ಅವರಿಗೆ ತಿಳಿಸಿದ್ದೆ. ಕೊನೆಗೆ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಿದೆ ಎಂದರು.

    ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನನಗಿತ್ತು. ಆದರೆ ಸಿಬಿಐ ತನಿಖೆಯ ಅರ್ಧದಲ್ಲಿ ಇದರಲ್ಲಿ ಮೋಸ ಇದೆ ಅನ್ನೋದು ನನಗೆ ತಿಳಿಯಿತು. ಅದನ್ನು ಸಾರ್ವಜನಿಕವಾಗಿ ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ನಾನು ಪ್ರಸ್ತಾಪಿಸಿಯೇ ಸಿದ್ಧ. ಒಂದಲ್ಲ ಒಂದು ದಿನ ಕಾಲ ಬರುತ್ತದೆ. ಅವತ್ತು ಸೌಜನ್ಯ ಪ್ರಕರಣದ ದಿಕ್ಕು ತಪ್ಪಿಸಿದ್ದು ಯಾರು, ಅನ್ಯಾಯ ತೊಂದರೆ ಕೊಟ್ಟಿದ್ದು ಯಾರು ಎಂದು ಹೇಳುತ್ತೇನೆ. ಆದರೆ ನನ್ನನ್ನು ಸಾಯಿಸಿದ್ರು ಸಾಯಿಸಬಹುದು. ಅಂತೂ ನನ್ನ ಅಂತ್ಯದೊಳಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಹೇಳಿದರು. ಇದನ್ನೂ ಓದಿ: ಸೊಂಟದ ನೋವು ಬಿಟ್ರೆ ಬೇರೆ ಏನೂ ಸಮಸ್ಯೆ ಆಗಿಲ್ಲ: ವೃಕ್ಷ ಮಾತೆಯ ಹೆಲ್ತ್ ಅಪ್ಡೇಟ್

    ಸಿದ್ದರಾಮಯ್ಯನವರನ್ನು ಏಕಾಂಗಿಯಾಗಿ ಭೇಟಿಯಾಗಿ ಈ ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕೆಂಬುದನ್ನು ಹೇಳುತ್ತೇನೆ. ಇದನ್ನು ಈ ರೀತಿ ತನಿಖೆ ಮಾಡಬೇಕು, ಇಂತವರನ್ನೇ ತನಿಖೆ ಮಾಡಬೇಕು ಎಂದು ಹೇಳುತ್ತೇನೆ. ಖಾಕಿಯವರನ್ನೂ ಕೈ ಕಾಲು ಕಟ್ಟಿ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯನವರಿಗೆ ತಿಳಿಸುತ್ತೇನೆ. ತಪ್ಪು ಮಾಡಿದವನು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅದನ್ನು ಅನುಭವಿಸಲೇ ಬೇಕು. ಒಗ್ಗಟ್ಟಾಗಿ ಸೌಜನ್ಯ ವಿರುದ್ಧವಾದ ದೌರ್ಜನ್ಯ ಹಾಗೂ ಕೊಲೆ ವಿರುದ್ಧ ದೇಶವ್ಯಾಪಿಯಾಗಿ ಪ್ರತಿಭಟನೆಯಾಗುತ್ತದೆ. ಸೌಜನ್ಯ ಕುಟುಂಬಸ್ಥರನ್ನು ಮುಖ್ಯಮಂತ್ರಿಗಳಿಗೆ ಖುದ್ದು ನಾನೇ ಭೇಟಿ ಮಾಡಿಸಿದ್ದೇನೆ. ಮುಖ್ಯಮಂತ್ರಿಗಳಿಗೂ ಸೌಜನ್ಯ ಪ್ರಕರಣದ ಗಂಭೀರತೆ ಅರಿವಿಗೆ ಬಂದಿದೆ ಎಂದರು. ಇದನ್ನೂ ಓದಿ: ನಮ್ಮ ಸಿಂಹ ರಾಹುಲ್‌ ಗಾಂಧಿ ಗೆದ್ದಿದ್ದಾರೆ – ಸಂಸತ್‌ ಸದಸ್ಯತ್ವ ಅನರ್ಹತೆ ವಾಪಸ್‌ ಬೆನ್ನಲ್ಲೇ ಸಿಹಿ ಹಂಚಿ INDIA ಒಕ್ಕೂಟ ಸಂಭ್ರಮ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿಭಟನಾ ಸಭೆಯ ವೇದಿಕೆ ಹತ್ತಲು ಯತ್ನಿಸಿದ ಸೌಜನ್ಯ ತಾಯಿಯನ್ನು ತಡೆದ ಪೊಲೀಸರು

    ಪ್ರತಿಭಟನಾ ಸಭೆಯ ವೇದಿಕೆ ಹತ್ತಲು ಯತ್ನಿಸಿದ ಸೌಜನ್ಯ ತಾಯಿಯನ್ನು ತಡೆದ ಪೊಲೀಸರು

    ಮಂಗಳೂರು: ಧರ್ಮಸ್ಥಳದ (Dharamsthala) ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ (Sowjanya Case) ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನ ಮಾಡಲಾಗುತ್ತಿರುವ ವಿಚಾರದ ಹಿನ್ನೆಲೆ ಪ್ರತಿಭಟನಾ ಸಮಾವೇಶ ಇಂದು ನಡೆಯಿತು. ಈ ಪ್ರತಿಭಟನಾ ಸಭೆಯಲ್ಲಿ ವೇದಿಕೆ ಹತ್ತಲು ಪ್ರಯತ್ನಿಸಿದ ಸೌಜನ್ಯ ತಾಯಿ ಕುಸುಮಾವತಿಯನ್ನು ಪೊಲೀಸರು ತಡೆದಿದ್ದಾರೆ.

    ಉಜಿರೆಯಲ್ಲಿ (Ujire) ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಟನಾ ಸಮಾವೇಶಕ್ಕೆ ಭಕ್ತರು ಆಗಮಿಸಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜೈಕಾರ ಕೂಗಿದ್ದಾರೆ.

    ಈ ವೇಳೆ ಸೌಜನ್ಯ ತಾಯಿ ಕುಸುಮಾವತಿ ಜಸ್ಟೀಸ್ ಫಾಸ್ ಸೌಜನ್ಯ ಎಂದು ಭಿತ್ತಿಪತ್ರವನ್ನು ಹಿಡಿದು ತಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ವೇದಿಕೆ ಹತ್ತಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ – ಎಸ್ಟಿ ಅನುದಾನ ಬಳಕೆ; ಸಂಸತ್‌ನಲ್ಲಿ ಬಿಜೆಪಿ ದಲಿತ ಸಂಸದರ ಪ್ರತಿಭಟನೆ

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕುಸುಮಾವತಿ, ನಾವು ಒಂದು ನ್ಯಾಯ ಕೇಳೋದಕ್ಕಾಗಿ ಬಂದಿದ್ದೆವು. ಮಗಳ ಸಾವಿಗೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬಂದಿದ್ದೆವು. ಆದರೆ ನಮ್ಮನ್ನು ಸ್ಟೇಜ್ ಹತ್ತಲು ಬಿಡಲಿಲ್ಲ. ಮಾತ್ರವಲ್ಲದೇ ನನ್ನ ಮಗನ ಕಾಲರ್ ಅನ್ನು ಹಿಡಿದು ಇಳಿಸಿದರು. ಇದು ಧರ್ಮಸ್ಥಳದ ಧರ್ಮನಾ ಎಂದು ಪ್ರಶ್ನಿಸಿದರು.

    ಸೌಜನ್ಯ ಪರವಾಗಿ ಅವರು ಹೋರಾಟ ಮಾಡುತ್ತಿಲ್ಲ. ಇದೆಲ್ಲಾ ನೆಪವಷ್ಟೇ. ನನ್ನ ಮಗಳ ಹೆಸರನ್ನು ಬಳಸಿ ಹೋರಾಟ ಮಾಡುತ್ತಿದ್ದಾರೆ ಹೊರತು ನನ್ನ ಮಗಳ ಪರವಾಗಿ ಅಲ್ಲ. ನಾವು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರುತನಿಖೆ ಆಗಲೇ ಬೇಕು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಆಗಬೇಕು ಎಂದು ಕುಸುಮಾವತಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು: ಹೆಚ್‌ಡಿಕೆಗೆ ಡಿಕೆಶಿ ಟಾಂಗ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌಜನ್ಯಾ ಕೇಸ್ ಮರು ತನಿಖೆಯಾಗ್ಲಿ- ಧರ್ಮಸ್ಥಳದ ಗೌರವ, ಪ್ರತಿಷ್ಠೆಯನ್ನ ಹೇಗಾದ್ರೂ ಕಾಪಾಡ್ತೇವೆ: VHP

    ಸೌಜನ್ಯಾ ಕೇಸ್ ಮರು ತನಿಖೆಯಾಗ್ಲಿ- ಧರ್ಮಸ್ಥಳದ ಗೌರವ, ಪ್ರತಿಷ್ಠೆಯನ್ನ ಹೇಗಾದ್ರೂ ಕಾಪಾಡ್ತೇವೆ: VHP

    ಮಂಗಳೂರು: ಸೌಜನ್ಯಾ (Sowjanya Case) ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಶ್ವ ಹಿಂದೂ ಪರಿಷತ್ ಧ್ವನಿ ಎತ್ತಿದ್ದು, ಸೌಜನ್ಯಾ ಸಾವಿಗೆ ನ್ಯಾಯ ಸಿಗಬೇಕು ಜೊತೆಗೆ ಧರ್ಮಸ್ಥಳ ಕ್ಷೇತ್ರದ ಗೌರವ, ಪ್ರತಿಷ್ಠೆಯನ್ನು ಯಾವ ಬೆಲೆ ಕೊಟ್ಟಾದರೂ ಕಾಪಾಡುತ್ತೆ ಎಂದಿದೆ.

    ವಿಶ್ವ ಹಿಂದೂ ಪರಿಷತ್ ನ ಹಿರಿಯ ಮುಖಂಡ ಎಂ.ಬಿ.ಪುರಾಣಿಕ್ (MB Puranik) ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸೌಜನ್ಯಾ ಪ್ರಕರಣ ಇತ್ಯರ್ಥ ಆಗದೇ ಇರೋದು ವ್ಯವಸ್ಥೆಗೆ ಕಪ್ಪುಚುಕ್ಕೆ. ಹೀಗಾಗಿ ಮರು ತನಿಖೆ ನಡೆಸಬೇಕೆನ್ನುವುದು ವಿಎಚ್‍ಪಿಯ ಆಗ್ರಹವಾಗಿದೆ. ಹಾಲಿ ನ್ಯಾಯಾಧೀಶರ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.

    ಯಾವ ರೀತಿ ತನಿಖೆಯಾಗಬೇಕೆಂಬುದು ವ್ಯವಸ್ಥೆಗೆ ಬಿಟ್ಟ ವಿಚಾರ. ಆದರೆ ನಿಜವಾದ ಆರೋಪಿ ಯಾರೆಂದು ಗೊತ್ತಾಗಬೇಕು. ಆರೋಪಿಗೆ ಶಿಕ್ಷೆಯಾಗುವವರೆಗೂ ಈ ಪ್ರಕರಣ ಅಂತ್ಯ ಆಗೋದಿಲ್ಲ. ಸೌಜನ್ಯಾಳಿಗೆ ನ್ಯಾಯ ಸಿಗಬೇಕೆಂದು ಕರಾವಳಿಯ ಎಲ್ಲಾ ದೇವಸ್ಥಾನ ಹಾಗೂ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಿದ್ದೇವೆ ಎಂದಿದ್ದಾರೆ. ಜೊತೆಗೆ ಯಾವುದೇ ಕ್ಷೇತ್ರಕ್ಕೆ, ಧರ್ಮಕ್ಕೆ ಅಪಚಾರ ಆದಾಗ ವಿಶ್ವ ಹಿಂದೂ ಪರಿಷತ್ ವಿರೋಧವನ್ನ ಸೂಚಿಸಿದೆ. ಅದೇ ರೀತಿ ಧರ್ಮಸ್ಥಳದಂತಹ ಪುಣ್ಯ ಕ್ಷೇತ್ರಕ್ಕೆ ಅಪಚಾರ ಅವಮಾನವಾಗುವುದನ್ನ ನಾವೂ ಸಹಿಸೋದಿಲ್ಲ ಎಂದು ಹೇಳಿದರು.

    ಕ್ಷೇತ್ರಕ್ಕೆ ಮುತ್ತಿಗೆ ಹಾಕುವುದನ್ನು ನಾವು ಸಹಿಸುವುದಿಲ್ಲ. ಮಾತ್ರವಲ್ಲ ಸೌಜನ್ಯಾ ಪ್ರಕರಣ ಹಾಗೂ ಧರ್ಮಸ್ಥಳ (Dharmasthala) ಕ್ಷೇತ್ರಕ್ಕೂ ತಾಳೆ ಹಾಕುವುದನ್ನ ನಾವೂ ಸಹಿಸೋದಿಲ್ಲ. ಧರ್ಮಸ್ಥಳ ಕ್ಷೇತ್ರ ಇವತ್ತು ನಿನ್ನೆಯದಲ್ಲ, ಕ್ಷೇತ್ರಕ್ಕೆ ಅದರದ್ದೇ ಆದ ಇತಿಹಾಸ ಇದೆ ಎಂದ ಅವರು ಧರ್ಮಸ್ಥಳ ಕ್ಷೇತ್ರದ ಗೌರವವನ್ನ ಪ್ರತಿಷ್ಠೆಯನ್ನ ಯಾವ ಬೆಲೆ ಕೊಟ್ಟಾದರೂ ವಿಶ್ವ ಹಿಂದೂ ಪರಿಷತ್ ಕಾಪಾಡುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೌಜನ್ಯ ಕೇಸ್ – ಸುಳ್ಳು ಹೇಳಿಕೆ, ವದಂತಿಗಳಿಗೆ ಗೊಂದಲಕ್ಕೀಡಾಗಬೇಡಿ: ವೀರೇಂದ್ರ ಹೆಗ್ಗಡೆ ಬೇಸರ

    ಸೌಜನ್ಯ ಕೇಸ್ – ಸುಳ್ಳು ಹೇಳಿಕೆ, ವದಂತಿಗಳಿಗೆ ಗೊಂದಲಕ್ಕೀಡಾಗಬೇಡಿ: ವೀರೇಂದ್ರ ಹೆಗ್ಗಡೆ ಬೇಸರ

    ಮಂಗಳೂರು: ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ (Sowjanya Case) ಸಂಬಂಧಿಸಿದಂತೆ ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಗಬೇಡಿ ಎಂದು ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ (Veerendra Heggade) ಅವರು ವಿನಂತಿಸಿಕೊಂಡಿದ್ದಾರೆ.

    ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಅವರು ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಆರೋಪದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ್ದಾರೆ.

    2012ರಲ್ಲಿ ನಡೆದ ಸೌಜನ್ಯ ಹತ್ಯೆಗೆ ನ್ಯಾಯ ದೊರಕಿಸಿಕೊಡಲು ನಮ್ಮ ಕುಟುಂಬ ಒತ್ತಾಯಿಸಿತ್ತು. ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದೇವೆ. ಸಿಐಡಿ ಬಳಿಕ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ತನಿಖೆ ನಡೆಸಿತ್ತು. ಇದೀಗ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಕ್ಷಾ ಬಂಧನವನ್ನು ಮುಸ್ಲಿಂ ಮಹಿಳೆಯರೊಂದಿಗೂ ಆಚರಿಸಿ: ಬಿಜೆಪಿ ನಾಯಕರಿಗೆ ಮೋದಿ ಕರೆ

    ಇದೀಗ ಮತ್ತೆ ಕ್ಷೇತ್ರ ಹಾಗೂ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಪ್ರಕರಣ ಸರ್ಕಾರ ಹಾಗೂ ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿದೆ. ಹೀಗಾಗಿ ಸರ್ಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ಕೊಡಲು ಒತ್ತಾಯಿಸುತ್ತೇನೆ. ಸುಳ್ಳು ಹೇಳಿಕೆ, ಆಪಾದನೆ, ವದಂತಿಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಗೊಂದಲಕ್ಕೀಡಾಗಬೇಡಿ ಎಂದು ಧರ್ಮಾಧಿಕಾರಿಯವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ – ಒಂದು ಸಭೆ, 5 ವಿಷಯಗಳೇ ಹೈಕಮಾಂಡ್ ಟಾರ್ಗೆಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾನತ್ತೂರಿನಲ್ಲಿ ಆಣೆಗೆ ಬನ್ನಿ ಅಂದ್ರೂ ತಿಮರೋಡಿ ಬಂದಿರಲಿಲ್ಲ: ಸೌಜನ್ಯ ಕೇಸ್ ಆರೋಪ ಹೊತ್ತ ಮೂವರಿಂದ ಸುದ್ದಿಗೋಷ್ಠಿ

    ಕಾನತ್ತೂರಿನಲ್ಲಿ ಆಣೆಗೆ ಬನ್ನಿ ಅಂದ್ರೂ ತಿಮರೋಡಿ ಬಂದಿರಲಿಲ್ಲ: ಸೌಜನ್ಯ ಕೇಸ್ ಆರೋಪ ಹೊತ್ತ ಮೂವರಿಂದ ಸುದ್ದಿಗೋಷ್ಠಿ

    ಮಂಗಳೂರು: ಧರ್ಮಸ್ಥಳದ ಸೌಜನ್ಯ (Dharmasthala Sowjanya Case) ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಹೆತ್ತವರು ಆರೋಪಿಸಿದ್ದ ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದಾರೆ.

    ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಧೀರಜ್ ಕೆಲ್ಲಾ ಮಾತನಾಡಿ, ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಮತ್ತು ಇತರರು ನಮ್ಮ ವಿರುದ್ಧ ಆರೋಪ ಮಾಡಿದ್ದರು. ದುಡ್ಡು ಮಾಡುವ ಏಕೈಕ ಉದ್ದೇಶದಿಂದ ತಿಮರೋಡಿ ಆರೋಪ ಮಾಡಿದ್ದರು. ನಾವು ತನಿಖೆಗೆ ಹಾಜರಾದರೂ ಸುಖಾಸುಮ್ಮನೆ ಆರೋಪ ಮಾಡಲಾಗಿತ್ತು. ಹೀಗಾಗಿ ನಾವು ಕಾನತ್ತೂರು ದೈವದ ಮೊರೆ ಹೋಗಿ ಆಣೆಗೆ ಕರೆದಿದ್ದೆವು, ಆದರೆ ಅದನ್ನು ತಪ್ಪಿಸಿದ್ದರು ಎಂದರು.

    2014 ರ ಜುಲೈ ಹಾಗೂ ಆಗಸ್ಟ್ ನಲ್ಲಿ ಸಿಬಿಐ (CBI) ನಮ್ಮನ್ನು ಎರಡೆರೆಡು ಬಾರಿ ಬೆಳ್ತಂಗಡಿಯಲ್ಲಿ ತನಿಖೆ ಮಾಡಿತ್ತು. ಚೆನ್ನೈ, ಬೆಂಗಳೂರಿಗೂ ಕರೆಸಿ ನಮ್ಮನ್ನು ತನಿಖೆ ಮಾಡಿದ್ದಾರೆ. ನಮ್ಮ ರಕ್ತದ ಪರೀಕ್ಷೆ, ಡಿಎನ್‍ಎ ಪರೀಕ್ಷೆ, ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ಕೂಡ ಸಿಬಿಐ ಮಾಡಿದೆ. ಮೊಬೈಲ್ ಲೊಕೇಶನ್ ಟ್ರೇಸ್, ಸುಳ್ಳು ಪತ್ತೆಯ ಪಾಲಿಗ್ರಾಫ್ ಟೆಸ್ಟ್ ಜೊತೆ ಅನೇಕ ವೈಜ್ಞಾನಿಕ ಪರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸೌಜನ್ಯ ರೇಪ್‌, ಮರ್ಡರ್‌ ಕೇಸ್‌- ಆರೋಪಿ ಸಂತೋಷ್‌ ರಾವ್‌ ಖುಲಾಸೆ

    2015ರ ಫೆ.23 ರಂದು ನಮ್ಮ ಮನವಿ ಮೇರೆಗೆ ಸಿಬಿಐ ಬೆಂಗಳೂರಿನ ಕೋರ್ಟ್ ಗೆ ಬ್ರೈನ್ ಮ್ಯಾಪಿಂಗ್ ಗೆ ಅರ್ಜಿ ಹಾಕಿತ್ತು. ಕೋರ್ಟ್ ಅನೇಕ ಬಾರಿ ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳಿತ್ತು. ಆದರೆ ನಮ್ಮ ಮನವಿ ಮೇರೆಗೆ ಕೋರ್ಟ್ ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಗೆ ಅನುಮತಿ ನೀಡಿತ್ತು. ಕೊನೆಗೆ ಎಲ್ಲಾ ತನಿಖೆ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಆ ಆರೋಪ ಪಟ್ಟಿಯಲ್ಲಿ ಎಲ್ಲೂ ನಮ್ಮನ್ನ ಅಪರಾಧಿ ಮಾಡಿಲ್ಲ. ಆದರೆ ಮತ್ತೆ ಸೌಜನ್ಯ ತಂದೆ ನಮ್ಮನ್ನು ಆರೋಪಿಯನ್ನಾಗಿ ಮಾಡಲು ಅರ್ಜಿ ಹಾಕಿದ್ರು. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಕೋರ್ಟ್ ನಮಗೆ ಸಮನ್ಸ್ ನೀಡಿತು. ಹೀಗಾಗಿ ನಾವು ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದಾಗ ನ್ಯಾಯಾಲಯ ಸಿಬಿಐ ಆರೋಪ ಪಟ್ಟಿ ಉಲ್ಲೇಖಿಸಿತು ಎಂದು ಹೇಳಿದರು.

    ನಮ್ಮ ವಿರುದ್ಧ ಯಾವುದೇ ಸಾಕ್ಷ್ಯ, ಆರೋಪ ಇಲ್ಲದ ಕಾರಣ ಆರೋಪಿತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್, ಆಕೆಯ ತಂದೆಯ ಮನವಿ ರದ್ದು ಮಾಡಿತು. ಇದೀಗ ಇಡೀ ಕೇಸ್ ನಲ್ಲಿ ಕೋರ್ಟ್ ತೀರ್ಪು ಕೊಟ್ಟಿದೆ. ಹೀಗಿದ್ದರೂ ಮಹೇಶ್ ಶೆಟ್ಟಿ ಮತ್ತೆ ನಮ್ಮ ವಿರುದ್ಧ ಮಾಧ್ಯಮಗಳ ಮುಂದೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನಾವು ಮತ್ತೆ ಅವರನ್ನು ಆಣೆ ಪ್ರಮಾಣಕ್ಕೆ ಕರೀತಾ ಇದ್ದೇವೆ. ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ ಎಂದು ಧೀರಜ್ ಕೆಲ್ಲಾ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]