Tag: Sowing Seed

  • ಕಲಬುರಗಿಯಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

    ಕಲಬುರಗಿಯಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

    ಕಲಬುರಗಿ: ಶೇಂಗಾ ಬಿತ್ತನೆ ಬೀಜದ ಕೊರತೆ ಹಿನ್ನೆಲೆಯಲ್ಲಿ ಬೀಜ ಖರೀದಿಗಾಗಿ ರೈತರು ನೂಕುನುಗ್ಗಲು ನಡೆಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ನಾಲವಾರದಲ್ಲಿ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಬೀಜ ಖರೀದಿಗಾಗಿ ಮುಗಿಬಿದ್ದರು. ಅಲ್ಲದೆ ಅಧಿಕಾರಿಗಳಿಗೆ ಜಮೀನಿನ ದಾಖಲೆ ನೀಡಿ ಬೀಜ ಖರೀದಿಗೆ ಮುಂದಾದ ಪ್ರಸಂಗ ನಡೆದಿದೆ. ಹಿಂಗಾರಿನ ಬೆಳೆಯಾದ ಶೇಂಗಾಕ್ಕೆ, ಬಿತ್ತನೆ ಬೀಜ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ನೂಕು ನುಗ್ಗಲು ನಡೆದಿದೆ. ಇನ್ನು ಜಿಲ್ಲೆಗೆ ಬೇಕಾದ ಬಿತ್ತನೆ ಬೀಜದಲ್ಲಿ ಕೇವಲ ಅರ್ಧದಷ್ಟು ಬೀಜ ಮಾತ್ರ ಸರ್ಕಾರ ಪೂರೈಕೆ ಮಾಡಿದೆ. ಹೀಗಾಗಿ ರೈತರಿಗೆ ಸಮರ್ಪಕವಾಗಿ ಬೀಜ ಸಿಗದಂತಾಗಿದೆ. ಇದನ್ನೂ ಓದಿ: ಟೀಚರ್ ಆದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

    ಮುಂಗಾರು ಕೈ ಕೊಟ್ಟ ರೈತರಿಗೆ ಹಿಂಗಾರು ಬೀಜದ ಕೊರತೆಯುಂಟಾಗಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಿಪರಿತ ಮಳೆಯ ಹಿನ್ನೆಲೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೀಗಾಗಿ ಹಿಂಗಾರು ಬೆಳೆಯಲ್ಲದರೂ ಒಂದಿಷ್ಟು ಹಣ ಸಂಪದಾನೆ ಮಾಡಲು ಅನ್ನದಾತರು ಪರದಾಡುತ್ತಿದ್ದಾರೆ. ಆದರೆ ಸೂಕ್ತ ಸಮಯದಲ್ಲಿ ಬೀಜ ಸಿಗದ ಹಿನ್ನೆಲೆ ರೈತರಿಗೆ ಒಂದರ ಮೇಲೆ ಒಂದು ಹೊಡೆತ ಬಿದ್ದಂತಾಗಿದೆ. ಹಿಂಗಾರು ಬಿತ್ತನೆಗೆ ಸಿದ್ಧಗೊಂಡಿದ್ದ ರೈತರು ಸದ್ಯ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದ ಮುಂದೆ ಕಾಯುವಂತಾಗಿದೆ. ಇದನ್ನೂ ಓದಿ: ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು

  • ಯಾದಗಿರಿಯಲ್ಲಿ ಹೆಚ್ಚಾದ ನಕಲಿ ಬೀಜಗಳ ಹಾವಳಿ- ತೆಲಂಗಾಣದ ನಿಷೇಧಿತ ಬೀಜಗಳ ಮಾರಾಟ

    ಯಾದಗಿರಿಯಲ್ಲಿ ಹೆಚ್ಚಾದ ನಕಲಿ ಬೀಜಗಳ ಹಾವಳಿ- ತೆಲಂಗಾಣದ ನಿಷೇಧಿತ ಬೀಜಗಳ ಮಾರಾಟ

    ಯಾದಗಿರಿ: ಕಳಪೆ ಗುಣಮಟ್ಟದಿಂದಾಗಿ ತೆಲಂಗಾಣದಲ್ಲಿ ನಿಷೇಧಿತ ಹತ್ತಿ ಬೀಜ, ಕಳೆನಾಶಕ ಹಾಗೂ ರಾಸಾಯನಿಕಗಳು ಗಡಿಭಾಗದ ಗುರುಮಠಕಲ್‍ನಲ್ಲಿ ಮಾರಾಟವಾಗುತ್ತಿವೆ. ಹೀಗೆ ಮಾರಾಟ ಮಾಡುವ ಬೀಜಗಳಿಗೆ ಯಾವುದೇ ಕ್ಯೂ ಆರ್ ಕೋಡ್ ಇರಲ್ಲ ಇದು ಅಧಿಕಾರಿಗಳಿಗೆ ಹೊಸ ತಲೆ ನೋವಾಗಿದೆ. ತೆಲಂಗಾಣ ಸರ್ಕಾರವು ಕೆಲವು ಕಂಪನಿಗಳ ಉತ್ಪನ್ನ ಬೀಜಗಳನ್ನು ರೈತರು ಬಿತ್ತನೆ ಮಾಡುವುದನ್ನು ನಿಷೇಧಿಸಿದೆ.

    ಅಲ್ಲಿನ ನಿಷೇಧದ ಬೀಜಗಳು ಇಲ್ಲಿ ಜೋರಾಗಿ ಮಾರಾಟ ನಡೆಯುತ್ತಿದೆ. ಗ್ಲೈಸರೀನ್ ಎಂಬ ಔಷಧಿಯನ್ನು ಮೇ 1 ರಿಂದ ಆಗಸ್ಟ್ 30 ರವರೆಗೆ ತೆಲಂಗಾಣದಲ್ಲಿ ರೈತರು ಬಳಸಲು ನಿಷೇದಿಸಿದೆ. ಈ ರಸಗೊಬ್ಬರ ಬಳಕೆಯಿಂದ ರೈತರ ಕಾಲುಗಳು ಸೀಳುತ್ತವೆ ಮತ್ತು ವಾತಾವರಣದ ಪರಿಣಾಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ ಅಲ್ಲಿ ನಿಷೇಧಿಸಲಾಗಿದೆ. ಆದರೆ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ತೆಲಂಗಾಣದ ಮದ್ದೂರ್, ಕೊಡಂಗಲ್, ಕಾನುಕುರ್ತಿ, ತಾಂಡೂರ್, ನಾರಾಯಣಪೇಟ್, ಇಟ್ಲಾಪೂರ್, ದಾಮರ್‍ಗಿಡ್ಡ, ಉಲಿಗುಂಡಂ ಮುಂತಾದ ಕಡೆಯ ರೈತರು ಗುರುಮಠಕಲ್ ಪಟ್ಟಣಕ್ಕೆ ಬಂದು ಹತ್ತಿ ಬೀಜಗಳನ್ನು ಖರೀದಿಸಲು ಬರುತ್ತಾರೆ.

    ತೆಲಂಗಾಣಕ್ಕಿಂತ ಹೆಚ್ಚು ಗುರುಮಠಕಲ್‍ನಲ್ಲಿ ರಸಗೊಬ್ಬರಗಳ ಅಂಗಡಿಗಳಲ್ಲಿ ಹೆಚ್ಚಿನ ಮಾರಾಟ ಹಾಗೂ ವಿವಿಧ ತಳಿಗಳು ಮತ್ತು ಬಡ್ಡಿರಹಿತ ಸಾಲ ಸೌಲಭ್ಯ ದೊರಕುವ ಕಾರಣದಿಂದ ತೆಲಂಗಾಣದ ರೈತರು ಹತ್ತಿ ಬೀಜಗಳನ್ನು ಖರೀದಿಸಲು ಬರುತ್ತಾರೆ. ಈ ನಕಲಿ ಹತ್ತಿ ಬೀಜಗಳ ಬಿತ್ತನೆಯಿಂದ 1 ಎಕರೆಯಲ್ಲಿ 5 ಕ್ವಿಂಟಾಲ್ ಇಳುವರಿ ಬರುವುದಿಲ್ಲ. ಅಲ್ಲದೆ, ಭೂಮಿಯ ಫಲವತ್ತತೆ ಕೂಡಾ ನಾಶವಾಗುತ್ತೆ. ಆದ್ರೆ ತೆಲಂಗಾಣದಲ್ಲಿ ಇವುಗಳನ್ನ ನಿಷೇದಿಸಿದ್ರು ಗಡಿ ಭಾಗದ ಜಿಲ್ಲೆಯ ರೈತರಿಗೆ ಬೀಜೋತ್ಪನ್ನ ಕಂಪನಿಗಳು ಕದ್ದು ಮುಚ್ಚಿ ಮಾರಾಟ ನಡೆಸ್ತಿದ್ದಾರೆ. ಇದನ್ನೂ ಓದಿ: ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು

  • NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    ಬೆಂಗಳೂರು: ತೊಗರಿ, ಹೆಸರು, ಶೇಂಗಾ, ಸೋಯಾ, ಅವರೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ರೈತರಿಗೆ ಪ್ರಮುಖವಾಗಿ ಬೆಳೆಯುವ 19 ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳ ಮಿನಿಕಿಟ್ ರೂಪದಲ್ಲಿ “ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ”(ಎನ್.ಎಫ್.ಎಸ್.ಎಂ)ಯೋಜನೆಯಡಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 12.60 ಕೋ.ರೂ. ಮೌಲ್ಯದ ಮಿನಿಕಿಟ್ ಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಎನ್.ಎಫ್.ಎಸ್.ಎಂ ಯೋಜನೆಯಡಿ 4 ಕೆಜಿ ತೊಗರಿಯನ್ನು 16 ಜಿಲ್ಲೆಗಳಿಗೆ, 4 ಕೆ.ಜಿ.ಹೆಸರು 4 ಜಿಲ್ಲೆಗಳಿಗೆ 20 ಕೆ.ಜಿಯಂತೆ 8 ಜಿಲ್ಲೆಗಳಿಗೆ ಹಾಗೂ 8 ಕೆ.ಜಿಯಂತೆ 2 ಜಿಲ್ಲೆಗಳಿಗೆ ಸೋಯಾ ಅವರೆಗಳ ಮಿನಿಕಿಟ್ ಗಳನ್ನು ವಿತರಿಸಲಾಗಿದ್ದು, ಮಿಶ್ರಬೆಳೆಗಳನ್ನು ಬೆಳೆಯಲು ಸಹ ಈ ಅಭಿಯಾನದಡಿ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

    2020-21 ನೇ ಸಾಲಿನಲ್ಲಿ 153.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿದ್ದು, ದೇಶದ ಸರಾಸರಿಗೆ ಹೋಲಿಸಿದಲ್ಲಿ ಶೇ.2 ರಷ್ಟು ಹಾಗೂ ರಾಜ್ಯದ ಸರಾಸರಿಗೆ ಇದನ್ನು ಹೋಲಿಸಿದರೆ ಕರ್ನಾಟಕದಲ್ಲಿ ಶೇ.10 ರಷ್ಟು ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕೂಡ ಕಳೆದ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿರುವುದನ್ನು ನೋಡಿದರೆ ಕೃಷಿಯತ್ತ ಜನರ ಒಲವು ಹಾಗೂ ಕೋವಿಡ್ ಅವಧಿಯಲ್ಲಿಯೂ ಸಹ ರೈತರ ಶ್ರಮಕ್ಕೆ ಇದು ಸಾಧನೆಯಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

    ಬಿತ್ತನೆ ಗುರಿ:
    ಮುಂಗಾರು ಹಂಗಾಮಿಗೆ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಇಲ್ಲಿಯವರೆಗೆ 11.73 ಲಕ್ಷ ಹೆಕ್ಟೇರ್ ಬಿತ್ತನೆ ಅಂದರೆ ಶೇ.15.23 ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 7.74 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದ್ದು, ಇಲ್ಲಿಯವರೆಗೆ 1.79 ಲಕ್ಷ ಕ್ವಿಂಟಾಲ್ ವಿತರಣೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 1.15 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನುಯಿದೆ.

    ರಸಗೊಬ್ಬರ ವಿವರ:
    ಏಪ್ರಿಲ್ ನಿಂದ ಜೂನ್ ವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿದಂತೆ ಒಟ್ಟು 12,77,815 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ ಒಟ್ಟು 8,02.504 ಮೆ.ಟನ್ ಸರಬರಾಜು, ಒಟ್ಟು 11,54,320 ಆರಂಭಿಕ ಶಿಲ್ಕು, 7,84,075 ಮಾರಾಟವಾಗಿದ್ದು, ಇನ್ನೂ 11,72,750 ದಾಸ್ತಾನು ಉಳಿದಿದೆ. ಈ ಬಾರಿ ಹಂಗಾಮಿನಲ್ಲಿ ಇಲ್ಲಿಯವರೆಗೆ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಲ್ಲಿಯವರೆಗೆ ಎಲ್ಲಿಯೂ ರಸಗೊಬ್ಬರವಾಗಲೀ, ಬಿತ್ತನೆ ಬೀಜದ ಕೊರತೆ ಕಂಡುಬಂದಿಲ್ಲ. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಕೃಷಿ ವಿಚಕ್ಷಣಾ ದಳ ನಿರಂತರವಾಗಿ ಕಾಳಸಂತೆಕೋರರು ನಕಲಿ ಮಾರಾಟಗಾರರ ಮೇಲೆ ದಾಳಿ ಮಾಡುತ್ತಲೇ ಇದೆ. ಕಳೆದ ಬಾರಿ 1731.63 ಲಕ್ಷ ಮೌಲ್ಯದ ಕೃಷಿ ಪರಿಕರ ನಕಲಿಬಿತ್ತನೆ ಬೀಜ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, 263 ಮೊಕ್ಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ. ಈ ಬಾರಿ 2021-22 ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜೂನ್ 11 ರವರೆಗೆ 424.52 ಲಕ್ಷ ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಹಾವೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ. ಇನ್ನೂ ಏಪ್ರಿಲ್ 1 ರಿಂದ ಜೂ 13 ರವರೆಗೆ ಶೇ.31 ಹೆಚ್ಚುವರಿ ಅಂದರೆ 169 ಮಿಮೀ ವಾಡಿಕೆ ಮಳೆಯಾಗಿದ್ದು, 222 ಮಿ.ಮೀ ವಾಸ್ತವಿಕ ಮಳೆಯಿತ್ತು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
    2021-22 ನೇ ಸಾಲಿನಲ್ಲಿ 53,35.967 ಕೇಂದ್ರ ಸರ್ಕಾರದಿಂದ ರೈತ ಫಲಾನುಭವಿಯಾಗಿದ್ದು, ಇದರಲ್ಲಿ 1067.1934 ಕೋ.ರೂ.ಆರ್ಥಿಕ ನೆರವು ನೀಡಲಾಗಿದ್ದು, 55,07,256 ಫಲಾನುಭವಿಗಳಿಗೆ ಇಲ್ಲಿಯವರೆಗೆ 7017.1520 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ.ರಾಜ್ಯ ಸರ್ಕಾರ 47,98.095 ರೈ ಫಲಾನುಭವಿಗಳಿಗೆ 2849.1632 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಶೇಕಡಾ 85 ರಷ್ಟು ಆಧಾರ್ ಲಿಂಕ್ ಮಾಡಿದ್ದೇವೆ. ಶೇಕಡ 15 ರಷ್ಟು ಅಕೌಂಟ್ ಮೂಲಕ ನೀಡಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಲಿನ್ ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು, 210 ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳ ಸ್ಥಾಪನೆ ಮಾಡಲಾಗಿದೆ.

  • ಬಿತ್ತನೆ ಬೀಜಕ್ಕೆ ಆಗ್ರಹಿಸಿ ರೈತರ ಹೋರಾಟ – ಹೆದ್ದಾರಿ ತಡೆದು ಟೈಯರಿಗೆ ಬೆಂಕಿ

    ಬಿತ್ತನೆ ಬೀಜಕ್ಕೆ ಆಗ್ರಹಿಸಿ ರೈತರ ಹೋರಾಟ – ಹೆದ್ದಾರಿ ತಡೆದು ಟೈಯರಿಗೆ ಬೆಂಕಿ

    ರಾಯಚೂರು: ಜಿಲ್ಲೆಯ ಮಸ್ಕಿಯಲ್ಲಿ ಅಧಿಕಾರಿಗಳು ಬಿತ್ತನೆ ಬೀಜ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ರೈತರು ಹೋರಾಟ ನಡೆಸಿದ್ದಾರೆ. ರಾಯಚೂರು ಮಸ್ಕಿ ಹೆದ್ದಾರಿ ತಡೆದು ಟೈಯರಿಗೆ ಬೆಂಕಿ ಹಚ್ಚಿ ವಾಹನ ಓಡಾಟ ನಿಲ್ಲಿಸಿದ್ದಾರೆ.

    ಮಸ್ಕಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳ ವರ್ತನೆಗೆ ಬೇಸತ್ತ ರೈತರು ಇಂದು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಬಿತ್ತನೆಗೆ ಕಡಲೆ ಬೀಜ ನೀಡುತ್ತಿಲ್ಲ ಎಂದು ಆರೋಪಿಸಿರುವ ರೈತರು ಮಸ್ಕಿ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದರು. ವಿವಿಧ ಗ್ರಾಮಗಳ ನೂರಾರು ಜನ ರೈತರು ಕೂಡಲೇ ಬಿತ್ತನೆ ಬೀಜ ನೀಡುವಂತೆ ಒತ್ತಾಯಿಸಿದ್ದಾರೆ.

    ದಿನನಿತ್ಯ ಕೇಂದ್ರಕ್ಕೆ ಅಲೆದು ಅಲೆದು ಸುಸ್ತಾಗಿ ಪ್ರತಿಭಟನೆಗೆ ಇಳಿದ ರೈತರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿದರೆ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿರುವ ರೈತರಿಗೆ ಬಿತ್ತನೆ ಬೀಜವೇ ಸಿಗುತ್ತಿಲ್ಲ. ಹೀಗಾಗಿ ಆಕ್ರೋಶಗೊಂಡಿರುವ ರೈತರು ಹೆದ್ದಾರಿ ತಡೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

  • ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು

    ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು

    ರಾಯಚೂರು: ರೈತರು ದೇಶದ ಬೆನ್ನೆಲುಬು ಅನ್ನೋದು ಕೇವಲ ಮಾತಿಗೆ ಸೀಮಿತವಾಗಿದೆ. ರೈತರಿಗೆ ಮಾತ್ರ ಅನ್ಯಾಯವಾಗುತ್ತಲೇ ಇದೆ. ಸಾಲಸೂಲ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರು ಇರುತ್ತಾರೆ. ಆದರೆ ರೈತರಿಗೆ ಮೋಸ ಮಾಡಲೆಂದೇ ಇರುವ ಕಳಪೆ ಬೀಜ ತಯಾರಿಕಾ ಕಂಪನಿಗಳು ಮಾತ್ರ ರೈತರ ಬದುಕನ್ನೇ ಮುಳುಗಿಸುತ್ತಿವೆ.

    ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಖುಷಿಯಾಗಿದ್ದ ರಾಯಚೂರಿನ ಸಿಂಧನೂರು, ಮಸ್ಕಿ ತಾಲೂಕಿನ ಈ ರೈತರು ಈಗ ಮೋಸಹೊಗಿದ್ದಾರೆ. ಸೂರ್ಯಕಾಂತಿ ಬೀಜ ಬಿತ್ತಿ 20 ದಿನಗಳಾದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಗಾಲಾಗಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ ಬೀಜ ಕಳಪೆಯಾಗಿದೆ. ಮೋಸಹೋಗಿ ಕೈ ಸುಟ್ಟುಕೊಂಡಿರುವ ರೈತರು ಕಂಪನಿಯ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಮುಂಗಾರು ಹಂಗಾಮಿನ ಬಿತ್ತನೆ ಎಲ್ಲೆಡೆ ಜೋರಾಗಿ ನಡೆದಿದೆ. ಇದೇ ಸಮಯದಲ್ಲಿ ಮಳೆಯನ್ನು ನಂಬಿ ಜಿಲ್ಲೆಯ ಸಿಂಧನೂರು ತಾಲೂಕಿನ ನೂರಾರು ಜನ ರೈತರು ತೇಜ ಕಂಪನಿಯ ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ್ದಾರೆ. ತುರ್ವಿಹಾಳದ ಶ್ರೀ ಬಸವ ಅನ್ನದಾತ ಟ್ರೇಡರ್ಸ್ ನಲ್ಲಿ ತೇಜ ಕಂಪನಿಯ ಸೂರ್ಯಕಾಂತಿ ಬೀಜವನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. 20 ದಿನ ಕಳೆದರೂ ಬೀಜ ಮೊಳಕೆ ಒಡೆಯದೇ ಇರುವುದರಿಂದ ಕಂಪನಿಯು ಕಳಪೆ ಬೀಜ ನೀಡಿ ಮೋಸ ಮಾಡಿದೆ ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.

    ಅಮಾಯಕ ರೈತರಿಗೆ ಮೋಸ ಮಾಡುವ ಕಂಪನಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಕಳಪೆ ಬೀಜ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.

  • ಕಳಪೆ ಶೇಂಗಾಬೀಜ ಪೂರೈಸಿದರೆ ರೈತನ ಕೊಲೆ ಮಾಡಿದಂತೆ – ಅಧಿಕಾರಿಗಳ ವಿರುದ್ಧ ಗುಡುಗಿದ ಬಿ.ಸಿ ಪಾಟೀಲ್

    ಕಳಪೆ ಶೇಂಗಾಬೀಜ ಪೂರೈಸಿದರೆ ರೈತನ ಕೊಲೆ ಮಾಡಿದಂತೆ – ಅಧಿಕಾರಿಗಳ ವಿರುದ್ಧ ಗುಡುಗಿದ ಬಿ.ಸಿ ಪಾಟೀಲ್

    ಚಿತ್ರದುರ್ಗ: ಮುಂಗಾರು ಹಂಗಾಮು ಪ್ರಾರಂಭವಾಗಿದೆ ಹೀಗಾಗಿ ರೈತರಿಗೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಬಾರದು. ಒಂದು ವೇಳೆ ಕಳಪೆ ಬೀಜ ಪೂರೈಕೆ ಮಾಡಿದರೆ ರೈತನ ಕೊಲೆ ಮಾಡಿದಂತಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕೃಷಿ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.

    ಕೆಲ ರೈತರು ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ತಮ್ಮ ಪತ್ನಿಯ ತಾಳಿ ಮಾರಾಟ ಮಾಡಿ ಬೀಜ ಖರೀದಿಸಿ ಬೆಳೆ ಬೆಳೆದಿರುತ್ತಾರೆ. ಆದ್ದರಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಮುನ್ನ ಬಿತ್ತನೆ ಬೀಜ ಪರೀಕ್ಷೆ ಮಾಡಬೇಕು. ಒಂದು ವೇಳೆ ಅದು ಕಳಪೆಯಾಗಿದ್ದರೆ ಅವುಗಳನ್ನು ತಿರಸ್ಕರಿಸಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ವಿತರಿಸುವಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

    ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಲಾಕ್‍ಡೌನ್ ಹಿನ್ನೆಲೆ ಇಂದು ಕೃಷಿ ಉತ್ಪನ್ನಗಳ ಸರಕು ಸಾಗಾಣಿಕೆ, ಬೀಜ, ಗೊಬ್ಬರ ಸರಬರಾಜು ಸೇರಿದಂತೆ ಕೃಷಿ ಚಟುವಟಿಕೆಗಳ ಬಗ್ಗೆ ಕೈಗೊಂಡ ಅಗತ್ಯ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ಮಾತನಾಡಿ, ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಕೃಷಿ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧ ಇಲ್ಲ. ಏಪ್ರಿಲ್ 1ರಿಂದಲೇ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಇತರೆ ಜಿಲ್ಲೆಗಳು ಸೇರಿದಂತೆ ಅಂತರಾಜ್ಯಗಳಿಗೂ ಸಾಗಾಟ ನಡೆಯುತ್ತಿದೆ. ರೈತರಿಗೆ ಮುಂದಿನ ದಿನಗಳಲ್ಲಿ ಬೇಕಾಗಿರುವ ಬಿತ್ತನೆ ಬೀಜ, ಕೃಷಿ ಪರಿಕರಗಳು, ಇದಕ್ಕೆ ಪೂರಕವಾದ ರಿಪೇರಿ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದು, ಯಾವುದೇ ಅಡೆತಡೆಗಳಿರುವುದಿಲ್ಲ. ಉಳುಮೆ, ಕೊಯ್ಲ ನಡೆಯಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ರೈತರು ಕೃಷಿ ಚಟುವಟಿಕೆ ಕೈಗೊಳ್ಳಬಹುದು ಎಂದು ಹೇಳಿದರು.

    ಇದೇ ವೇಳೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ತರಕಾರಿಗಳು ಬೆಳೆಯಲಾಗುತ್ತಿದ್ದು, ಇವುಗಳನ್ನು ಹೆಚ್ಚಿನ ದಿನ ಸಂಗ್ರಹಿಸುವ ದೃಷ್ಠಿಯಿಂದ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೆಜ್‍ಗಳು ಹಾಗೂ ಆಹಾರ ಸಂಸ್ಕರಣೆ ಘಟಕಗಳ ಅವಶ್ಯಕತೆ ಇದೆ. ಇದರಿಂದ ರೈತರಿಗೆ ತುಂಬಾ ಸಹಾಯಕವಾಗಲಿದೆ. ಈ ನಿಟ್ಟಿನಲ್ಲಿ ಕಂಟೈನರ್ ಗಳ ಮೂಲಕ ತಾತ್ಕಾಲಿಕವಾಗಿ ಎಲ್ಲಾ ಎಪಿಎಂಸಿಗಳಲ್ಲಿ ಕೋಲ್ಡ್ ಸ್ಟೋರೇಜ್ ಮಾಡಿದಲ್ಲಿ ಇಂತಹ ಸಂದರ್ಭದಲ್ಲಿ ರೈತರಿಗೆ, ಬೆಳೆಗಾರರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಮಾರುಕಟ್ಟೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

    ರೈತರು ಬೆಳೆದ ಯಾವುದೇ ಬೆಳೆ ಮಾರಾಟ, ತೋಟಗಾರಿಕೆ ಹಣ್ಣು-ತರಕಾರಿ ಮಾರಾಟಕ್ಕೆ ಅಡೆತಡೆಗಳಿರುವುದಿಲ್ಲ. ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹ ಯಾವುದೇ ಅಡೆತಡೆಗಳಿರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಜನರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುವ ಮೂಲಕ ರೈತರಿಗೆ ನೆರವಾಗಲು ತಿಳಿಸಿದರು.

    ಈ ಸಭೆಯಲ್ಲಿ ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ಗೂಳಿಹಟ್ಟಿ ಡಿ. ಶೇಖರ್, ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊನ್ನಾಂಬ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.

  • ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    ಕಳಪೆ ಬಿತ್ತನೆ ಬೀಜ ಮಾರಾಟ ಮಾಡೋರ ಮೇಲೆ ನಿರ್ದಾಕ್ಷಿಣ್ಯ ಕ್ರಮ: ಬಿ.ಸಿ ಪಾಟೀಲ್

    – ರೈತರಿಗೆ ಅಗತ್ಯವಿರುವಷ್ಟು ಪೆಟ್ರೋಲ್, ಡೀಸೆಲ್ ನೀಡಬೇಕು

    ಹಾವೇರಿ: ರೈತರ ವಸ್ತುಗಳನ್ನು ಸಾಗಾಣಿಕೆ ಮಾಡಲು ಯಾವುದೇ ನಿರ್ಬಂಧವಿಲ್ಲ. ಕೃಷಿ ಮತ್ತು ಕೃಷಿಗೆ ಪೂರಕವಾದ ಚಟುವಟಿಕೆಗಳಿಗೆ ಸರ್ಕಾರದಿಂದ ನಿರ್ಬಂಧವಿಲ್ಲ. ರೈತರಿಗೆ ಅಗತ್ಯವಿರುವಷ್ಟು ಬಂಕ್‍ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಿತರಣೆ ಮಾಡಬೇಕು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

    ಹಾವೇರಿ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು ಸಭೆ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಪೊಲೀಸರು ಸಹ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಸೂಚಿಸಿದರು. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಬಾರದು ಅಧಿಕಾರಿಗಳ ಜೊತೆಗೆ ನಾವಿದ್ದೇವೆ ಎಂದರು.

    ಒಂದು ವೇಳೆ ಕಳಪೆ ಬಿತ್ತನೆ ಬೀಜದಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅದು ಆತ್ಮಹತ್ಯೆ ಅಲ್ಲ ಅವರ ಕೊಲೆ ಮಾಡಿದಂತೆ. ಹೀಗಾಗಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಲಾಕ್‍ಡೌನ್‍ನಿಂದ ಹೂವಿನ ಮಾರುಕಟ್ಟೆಗೂ ತೊಂದರೆ ಆಗಿರುವುದು ನಿಜ. ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಡಲು ಸಿಎಂ ಸೂಚಿಸಿದ್ದಾರೆ. ವರದಿ ನಂತರ ಸೂಕ್ತ ಪರಿಹಾರ ವಿತರಣೆ ಮಾಡಲಾಗುವುದು. ಇದರ ಜೊತೆಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಎಂ.ಆರ್.ಪಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಪಾಟೀಲ್ ಹೇಳಿದರು.

  • ರಿಕ್ಷಾದಲ್ಲಿ ಬಿತ್ತನೆ ಬೀಜ ಸಾಗಾಟಕ್ಕೆ ಯತ್ನ – ರೈತರಿಂದ ದಿಢೀರ್ ದಾಳಿ

    ರಿಕ್ಷಾದಲ್ಲಿ ಬಿತ್ತನೆ ಬೀಜ ಸಾಗಾಟಕ್ಕೆ ಯತ್ನ – ರೈತರಿಂದ ದಿಢೀರ್ ದಾಳಿ

    ದಾವಣಗೆರೆ: ಬಿತ್ತನೆಗೆ ವಿತರಣೆ ಮಾಡಬೇಕಿದ್ದ ಶೇಂಗಾ ಬೀಜಗಳನ್ನು ಕಳ್ಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲದವರ ಮೇಲೆ ರೈತರು ದಾಳಿ ನಡೆಸಿದ್ದಾರೆ.

    ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಚಿಕ್ಕ ಮಲ್ಲನಹೊಳೆ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. ಶೇಂಗಾ ಬೀಜವನ್ನು ಬೇರೆಡೆಗೆ ಗೂಡ್ಸ್ ಆಟೋ ಮೂಲಕ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ರೈತರು ದಾಳಿ ನಡೆಸಿದ್ದಾರೆ. ಗೂಡ್ಸ್ ಆಟೋ ಚಾಲಕ ಸೇರಿ ಇಬ್ಬರನ್ನು ರೈತರು ಜಗಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೈತರಿಗೆ ಸೇರಬೇಕಿದ್ದ ಬಿತ್ತನೆ ಶೇಂಗಾ ಬೀಜಗಳು ಎಲ್ಲಿಂದ ಎಲ್ಲಿಗೆ ತೆಗೆದುಕೊಂಡು ಹೋಗಲಾಗುತಿತ್ತು ಎಂಬುದರ ಕುರಿತಾಗಿ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.