Tag: Southwest Railway

  • ಕೇಂದ್ರದಿಂದ ರಾಜ್ಯದ ರೈಲ್ವೆಗೆ ಬಂಪರ್ ಕೊಡುಗೆ: ಸಿ.ಸಿ. ಪಾಟೀಲ್ ಅಭಿನಂದನೆ

    ಕೇಂದ್ರದಿಂದ ರಾಜ್ಯದ ರೈಲ್ವೆಗೆ ಬಂಪರ್ ಕೊಡುಗೆ: ಸಿ.ಸಿ. ಪಾಟೀಲ್ ಅಭಿನಂದನೆ

    ಬೆಂಗಳೂರು: ನೈರುತ್ಯ ರೈಲ್ವೆ ವಲಯಕ್ಕೆ ಪ್ರಸಕ್ತ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು ಅತೀ ಹೆಚ್ಚು ಅಂದರೆ 6,900 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿ ಕರ್ನಾಟಕಕ್ಕೆ ಸಿಂಹಪಾಲು ನೀಡಿರುವುದರಿಂದ ನಮ್ಮ ರಾಜ್ಯದ ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಬಹುದೊಡ್ಡ ಉಡುಗೊರೆ ನೀಡಿದಂತಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಇಷ್ಟು ದೊಡ್ಡ ಪ್ರಮಾಣದ ಅನುದಾನ ದೊರೆತಿರುವುದು ನೈರುತ್ಯ ರೈಲ್ವೆಯ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡ 43ರಷ್ಟು ಹೆಚ್ಚಿನ ಅನುದಾನ ಘೋಷಣೆಯಾಗಿದ್ದು, ಈ ಬಗ್ಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರು ಹಾಗೂ ವಿಶೇಷ ಪರಿಶ್ರಮ ವಹಿಸಿರುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದಿಸಿದ್ದಾರೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

    ಈ ಹೆಚ್ಚಿನ ಅನುದಾನದಿಂದಾಗಿ ನೂತನ ರೈಲ್ವೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ, ರೈಲ್ವೆ ಮಾರ್ಗಗಳ ಸಾಮರ್ಥ್ಯ ವೃದ್ಧಿಗೆ, ಹೊಸ ರೈಲುಗಳ ಸಂಚಾರಕ್ಕೆ ಮತ್ತು ಮಾರ್ಗಗಳ ವಿದ್ಯುದೀಕರಣಕ್ಕೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕಕ್ಕೆ ಸೂಪರ್ ಕೊಡುಗೆ ಈ ಬಾರಿ ಉತ್ತರ ಕರ್ನಾಟಕ ಭಾಗದ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ನೀಡಿರುವುದು ವಿಶೇಷವಾಗಿದೆ ಎಂದು ಪ್ರಶಂಸಿಸಿದ್ದಾರೆ.

    ಧಾರವಾಡ ಕಿತ್ತೂರು ಬೆಳಗಾವಿ ಹೊಸ ಮಾರ್ಗಕ್ಕೆ ರೂ. 20 ಕೋಟಿ, ಗದಗ – ವಾಡಿ ಹೊಸ ಮಾರ್ಗಕ್ಕೆ ರೂ.187 ಕೋಟಿ, ಬಾಗಲಕೋಟೆ – ಕುಡಚಿ, ತುಮಕೂರು-ದಾವಣಗೆರೆ, ಶಿವಮೊಗ್ಗ-ರಾಣೆಬೆನ್ನೂರು ಈ 3 ಹೊಸ ಮಾರ್ಗಗಳಿಗೆ ತಲಾ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಿರುವುದು, ಗದಗ್ – ಹೂಟಗಿ ಡಬ್ಲಿಂಗ್ ಲೈನ್‍ಗಾಗಿ 200 ಕೋಟಿ ರೂ. ಹಾಗೂ ಹುಬ್ಬಳ್ಳಿ- ಚಿಕ್ಕಜಾಜೂರು ಡಬ್ಲಿಂಗ್ ಲೈನ್‍ಗಾಗಿ 210 ಕೋಟಿ ರೂಪಾಯಿ ಅನುದಾನ ದೊರೆತಿರುವುದು ಸೇರಿದಂತೆ ಅನೇಕ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಕೇಂದ್ರ ಸರ್ಕಾರವು ಕರ್ನಾಟಕದ ಮೇಲಿನ ತನ್ನ ಮಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶ್ಲಾಘಿಸಿದ್ದಾರೆ.

    train

    ಇದಲ್ಲದೇ ದೇಶಾದ್ಯಂತ 400 ವಂದೇ ಭಾರತ ರೈಲುಗಳ ಸಂಚಾರ ಪ್ರಾರಂಭವಾಗಲಿದ್ದು, ಇವುಗಳಲ್ಲಿ ಒಂದು ರೈಲನ್ನು ಧಾರವಾಡ ಮತ್ತು ಬೆಂಗಳೂರು ನಡುವೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಈಗಾಗಲೇ ಮನವಿ ಮಾಡಿಕೊಂಡಿದ್ದು, ಇದಕ್ಕೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಇದು ನಮ್ಮ ರಾಜ್ಯಕ್ಕೆ ದೊಡ್ಡ ವರದಾನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

  • ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡೋಮ್ ಕೋಚ್

    ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡೋಮ್ ಕೋಚ್

    ಬೆಂಗಳೂರು: ವಿಸ್ಟಾಡೋಮ್ ಕೋಚ್ ಅನ್ನು ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸುವ ರೈಲಿಗೆ ಪ್ರಾಯೋಗಿಕವಾಗಿ ಅಳವಡಿಸಲು ನೈಋತ್ಯ ರೈಲ್ವೆ ಮೊದಲ ಬಾರಿಗೆ ಮುಂದಾಗಿದೆ. ಈ ಮೂಲಕ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿಯಲು ಪ್ರಯಾಣಿಕರಿಗೆ ಅವಕಾಶ ದೊರೆಯಲಿದೆ.

    ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲಿಗೆ ಅಳವಡಿಸಲಾಗಿರುವ ಗಾಜಿನ ಛಾವಣಿಯನ್ನು ಹೊಂದಿರುವ ವಿಸ್ಟಾಡೋಮ್ ಕೋಚ್ ಅನ್ನು ಈ ಮಾರ್ಗದಲ್ಲೂ ಅಳವಡಿಸುವ ಮೂಲಕ ಪ್ರಯಾಣಿಕರು ನಿಸರ್ಗದ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆಯು ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16579/ 16580 ಯಶವಂತಪುರ- ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‍ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ವಿಸ್ಟಾಡೋಮ್ ಕೋಚ್ ಆಳವಡಿಕೆ ಮಾಡಲಾಗುತ್ತದೆ.

    ಪ್ರತಿದಿನ ಸಂಚಾರ ನಡೆಸುವ ರೈಲುಗಳಿಗೆ ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗುವುದು. ಇದು ಯಶಸ್ವಿಯಾದರೆ ಇದನ್ನು ಕಾಯಂ ಆಗಿ ಉಳಿಸಿಕೊಳ್ಳುವ ಬಗ್ಗೆ ಗಮನ ಹರಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

    ಶಿವಮೊಗ್ಗ ಮತ್ತು ಯಶವಂತಪುರ ರೈಲಿಗೆ ಅಳವಡಿಸಲಾಗುವ ವಿಸ್ಟಾಡೋಮ್ ಬೋಗಿಯ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಈ ಬೋಗಿಯಲ್ಲಿ ಕೇವಲ 44 ಆಸನಗಳು ಇರುತ್ತವೆ. ಅಲ್ಲದೇ ಸೀಟುಗಳು 180 ಡಿಗ್ರೀ ತಿರುಗಲಿದ್ದು, ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತವೆ.

  • ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿಗೆ ಇಪ್ಪತ್ತೈದರ ಸಂಭ್ರಮ

    ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲಿಗೆ ಇಪ್ಪತ್ತೈದರ ಸಂಭ್ರಮ

    ಹುಬ್ಬಳ್ಳಿ: ರೈಲ್ವೇ ಸಾರಿಗೆ ಜನಪ್ರಿಯತೆ ಪಡೆದ ಸೇವೆಯಾಗಿದ್ದು, ಮೊದಲು ಜನರೆಲ್ಲ ರೈಲ್ವೇ ಶಬ್ದವನ್ನು ಕೇಳಿಕೊಂಡು ಸಮಯ ತಿಳಿದುಕೊಳ್ಳುವಂತ ಕಾಲಮಾನವೊಂದಿತ್ತು. ಅಲ್ಲದೇ ರೈಲು ಗಾಡಿಯನ್ನು ನೋಡಿ ಹರ್ಷವನ್ನ ವ್ಯಕ್ತಪಡಿಸುವ ಅಂತಹ ಸಂದರ್ಭ ಗತಿಸಿ ದಶಕಗಳೆ ಉರುಳಿ ಹೋಗಿದೆ. ಅಂತಹ ನೆನಪನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡಿದೆ.

    ಬೆಳಗಿನ ಜಾವ 5.30 ಆದರೆ ಸಾಕು, ವಾಣಿಜ್ಯ ನಗರಿಯ ರೈಲು ನಿಲ್ದಾಣ ಗಿಜಿಗುಡುತ್ತಿರುತ್ತದೆ. ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ನಡೆದು ಬರುವ ಅದೆಷ್ಟೋ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿರುವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಈಗ 25 ವಸಂತಗಳನ್ನು ಪೂರೈಸಿದೆ. ಬೆಳ್ಳಿ ಹಬ್ಬದ ‘ಟ್ರ್ಯಾಕ್’ನಲ್ಲಿ ಓಡುತ್ತಿರುವ ಈ ರೈಲು ನೈಋತ್ಯ ರೈಲ್ವೆಯ ‘ರಾಣಿ’ಯಾಗಿದೆ. ಇನ್ನೂ ಹಳ್ಳಿಗಳಲ್ಲಿಯ ಜನರು ಮುಂಜಾನೆ ಹೊಲಕ್ಕೆ ಹೋಗಲು ಕೂಡ ರಾಣಿ ಚೆನ್ನಮ್ಮ ರೈಲಿನ ಸಮಯವನ್ನು ಗಮನಿಸುತ್ತಿರುವುದು ಕೂಡ ವಿಶೇಷವಾಗಿದೆ.

    ಈ ಭಾಗದ ಜನರಿಗೆ ಸಂಪರ್ಕ ಸೇತುವೆಯಷ್ಟೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯ ಹೆಸರು ರೈಲಿಗೆ ಇರುವ ಕಾರಣ ಈ ರೈಲಿನೊಂದಿಗೆ ಭಾವನಾತ್ಮಕ ಬೆಸುಗೆಯಿದೆ. ಮೀಟರ್ ಗೇಜ್‍ನಲ್ಲಿದ್ದ ಈ ರೈಲು ಬಳಿಕ ಬ್ರಾಡ್‍ಗೇಜ್‍ಗೆ ಪರಿವರ್ತನೆಯಾಯಿತು. ಇದಕ್ಕೂ ಮೊದಲು ಕರ್ನಾಟಕ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್ ಮತ್ತು ಕಿತ್ತೂರು ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತಿತ್ತು.

    ಒಟ್ಟಿನಲ್ಲಿ ಇಪ್ಪತ್ತೈದು ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಇಂದಿಗೂ ರೈಲ್ವೇ ಪ್ರಯಾಣಿಕರ ಜೀವನಾಡಿಯಾಗಿದೆ. ಯಾರೊಬ್ಬರನ್ನು ಕೇಳಿದರೂ ಕೂಡ ರಾಣಿಚೆನ್ನಮ್ಮ ರೈಲಿನ ಬಗ್ಗೆ ಗೊತ್ತಿರದೇ ಇರಲು ಸಾಧ್ಯವಿಲ್ಲ.

  • ಹುಬ್ಬಳ್ಳಿಯಲ್ಲಿ ಐಸೋಲೇಶನ್ ವಾರ್ಡ್‍ಗಳಾಗುತ್ತಿವೆ ರೈಲ್ವೇ ಬೋಗಿಗಳು

    ಹುಬ್ಬಳ್ಳಿಯಲ್ಲಿ ಐಸೋಲೇಶನ್ ವಾರ್ಡ್‍ಗಳಾಗುತ್ತಿವೆ ರೈಲ್ವೇ ಬೋಗಿಗಳು

    ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಕೇಂದ್ರದ ಸೂಚನೆಗಳಂತೆ ರೈಲ್ವೆ ಬೋಗಿಗಳನ್ನೇ ಐಸೋಲೇಶನ್ ವಾರ್ಡ್‍ಗಳನ್ನಾಗಿ ಮಾಡಲಾಗುತ್ತಿದೆ. ಇದನ್ನು ನೈಋತ್ಯ ರೈಲ್ವೇ ವಲಯ ಸಹ ಜಾರಿಗೆ ತರುತ್ತಿದ್ದು, ಹುಬ್ಬಳ್ಳಿ ಜಂಕ್ಷನ್‍ನಲ್ಲಿ ಈಗಾಗಲೇ ಈ ಕಾರ್ಯ ಆರಂಭವಾಗಿದೆ.

    ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ನೈಋತ್ಯ ರೈಲ್ವೇ ವಲಯದಲ್ಲಿನ ರೈಲು ಬೋಗಿಗಳನ್ನು ಪ್ರತ್ಯೇಕ ವಾರ್ಡ್‍ಗಳಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಪ್ರತ್ಯೇಕ ಸೌಲಭ್ಯಗಳಿಗಾಗಿ ದೇಶದ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರೈಲ್ವೆ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಕೋವಿಡ್-19 ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲಾತ್ತಿದೆ.

    ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರೈಲ್ವೇ ಕಾರ್ಮಿಕರು ಐಸೋಲೆಟೆಡ್ ವಾರ್ಡ್ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಬೋಗಿಗಳು ಸ್ವಚ್ಛವಾಗಿದ್ದು, ರೋಗಿಗಳು ಚೇತರಿಸಿಕೊಳ್ಳಲು ಆರೋಗ್ಯಕರ ಪರಿಸರವನ್ನು ಹೊಂದಿವೆ. ಅಗತ್ಯಕ್ಕನುಗುಣವಾಗಿ ಕೆಲವು ಕೋವಿಡ್-19 ರೋಗಿಗಳನ್ನು ಈ ಐಸೋಲೇಶನ್ ಭೋಗಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು. ಆರಂಭದಲ್ಲಿ 5,000 ಪ್ರಯಾಣಿಕರ ಬೋಗಿಗಳನ್ನು ಐಸೋಲೇಶನ್ ವಾರ್ಡ್‍ಗಳನ್ನಾಗಿ ಮಾರ್ಪಡಿಸಲು ಯೋಜಿಸಲಾಗಿದೆ.

    ಮಾರ್ಚ್ 25 ರಂದು ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್‍ಡೌನ್ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲ ಪ್ರಯಾಣಿಕ ರೈಲು ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಇವುಗಳಲ್ಲಿ ಕೆಲು ರೈಲುಗಳನ್ನು ಐಸೋಲೇಶನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

    ರೈಲ್ವೆ ಬೋಗಿಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಸಿಗಲಿದೆ. ವೈದ್ಯ ಸಿಬ್ಬಂದಿ, ಸೋಂಕಿತರು, ಶಂಕಿತರು ಸೇರಿದಂತೆ ಆಹಾರ ಪೂರೈಕೆಗೂ ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡ ನಂತರ ತಮ್ಮನ್ನು ತಾವೇ ಪ್ರತ್ಯೇಕಿಸಿಕೊಳ್ಳುವ, ಮತ್ತೊಬ್ಬರಿಂದ ಅಂತರ ಕಾಯ್ದುಕೊಳ್ಳುವ ಸೌಲಭ್ಯಗಳ ಅವಶ್ಯಕತೆಯಿದೆ. ಈ ಬೇಡಿಕೆ ಈಡೇರಿಸಲು ಭಾರತೀಯ ರೈಲ್ವೆ ಒಂದು ಚತುರ ಪರಿಹಾರವನ್ನು ಕಂಡುಹಿಡಿದಿದೆ.

    ವಿದ್ಯುತ್:
    ಪ್ರತ್ಯೇಕ ಸೌಲಭ್ಯಗಳಿಗಾಗಿ ದೇಶದ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರೈಲ್ವೆ ತನ್ನ ರೈಲು ಬೋಗಿಗಳನ್ನು ಕ್ವಾರಂಟೈನ್ ಹಬ್‍ಗಳಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸುತ್ತಿದೆ. ಆದರೆ ವಿದ್ಯುತ್ ಸಂಪರ್ಕವಿರುವ ಸಮೀಪದಲ್ಲಿ ಬೋಗಿಗಳನ್ನು ನಿಲ್ಲಿಸಿದರೆ ಅನುಕೂಲವಾಗಲಿದೆ.

    ವಿನ್ಯಾಸ:
    ಕ್ವಾರಂಟೈನ್‍ಗಾಗಿ ರೈಲ್ವೆ ಇಲಾಖೆ ನಾನ್ ಎಸಿ ಕೋಚ್ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ 10 ಕ್ಯಾಬಿನ್‍ಗಳಿರುತ್ತವೆ. ಕೇವಲ ಒಂದು ಬರ್ತ್ ಬಿಟ್ಟು ಉಳಿದ ಮೂರು ಬರ್ತ್ ತೆಗೆದು ರೂಮ್ ರೀತಿ ಸಿದ್ಧಗೊಳಿಸಲಾಗಿದೆ. ಇದೇ ರೀತಿ ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಇರುವ ರೂಮ್ ವ್ವವಸ್ಥೆ ಮಾಡಲಾಗಿದ್ದು, ಪ್ಲಾಸ್ಟಿಕ್ ಕರ್ಟನ್‍ನಿಂದ ಕ್ಯಾಬಿನ್ ಕವರ್ ಮಾಡಲಾಗಿದೆ.

    ಶೌಚಾಲಯ:
    ಒಂದು ಕ್ಯಾಬಿನ್‍ನಲ್ಲಿ 3 ಭಾರತೀಯ ಶೈಲಿ 1 ವೆಸ್ಟರ್ನ್ ಟಾಯ್ಲೆಟ್‍ಗಳಿರುತ್ತವೆ. ಈ ಪೈಕಿ ಎರಡು ಟಾಯ್ಲೆಟ್‍ಗಳನ್ನು ಸ್ನಾನದ ಕೋಣೆಯಾಗಿ ಪರಿವರ್ತಿಸಲಾಗಿದೆ. ಬಾಥ್ ರೂಮ್‍ನಲ್ಲಿ ಟ್ಯಾಪ್‍ನ ಎತ್ತರವನ್ನು ಹೆಚ್ಚಿಸಲಾಗಿದೆ. ಜೊತೆಗೆ ಹ್ಯಾಂಡ್ ಶವರ್ ಗಳನ್ನ ಹಾಕಲಾಗಿದೆ.

    ವೈದ್ಯಕೀಯ ಸಿಬ್ಬಂದಿ:
    ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಡಾಕ್ಟರ್, ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. ರೋಗಿ ಮತ್ತು ವೈದ್ಯರ ಕ್ಯಾಬಿನ್ ಮಧ್ಯೆ ಅಡ್ಡವಾಗಿ ಪ್ಲಾಸ್ಟಿಕ್ ಕರ್ಟನ್ ಹಾಕಲಾಗಿದೆ.

    ಆಹಾರ:
    ಬೇಸ್ ಅಡಿಗೆಮನೆಗಳಿಲ್ಲದ ನಿಲ್ದಾಣಗಳಿಗೆ ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಂಟ್ರಿ ಕಾರುಗಳನ್ನು ಮೊಬೈಲ್ ಅಡುಗೆಮನೆಯನ್ನಾಗಿ ಪರಿವರ್ತಿಸಲು ರೈಲ್ವೆ ಯೋಜಿಸಿದೆ.

  • ಕೊರೊನಾ ಎಫೆಕ್ಟ್- ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರ ನಾಳೆಯಿಂದ ರದ್ದು

    ಕೊರೊನಾ ಎಫೆಕ್ಟ್- ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರ ನಾಳೆಯಿಂದ ರದ್ದು

    ಹುಬ್ಬಳ್ಳಿ: ಜಾಗತಿಕ ಮಟ್ಟದಲ್ಲಿ ಮಾರಣಾಂತಿಕ ವೈರಸ್ ಎಂದು ಬಿಂಬಿತವಾಗಿರುವ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ಇಲಾಖೆ ಕೆಲವೊಂದು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶವು ಇಂದಿನಿಂದ ಮಾರ್ಚ್ 31ರವರೆಗೂ ಜಾರಿಯಲ್ಲಿರಲಿದೆ.

    ಹುಬ್ಬಳ್ಳಿಯಿಂದ ಬೆಂಗಳೂರು ಹೋಗುವ ಗಾಡಿ ಸಂಖ್ಯೆ 12079/12080 ಜನಶತಾಬ್ದಿ ಎಕ್ಸ್‌ಪ್ರೆಸ್, ಮೈಸೂರು-ಯಲಹಂಕ-ಮೈಸೂರ ಮಾಲ್ಗುಡಿ ಸಂಚರಿಸಲಿರುವ ಗಾಡಿ ಸಂಖ್ಯೆ 16023/16024 ಮಾಲ್ಗುಡಿ ಎಕ್ಸ್‌ಪ್ರೆಸ್, ಯಶವಂತಪುರದಿಂದ ಪಂಢರಪುರ ಸಂಚರಿಸುವ ಗಾಡಿ ಸಂಖ್ಯೆ 16541/16542 ಯಶವಂತಪುರ ಎಕ್ಸ್‌ಪ್ರೆಸ್, ಬೆಂಗಳೂರಿನಿಂದ ಮೈಸೂರು ಸಂಚರಿಸಲಿರುವ ಗಾಡಿ ಸಂಖ್ಯೆ 16557/16558 ರಾಜಾರಾಣಿ ಎಕ್ಸ್‌ಪ್ರೆಸ್, ಶಿವಮೊಗ್ಗದಿಂದ ಯಶವಂತಪುರ ಸಂಚರಿಸುವ ಗಾಡಿ ಸಂಖ್ಯೆ 06539/06540 ನಾಲ್ಕು ದಿನಕ್ಕೊಮ್ಮೆ ಸಂಚರಿಸುವ ವಿಕ್ಲಿ ಎಕ್ಸ್‌ಪ್ರೆಸ್ ನಾಳೆಯಿಂದ ಸಂಚಾರ ನಿಲ್ಲಿಸಲಿವೆ.

    ಮೈಸೂರನಿಂದ ರೇಣುಗುಂಟಾ ಗಾಡಿ ಸಂಖ್ಯೆ 11065/11066 ಮೈಸೂರು ಎಕ್ಸ್‌ಪ್ರೆಸ್, ಸಾಯಿನಗರ ಶಿರಡಿ ಸಂಚರಿಸುವ ಗಾಡಿ ಸಂಖ್ಯೆ 16217/16218 ಮೈಸೂರು ಎಕ್ಸ್‌ಪ್ರೆಸ್, ಯಶವಂತಪುರದಿಂದ ಮೈಸೂರಿಗೆ ಸಂಚರಿಸುವ ಗಾಡಿ ಸಂಖ್ಯೆ 16565/16566 ಯಶವಂತಪುರ ವಿಕ್ಲಿ ಎಕ್ಸ್‌ಪ್ರೆಸ್, ಬೆಳಗಾವಿಯಿಂದ ಮೈಸೂರು ಹೋಗುವ ಗಾಡಿ ಸಂಖ್ಯೆ 17326 ವಿಶ್ವಮಾನವ ಎಕ್ಸ್‌ಪ್ರೆಸ್ ಹಾಗೂ ಮೈಸೂರಿನಿಂದ ಬೆಳಗಾವಿ ಹೋಗುವ ಗಾಡಿ ಸಂಖ್ಯೆ 17325 ವಿಶ್ವಮಾನವ ಎಕ್ಸ್‌ಪ್ರೆಸ್ ಗಾಡಿಗಳು ಮಾರ್ಚ್ 31ರ ವರೆಗೂ ತಾತ್ಕಾಲಿಕವಾಗಿ ರದ್ದುಗೊಳಿಸಿ ರೈಲ್ವೇ ಸಚಿವಾಲಯ ಆದೇಶ ಹೊರಡಿಸಿದೆ.

    ಹಣ ವಾಪಸ್ ಹೇಗೆ?:
    ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ಈಗಾಗಲೇ ಕೌಂಟರ್ ನಲ್ಲಿ ಟಿಕೆಟ್ ಪಡೆದಿದ್ದರೆ ಅಂತಹ ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರಲಿದೆ. ಆ ಬಳಿಕ ಅವರು ಪ್ರಯಾಣಿಕರು ಬಂದು ಹಣ ಪಡೆಯಬಹದು ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

  • ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವಂಚಕರ ಬಂಧನ

    ರೈಲ್ವೇ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ವಂಚಕರ ಬಂಧನ

    ಧಾರವಾಡ: ನೈರುತ್ಯ ರೈಲ್ವೇಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ  ಯುವಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದ ಮೇಲೆ ನಾಲ್ವರು ವಂಚಕರನ್ನು ಇಲ್ಲಿನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

    16 ಯುವಕರಿಂದ ತಲಾ ಮೂರು ಲಕ್ಷ ರೂ. ಪಡೆದು ಹುಬ್ಬಳ್ಳಿಯಲ್ಲಿ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಕಲಿ ಪರೀಕ್ಷೆ ನಡೆಸುತ್ತಿದ್ದ ರೈಲ್ವೇ ನೌಕರ ಸೇರಿ ನಾಲ್ವರನ್ನು ರೈಲ್ವೇ ರಕ್ಷಣಾ ದಳ (ಆರ್‍ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

    ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲದ ಮೂಲದ ವಂಚಕರಾದ ಆನಂದ ಪಿ (36), ರಮೇಶ್ (42) ಹಾಗೂ ಮನೋಜ್ (24) ಮತ್ತು ಸಚಿನ್ (32) ಬಂಧಿತರು. ಇದರಲ್ಲಿ ಆನಂದ ಪಿ ಹಾಗೂ ರಮೇಶ ಇಬ್ಬರೂ ರೈಲ್ವೇ ಇಲಾಖೆಯ ಸಿಬ್ಬಂದಿಗಳಾಗಿದ್ದರು.

    ಹಲವು ವರ್ಷಗಳಿಂದ ಅಭ್ಯರ್ಥಿಗಳಿಗೆ ದೈಹಿಕ ಹಾಗೂ ಮೌಖಿಕ ಪರೀಕ್ಷೆ ನಡೆಸಿದ್ದರು. ನೈಋತ್ಯ ರೈಲ್ವೇ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿ ಸೋಮವಾರ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಯುವಕರಿಗೆ ತಿಳಿಸಿದ್ದರು. ಹೀಗಾಗಿ ರೈಲ್ವೇ ಆಸ್ಪತ್ರೆಯ ಒಂದು ಕೋಣೆಯಲ್ಲಿ ನಕಲಿ ವೈದ್ಯಕೀಯ ತಪಾಸಣೆ ಏರ್ಪಾಟು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಆರ್‍ಪಿಎಫ್ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿಗಳಿಗೆ ರೈಲ್ವೇ ಆಸ್ಪತ್ರೆಯಲ್ಲೇ ನಕಲಿ ವೈದ್ಯಕೀಯ ಪರೀಕ್ಷೆ ಮಾಡಿಸುವಷ್ಟು ಧೈರ್ಯ ಇದೆ ಎಂದರೆ ಪ್ರಕರಣದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ. ಪ್ರಕರಣದಲ್ಲಿ ಇನ್ನೂ ಹಲವರು ವಂಚನೆಗೊಳಗಾಗಿರುವ ಸಾಧ್ಯತೆಗಳಿದ್ದು, ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

    ಈ ನಡುವೆ ಬಂಧಿತ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ವಿಚಾರಣೆ ನೆಡೆಸುತ್ತಿದ್ದಾರೆ.