Tag: Southwest monsoon

  • ಕೇರಳ ಪ್ರವೇಶಿಸಿದ ಮಾನ್ಸೂನ್ ಮಾರುತಗಳು, ಇನ್ನೆರಡು ದಿನ ಕರ್ನಾಟಕದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ

    ಕೇರಳ ಪ್ರವೇಶಿಸಿದ ಮಾನ್ಸೂನ್ ಮಾರುತಗಳು, ಇನ್ನೆರಡು ದಿನ ಕರ್ನಾಟಕದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ

    ನವದೆಹಲಿ: ನೈಋತ್ಯ ಮಾನ್ಸೂನ್ ಮಾರುತಗಳು ಇಂದು ಕೇರಳ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಖಚಿತಪಡಿಸಿದೆ.

    ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಮಾಹಿತಿ ನೀಡಿದ್ದು, ಎರಡು ದಿನಗಳು ತಡವಾದರೂ ಅಂತಿಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿವೆ. ಕೇರಳದ ದಕ್ಷಿಣ ಭಾಗಗಳಿಗೆ ನೈಋತ್ಯ ಮಾನ್ಸೂನ್ ಪ್ರವೇಶಿಸಿದೆ ಎಂದು ಮೋಹಪಾತ್ರ ಅವರು ತಿಳಿಸಿದ್ದಾರೆ.

    ಸಾಮಾನ್ಯವಾಗಿ ಜೂನ್ 1ರಂದೇ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುತ್ತಿದ್ದವು. ಆದರೆ ಈ ವರ್ಷ 2 ದಿನಗಳ ಕಾಲ ತಡವಾಗಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳು ಭಾರತದಲ್ಲಿ ನಾಲ್ಕು ತಿಂಗಳ ಕಾಲ ಸುಧೀರ್ಘ ಮಳೆಗಾಲದ ಆರಂಭವನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.

    ಅರಬ್ಬಿ ಸಮುದ್ರ ದಕ್ಷಿಣ ಭಾಗ, ಲಕ್ಷದ್ವೀಪ ಪ್ರದೇಶ, ದಕ್ಷಿಣ ಕೇರಳ, ದಕ್ಷಿಣ ತಮಿಳುನಾಡು, ಕೊಮೊರಿನ್- ಮಾಲ್ಡೀವ್ಸ್ ನ ಕೆಲ ಭಾಗಗಳು ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗಗಳಲ್ಲಿ ಇಂದು ಮಳೆಯಾಗಲಿದೆ ಎಂದು ವಿವರಿಸಿದ್ದಾರೆ.

    ಉಳಿದಂತೆ ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು, ಅರಬ್ಬಿ ಸಮುದ್ರದ ದಕ್ಷಿಣ ಹಾಗೂ ಮಧ್ಯ ಭಾಗ, ಕೇರಳ, ಲಕ್ಷದ್ವೀಪದ ಉಳಿದ ಭಾಗ, ತಮಿಳುನಾಡು ಹಾಗೂ ಪುದುಚೇರಿಯ ಕೆಲವು ಭಾಗಗಳು, ರಾಯಲ್‍ಸೀಮಾ, ಬಂಗಾಳ ಕೊಲ್ಲಿಯ ದಕ್ಷಿಣ ಹಾಗೂ ಮಧ್ಯ ಭಾಗಗಳಲ್ಲಿ ಮುಂದಿನ 2 ದಿನಗಳ ಕಾಲ ಮಾನ್ಸೂನ್ ಮಾರುತಗಳು ಮಳೆ ಸುರಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.

    ಮೇ 31 ಅಂದರೆ ಸಾಮಾನ್ಯವಾಗಿ ಆರಂಭವಾಗುವ ದಿನಕ್ಕಿಂದ ಒಂದು ದಿನ ಮುಂಚಿತವಾಗಿಯೇ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಬಳಿಕ ನಾಲ್ಕು ದಿನಗಳು ಹೆಚ್ಚೂಕಡಿಮೆ ಆಗಬಹುದು ಎಂದಿತ್ತು. ಅಲ್ಲದೆ ಈ ವರ್ಷ ನೈಋತ್ಯ ಮಾನ್ಸೂನ್ ಮಾರುತಗಳು ಸಾಮಾನ್ಯವಾಗಿರಲಿವೆ ಎಂದು ಸಹ ಈ ಹಿಂದೆ ತಿಳಿಸಿತ್ತು.

  • ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಮಾನ್ಸೂನ್ ಮಾರುತಗಳು

    ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಮಾನ್ಸೂನ್ ಮಾರುತಗಳು

    ನವದೆಹಲಿ: ನೈಋತ್ಯ ಮಾನ್ಸೂನ್ ಮಾರುತಗಳು ಜೂನ್ 1ಕ್ಕೆ ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

    ಕೇಂದ್ರ ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವ್ ಅವರು ಈ ಕುರಿತು ಮಾತನಾಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ನೈಋತ್ಯ ಮಾನ್ಸೂನ್ ಮಾರುತಗಳು ಜೂ.1ಕ್ಕೆ ಕೇರಳ ಪ್ರವೇಶಿಸಲಿವೆ ಎಂದು ಮುನ್ಸೂಚನೆ ನೀಡಿದ್ದಾರೆ. ಮೇ 15ರಂದು ಭಾರತ ಹವಾಮಾನ ಇಲಾಖೆ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದು, ಯಾವ ದಿನಾಂಕದಂದು ಯಾವ ರಾಜ್ಯ ಪ್ರವೇಶಿಸಲಿವೆ, ಅಂದಾಜು ಎಷ್ಟು ಪ್ರಮಾಣದಲ್ಲಿ ಮಳೆ ಸುರಿಸಲಿವೆ ಎಂಬ ಮಾಹಿತಿ ನೀಡಲಿದೆ ಎಂದರು.

    ಮಾನ್ಸೂನ್ ಪ್ರವೇಶದ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ, ಎಂದಿನಂತೆ ಜೂನ್ 1ರಂದು ಕೇರಳ ಪ್ರವೇಶಿಸಲಿವೆ. ಇದು ಆರಂಭಿಕ ಸೂಚನೆಯಾಗಿದ್ದು, ಮೇ 15ರಂದು ಹವಾಮಾನ ಇಲಾಖೆ ಅಧಿಕೃತ ಮಾನ್ಸೂನ್ ಮುನ್ಸೂಚನೆ ಹಾಗೂ ಸರಾಸರಿ ಮಳೆಯ ಕುರಿತು ಮಾಹಿತಿ ನೀಡಲಿದೆ ಎಂದು ರಾಜೀವ್ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ಇತ್ತೀಚೆಗೆ ಭಾರತ ಹವಾಮಾನ ಇಲಾಖೆ ಮಾಹಿತಿ ನಿಡಿದ್ದು, ದೇಶದಲ್ಲಿ ವಾರ್ಷಿಕ ಶೇ.75ರಷ್ಟು ಮಳೆಗೆ ಕಾರಣವಾಗಿರುವ ನೈಋತ್ಯ ಮಾನ್ಸೂನ್ ಮಾರುತಗಳು ಈ ವರ್ಷ ಸಾಮಾನ್ಯ ಮಳೆ ಸುರಿಸುತ್ತವೆ ಎಂದು ತಿಳಿಸಿದೆ. ಈ ವರ್ಷ ಸಾಮಾನ್ಯ ಮಳೆ ಸುರಿಯಲಿದ್ದು, ಇದು ನಮ್ಮ ದೇಶ ಹಾಗೂ ದೇಶದ ಕೃಷಿಕರಿಗೆ ಸಂತಸದ ವಿಚಾರವಾಗಿದೆ ಎಂದು ರಾಜೀವ್ ಮಾಹಿತಿ ನೀಡಿದ್ದಾರೆ.

  • ಕೊರೊನಾ ಭೀತಿ ಮಧ್ಯೆ ಶುಭಸುದ್ದಿ – ನೈಋತ್ಯದಲ್ಲಿ ಉತ್ತಮ ಮಳೆ

    ಕೊರೊನಾ ಭೀತಿ ಮಧ್ಯೆ ಶುಭಸುದ್ದಿ – ನೈಋತ್ಯದಲ್ಲಿ ಉತ್ತಮ ಮಳೆ

    ನವದೆಹಲಿ: ಕೊರೊನಾ ವೈರಸ್ ಭೀತಿ ನಡುವೆ ಹವಾಮಾನ ಇಲಾಖೆ ಶುಭಸುದ್ದಿಯೊಂದನ್ನು ನೀಡಿದೆ. ಆಗಾಗ ಮಳೆಗೆ ಅಡ್ಡಿಪಡಿಸುತ್ತಿದ್ದ ‘ಎಲ್ ನಿನೋ’ ಪ್ರಭಾವದ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಾರಿ ನೈಋತ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

    ಭಾರತದಲ್ಲಿ ಸದ್ಯ ಕೊರೊನಾ ಅಟ್ಟಹಾಸಕ್ಕೆ ರೈತಾಪಿ ವರ್ಗ ನಷ್ಟ ಅನುಭವಿಸುತ್ತಿದೆ. ಭಾರತದಲ್ಲಿ ಮುಕ್ಕಾಲು ಭಾಗ ಜನರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನೇ ಅವಲಂಭಿಸಿದ್ದಾರೆ. ಹವಾಮಾನ ಇಲಾಖೆ ಏಪ್ರಿಲ್ ತಿಂಗಳ ಮಳೆ ಮುನ್ಸೂಚನೆ ಬಗ್ಗೆ ವರದಿ ಮಾಡಿದೆ. ಈ ಬಾರಿ ‘ಎಲ್ ನಿನೋ’ ಕಡಿಮೆ ಸಂಭವನೀಯತೆಯನ್ನು ಹೊಂದಿದೆ. ಇದು ಮಳೆಗೆ ಖಂಡಿತವಾಗಿಯೂ ಒಳ್ಳೆಯದು. ಆದರೆ ಸಂಕೀರ್ಣ ಹವಾಮಾನ ವ್ಯವಸ್ಥೆ ಇತರೆ ಹಲವು ಅಂಶಗಳ ಮೇಲೆ ಅವಲಂಭಿಸಿರುತ್ತದೆ ಎಂದು ಹವಾಮಾನಶಾಸ್ತ್ರಜ್ಞರು ಮಾಹಿತಿ ನೀಡಿದ್ದಾರೆ.

    ಒಂದು ವೇಳೆ ಜೂನ್-ಸೆಪ್ಟೆಂಬರ್ ತಿಂಗಳ ಮಳೆ ಸಾಮಾನ್ಯವಾಗಿದ್ದರೆ, ಈಗ ಲಾಕ್‍ಡೌನ್‍ನಿಂದ ಬೆಳೆ ಸರಬರಾಜು ಮಾಡಲು ಸಮಸ್ಯೆ ಎದುರಿಸುತ್ತಿರುವ ರೈತರು ಬೇಸಿಗೆ ಬಿತ್ತನೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದಾಗಿದೆ. ಇದು ಭಾರತದ ಆರ್ಥಿಕ ಮನೋಭಾವ ಮತ್ತು ದ್ವಿಚಕ್ರ ವಾಹನಗಳು, ಚಿನ್ನ, ಗ್ರಾಹಕರ ಸರಕುಗಳು, ಕಾರುಗಳು ಹಾಗೂ ಟ್ರ್ಯಾಕ್ಟರ್ ಗಳು ಸೇರಿದಂತೆ ಸರಕುಗಳ ಗ್ರಾಮೀಣ ಬೇಡಿಕೆಯನ್ನು ಹೆಚ್ಚಿಸುತ್ತದೆ.

    El Nino Southern Oscillation(ಇಎನ್‍ಎಸ್‍ಒ) ಸಮಭಾಜಕ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರನ್ನು ಬೆಚ್ಚಗಿರಿಸುತ್ತದೆ. ಭಾರತೀಯ ಹವಾಮಾನ ಇಲಾಖೆಗೆ(ಐಎಂಡಿ) ಲಭ್ಯವಿರುವ ಮಾಹಿತಿ ಪ್ರಕಾರ, ಸದ್ಯ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಬೆಚ್ಚಗಿದ್ದು, ಇನ್ನು ಮೂರು ತಿಂಗಳ ಅವಧಿಯಲ್ಲಿ ಅದು ತಟಸ್ಥವಾಗಲಿದೆ. ಹೀಗಾಗಿ ಮಳೆ ಉತ್ತಮವಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾದ ಹವಾಮಾನ ಇಲಾಖೆ ಕೂಡ ಈ ಬಗ್ಗೆ ವರದಿ ನೀಡಿದ್ದು, ಈ ಬಾರಿ ಇಎನ್‍ಎಸ್‍ಒ ಮಾಹಿತಿ ನಿಖರವಾಗಿದ್ದು, ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ತಟಸ್ಥವಾಗುತ್ತದೆ ಎಂದು ತಿಳಿಸಿದೆ.

    ಏನಿದು ಎಲ್ ನಿನೋ?
    ಎಲ್ ನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ಪೆರು ಮತ್ತು ಈಕ್ವೆಡಾರ್ ಬಳಿ ಪ್ರಾರಂಭವಾಗುವ ಒಂದು ಹವಾಮಾನ ವೈಪರಿತ್ಯದ ವಿದ್ಯಮಾನವಾಗಿದೆ. ಇದರ ಪ್ರಾರಂಭದ ಸೂಚನೆಯಾಗಿ ಈ ಭಾಗದ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನದ ಸರಾಸರಿಗಿಂತ ಹೆಚ್ಚಾಗಲು ಆರಂಭವಾಗುತ್ತದೆ. ಪೆಸಿಫಿಕ್ ಸಾಗರದ ಮೇಲ್ಮೈ ತಾಪ ಸರಾಸರಿ ಸಹಜ ತಾಪಕ್ಕಿಂತ 0.5-0.9 ಡಿಗ್ರಿ ಸೆಲ್ಸಿಯಸ್ ಇದ್ದರೆ ಅದನ್ನು ದುರ್ಬಲ ಎನ್ ನಿನೋ ಎಂದು ಕರೆಯಲಾಗುತ್ತದೆ. ಎಲ್‍ನಿನೋ 1.5 ಡಿಗ್ರಿಗಿಂತ ಹೆಚ್ಚಿರಬೇಕು ಆಗ ಉತ್ತಮ ಮಳೆ ಆಗುತ್ತದೆ.

    ಒಂದು ವೇಳೆ ಪೆಸಿಫಿಕ್ ಮೇಲ್ಮೈ ನೀರು ಬೆಚ್ಚಗಿದ್ದರೆ ಅದು ಶುಷ್ಕ ಹವಾಮಾನಕ್ಕೆ ಕಾರಣವಾಗುತ್ತದೆ. ಇದರಿಂದ ಮಳೆ ಕಡಿಮೆಗೊಳ್ಳುತ್ತದೆ. ಭಾರತದ ಬಹುತೇಕ ಭಾಗದಲ್ಲಿ ಸರಾಸರಿ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ ಅಥವಾ 1 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇತ್ತ ಹಿಂದೂ ಮಹಾಸಾಗರದ ದ್ವಿಧ್ರುವಿ (ಐಓಡಿ)ಎಂದು ಕರೆಯಲ್ಪಡುವ ಮತ್ತೊಂದು ವಿದ್ಯಮಾನವು ತಟಸ್ಥವಾಗಿದೆ. ಈ ವಿದ್ಯಮಾನವು ಹಿಂದೂ ಮಹಾಸಾಗರದ ವಿವಿಧ ಭಾಗಗಳ ನಡುವಿನ ತಾಪಮಾನದಲ್ಲಿನ ವ್ಯತ್ಯಾಸವನ್ನು ತಿಳಿಸುತ್ತದೆ. ಭಾರತೀಯ ಮಾನ್ಸೂನ್‍ಗೆ ಸಕಾರಾತ್ಮಕ ಐಒಡಿ ರೇಟಿಂಗ್ ಸಹಾಯ ಮಾಡುತ್ತದೆ ಎಂದು ಐಎಂಡಿ ಹೇಳಿದೆ. ಕಳೆದ ಬಾರಿ ಐಒಡಿ ರೇಟಿಂಗ್ ಪಾಸಿಟಿವ್ ಇದ್ದ ಕಾರಣಕ್ಕೆ ಜೂನ್ ತಿಂಗಳ ಮೊದಲ ವಾರದಲ್ಲೇ ದಾಖಲೆ ಪ್ರಮಾಣದ ಮಳೆ ಭಾರತದಲ್ಲಿ ಸುರಿದಿತ್ತು.