Tag: Souparnika River

  • ವಿದ್ಯಾರ್ಥಿಗಳನ್ನು ಸೌಪರ್ಣಿಕಾ ನದಿ ದಾಟಿಸಿ SSLC ಪರೀಕ್ಷೆ ಬರೆಸಿದ ಉಡುಪಿ ಡಿಡಿಪಿಐ

    ವಿದ್ಯಾರ್ಥಿಗಳನ್ನು ಸೌಪರ್ಣಿಕಾ ನದಿ ದಾಟಿಸಿ SSLC ಪರೀಕ್ಷೆ ಬರೆಸಿದ ಉಡುಪಿ ಡಿಡಿಪಿಐ

    – ಶಿಕ್ಷಕರ ಮುತುವರ್ಜಿಗೆ ಜಿಲ್ಲೆಯ ಜನರ ಶ್ಲಾಘನೆ

    ಉಡುಪಿ: ತುಂಬಿ ಹರಿಯುತ್ತಿರುವ ಸೌಪರ್ಣಿಕಾ ನದಿಯನ್ನು ದಾಟಿ ಇಬ್ಬರು ವಿದ್ಯಾರ್ಥಿನಿಯರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದಾರೆ. ಸ್ವತಃ ಉಡುಪಿ ಡಿಡಿಪಿಐ ನದಿ ದಾಟಿಸಿ ಕುದ್ರು ಪ್ರದೇಶದ ಮಕ್ಕಳಿಗೆ ಬೆಂಬಲವಾಗಿ ನಿಂತಿದ್ದಾರೆ.

    ಜಿಲ್ಲೆಯ ಬೈಂದೂರು ತಾಲೂಕಿನ ಕುರು ದ್ವೀಪದ ಇಬ್ಬರು ವಿದ್ಯಾರ್ಥಿನಿಯನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ದೋಣಿಯ ಮೂಲಕ ನದಿಯನ್ನು ದಾಟಿಸಿ ಡಿಡಿಪಿಐ ಹಾಗೂ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿಯವರು ಪರೀಕ್ಷಾ ಕೇಂದ್ರಕ್ಕೆ ಕರೆ ತಂದಿದ್ದಾರೆ.

    ಬೈಂದೂರು ವಲಯದ ಮರವಂತೆ ಸರ್ಕಾರಿ ಪ್ರೌಢ ಶಾಲೆಯ ಶಿಲ್ಪಾ ಹಾಗೂ ಸಂಜನಾ ಅವರ ಮನೆ ಕುರು ದ್ವೀಪದಲ್ಲಿದ್ದರು. ಊರಿಂದಾಚೆಗೆ ಬರಬೇಕೆಂದರೆ ಮರವಂತೆ, ಇಲ್ಲವಾದರೆ ನಾಡಾ ಮೂಲಕ ಸಾಗಿ ಬರಬೇಕಾಗುತ್ತದೆ. ದೋಣಿ ಮೂಲಕ ಸಾಗಿ ಬಂದರೂ ಇಲ್ಲಿನ ವಿದ್ಯಾರ್ಥಿಗಳು ಬಯಲು ದಾರಿಯಲ್ಲಿ ಮತ್ತೆ ಅರ್ಧ ಕಿ.ಮೀ ಗೂ ಹೆಚ್ಚು ನಡೆದುಕೊಂಡೇ ಕ್ರಮಿಸಿಬೇಕು. ನಿರಂತರ ಸುರಿದ ಭಾರೀ ಮಳೆಯಿಂದಾಗಿ ಪರೀಕ್ಷೆ ಬರೆಯಲು ಈ ವಿದ್ಯಾರ್ಥಿನಿಯರಿಗೆ ತುಂಬಾ ಸಮಸ್ಯೆಯಾಗಿತ್ತು. ಇದು ಪರೀಕ್ಷೆಯ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ ಅವರ ಗಮನಕ್ಕೆ ಬಂದಿದೆ. ಬಳಿಕ ಶಿಕ್ಷಣ ಇಲಾಖೆ ಮಕ್ಕಳನ್ನು ಕರೆತರಲು ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.

    ಇಬ್ಬರು ಶಿಕ್ಷಕರನ್ನು ನಿಯೋಜಿಸಿ ಮಕ್ಕಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ. ವಿಶೇಷ ಕಾಳಜಿಯೊಂದಿಗೆ ಖುದ್ದು ಡಿಡಿಪಿಐ ಎಚ್.ಎನ್.ನಾಗೂರ ಹಾಗೂ ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಸ್ವತಃ ದೋಣಿ ಮೇಲೇರಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಡಿಡಿಪಿಐ ಹಾಗೂ ಬೈಂದೂರು ತಹಸೀಲ್ದಾರ್ ಮರವಂತೆ ರಾ.ಹೆದ್ದಾರಿಯಿಂದ ಅರ್ಧ ಕಿ.ಮೀ ಬಯಲು ದಾರಿಯಲ್ಲಿ ನಡೆದು ಆ ಬಳಿಕ ದೋಣಿ ಮೂಲಕ ಕುರುವಿಗೆ ಪ್ರಯಾಣ ಬೆಳೆಸಿ ಮತ್ತೆ ಅದೇ ದೋಣಿಯಲ್ಲಿ ವಿದ್ಯಾರ್ಥಿಗಳನ್ನು ಕರೆತಂದು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಬಿಟ್ಟು ಗಮನ ಸೆಳೆದಿದ್ದಾರೆ. ಮಕ್ಕಳ ಬಗೆಗಿನ ಶಿಕ್ಷಣ ಇಲಾಖೆಯ ಈ ಕಾಳಜಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

    ನದಿ ದಾಟಿಸಿ ಗ್ರಾಮಸ್ಥರೇ ಮಕ್ಕಳನ್ನು ಪರೀಕ್ಷೆ ಬರೆಸುವ ವ್ಯವಸ್ಥೆ ಮಾಡಬಹುದಿತ್ತು. ಗ್ರಾಮೀಣ ಭಾಗಕ್ಕೂ ಶಿಕ್ಷಣದ ಒತ್ತುಕೊಡುವ ಹಿನ್ನೆಲೆಯಲ್ಲಿ ಶಿಕ್ಷಕರ ಜೊತೆಗೆ ಸ್ವತಃ ನಾನೇ ಹೋಗಿದ್ದೇನೆ ಎಂದು ಡಿಡಿಪಿಐ ತಿಳಿಸಿದ್ದಾರೆ.