Tag: soumya reddy

  • ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ಕಟ್ಟಿರುವ ಹಣ ಹಿಂದಿರುಗಿಸಿ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ

    ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ಕಟ್ಟಿರುವ ಹಣ ಹಿಂದಿರುಗಿಸಿ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಮನವಿ

    ಬೆಂಗಳೂರು: ಆಸ್ಪತ್ರೆಗೆ ಹಣ ಕಟ್ಟಲಾಗದೆ ಪರದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಬಿಲ್ ಕಟ್ಟಲಾಗದೆ, ಹೆಣ ತರಲಾಗದ ಸ್ಥಿತಿಯೂ ಹಲವರಿಗಿದೆ. ಹೀಗಾಗಿ ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ವೆಚ್ಚ ಮಾಡಿರುವ ಹಣವನ್ನು ಹಿಂದಿರುಗಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಮನವಿ ಮಾಡಿದ್ದಾರೆ.

    ಬೆಂಗಳೂರಿನ ಜಯನಗರ, ಬಿಟಿಎಂ ಬಡಾವಣೆಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಆಯೋಜಿಸಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;

    ಮಾಧ್ಯಮಗಳ ವರದಿ ಪ್ರಕಾರ ಶೇ.47 ರಷ್ಟು ಜನಸಾಮಾನ್ಯರು ತಮ್ಮ ಬಳಿ ಇದ್ದ ಸಣ್ಣ-ಪುಟ್ಟ ಚಿನ್ನಾಭರಣ ಒತ್ತೆ ಇಟ್ಟು ಜೀವನ ನಡೆಸುತ್ತಿದ್ದಾರೆ. ಅದು ಅವರ ತಪ್ಪಲ್ಲ, ಅವರ ಸಾಲ ಮನ್ನಾ ಮಾಡಿ ಎಂದು ನಾನು ಕೇಳುವುದಿಲ್ಲ. ಆದರೆ ಆಸ್ಪತ್ರೆ ಬಿಲ್ ಕಟ್ಟಲಾಗದೆ ಒದ್ದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಸೇರಿದವರ ಖರ್ಚು 5 ಲಕ್ಷ ರೂಪಾಯಿಗಿಂತ ಕಡಿಮೆ ಆಗಿಲ್ಲ. ಸಾಕಷ್ಟು ಜನ ಹಣ ಕಟ್ಟಲಾಗುತ್ತಿಲ್ಲ ಅಂತಾ ನನ್ನ ಬಳಿಯೇ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಗೆ ಹೋದವರಲ್ಲಿ ಸಾಕಷ್ಟು ಜನ ಹೆಣವಾಗಿ ಬಂದರು. ಕುಟುಂಬ ಸದಸ್ಯರು ಸತ್ತರೆ, ಆಸ್ಪತ್ರೆ ಬಿಲ್ ಕಟ್ಟಿ ಹೆಣ ತರಲಾಗದ ಸ್ಥಿತಿ ಹಲವರಿಗಿದೆ. ಇವರಿಗೆ ಸರ್ಕಾರ ನೆರವಾಗಬೇಕು.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನ ತಮ್ಮ ಹಣ ತೆಗೆದುಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ, ಆಕ್ಸಿಜನ್, ಔಷಧ ಪಡೆಯಲು ಮಾತ್ರವಲ್ಲದೆ, ಕಡೆಗೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲುವಂತ ದುಸ್ಥಿತಿ ನಿರ್ಮಾಣವಾಯಿತು. ಇಂತಹ ಕೆಟ್ಟ ಸರ್ಕಾರವನ್ನು ನಾವು ಇದುವರೆಗೂ ನೋಡಿಲ್ಲ. ಈ ಸಮಸ್ಯೆಯಿಂದ ಮುಕ್ತಿ ಸಿಗಬೇಕಾದರೆ ಜನ ಈ ಸರ್ಕಾರವನ್ನು ಕಿತ್ತೊಗೆಯಬೇಕು.

    ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಬೆಂಗಳೂರಿನ ಜನ ಸಾಮಾನ್ಯರಿಗೆ ಸತತ ನೆರವು ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿದ್ದು, ಬಿಟಿಎಂ ಹಾಗೂ ಜಯನಗರ ಕ್ಷೇತ್ರದಲ್ಲಿ. ಕಳೆದ ವರ್ಷವೂ ನಾನು ಇಲ್ಲಿಗೆ ನಾಲ್ಕು ಬಾರಿ ಆಗಮಿಸಿದ್ದೆ. ಈ ವರ್ಷವೂ ಬಂದಿದ್ದೇನೆ. 50 ಸಾವಿರ ಬಡ ಕುಟುಂಬಗಳಿಗೆ ನಮ್ಮ ನಾಯಕರು ಈ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ: ಡಿ.ಕೆ.ಶಿವಕುಮಾರ್ ತರಾಟೆ

    ಆಹಾರ ಕಿಟ್, ತರಕಾರಿ ಹಾಗೂ ಮೆಡಿಕಲ್ ಕಿಟ್ ಗಳನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದಾರೆಯೇ ಹೊರತು, ಇವರಾರಿಗೂ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ. ಕಾರ್ಮಿಕ ಸಚಿವಾಲಯದಿಂದ ಬಂದ ಫುಡ್ ಕಿಟ್ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚುತ್ತಿಲ್ಲ. ಮತದಾರರ ಬದುಕು ಉಳಿಸಲು ನಮ್ಮ ನಾಯಕರು ತಮ್ಮ ಶ್ರಮದ ಹಣದಿಂದ ನೆರವು ನೀಡಿ, ಅಮೋಘ ಸೇವೆ ಮಾಡುತ್ತಿದ್ದಾರೆ.

    100 ನಾಟೌಟ್ ಜನರ ಹೋರಾಟ:
    ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮಾಡಿದ 100 ನಾಟೌಟ್ ಪ್ರತಿಭಟನೆ ಕೇವಲ ಪಕ್ಷದ ಕಾರ್ಯಕ್ರಮ ಅಲ್ಲ. ಅದು ಜನರ ಆಕ್ರೋಶದ ಪ್ರತಿಧ್ವನಿ. ಈ ವರ್ಷ 50 ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಅಮೆರಿಕದಲ್ಲೂ ಇಲ್ಲಿಗಿಂತ ಕಡಿಮೆ ಬೆಲೆ ಇದೆ. ಇಲ್ಲಿನ ಬೆಲೆ ಹೆಚ್ಚಳದಿಂದ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದರೆ ಜನರ ಆದಾಯದಲ್ಲಿ ಏನಾದರೂ ಏರಿಕೆಯಾಗಿದೆಯಾ..? ಇಲ್ಲವೇ ಇಲ್ಲ. ಆದರೆ ಸರ್ಕಾರದ ಬೊಕ್ಕಸ ಮಾತ್ರ ತುಂಬುತ್ತಿದೆ. ಅದೇ ಕಾರಣಕ್ಕೆ ನಾವು ಈ ಸರ್ಕಾರ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಹೇಳುತ್ತಿದ್ದೇವೆ.

    ಕೊರೋನಾ ವಿಚಾರದಲ್ಲಿ ಡೆತ್ ಆಡಿಟ್ ಮಾಡಿ ಎಂದು ನಾವು ಆಗ್ರಹಿಸಿದೆವು. ಈಗ ನಮ್ಮ ಒತ್ತಾಯದ ಮೇರೆಗೆ ಕೆಲವು ಮೃತರಿಗೆ 1 ಲಕ್ಷ ರುಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಗೆ ಆಡಳಿತ ನಡೆಸಲು ಆಗುತ್ತಿಲ್ಲ,ಅವರ ಪುತ್ರ ಆಡಳಿತ ನಡೆಸುತ್ತಿದ್ದಾರೆ: ಶಾಸಕ ಶರಣಬಸಪ್ಪ ದರ್ಶನಾಪುರ

    ಯಡಿಯೂರಪ್ಪನವರೆ, ಕೋವಿಡ್ ಚಿಕಿತ್ಸೆಗಾಗಿ ಯಾರೆಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಹಣ ಖರ್ಚು ಮಾಡಿದ್ದಾರೋ, ಅವರಿಗೆ ಆ ಹಣ ಹಿಂದುರಿಗಿಸಿ. ನಿಮ್ಮ ಆಯುಷ್ಮಾನ್ ಭಾರತ ಯೋಜನೆ ಮೂಲಕವಾಗಲಿ ಅಥವಾ ಬೇರೆ ಯಾವುದೇ ಯೋಜನೆಗಳ ಮೂಲಕವಾಗಲಿ ಜನರಿಗೆ ಅವರ ಹಣ ಹಿಂದಿರುಗಿಸಿ ಎಂದು ಕಾಂಗ್ರೆಸ್ ಪರವಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.

    ಬಿಜೆಪಿಗೆ ಅಧಿಕಾರ ಕೊಟ್ಟ ಜನರಿಗೆ ವೈರಾಗ್ಯ ಬಂದಿದೆ:
    ಕಾರ್ಯಕ್ರಮ ನಂತರ ಬಿಜೆಪಿ ಆಂತರಿಕ ಕಚ್ಚಾಟದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಬಿಜೆಪಿ ಬಂದಾಗಲೆಲ್ಲ ಈ ಸಮಸ್ಯೆ ಉದ್ಭವಿಸುತ್ತಿದೆ. ನಮ್ಮಲ್ಲಿಯೂ ಈ ಹಿಂದೆ ಇಂತಹ ಪರಿಸ್ಥಿತಿ ಇತ್ತು. ಅದರಿಂದ ಪಾಠ ಕಲಿತು ನಾವು ತಪ್ಪು ತಿದ್ದುಕೊಂಡಿದ್ದೇವೆ ಎಂದರು.

    ಪಕ್ಷದ ಗೊಂದಲ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ. ಜನರಿಗೆ ಇದು ಮಾರಕ. ಮಂತ್ರಿಗಳು ಹಾಗೂ ಶಾಸಕರು ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಬಲಿಷ್ಠ ನಾಯಕ ಅಂದುಕೊಂಡಿದ್ದೆ. ಆದರೆ ಆಡಳಿತ ವಿಚಾರದಲ್ಲಿ ಬಹಳ ದುರ್ಬಲರಾಗಿದ್ದಾರೆ. ಬಿಜೆಪಿಗೆ ಯಾಕಾದರೂ ಅಧಿಕಾರ ಕೊಟ್ಟೆವು ಎಂದು ಜನರಿಗೆ ವೈರಾಗ್ಯ ಬಂದಿದೆ ಎಂದು ತಿಳಿಸಿದರು.

    ಸರ್ಕಾರದ ದೌರ್ಬಲ್ಯ ಕುರಿತು ಸತ್ಯಾಂಶ ಒಪ್ಪಿಕೊಂಡ ಈಶ್ವರಪ್ಪ ಅವರಿಗೆ ಅಭಿನಂದನೆಗಳು. ಈ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಕಾಂಗ್ರೆಸ್ ಇದನ್ನು ಉಪಯೋಗಿಸಿಕೊಳ್ಳುತ್ತದೋ ಇಲ್ಲವೋ ಅದು ಬೇರೆ ವಿಚಾರ. ಮೊದಲು ಅವರ ಆಟ ಮುಗಿಯಲಿ.

    ಬಾಂಬೆ ಟೀಮ್ ನಿಂದ ಗೊಂದಲವಾಗುತ್ತಿದೆ ಎಂಬ ಈಶ್ವರಪ್ಪ ಅವರ ಈಗಿನ ಹೇಳಿಕೆ ಬಗ್ಗೆ ನಾನು ಈ ಹಿಂದೆಯೇ ವಿಧಾನಸಭೆಯಲ್ಲೇ ಭವಿಷ್ಯ ನುಡಿದಿದ್ದೆ. ಈಶ್ವರಪ್ಪ ಅವರ ಈ ಟೀಕೆಗೆ ಬಿ.ಸಿ. ಪಾಟೀಲ್ ಉತ್ತರ ಕೊಟ್ಟಿದ್ದಾರೆ ಎಂದರು.

  • ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಎಫ್‍ಐಆರ್ ದಾಖಲು

    ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಎಫ್‍ಐಆರ್ ದಾಖಲು

    ಬೆಂಗಳೂರು: ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಕಾಂಗ್ರೆಸ್ ಪ್ರತಿಭಟನೆ ವೇಳೆ ಕರ್ತವ್ಯನಿರತ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 323(ಸಾರ್ವಜನಿಕವಾಗಿ ನೋವುಂಟು ಮಾಡುವುದು) ಹಾಗೂ 353 (ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ, ಸರ್ಕಾರಿ ಕೆಲಸಕ್ಕೆ ಅಡ್ಡಿ) ಅಡಿ ಪ್ರಕರಣ ದಾಖಲಿಸಲಾಗಿದೆ.

    ಹೋಮ್ ಗಾರ್ಡ್ ಅಂಬಿಕಾ ನೀಡಿದ ದೂರಿನ ಆಧಾರದ ಮೇಲೆ ಶಾಸಕಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಕರ್ತವ್ಯ ನಿರತವಾಗಿರುವಾಗ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಹಿಳಾ ಗಾರ್ಡ್ ಆರೋಪಿಸಿದ್ದಾರೆ. ಈ ಹಿನ್ನೆಲೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ.

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳನ್ನು ಖಂಡಿಸಿ ಜ.20ರಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ರಾಜಭವನ ಮುತ್ತಿಗೆ ಹಾಕುವ ವೇಳೆ ಸೌಮ್ಯ ರೆಡ್ಡಿಯವರು ಮಹಿಳಾ ಪೊಲೀಸ್ ಸಿಬ್ಬಂದಿ ಹೊಡೆದಿದ್ದು ಸುದ್ದಿಯಾಗಿತ್ತು.

  • ಯಾರ ಮೇಲೂ ಹಲ್ಲೆ ಮಾಡಿಲ್ಲ: ಸೌಮ್ಯ ರೆಡ್ಡಿ ಸ್ಪಷ್ಟನೆ

    ಯಾರ ಮೇಲೂ ಹಲ್ಲೆ ಮಾಡಿಲ್ಲ: ಸೌಮ್ಯ ರೆಡ್ಡಿ ಸ್ಪಷ್ಟನೆ

    ಬೆಂಗಳೂರು: ಇಂದು ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಯ ಕುರಿತು ಶಾಸಕಿ ಸೌಮ್ಯ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ, ನಾವೆಲ್ಲರೂ ಶಾಂತಿಯುತವಾಗಿ ನಡೆದುಕೊಂಡು ಬರುತ್ತಿದ್ದಾಗ ಪೊಲೀಸರೇ ನಮ್ಮನ್ನ ತಳ್ಳಿದರು. ತಳ್ಳಬೇಡಿ ಅಂತ ಹೇಳಿದ್ರೂ ತಳ್ಳಾಟ ನೂಕಾಟದಲ್ಲಿ ನಾನು ಕೆಳಗೆ ಬಿದ್ದೆ. ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಅಂಜಲಿ ನಿಂಬಾಳ್ಕರ್, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲ ನಾಯಕರು, ಕಾರ್ಯಕರ್ತರು ಸಹ ಅಲ್ಲಿದ್ದರು. ರಾಜ್ಯ ಸರ್ಕಾರ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿತು ಎಂದು ಆರೋಪಿಸಿದರು.

    ಬಲವಂತವಾಗಿ ಪೊಲೀಸರು ನಮ್ಮನ್ನು ಬಸ್ ನೊಳಗೆ ತಳ್ಳುತ್ತಿದ್ದರು. ಎಳೆಯಬೇಡಿ, ತಳ್ಳಬೇಡಿ ಅಂತ ಹೇಳುತ್ತಿದ್ದರೂ ತಳ್ಳಿದರು. ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿದ್ದರು. ಕೆಳಗೆ ಬಿದ್ದಾಗ ನಮ್ಮನ್ನ ರಕ್ಷಿಸಿಕೊಳ್ಳಲು ಹೋಗಿದ್ದೇವೆ. ಪೊಲೀಸರ ಮೇಲೆ ನಾವ್ಯಾಕೆ ಹಲ್ಲೆ ಮಾಡೋಣ. ಪೊಲೀಸರೇ ಅನಗತ್ಯವಾಗಿ ಗೊಂದಲ ಮಾಡಿದರು ಎಂದರು.

    ಲೇಡಿ ರೌಡಿ ಆಗಲು ಹೊರಟಿದ್ದೀರಾ?: ಇದೇನು ಸೌಮ್ಯ ರೆಡ್ಡಿ ಅವರೇ, ಲೇಡಿ ರೌಡಿ ಆಗಲು ಹೊರಟಿದ್ದೀರಾ? ಡಿ.ಕೆ.ಶಿವಕುಮಾರ್ ಅವರ ಕುಮ್ಮಕ್ಕಿನಿಂದ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದೇ? ಜನಸಾಮಾನ್ಯರಿಗೆ ತೊಂದರೆ, ಪೊಲೀಸರ ಮೇಲೆ ಹಲ್ಲೆ ಇದು ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಕೊಡುವ ಗೌರವವೇ ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

    ನಡೆದಿದ್ದೇನು?: ರೈತ ಕಾಯ್ದೆ ರದ್ಧತಿ ಆಗ್ರಹಿಸಿ ಇಂದು ಕಾಂಗ್ರೆಸ್ ರಾಜಭವನ ಚಲೋವನ್ನು ಆಯೋಜಿಸಿತ್ತು. ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶದ ಬಳಿಕ ರಾಜಭವನಕ್ಕೆ ತೆರಳಲು ಹೋಗುತ್ತಿದ್ದಾಗ ಪೊಲೀಸರು ಕಾಂಗ್ರೆಸ್ ನಾಯಕರನ್ನು ತಡೆದಿದ್ದಾರೆ. ಈ ವೇಳೆ ಸೌಮ್ಯಾ ರೆಡ್ಡಿ ಅವರನ್ನು ಮಹಿಳಾ ಪೊಲೀಸರು ತಡೆದಿದ್ದಾರೆ. ಈ ವೇಳೆ ಸೌಮ್ಯ ರೆಡ್ಡಿ “ಹೂ ದಿ ಹೆಲ್” ಎಂದು ಹೇಳಿ ಮಹಿಳಾ ಸಿಬ್ಬಂದಿಯ ಮೇಲೆ ಕೈ ಎತ್ತಿದ್ದಾರೆ.

    ತಳ್ಳಾಟ ನೂಕಾಟದಿಂದ ಕೋಪಗೊಂಡಿದ್ದ ಸೌಮ್ಯ ರೆಡ್ಡಿ ಹಲ್ಲೆ ಮಾಡಿ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಳಿ ಮಹಿಳಾ ಪೇದೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

  • ಸಿಎಎ, ಎನ್‌ಆರ್‌ಸಿ ವಿರೋಧಿಸಿ ಅಹೋರಾತ್ರಿ ಧರಣಿ – ಮಗು ಹಿಡಿದು ಕುಳಿತ ಸೌಮ್ಯ ರೆಡ್ಡಿ

    ಸಿಎಎ, ಎನ್‌ಆರ್‌ಸಿ ವಿರೋಧಿಸಿ ಅಹೋರಾತ್ರಿ ಧರಣಿ – ಮಗು ಹಿಡಿದು ಕುಳಿತ ಸೌಮ್ಯ ರೆಡ್ಡಿ

    ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರೋ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಅದರಲ್ಲೂ ದೆಹಲಿಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಯೂ ಹಿಂಸಾತ್ಮಕ ರೂಪ ಪಡೆದು ಅನೇಕ ಮಂದಿಯನ್ನು ಬಲಿಪಡೆದಿದೆ.

    ರಾಷ್ಟ್ರ ರಾಜಧಾನಿ ಮಾತ್ರವಲ್ಲ, ರಾಜ್ಯ ರಾಜಧಾನಿಯಲ್ಲೂ ಒಂದಿಲ್ಲೊಂದು ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಬೆಂಗಳೂರಿನಲ್ಲೂ ಶಾಹಿನ್ ಬಾಗ್ ರೀತಿಯಲ್ಲಿ ಅಹೋರಾತ್ರಿ ಧರಣಿ, ಪ್ರತಿಭಟನೆ ಕಳೆದ 20 ದಿನಗಳಿಂದ ನಡೆಯುತ್ತಿದೆ.

    ಹೌದು ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರೋ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ಪ್ರತಿದಿನ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಬಿಲಾಲ್ ಮಸೀದಿಯ ಮುಂಭಾಗದಲ್ಲಿ ನಡೆಯುತ್ತಿರೋ ಪ್ರತಿಭಟನೆಗೆ ಮತ್ತೊಂದು ಶಾಹಿನ್ ಬಾಗ್ ಎಂದು ಹೆಸರು ಕೊಟ್ಟಿದ್ದು, ಬಿಲಾಲ್ ಬಾಗ್ ಬೆಂಗಳೂರು ಎಂಬ ಹೆಸರಿನಡಿಯಲ್ಲಿ ಸೇವ್ ಇಂಡಿಯಾ, ಸಂವಿಧಾನವನ್ನ ರಕ್ಷಸಿ ಎಂದು ಬ್ಯಾನರ್ ಹಾಕಿಕೊಂಡು ನೂರಾರು ಮಹಿಳೆಯರು ಮಕ್ಕಳ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

    ಇವರ ಅಹೋರಾತ್ರಿ ಧರಣಿಗೆ ಬಾಲಿವುಡ್ ನಟ ನಸೀರುದ್ದೀನ್ ಶಾ, ಶಾಸಕಿ ಸೌಮ್ಯ ರೆಡ್ಡಿ ಸಹ ಸಾಥ್ ನೀಡಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆಯನ್ನ ಹಿಂಪಡೆಯುವವರೆಗೆ ಧರಣಿ ಮಾಡಲು ಇಲ್ಲಿನ ಮಹಿಳೆಯರು ಹಾಗೂ ಸಾರ್ವಜನಿಕರು ನಿರ್ಧಾರ ಮಾಡಿದ್ದಾರೆ.

  • ಧರ್ಮದ ಹೆಸರಲ್ಲಿ ದೇಶ ಒಡೆಯಲು ಬಿಡಲ್ಲ: ಸೌಮ್ಯ ರೆಡ್ಡಿ

    ಧರ್ಮದ ಹೆಸರಲ್ಲಿ ದೇಶ ಒಡೆಯಲು ಬಿಡಲ್ಲ: ಸೌಮ್ಯ ರೆಡ್ಡಿ

    ಬೆಂಗಳೂರು: ಧರ್ಮದ ಹೆಸರಲ್ಲಿ ದೇಶ ಒಡೆಯಲು ನಾವು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಶಾಸಕಿ ಸೌಮ್ಯ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಸಿಎಎ, ಎನ್‍ಆರ್ ಸಿ ಕಾಯ್ದೆ ಜಾರಿ ವಿರೋಧಿಸಿ ಜಯನಗರ ಈದ್ಗಾ ಮೈದಾನದ ಪ್ರತಿಭಟನೆಯಲ್ಲಿ ಶಾಸಕಿ ಸೌಮ್ಯ ರೆಡ್ಡಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ಭೀಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೌರತ್ವ ಕಾಯ್ದೆ ವಿರುದ್ಧ ದೇಶದೆಲ್ಲಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಮೋದಿ ನೋಟು ಅಮಾನ್ಯಿಕರಣ, ಜಿಎಸ್ಟಿ ಜಾರಿಗೆ ತಂದಾಗ ದೇಶಕ್ಕೆ ಒಳ್ಳೆದು ಆಗಬಹುದೆಂದು ಜನರು ಸುಮ್ಮನಾಗಿದ್ದರು. ಆದರೆ ಸಿಎಎ ಹಾಗೂ ಎನ್‍ಆರ್ ಸಿ ಜಾರಿ ವಿಚಾರವಾಗಿ ಸುಮ್ಮನೆ ಕೈಕಟ್ಟಿಕೂರುವುದಿಲ್ಲ ಎಂದರು.

    ಧರ್ಮದ ಹೆಸರಲ್ಲಿ ದೇಶ ಹೊಡೆಯಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಸಲಿ ಹಿಂದೂ ಎಂದರೇ ಹಿಂದು, ಮುಸ್ಲಿಂ, ಸಿಖ್ ಧರ್ಮದವರನ್ನೆಲ್ಲಾ ಒಗ್ಗೂಡಿಸಿಕೊಂಡು ಹೋಗುವವರು ನಿಜವಾದ ಹಿಂದೂಗಳು. ರಾಜ್ಯದಲ್ಲಿ ಪೌರತ್ವ ಕಾಯ್ದೆ ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದಾಗ ರಾಜ್ಯ ಸರ್ಕಾರ ಎಲ್ಲಾ ಕಡೆ 144 ಸೆಕ್ಷನ್ ಜಾರಿ ಮಾಡಿ ನಮ್ಮ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದರು. ರಾಜ್ಯ ಸರ್ಕಾರದ ನಡೆಯ ವಿರುದ್ಧ ನಾನು ಸೇರಿದಂತೆ ನಾಲ್ಕು ಜನ ಹೈಕೋರ್ಟ್ ಮೇಟ್ಟಿಲೇರಿದ್ದೆವು. ಸಿಎಎ ಮತ್ತು ಎನ್‍ಆರ್‍ಸಿ ಜಾರಿ ವಾಪಾಸ್ ಪಡೆಯದೆ ಹೋದರೂ ನಾವು ಇಲ್ಲಿಗೆ ಸುಮ್ಮನಾಗುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ಅನುದಾನ ಹಂಚಿಕೆಯಲ್ಲಿ ತಾರತಮ್ಯ – ಕಾಂಗ್ರೆಸ್‍ನಿಂದ ಪ್ರತಿಭಟನೆ

    ಅನುದಾನ ಹಂಚಿಕೆಯಲ್ಲಿ ತಾರತಮ್ಯ – ಕಾಂಗ್ರೆಸ್‍ನಿಂದ ಪ್ರತಿಭಟನೆ

    ಬೆಂಗಳೂರು: ಬಿಜೆಪಿ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಬಿಟಿಎಂ ಲೇಔಟ್ ಹಾಗೂ ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರು ನಗರದ ಟೌನ್‍ಹಾಲ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.

    ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ 387 ಕೋಟಿ ರೂ.ಅನುದಾನ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ 234 ಕೋಟಿ ರೂ.ಗೆ ಕಡಿತ ಮಾಡಿ ಕೇವಲ 152.84 ಕೋಟಿ ರೂ. ನಿಗದಿಪಡಿಸಿದೆ. ಹಾಗೆ ಜಯನಗರ ಕ್ಷೇತ್ರಕ್ಕೆ 194 ಕೋಟಿ ರೂ. ಅನುದಾನ ಕಡಿತಗೊಳಿಸಿ ಕೇವಲ 122 ಕೋಟಿ ರೂ. ಕೊಡಲಾಗಿದೆ. ಇದನ್ನು ವಿರೋಧಿಸಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯರೆಡ್ಡಿ, ರಾಜ್ಯಸಭಾ ಸದಸ್ಯ ಹರಿಪ್ರಸಾದ್ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಭ್ರಷ್ಟ ಬಿಜೆಪಿಯನ್ನು ಸೋಲಿಸಿ ನಾವು ಅಧಿಕಾರಕ್ಕೆ ಬಂದಿದ್ದೆವು. ಆ ಸಂದರ್ಭದಲ್ಲಿ ನಾವು ಯಾವುದೇ ತಾರತಮ್ಯ, ದ್ವೇಷದ ರಾಜಕಾರಣ ಮಾಡಿಲ್ಲ. ಇಂದು ಬಿಜೆಪಿ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ. ನಮ್ಮ ಬಜೆಟ್ ತಡೆ ಹಿಡಿದು, ಅನುದಾನ ನೀಡಿಲ್ಲ. ಡಿಪಿಆರ್, ವರ್ಕ್ ಆರ್ಡರ್ ಎಲ್ಲಾ ಆಗಿದ್ದರೂ ಕಾಮಗಾರಿಗಳನ್ನು ತಡೆಹಿಡಿದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವ 5 ಕ್ಷೇತ್ರಗಳಿಗೆ 2700 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಆದರೆ ನಮ್ಮ ಕ್ಷೇತ್ರಗಳಿಗೆ ಅನ್ಯಾಯ ಮಾಡಿದ್ದು ಸರಿಯೇ ಎಂದು ಮಾಜಿ ಸಚಿವ ಪ್ರಶ್ನಿಸಿದರು.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ ಅನುದಾನವನ್ನು ಬಿಜೆಪಿ ಸರ್ಕಾರ ಬಂದಮೇಲೆ ಕಡಿತ ಮಾಡಿ, ರಾಜಿನಾಮೆ ನೀಡಿದ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಬಿಜೆಪಿ ಶಾಸಕರಿಗೆ ಸಾವಿರ ಕೋಟಿ ರೂ. ಅನುದಾನ ಕೊಡಲಿ ಆದರೆ ನಮ್ಮ ಅನುದಾನ ಕಡಿತ ಮಾಡಿರುವುದು ಸರಿಯಲ್ಲ. ಇದರಿಂದ ಕ್ಷೇತ್ರದ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದೆ ಎಂದರು ಆಕ್ರೋಶ ವ್ಯಕ್ತಪಡಿಸಿದರು.

    ಈಜೀಪುರ ಮೇಲ್ಸೇತುವೆ ಕೆಲಸ ನಿಂತು ಹೋಗಿದೆ. ಬಿಜೆಪಿಗರಲ್ಲಿ ಅಧಿಕಾರದ ಮದ ತುಂಬಿದೆ. ವೈಟ್ ಟಾಪಿಂಗ್ ಬೇಡ, ಹೆಚ್ಚು ವೆಚ್ಚವಾಗುತ್ತದೆ ಕಿತ್ತು ಹಾಕಿ ಎಂದು ನಾವೇ ಹೇಳಿದ್ದೆವು. ಆದರೆ ಉತ್ತಮ ಟಾರ್ ರಸ್ತೆ ನೀಡಲಿ. ಬೆಂಗಳೂರು ಶಾಸಕರೆಲ್ಲ ಸೇರಿ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ, ಅಧಿವೇಶನದ ಸಮಯದಲ್ಲಿ ವಿಧಾನಸೌಧದ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

    ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಆಪರೇಷನ್ ಕಮಲ ನಡೆಸಲು ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ ಈಗ ನೆರೆ ಪರಿಹಾರ ನೀಡುವುದಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುತ್ತಿದ್ದಾರೆ. ನಮ್ಮ ಕ್ಷೇತ್ರದ 316 ಕೋಟಿ ರೂ. ಅನುದಾನದಲ್ಲಿ ಕಡಿತ ಮಾಡಿ ಕೇವಲ 122 ಕೋಟಿ ರೂ.ನೀಡಿದ್ದಾರೆ. ಅನುದಾನ ನೀಡುವುದರಲ್ಲಿ ತಾರತಮ್ಯ ಮಾಡಿದ್ದಾರೆ. ಅಲ್ಲದೆ ಸಿಎಂ ನಗರ ಪ್ರದಕ್ಷಿಣೆ ವೇಳೆಯೂ ಸ್ಥಳೀಯ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.

  • ಕಾಂಗ್ರೆಸ್ ಸಂಕಷ್ಟದಲ್ಲಿದೆ, ಗವರ್ನಮೆಂಟ್ ಲಿಟ್ಲ್ ಬ್ಯಾಡ್: ಸೌಮ್ಯಾ ರೆಡ್ಡಿ

    ಕಾಂಗ್ರೆಸ್ ಸಂಕಷ್ಟದಲ್ಲಿದೆ, ಗವರ್ನಮೆಂಟ್ ಲಿಟ್ಲ್ ಬ್ಯಾಡ್: ಸೌಮ್ಯಾ ರೆಡ್ಡಿ

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಪಕ್ಷವನ್ನು ಉಳಿಸಿಕೊಳ್ಳಿ ಎಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾದಾಗ ಹೇಳಿದೆ ಎಂದು ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಜಯನಗರದ ತಮ್ಮ ಕಚೇರಿಯಿಂದ ಮಾತನಾಡಿದ ಅವರು, ನಾನು ಅಖಿಲ ಭಾರತ ಮಹಿಳೆ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿದ್ದೇನೆ. ಹೀಗಾಗಿ ಸೋನಿಯಾ ಗಾಂಧಿಯವರನ್ನ ಭೆಟಿಯಾದಾಗ ರಾಜ್ಯದ ಪರಿಸ್ಥಿತಿಯನ್ನು ಅವರಿಗೆ ತಿಳಿಸಿದೆ. ಕಾಂಗ್ರೆಸ್ ರಾಜ್ಯದಲ್ಲಿ ಸಂಕಷ್ಟದಲ್ಲಿದೆ. ಹೀಗಾಗಿ ಕಾಂಗ್ರೆಸ್ಸನ್ನು ಉಳಿಕೊಳ್ಳಿ ಎಂದು ಮಾಹಿತಿ ಮುಟ್ಟಿಸಿದೆ ಅಷ್ಟೇ. ನಾನು ರಾಜೀನಾಮೆ ನೀಡಲ್ಲ. ಒಂದು ವೇಳೆ ರಾಜೀನಾಮೆ ನೀಡುವುದಾದರೆ ನಿಮಗೆ ಹೇಳುತ್ತೇನೆ ಎಂದು ಹೇಳಿದರು.

    ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಾತನಾಡಿ, ನನ್ನ ತಂದೆಗೆ ಬಹಳ ನೋವಾಗಿದೆ ಮತ್ತು ಬೇಸರವಾಗಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ತಂದೆ 45 ವರ್ಷ ಪಕ್ಷ ಕಟ್ಟಿ ದುಡಿದಿದ್ದಾರೆ. ಒಂದು ವರ್ಷದಿಂದ ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಗವರ್ನಮೆಂಟ್ ಲಿಟ್ಲ್ ಬ್ಯಾಡ್. ನನ್ನ ನಿರ್ಧಾರ ಏನೆಂದು ಹೇಳುತ್ತೇನೆ. ಎಲ್ಲರ ಜೊತೆ ಚರ್ಚೆ ಮಾಡಿ ನಿರ್ಧರ ತೆಗೆದುಕೊಳ್ಳುತ್ತೇನೆ. ನನಗೆ ಬೇಸರವಾಗಿರುವುದು ನಿಜ. ಯಾಕೆಂದರೆ ಕೆಲವೊಂದು ಹೇಳಲು ಆಗದಿರುವ ವಿಚಾರಗಳೂ ಕೂಡ ಇದೆ. ಆದರು ಅಧಿವೇಶಕ್ಕೆ ನಾನು ಹೋಗುತ್ತೆನೆ ಎಂದರು.

    ನಾನು ರಾಜೀನಾಮೆ ಕೊಡಲ್ಲ. ನಮ್ಮ ತಂದೆ ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸ್ಪತಃ ಅವರೆ ಈ ಬಗ್ಗೆ ತಿಳಿಸಿದ್ದರು. ಆದರೆ ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವವರು ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

  • ರಾಜೀನಾಮೆಯಿಂದ ಹಿಂದೆ ಸರಿದು ಸೇಫ್ ಗೇಮ್‍ಗೆ ಸೌಮ್ಯಾ ರೆಡ್ಡಿ ಪ್ಲಾನ್

    ರಾಜೀನಾಮೆಯಿಂದ ಹಿಂದೆ ಸರಿದು ಸೇಫ್ ಗೇಮ್‍ಗೆ ಸೌಮ್ಯಾ ರೆಡ್ಡಿ ಪ್ಲಾನ್

    ಬೆಂಗಳೂರು: ಶಾಸಕ, ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಮನವೊಲಿಕೆ ವಿಫಲವಾಗಿದ್ದು, ಇತ್ತ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದು ಬಂದಿದೆ.

    ಸೌಮ್ಯ ರೆಡ್ಡಿ ರಾಜೀನಾಮೆ ನೀಡದೇ ಸೇಫ್ ಗೇಮ್‍ನತ್ತ ಮುಖ ಮಾಡುವ ಮೂಲಕ ಅನರ್ಹತೆ ಭೀತಿಯಿಂದ ಪಾರಾಗಲು ಶಾಸಕಿ ನಿರ್ಧರಿಸಿದ್ದಾರೆ. ಒಂದು ವೇಳೆ ತಂದೆ ರಾಮಲಿಂಗಾ ರೆಡ್ಡಿ ರಾಜೀನಾಮೆಯಿಂದ ಹಿಂದೆ ಸರಿದರೆ, ಪ್ರತಿಯಾಗಿ ಪುತ್ರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆಯನ್ನು ಮುಂದಿಡುವ ಸಾಧ್ಯತೆಗಳಿವೆ. ಹೀಗಾಗಿ ರಾಜೀನಾಮೆಯಿಂದ ಸೌಮ್ಯಾ ರೆಡ್ಡಿ ಹಿಂದೆ ಸರಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಶಾಸಕಾಂಗ ಸಭೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ಸೌಮ್ಯ ರೆಡ್ಡಿ, ಸಿಎಲ್‍ಪಿ ಸಭೆಯಿಂದ ಬಂದಿದ್ದೇನೆ. ನಾನು ತಂದೆ ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ನಾನು ಇಂಡಿಪೆಂಡೆಂಟ್ ಮಹಿಳೆಯಾಗಿದ್ದು, ಯಾರು ನನ್ನ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ. ನನ್ನ ನಿರ್ಧಾರವನ್ನು ನಾನು ತೆಗೆದುಕೊಳ್ಳುತ್ತೇನೆ. ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನನ್ನನ್ನು ಆಯ್ಕೆ ಮಾಡಲಾಗಿತ್ತು. ಹಾಗಾಗಿ ದೆಹಲಿಗೆ ತೆರಳಿ ಸುಷ್ಮಿತಾ ದೇವ್ ಅವರನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿದರು.

    ಇಂದು ಬೆಳಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಲಿಂಗಾರೆಡ್ಡಿ, ನಾನು ಯಾರಿಗೂ ನಡುಕ ಹುಟ್ಟಿಸಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕರು ಯಾವುದೇ ಕಾರಣಕ್ಕೂ ಪಕ್ಷ ಬಿಡಬಾರದು ಎಂದು ಹೇಳಿದ್ದಾರೆ. ನಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುವುದು ಮೊದಲೇ ಎಲ್ಲರಿಗೂ ಗೊತ್ತಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮಾತ್ರ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಪತ್ರವನ್ನು ಹಿಂಪಡೆಯಲ್ಲ. ಸ್ಪೀಕರ್ ಎಲ್ಲರನ್ನು ಕರೆದು ಮಾತನಾಡಿಸುತ್ತಾರೆ. ನನ್ನೊಬ್ಬನ ರಾಜೀನಾಮೆಯಿಂದ ದೋಸ್ತಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ನಾನು ಯಾರಿಗೂ ರಾಜೀನಾಮೆ ನೀಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು.

  • ತಂದೆಯ ನಿರ್ಧಾರಕ್ಕೆ ನಾನು ಬದ್ಧ: ರಾಜೀನಾಮೆ ಬಗ್ಗೆ ಸೌಮ್ಯಾ ರೆಡ್ಡಿ ಸ್ಪಷ್ಟನೆ

    ತಂದೆಯ ನಿರ್ಧಾರಕ್ಕೆ ನಾನು ಬದ್ಧ: ರಾಜೀನಾಮೆ ಬಗ್ಗೆ ಸೌಮ್ಯಾ ರೆಡ್ಡಿ ಸ್ಪಷ್ಟನೆ

    ಬೆಂಗಳೂರು: ನನ್ನ ತಂದೆಯ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರು ತಿಳಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸೌಮ್ಯಾ ರೆಡ್ಡಿ, ನಾನು ಕಾಂಗ್ರೆಸ್ ಶಾಸಕಾಂಗ ಸಭೆ(ಸಿಎಲ್‍ಪಿ)ಯಲ್ಲಿ ಭಾಗವಹಿಸುತ್ತಿದ್ದೇನೆ. ಅಪ್ಪ ಏನೂ ಮಾಡಿದರೂ ನಾನು ಅವರಿಗೆ ಬೆಂಬಲ ನೀಡುತ್ತೇನೆ. ಅಪ್ಪ 45 ವರ್ಷದಿಂದ ಪಕ್ಷ ಕಟ್ಟಿದ್ದಾರೆ ಹಾಗೂ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರಿಗೆ ಯಾವುದು ಸೂಕ್ತ ಎಂದು ಅನಿಸುತ್ತೋ ಅದನ್ನು ಅವರು ಮಾಡಲಿ. ನಾನು ಅವರಿಗೆ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ.

    ನಾನು ರಾಜೀನಾಮೆ ನೀಡುವುದರ ಬಗ್ಗೆ ಯೋಚನೆ ಮಾಡಿಲ್ಲ. ತಂದೆ ಹಾಗೂ ಬೆಂಬಲಿಗರು ಏನೂ ನಿರ್ಧಾರ ಮಾಡುತ್ತಾರೋ ಅವರ ನಿರ್ಧಾರಕ್ಕೆ ನಾನು ಬದ್ಧಳಾಗಿರುತ್ತೇನೆ. ನಾನು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ದೆಹಲಿಗೆ ಹೋಗಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ರಾಜೀನಾಮೆ ನೀಡುವುದರ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ರಾಜೀನಾಮೆ ನೀಡಬೇಡಿ ಎಂದು ಕಾಂಗ್ರೆಸ್ ನಾಯಕರು ಕೇಳಿಕೊಂಡಿದ್ದಾರೆ. ನನ್ನ ತಂದೆ ಹಾಗೂ ಬೆಂಬಲಿಗರು ಏನು ಹೇಳುತ್ತಾರೋ ಹಾಗೆ ಕೇಳುತ್ತೇನೆ ಎಂದರು.

    ರಾಜಕೀಯ ಬೆಳವಣಿಗೆಯಿಂದ ನನಗೆ ತುಂಬಾ ಬೇಸರವಾಗಿದೆ. ನನ್ನ ತಂದೆ ಪ್ರಮಾಣಿಕತೆಯಿಂದ ದುಡಿದುಕೊಂಡು ಬಂದಿದ್ದಾರೆ. ತಂದೆ 1973ರಿಂದ ಯೂತ್ ಕಾಂಗ್ರೆಸ್ ಪಕ್ಷ ಕಟ್ಟಿಕೊಂಡು ಬಂದವರು. ಅಂತವರು ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರೆ ಅವರಿಗೆ ಎಷ್ಟು ನೋವಾಗಿರಬಹುದು. ಇಡೀ ಜೀವನದಲ್ಲಿ ನನ್ನ ತಂದೆ ಇಷ್ಟು ಬೇಸರ ಮಾಡಿಕೊಂಡಿರುವುದು ನಾನು ನೋಡಿಲ್ಲ. ನನಗೆ ಹಾಗೂ ನನ್ನ ತಾಯಿಗೂ ಬೇಸರವಾಗಿದೆ ಎಂದು ಸೌಮ್ಯ ರೆಡ್ಡಿ ಹೇಳಿದರು.

  • ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ: ರಾಮಲಿಂಗಾ ರೆಡ್ಡಿ

    ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ: ರಾಮಲಿಂಗಾ ರೆಡ್ಡಿ

    ಬೆಂಗಳೂರು: ಮಾಜಿ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಬಳಿ ಹೇಳಿಕೊಂಡಿದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಇಂದು ಒಟ್ಟು 13 ಶಾಸಕರು ರಾಜೀನಾಮೆ ನೀಡುತ್ತಿದ್ದು, ರಾಮಲಿಂಗಾ ರೆಡ್ಡಿ ಹಾಗೂ ಅವರ ಮಗಳು ಸೌಮ್ಯ ರೆಡ್ಡಿ ಅವರು ರಾಜೀನಾಮೆ ನೀಡುತ್ತಿದ್ದಾರೆ. ರಾಜೀನಾಮೆ ನೀಡುತ್ತಿರುವ ಸುದ್ದಿ ಕೇಳಿ ಈಶ್ವರ್ ಖಂಡ್ರೆ ಅವರು ರಾಮಲಿಂಗಾ ರೆಡ್ಡಿ ಬಳಿ ಮಾತನಾಡಲು ಹೋಗಿದ್ದಾರೆ.

    ಇಬ್ಬರ ಮನವೊಲಿಸಲು ಭೇಟಿ ಮಾಡಿದ್ದಾರೆ. ಈ ವೇಳೆ ರಾಮಲಿಂಗಾ ರೆಡ್ಡಿ ರಾಜೀನಾಮೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಟಷ್ಟನೆ ನೀಡಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ 13ಕ್ಕೂ ಹೆಚ್ಚು ಅತೃಪ್ತ ಶಾಸಕರು ಇಂದು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಅದರಲ್ಲೂ ಬಂಡಾಯಗಾರರ ಪಟ್ಟಿಯಲ್ಲಿ ಬೆಂಗಳೂರಿನ ಐವರು ಶಾಸಕರ ಹೆಸರೂ ಇದೆ ಎಂಬುದಾಗಿ ತಿಳಿದುಬಂದಿದೆ.

    ಮೊದಲನೆಯದಾಗಿ ಬಿಡುಗಡೆಯಾಗಿರುವ ಬಂಡಾಯಗಾರರ ಪಟ್ಟಿಯಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿಪಾಟೀಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ರಾಜೀನಾಮೆ ಕೊಡುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಬೆಂಗಳೂರಿನ ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ, ಹುಣಸೂರು ಶಾಸಕ ಎಚ್. ವಿಶ್ವನಾಥ್, ಕೆ.ಆರ್ ಪೇಟೆ ಶಾಸಕ. ನಾರಾಯಣ ಗೌಡ ಇವರೆಲ್ಲರೂ ಹೆಸರು ರಾಜೀನಾಮೆ ಪಟ್ಟಿಗೆ ಹೊಸದಾಗಿ ಸೇರಿಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಶುರುವಾಗಿದೆ.

    ನಾಗೇಂದ್ರ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಬಿ.ಸಿ.ಪಾಟೀಲ್ ಇವರು ಹಳೆಯ ಆಪರೇಷನ್‍ಗೆ ಒಳಗಾದ ಶಾಸಕರಾಗಿದ್ದು, ಹೊಸದಾಗಿ ಸೇರಿಕೊಂಡಿರುವ ಶಾಸಕರ ಹೆಸರಿಂದ ಎಲ್ಲರಿಗೂ ಶಾಕ್ ಆಗಿದೆ. ಈಗಾಗಲೇ ಸ್ಪೀಕರ್ ಭೇಟಿಗೆ ಬಂಡಾಯಗಾರರು ಕಾಲಾವಕಾಶ ಕೇಳಿದ್ದಾರೆ ಎಂದು ತಿಳಿದು ಬಂದಿದೆ.