Tag: Soraba

  • ನನ್ನ ತಮ್ಮ ಮಂತ್ರಿ ಆಗ್ತಾನೆ : ನಿಜವಾಯ್ತು ಗೀತಾ ಶಿವರಾಜ್ ಕುಮಾರ್ ಭವಿಷ್ಯ

    ನನ್ನ ತಮ್ಮ ಮಂತ್ರಿ ಆಗ್ತಾನೆ : ನಿಜವಾಯ್ತು ಗೀತಾ ಶಿವರಾಜ್ ಕುಮಾರ್ ಭವಿಷ್ಯ

    ಲವು ದಿನಗಳ ಹಿಂದೆ ದೊಡ್ಮನೆ ಸೊಸೆ ಗೀತಾ (Geeta) ಶಿವರಾಜ್ ಕುಮಾರ್ ಭವಿಷ್ಯ ನುಡಿದಿದ್ದರು. ಇದೀಗ ನಿಜವಾಗಿದೆ. ಸೊರಬ (Soraba) ಕ್ಷೇತ್ರದಿಂದ ಗೀತಾ ಸಹೋದರ ಮಧು ಬಂಗಾರಪ್ಪ (Madhu Bangarappa) ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಗೆಲುವು ಘೋಷಣೆ ಆಗುತ್ತಿದ್ದಂತೆಯೇ ಗೀತಾ ಶಿವರಾಜ್ ಕುಮಾರ್ (Shivraj Kumar) ತಮ್ಮನ ಬಗ್ಗೆ ಭವಿಷ್ಯ ನುಡಿದಿದ್ದರು. ಈ ಬಾರಿ ಮಧು ಮಂತ್ರಿ ಆಗ್ತಾನೆ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದರು.

    ನಿನ್ನೆಯಷ್ಟೇ ಕಾಂಗ್ರೆಸ್ (Congress)  ಪಕ್ಷವು 24 ಜನ ಮಂತ್ರಿಗಳ ಪಟ್ಟಿ ಬಿಡುಗಡೆ ಆಗಿದ್ದು, ಆ ಪಟ್ಟಿಯಲ್ಲಿ ಮಧು ಬಂಗಾರಪ್ಪ ಹೆಸರಿದೆ. ಸಹಜವಾಗಿಯೇ ಗೀತಾ ಅವರ ಮಾತಿಗೆ ಬೆಲೆ ಬಂದಿದೆ. ಅಲ್ಲದೇ, ಮೊನ್ನೆಯಷ್ಟೇ ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ಕೂಡ ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲೂ ಮಂತ್ರಿ ಮಾಡುವ ಕುರಿತು ಮಾತುಕತೆ ನಡೆದಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಎಕ್ಸ್ ಕ್ಲೂಸಿವ್ ಸುದ್ದಿ ಪ್ರಕಟಿಸಿತ್ತು. ಇದನ್ನೂ ಓದಿ:ಈ ಕಾರಣಕ್ಕಾಗಿ ಯಶ್ ಸಿನಿಮಾ ಕೈ ಬಿಟ್ಟರು: ನಿರ್ದೇಶಕ ನರ್ತನ್

    ಈವರೆಗೂ ಜೆಡಿಎಸ್ ಸಪೋರ್ಟ್ ಮಾಡುತ್ತಾ ಬಂದಿದ್ದ ಗೀತಾ ಶಿವರಾಜ್ ಕುಮಾರ್, ಇದೇ ಪಕ್ಷದಿಂದಲೇ ಚುನಾವಣೆಯನ್ನೂ ಎದುರಿಸಿದ್ದರು. ಈ ವರ್ಷ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಮೂಲಕ ಸಹೋದರ ಮಧು ಅವರ ಪರ ಪ್ರಚಾರಕ್ಕೆ ಶಿವರಾಜ್ ಕುಮಾರ್ ಅವರನ್ನು ಕರೆತಂದಿದ್ದರು. ಈ ಎಲ್ಲ ಸಹಕಾರವು ಮಧು ಅವರನ್ನು ಮಂತ್ರಿಯಾಗಿಸಿದೆ.

    ಡಾ.ರಾಜ್ ಕುಟುಂಬದಲ್ಲಿ ಯಾರೂ ರಾಜಕಾರಣಕ್ಕೆ ಬಾರದೇ ಇದ್ದರೂ, ಪತ್ನಿ ಪರವಾಗಿ ಶಿವಣ್ಣ ರಾಜಕೀಯ ಆಖಾಡಕ್ಕೆ ಇಳಿದಿದ್ದರು. ಗೀತಾ ಅವರದ್ದು ರಾಜಕಾರಣ ಕುಟುಂಬವಾಗಿದ್ದರಿಂದ ಸಹಜವಾಗಿಯೇ ಶಿವರಾಜ್ ಕುಮಾರ್ ಪತ್ನಿಯ ಕೆಲಸಗಳಿಗೆ ಸಾಥ್ ನೀಡುವುದು ಅನಿವಾರ್ಯವಾಗಿತ್ತು. ಅದನ್ನು ಅವರು ನಿಭಾಯಿಸಿದ್ದರು.

  • Breaking-ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ‘ದೊಡ್ಮನೆ ಸೊಸೆ’ ಗೀತಾ ಶಿವರಾಜ್ ಕುಮಾರ್

    Breaking-ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ‘ದೊಡ್ಮನೆ ಸೊಸೆ’ ಗೀತಾ ಶಿವರಾಜ್ ಕುಮಾರ್

    ರಾಜಕಾರಣದ ಕುಟುಂಬದಿಂದಲೇ ಬಂದಿರುವ ನಟ ಶಿವರಾಜ್ ಕುಮಾರ್ (Shivaraj Kumar) ಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivaraj Kumar) ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ಮಾಹಿತಿ ಇದೆ. ನಾಳೆ ಅವರು ಕಾಂಗ್ರೆಸ್ ಪಕ್ಷದ ಮುಖಂಡರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷವನ್ನು ಸೇರಲಿದ್ದಾರಂತೆ. ಇಂದು ರಾತ್ರಿ ಸೇರ್ಪಡೆಯ ವೇಳೆ ನಿಗದಿ ಆಗುವ ಸಾಧ್ಯತೆ ಇದೆ.

    ಗೀತಾ ಶಿವರಾಜ್ ಕುಮಾರ್ ರ ಕಿರಿಯ ಸಹೋದರ ಮಧು ಬಂಗಾರಪ್ಪ (Madhu Bangarappa) ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸ್ವತಃ ಸಹೋದರ ಕುಮಾರ್ ಬಂಗಾರಪ್ಪ (Kumar Bangarappa) ಅವರ ವಿರುದ್ಧವೇ ಸೊರಬ (Soraba) ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಕಿರಿಯ ಸಹೋದರನನ್ನು ಬೆಂಬಲಿಸುವುದಕ್ಕಾಗಿ ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಪ್ರತಿ ಬಾರಿಯೂ ಮಧು ಬಂಗಾರಪ್ಪನವರನ್ನು ಬೆಂಬಲಿಸುತ್ತಾ ಬಂದಿದ್ದಾರೆ ಗೀತಾ ಶಿವರಾಜ್ ಕುಮಾರ್. ಒಂದು ಬಾರಿ ಚುನಾವಣೆಗೂ ಅವರು ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿ ಸಹೋದರನನ್ನು ಗೆಲ್ಲಿಸಲೇಬೇಕು ಎನ್ನುವ ಕಾರಣದಿಂದಾಗಿ ಕಾಂಗ್ರೆಸ್ ಗೆ ಸೇರ್ಪಡೆ ಆಗುವ ಮೂಲಕ ತಮ್ಮ ಮತ್ತೋರ್ವ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧವೇ ಪ್ರಚಾರ ಮಾಡಲಿದ್ಧಾರೆ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಈ ಹಿಂದೆ ಕಾಂಗ್ರೆಸ್ ಪಕ್ಷದ ಮುಖಂಡ ಡಿ.ಕೆ. ಶಿವಕುಮಾರ್ (D.K. Shivakumar)  ಮತ್ತು ಶಿವರಾಜ್ ಕುಮಾರ್ ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಗೀತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಮಾತುಕತೆ ಕೂಡ ನಡೆದಿತ್ತು. ಆ ಮಾತುಕತೆ ಫಲಪ್ರದವಾಗಿದೆ. ಹಾಗಾಗಿ ಗೀತಾ ಶಿವರಾಜ್ ಕುಮಾರ್ ನಾಳೆ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿಯಲಿದ್ದಾರೆ.

  • ಶಿಕಾರಿಪುರ: ಮೂರು ದಶಕಗಳ ಬಿಜೆಪಿ ಆಳ್ವಿಕೆ ಅಂತ್ಯ

    ಶಿಕಾರಿಪುರ: ಮೂರು ದಶಕಗಳ ಬಿಜೆಪಿ ಆಳ್ವಿಕೆ ಅಂತ್ಯ

    – ಲೋಕಲ್ ಎಲೆಕ್ಷನ್ ನಲ್ಲಿ ಬಿಎಸ್‍ವೈಗೆ ಮುಖಭಂಗ

    ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಪುರಸಭೆಯಲ್ಲಿ ಕಳೆದ ಮೂರು ದಶಕಗಳಿಂದ ಇದ್ದ ಬಿಜೆಪಿ ಅಧಿಕಾರ ಅಂತ್ಯಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಯಡಿಯೂರಪ್ಪ ಲೋಕಲ್ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

    ಇಂದು ಪ್ರಕಟಗೊಂಡ ಪುರಸಭೆ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಗಳು ದಯಾನೀಯ ಸೋಲು ಕಂಡಿದ್ದಾರೆ. ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಬಿಜೆಪಿ ಕೇವಲ 8 ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ. ಇಲ್ಲಿ ಪಕ್ಷೇತರರು ಮೂರು ಸ್ಥಾನಗಳಲ್ಲಿ ಗೆದ್ದಿದ್ದಾರೆ.

    ಜಿಲ್ಲೆಯಲ್ಲಿ ಚುನಾವಣೆ ನಡೆದ ಐದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಎರಡಲ್ಲಿ ಅಧಿಕಾರ ಹಿಡಿದರೆ ಒಂದರಲ್ಲಿ ಕಾಂಗ್ರೆಸ್, ಇನ್ನು ಎರಡರಲ್ಲಿ ಮೈತ್ರಿಕೂಟ ಅಧಿಕಾರ ಹಿಡಿದಿವೆ. ಇದೂವರೆಗೂ ಕಾಂಗ್ರೆಸ್ ವಶದಲ್ಲಿದ್ದ ಸಾಗರ ಪುರಸಭೆ ಈಗ ಬಿಜೆಪಿ ವಶವಾಗಿದೆ. ಸಾಗರ ನಗರಸಭೆಯ ಒಟ್ಟು ಸ್ಥಾನ 31 ಸ್ಥಾನಗಳಲ್ಲಿ ಬಿಜೆಪಿ 16 ಸ್ಥಾನಗೆದ್ದು, ಸ್ಪಷ್ಟ ಬಹುಮತ ಪಡೆದಿದೆ. ಇಲ್ಲಿ ಕಾಂಗ್ರೆಸ್ 9, ಜೆಡಿಎಸ್ 1 ಹಾಗೂ ಪಕ್ಷೇತರರು 5ಸ್ಥಾನದಲ್ಲಿ ಗೆದ್ದಿದ್ದಾರೆ.

    ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿಯ 17 ಸ್ಥಾನಗಳಲ್ಲಿ ಬಿಜೆಪಿ 2, ಜೆಡಿಎಸ್ 3, ಕಾಂಗ್ರೆಸ್ 7, ಪಕ್ಷೇತರರು 5 ಸ್ಥಾನದಲ್ಲಿ ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿದಿದೆ.

    ಅಧಿಕಾರ ಮೈತ್ರಿಗೆ
    ಸೊರಬ ಪಟ್ಟಣ ಪಂಚಾಯ್ತಿಯ 12 ಸ್ಥಾನಗಳಲ್ಲಿ ಬಿಜೆಪಿ 6 ಗೆದ್ದಿದ್ದು, ಒಂದು ಎಂಎಲ್‍ಎ ಹಾಗೂ ಒಂದು ಎಂಪಿ ಮತ ಪಡೆದು ಬಹುಮತದಿಂದ ಪಂಚಾಯ್ತಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ 4, ಜೆಡಿಎಸ್ 1, ಪಕ್ಷೇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ. ಹೊಸನಗರ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಲ್ಲಿ ಬಿಜೆಪಿ 4ರಲ್ಲಿ ಗೆದ್ದಿದೆ. ಕಾಂಗ್ರೆಸ್ 4, ಜೆಡಿಎಸ್ 3 ಸ್ಥಾನಗಳನ್ನು ಗೆದ್ದಿದ್ದು, ಮೈತ್ರಿ ಕೂಟ ಅಧಿಕಾರ ಹಿಡಿಯಲಿದೆ.

  • ಕುಚುಕು ದೋಸ್ತಿಗಳು ಅರಳಿಸಿದ ಕಮಲದ `ಮೊಗ್ಗು’ ಯಾರ ಮುಡಿಗೆ..?

    ಕುಚುಕು ದೋಸ್ತಿಗಳು ಅರಳಿಸಿದ ಕಮಲದ `ಮೊಗ್ಗು’ ಯಾರ ಮುಡಿಗೆ..?

    ಹೈ ವೋಲ್ಟೇಜ್ ಮ್ಯಾಚನ್ನ ಸೀಟ್ ತುದೀಲಿ ಕೂತು ನೋಡಿದ ಹಾಗಿನ ಮಜಾ ಕೊಡುತ್ತೆ ಶಿವಮೊಗ್ಗದ ರಾಜಕಾರಣ. ಇಲ್ಲಿನ ಜನರ ನರ ನಾಡಿಗಳಲ್ಲಿ ರಕ್ತದ ಜೊತೆಗೆ ರಾಜಕೀಯವೂ ಬೆರೆತು ಹೋಗಿದೆ. ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಶಾಂತವೇರಿ ಗೋಪಾಲ ಗೌಡರಂತಹಾ ದಿಗ್ಗಜ ರಾಜಕೀಯ ಪಟುಗಳ ತವರೂರು ಶಿವಮೊಗ್ಗ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ನವರಂತಹಾ ದಿಗ್ಗಜರ ಊರು. ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪನವರ ರಾಜಕೀಯ ದಾಯಾದಿತ್ವವನ್ನ ನೋಡಿರೋ ಊರೇ ಶಿವಮೊಗ್ಗ. ಶಿವಮೊಗ್ಗ ಅನ್ನೋ ಸಾಮ್ರಾಜ್ಯದಲ್ಲಿ ಯಾವ ಪಕ್ಷ ತನ್ನ ಹಿಡಿತ ಸಾಧಿಸುತ್ತೆ ಅನ್ನೋದೇ ಕದನ ಕಣದ ಕುತೂಹಲವನ್ನ ಹೆಚ್ಚಿಸಿದೆ.

    ಶಿವಮೊಗ್ಗೆಯ ಹೆಸರಿನ ಹಿಂದಿದೆ ಸಿಹಿಯಾದ ಕಥೆ..!
    ಶಿವಮೊಗ್ಗ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. ಶಿವಮುಖ ಅನ್ನೋ ಹೆಸರು ಮುಂದೆ ಸಿಹಿ ಮೊಗೆ ಅಂದ್ರೆ ಸಿಹಿಯಾದ ಮೊಗ್ಗಾಗಿ ಅರಳಿದ್ದೇ ಶಿವಮೊಗ್ಗ ಅನ್ನೋ ಸುಂದರ ಊರು. ಮೌರ್ಯ ಸಾಮ್ರಾಜ್ಯದ ಕುರುಹುಗಳೂ, ಚಾಲುಕ್ಯ, ಗಂಗರು, ರಾಷ್ಟ್ರಕೂಟರು, ಹೊಯ್ಸಳರ ಹೆಜ್ಜೆ ಗುರುತುಗಳೂ ಇಲ್ಲಿ ಆಳವಾಗಿ ಬೇರೂರಿವೆ. ಶಿವಮೊಗ್ಗೆಯ ಇತಿಹಾಸವೇ ರೋಚಕ, ರೋಮಾಂಚಕ.

    ಮೊಗೆದಷ್ಟೂ ಮುಗಿಯಲ್ಲ ಶಿವಮೊಗ್ಗೆಯ ಪ್ರವಾಸೀ ತಾಣಗಳು
    ಐದು ನದಿಗಳ ಹರಿವನ್ನು ಹೊಂದಿರುವ ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕ ಆಹಾರದ ತೊಟ್ಟಿಲು ಮತ್ತು ಕರ್ನಾಟಕದ ಅಕ್ಕಿಯ ಕಣಜ ಎಂಬ ಹೆಸರು ಪಡೆದಿದೆ. ಸಹ್ಯಾದ್ರಿ ಬೆಟ್ಟಗಳ ಸಾಲಿನಿಂದಾಗಿ ಶಿವಮೊಗ್ಗೆಯಲ್ಲಿ ಹರಿಯುವ ನದಿಗಳು ವರ್ಷಪೂರ್ತಿ ಮಳೆಯನ್ನು ಕಂಡು ತುಂಬಿ ಹರಿಯುತ್ತವೆ. ಸ್ಥಳೀಯರು ಶಿವಮೊಗ್ಗವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿ ದೇವಸ್ಥಾನಗಳು, ಬೆಟ್ಟಗುಡ್ಡಗಳು, ತರಕಾರಿ ಬೆಳೆಯುವ ಸ್ಥಳಗಳು ಮತ್ತು ಭಾರತದಲ್ಲಿಯೇ ಅತಿ ಎತ್ತರದ ಪ್ರಸಿದ್ದ ಜೋಗ ಜಲಪಾತ ಇಲ್ಲಿದೆ.

    ಪ್ರವಾಸಿಗರಿಗೆ ಅಚ್ಚರಿಗಳ ತೊಟ್ಟಿಲು
    ಆಗುಂಬೆಯಾ ಪ್ರೇಮ ಸಂಜೆಯಾ ಅನ್ನೋ ಹಾಡಿಗೆ ಸ್ಪೂರ್ತಿ ನೀಡಿದ ಸೂರ್ಯಾಸ್ತದ ಬೆಡಗಿ ಇಲ್ಲೇ ಇರೋದು. ಶಿವಮೊಗ್ಗದಿಂದ 90 ಕಿಲೋ ಮೀಟರ್ ದೂರದಲ್ಲಿದೆ ಈ ಸುಂದರಾತಿ ಸುಂದರ ತಾಣ. ಗಾಜನೂರಿನ ಬಳಿಯಿರೋ ತುಂಗಾ ಜಲಾಶಯ, ಕುಪ್ಪಳ್ಳಿಯ ಕುವೆಂಪು ಮನೆ, ತಾವರೆಕೊಪ್ಪ ಸಿಂಹಧಾಮ, ಬಳುಕೋ ಶ್ವೇತ ಸುಂದರಿ ಧರೆಗಿಳಿದಂತೆ ಕಾಣೋ ಜೋಗ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ಕೊಡಚಾದ್ರಿ ಬೆಟ್ಟ, ಸಿರಿ ಮನೆ ಜಲಪಾತ ಹೀಗೆ ಪ್ರವಾಸಿಗರ ಮನಸ್ಸಿಗೆ ಮುದ ಕೊಡೋ ಸ್ಥಳಗಳು ಲೆಕ್ಕವಿಲ್ಲದಷ್ಟಿವೆ.

    ಈಸೂರಿನ ಕದನ ಕಲಿಗಳು ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು ಹೇಗೆ ಗೊತ್ತಾ..?
    ಈಸೂರಿನ ಸ್ವಾತಂತ್ರ್ಯ ಕಲಿಗಳು ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ಸಮರಾಹ್ವಾನ ಕೊಟ್ಟಿದ್ದೂ ಇದೇ ಮಣ್ಣಿನಲ್ಲಿ. ಏಸೂರು ಕೊಟ್ಟರೂ ಈಸೂರು ಕೊಡೆವು ಅನ್ನೋ ಎಂಬ ಘೋಷಣೆಯೊಂದಿಗೆ ಸಣ್ಣ ಸಣ್ಣ ಹುಡುಗರಿಂದ ಶುರುವಾದ ಈಸೂರು ಸ್ವಾತಂತ್ರ್ಯ ಚಳವಳಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿತಗೊಂಡಿವೆ. ಮಾನಪ್ಪ ನಾಯಕರ ನೇತೃತ್ವದಲ್ಲಿ ಇಡೀ ಜಿಲ್ಲೆಗೆ ಜಿಲ್ಲೆಯ ಜನ್ರೇ ರೊಚ್ಚಿಗೆದ್ದಿದ್ರು. ಕರನಿರಾಕರಣೆ, ಉಪ್ಪಿನ ಮೇಲಿನ ತೆರಿಗೆ, ಅರಣ್ಯ ಹೀಗೆ ಅನೇಕ ವಿಷಯಗಳನ್ನಿಟ್ಕೊಂಡು ಬ್ರಿಟೀಷರ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನವೇ ನಡೆದು ಹೋಯ್ತು. ಜನರನ್ನ ಸಂಘಟಿಸೋಕೆ ಹರಿಕಥೆ, ಕೀರ್ತನೆ ಹಾಗೂ ಹಾಡುಗಳು ನೆರವಾದ್ವು. ಏಸೂರ ಕೊಟ್ಟರೂ ಈಸೂರ ಬಿಡೆವು ಅನ್ನೋ ಗೀತೆ ಇಂದಿಗೂ ಮಾರ್ದನಿಸುತ್ತದೆ.

    ಶಿವಮೊಗ್ಗದ ರಂಗೀನ್ ರಾಜಕಾರಣಕ್ಕೆ ಇದೆ ಭರ್ಜರಿ ಇತಿಹಾಸ..!!

    ಹೋರಾಟ ಹಾಗೂ ರಾಜಕಾರಣವನ್ನ ತನ್ನಲ್ಲಿ ಮೊದಲಿನಿಂದಲೂ ಹೊತ್ತುಕೊಂಡು ಬಂದ ಶಿವಮೊಗ್ಗ ಸ್ಟಾರ್ ಕ್ಷೇತ್ರವೂ ಹೌದು. ಕರ್ನಾಟಕ ಚುನಾವಣೆ ಅಂದ್ರೆ ಜನರ ಕುತೂಹಲ ಮೊದಲು ಹೋಗೋದೇ ಶಿವಮೊಗ್ಗೆಯತ್ತ. ಹಾಗಾದ್ರೆ, ಶಿವಮೊಗ್ಗದ ರಾಜಕೀಯ ಚಿತ್ರಣ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಕಾಂಗ್ರೆಸ್ ನ ಏಳು ಸುತ್ತಿನ ಕೋಟೆಯನ್ನ ಅಂದ ಕಾಲದಲ್ಲಿ ಬೇಧಿಸಿದ್ದು ಯಡಿಯೂರಪ್ಪ ಮತ್ತು ಈಶ್ವರಪ್ಪ ಅನ್ನೋ ಜಗರಿ ದೋಸ್ತ್ ಗಳು. ಕಾಂಗ್ರೆಸ್ ತನ್ನ ಸಾಮ್ರಾಜ್ಯ ವಿಸ್ತರಣೆಯ ತವಕದಲ್ಲಿದ್ರೆ, ಬಿಜೆಪಿಗೆ ಮತ್ತೆ ತನ್ನ ಬಲಿಷ್ಠತೆಯನ್ನ ಒರೆಗೆ ಹಚ್ಚೋ ಸಮಯ. ಇದೆಲ್ಲದ್ರ ನಡುವೆ ಜೆಡಿಎಸ್ ಗೂ ಇಲ್ಲಿ ಅಳಿವು ಉಳಿವಿನ ಪ್ರಶ್ನೆ.

    ಯಡಿಯೂರಪ್ಪನವರು ಈ ಬಾರಿಯೂ ಶಿಕಾರಿ ಹೊಡೀತಾರಾ..?
    ಉತ್ತರ ಕರ್ನಾಟಕ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಈ ಹಿಂದೆ ಕೇಳಿ ಬರ್ತಿತ್ತು. ಆದ್ರೆ, ಯಡಿಯೂರಪ್ಪನವರು ತಮ್ಮ ಸ್ವ ಕ್ಷೇತ್ರ ಶಿಕಾರಿಪುರದಲ್ಲೇ ಶಿಕಾರಿ ಹೊಡೆಯೋಕೆ ನಿಂತಿದ್ದಾರೆ. 2013ರಲ್ಲಿ ನಡೆದ ಎಲೆಕ್ಷನ್ ನಲ್ಲಿ ಬಿಎಸ್ ಯಡಿಯೂರಪ್ಪನವರು 69, 126 ಮತಗಳನ್ನು ಗಳಿಸಿದ್ರು. ಆ ಟೈಮಲ್ಲಿ ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ನ ಶಾಂತವೀರಪ್ಪ ಸ್ಪರ್ಧಿಸಿದ್ರೆ, ಜೆಡಿಎಸ್ ನಿಂದ ಎಚ್ ಬಳಿಗಾರ್ ಕಣದಲ್ಲಿದ್ರು. ನಂತ್ರ ನಡೆದ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರರನ್ನ ಜನ ಆರಿಸಿದ್ರು. ಶಿಕಾರಿಪುರ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಜಿ ಬಿ ಮಾಲತೇಶ್ ರನ್ನ ಕಣಕ್ಕಿಳಿಸಿದೆ. ಮಾಲತೇಶ್ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯೋ ಕ್ಯಾಂಡಿಡೇಟ್ ಅಲ್ಲ ಅನ್ನೋದು ಕಾಂಗ್ರೆಸ್ ವಲಯದವ್ರಲ್ಲೇ ಕೇಳಿ ಬರ್ತಿರೋ ಮಾತು. ಹೀಗಾಗಿ ಶಿಕಾರಿಪುರ ಯಡಿಯೂರಪ್ಪನವರಿಗೆ ಸಲಭದ ತುತ್ತಾಗುತ್ತೆ ಅಂತಾನೂ ಹೇಳಲಾಗ್ತಿದೆ. ಇನ್ನು ಜೆಡಿಎಸ್ ಎಚ್.ಟಿ.ಬಳಿಗಾರ್ ರನ್ನ ಅಖಾಡಕ್ಕಿಳಿಸಿದೆ. ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಲ್ಲಿ ಮಾಡಿರೋ ಅಭಿವೃದ್ಧಿ ಕೆಲಸಗಳೇ ಅವ್ರಿಗೆ ಶ್ರೀರಕ್ಷೆ. ಆದ್ರೆ, ಈ ಹಿಂದೊಮ್ಮೆ ಯಡಿಯೂರಪ್ಪನವರೂ ಈ ಕ್ಷೇತ್ರದಲ್ಲಿ ಸೋತಿದ್ದನ್ನೂ ಮರೆಯುವಂತಿಲ್ಲ.

    ಶಿವಮೊಗ್ಗದಲ್ಲಿ ಅರಳೋರು ಯಾರು..? ಅಳೋರು ಯಾರು..?
    ಶಿವಮೊಗ್ಗದಲ್ಲಿ ಈ ಬಾರಿ ಕೆ.ಎಸ್ ಈಶ್ವರಪ್ಪ ಬಿಜೆಪಿ ಹುರಿಯಾಳು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ.ಎಸ್ ಈಶ್ವರಪ್ಪನವರಿಗೆ ಕಳೆದ ಬಾರಿ ಕಾಂಗ್ರೆಸ್ ನ ಕೆ ಬಿ ಪ್ರಸನ್ನ ಕುಮಾರ್ ಸೆಡ್ಡು ಹೊಡೆದು ಗೆಲುವಿನ ನಗೆ ಬೀರಿದ್ರು. ಬಿಜೆಪಿ-ಕೆಜೆಪಿಯ ನಡುವಿನ ರಾಜಕೀಯದಲ್ಲಿ ಪ್ರಸನ್ನ ಕುಮಾರ್ ಗೆದ್ದಿದ್ರು. ಆದ್ರೆ ಆ ತಪ್ಪುಗಳನ್ನ ಈ ಬಾರಿ ಸರಿಪಡಿಸಿಕೊಳ್ಳೋ ತವಕದಲ್ಲಿ ಬಿಜೆಪಿ ಇದೆ.

    ಗ್ರಾಮಾಂತರದಲ್ಲಿ ರಾಜಕೀಯದ್ದೇ ಗಮ್ಮತ್ತು..!
    ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕಿ ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ ಈ ಬಾರಿಯೂ ರಣಕಣದಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಕಳೆದ ಬಾರಿಯ ಅಭ್ಯರ್ಥಿ ಕೆ.ಜಿ ಕುಮಾರಸ್ವಾಮಿಯವ್ರ ಬದಲಾಗಿ ಕೆ.ಬಿ.ಅಶೋಕ ನಾಯ್ಕ್ ರನ್ನ ಬಿಜೆಪಿ ತನ್ನ ಕ್ಯಾಂಡಿಡೇಟ್ ಆಗಿ ಆಯ್ಕೆ ಮಾಡಿದೆ. ಇನ್ನು ಕಾಂಗ್ರೆಸ್ ನಿಂದ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ. ಶ್ರೀನಿವಾಸ್ ಕರಿಯಣ್ಣ ಅವ್ರಿಗೆ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಯಾವ ರೀತಿ ಫೈಟ್ ಇರುತ್ತೆ ಅನ್ನೋ ಕುತೂಹಲ ಇದ್ದೇ ಇದೆ.

    ಹುಟ್ಟುತ್ತಾ ಅಣ್ಣತಮ್ಮಂದಿರು ಈಗ ರಾಜಕೀಯದಲ್ಲೂ ದಾಯಾದಿಗಳು..!
    ಸೊರಬ ಕ್ಷೇತ್ರ ಈ ಬಾರಿ ಅಣ್ಣ ತಮ್ಮಂದಿರ ಕದನಕ್ಕೆ ಸಾಕ್ಷಿಯಾಗ್ತಿದೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪರ ಮಕ್ಕಳಾದ ಕುಮಾರ್ ಬಂಗಾರಪ್ಪ ಕಮಲದ ಕೈ ಹಿಡಿದು ಕಂಟೆಸ್ಟ್ ಮಾಡ್ತಿದ್ರೆ, ಮಧು ಬಂಗಾರಪ್ಪ ತೆನೆ ಹೊತ್ತೇ ದಿಟ್ಟ ಉತ್ತರ ಕೊಡೋದಕ್ಕೆ ರೆಡಿಯಾಗಿದ್ದಾರೆ. ಹಾಲಿ ಶಾಸಕ ಮಧು ಬಂಗಾರಪ್ಪ 2013ರ ಎಲೆಕ್ಷನ್ ನಲ್ಲಿ 58,541 ಮತಗಳನ್ನು ಪಡೆದು ಗೆಲುವನ್ನ ಸಾಧಿಸಿದ್ರು. ಇನ್ನು ಕುಮಾರ್ ಬಂಗಾರಪ್ಪ ಕೈ ಬಿಟ್ಟು ಕಮಲ ಹಿಡಿದಿರೋದ್ರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿಯನ್ನ ಬಿಟ್ಟು ಬಂದ ರಾಜು ಎಂ ತಲ್ಲೂರ್ ಅವ್ರನ್ನ ಕಣಕ್ಕೆ ಇಳಿಸಿದೆ. ಏನಿದ್ರೂ ಇಲ್ಲಿ ದಾಯಾದಿಗಳ ಕುಟುಂಬ ಕಲಹ ಮನೆ ಬಾಗಿಲು ದಾಟಿ ರಾಜಕೀಯದವರೆಗೆ ತಲುಪಿರೋದೇ ದೊಡ್ಡ ದುರಂತ..!

    ತೀರ್ಥಹಳ್ಳಿಯಲ್ಲಿ ಯಾರ ಮುಕುಟಕ್ಕೆ `ರತ್ನ’?
    ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ಬಾರಿಯೂ ಹಾಲಿ ಶಾಸಕ ಹಾಗೂ ಮಾಜಿ ಸಚಿವರೂ ಆಗಿರುವ ಕಿಮ್ಮನೆ ರತ್ನಾಕರ್ ಪ್ರಬಲ ಅಭ್ಯರ್ಥಿ. ಬಿಜೆಪಿಯಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮೊದಲೇ ಟಿಕೆಟ್ ಫಿಕ್ಸ್ ಆಗಿತ್ತು. ಇನ್ನು, ಜೆಡಿಎಸ್ ನಿಂದ ಕಾಂಗ್ರೆಸ್ನಿಂದ ಬಂದಂತಹಾ ಆರ್. ಎಂ ಮಂಜುನಾಥ್ ಗೌಡ ಸ್ಪರ್ಧೆಯಲ್ಲಿದ್ದಾರೆ. ಆದ್ರೆ, ಈ ಕ್ಷೇತ್ರದಲ್ಲೇನಿದ್ರೂ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮೆಲುಗೈ ಸಾಧಿಸಿದೆ ಅನ್ನೋ ಲೆಕ್ಕಾಚಾರ ಇದೆ.

    ಭದ್ರಾವತಿಯಲ್ಲಿ ಗೆಲ್ಲೋ ಉಕ್ಕಿನ ಮನುಷ್ಯ ಯಾರು..?
    ಉಕ್ಕಿನ ನಗರಿ ಭದ್ರಾವತಿಯಲ್ಲಿ ಜೆಡಿಎಸ್ ದ್ದೇ ಪಾರುಪತ್ಯ. ಹಾಲಿ ಶಾಸಕ ಜೆಡಿಎಸ್ ನ ಎಂಜೆ ಅಪ್ಪಾಜಿ ಯವರೇ ಅಭ್ಯರ್ಥಿ. ಕಳೆದ ಬಾರಿ ಟಿಕೆಟ್ ಕೈ ತಪ್ಪಿದ್ರಿಂದ ಪಕ್ಷ ಬಿಟ್ಟು ಮುನಿಸಿಕೊಂಡಿದ್ದ ಬಿ.ಕೆ ಸಂಗಮೇಶ್ ಗೆ ಈ ಬಾರಿ ಕಾಂಗ್ರೆಸ್ ಜೈ ಅಂದಿದೆ. ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ. ಏನಿದ್ರೂ ಅಪ್ಪಾಜಿ ಗೌಡ ಹಾಗೂ ಸಂಗಮೇಶ್ ನಡ್ವೇನೇ ಫೈಟ್ ಆಗೋದು.

    ಸಾಗರದ ಸರದಾರ ಯಾರಾಗ್ತಾರೆ..?
    ಲಿಂಗನಮಕ್ಕಿಯಿಂದ ನಾಡಿಗೆ ಬೆಳಕು ಹರಿಯುತ್ತೆ. ಆದ್ರೆ, ಬಿಜೆಪಿ ಮಟ್ಟಿಗೆ ಇಲ್ಲಿ ಈ ಬಾರಿ ಇದ್ದ ಪವರ್ ಕೂಡಾ ಸ್ವಲ್ಪ ಮಟ್ಟಿಗೆ ಆಫ್ ಆಗಿರೋ ರೀತಿ ಕಾಣಿಸ್ತಿದೆ. ಹಾಲಿ ಶಾಸಕ ಕಾಗೋಡು ತಿಮ್ಮಪ್ಪ ಅವ್ರು ಇಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಆದ್ರೆ, ಈ ಬಾರಿ ಕಾಂಗ್ರೆಸ್ ಹಲವಾರು ಗೊಂದಲಗಳ ನಡುವೆ ಅವ್ರಿಗೇ ಮಣೆ ಹಾಕಿದೆ. ಇನ್ನು, ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲ ಕೃಷ್ಣ ನಡುವೆ ಟಿಕೆಟ್ ಗಾಗಿ ನಡೆದ ಪ್ರಹಸನದ ಬಳಿಕ ಅಂತಿಮವಾಗಿ ಹರತಾಳು ಟಿಕೆಟ್ ಗಿಟ್ಟಿದ್ರು. ಇದ್ರಿಂದ ಸಿಟ್ಟಿಗೆದ್ದ ಬೇಳೂರು ಕಾಂಗ್ರೆಸ್ ಕೈ ಹಿಡಿದು ಜೈ ಅಂದಿದ್ದೂ ಆಯ್ತು. 2013ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ 71, 960 ಮತ ಪಡೆದಿದ್ರು. ಕೆಜೆಪಿಯ ಬಿ.ಆರ್.ಜಯಂತ್ 30,712 , ಜೆಡಿಎಸ್‌ನ ಬೇಳೂರು ಗೋಪಾಲಕೃಷ್ಣ 23,217 ಮತ, ಬಿಜೆಪಿಯ ಶರಾವತಿ ಸಿ.ರಾವ್ 5,355 ಮತಗಳನ್ನು ಪಡೆದಿದ್ರು. ಹೀಗಾಗಿ ಈ ಬಾರಿ ಸಾಗರದ ಜನ ಯಾರಿಗೆ ಜೈ ಅಂತಾರೆ ಅನ್ನೋದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

  • ಬಂಗಾರಪ್ಪ ವರ್ಸಸ್ ಬಂಗಾರಪ್ಪ: ಶಿವಮೊಗ್ಗದ ಸೊರಬದಲ್ಲಿ ಸಹೋದರರ ಸವಾಲ್

    ಬಂಗಾರಪ್ಪ ವರ್ಸಸ್ ಬಂಗಾರಪ್ಪ: ಶಿವಮೊಗ್ಗದ ಸೊರಬದಲ್ಲಿ ಸಹೋದರರ ಸವಾಲ್

    ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿವೆ. ಈಗಾಗಲೇ ಎಲ್ಲ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯತಂತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ವರ್ಸಸ್ ಮಧು ಬಂಗಾರಪ್ಪ ನಡುವೆ ಅಖಾಡ ಆರಂಭವಾಗಲಿದೆ.

    ಬಿಎಸ್‍ವೈ ಸೂಚನೆಯಂತೆ ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಕಾರ್ಯತಂತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಸೊರಬ ಕ್ಷೇತ್ರದ ಶಾಸಕರಾಗಿರುವ ಸಹೋದರ ಮಧು ಬಂಗಾರಪ್ಪ ಕೂಡ ಜೆಡಿಎಸ್ ನಿಂದ ಚುನವಾಣಾ ಕಣಕ್ಕೆ ಇಳಿಯಲಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಕುಮಾರ್ ಬಂಗಾರಪ್ಪರಿಗೆ ಸೊರಬ ಕ್ಷೇತ್ರದ ಟಿಕೆಟ್ ನೀಡಿದ್ರೆ ಸಹೋದರರ ಮಧ್ಯೆ ವಾರ್ ನಡೆಯಲಿದೆ.

    ಸೊರಬ ಕ್ಷೇತ್ರದಿಂದಲೇ ಕುಮಾರ್ ಬಂಗಾರಪ್ಪ ಈಗಾಗಲೇ ಮೂರು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ, ಬಿಜೆಪಿಯ ಹರತಾಳು ಹಾಲಪ್ಪರನ್ನು ಸೋಲಿಸಿ ವಿಜಯಪತಾಕೆಯನ್ನು ಹಾರಿಸಿದ್ದರು. ಆದ್ರೆ ಈ ಬಾರಿ ಹರತಾಳು ಹಾಲಪ್ಪ ಮಾತ್ರ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ.

    ಸ್ನೇಹಿತರ ಸವಾಲ್: ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು 2004 ಮತ್ತು 2008ರ ವಿಧಾನ ಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಸೋಲಿಸಿ ಶಾಸಕರಾಗಿದ್ದರು. ಹೀಗಾಗಿ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ತಮಗೆ ಸಾಗರ ಕ್ಷೇತ್ರದಿಂದಲೇ ಟಿಕೆಟ್ ಬೇಕೆಂದು ಹಠ ಹಿಡಿದರೆ ಒಳ್ಳೆಯ ಸ್ನೇಹಿತರಾಗಿರುವ ಹಾಲಪ್ಪ ಮತ್ತು ಗೋಪಾಲಕೃಷ್ಣ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.

    ಬಿಜೆಪಿ ಹೈಕಮಾಂಡ್ ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತದೆ. ಟಿಕೆಟ್ ಯಾವ ನಾಯಕರಿಗೆ ಯಾವ ಕ್ಷೇತ್ರದಿಂದ ಲಭಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.