– ಉಗ್ರರನ್ನು ಸುತ್ತುವರಿದ ಯೋಧರು
ಶ್ರೀನಗರ: ಕಾಶ್ಮೀರದ ಕಣಿವೆಯಲ್ಲಿ ಉಗ್ರರು ತಮ್ಮ ಉಪಟಳ ಮುಂದುವರಿಸಿದ್ದು, ಬೆಳ್ಳಂಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ. ಸದ್ಯ ಯೋಧರು ಓರ್ವ ಉಗ್ರನನ್ನು ಹತ್ಯೆ ಮಾಡಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಸೊಫೋರ್ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಉಗ್ರರನ್ನು ಯೋಧರು ಸುತ್ತುವರಿದಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ದಾಳಿಯಲ್ಲಿ ಯೋಧರೊಬ್ಬರಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆಯಲ್ಲಿ ತೊಡಗಿರುವ ಯಾತ್ರಿಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಲು ಹೊಂಚು ಹಾಕಿರುವ ಸ್ಫೋಟಕ ವಿಚಾರ ಶುಕ್ರವಾರ ಬೆಳಕಿಗೆ ಬಂದಿತ್ತು. ಗುಪ್ತಚರ ಇಲಾಖೆಯಿಂದ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪವಿತ್ರ ಅಮರನಾಥ ಯಾತ್ರೆಯನ್ನು ನಿಲ್ಲಿಸಿ ಕಾಶ್ಮೀರ ತೊರೆದು ತಮ್ಮ ಊರುಗಳಿಗೆ ಮರಳಿ ಹೋಗಿ ಎಂದು ಜಮ್ಮು-ಕಾಶ್ಮೀರದ ಗೃಹ ಸಚಿವಾಲಯ ಯಾತ್ರಿಗಳಿಗೆ ಸೂಚಿಸಿದ್ದರು.
ಯಾಕೆ ಈ ಸೂಚನೆ?
ಅಮರನಾಥ ಯಾತ್ರೆಗೆ ಸಾಗುವ ಮಾರ್ಗಗಳಲ್ಲಿ ವಿದೇಶಿ ಶಸ್ತ್ರಾಸ್ತ್ರಗಳು ಪತ್ತೆಯಾಗಿತ್ತು. ಅಮೆರಿಕದ ಎಂ-24 ಸ್ನೈಪರ್ ರೈಫಲ್ ಅನ್ನು ಸೇನೆ ವಶಪಡಿಸಿಕೊಂಡಿದ್ದು, ಪತ್ತೆಯಾಗಿರುವ ಶಸ್ತ್ರಾಸ್ತ್ರಗಳ ಮೇಲೆ ಪಾಕಿಸ್ತಾನದ ಶಸ್ತ್ರಾಸ್ತ್ರ ಘಟಕದ ಚಿಹ್ನೆಗಳಿದ್ದವು. ಹೀಗಾಗಿ ಅಮರನಾಥ ಯಾತ್ರಿಕರು ಕೂಡಲೇ ಜಮ್ಮು ಕಾಶ್ಮೀರ ಬಿಟ್ಟು ತೆರಳುವಂತೆ ಸೂಚನೆ ರವಾನಿಸಲಾಗಿತ್ತು. ಈ ಮೂಲಕ ಪಾಕಿಸ್ತಾನ ಉಗ್ರರಿಗೆ ಸಹಾಯ ಮಾಡುತ್ತಿದೆ ಎನ್ನುವ ಭಾರತದ ವಾದಕ್ಕೆ ಪುಷ್ಠಿ ಸಿಕ್ಕಿತ್ತು.
ಈ ವಿಚಾರ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ್ದ ಲೆಫ್ಟಿನೆಂಟ್ ಜನರಲ್ ಸರಬ್‍ಜೀತ್ ಸಿಂಗ್ ಧಿಲ್ಲಾನ್ ಅವರು, ಕಾಶ್ಮೀರದ ಶಾಂತಿಯನ್ನು ಕದಡಲು ನಾವು ಅವಕಾಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಉಗ್ರರು ಹಾಗೂ ಪಾಕಿಸ್ತಾನದ ಹೊಂಚು ಯಶಸ್ವಿಯಾಗಲು ಬಿಡುವುದಿಲ್ಲ. ಇದು ಕಾಶ್ಮೀರ ಜನತೆಗೆ ಹಾಗೂ ದೇಶಕ್ಕೆ ನಾವು ನೀಡುವ ವಾದ ಎಂದು ಭರವಸೆ ನೀಡಿದ್ದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‍ಗೆ ಸೇರಿದ ಐದು ಉಗ್ರರು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
