Tag: son’s

  • ನಿನ್ನ ವಂಶ ನಿರ್ವಂಶವಾಗ್ಲಿ- ಪತಿಗೆ ಶಾಪ ಹಾಕಿ ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ

    ನಿನ್ನ ವಂಶ ನಿರ್ವಂಶವಾಗ್ಲಿ- ಪತಿಗೆ ಶಾಪ ಹಾಕಿ ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ

    ಚಿಕ್ಕೋಡಿ (ಬೆಳಗಾವಿ): ನಿನ್ನ ವಂಶ ನಿರ್ವಂಶವಾಗಲಿ ಎಂದು ಪತ್ನಿಯೊಬ್ಬಳು ಪತಿಗೆ ಶಾಪ ಹಾಕಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ಹುಕ್ಕೇರಿ ತಾಲೂಕಿನ ನೊಗನಿಹಾಳ ಗ್ರಾಮದಲ್ಲಿ ನಡೆದಿದೆ.

    ನೊಗನಿಹಾಳ ಗ್ರಾಮದ ಮಲ್ಲವ್ವ ಬಸವರಾಜ ಮರಬಸ್ಸನವರ (35), ಸಿದ್ಧಪ್ಪ (3) ಹಾಗೂ ಗುರುನಾಥ (10) ಮೃತ ದುರ್ದೈವಿಗಳು. ಗ್ರಾಮದ ಹೊರ ವಲಯದಲ್ಲಿರುವ ಕಾಲುವೆಗೆ ಬಿದ್ದು ತಾಯಿ ಹಾಗೂ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಲ್ಲವ್ವ ಇಂತಹ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಬಸವರಾಜ ಮೊದಲನೇ ಪತ್ನಿಗೆ 6 ಜನ ಮಕ್ಕಳಿದ್ದರು. ಹೀಗಾಗಿ ವಂಶಕ್ಕೆ ವಾರಸುದಾರ ಬೇಕು ಎನ್ನುವ ಉದ್ದೇಶದಿಂದ ಮೊದಲ ಪತ್ನಿಯೇ ಮುಂದೆ ಪತಿ ಬಸವರಾಜ ಹಾಗೂ ಮಲ್ಲವ್ವಗೆ ಮದುವೆ ಮಾಡಿಸಿದ್ದಳು. ಆ ಬಳಿಕ ಬಸವರಾಜ ಹಾಗೂ ಮಲ್ಲವ್ವ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಜನಿಸಿದ್ದವು. ಆದರೆ ಮನೆಯಲ್ಲಿ ಆಗಾಗ ಸಣ್ಣಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು.

    ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ಬಸವರಾಜ ಹಾಗೂ ಸವತಿಗೆ ಬುದ್ಧಿ ಕಲಿಸಲು ಮಲ್ಲವ್ವ ಮುಂದಾಗಿದ್ದರು. ಹೀಗಾಗಿ ಪತಿಯ ವಂಶವೇ ನಿರ್ಣಾಮ ಆಗಬೇಕು ಎನ್ನುವ ಉದ್ದೇಶದಿಂದ ಇಬ್ಬರು ಗಂಡು ಮಕ್ಕಳೊಂದಿಗೆ ಮಲ್ಲವ್ವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ನೊಗನಿಹಾಳ ಗ್ರಾಮದ ಹೊರ ವಲಯದ ಕಾಲುವೆಯಿಂದ ತಾಯಿ ಹಾಗೂ ಮಕ್ಕಳ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಹುಕ್ಕೇರಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೆತ್ತಮ್ಮನಿಗೆ ಬೆದರಿಕೆ ಒಡ್ಡಿದ ಮಕ್ಕಳು- ಆಶ್ರಯವಿಲ್ಲದೆ ಕಣ್ಣೀರಿಡುತ್ತಿರುವ ವೃದ್ಧ ತಾಯಿ

    ಹೆತ್ತಮ್ಮನಿಗೆ ಬೆದರಿಕೆ ಒಡ್ಡಿದ ಮಕ್ಕಳು- ಆಶ್ರಯವಿಲ್ಲದೆ ಕಣ್ಣೀರಿಡುತ್ತಿರುವ ವೃದ್ಧ ತಾಯಿ

    ಬಾಗಲಕೋಟೆ: ಹೆತ್ತವರನ್ನು ಸಾಕಲು ಯೋಗ್ಯತೆ ಇರದ ಪಾಪಿ ಮಕ್ಕಳು ತಾಯಿಗೆ ಪ್ರಾಣ ಬೆದರಿಕೆ ಹಾಕಿದ್ದು, ಮಕ್ಕಳ ದುಷ್ಟತನಕ್ಕೆ ಹೆದರಿ ಮನನೊಂದ ತಾಯಿ ಕಣ್ಣೀರಿಡುತ್ತಿದ್ದ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ.

    ನವನಗರ ನಿವಾಸಿ ಶಾಂತವ್ವ ತಳವಾರ್ ಮಕ್ಕಳಿಂದ ಬೆದರಿಕೆಗೆ ಒಳಗಾಗಿರುವ ನತದೃಷ್ಟ ತಾಯಿ. ನವನಗರದ 28ನೇ ಸೆಕ್ಟರ್ ನಿವಾಸಿಯಾಗಿರುವ ಶಾಂತವ್ವ ಅವರನ್ನು ಹೆತ್ತ ಮಕ್ಕಳು ನೋಡಿಕೊಳ್ಳುತ್ತಿಲ್ಲ. ಶಾಂತವ್ವ ಅವರಿಗೆ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ. ಓರ್ವ ಮಗ ಪರಶುರಾಮ್ ಹೊನ್ನಾವರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಇನ್ನೋರ್ವ ಮಗ ಆಕಾಶ್ ಬಾಗಲಕೋಟೆಯಲ್ಲಿ ಕ್ರೂಸರ್ ಡ್ರೈವರ್ ಆಗಿದ್ದಾನೆ. ದುಡಿಯುವ ಎರಡು ಗಂಡು ಮಕ್ಕಳಿದ್ದರೂ ಯಾರೂ ಕೂಡ ತಾಯಿಯನ್ನ ನೋಡಿಕೊಳ್ಳುತ್ತಿಲ್ಲ. ಹೆತ್ತು, ಹೊತ್ತು, ಸಾಕಿದ ತಾಯಿಯನ್ನೆ ಮಕ್ಕಳು ಬೀದಿಗೆ ಬಿಟ್ಟಿದ್ದಾರೆ.

    ಮಕ್ಕಳು ತನಗೆ ಮಾಡುತ್ತಿದ್ದ ಕಿರಿಕಿರಿಯಿಂದ ನೊಂದ ತಾಯಿ ಮನೆ ಬಿಟ್ಟು ಬಂದಿದ್ದಾರೆ. ಜೊತೆಗೆ ಮಕ್ಕಳ ಬೆದರಿಕೆಗೆ ಹೆದರಿ ಕಣ್ಣೀರು ಹಾಕಿದ್ದಾರೆ. ಯಾರಾದರೂ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಬೇಡಿಕೊಂಡಿದ್ದಾರೆ. ವೃದ್ಧ ತಾಯಿಯ ಸಹಾಯಕ್ಕೆ ಬಂದ ಪಬ್ಲಿಕ್ ಟಿವಿ ಪ್ರತಿನಿಧಿ ಮಾನವೀಯತೆ ಮರೆದಿದ್ದಾರೆ. ನೊಂದ ತಾಯಿಗೆ ಸಾಂತ್ವಾನ ಹೇಳಿ, ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಗೆ ಕರೆದುಕೊಂಡು ಹೋಗಿ ಮಕ್ಕಳ ಬಗ್ಗೆ ದೂರು ದಾಖಲಿಸಿದ್ದಾರೆ. ಜೊತೆಗೆ ಎಸ್.ಪಿ ಕಚೇರಿಗೆ ಕರೆದೊಯ್ದು ಎಸ್.ಪಿ ಲೋಕೇಶ್ ಅವರಿಗೆ ಈ ವಿಷಯ ತಿಳಿಸಿ ತಾಯಿಗೆ ಸಹಾಯ ಮಾಡಿದ್ದಾರೆ.

  • ನಾಯಿಯನ್ನ ಕೊಂದ ಇಬ್ಬರು ಗಂಡುಮಕ್ಕಳ ವಿರುದ್ಧ ತಂದೆಯಿಂದಲೇ ಕೇಸ್

    ನಾಯಿಯನ್ನ ಕೊಂದ ಇಬ್ಬರು ಗಂಡುಮಕ್ಕಳ ವಿರುದ್ಧ ತಂದೆಯಿಂದಲೇ ಕೇಸ್

    ರಾಯ್ಪುರ್: ತನ್ನ ಸಾಕು ನಾಯಿಯನ್ನ ಕೊಂದಿದ್ದಕ್ಕೆ ತಂದೆಯೇ ತನ್ನ ಇಬ್ಬರು ಗಂಡು ಮಕ್ಕಳ ವಿರುದ್ಧ ಎಫ್‍ಐಆರ್ ದಾಖಲಿಸಿರೋ ಘಟನೆ ಛತ್ತೀಸ್‍ಗಢದ ಸೂರಜ್‍ಪುರ್ ಜಿಲ್ಲೆಯ ಪೋಡಿ ಗ್ರಾಮದಲ್ಲಿ ನಡೆದಿದೆ.

    ಶಿವಮಂಗಲ್ ಸಾಯಿ(50) ಎಂಬವರು ತನ್ನ ಇಬ್ಬರು ಗಂಡುಮಕ್ಕಳ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶಿವಮಂಗಲ್ ಮನೆಯಲ್ಲಿ ಇಲ್ಲದ ವೇಳೆ ಮಕ್ಕಳು ಕೊಡಲಿಯಿಂದ ನಾಯಿಯನ್ನ ಕೊಂದಿದ್ದಾರೆ. ಮನೆಗೆ ವಾಪಸ್ ಬಂದ ಶಿವಮಂಗಲ್ ನಾಯಿ ಸಾವನ್ನಪ್ಪಿರುವುದನ್ನು ನೋಡಿ ಜಗಳವಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ತನ್ನ ನಾಯಿಯನ್ನು ಕೊಂದ ಆರೋಪದ ಮೇಲೆ ಮಕ್ಕಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

    ನಾಯಿಯ ಮೃತದೇಹವನ್ನ ಸೈಕಲ್ ಮೇಲಿರಿಸಿಕೊಂಡು ಪೊಲೀಸ್ ಠಾಣೆಗೆ ಹೋದ ಶಿವಮಂಗಲ್, ಮಕ್ಕಳ ವಿರುದ್ಧ ಕೇಸ್ ದಾಖಲಿಸಬೇಕೆಂದು ಹೇಳಿದ್ದಾರೆ. ಅವರ ದೂರಿನನ್ವಯ ಗಂಡುಮಕ್ಕಳ ವಿರುದ್ಧ ಐಪಿಸಿ ಸೆಕ್ಷನ್ 429ರ ಅಡಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಶಿವಮಂಗಲ್ ಅವರ ಇಬ್ಬರು ಮಕ್ಕಳಿಗೆ ಸಾಕು ನಾಯಿ ಇಷ್ಟವಿರಲಿಲ್ಲ. ತನ್ನ ತಂದೆ ಪ್ರಾಣಿಗಳಿಂದ ದೂರವಿರಬೇಕೆಂದು ಬಯಸಿದ್ದರು. ಆದ್ರೆ ಶಿವಮಂಗಲ್ ನಾಯಿಯನ್ನ ದೂರ ಮಾಡಲು ನಿರಾಕರಿಸಿದ್ದರು. ಹೀಗಾಗಿ ಮಕ್ಕಳು ನಾಯಿಯನ್ನ ಕೊಂದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

    ಶಿವಮಂಗಲ್ ಅವರ ಮಕ್ಕಳಲ್ಲಿ ಒಬ್ಬನಾದ ಶಿವನಾಥ್ ಪೊಲೀಸರಿಗೆ ಈ ಬಗ್ಗೆ ಹೇಳಿಕೆ ನೀಡಿದ್ದು, ನಾಯಿ ತನ್ನ ತಾಯಿಯನ್ನ ಚೇಸ್ ಮಾಡಿ ಅವರ ಮೇಲೆ ದಾಳಿ ಮಾಡಿತ್ತು. ಹೀಗಾಗಿ ಇದರಿಂದ ಕಿರಿಕಿರಿಯಾಗ್ತಿತ್ತು. ನಾಯಿ ದಾಳಿಯಿಂದ ತಾಯಿಗೆ ಗಂಭೀರ ಗಾಯವಾಗಬಹುದು ಎಂದು ಹೆದರಿ ಅದನ್ನ ಕೊಲೆ ಮಾಡಿದೆ ಎಂದಿದ್ದಾನೆ.

    ಆದ್ರೆ ತಂದೆ ಇದಕ್ಕೆ ಉತ್ತರಿಸಿ ನನ್ನ ನಾಯಿ ಪಳಗಿದ ನಾಯಿಯಾಗಿತ್ತು. ಮನೆಯಲ್ಲಿ ಎಲ್ಲರನ್ನೂ ತುಂಬಾ ಪ್ರೀತಿಸುತ್ತಿತ್ತು. ಆದ್ರೆ ಇವರು ಅದನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.

  • ಮಕ್ಕಳಿಂದಲೇ ತಂದೆಯ ಮೇಲೆ ಬಡಿಗೆ, ಕಲ್ಲಿನಿಂದ ಹಲ್ಲೆ!

    ಮಕ್ಕಳಿಂದಲೇ ತಂದೆಯ ಮೇಲೆ ಬಡಿಗೆ, ಕಲ್ಲಿನಿಂದ ಹಲ್ಲೆ!

    ಬಾಗಲಕೋಟೆ: ಆಸ್ತಿ ಹಂಚಿಕೆ ಮಾಡಿಲ್ಲವೆಂದು ಮಕ್ಕಳೇ ಹೆತ್ತ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.

    ಶೇಕಪ್ಪ ಮನಗುಳಿ ಎಂಬ 80 ವರ್ಷದ ವ್ಯಕ್ತಿಯೇ ಹಲ್ಲೆಗೊಳದ ತಂದೆ. ಶೇಕಪ್ಪ 6 ಕೂರಗಿ ಜಮೀನನ್ನು ಹೊಂದಿದ್ದಾರೆ. ಇದೀಗ ಇವರ ಮಕ್ಕಳಾದ ಕನಕಪ್ಪ ಹಾಗೂ ಯಲ್ಲಪ್ಪ ನಮಗೆ ಆಸ್ತಿ ಪಾಲು ಮಾಡು ಎಂದು ಪೀಡಿಸುತ್ತಿದ್ರು. ಆದ್ರೆ ತಂದೆ ಶೇಕಪ್ಪ ಮಾತ್ರ ಮಕ್ಕಳ ಮಾತಿಗೆ ಒಪ್ಪಿರಲಿಲ್ಲ. ಹೀಗಾಗಿ ಆಕ್ರೋಶಗೊಂಡ ಮಕ್ಕಳಾದ ಕನಕಪ್ಪ ಹಾಗೂ ಯಲಪ್ಪ ಬಡಿಗೆ ಹಾಗೂ ಕಲ್ಲಿನಿಂದ ಕೈ, ಕಾಲುಗಳಿಗೆ ಹೊಡೆದು ಮನಬಂದಂತೆ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ.

    ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಶೇಕಪ್ಪ ಸದ್ಯ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಕನಕಪ್ಪ ಹಾಗೂ ಯಲ್ಲಪ್ಪನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.