ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ (Rajavardhan) ನಟನೆಯ ಹಿರಣ್ಯ (Hiranya) ಸಿನಿಮಾ ಟೀಸರ್ ಮೂಲಕ ಭರವಸೆ ಹುಟ್ಟಿಸಿದೆ. ಇದೀಗ ತಾಯಿ ಪ್ರೀತಿ ವಿವರಿಸುವ ಹಿರಣ್ಯನ ಹೃದಯ ಮೀಟುವ ಹಾಡು ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯದ ಹಾಡಿಗೆ ಸುಪ್ರಿಯಾ ರಾಮ್ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಾಯಕನಾಗಿ ಅಭಿನಯಿಸಿರುವ ರಾಜವರ್ಧನ್ ಗೆ ಜೋಡಿಯಾಗಿ ರಿಹಾನಾ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಿರಣ್ಯ ಚಿತ್ರವನ್ನು ಪ್ರವೀಣ್ ಅವ್ಯೂಕ್ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಇದು ಅವರಿಗೆ ಮೊದಲ ಚಿತ್ರ. ಇದಕ್ಕೂ ಮುನ್ನ ಕಿರುಚಿತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಯೋಗೇಶ್ವರನ್ ಆರ್. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.
ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದ ಸಮರ್ಜಿತ್ (Samarjit Lankesh), ಸಾನ್ಯಾ ಅಯ್ಯರ್ ಅಭಿನಯದ `ಗೌರಿ’ (Gowri) ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ..’ ಹಾಡು ಬಿಡುಗಡೆ ಆಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ…ಎಲ್ಲೆಲ್ಲೂ ಕೇಳಿ ಬರುತ್ತಿರೋ ಧೂಳ್ ಎಬ್ಬಿಸಾವ ಹಾಡು ಈಗ ಹೊಸ ಇತಿಹಾಸ ಬರೆದಿದೆ.
ಧೂಳ್ ಎಬ್ಬಿಸಾವ ಸಾಂಗ್ ಆಲ್ ಇಂಡಿಯಾ ಲೆವೆಲ್ ನಲ್ಲಿ ಟ್ರೆಂಡ್ ಸೃಷ್ಟಿಸುವ ಮೂಲಕ ರೆಕಾರ್ಡ್ ಮಾಡಿದೆ.ಶಿವುಬೆರ್ಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರೀ ಮತ್ತು ಅನನ್ಯಾ ಭಟ್ ಅವರ ಸುಂದರ ಕಂಠದಲ್ಲಿ ಮೂಡಿಬಂದಿದೆ. `ಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಮತ್ತು ಖ್ಯಾತ ನಟಿ ಸಂಜನಾ ಆನಂದ್ ಈ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ…
ಇನ್ಸ್ಟಾಗ್ರಾಂ ಮತ್ತು ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿರುವ ಈ ಹಾಡಿಗೆ ನಾಡಿನ ಲಕ್ಷಾಂತರ ಮಂದಿ ರೀಲ್ಸ್ ಮಾಡುತ್ತಿದ್ದಾರೆ. ಒಂದೊಂದು ರೀಲ್ಸ್ ಲಕ್ಷಾಂತರ ವ್ಯೂಸ್ ಮತ್ತು ಲೈಕ್ಸ್ ಪಡೆಯುತ್ತಿವೆ. ಕರ್ನಾಟಕ ಸೇರಿದಂತೆ ಇಡೀ ದೇಶದ ಜನರು ಈ ಹಾಡಿಗೆ ಫಿದಾ ಆಗಿದ್ದಾರೆ…
ಮತ್ತೊಂದು ವಿಶೇಷ ಅಂದ್ರೆ ಆಲ್ ಇಂಡಿಯಾ ಲೆವೆಲ್ ಟ್ರೆಂಡಿಂಗ್ ನಲ್ಲಿ ಸೌತ್ ಸಾಂಗ್ ಗಳು ಸದ್ದು ಮಾಡುತ್ತಿರುವ ಲಿಸ್ಟ್ ನಲ್ಲಿ ಮೊದಲನೇ ಸ್ಥಾನ ಕಲ್ಕಿ ಚಿತ್ರದ ಹಾಡು ಪಡೆದುಕೊಂಡಿದ್ರೆ ಎರಡನೇ ಸ್ಥಾನ ಪುಷ್ಪ2 ಚಿತ್ರದ ಹಾಡು ಪಡೆದುಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿ ಕನ್ನಡದ ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾದ ಧೂಳ್ ಎಬ್ಬಿಸುವ ಸಾಂಗ್ ಇದೆ ಅನ್ನೋದೆ ಖುಷಿಯ ವಿಚಾರ…ಒಟ್ನಲ್ಲಿ ಸದ್ಯ ಆಲ್ ಇಂಡಿಯಾ ಮ್ಯೂಸಿಕ್ ಟ್ರೆಂಡಿಂಗ್ ಲೀಸ್ಟ್ ನಲ್ಲಿ ಬರೀ ಸೌತ್ ಚಿತ್ರಗಳೇ ಇದೆ ಎನ್ನುವುದು ಸೌತ್ ಸಿನಿಮಾ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ.
ಇನ್ನು ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರದ ಹಾಡನ್ನು ಹಿಂದಿಕ್ಕಿದೆ ಗೌರಿ ಸಿನಿಮಾದ ಹಾಡು..ಅದರ ಜೊತೆಗೆ ಉತ್ತರ ಕರ್ನಾಟಕದ ಮಂದಿಯಂತು ಈ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ದೇಶದೆಲ್ಲೆಡೆ `ಗೌರಿ’ ಚಿತ್ರದ ಈ ಹಾಡು ಸಖತ್ ಧೂಳ್ ಎಬ್ಬಿಸ್ತಿದೆ. ಈಗಾಗಲೇ ಸಖತ್ ಪ್ರಮೋಷನ್ ಮೂಲಕ ಸದ್ದು ಮಾಡ್ತಿರೋ ಗೌರಿ ಸಿನಿಮಾ ಆದಷ್ಟು ಬೇಗ ದೊಡ್ಡ ಸ್ಕ್ರೀನ್ ಮೇಲೆ ಬರಲಿದೆ
ಪ್ರಭಾಸ್ (Prabhas), ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ‘ಕಲ್ಕಿ 2898 AD’ (Kalki) ಚಿತ್ರದ ಟ್ರೈಲರ್ ಬಿಡುಗಡೆಯ ಬಳಿಕ ಇದೀಗ ಇದೇ ಚಿತ್ರದ ಭೈರವ ಆಂಥಮ್ ಬಿಡುಗಡೆಯಾಗಿದೆ. ವೈಜಯಂತಿ ಮೂವೀಸ್ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ರಿಲೀಸ್ ಆಗಿದೆ. ನಟ ಪ್ರಭಾಸ್ ಅವರು ನಟಿಸಿರುವ ಈ ಚಿತ್ರದ ಹಾಡಿಗೆ ಮೊದಲ ಸಲ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಧ್ವನಿ ನೀಡಿದ್ದಾರೆ. ಸಂತೋಷ್ ನಾರಾಯಣನ್ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಪಕ್ಕಾ ಮಾಸ್ ಅವತಾರದಲ್ಲಿ ನಟ ಪ್ರಭಾಸ್ ಈ ಹಾಡಿನಲ್ಲಿ ಎದುರಾಗಿದ್ದಾರೆ. ತಲೆಗೆ ಟರ್ಬನ್ ಧರಿಸಿ ಮತ್ತು ಪಂಚೆಯಲ್ಲಿ ಮಿಂಚಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದ ಈ ಸಿನಿಮಾ, ಇದೀಗ ಭೈರವ ಆಂಥಮ್ ಮೂಲಕ ಕಿಕ್ ಹೆಚ್ಚಿಸುತ್ತಿದೆ. ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್ ನಿರ್ಮಿಸಿರುವ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್ 27ರಂದು ಬಿಡುಗಡೆ ಆಗಲಿದೆ.
ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನರ ಮನ ಗೆದ್ದಿರುವ ಹೆಚ್ ಎಂ ಕೃಷ್ಣಮೂರ್ತಿ ಅವರು ನಿರ್ಮಿಸಿ ಹಾಗು ಕೆಂಪೇಗೌಡರ ಪಾತ್ರದಲ್ಲೂ ಅಭಿನಯಿಸಿರುವ ನಾಡಪ್ರಭು ಶ್ರೀಕೆಂಪೇಗೌಡರ ಕುರಿತಾದ “ನಾಡಸಿಂಹ ಕೆಂಪೇಗೌಡ” (Nadasimha Kempegowda) ಎಂಬ ಹಾಡಿನ ಲೋಕಾರ್ಪಣೆ ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅದ್ದೂರಿಯಾಗಿ ನೆರವೇರಿತು. ಜೆ.ಕೆ ಶರ್ಮ ಗುರೂಜಿ, ನಟ ವಸಿಷ್ಠ ಸಿಂಹ, ಹಿರಿಯ ನಟ ಅಶೋಕ್, ನಿರ್ದೇಶಕ ಟಿ.ಎಸ್. ನಾಗಾಭರಣ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಟರಾದ ಧರ್ಮ, ತಬಲ ನಾಣಿ, ನೀನಾಸಂ ಅಶ್ವಥ್, ನಿರ್ಮಾಪಕ ಸಂಜಯ್ ಗೌಡ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಹೆಚ್ ಎಂ ಕೃಷ್ಣಮೂರ್ತಿ ಅವರು ಹಾಡಿನ ಬಗ್ಗೆ ಮಾತನಾಡಿದರು.
ನಾನು ಕೆಂಪೇಗೌಡರ ಆರಾಧಕ ಎಂದು ಮಾತನಾಡಿದ ಹೆಚ್ ಎಂ ಕೃಷ್ಣಮೂರ್ತಿ ಅವರು, ಬೆಂಗಳೂರು ಹಾಗೂ ಸುತ್ತಮುತ್ತಲ್ಲಿನ ಊರುಗಳಿಗೆ ಮಾಗಡಿ ಕೆಂಪೇಗೌಡರು ಮಾಡಿರುವ ಉಪಕಾರ ಮಹತ್ತರವಾದ್ದದ್ದು. ಅಂತಹ ಪುಣ್ಯತ್ಮರ ಸ್ಮರಣೆಗಾಗಿ ಈ ಹಾಡನ್ನು ನಿರ್ಮಿಸಿದ್ದೇನೆ. ಮೊದಲ ಬಾರಿಗೆ ಕೆಂಪೇಗೌಡರ ಪಾತ್ರದಲ್ಲೂ ಕಾಣಿಸಿಕೊಂಡಿದ್ದೇನೆ. ಕೆಂಪೇಗೌಡರ ಬಗ್ಗೆ ತಿಳಿಸುವ ಈ ಹಾಡು ನಮ್ಮ ಎ ಕೆ ಜಿ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಎಲ್ಲಾ ಗಣ್ಯರಿಗೆ ಧನ್ಯವಾದ. ಕೆ.ರಾಮನಾರಾಯಣ್ ಅವರು ಬರೆದಿರುವ ಈ ಹಾಡಿಗೆ ಶ್ರೀಧರ್ ವಿ ಸಂಭ್ರಮ್ ಸಂಗೀತ ನೀಡಿದ್ದಾರೆ. ಶಂಕರ್ ಮಹಾದೇವನ್ ಮತ್ತು ಅನುರಾಧ ಭಟ್ ಗಾಯನ ವಿದೆ . ಭಜರಂಗಿ ಮೋಹನ್ ನೃತ್ಯ ನಿರ್ದೇಶನ. ಕೃಷ್ಣ ಕುಮಾರ್ ಛಾಯಾ ಗ್ರಹಣ ಪುನೀತ್ ಸಂಕಲನ ವಿದೆ .
ನಾನು ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಟಿ.ಎಸ್ ನಾಗಾಭರಣ (Nagabharana), ವಿನಯಪ್ರಸಾದ್, ಧರ್ಮ, ನೀನಾಸಂ ಅಶ್ವತ್, ಮುನಿ, ಹೆಚ್ ವಾಸು, ವಿಕ್ಟರಿ ವಾಸು ಮುಂತಾದವರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರಿ ಆಸುಪಾಸಿನಲ್ಲಿದೆ. ಅಂತಹ ಸ್ಥಳಗಳನ್ನು ನಮ್ಮ ಯೂಟ್ಯೂಬ್ ಚಾನಲ್ ಮೂಲಕ ಪರಿಚಯ ಮಾಡಿಕೊಡುತ್ತಿದ್ದೇನೆ. ಕೆಂಪೇಗೌಡರ ಕುರಿತು ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ. ಈ ಹಾಡು ಅದ್ದೂರಿಯಾಗಿ ಹಾಗೂ ಅದ್ಭುತವಾಗಿ ಮೂಡಿಬರಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದರು.
ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” (Krishnam Pranaya Sakhi) ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಪೋಸ್ಟರ್ ಗಳು ಎಲ್ಲರ ಮೆಚ್ಚುಗೆ ಗಳಿಸಿದೆ. ಬಹು ನಿರೀಕ್ಷಿತ ಈ ಚಿತ್ರದ ಮೊದಲ ಹಾಡು ಮೇ 25 ರಂದು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ.
ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಸುಮಧುರ ಹಾಡುಗಳು “ಕೃಷ್ಣಂ ಪ್ರಣಯ ಸಖಿ” ಚಿತ್ರದಲ್ಲಿದೆ. ಆ ಪೈಕಿ ನಿಶಾನ್ ರಾಯ್ ಅವರು ಬರೆದು ಹೆಸರಾಂತ ಗಾಯಕ ಚಂದನ್ ಶೆಟ್ಟಿ ಹಾಡಿರುವ ಈ ಚಿತ್ರದ ಮೊದಲ ಹಾಡು ಸಾಂಸ್ಕೃತಿಕ ನಗರಿ ಮೈಸೂರಿನ “ಮಾಲ್ ಆಫ್ ಮೈಸೂರಿನಲ್ಲಿ” ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಮೈಸೂರಿನಲ್ಲಿ ಮೊದಲ ಹಾಡು ಬಿಡುಗಡೆ ಮಾಡುವುದರ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಬೆಂಗಳೂರು, ವಿಯೆಟ್ನಾಂ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.
ಬಹು ನಿರೀಕ್ಷಿತ “ಕೃಷ್ಣಂ ಪ್ರಣಯ ಸಖಿ” ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41 ನೇ ಚಿತ್ರ. ಗಣೇಶ್ ಅವರಿಗೆ ನಾಯಕಿಯಾಗಿ ಮಾಳವಿಕ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕಮಲ್ ಹಾಸನ್ ಹಾಗೂ ಆರ್ ಶಂಕರ್ ಜೋಡಿಯ ಇಂಡಿಯನ್ 2 (Indian 2) ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜುಲೈ 12ಕ್ಕೆ ಚಿತ್ರ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಇಂಡಿಯನ್ 2 ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.
ಇಂಡಿಯನ್ 2 ಸಿನಿಮಾದ ಸೌರಾ ಎಂಬ ಹಾಡು ಅನಾವರಣಗೊಂಡಿದೆ. ಕುದುರೆ ಏರಿ ಬರುವ ಸೇನಾಪತಿ ಸಾಹಸ ಕಥೆಯನ್ನು ವರ್ಣಿಸುವ ಈ ಹಾಡಿಗೆ ಸುದ್ದಲ ಅಶೋಕ್ ತೇಜ ಸಾಹಿತ್ಯ ಬರೆದಿದ್ದಾರೆ. ರಿತೇಶ್ ಜಿ ರಾವ್ ಮತ್ತು ಶೃತಿಕಾ ಸಮುದ್ರಾ ಸೌರಾ ಹಾಡಿಗೆ ಧ್ವನಿಯಾಗಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸೇನಾಪತಿಯಾಗಿ ಕಮಲ್ ಹಾಸನ್ ನಟಿಸಿದ್ದು,ಅನಿರುದ್ಧ್ ಹಾಡಿಗೆ ಟ್ಯೂನ್ ಹಾಕಿದ್ದಾರೆ.
ಇಂಡಿಯನ್ 1 ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರ ನಿಭಾಯಿಸಿದ್ದರು. ಇಂಡಿಯನ್ 2: 1996 ರ ಹಿಟ್ ಚಲನಚಿತ್ರ ಇಂಡಿಯನ್‌ನ ಮುಂದುವರಿದ ಭಾಗವಾಗಿದ್ದು, ಇದರಲ್ಲೂ ಕಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್ , ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.
ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ. ಈ ಚಲನಚಿತ್ರವನ್ನು ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ನಿರ್ಮಿಸಿದೆ.
ಜ್ಯೂನಿಯರ್ ಎನ್‌ಟಿಆರ್ (Junior NTR) ಅಭಿನಯದ ‘ದೇವರ’ (Devara) ಚಿತ್ರದ ಕೆಲಸಗಳು ಬಲು ಜೋರಾಗಿ ಸಾಗುತ್ತಿವೆ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈಗಾಗಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸಿದರೆ, ಸೈಫ್ ಅಲಿ ಖಾನ್ ವಿಲನ್ ಆಗಿದ್ದಾರೆ. ವಿಶೇಷ ಏನೆಂದರೆ, ಈ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಪಾರ್ಟ್ ಅಕ್ಟೋಬರ್ 10 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
ಇದೀಗ NTR ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ಹಾಡು ಫಿಯರ್ ಸಾಂಗ್ ಬಿಡುಗಡೆ ಆಗಿದೆ. ತೆಲುಗಿನಲ್ಲಿ ಸರಸ್ವತಿ ಪುತ್ರ ರಾಮಜೋಗಯ್ಯ ಶಾಸ್ತ್ರಿ, ತಮಿಳಿನಲ್ಲಿ ವಿಷ್ಣು ಎಡವನ್, ಹಿಂದಿಯಲ್ಲಿ ಮನೋಜ್ ಮುಂತಶಿರ್, ಕನ್ನಡದಲ್ಲಿ ವರದರಾಜ್ ಮತ್ತು ಮಲಯಾಳಂನಲ್ಲಿ ಮಂಕೊಂಬು ಗೋಪಾಲಕೃಷ್ಣನ್ ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ಅನಿರುದ್ಧ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಈ ಹಾಡು ಇತರ ಭಾಷೆಗಳಲ್ಲಿಯೂ ಅಷ್ಟೇ ಶಕ್ತಿಶಾಲಿ ಮತ್ತು ಅದ್ಭುತವಾಗಿದೆ. ಲಿರಿಕಲ್ ವೀಡಿಯೋದಲ್ಲಿ ಅನಿರುದ್ಧ್ ರವಿಚಂದರ್ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಹಾಡಿದ್ದರೆ, ಸಂತೋಷ್ ವೆಂಕಿ ಕನ್ನಡ ಮತ್ತು ಮಲಯಾಳಂನಲ್ಲಿ ಧ್ವನಿ ನೀಡಿದ್ದಾರೆ. ಈ ಮೂಲಕ ದೇವರ ಚಿತ್ರದ ಪ್ರಚಾರಕ್ಕೆ ಈ ಹಾಡಿನ ಮೂಲಕ ಆರಂಭ ಸಿಕ್ಕಿದೆ.
ದೇವರ ಚಿತ್ರದಲ್ಲಿ ಶೀರ್ಷಿಕೆ ಪಾತ್ರದಲ್ಲಿ ಎನ್‌ಟಿಆರ್ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್‌ನ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ನಂದಮೂರಿ ಕಲ್ಯಾಣ್ ರಾಮ್ ಈ ಬಹು ನಿರೀಕ್ಷಿತ ಚಿತ್ರವನ್ನು ಪ್ರಸೆಂಟ್ ಮಾಡುತ್ತಿದ್ದಾರೆ. ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ಕೆ ಈ ಚಿತ್ರದ ನಿರ್ಮಾಪಕರು. ಶ್ರೀಕರ್ ಪ್ರಸಾದ್ ಸಂಕಲನ, ಆರ್.ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ.
ಇದು ನಮ್ ಶಾಲೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರೆವೇರಿತು. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮೊದಲ ಹಾಡನ್ನು ಖ್ಯಾತ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ (Ravi Channannavar) ಬಿಡುಗಡೆ ಮಾಡಿದರು. ಎರಡನೇ ಗೀತೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಅನಾವರಣಗೊಳಿಸಿದರು. ಇದೇ ಸಮಯದಲ್ಲಿ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು. ಸಾಕಷ್ಟು ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
ಇದು ಖಾಸಗಿ ಹಾಗೂ ಸರ್ಕಾರಿ ಶಾಲೆಯ ಸುತ್ತಲಿನ ಕಥೆ ಎಂದು ಮಾತನಾಡಿದ ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್, ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತು ಐ ಪಿ ಎಸ್ ಅಧಿಕಾರಿ ಆಗಿದ್ದೇನೆ. ಸಿನಿಮಾ ಮೂಲಕ ಒಳ್ಳೆಯ ವಿಷಯಗಳನ್ನು ಹೇಳಿದಾಗ ಜನರಿಗೆ ಬೇಗ ತಲಪುತ್ತದೆ. ನನಗೆ ರಾಜಕುಮಾರ್ ಎಂದರೆ ಪಂಚಪ್ರಾಣ. ಸುದೀಪ್ ಅಭಿನಯದ ಚಿತ್ರಗಳ ಗೆದ್ದೆ ಗೆಲುವೆ ಒಂದು ದಿನ, ಅರಳುವ ಹೂವುಗಳೆ ಹಾಗೂ ಶಿವರಾಜಕುಮಾರ್ ಅವರ ಓಂ ಚಿತ್ರದ ಹೇ ದಿನಕರ ಹಾಡುಗಳು ನನಗೆ ಸ್ಪೂರ್ತಿ.. ಕಾಲೇಜು ದಿನಗಳಲ್ಲಿ ಈ ಹಾಡುಗಳನ್ನು ಕೇಳಿ ಬೆಳೆದವನು ನಾನು ಎಂದು ತಿಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಸಿನಿಮಾ, ರಾಜಕೀಯ ಸೇರಿದಂತೆ ಅನೇಕ ವಿಭಾಗಗಳಲ್ಲಿ ಪತ್ರಕರ್ತನಾಗಿ ಕಾರ್ಯ ನಿರ್ವಹಿಸರುವ ನಾನು, “ಬಣ್ಣದಕೊಡೆ” ಚಿತ್ರದ ಮೂಲಕ ನಿರ್ದೇಶಕನಾದೆ, “ಇದು ನಮ್ ಶಾಲೆ” ನನ್ನ ನಿರ್ದೇಶನದ ಮೂರನೇ ಚಿತ್ರ. ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕುರಿತಾದ ಚಿತ್ರ. ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ತಿಳಿಸಿ ಕೊಡುವ ಚಿತ್ರ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಸೆನ್ಸರ್ ಕೂಡಾ ಆಗಿದ್ದು, ಬಿಡುಗಡೆಯ ಹೊಸ್ತಿಲಿನಲ್ಲಿದೆ. ಅರಸೀಕೆರೆ, ಜೇನುಕಲ್, ಗೀಜಿಹಳ್ಳಿ ಹಾಗೂ ಬೆಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ರವಿ ಆಚಾರ್ ನಿರ್ಮಾಣ ಮಾಡಿದ್ದು, ಅರಸೀಕೆರೆ ಉಮೇಶ್ ಅವರ ಸಹಕಾರ ಚಿತ್ರಕ್ಕಿದೆ. ನಾಗರಾಜ್ ಅದವಾನಿ ಛಾಯಾಗ್ರಾಹಣ, ಹಿತನ್ ಹಾಸನ್ ಸಂಗೀತ ಈ ಸಿನಿಮಾಕ್ಕಿದ್ದು, ಪುಣ್ಯ ಹಾಗೂ ಪೂಜ್ಯ ಅನ್ನುವ ಇಬ್ಬರು ಹೆಣ್ಣು ಮಕ್ಕಳು ಪ್ರಧಾನ ಭೂಮಿಕೆಯಲ್ಲಿ ಇದ್ದಾರೆ. ಶಂಕರ್ ಭಟ್, ಪೂಜಾ ಸುಮನ್, ಈಶ್ವರ್ ದಲ, ಮಲ್ಲಿಕಾರ್ಜುನ್ ತುಮಕೂರು, ಶಿವಲಿಂಗೇಗೌಡ ಮಂಡ್ಯ, ಮುರಳಿಕೃಷ್ಣ, ಬಸವರಾಜ್, ವಾಣಿ ಗೌಡ, ರಾಜು ನಾಯಕ್, ಮಾಸ್ಟರ್ ರಾಮು, ಗಂಗಾ ರವಿ, ಕಲಾ ಉಮೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾದಲ್ಲಿ ಅರಸೀಕೆರೆ ಜನಪ್ರಿಯ ಶಾಸಕರಾದ ಶಿವಲಿಂಗೇಗೌಡರು ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ನಿರ್ದೇಶಕ ಕೃಷ್ಣ ಬೆಳ್ತಂಗಡಿ ತಿಳಿಸಿದರು. ನಿರ್ಮಾಪಕರಾದ ರವಿ ಆಚಾರ್, ಕಾರ್ಯಕಾರಿ ನಿರ್ಮಾಪಕರಾದ ಅರಸೀಕೆರೆ ಉಮೇಶ್ ಹಾಗೂ ಸಂಗೀತ ನಿರ್ದೇಶಕ ಹಿತನ್ ಹಾಸನ್ “ಇದು ನಮ್ ಶಾಲೆ” ಚಿತ್ರದ ಕುರಿತು ಮಾತನಾಡಿದರು.
ಡಾಲಿ ಧನಂಜಯ್ (Dolly Dhananjay) ಅಭಿನಯದ ಕೋಟಿ (Kotee) ಸಿನಿಮಾದ ಮೊದಲ ಹಾಡು ‘ಮಾತು ಸೋತು’ ಮೇ 13, ಸೋಮವಾರ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ (Yogaraj Bhatt) ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ ಮೇ 13ರಂದು ಬಿಡುಗಡೆಯಾಗಲಿದೆ.
ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್ ಇಂದಿರಾ, ತಾರಾ, ಸರ್ದಾರ್ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.
ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಹನ್ನೆರಡನೇ ಶತಮಾನದಲ್ಲಿ ಶರಣರು, ಅನುಭವ ಮಂಟಪ ಮತ್ತು ಬಸವಣ್ಣ (Basavanna) ಎನ್ನುವುದು ಎಷ್ಟು ಆಕರ್ಷಕವಾಗಿತ್ತು. ಇಂತಹ ಅಂಶಗಳನ್ನು ಸಂಶೋಧನೆ ನಡೆಸಿ ’ಶರಣರ ಶಕ್ತಿ’ (Sharanara Shakti) ಎನ್ನುವ ಚಿತ್ರವೊಂದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ’ತಡಿವ್ಯರ ನೋಡು’ ಎಂಬ ಅಡಿಬರಹವಿದೆ. ಪ್ರಚಾರದ ಮೊದಲ ಹಂತವಾಗಿ ’ಬಸವ ಜಯಂತಿ’ ಮುನ್ನ ದಿನದಂದು ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಎಲ್ಲಾ ಕಲಾವಿದರುಗಳು ಪಾತ್ರಧಾರಿಗಳಾಗಿ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಶ್ರೀಷ ಫಿಲಂಸ್ ಅಡಿಯಲ್ಲಿ ಆರಾಧನಾ ಕುಲಕರ್ಣಿ ಬಂಡವಾಳ ಹೂಡುವ ಜತೆಗೆ ಅಕ್ಕ ನಾಗಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡಾ.ರಾಜ್‌ಕುಮಾರ್ ಸಂಸ್ಥೆಯ ವಜ್ರೇಶ್ವರಿ ಕಂಬೈನ್ಸ್‌ದಲ್ಲಿ ಕೆಲಸ ಮಾಡಿರುವ ದಿಲೀಪ್ ಶರ್ಮ ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ, ನಿರ್ದೇಶನ ಅಲ್ಲದೆ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಅನುಭವ ಮಂಟಪದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ ಬಸವಣ್ಣ ಇಂದಿಗೂ ಯಾಕೆ ಪ್ರಸ್ತುತ ಎಂಬುದನ್ನು ಇದರಲ್ಲಿ ನಿರೂಪಣೆ ಮಾಡಿದ್ದಾರೆಂಬುದು ತಿಳಿದು ಬಂದಿದೆ. ಅವರು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕ್ರತಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಬಸವಣ್ಣನವರು ಸಾರ್ವಕಾಲಿಕವಾದವರು. ಸರ್ಕಾರವು ನೂತನ ಅನುಭವ ಮಂಟಪ್ಪಕ್ಕೆ ಹಣ ಮಂಜೂರು ಮಾಡಿದೆ. ಕೆಲಸಗಳು ಸದ್ಯದಲ್ಲೆ ಶುರುವಾಗಲಿದೆ. ಚಿತ್ರವು ಎಲ್ಲರಿಗೂ ತಲುಪಲಿ ಎಂದರು.
ಹನ್ನೆರಡನೇ ಶತಮಾನದಲ್ಲಿ ರಾಜ್ಯ,ದೇಶ, ವಿದೇಶಗಳಿಂದ ಬಸವಣ್ಣನವರನ್ನು ಹುಡುಕಿಕೊಂಡು ಬಂದಿದ್ದರಿಂದಲೇ ವಿಶ್ವಖ್ಯಾತಿಗೊಂಡರು. ಅವರು ಉತ್ತರ ಕರ್ನಾಟಕ ಭಾಗದವರು ಎಂಬುದು ಹೆಮ್ಮೆಯ ವಿಷಯವಾಗಿದೆ. ಯಾವ ಕಾರಣಕ್ಕೆ ಎಲ್ಲಾ ಶರಣರು ಅನುಭವ ಮಂಟಪಕ್ಕೆ ಬಂದರು. ಇಲ್ಲಿ ಮಹಾನ್ ಪುರುಷನ ಅವತಾರ ಹೇಗಿತ್ತು. ಇಲ್ಲಿಗೆ ಬಂದವರು ಮೂರು ದಿವಸದ ನಂತರ ಕಾಯಕ ಹುಡುಕುವಂತೆ ಮಾಡುತ್ತದೆ. ಬಸವಣ್ಣನವರ ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ರಕ್ಷಣೆ ಮಾಡಲು ಹೇಗೆ ಹೋರಾಡಿದರು. ಎಲ್ಲೆಲ್ಲಿ ವಚನಗಳನ್ನು ಬಚ್ಚಿಟ್ಟರು. ಅದನ್ನು ಜನರಿಗೆ ಯಾವ ರೀತಿ ಹರಡಿದರು. ವೇಶ್ಯೆ ಸಂಕವ್ವ ಮಹಾಶರಣೆಯಾಗಿದ್ದು. ತಳವಾರು ಕಾಮಿದೇವ ಶರಣರು ಯಾಕೆ ಕಲ್ಯಾಣಕ್ಕೆ ಬಂದರು. ಚನ್ನಬಸವಣ್ಣನ ಸಾರಥ್ಯದಲ್ಲಿ ಉಳಿವೆ ಮಂಟಪ. ಶರಣರನ್ನು ತಡೆ ಹಿಡಿದರೆ ಏನಾಗುತ್ತದೆ. ಇಂತಹ ಇನ್ನು ಹಲವಾರು ತಿಳಿಯದ ಮಾಹಿತಿಗಳು ಚಿತ್ರದಲ್ಲಿ ನೋಡಬಹುದಾಗಿದೆ ಅಂತ ನಿರ್ದೇಶಕರು ಹೇಳಿಕೊಂಡರು.
ಬಸವಣ್ಣನಾಗಿ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತ ಮಡ್ಲೂರು, ಶೀಲವಂತನಾಗಿ ವಿಶ್ವರಾಜ್ ರಾಜ್‌ಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ, ಉಳಿದಂತೆ ರಮೇಶ್‌ಪಂಡಿತ್, ಸಾಚಿಜೈನ್, ವಿನೋದ್ ದಂಡಿನ, ರಾಮಕೃಷ್ಣ ದೊಡ್ಡಮನಿ, ಅಬ್ದುಲ್‌ಲತೀಫ್ ಹಾಗೂ ಆ ಭಾಗದ 140 ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಸಂಗೀತ ವಿನುಮನಸು, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ಮಹಾಂತೇಶ್.ಆರ್ ನಿರ್ವಹಿಸಿದ್ದಾರೆ. ಹುಬ್ಬಳ್ಳಿ ಸುತ್ತಮುತ್ತ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಹಾಡುಗಳನ್ನು Hoptil Musicದಲ್ಲಿ ಆಲಿಸಬಹುದಾಗಿದೆ. ಋಷಿಕುಮಾರ ಸ್ವಾಮೀಜಿ, ’ಹಲಗಿ’ ವಾದ್ಯ ಬಾರಿಸುವುದರಲ್ಲಿ ಹೆಸರು ಮಾಡಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿರುವ ಮುನಿವೆಂಕಟಪ್ಪ ಸುಂದರ ಸಮಯದಲ್ಲಿ ಉಪಸ್ತಿತರಿದ್ದರು.