Tag: Sonbhadra

  • ಯುಪಿಯಲ್ಲಿ 12 ಲಕ್ಷ ಕೋಟಿ ಮೌಲ್ಯದ 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆ

    ಯುಪಿಯಲ್ಲಿ 12 ಲಕ್ಷ ಕೋಟಿ ಮೌಲ್ಯದ 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಬರೋಬ್ಬರಿ 12 ಲಕ್ಷ ಕೋಟಿ ರೂಪಾಯಿ ಮೌಲ್ಯದ, 3 ಸಾವಿರ ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದು ಭಾರತದ ಈಗಿನ ಚಿನ್ನದ ನಿಕ್ಷೇಪಗಳ ಮೌಲ್ಯಕ್ಕಿಂತ 5 ಪಟ್ಟು ಹೆಚ್ಚಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಸೋನ್‍ಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ 3,000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ಈ ಚಿನ್ನದ ನಿಕ್ಷೇಪವನ್ನು ಹರಾಜು ಹಾಕಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮದಲ್ಲಿ ಸುಮಾರು 3,000 ಟನ್ ಚಿನ್ನದ ನಿಕ್ಷೇಪವಿದೆ ಎಂದು ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ ಮತ್ತು ಉತ್ತರ ಪ್ರದೇಶ ಭೂ ವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯ ಇತ್ತೀಚಿಗಷ್ಟೆ ವರದಿ ಮಾಡಿತ್ತು. ಇದನ್ನೂ ಓದಿ:  ಮಂಡ್ಯದಲ್ಲಿ ಚಿನ್ನದ ನಿಕ್ಷೇಪ ಪತ್ತೆ!

    ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ನಿಕ್ಷೇಪವಿದ್ದು, ಈಗ ಸೋನ್‍ಭದ್ರದಲ್ಲಿ ಪತ್ತೆಯಾಗಿರುವ ಚಿನ್ನದ ನಿಕ್ಷೇಪ ಭಾರತದಲ್ಲಿ ಈಗಿರುವ ಚಿನ್ನದ ಗಣಿಯ ಮೌಲ್ಯಕ್ಕಿಂತ ಐದು ಪಟ್ಟು ಹೆಚ್ಚಿದೆ. ಅಲ್ಲದೆ ಇದರ ಮೌಲ್ಯ ಸುಮಾರು 12 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಇದೆ ಎನ್ನಲಾಗಿದೆ. ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾಗಿರುವ ಲೀಥಿಯಂ ನಿಕ್ಷೇಪ ಮಂಡ್ಯದಲ್ಲಿ ಪತ್ತೆ

    ಉತ್ತರ ಪ್ರದೇಶದ ಭೂ ವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆ ಇತ್ತೀಚೆಗಷ್ಟೆ ಈ ಬಗ್ಗೆ ಅಧಿಕೃತ ಪತ್ರ ಹೊರಡಿಸಿತ್ತು. ಸೋನ್ ಪಹಡಿಯಲ್ಲಿ 2,943.26 ಟನ್ ಚಿನ್ನದ ನಿಕ್ಷೇಪ ಹಾಗೂ ಹಾರ್ಡಿಯಲ್ಲಿ 646.15 ಕೆಜಿ ಚಿನ್ನದ ನಿಕ್ಷೇಪ ಪತ್ತೆ ಆಗಿವೆ ಎಂದು ವರದಿ ನೀಡಿತ್ತು.

    ಚಿನ್ನದ ನಿಕ್ಷೇಪ ಹರಾಜಿಗೆ ಸರ್ಕಾರ ಸಜ್ಜು:
    ಇ-ಟೆಂಡರಿಂಗ್ ಪ್ರಕ್ರಿಯೆ ಮೂಲಕ ಪತ್ತೆಯಾಗಿರುವ ಚಿನ್ನಸ ನಿಕ್ಷೇಪವನ್ನು ಹರಾಜು ಹಾಕಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಚಿನ್ನದ ನಿಕ್ಷೇಪಗಳ ಬ್ಲಾಕ್‍ಗಳನ್ನು ಹರಾಜು ಮಾಡಲು ಸರ್ಕಾರ ಏಳು ಸದಸ್ಯರ ತಂಡವನ್ನು ರಚಿಸಿದ್ದು, ಈ ತಂಡ ಇಡೀ ಪ್ರದೇಶವನ್ನು ಸಮೀಕ್ಷೆ ನಡೆಸಿ ಅದರ ವರದಿಯನ್ನು ತಯಾರಿಸಿ, ವರದಿಯನ್ನು ಲಕ್ನೋದ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಲಿವೆ.

    ಸೋನ್‍ಭದ್ರಾದಲ್ಲಿ ಚಿನ್ನದ ನಿಕ್ಷೇಪಗಳನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು ಬ್ರಿಟಿಷರು ಈ ಮೊದಲೇ ಆರಂಭಿಸಿದ್ದರು ಎನ್ನಲಾಗಿದೆ. ಆದರೆ 1992-93ರಲ್ಲಿ ಕೇಂದ್ರ ಭೂವಿಜ್ಞಾನ ತಂಡ ಚಿನ್ನದ ನಿಕ್ಷೇಪ ಪತ್ತೆ ಮಾಡುವ ಸಂಶೋಧನೆ ಆರಂಭಿಸಿತ್ತು.

    ಈ ಬಗ್ಗೆ ಭಾರತೀಯ ಭೂ ಸರ್ವೇಕ್ಷಣೆ ಇಲಾಖೆಯ ನಿವೃತ್ತ ಸಿಬ್ಬಂದಿ ಪ್ರಥ್ವಿ ಮಿಶ್ರಾ ಪ್ರತಿಕ್ರಿಯಿಸಿ, ಚಿನ್ನದ ನಿಕ್ಷೇಪ ಪತ್ತೆಯಾದ ಸ್ಥಳವನ್ನು ಇರಡು ಭಾಗವಾಗಿ ಬೇರ್ಪಡಿಸಲಾಗಿದೆ. ಅಲ್ಲದೇ ಈ ಹಿಂದೆ ಇದೇ ಪ್ರದೇಶಲ್ಲಿ 1 ಕಿ.ಮಿ ಉದ್ದದ ಚಿನ್ನಡ ಕಲ್ಲು ಪತ್ತೆಯಾಗಿತ್ತು, ಅದು 15 ಮೀಟರ್ ಅಗಲವಿತ್ತು ಮತ್ತು 18 ಮೀಟರ್ ಎತ್ತರವಿತ್ತು ಎಂದು ತಿಳಿಸಿದರು.

  • ಸಂತ್ರಸ್ತರನ್ನು ತಬ್ಬಿಕೊಂಡು ಸಾಂತ್ವನ ಹೇಳಿದ ಪ್ರಿಯಾಂಕ ಗಾಂಧಿ: ವಿಡಿಯೋ

    ಸಂತ್ರಸ್ತರನ್ನು ತಬ್ಬಿಕೊಂಡು ಸಾಂತ್ವನ ಹೇಳಿದ ಪ್ರಿಯಾಂಕ ಗಾಂಧಿ: ವಿಡಿಯೋ

    – ಕಾಂಗ್ರೆಸ್‍ನಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

    ಲಕ್ನೋ: ಜಮೀನು ವಿವಾದದ ಗಲಾಟೆಯಲ್ಲಿ ಸಾವನ್ನಪ್ಪಿದ 10 ಜನರ ಕುಟುಂಬದ ಸದಸ್ಯರಿಗೆ ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ ಸಾಂತ್ವನ ಹೇಳಿದ್ದಾರೆ.

    ಉತ್ತರ ಪ್ರದೇಶದ ಸೋನ್‍ಭದ್ರಾ ಎಂಬಲ್ಲಿ ಜಮೀನು ವಿದಾದ ಗಲಾಟೆಯಲ್ಲಿ ಗ್ರಾಮದ ಮುಖ್ಯಸ್ಥನಾಗಿದ್ದ ಯಾಗ್ಯ ದತ್ ಬೆಂಬಲಿಗರು ಆದಿವಾಸಿ ಕುಟುಂಬಗಳ ಮೇಲೆ ಗುಂಡು ಹಾರಿಸಿದ್ದರು. ಗುಂಡೇಟಿಗೆ 10 ಜನರು ಮೃತಪಟ್ಟಿದ್ದು, 19 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಪ್ರದೇಶದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಸಂತ್ರಸ್ತರನ್ನು ಭೇಟಿಯಾಗಲು ಶುಕ್ರವಾರ ಬಂದಿದ್ದ ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದರು.

    ಮೃತ ಕುಟುಂಬದ 15 ಜನ ಸದಸ್ಯರು ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಲು ಬಂದಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದರು. ಹೀಗಾಗಿ ಪ್ರಿಯಾಂಕ ಗಾಂಧಿ ಅವರು ಸಂತ್ರಸ್ತರನ್ನು ಭೇಟಿಯಾಗಬೇಕು ಎಂದು ಪಟ್ಟು ಹಿಡಿದು, ಶನಿವಾರವೂ ಧರಣಿ ನಡೆಸಿದರು. ಇದಕ್ಕೆ ಮಣಿದ ಪೊಲೀಸರು ಭೇಟಿಗೆ ಅವಕಾಶ ಮಾಡಿಕೊಟ್ಟರು.

    ಸಂತ್ರಸ್ತರನ್ನು ಭೇಟಿಯಾಗದೇ ಹಿಂತಿರುಗುವ ಮಾತೇ ಇಲ್ಲ. ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಸ್ವಲ್ಪ ಸಮಯದ ನಂತರ ಧರಣಿ ಸ್ಥಳಕ್ಕೆ ಸಂತ್ರಸ್ತ ಪುರುಷರು ಹಾಗೂ ಮಹಿಳೆಯರು ಆಗಮಿಸಿದರು. ಪಕ್ಕದಲ್ಲಿ ಕುಳಿತು ಕಣ್ಣೀರು ಹಾಕುತ್ತಿದ್ದ ಮಹಿಳೆಯರನ್ನು ಪ್ರಿಯಾಂಕ ಗಾಂಧಿ ಅವರು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.

    ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನಿನ್ನೂ ಬಂಧನದಲ್ಲಿ ಇದ್ದೇನೆಯೇ? ಆಡಳಿತ ಏನು ಹೇಳುತ್ತದೆ ಎಂದು ರಾಜ್ಯ ಸರ್ಕಾರವನ್ನು ಕುಟುಕಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

    ಏನಿದು ಪ್ರಕರಣ?:
    ಯಾಗ್ಯ ದತ್ ಉಭಾ ಗ್ರಾಮದ ಸಮೀಪದ ಘೋರ್‍ವಾಲ್‍ನಲ್ಲಿ ಎರಡು ವರ್ಷಗಳ ಹಿಂದೆ 36 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದ. ಆದರೆ ಯಾಗ್ಯ ದತ್ ತನ್ನ ಸಹವರ್ತಿಗಳ ಜೊತೆಗೆ ಬುಧವಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋಗಿದ್ದ. ಇದಕ್ಕೆ ಗ್ರಾಮಸ್ಥರು ಭಾರೀ ವಿರೋಧಿಸಿದ್ದರು. ಇದರಿಂದಾಗಿ ಗಲಾಟೆ ಆರಂಭವಾಗುತ್ತಿದ್ದಂತೆ ಯಾಗ್ಯ ದತ್ ಕಡೆಯ ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ತಗುಲಿ 10 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 19 ಜನರ ಸ್ಥಿತಿ ಗಂಭೀರವಾಗಿದೆ.

    ಈ ಕೃತ್ಯದ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಘಟನೆಯನ್ನು ಖಂಡಿಸಿದ್ದು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ 19 ಜನರಿಗೆ ಅಗತ್ಯ ವೈದ್ಯಕೀಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ಹೊರಡಿಸಿದ್ದಾರೆ.

  • ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ- ಹಳಿ ತಪ್ಪಿದ ಶಕ್ತಿಪುಂಜ್ ಎಕ್ಸ್ ಪ್ರೆಸ್

    ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ದುರಂತ- ಹಳಿ ತಪ್ಪಿದ ಶಕ್ತಿಪುಂಜ್ ಎಕ್ಸ್ ಪ್ರೆಸ್

     

    ಲಕ್ನೋ: ಉತ್ತರಪ್ರದೇಶದಲ್ಲಿ ಮತ್ತೊಂದು ರೈಲು ಸುರಂತ ಸಂಭವಿಸಿದೆ. ಹೌರಾ-ಜಬಲ್‍ಪುರ್-ಶಕ್ತಿಪುಂಜ್ ಎಕ್ಸ್ ಪ್ರೆಸ್‍ನ 7 ಬೋಗಿಗಳು ಹಳಿ ತಪ್ಪಿವೆ.

    ಇಂದು ಬೆಳಿಗ್ಗೆ 6.30ರ ಸುಮಾರಿಗೆ ಸೋನ್‍ಭದ್ರಾದ ಓಬ್ರಾ ಹಾಗೂ ಪಾಫ್ರಾಕುಂದ್ ನಿಲ್ದಾಣಗಳ ಮಧ್ಯೆ ಈ ಘಟನೆ ನಡೆದಿದೆ. ಪ್ರಯಾಣಿಕರಿಗೆ ಗಾಯಗಳಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ಭಾರತೀಯ ರೈಲ್ವೆಯ ವಕ್ತಾರರು ತಿಳಿಸಿದ್ದಾರೆ.

    ಕಳೆದ 20 ದಿನಗಳಲ್ಲಿ ನಡೆದ ನಾಲ್ಕನೇ ರೈಲು ದುರಂತ ಇದಾಗಿದೆ. ಘಟನೆಯಿಂದಾಗ ರೈಲು ಸಂಚಾರ ವ್ಯತ್ಯಯವಾಗಿದೆ.

    ಇಂದು ಬೆಳಿಗ್ಗೆ 6.25ಕ್ಕೆ ಈ ಘಟನೆ ನಡೆದಿದೆ. ಘಟನಾ ಸ್ಥಳವನ್ನ ಈಗಾಗಲೇ ತೆರವುಗೊಳಿಸಿದ್ದೇವೆ ಎಂದು ರೈಲ್ವೆ ಸಚಿವಾಲಯದ ವಕ್ತಾರರಾದ ಅನಿಲ್ ಸಕ್ಸೇನಾ ಹೇಳಿದ್ದಾರೆ.

    ಹಳಿ ತಿಪ್ಪಿದ ಬೋಗಿಗಳಲ್ಲಿದ್ದ ಪ್ರಯಾಣಿಕರನ್ನು 7.28ರ ವೇಳೆಗೆ ಉಳಿದ ಬೋಗಿಗಳಿಗೆ ಶಿಫ್ಟ್ ಮಡಲಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

    ರೈಲು ಗಂಟೆಗೆ 40 ಕಿ.ಮೀ ವೇಗದಲ್ಲಿ ಹೋಗುತ್ತಿದ್ದರಿಂದ ಯಾವುದೇ ಹಾನಿಯಾಗಿಲ್ಲ ಎಂಧು ಅಧಿಕಾರಿಗಳು ಹೇಳಿದ್ದಾರೆ.

    ಆಗಸ್ಟ್ 29ರಂದು ನಾಗ್ಪುರ ಮುಂಬೈ ದುರಂತೋ ಎಕ್ಸ್ ಪ್ರೆಸ್‍ನ 9 ಬೋಗಿಗಳು ಮಹಾರಾಷ್ಟ್ರದ ಕಲ್ಯಾಣ್‍ನ ತಿತ್ವಾಲಾ ನಿಲ್ದಾಣದ ಬಳಿ ಹಳಿ ತಪ್ಪಿದ್ದವು. ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರಲಿಲ್ಲ.

    ಆಗಸ್ಟ್ 23ರಂದು ಕೈಫಿಯಾತ್ ಎಕ್ಸ್ ಪ್ರೆಸ್ ಹಳಿ ತಪ್ಪಿತ್ತು. ಈ ಘಟನೆಯಲ್ಲಿ 80 ಜನರಿಗೆ ಗಾಯಗಳಾಗಿತ್ತು. ಆಗಸ್ಟ್ 19ರಂದು ಉತ್ಕಲ್ ಎಕ್ಸ್ ಪ್ರೆಸ್ ನ 14 ಬೋಗಿಗಳು ಹಳಿ ತಪ್ಪಿ 24 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ 156 ಮಂದಿ ಗಾಯಗೊಂಡಿದ್ದರು. ಈ ಎರಡೂ ಘಟನೆಗಳು ಉತ್ತರಪ್ರದೇಶದಲ್ಲಿ ನಡೆದಿತ್ತು.

  • ಹೋಮ್‍ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿನಿಯರನ್ನ ಅರೆನಗ್ನವಾಗಿ ಪರೇಡ್ ಮಾಡಿಸಿದ ಶಿಕ್ಷಕಿ

    ಲಕ್ನೋ: ಹೋಮ್‍ವರ್ಕ್ ಪೂರ್ತಿಯಾಗಿ ಮಾಡದ ಕಾರಣ ಶಿಕ್ಷಕಿಯೊಬ್ಬಳು ವಿದ್ಯಾರ್ಥಿನಿಯರನ್ನ ಅರೆನಗ್ನಾವಸ್ಥೆಯಲ್ಲಿ ಪರೇಡ್ ಮಾಡಿಸಿರೋ ಘಟನೆ ಉತ್ತರಪ್ರದೇಶದ ಸೋನ್‍ಭದ್ರಾದಲ್ಲಿ ನಡೆದಿದೆ.

    ಇಲ್ಲಿನ ಬಾಲಕಿಯರ ಜೂನಿಯರ್ ಹೈ ಸ್ಕೂಲ್‍ನಲ್ಲಿ ಶಿಕ್ಷಕಿ ಮೀನಾ ಸಿಂಗ್, ಶನಿವಾರದಂದು ಹೋಮ್ ವರ್ಕ್ ಮಾಡದ ವಿದ್ಯಾರ್ಥಿನಿಯರ ಬಟ್ಟೆ ಕಳಚಿ ಅರೆ ನಗ್ನವಾಗಿ ಶಾಲೆಯ ಕಾಂಪೌಂಡ್‍ನಲ್ಲಿ 2 ಗಂಟೆಗಳ ಕಾಲ ಪರೇಡ್ ಮಾಡಿಸಿದ್ದಾಳೆ. ಅಲ್ಲದೆ ಇದನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದು, ಮುಂದೆ ಹೋಮ್‍ವರ್ಕ್ ಮಾಡದಿದ್ದರೆ ವೀಡಿಯೋವನ್ನ ಲೀಕ್ ಮಾಡೋದಾಗಿ ಹೆದರಿಸಿದ್ದಾಳೆ.

    ಬಾಲಕಿಯರ ಪೋಷಕರಿಗೆ ಈ ವಿಷಯ ಗೊತ್ತಾದಾಗ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಈ ವಿಷಯವನ್ನು ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಘಟನೆ ಬಹಿರಂಗವಾದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್, ಶಿಕ್ಷಕಿಯನ್ನು ಕೂಡಲೇ ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.