Tag: Somwarpet

  • ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಕಾಡಾನೆಗಳ ಹಿಂಡು

    ಗ್ರಾಮಸ್ಥರಲ್ಲಿ ಭಯ ಮೂಡಿಸಿದ ಕಾಡಾನೆಗಳ ಹಿಂಡು

    ಮಡಿಕೇರಿ: ಕಾಡಾನೆಯೊಂದು ಮೊನ್ನೆಯಷ್ಟೇ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿತ್ತು. ಈ ಬೆನ್ನಲ್ಲೇ ಕಾಡಾನೆಗಳ ಹಿಂಡೊಂದು ಸೋಮವಾರಪೇಟೆ ತಾಲೂಕಿನಲ್ಲಿ ಇಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತೂರು ಗ್ರಾಮದ ಕಾಫಿ ತೋಟಗಳಿಗೆ ಕಾಡಾನೆಗಳ ಹಿಂಡೊಂದು ನುಗ್ಗಿ ದಾಂಧಲೆ ನಡೆಸಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮಸ್ಥರಿಗೆ ಆನೆಗಳು ಕಾಣಿಸಿದ್ದವು. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿತ್ತು. ಅದೃಷ್ಟವಶಾತ್ ಗ್ರಾಮಕ್ಕೆ ನುಗ್ಗಿ ಯಾವುದೇ ಹಾನಿ ಉಂಟು ಮಾಡಿಲ್ಲ.

    ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಇಂದು ಗ್ರಾಮಕ್ಕೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಾಯದೊಂದಿಗೆ ಆನೆಗಳನ್ನು ಕಾಡಿಗೆ ಅಟ್ಟಿದರು.

    ವಿರಾಜಪೇಟೆ ತಾಲೂಕಿನ ಕುರ್ಚಿ ಗ್ರಾಮದ ತೋಟದ ಬಳಿ ನಡೆದುಕೊಂಡು ಬರುತ್ತಿದ್ದ ಕೂಲಿ ಕಾರ್ಮಿಕ ಮಾರಾ ಎಂಬವರ ಮೇಲೆ ಆನೆಯೊಂದು ಏಪ್ರಿಲ್ 17ರಂದು ದಾಳಿ ಮಾಡಿತ್ತು. ಆನೆ ದಾಳಿಯ ರಭಸಕ್ಕೆ ಎಡಗಾಲು ಸೀಳಿ ಹೋಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • ತಮಿಳುನಾಡು ಪೊಲೀಸರಿಂದ 20 ಕೋಟಿ ರೂ. ಆಮಿಷ: ಶಾಸಕ ಬಾಲಾಜಿ

    ತಮಿಳುನಾಡು ಪೊಲೀಸರಿಂದ 20 ಕೋಟಿ ರೂ. ಆಮಿಷ: ಶಾಸಕ ಬಾಲಾಜಿ

    ಮಡಿಕೇರಿ: ತಮಿಳುನಾಡು ಪೊಲೀಸರು ಪಳನಿಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಹೇಳಿದ್ದು ಮಾತ್ರವಲ್ಲದೇ 20 ಕೋಟಿ ರೂ. ಹಣವನ್ನು ನೀಡುವ ಆಮಿಷ ಒಡ್ಡಿದ್ದಾರೆ ಎಂದು ಶಾಸಕ ಬಾಲಾಜಿ ಹೇಳಿದ್ದಾರೆ.

    ಒಂದು ವಾರದ ಬಳಿಕ ಸೋಮವಾರಪೇಟೆಯಲ್ಲಿರುವ ಪ್ಯಾಂಡಿಟನ್ ರೆಸಾರ್ಟ್ ನಿಂದ ಹೊರಬಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ ಕರೂರು ಅರವಕುರುಚ್ಚಿ ಶಾಸಕ ಬಾಲಾಜಿ ಸೆಂದಿಲ್, ಪಳನಿಸ್ವಾಮಿ ಅವರನ್ನು ನಾವೆಲ್ಲರೂ ಸೇರಿ ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಈಗ ಪನ್ನೀರ್ ಸೆಲ್ವಂ ಜೊತೆ ಸೇರಿ ಟಿಟಿಡಿ ದಿನಕರನ್ ಹಾಗೂ ಶಶಿಕಲಾ ಅವರಿಗೆ ದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     

    ನಾವು 18 ಜನ ಶಾಸಕರು ಬದ್ಧರಾಗಿದ್ದೇವೆ. ಅಲ್ಲದೇ ಮಂಗಳವಾರ ಏಕಾಏಕಿ ದಿಢೀರ್ ಅಗಿ ರೆಸಾರ್ಟ್ ಗೆ ಭೇಟಿ ನೀಡಿದ ತಮಿಳುನಾಡು ಪೊಲೀಸ್ ಅಧಿಕಾರಿಗಳು ಸರ್ಕಾರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಡಿವೈಎಸ್‍ಪಿ ಮಟ್ಟದ ಅಧಿಕಾರಿಗಳು ಮೊಬೈಲ್ ಫೋನ್ ನೀಡಿ ಮಾತನಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ 20 ಕೋಟಿ ರೂ. ಹಣ ಕೊಡಿಸುವ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದರು.

    ಪೊಲೀಸ್ ಅಧಿಕಾರಿಗಳು ಹೀಗೆ ಮಾಡುವುದು ಎಷ್ಟು ಸರಿ? ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಜೊತೆ ನೇರವಾಗಿ ಕರೆ ಮಾಡಿ ಮಾತನಾಡುವಂತೆ ಹೇಳುತ್ತಿದ್ದಾರೆ. 30ಕ್ಕೂ ಅಧಿಕ ತಮಿಳುನಾಡಿನ ಪೊಲೀಸ್ ಅಧಿಕಾರಿಗಳಿಂದ ನಮಗೆ ಅಭದ್ರತೆ ಉಂಟಾಗಿದೆ. ಸರ್ಕಾರಕ್ಕೆ ಬೆಂಬಲ ನೀಡದೇ ಇದ್ದರೆ ಬಂಧಿಸಿ ಕೇಸು ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದರು.

    ರೆಸಾರ್ಟ್‍ನಲ್ಲಿ ಇರುವ ನಮಗೆ ಭದ್ರತೆ ಬೇಕು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಭದ್ರತೆ ನೀಡುವಂತೆ ಮನವಿ ಮಾಡುತ್ತೇವೆ. ಸ್ಥಳೀಯ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಡಿವೈಎಸ್ಪಿ ಅವರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ಬಾಲಾಜಿ ಹೇಳಿದರು.