Tag: somavarapete

  • ಸೋಮವಾರಪೇಟೆಯಲ್ಲಿ ‘ಸೂರಿಗಾಗಿ ಸಮರ’ ಪ್ರತಿಭಟನೆ

    ಸೋಮವಾರಪೇಟೆಯಲ್ಲಿ ‘ಸೂರಿಗಾಗಿ ಸಮರ’ ಪ್ರತಿಭಟನೆ

    ಮಡಿಕೇರಿ: ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಜಿಲ್ಲಾ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ವತಿಯಿಂದ ಸೋಮವಾರಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

    ಕಾಫಿ ತೋಟದ ಲೈನ್ ಮನೆಯಲ್ಲಿರುವ ಕಾರ್ಮಿಕರಿಗೆ ಹಾಗೂ ನಿವೇಶನ ಇಲ್ಲದ ಕೂಲಿ ಕಾರ್ಮಿಕರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಸೂರಿಗಾಗಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಮೂಲಕ ಜಿಲ್ಲೆಯಾದ್ಯಂತ ಹೋರಾಟ ಮಾಡುತ್ತ ಸಂಬಂಧಿಸಿದ ಇಲಾಖೆಗೆ ನಿವೇಶನಕ್ಕಾಗಿ ಅರ್ಜಿಗಳನ್ನು ಸಲ್ಲಿಸುತ್ತಾ ಬಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಇದನ್ನೂ ಓದಿ: ಸಂಪಾಜೆ ಘಾಟಿಯಲ್ಲಿ ಉಕ್ಕುತ್ತಿರುವ ಅಂತರ್ಜಲ – ರಸ್ತೆ ಕುಸಿಯುವ ಅತಂಕ- ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು

    ರೆವಿನ್ಯೂ ಇಲಾಖೆ, ಸಂಬಂಧಿಸಿದ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳು ಚುನಾವಣೆಗೂ ಮುನ್ನ ಕಾರ್ಮಿಕ ಮತದಾರರಿಗೆ ಭರವಸೆಗಳನ್ನು ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ ಜಿಲ್ಲಾಧ್ಯಕ್ಷ ಎಚ್.ಎಂ. ಸೋಮಪ್ಪ ದೂರಿದರು. ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವುದರೊಂದಿಗೆ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು. ತಾಲೂಕು ಕಚೇರಿಯ ಮೂಲಕ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದನ್ನೂ ಓದಿ: ಕಸ ಆಯುವ ಮಹಿಳೆಯ ಪರ್ಫೆಕ್ಟ್ ಇಂಗ್ಲಿಷ್ – ವೀಡಿಯೋ ನೋಡಿ ನೆಟ್ಟಿಗರು ಫಿದಾ

  • ಸೋಮವಾರಪೇಟೆ-ಸುಂಟಿಕೊಪ್ಪ ಮಾರ್ಗ ತಾತ್ಕಾಲಿಕ ಸ್ಥಗಿತ!

    ಸೋಮವಾರಪೇಟೆ-ಸುಂಟಿಕೊಪ್ಪ ಮಾರ್ಗ ತಾತ್ಕಾಲಿಕ ಸ್ಥಗಿತ!

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮಳೆ ಎಡೆಬಿಡದೆ ಸುರಿಯುತ್ತದೆ. ಪರಿಣಾಮ ರಾಜ್ಯ ಹೆದ್ದಾರಿಯಲ್ಲಿ ಅಂತರ್ಜಲದಮಟ್ಟ ಹೆಚ್ಚಾಗಿ ರಸ್ತೆಮಧ್ಯ ಭಾಗ ಗುಂಡಿ ಬಿದ್ದಿದ್ದು, ಕುಸಿಯುವ ಹಂತಕ್ಕೆ ತಲುಪಿದೆ.

    ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ – ಮಾದಾಪುರ ರಸ್ತೆಯ ಸ್ವಸ್ಥ ಶಾಲೆ ಸಮೀಪ ಭೂಕುಸಿತವಾಗಿರುವ ರಸ್ತೆಯ ನಡುವೆ ಜಲ ಉಕ್ಕುತ್ತಿದು ರಸ್ತೆ ಮದ್ಯ ಭಾಗವೇ ಸಂಪೂರ್ಣ ಕುಸಿಯುವ ಹಂತಕ್ಕೆ ತಲುಪಿದೆ. ಹೀಗಾಗಿ ಸುಂಟಿಕೊಪ್ಪ ಸೋಮವಾರಪೇಟೆಗೆ ಹೋಗುವ ಜನಸಾಮಾನ್ಯರಿಗೆ ನಾಲ್ಕು ಐದು ಕಿಲೋ ಮೀಟರ್ ಸುತ್ತಿಬಳಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಆಗಸ್ಟ್ ತಿಂಗಳ ಮೊದಲ ರಾತ್ರಿ ಸುರಿದ ಮಳೆಗೆ ಈ ರೀತಿಯಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಅತಂಕಕ್ಕೆ ಒಳಗಾಗಿದ್ದಾರೆ. ರಸ್ತೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಅಂತರ್ಜಲದ ಮಟ್ಟ ಎಲ್ಲಿ ಇದೆ ಎಂದು ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ನೋಡಿಕೊಂಡು ಅದಷ್ಟು ಬೇಗ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸನ್ನಿಲಿಯೋನ್ ಮನೆಯಲ್ಲಿ ಜಿರಳೆ ಕಾಟ- ದಂಪತಿಯನ್ನು ಕಂಡು ನಕ್ಕ ನೆಟ್ಟಿಗರು

    ಸದ್ಯದ ಮಟ್ಟಿಗೆ ಈ ಭಾಗದ ಜನರು ವಾಹನಗಳನ್ನು ಕಾನ್ ಬೈಲ್ – ನಾಕೂರು ಶಿರಂಗಾಲ – ಗುಂಡುಗುಟ್ಟಿ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಸ್ಥಳದಲ್ಲಿ ಸಂಬಂಧಿಸಿದ ಇಲಾಖೆಯ ಎಂಜಿನಿಯರ್ ಗಳು, ಪಿಡಿಓ ವೇಣುಗೋಪಾಲ್ ಮತ್ತು ಪಂಚಾಯ್ತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪರವರು ಮೊಕ್ಕಾಂ ಹೂಡಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರತರಾಗಿದ್ದಾರೆ.

    ತಾಯಿ-ಮಗಳು ಪ್ರಾಣಾಪಾಯದಿಂದ ಪಾರು:
    ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಸೋಮವಾರಪೇಟೆ ತಾಲೂಕಿನ ಕಾಂಡನಕೊಳ್ಳಿ ಹಾಲೇರಿ ಗ್ರಾಮದ ಕದಂಡಾಲು ಎಂಬಲ್ಲಿ ಒಡ್ಡಚೆಟ್ಟಿರ ಚೊನ್ದಕ್ಕಿ ಎಂಬುವವರ ಮನೆ ಸಂಪೂರ್ಣ ಕುಸಿದು ಹಾನಿಯುಂಟಾಗಿದೆ. ಮನೆಯಲ್ಲಿ ಒಡ್ಡಚೆಟ್ಟಿರ ಚೊನ್ದಕ್ಕಿ ತನ್ನ ಮಗಳೊಂದಿಗೆ ವಾಸವಿದ್ದು, ಮಳೆಯ ತೀವ್ರತೆಗೆ ಹೆದರಿ, ದಿನದ ಮುಂದೆಯೆ ಮುಕ್ಕೋಡ್ಲುವಿನ ತಮ್ಮ ಬಂದುಗಳ ಮನೆಗೆ ತೆರಳಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  • 4.96 ಕೋಟಿ ವೆಚ್ಚದ 5.99 ಕಿ.ಮೀ ರಸ್ತೆ ಗುಣಮಟ್ಟ ಕಳಪೆ- 5 ಗ್ರಾಮಗಳ ಗ್ರಾಮಸ್ಥರ ಆರೋಪ

    4.96 ಕೋಟಿ ವೆಚ್ಚದ 5.99 ಕಿ.ಮೀ ರಸ್ತೆ ಗುಣಮಟ್ಟ ಕಳಪೆ- 5 ಗ್ರಾಮಗಳ ಗ್ರಾಮಸ್ಥರ ಆರೋಪ

    ಮಡಿಕೇರಿ: 4.96 ಕೋಟಿ ವೆಚ್ಚದ 5.99 ಕಿ.ಮೀ ರಸ್ತೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಸೋಮವಾರಪೇಟೆ ತಾಲೂಕಿನ ಐದು ಗ್ರಾಮಗಳ ಗ್ರಾಮಸ್ಥರು ಆರೋಪಿಸಿದ್ದಾರೆ. ಕೊಡ್ಲೂರ್ ಗ್ರಾಮದಿಂದ ಹಂಡ್ಲಿ ಗ್ರಾಮದವರೆಗೆ 5 ಗ್ರಾಮಗಳನ್ನು ಒಳಗೊಂಡಂತೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣವಾಗುತ್ತಿದೆ. ರೂ. 4.96 ಕೋಟಿ ವೆಚ್ಚದ 5.99 ಕಿ.ಮೀ ರಸ್ತೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಗ್ರಾಮ ಪ್ರಮುಖರಾದ ತಾಳೂರು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    2020ರ ಸೆಪೆಂಬರ್ 9 ರಂದು ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅನುದಾನದಲ್ಲಿ ಗುತ್ತಿದೆದಾರ ಶಿವಲೀಲಾ ಸುರೇಶ್ ಸಜ್ಜನ್, ಎಂಜಿನಿಯರ್ ಗಳಾದ ಪ್ರಭು ಹಾಗೂ ಪೂವಯ್ಯ ಅವರಿಂದ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಅಪ್ಪಚ್ಚುರಂಜನ್ ಶಂಕುಸ್ಫಾಪನೆ ನೆರವೇರಿಸಿದ್ದರು. ಅಕ್ಟೋಬರ್ ನಿಂದ ಕಾಮಗಾರಿಗೆ ಚಾಲನೆ ನೀಡಲಾಯಿತು.

    ರಸ್ತೆಯ ಎರಡೂ ಕಡೆಯಿಂದ ರಸ್ತೆಗೆ ಅಗತ್ಯವಿರುವ 32 ಅಡಿ ಅಗಲೀಕರಣ ಮಾಡುತ್ತಾ ಕೆಲ ಮನೆಗಳ ಮುಂದೆ ಬೇಕಾದ ಹಾಗೇ ಜಾಗ ಬಿಟ್ಟು ಕಾಮಗಾರಿ ಮುಂದುವರಿಸಿದರು. ನಂತರ ರಸ್ತೆಗೆ 40 ಹಾಗೂ 20 ಎಂಎಂ ಕಲ್ಲುಗಳ ಮಿಶ್ರಣವನ್ನು ಹಾಕಿ ಸಮತಟ್ಟಾದ ಮೇಲ್ಪದರವನ್ನು ರೋಲಿಂಗ್ ಮಾಡಿ ಡಾಂಬರ್ ಹಾಕಿದ್ದಾರೆ. 15 ದಿನಗಳ ನಂತರ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಂಚರಿಸಿದಾಗ ರಸ್ತೆಗೆ ಹಾನಿಯಾಗಿದೆ. ಪ್ರತಿದಿನ ಓಡಾಡುವ ವಾಹನಗಳಿಂದ ರಸ್ತೆಯ ಎರಡೂ ಕಡೆಯಲ್ಲೂ ಹಾಳಾಗುತ್ತಿದೆ. 2021ರ ಆಗಸ್ಟ್ 13ಕ್ಕೆ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಮುಗಿಯಬೇಕಾಗಿರುವುದರಿಂದ ರಸ್ತೆಯ ಎರಡೂ ಕಡೆ ಡ್ರೈನೇಜ್ ಮಾಡದೇ ಶೋಲ್ಡರ್ ಮೇಲೆ ರೋಲಿಂಗ್ ಹಾಗೂ ಅಧಿಕ ವೈಬ್ರೈಟರ್ ರೋಲ್ ಮಾಡದೆ ಡಾಂಬರು ಮಾಡಿರುವುದರಿಂದಲೇ ರಸ್ತೆಯ ಗುಣಮಟ್ಟ ಕಳಪೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

  • ಶ್ರಮದಾನ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದ ಕೊಡಗಿನ ಪೊಲೀಸರು

    ಶ್ರಮದಾನ ಮಾಡುವ ಮೂಲಕ ಗ್ರಾಮಸ್ಥರ ಗಮನ ಸೆಳೆದ ಕೊಡಗಿನ ಪೊಲೀಸರು

    ಮಡಿಕೇರಿ: ಕತ್ತಿ, ದೊಣ್ಣೆ ಗುದ್ದಲಿಗಳಿಂದ ಗಿಡಗಂಟಿಗಳನ್ನು ಕಡಿದು, ಕಸ ತೆಗೆದು ಹಾಕಿ ಗ್ರಾಮವನ್ನು ಪೊಲೀಸರು ಸ್ವಚ್ಛಗೊಳಿಸಿದ್ದು, ಪೊಲೀಸರ ಈ ಕಾರ್ಯವನ್ನು ಮೆಚ್ಚಿದ ಇದೀಗ ಗ್ರಾಮಸ್ಥರು ಹಾಡಿ ಹೊಗಳುತ್ತಿದ್ದಾರೆ.

    ಸದಾ ಲಾಠಿ, ಬಂದೂಕು ಹಿಡಿದು ಓಡಾಡುತ್ತಿದ್ದ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಪೊಲೀಸ್ ಸಿಬ್ಬಂದಿ ಇಂದು ಬೆಳಿಗ್ಗೆ ಪೊಲೀಸ್ ಠಾಣೆ ವಸತಿ ಗೃಹ ಹಾಗೂ ಗ್ರಾಮದ ರಸ್ತೆಯಲ್ಲಿ ಕತ್ತಿ, ದೊಣ್ಣೆ ಗುದ್ದಲಿಗಳನ್ನು ಹಿಡಿದು ಗಿಡಗಂಟಿಗಳನ್ನು ಕಡಿದು, ಕಸವನ್ನು ತೆಗೆಯುವ ಮೂಲಕ ಸ್ವಚ್ಛ ಕಾರ್ಯ ಮಾಡಿದ್ದಾರೆ.

    ಇಂದು ಬೆಳಿಗ್ಗೆ 7 ಗಂಟೆಗೆ ಪೊಲೀಸ್ ವಸತಿ ಗೃಹದ ಪೊಲೀಸರು ತಮ್ಮ ಸಮವಸ್ತ್ರಗಳನ್ನು ಕಳಚಿ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ಸುತ್ತಮುತ್ತಲಿರುವ ಕಸಗಳನ್ನು ಸ್ವಚ್ಛಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಠಾಣೆಗೆ ತೆರಳುವ ಮಾರ್ಗ ಹಾಗೂ ಸುತ್ತ ಬೆಳೆದಿದ್ದ ಕುರುಚಲು ಕಾಡುಗಳನ್ನು ಕಳೆ ಕೊಂಚುವ ಯಂತ್ರಗಳಿಂದ ಸ್ವಚ್ಛಗೊಳಿಸಿದರು.

    ಗ್ರಾಮ ಪಂಚಾಯತಿ ಅವರೇ ಸ್ವಚಗೊಳಿಸಲಿ ಎಂದು ಕಾಯದೇ ಮಹಿಳಾ ಸಿಬ್ಬಂದಿಗಳು ಕುಕ್ಕೆ ಹಿಡಿದು ಶ್ರಮದಾಮ ಮಾಡಿದ್ದಾರೆ. ಜೊತೆಗೆ ಒಳಚರಂಡಿ ಭರ್ತಿಯಾಗಿರುವುದನ್ನು ಗಮನಿಸಿದ ಸಿಬ್ಬಂದಿ ಸ್ವಚ್ಛತೆ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ

    ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ

    ಮಡಿಕೇರಿ: ಪದವಿ ಪೂರ್ವ ಕಾಲೇಜು ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

    ಕಳೆದ ವಾರವಷ್ಟೇ ವಿದ್ಯಾರ್ಥಿಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಬಳಿಕ ಪೋಷಕರನ್ನು ಕರೆದು ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿಕೊಡಲಾಗಿತ್ತು. ತೀವ್ರ ಜ್ವರ ಇದ್ದಿದ್ದರಿಂದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೋಮವಾರ ವಿದ್ಯಾರ್ಥಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಹೀಗಾಗಿ ತಕ್ಷಣವೇ ಎಚ್ಚೆತ್ತುಕೊಂಡ ಕಾಲೇಜು ಪ್ರಾಂಶುಪಾಲ ಲೋಕೇಶ್, ಆರೋಗ್ಯ ಇಲಾಖೆ ಸಿಬ್ಬಂದಿ ಕರೆಸಿ ಕಾಲೇಜಿನಲ್ಲೇ ಎಲ್ಲಾ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ 24 ವಿದ್ಯಾರ್ಥಿಗಳಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಆರೋಗ್ಯ ಸರಿಯಿಲ್ಲವೆಂದು ಮನೆಗೆ ಕಳುಹಿಸಿದ್ದ ವಿದ್ಯಾರ್ಥಿ ಸೇರಿದಂತೆ ಒಟ್ಟು 25 ವಿದ್ಯಾರ್ಥಿಗಳಿಗೆ ಮೊದಲು ಕೋವಿಡ್ ಪಾಸಿಟಿವ್ ಬಂದಿದೆ.

    ಜನವರಿ 11 ರಂದು ಕಾಲೇಜು ಆರಂಭವಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕೊವಿಡ್ ನೆಗೆಟಿವ್ ವರದಿ ಪಡೆದೇ ಕಾಲೇಜಿಗೆ ತರಗತಿಗೆ ಅವಕಾಶ ನೀಡಲಾಗಿತ್ತು. ಆದರೆ ಮೊದಲು ಪಾಸಿಟಿವ್ ಬಂದ ವಿದ್ಯಾರ್ಥಿ ಆರೋಗ್ಯ ಸರಿಯಿಲ್ಲದೆ ಒಮ್ಮೆ ಮನೆಗೆ ಹೋಗಿ ಬಂದಿದ್ದ. ಹೀಗಾಗಿ ಆ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಕಾಲೇಜಿನ ದ್ವಿತೀಯ ಪಿಯುಸಿ ತರಗತಿಯಲ್ಲಿ ಒಟ್ಟು 76 ವಿದ್ಯಾರ್ಥಿಗಳಿದ್ದು, 49 ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಉಳಿದ ಇಬ್ಬರು ಹೆಣ್ಣು ಮಕ್ಕಳಿಗೆ ಶೀತದ ಲಕ್ಷಣವಿದ್ದು ಆ ವಿದ್ಯಾರ್ಥಿನಿಯರನ್ನು ವಸತಿ ನಿಲಯದಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ.

    ಕಾಲೇಜಿನ ಎಲ್ಲಾ ಸಿಬ್ಬಂದಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಆದರೆ ಎಲ್ಲರೂ ಪಾಸಿಟಿವ್ ವಿದ್ಯಾರ್ಥಿಗಳ ಪ್ರಾಥಮಿಕ ಸಂಪರ್ಕದಲ್ಲಿರುವುದರಿಂದ ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಕೊಡಗು ಡಿಎಚ್‍ಓ ಮೋಹನ್ ಕುಮಾರ್ ಹೇಳಿದ್ದಾರೆ.

  • ಲಂಚ ಪಡೆಯುತ್ತಿದ್ದ ಗೃಹ ರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ

    ಲಂಚ ಪಡೆಯುತ್ತಿದ್ದ ಗೃಹ ರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ

    ಮಡಿಕೇರಿ: ಸಿಬ್ಬಂದಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಗೃಹರಕ್ಷಕ ದಳದ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹದಳದ ಎಸಿಬಿ ಅಧಿಕಾರಿಗಳು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಬಸ್ಸು ನಿಲ್ದಾಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಸುನಿಲ್ ಎಂಬವರಿಂದ ಲಂಚ ಪಡೆಯುತ್ತಿದ್ದ ಆರೋಪದಡಿ ಗೃಹ ರಕ್ಷಕ ದಳದ ಅಧಿಕಾರಿ ರುದ್ರಪ್ಪ ಎಂಬವರನ್ನು ಬಂಧಿಸಲಾಗಿದೆ.

    ಪ್ರತಿ ತಿಂಗಳು ಗೃಹರಕ್ಷಕ ದಳದ ಸಿಬ್ಬಂದಿ ತಲಾ ಒಂದು ಸಾವಿರ ರೂ.ಗಳನ್ನು ನೀಡಬೇಕೆಂಬ ಬೇಡಿಕೆಯನ್ನು ರುದ್ರಪ್ಪ ಬಳಿ ಇಟ್ಟಿದ್ದಾರೆ ಎನ್ನಲಾಗಿದ್ದು, ತಪ್ಪಿದಲ್ಲಿ ಬೇರೆಕಡೆಗೆ ಕಳುಹಿಸುವುದಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳವನ್ನು ಸಿಬ್ಬಂದಿಗೆ  ನೀಡುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿತ್ತು.

    ಅದರಂತೆ ಇಂದು ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಸುನಿಲ್ ಎಂಬವರಿಂದ ಒಂದು ಸಾವಿರ ರೂ.ಗಳನ್ನು ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಇನ್ಸ್ ಪೆಕ್ಟರ್ ಶ್ರೀಧರ್ ನೇತೃತ್ವದ ತಂಡ ದಾಳಿ ನಡೆಸಿ ರುದ್ರಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ಸೊಸೆಯ ಎಡಗೈ, ಎದೆ ಭಾಗಕ್ಕೆ ಗುಂಡಿಟ್ಟು ಕೊಲೆಗೆ ಯತ್ನಿಸಿದ ಮಾವ

    ಸೊಸೆಯ ಎಡಗೈ, ಎದೆ ಭಾಗಕ್ಕೆ ಗುಂಡಿಟ್ಟು ಕೊಲೆಗೆ ಯತ್ನಿಸಿದ ಮಾವ

    ಮಡಿಕೇರಿ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಾವ ಸೊಸೆಯ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಬೆಟ್ಟದಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಬೆಟ್ಟದಕೊಪ್ಪ ಗ್ರಾಮದ ಐಯ್ಯಪ್ಪ ಎಂಬುವವರು ಮಗನಾದ ಹೂವಯ್ಯನ ಪತ್ನಿ ತೀರ್ಥ ಅವರೊಂದಿಗೆ ರಸ್ತೆಯಲ್ಲಿ ದನ ಕಟ್ಟುವ ವಿಚಾರದಲ್ಲಿ ವಾಗ್ವಾದಕ್ಕಿಳಿದಿದ್ದಾರೆ. ಮಾತಿನ ಚಕಮಕಿ ವಿಪರೀತಕ್ಕೆ ಹೋದ ಪರಿಣಾಮ ಐಯ್ಯಪ್ಪ, ತೀರ್ಥ ಅವರ ಎಡಗೈ ಮತ್ತು ಎದೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಗುಂಡೇಟಿನಿಂದ ಗಾಯಗೊಂಡ ತೀರ್ಥ ಅವರಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಐಯ್ಯಪ್ಪ ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿದ್ದು, ಮಗ ಹೂವಯ್ಯ ಆತನ ಪತ್ನಿ ತೀರ್ಥ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಹೂವಯ್ಯ ನೀಡಿದ ದೂರಿನ ಮೇರೆಗೆ ಆರೋಪಿ ಐಯ್ಯಪ್ಪ ಹಾಗೂ ಆತನ ಪತ್ನಿ ಮತ್ತು ಇಬ್ಬರು ಪುತ್ರಿಯರ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

  • ಏಕಾಏಕಿ ಕುಸಿದು ಬಿದ್ದ ಮನೆಗೋಡೆ- ಅದೃಷ್ಟವಶಾತ್ ನಾಲ್ವರು ಪಾರು

    ಏಕಾಏಕಿ ಕುಸಿದು ಬಿದ್ದ ಮನೆಗೋಡೆ- ಅದೃಷ್ಟವಶಾತ್ ನಾಲ್ವರು ಪಾರು

    – ಭಾರೀ ಮಳೆಗೆ ಬಿರುಕು ಬಿಟ್ಟ ಮನೆ ಗೋಡೆ

    ಮಡಿಕೇರಿ: ಕೊಡಗಿನಲ್ಲಿ ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗದ ಜನರ ಜೀವನ ಅಸ್ತವ್ಯಸ್ತಗೊಂದಿದೆ.

    ಒಂದೆಡೆ ನದಿ, ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಇನ್ನೊಂದೆಡೆ ತಾಲೂಕಿನ ಗ್ರಾಮೀಣ ಭಾಗದ ಹಲವು ಮನೆಗಳು ಧರೆಗುರುಳಿವೆ.

    ಸೋಮವಾರಪೇಟೆ ನಗರ ಸಮೀಪದ ಕಲ್ಕಂದೂರು ಬಾಣೆಯ ನಿವಾಸಿ ಅಬ್ಬಾಸ್ ಎಂಬುವವರ ವಾಸದ ಮನೆ ಮೊನ್ನೆ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಸಂಪೂರ್ಣ ನೆಲಸಮವಾಗಿದೆ. ಮುಂಜಾನೆ 3.30ರ ವೇಳೆ ಜೋರಾಗಿ ಶಬ್ದ ಕೇಳಿಸಿತೆಂದು ಮನೆಯಲ್ಲಿದ್ದ ನಾಲ್ವರು ಮನೆಯಿಂದ ಹೊರಗೆ ಬಂದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಮನೆಯಲ್ಲಿದ್ದ ಪಾತ್ರೆ, ಪೀಠೋಪಕರಣ ಸೇರಿದಂತೆ ಹಲವು ಸಾಮಾಗ್ರಿಗಳು ನಾಶವಾಗಿದೆ.

    ತಾಲೂಕಿನ ತೋಳುರುಶೆಟ್ಟಳ್ಳಿ ಸಮೀಪದ ಸುಭಾಷ್ ನಗರದ ಟಿ.ಎನ್.ಸುರೇಶ್ ಎಂಬುವವರ ಮನೆಯ ಗೋಡೆ ಭಾರೀ ಮಳೆಗೆ ಕುಸಿದಿದ್ದು, ಕೆಲವೆಡೆ ಗೋಡೆಗಳು ಬಿರುಕು ಬಿಟ್ಟು ಬೀಳುವ ಹಂತದಲ್ಲಿದೆ. ಜಿಲ್ಲೆಯಲ್ಲಿ ಮಳೆ ಇಳಿಮುಖವಾದರೂ ಮಳೆಯ ಅವಾಂತರಗಳು ಮಾತ್ರ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ.

  • ಸೀಲ್‍ಡೌನ್ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್- ಸ್ಥಳೀಯರಲ್ಲಿ ಹೆಚ್ಚಾದ ಆತಂಕ

    ಸೀಲ್‍ಡೌನ್ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್- ಸ್ಥಳೀಯರಲ್ಲಿ ಹೆಚ್ಚಾದ ಆತಂಕ

    – ಮತ್ತೆ ಸೀಲ್‍ಡೌನ್ ಮಾಡ್ದಂತೆ ಗ್ರಾಮಸ್ಥರ ಆಗ್ರಹ..!

    ಮಡಿಕೇರಿ: ಸೀಲ್‍ಡೌನ್ ಏರಿಯಾ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ ಮತ್ತೆ ಏರಿಯಾವನ್ನು ಮತ್ತೆ ಸೀಲ್‍ಡೌನ್ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ನಡೆದಿದೆ.

    ಜಿಲ್ಲೆ ಶನಿವಾರಸಂತೆ ಗುಂಡೂರಾವ್ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಸದ್ಯ ಮಹಿಳೆ ಸೋಂಕಿನಿಂದ ಚೇತರಿಸಿಕೊಂಡು ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದಾರೆ. ಆದರೆ ಇದೀಗ ಮಹಿಳೆಯ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಧಿಕಾರಿಗಳು ಯುವಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಏರಿಯಾವನ್ನು ಮತ್ತೆ ಸೀಲ್‍ಡೌನ್ ಮಾಡದಂತೆ ಆಗ್ರಹಿಸಿದ್ದಾರೆ.

    ನಾಳೆ ಗುಂಡೂರಾವ್ ಬಡಾವಣೆಯಲ್ಲಿ ಸೀಲ್‍ಡೌನ್ ತೆರೆವುಗೊಳಿಸಬೇಕಿತ್ತು. ಆದರೆ ಮತ್ತೊಂದು ಪಾಸಿಟಿವ್ ವರದಿ ಆಗಿರುವದರಿಂದ ಮತ್ತೆ ಸೀಲ್‍ಡೌನ್ ಮಾಡುವ ಸಾಧ್ಯತೆಗಳಿವೆ. ಬಡಾವಣೆಯಲ್ಲಿ ಬಹುತೇಕರು ಕೂಲಿ ಕಾರ್ಮಿಕರೇ ವಾಸಿಸುತ್ತಿರುವುದರಿಂದ ಮತ್ತೆ ಸೀಲ್‍ಡೌನ್ ಮಾಡಿದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಸೋಂಕಿತರ ಮನೆಯನ್ನು ಮಾತ್ರ ಸೀಲ್‍ಡೌನ್ ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ತೊರೆನೂರಿನಲ್ಲಿ ವಿಚಿತ್ರ ಜ್ವರ, ಕಾಯಿಲೆ- 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ತೊರೆನೂರಿನಲ್ಲಿ ವಿಚಿತ್ರ ಜ್ವರ, ಕಾಯಿಲೆ- 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    – ಊರನ್ನೇ ತೊರೆದ ಕುಟುಂಬ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೊರೆನೂರು ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳು ಕೂಲಿ ಕಾರ್ಮಿಕರು, ರೈತರು. ಅಂದು ದುಡಿದ್ರೆ ಮಾತ್ರವೇ ಆ ಹೊತ್ತಿನ ಬದುಕು ಅನ್ನೋ ಸ್ಥಿತಿಯಲ್ಲಿರುವ ಜನ, ಇದೀಗ ದುಡಿಯೋದನ್ನ ಬಿಟ್ಟು ಮನೆ ಬಾಗಿಲು ಮುಚ್ಚಿ ಎಲ್ಲರೂ ಆಸ್ಪತ್ರೆ ಸೇರಿದ್ದಾರೆ. ನಿಗೂಢ ಕಾಯಿಲೆಗೆ ಬಳಲಿ, ಹೆದರಿ ಎಷ್ಟೋ ಕುಟುಂಬಗಳು ಊರನ್ನೇ ತೊರೆದಿವೆ.

    ಗ್ರಾಮದ ಜನರ ಈ ಸ್ಥಿತಿಗೆ ಕಾರಣ ಕಳೆದ 15 ದಿನಗಳಿಂದ ಕಾಡುತ್ತಿರುವ ವಿಚಿತ್ರ ಜ್ವರ ಮತ್ತು ಕಾಯಿಲೆ ಅನ್ನೋದು ಆಶ್ಚರ್ಯದ ವಿಷಯ. 300ಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮದಲ್ಲಿ ಈಗ 200ಕ್ಕೂ ಹೆಚ್ಚು ಜನರು ವಿಚಿತ್ರ ಜ್ವರ ಮತ್ತು ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಇಲಾಖೆ ಸಿಬ್ಬಂದಿ ಬಂದು ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿಯನ್ನು ಸಂಗ್ರಹಿಸಿದ್ದಾರೆ. ಆದರೆ ಇದೂವರೆಗೆ ಕಾಯಿಲೆ ಬಗ್ಗೆ ಜನರಿಗೆ ಯಾವುದೇ ಮಾಹಿತಿ ನೀಡದಿರುವುದು ವಿಪರ್ಯಾಸ ಎಂದು ಗ್ರಾಮಸ್ಥ ಕೃಷ್ಣೇಗೌಡ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಗ್ರಾಮದಲ್ಲಿ ಮುಖ್ಯವಾಗಿ ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯ ಇಲ್ಲದಿರೋದೇ ಈ ಸಮಸ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಯಾವ ಚರಂಡಿಯೂ ಕೂಡ ಸ್ವಚ್ಛತೆಯಿಂದ ಕೂಡಿಲ್ಲ. ಕುಡಿಯುವ ನೀರಿನಲ್ಲಿ ಹುಳಗಳು ಕಂಡುಬಂದಿದ್ದು, ಈ ನೀರನ್ನು ಕುಡಿಯುತ್ತಿರುವುದರಿಂದಲೇ ಜನರಿಗೆ ವಿಚಿತ್ರ ಜ್ವರ ಮತ್ತು ಕೈ ಕಾಲುಗಳು ಊತವಾಗುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಇಷ್ಟೆಲ್ಲ ಆದ ಮೇಲೆ ಗ್ರಾಮಕ್ಕೆ ಬಂದ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿಯನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ಜನರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಕೊನೆ ಪಕ್ಷ ಯಾವ ಕಾಯಿಲೆ ಅನ್ನೋದನ್ನು ಯಾಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸುವ ಮೂಲಕ ಅಧಿಕಾರ ಎದುರು ಕಿಡಿಕಾರಿದ್ದಾರೆ.

    ಒಟ್ಟಿನಲ್ಲಿ ಮೇಲ್ನೋಟಕ್ಕೆ ಗ್ರಾಮದಲ್ಲಿ ಸ್ವಚ್ಛತೆ ಇಲ್ಲದೆ ಇರೋದೇ ಜನರು ವಿಚಿತ್ರ ಮತ್ತು ಕೈಕಾಲು ಊತದಂತಹ ಸಮಸ್ಯೆಯಿಂದ ಬಳಲೋದಕ್ಕೆ ಕಾರಣ ಎಂದು ಕಂಡು ಬರುತ್ತಿದೆ. ಆದರೆ ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ರೋಗಕ್ಕೆ ನೈಜ ಕಾರಣ ಏನು ಎಂದು ಪರಿಶೀಲನೆ ಮಾಡದೆ, ಸರಿಯಾದ ಚಿಕಿತ್ಸೆ ನೀಡದೇ ಇರೋದು ಜನರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.