Tag: solar eclipes

  • ಗ್ರಹಣ ಸಮಯದಲ್ಲಿ ಸ್ಕೂಬಾ ಡೈವ್ ಮಾಡಿದ ರೋಹಿಣಿ ಸಿಂಧೂರಿ

    ಗ್ರಹಣ ಸಮಯದಲ್ಲಿ ಸ್ಕೂಬಾ ಡೈವ್ ಮಾಡಿದ ರೋಹಿಣಿ ಸಿಂಧೂರಿ

    ಕಾರವಾರ: ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಗ್ರಹಣ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬ ಸಮೇತ ಆಗಮಿಸಿ ಮುರಡೇಶ್ವರದ ನೇತ್ರಾಣಿ ನಡುಗಟ್ಟೆಯಲ್ಲಿ ಗ್ರಹಣ ಸಮಯದಲ್ಲಿ ಸ್ಕೂಬಾ ಡೈವಿಂಗ್ ಮಾಡಿದರು.

    ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ತರಬೇತಿದಾರ ಗಣೇಶ್ ಹರಿಕಂತ್ರ ರೋಹಿಣಿ ಸಿಂಧೂರಿ ಹಾಗೂ ಅವರ ಕುಟುಂಬ ಸದಸ್ಯರಿಗೆ ತರಬೇತಿಯನ್ನು ನೀಡಿದರು. ಬಳಿಕ ಗಣೇಶ್ ಹರಿಕಂತ್ರ ಅವರು ರೋಹಿಣಿ ಹಾಗೂ ಅವರ ಕುಟುಂಬಸ್ಥರನ್ನು ನೇತ್ರಾಣಿ ನಡುಗಡ್ಡೆಗೆ ಕರೆದುಕೊಂಡು ಹೋಗಿ ಸ್ಕೂಬಾ ಡೈವಿಂಗ್ ಮಾಡಿಸಿದರು.

    ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಅಪರೂಪದ ಮತ್ಸ್ಯಗಳನ್ನು ಹಾಗೂ ಹವಳದ ದಂಡೆಗಳನ್ನು ನೋಡಿ ರೋಹಿಣಿ ಸಿಂಧೂರಿ ಸ್ಕೂಬಾ ಡೈವಿಂಗ್ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  • 116 ಅಡಿ ಎತ್ತರದ ಬಸವಣ್ಣ ಪುತ್ಥಳಿಗೂ ಹಿಡಿದ ಗ್ರಹಣ

    116 ಅಡಿ ಎತ್ತರದ ಬಸವಣ್ಣ ಪುತ್ಥಳಿಗೂ ಹಿಡಿದ ಗ್ರಹಣ

    ಗದಗ: ಇಂದು ಅಪರೂಪದ ಕಂಕಣ ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಕೆಲವು ರಸ್ತೆ ಹಾಗೂ ಪ್ರವಾಸಿ ತಾಣಗಳು ಖಾಲಿ ಖಾಲಿಯಾಗಿವೆ.

    ನಗರದ ಭೀಷ್ಮಕೆರೆ ಆವರಣದಲ್ಲಿ ನಿರ್ಮಾಣವಾಗಿರುವ 116 ಅಡಿ ಎತ್ತರದ ವಿಶ್ವಗುರು ಬಸವಣ್ಣ ಪುತ್ಥಳಿ ವೀಕ್ಷಣೆಗೆ ಪ್ರತಿದಿನ ನೂರಾರು ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬರುತ್ತಿದ್ದರು. ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಿದ್ದು, ಈ ಸಂದರ್ಭದಲ್ಲಿ ಜನಜಂಗುಳಿಯಿಂದ ಕೂಡಿರುತಿತ್ತು.

    116 ಅಡಿ ಎತ್ತರದ ಮೂರ್ತಿ ನೋಡುವುದರ ಜೊತೆಗೆ ಪುತ್ಥಳಿ ಕೆಳಭಾಗದಲ್ಲಿನ ಬಸವಣ್ಣನವರ ಜೀವನ ಚರಿತ್ರೆ, ಚಿತ್ರಗಳು, ಮನಸ್ಸಿಗೆ ಮೃದು ನೀಡುವ ಉದ್ಯಾನವನ, ಕೈಗೆಟುಕವ ರೀತಿಯಲ್ಲಿರುವ ಕೆರೆ ನೀರು, ಮಕ್ಕಳು ಆಟವಾಡಲು ಮೈದಾನ, ಮಕ್ಕಳ ಉದ್ಯಾನವನ ಸಹ ಇಲ್ಲಿದೆ.

    ನಿತ್ಯ ಈ ಗಾರ್ಡನ್‍ನಲ್ಲಿ ಮಕ್ಕಳು, ಮಹಿಳೆಯರಿಂದ ತುಂಬಿ ತುಳುಕುತಿತ್ತು. ಕೆಲವರು ಕುಟುಂಬ ಸಮೇತ ಬಂದು ಬಸವಣ್ಣ ಪುತ್ಥಳಿ ನೋಡಿಕೊಂಡು ನಂತರ ಉಪಹಾರ ಸೇವಿಸಿ ಖುಷಿ ಖುಷಿಯಾಗಿ ಹೋಗುತ್ತಿದ್ದರು. ಆದರೆ ಇಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಯಾರು ಮನೆಯಿಂದ ಹೊರ ಬಂದಿಲ್ಲ. ಎಲ್ಲವೂ ಖಾಲಿ ಖಾಲಿ ಗೋಚರವಾಗುತ್ತಿದೆ.

    ಸಿಬ್ಬಂದಿ ಮಾತ್ರ ಕಸ ಕಡ್ಡಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಗ್ರಹಣ ವೇಳೆ ಕೆಲವರು ಪೂಜೆ ಪುನಸ್ಕಾರಗಳಲ್ಲಿ ತೊಡಗಿದ್ರೆ, ಇನ್ನು ಕೆಲವರು ಮನೆಯಿಂದ ಹೊರಹೋಗದಂತೆ ಮನೆಯಲ್ಲಿ ಕುಳಿತಂತೆ ಕಾಣಿಸುತ್ತೆ. ಇಂದು ಈ ಪ್ರವಾಸಿ ತಾಣ ಖಾಲಿ ಖಾಲಿ ಆಗಿರುವುದನ್ನು ನೋಡಿದ್ರೆ ಬಸವಣ್ಣನಿಗೂ ಸೂರ್ಯಗ್ರಹಣ ಹಿಡದಿದೇಯಾ ಎಂದು ಎನಿಸುತ್ತೆ.

  • ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಚಿಕ್ಕಮಗಳೂರು: ಈ ಶತಮಾನದ ಕೊನೆಯ ಸೂರ್ಯ ಗ್ರಹಣದಂದು ಯಾವುದೇ ಹೆದರಿಕೆ, ಅಂಜಿಕೆ ಇಲ್ಲದೆ ಗ್ರಹಣದ ಸಮಯದಲ್ಲಿ ಸ್ಮಶಾನದಲ್ಲಿ ಊಟ ಮಾಡಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿಹಳ್ಳಿ ನಿವಾಸಿಗಳಾದ ಮೋಹನ್ ಹಾಗೂ ಪರಶುರಾಮ ಎಂಬವರು ಸ್ಮಶಾನದಲ್ಲಿ ಸಮಾಧಿಯೊಂದರ ಮೇಲೆ ಕೂತು ತಿಂಡಿ ತಿಂದಿದ್ದಾರೆ. ಅಷ್ಟೇ ಅಲ್ಲದೆ ಗ್ರಹಣ ಆರಂಭವಾದಾಗಿನಿಂದ ಸ್ಮಶಾನದಲ್ಲೇ ಇದ್ದು, ಸ್ಮಶಾನವನ್ನು ಶುಚಿ ಮಾಡಿದ್ದಾರೆ.

    ಮೋಹನ್ ಹಾಗೂ ಪರಶುರಾಮ ಸ್ಮಶಾನದಲ್ಲಿ ಅಲ್ಲಲ್ಲೇ ಬಿದ್ದಿದ್ದ ಪೇಪರ್, ಪ್ಲಾಸ್ಟಿಕ್, ಕಸ-ಕಡ್ಡಿಯನ್ನೆಲ್ಲಾ ಒಂದೆಡೆ ಹಾಕಿ ಬೆಂಕಿ ಹಾಕಿದ್ದಾರೆ. ಗ್ರಹಣ ಮುಗಿಯೋವರೆಗೂ ಸ್ಮಶಾನದಲ್ಲೇ ಇದ್ದು 12 ಗಂಟೆ ನಂತರ ಮನೆಗೆ ಹಿಂದಿರುಗಿದ್ದಾರೆ.

    ಸ್ಮಶಾನ, ಅಮವಾಸ್ಯೆ, ಗ್ರಹಣ ಇವ್ಯಾವು ನರಮಾನವನಷ್ಟು ಕ್ರೂರಿ ಅಲ್ಲ ಎನ್ನುವುದು ಈ ಯುವಕರ ನಂಬಿಕೆಯಾಗಿದೆ. ಇವುಗಳಿಗೆ ಮನುಷ್ಯನಲ್ಲಿರುವಷ್ಟು ಕೆಟ್ಟ ಯೋಚನೆ, ಆಲೋಚನೆ ಹಾಗೂ ಚಿಂತನೆಗಳಿಲ್ಲ ಎಂಬುದು ಇವರ ಧೃಡ ನಂಬಿಕೆಯಾಗಿದೆ. ಒಳ್ಳೆಯದ್ದನ್ನ ಯೋಚಿಸುವವರಿಗೆ ಒಳ್ಳೆಯದ್ದೆ ಆಗಲಿದ್ದು, ಕೆಟ್ಟ ಯೋಚನೆ ಇರುವವರಿಗೆ ಆಗುವುದೆಲ್ಲಾ ಕೆಟ್ಟದ್ದೇ ಎಂದು ಹೇಳಿದ್ದಾರೆ.

    ಅಲ್ಲದೆ ಮಾಡುವ ಕೆಲಸ, ಆಡುವ ಮಾತು, ನೋಡುವ ನೋಟ ಚೆನ್ನಾಗಿದ್ದರೆ ಆಗುವುದೆಲ್ಲಾ ಒಳ್ಳೆಯದ್ದೆ. ಗ್ರಹಣ, ಅಮವಾಸ್ಯೆ, ಹುಣ್ಣಿಮೆ ಇದ್ಯಾವುದು ಕೆಟ್ಟದ್ದು ಮಾಡುವುದಿಲ್ಲ ಎಂದು ಮೋಹನ್ ಹಾಗೂ ಪರಶುರಾಮ ನಂಬಿದ್ದಾರೆ.

  • ಗ್ರಹಣಕ್ಕೆ ಹೆದರಿದ ಗ್ರಾಮಸ್ಥರು – ಮಕ್ಕಳಿಗೆ ಎಕ್ಕೆ ಗಿಡದ ಬಳಿ ಪೂಜೆ ಸಲ್ಲಿಕೆ

    ಗ್ರಹಣಕ್ಕೆ ಹೆದರಿದ ಗ್ರಾಮಸ್ಥರು – ಮಕ್ಕಳಿಗೆ ಎಕ್ಕೆ ಗಿಡದ ಬಳಿ ಪೂಜೆ ಸಲ್ಲಿಕೆ

    ದಾವಣಗೆರೆ: ಕೇತುಗ್ರಸ್ತ ಸೂರ್ಯಗ್ರಹಣದ ಭಯ ಎಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಸೂರ್ಯನ ಕಿರಣ ನಮ್ಮ ಮೈಮೇಲೆ ಬಿದ್ದರೆ ದೋಷವಾಗುತ್ತಾ ಎನ್ನುವಷ್ಟರ ಮಟ್ಟಿಗೆ ಮೂಡ ನಂಬಿಕೆ ಬೇರೂರಿದೆ.

    ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮಾಡ್ಲಗೇರಿ ತಾಂಡದ ಗ್ರಾಮಸ್ಥರು ಮನೆಯಿಂದಲೇ ಹೊರ ಬಾರದ ಸ್ಥಿತಿ ಉಂಟಾಗಿದೆ. ಮನೆಯಿಂದ ಹೊರ ಬಂದರೆ ಏನಾದರೂ ದೋಷ ಬರುತ್ತಾ ಎನ್ನುವ ಭಯದಲ್ಲಿ ಬೆಳಗ್ಗೆಯಿಂದಲೂ ಬಾಗಿಲು ಮುಚ್ವಿಕೊಂಡು ಒಳಗೆ ಕೂತಿದ್ದಾರೆ. ಮನೆಯಿಂದ ಹೊರ ಬಂದರೆ ಏನಾದ್ರು ದೋಷವಾಗುತ್ತೆ ಎನ್ನುವ ಭಯದಲ್ಲಿ ಗ್ರಾಮದ ಜನರು ಕಾಡುತ್ತಿದ್ದು ಹೊರ ಬಾರದೆ ಕೂತಿದ್ದಾರೆ.

    ಹರಪ್ಪನಹಳ್ಳಿ ತಾಲೂಕಿನ ಪಣಿಯಾಪುರ ಗ್ರಾಮದಲ್ಲಿ ಸೂರ್ಯ ಗ್ರಹಣ ಹಿನ್ನೆಲೆ ಒಬ್ಬರೇ ಮಕ್ಕಳಿರುವ ಪೋಷಕರು ಎಕ್ಕೆ ಗಿಡಕ್ಕೆ ಪೂಜೆ ಸಲ್ಲಿಸಿ ಗ್ರಹಣ ದೋಷ ನಿವಾರಣೆ ಆಗುವಂತೆ ಪ್ರಾರ್ಥಿಸಿದರು.

    ಕೇತುಗ್ರಸ್ತ ಸೂರ್ಯಗ್ರಹಣದಲ್ಲಿ ಒಬ್ಬನೇ ಮಗನಿದ್ದವರಿಗೆ ದೋಷ ಬರುತ್ತೆ ಎನ್ನುವ ನಂಬಿಕೆ ಇದ್ದು, ದೋಷ ಪರಿಹಾರಕ್ಕೆ ಎಕ್ಕೆ ಗಿಡದ ಪೂಜೆ ಸಲ್ಲಿಸಿದರೆ ದೋಷ ನಿವಾರಣೆ ಆಗುತ್ತದೆ ಎನ್ನುವುದು ನಂಬಿಕೆ. ಆದ್ದರಿಂದ ಪಣಿಯಾಪುರದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆ ತಂದು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.

  • ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆ

    ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆ

    ಬಾಗಲಕೋಟೆ: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.

    ಬಾಗಲಕೋಟೆ ನಗರದ ಕಿಲ್ಲಾ ಏರಿಯಾದ ಗುರು ರಾಘವೇಂದ್ರ ರಾಯರ ಮಠದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ, ರಾಯರ ಬೃಂದಾವನಕ್ಕೆ ಜಲಾಭಿಷೇಕ ಹಾಗೂ ಹೋಮ ಹವನ ಹಾಗೂ ಜಪಯಜ್ಞಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಮಡಿವಂತಿಕೆಯಿಂದ ಮಠಕ್ಕೆ ಬಂದು ರಾಯರ ಜಪಯಜ್ಞಗಳನ್ನು ಮಾಡಿ ಗ್ರಹಣ ಗಂಡಾಂತರವನ್ನು ದೂರ ಮಾಡಿಕೊಂಡರು.

    ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದಲ್ಲಿ ಗ್ರಹಣ ವೇಳೆಯಲ್ಲಿ ದೇವಿಗೆ ಜಲಾಭಿಷೇಕ ನೆರವೇರಿಸಲಾಯಿತು. ಗ್ರಹಣ ಮೋಕ್ಷದವರೆಗೆ ದೇವಿ ಗರ್ಭಗುಡಿ ದರ್ಶನಕ್ಕೆ ಅವಕಾಶವಿರಲಿಲ್ಲ, ಯಾವುದೇ ಪೂಜೆ ಸಹ ಇರಲಿಲ್ಲ. ಹೊರಗಡೆಯಿಂದ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಗ್ರಹಣ ಮೋಕ್ಷದ ನಂತರ ದೇವಿಗೆ ಹಾಲು, ಹಣ್ಣು ಅಭಿಷೇಕ, ವಿಶೇಷ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಹೇಳಿದರು. ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ ಅಯ್ಯಪ್ಪ ಮಾಲಾಧಾರಿಗಳು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ, ಜಪ ಯಜ್ಞಗಳನ್ನುನೆರವೇರಿಸಿದರು.

    ಗ್ರಹಣ ವೀಕ್ಷಣೆಗಾಗಿ ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜ್ ಮೈದಾನದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಗ್ರಹಣ ವೀಕ್ಷಣೆ ಮಾಡಿದರು. ಉಳಿದಂತೆ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರು ಗ್ರಹಣ ವೀಕ್ಷಣೆ ಮಾಡಿ, ಗ್ರಹಣ ರೂಪ ಬದಲಾಗ್ತಿರೋ ಬಗ್ಗೆ ಮಾಹಿತಿ ಪಡೆದರು.

  • ಕೇತುಗ್ರಸ್ಥ ಸೂರ್ಯಗ್ರಹಣ- ಕೃಷ್ಣಮಠದ ಮಧ್ವ ಸರೋವರದಲ್ಲಿ ಪುಣ್ಯಸ್ನಾನ

    ಕೇತುಗ್ರಸ್ಥ ಸೂರ್ಯಗ್ರಹಣ- ಕೃಷ್ಣಮಠದ ಮಧ್ವ ಸರೋವರದಲ್ಲಿ ಪುಣ್ಯಸ್ನಾನ

    ಉಡುಪಿ: ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣದ ಸಂದರ್ಭ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಕೃಷ್ಣ ದೇವರ ದರ್ಶನ ಮಾಡಿದರು.

    ದೇವಾಲಯದ ಬಾಗಿಲು ಮುಚ್ಚದೇ ಇದ್ದ ಕಾರಣ ಭಕ್ತರಿಗೆ ಅನುಕೂಲವಾಯಿತು. ಗ್ರಹಣಕಾಲದಲ್ಲಿ ಮಠಾಧೀಶರು ಪುಣ್ಯಸ್ನಾನ ಕೈಗೊಂಡರು. ಪರ್ಯಾಯ ಪಲಿಮಾರು ಸ್ವಾಮೀಜಿ ಹಾಗೂ ಉತ್ತರಾಧಿಮಠಾಧೀಶರ ನೇತೃತ್ವದಲ್ಲಿ ಸಾವಿರಾರು ಭಕ್ತರು ಮಧ್ವ ಸರೋವರದಲ್ಲಿ ಮಿಂದೆದ್ದರು. ಸರೋವರದ ಸುತ್ತಲೂ ಕುಳಿತು ಜಪತಪ ಪಾರಾಯಣಗಳನ್ನು ಮಾಡಿದರು.

    ಕೃಷ್ಣನಿಗೆ ನೈರ್ಮಲ್ಯ ವಿಸರ್ಜನಾ ಪೂಜೆಯ ನಂತರ ಯಾವುದೇ ಅಲಂಕಾರ ಮಾಡಿರಲಿಲ್ಲ. ಗ್ರಹಣ ಮೋಕ್ಷದ ಬಳಿಕ ದೇವರಿಗೆ ಮಹಾಪೂಜೆ ನಡೆಸಿ ಭಕ್ತರಿಗೆ ಅನ್ನ ಪ್ರಸಾದ ಬಡಿಸಲಾಗುತ್ತದೆ. ಗ್ರಹಣ ಕಾಲದಲ್ಲಿ ಮಠದೊಳಗೆ ಪೂಜೆ, ಹೋಮ ನಡೆದವು. ಗ್ರಹಣದ ವೇಳೆಯಲ್ಲೇ ಆಗಸದಲ್ಲಿ ಕಾಮನಬಿಲ್ಲು ಕಾಣಿಸಿಕೊಂಡು ನೋಡುಗರ ಗಮನ ಸೆಳೆದಿದ್ದು ವಿಶೇಷವಾಗಿತ್ತು.

  • ಮೋಡಗಳ ಮರೆಯಲ್ಲಿ ದರ್ಶನ ಭಾಗ್ಯ ಕೊಟ್ಟ ಸೂರ್ಯಗ್ರಹಣ

    ಮೋಡಗಳ ಮರೆಯಲ್ಲಿ ದರ್ಶನ ಭಾಗ್ಯ ಕೊಟ್ಟ ಸೂರ್ಯಗ್ರಹಣ

    ಚಿಕ್ಕಬಳ್ಳಾಪುರ: ಮೋಡ ಮುಸುಕಿದ ವಾತಾವಾರಣದ ನಡುವೆಯೂ ಕೇತುಗ್ರಸ್ಥ ಕಂಕಣ ಸೂರ್ಯ ಗ್ರಹಣ ಚಿಕ್ಕಬಳ್ಳಾಪುರದಲ್ಲಿ ಗೋಚರವಾಗಿದೆ.

    ಗ್ರಹಣ ಸ್ಪರ್ಶಕಾಲದಲ್ಲಿ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಗ್ರಹಣ ದರ್ಶನ ಭಾಗ್ಯ ಸಿಗಲಿಲ್ಲ. ಆದರೆ ಗ್ರಹಣ ಮಧ್ಯ ಕಾಲ ಆಗಮಿಸುತ್ತಿದ್ದಂತೆ ಮೋಡಗಳು ಮರೆಯಾದ ಕಾರಣ ಜನರಿಗೆ ಸೂರ್ಯ ಗ್ರಹಣ ದರ್ಶನ ಭಾಗ್ಯ ಸಿಕ್ಕಿತು.

    ಆಗೊಮ್ಮೆ ಹೀಗೊಮ್ಮೆ ಎಂದು ಮೋಡಗಳು ಮರೆಯಾಗುತ್ತಿದ್ದಂತೆ ಜನರಿಗೆ ಸೂರ್ಯ ಗ್ರಹಣ ಭಾಗ್ಯ ಕಣ್ತುಂಬಿಕೊಳ್ಳುವ ಅವಕಾಶ ಸಿಗುತ್ತಿತ್ತು. ಮೋಡಗಳ ಆಟ ನೋಡುಗರಿಗೆ ಇರುಸು ಮುರುಸಾದರೂ ಆಗಾಗ ಮೋಡಗಳ ಮರೆಯಲ್ಲಿ ನಾನು ಇರುವೆ ಎಂದು ಬಂದು ಹೋಗುತ್ತಿದ್ದ ಸೂರ್ಯಗ್ರಹಣದ ಭಾಗ್ಯ ನೋಡುಗರ ಮನ ಸಂತಸಗೊಳಿಸಿತ್ತು.

    ಹಲವು ವರ್ಷಗಳ ನಂತರ ಸೂರ್ಯಗ್ರಹಣ ಕಂಡ ಜಿಲ್ಲೆಯ ಜನರಗೆ ಕೊನೆಗೂ ಮೋಡಗಳ ಮರೆಯಿಂದ ಸೂರ್ಯ ಗ್ರಹಣದ ದರ್ಶನ ಭಾಗ್ಯವಂತೂ ದಕ್ಕಿದೆ.

  • ಗ್ರಹಣ ಆರಂಭವಾಗುತ್ತಿದ್ದಂತೆ ಹೋಮ-ಹವನ ಆರಂಭ

    ಗ್ರಹಣ ಆರಂಭವಾಗುತ್ತಿದ್ದಂತೆ ಹೋಮ-ಹವನ ಆರಂಭ

    ಚಿಕ್ಕಬಳ್ಳಾಪುರ: ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಮಾಡಿದರೆ, ಚಿಕ್ಕಬಳ್ಳಾಪುರ ನಗರದ ಮರಳುಸಿದ್ದೇಶ್ವರ ಸ್ವಾಮಿ ದೇವಾಲಯದ ಬಾಗಿಲು ಎಂದಿನಂತೆ ತೆರೆದಿದೆ.

    ಗ್ರಹಣ ಸ್ಪರ್ಶ ಕಾಲ ಆರಂಭವಾಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಗ್ರಹಣ ದೋಷ ನಿವಾರಣಾ ಹೋಮ ನೆರವೇರಿಸಲಾಗುತ್ತಿದೆ. ಹೋಮ ಹವನದಲ್ಲಿ ಭಕ್ತರು ಪಾಲ್ಗೊಂಡು ಹೋಮ ಕುಂಡಕ್ಕೆ ದವಸಧಾನ್ಯ, ನವಧಾನ್ಯಗಳನ್ನ ಅರ್ಪಣೆ ಮಾಡಿ ಗ್ರಹಣ ದೋಷ ನಿವಾರಣೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

    ಗ್ರಹಣದ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚಿ ದೇವರಿಗೆ ದಿಗ್ಬಂಧನ ವಿಧಿಸಿ ಗ್ರಹಣ ಸಮಯದ ನಂತರ ಎಲ್ಲಾ ದೇವಾಲಯಗಳ ಬಾಗಿಲು ತೆರೆದರೆ ಈ ದೇವಾಲಯದಲ್ಲಿ ಮಾತ್ರ ಗ್ರಹಣ ಸಮಯದಲ್ಲೇ ಹೋಮ-ಹವನ, ಪೂಜೆ ಕೈಂಕರ್ಯಗಳು ನೆರವೇರುತ್ತಿದ್ದು ಗ್ರಹಣ ಮೋಕ್ಷ ಕಾಲದ ನಂತರ ದೇವಾಲಯದ ಬಾಗಿಲು ಬಂದ್ ಆಗಲಿದೆ.

    ಈಶ್ವರನಿಗೆ ಗ್ರಹಣದ ಎಫೆಕ್ಟ್ ಇರುವುದಿಲ್ಲ ಹಾಗೂ ಗ್ರಹಣದ ಸಮಯದಲ್ಲಿ ಹೋಮ ಹವನ ಮಾಡುವುದರಿಂದ ಗ್ರಹಣ ದೋಷ ನಿವಾರಣೆಯಾಗಲಿದೆ ಎಂದು ದೇವಾಲಯದ ಅರ್ಚಕರು ಹೇಳುತ್ತಾರೆ.

  • ಸೂರ್ಯ ಗ್ರಹಣ – ನಾಳೆ ಕೊಡಗಿನಲ್ಲಿ ದೇವಾಲಯಗಳು ಬಂದ್

    ಸೂರ್ಯ ಗ್ರಹಣ – ನಾಳೆ ಕೊಡಗಿನಲ್ಲಿ ದೇವಾಲಯಗಳು ಬಂದ್

    ಮಡಿಕೇರಿ: ಗುರುವಾರ ಖಗೋಳದಲ್ಲಿ ನಡೆಯಲಿರುವ ಬೆಳಕು- ನೆರಳಿನ ಆಟದ ಅದ್ಭುತ ಕ್ಷಣಗಳಿಗೆ ವಿವಿಧೆಡೆ ಸಿದ್ಧತೆ ನಡೆಯುತ್ತಿದ್ದು, ಖಗೋಳ ಶಾಸ್ತ್ರಜ್ಞರಿಗೆ ವಿಶೇಷ ದಿನ.

    2019ರಲ್ಲಿ ನಡೆಯುತ್ತಿರುವ ಕೊನೆಯ ಸೂರ್ಯಗ್ರಹಣ ಇದಾಗಿದ್ದು, ಮತ್ತೆ ಇಂತಹದ್ದೊಂದು ಸೂರ್ಯಗ್ರಹಣ ಸಂಭವಿಸಲು 2064ರವರೆಗೆ ಕಾಯಬೇಕು. ಗುರುವಾರ ಸಂಭವಿಸಲಿರುವ ಸೂರ್ಯಗ್ರಹಣ ಕೊಡಗು, ಕೇರಳ ಗಡಿಭಾಗವಾದ ಕುಟ್ಟ ಸಮೀಪದ ಕಾಯಿಮಾನಿಯಲ್ಲಿ ಶೇ. ನೂರರಷ್ಟು ಸಂಭವಿಸಲಿದೆ. ಹೀಗಾಗಿ ಪುಣೆಯ ಮಿಥಿ, ಕೆಆರ್‌ವಿಪಿ ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಗ್ರಹಣ ವೀಕ್ಷಣೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಯಿಮಾನಿಯ ಗ್ರಾಮದ ಗದ್ದೆಯೊಂದರಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

    ಟಿಲಿಸ್ಕೋಪ್‍ಗಳನ್ನು ಬಳಸಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ವೀಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಾಲಯಗಳು ಬಂದ್ ಆಗಲಿವೆ. ತಲಕಾವೇರಿ, ಭಾಗಮಂಡಲ ಮತ್ತು ಓಂಕಾರೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಇಂದು ಸಂಜೆಗೆ ಪೂಜಾ ಕೈಂಕರ್ಯಗಳನ್ನು ಪೂರೈಸಲಿದ್ದು, ನಾಳೆ ಬಂದ್ ಆಗಲಿವೆ. ಹೀಗಾಗಿ ಭಕ್ತರಿಗೆ ದೇವರ ದರ್ಶನಕ್ಕೂ ಅವಕಾಶ ಇರುವುದಿಲ್ಲ.

    ಭಾಗಮಂಡಲ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ಮಹಾಮಂಗಳಾರತಿ ನಡೆಯಲಿದ್ದು, ಬಳಿಕ ಬಂದ್ ಆಗಲಿವೆ. ಅಲ್ಲದೆ ಪಿಂಡ ಪ್ರಧಾನಕ್ಕೂ ಅವಕಾಶ ಇರುವುದಿಲ್ಲ. ಹಾಗೆ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲೂ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇವಾಲಯ ಬಂದ್ ಆಗಲಿದೆ. ಗುರುವಾರ ಆಕಾಶದಲ್ಲಿ ಬೆಳಕು-ನೆರಳಿನ ಚಿತ್ತಾರದ ಅದ್ಬುತ ಕ್ಷಣಗಳು ಜರುಗಲಿದ್ದು, ಇದನ್ನು ಖಗೋಳಶಾಸ್ತ್ರ ತಜ್ಞರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.

  • ಕೇತುಗ್ರಸ್ತ ಸೂರ್ಯಗ್ರಹಣ ಯಾವ ರಾಶಿಗೆ ಶುಭ, ಅಶುಭ?

    ಕೇತುಗ್ರಸ್ತ ಸೂರ್ಯಗ್ರಹಣ ಯಾವ ರಾಶಿಗೆ ಶುಭ, ಅಶುಭ?

    ಗುರುವಾರ ಬೆಳಗ್ಗೆ 8:04ಕ್ಕೆ ಕೇತುಗ್ರಸ್ತ ಸೂರ್ಯಗ್ರಹಣ ಆರಂಭವಾಗಲಿದ್ದು, ಬೆಳಗ್ಗೆ 11:04 ಗಂಟೆಗೆ ಮುಕ್ತಾಯವಾಗುತ್ತದೆ. ಈ ಬಾರಿ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಗ್ರಹಣವಾಗುತ್ತದೆ. ಹೀಗಾಗಿ ಯಾವ ರಾಶಿಯವರಿಗೆ ಶುಭ ಫಲ, ಯಾವ ರಾಶಿಯವರಿಗೆ ಅಶುಭ ಫಲ ಎನ್ನುವ ಬಗ್ಗೆ ಇಲ್ಲಿ ಮಾಃಇತಿ ನೀಡಲಾಗಿದೆ.

    ಕೇತುಗ್ರಸ್ತ ಸೂರ್ಯಗ್ರಹಣ ಕಾಲ:
    ಸೂರ್ಯಗ್ರಹಣ ಸ್ಪರ್ಶಕಾಲ – ಬೆಳಗ್ಗೆ 8:04 ಗಂಟೆ
    ಸೂರ್ಯಗ್ರಹಣ ಮಧ್ಯಕಾಲ – ಬೆಳಗ್ಗೆ 9:26 ಗಂಟೆ
    ಸೂರ್ಯಗ್ರಹಣ ಮೋಕ್ಷಕಾಲ- ಬೆಳಗ್ಗೆ 11:04 ಗಂಟೆ
    ಗ್ರಹಣ ನಕ್ಷತ್ರ – ಮೂಲ
    ಗ್ರಹಣ ಸಮಯ – 2 ಗಂಟೆ 59 ನಿಮಿಷ

    ಗ್ರಹಣ ದೋಷವಿರುವ ರಾಶಿಗಳು ಯಾವುದು?
    ಧನಸ್ಸು, ಮಕರ, ವೃಶ್ಚಿಕ, ವೃಷಭ, ಕರ್ಕಟಕ. 12 ರಾಶಿಗಳಲ್ಲಿ ಈ 5 ರಾಶಿಗಳಿಗೆ ಕೇತುಗ್ರಸ್ತ ಸೂರ್ಯಗ್ರಹಣದಿಂದ ದೋಷವಿದೆ.

    ಗ್ರಹಣ ದೋಷವಿರುವ ನಕ್ಷತ್ರಗಳು ಯಾವುದು?
    ಮೂಲ, ಮಖ, ಅಶ್ವಿನಿ, ಜೇಷ್ಠ, ಪೂರ್ವಾಷಾಢ ಈ ಐದು ನಕ್ಷತ್ರಗಳಿಗೆ ಕೇತುಗ್ರಸ್ತ ಸೂರ್ಯಗ್ರಹಣದಿಂದ ದೋಷವಿದೆ.

    ಯಾವ ರಾಶಿಗೆ ಏನು ಫಲ? ಪರಿಹಾರ ಏನು?
    ಮೇಷ – ಗ್ರಹಣದ ನಂತರ ಶುಭಫಲ ಸಾಧ್ಯತೆ, ಆರೋಗ್ಯದಲ್ಲಿ ಸುಧಾರಣೆ, ತೀರ್ಥಯಾತ್ರೆ, ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಆದರೆ ದಾಂಪತ್ಯದಲ್ಲಿ ಮನಸ್ತಾಪ, ಎಚ್ಚರವಿರಲಿ.
    ಪರಿಹಾರ – ಹುರುಳಿಕಾಳು ದಾನ ಮಾಡುವುದು, ಶಿವಕವಚ, ದೇವಿ ಭುಜಂಗ ಸ್ತೋತ್ರ ಪಠಿಸುವುದು ಉತ್ತಮ.

    ವೃಷಭ – ಮನೆಯಲ್ಲಿ ಅಶಾಂತಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಹೆಚ್ಚಿದೆ. ಜನವರಿ ನಂತರ ಭೂ ವಿಚಾರದಲ್ಲಿ ಹೆಚ್ಚಿನ ಲಾಭ ಸಾಧ್ಯತೆಯಿದೆ. ಆದರೆ ವ್ಯಾಪಾರದಲ್ಲಿ ಎಚ್ಚರ ವಹಿಸುವುದು ಉತ್ತಮ.
    ಪರಿಹಾರ – ಲಕ್ಷ್ಮಿನರಸಿಂಹಸ್ವಾಮಿ ದೇಗುಲದಲ್ಲಿ ಬೆಲ್ಲದ ದೀಪ ಹಚ್ಚುವುದು, ದುರ್ಗಾ ಸಪ್ತಶತಿ ಪಾರಾಯಣ ಮಾಡುವುದರಿಮದ ದೋಷಕ್ಕೆ ಪರಿಹಾರ ಸಿಗುತ್ತದೆ.

    ಮಿಥುನ – ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ, ಕೆಲಸದಲ್ಲಿ ಅಡಚಣೆಯಿಂದಾಗಿ ಸ್ಥಾನಪಲ್ಲಟವಾಗಬಹುದು. ಐಶಾರಾಮಿ ವಸ್ತುಗಳ ಖರೀದಿ, ಮನಸ್ಸಿಗೆ ಚಿಂತೆ, ಹಣಕಾಸಿನ ತೊಂದರೆ, ಸರ್ಕಾರಿ ಕೆಲಸಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ.
    ಪರಿಹಾರ – ದೇವಿ ದೇಗುಲದಲ್ಲಿ ಹಾಗಲಕಾಯಿ ದೀಪ ಹಚ್ಚುವುದು, ಕಾಳಹಸ್ತಿ ದೇಗುಲ ಭೇಟಿ, ದರ್ಶನ ಪಡೆದರೆ ದೋಷ ಪರಿಹಾರವಾಗುತ್ತದೆ.

    ಕಟಕ – ಹಲವು ದಿನಗಳ ಪ್ರಯತ್ನಕ್ಕೆ ತಕ್ಕ ಫಲ, ಕೋರ್ಟ್ ವ್ಯಾಜ್ಯಗಳಲ್ಲಿ ಜಯ, ಅವಿವಾಹಿತರಿಗೆ ವಿವಾಹ ಭಾಗ್ಯ, ಮದುವೆ ವಿಚಾರದಲ್ಲಿ ಹೆಚ್ಚಿನ ನಿಗಾ ಅವಶ್ಯಕವಾಗಿದೆ. ಅಲ್ಲದೆ ಹೊಸ ನಿವೇಶನ, ಆಸ್ತಿ ಖರೀದಿ ಯೋಗವಿದ್ದು, ಸಾರ್ವಜನಿಕ ಬದುಕಿನಲ್ಲಿ ಗೌರವಪ್ರಾಪ್ತಿ ಆಗುತ್ತದೆ.
    ಪರಿಹಾರ – ದತ್ತಾತ್ರೇಯರ ಆರಾಧನೆ, ಅಪಸ್ಮಾರ ದಕ್ಷಿಣಾಮೂರ್ತಿ ಮಂತ್ರ ಜಪ, ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಒಳಿತು.

    ಸಿಂಹ – ಉದ್ಯೋಗದಲ್ಲಿ ತಾತ್ಕಾಲಿಕ ಬದಲಾವಣೆ, ಮನೆಯಲ್ಲಿನ ಅಶಾಂತಿಯಿಂದ ಮಾನಸಿಕ ಚಿಂತೆ, ಜನವರಿ ನಂತರ ಹೊಸ ಕೆಲಸ ಆರಂಭಿಸುವುದು ಸೂಕ್ತ, ಕೋರ್ಟ್ ವ್ಯಾಜ್ಯಗಳಲ್ಲಿ ತಾತ್ಕಾಲಿಕ ಹಿನ್ನಡೆ, ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ, ಬಂಧುಮಿತ್ರ, ಸಹೋದರ ಸಂಬಂಧ ಗಟ್ಟಿಯಾಗುವುದು, ಸೋದರ ಸಂಬಂಧಿಕರಿಂದ ನೆರವು ಪಡೆಯುವಿರಿ.
    ಪರಿಹಾರ – ಶಿವನಿಗೆ ರುದ್ರಾಭಿಷೇಕ, ಲಕ್ಷ್ಮಿಹಯಗ್ರೀವ ದರ್ಶನ ಪಡಿಯುವುದರಿಂದ ಶುಭವಾಗುತ್ತದೆ.

    ಕನ್ಯಾ – ತಂದೆ, ತಾಯಿ ಆರೋಗ್ಯದಲ್ಲಿ ಏರುಪೇರು, ಮಾನಸಿಕ ಚಿಂತೆ, ವ್ಯವಹಾರದಲ್ಲಿ ಹೆಚ್ಚಿನ ಲಾಭ, 5 ತಿಂಗಳ ಬಳಿಕ ಹೆಚ್ಚಿನ ಶುಭಫಲ ಲಭ್ಯವಾಗುತ್ತದೆ.
    ಪರಿಹಾರ – ಮೃತ್ಯುಂಜಯ ಜಪ, ಶಿವಾರಾಧನೆ ಮಾಡುವುದು ಒಳಿತು.

    ತುಲಾ – ಆರೋಗ್ಯದಲ್ಲಿ ಏರುಪೇರು, ಭೂ ವಿಚಾರ, ಸಾರಿಗೆ ವ್ಯವಹಾರದಲ್ಲಿ ಲಾಭ, ಮನೆ, ನಿವೇಶನ ಖರೀದಿ ಯೋಗ, ಮನೆಯಲ್ಲಿ ಸಂತೋಷ, ಹೊಸ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುವಿರಿ.
    ಪರಿಹಾರ – ದುರ್ಗಾ ಸಪ್ತಶತಿ ಪಾರಾಯಣ, ಶಿವನಿಗೆ ರುದ್ರಾಭಿಷೇಕ ಮಾಡುವುದರಿಮದ ಒಳಿತಾಗುತ್ತದೆ.

    ವೃಶ್ಚಿಕ – ವಾಹನ ಸವಾರರು ಹೆಚ್ಚಿನ ಜಾಗ್ರತೆ ವಹಿಸಬೇಕು, ಅನವಶ್ಯಕ ಖರ್ಚುಗಳು, ಬಂಧುಮಿತ್ರರು, ಮನೆಯವರೊಡನೆ ವೈಮನಸ್ಯ ಸಾಧ್ಯತೆ, ಮೇಲಧಿಕಾರಿಗಳಿಂದ ಸಾಕಷ್ಟು ತೊಂದರೆ ಅನುಭವಿಸುವಿರಿ.
    ಪರಿಹಾರ – ಲಕ್ಷ್ಮಿನರಸಿಂಹ ಸ್ವಾಮಿ ಆರಾಧನೆ, ಕುಜಶಾಂತಿ ಮಾಡಿಸುವುದರಿಂದ ಒಳ್ಳೆಯದಾಗುತ್ತದೆ.

    ಧನಸ್ಸು – ಕೆಲಸದಲ್ಲಿ ನಾನಾ ರೀತಿಯ ಅಡೆತಡೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ ಸಂಭವ, ಕೆಲವು ಕೆಲಸಗಳು ಮುಂದೂಡುವುದು ಸೂಕ್ತ, ಆರೋಗ್ಯದ ಕಡೆ ಬಹಳಷ್ಟು ಗಮನ ಅವಶ್ಯವಾಗಿದೆ.
    ಪರಿಹಾರ – ದತ್ತಾತ್ರೇಯರ ಆರಾಧನೆ, ರಾಘವೇಂದ್ರ ಸ್ವಾಮಿಗಳ ದರ್ಶನದಿಂದ ಹೆಚ್ಚಿನ ಶುಭವಾಗಲಿದೆ.

    ಮಕರ – ಮಕ್ಕಳಿಂದ ನಿಮಗೆ ಮಾನಸಿಕ ತೊಂದರೆ, ಕೆಲಸಕಾರ್ಯಗಳಲ್ಲಿ ಅಧಿಕ ಒತ್ತಡ ಸಾಧ್ಯತೆ, ಮಾನಸಿಕ ಚಿಂತೆ ಹೆಚ್ಚಳ, ವಾಹನ ಸವಾರರು ಎಚ್ಚರದಿಂದಿರಬೇಕು, ದೂರ ಪ್ರಯಾಣದಲ್ಲಿ ಹಣಕಾಸಿನ ಬಗ್ಗೆ ನಿಗಾ ಇರಲಿ, ಚೋರರ ಭಯ ನಿಮ್ಮನ್ನು ಕಾಡಲಿದೆ.
    ಪರಿಹಾರ – ಸಮುದ್ರ ಸ್ನಾನ ಮಾಡುವುದು, ಶಿವನ ದರ್ಶನದಿಂದ ಆರ್ಥಿಕ ಪರಿಸ್ಥಿತಿ ವೃದ್ಧಿಯಾಗಲಿದೆ.

    ಕುಂಭ – ಮನೆ, ಭೂ ಖರೀದಿ ಸಂಭವ, ಹೊಸ ಕೆಲಸಗಳು ಹುಡುಕಿ ಬರಲಿದೆ, ಉನ್ನತ ಸ್ಥಾನ ಅಧಿಕಾರ ಪ್ರಾಪ್ತಿ, ವಿದೇಶ ಪ್ರಯಾಣದ ಯೋಗ, ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರಲಿದೆ.
    ಪರಿಹಾರ – ರಾಹು ಶಾಂತಿ ಮಾಡಿಸುವುದು, ದುರ್ಗಾ ಸಪ್ತಶತಿ ಪಾರಾಯಣ, ಶಿವನಿಗೆ ರುದ್ರಾಭಿಷೇಕ, ದುರ್ಗಾ ದೀಪ ನಮಸ್ಕಾರದಿಂದ ಲಾಭ ಗಳಿಸುವಿರಿ.

    ಮೀನ – ಸರ್ಕಾರಿ, ಇತ್ಯಾದಿ ಕೆಲಸಗಳಿಗೆ ಪ್ರಯತ್ನ ಪಟ್ಟಿದ್ದರೆ ಶುಭ ಸುದ್ದಿ, ಸರ್ಕಾರಿ ಕೆಲಸದಲ್ಲಿರುವವರಿಗೆ ಬಡ್ತಿ ಅವಕಾಶ, ಮಕ್ಕಳಿಂದ ಸಂತೋಷ ಸಮಾಜದಲ್ಲಿ ಸನ್ಮಾನಗಳು, ಗೌರವ ಪ್ರಾಪ್ತಿ, ಹೊಸ ಆಭರಣ ಖರೀದಿ ಮಾಡುವಿರಿ.
    ಪರಿಹಾರ – ಶಿವನ ದರ್ಶನ ಪಡೆಯುವುದರಿಂದ ಶುಭವಾಗಲಿದೆ.