ನವದೆಹಲಿ: ತೆಲಂಗಾಣದಲ್ಲಿ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಅತ್ಯಾಚಾರ ಮಾಡಿ ನಂತರ ಸುಟ್ಟು ಹಾಕಿದ ಅಮಾನವೀಯ ಘಟನೆ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡಿದ್ದು, ಸಮಾಜವಾಗಿ ನಾವು ಈ ರೀತಿಯ ದುರಂತಗಳಿಗೆ ಅಂತ್ಯವಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಘಟನೆಯನ್ನು ಖಂಡಿಸಿದ್ದಾರೆ.
ನವೆಂಬರ್ 27 ರಂದು 26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಬೈಕ್ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ, ಮೂವರು ಕ್ಲೀನರ್ ಗಳು ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿದ್ದರು.
ಪ್ರಿಯಾಂಕ ಅವರ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿದ್ದು, ಭಾರತದದ್ಯಾಂತ ಸೆಲೆಬ್ರಿಟಿಗಳು ಸೇರಿದಂತೆ ಸಾರ್ವಜನಿಕರು ಈ ವಿಚಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಈಗ ಈ ವಿಚಾರವನ್ನು ಖಂಡಿಸಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ಅವರು, ಹೈದರಾಬಾದ್‍ನಲ್ಲಿ ನಡೆದದ್ದು ಸಂಪೂರ್ಣವಾಗಿ ನಾಚಿಕೆಗೇಡಿನ ಸಂಗತಿ. ಸಮಾಜವಾಗಿ ನಾವು ಅಧಿಕಾರ ವಹಿಸಿಕೊಂಡು ಈ ಅಮಾನವೀಯ ದುರಂತಗಳಿಗೆ ಅಂತ್ಯ ಹಾಡುವ ಸಮಯ ಇದು ಎಂದು ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್‍ನಲ್ಲಿ ಪ್ರಿಯಾಂಕಾರೆಡ್ಡಿ ಆಗಿರಲಿ, ತಮಿಳುನಾಡಿನಲ್ಲಿ ರೋಜಾ ಆಗಿರಲಿ ಅಥವಾ ರಾಂಚಿಯಲ್ಲಿ ಕಾನೂನು ವಿದ್ಯಾರ್ಥಿ ಸಾಮೂಹಿಕ ಅತ್ಯಾಚಾರವಾಗಿರಲಿಲ್ಲ. ಈ ರೀತಿಯ ಕೃತ್ಯಗಳಿಂದ ನಾವು ಸಮಾಜವಾಗಿ ಮಾನವಿಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ತೋರುತ್ತದೆ. ನಿರ್ಭಯಾ ಪ್ರಕರಣ ನಡೆದು 7 ವರ್ಷಗಳು ಕಳೆದಿದೆ. ಆದರೆ ನಮ್ಮ ನೈತಿಕತೆ ಬದಲಾಗಿಲ್ಲ. ಇದನ್ನು ನಿಲ್ಲಿಸಲು ನಮಗೆ ಕಠಿಣ ಕಾನೂನುಗಳು ಬೇಕಾಗುತ್ತವೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಚಾರವಾಗಿ ನಟಿ ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದು, ಅಮಾಯಕಿ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ. ಇದು ಇಡೀ ಮನುಕುಲವನ್ನೇ ಕದಲಿಸುವ ವಿಚಾರ. ಪೈಶಾಚಿಕ ಕೃತ್ಯವೆಸಗಿ ಪ್ರಿಯಾಂಕಾಳನ್ನು ಕೊಂದ ಪಾಪಿಗಳನ್ನು ಪ್ರಾಣಿಗಳಿಗೆ ಹೋಲಿಸಿದರೆ ಅವು ಕೂಡ ನಾಚಿಕೆ ಪಟ್ಟುಕೊಳ್ಳುತ್ತವೆ ಎಂದಿದ್ದಾರೆ. ಅಲ್ಲದೆ ಈ ಸಮಾಜದಲ್ಲಿ ಮಹಿಳೆಯಾಗಿ ಇರುವುದೇ ಅಪರಾಧನಾ ಎಂದು ಪ್ರಶ್ನಿಸಿದ್ದಾರೆ. ಶಿಕ್ಷೆ ಆಗೋವರೆಗೂ ಹೋರಾಟ ನಡೆಸೋಣ ಎಂದು ಪಶುವೈದ್ಯೆಯ ದಾರುಣ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.
ರಶ್ಮಿಕಾ ಮಂದಣ್ಣ ಕೂಡ ತಮ್ಮ ಟ್ವಿಟ್ಟರಿನಲ್ಲಿ, ಸುರಕ್ಷತೆ ಎಲ್ಲಿದೆ? ಕೆಟ್ಟ ವಿಷಯಗಳು ಹಾಗೂ ಹಿಂಸಾಚಾರವನ್ನು ನಿರ್ಲಕ್ಷ್ಯಿಸುವುದರಿಂದ ಪರಿಹಾರ ಸಿಗುವುದಿಲ್ಲ. ನಿಮಗೆ ಅಸುರಕ್ಷತೆ ಎನಿಸಿದಾಗ ದಯವಿಟ್ಟು ಸಹಾಯಕ್ಕಾಗಿ ತಲುಪಿ. ಹಾಗೆಯೇ ನಿಮ್ಮ ಸಹಾಯದ ಅಗತ್ಯ ಇರುವವರ ಜೊತೆ ಇರಿ ಎಂದು ತೆಲಂಗಾಣ ರಾಜ್ಯದ ಪ್ರತಿ ಜಿಲ್ಲೆಯ ಪೊಲೀಸ್ ಠಾಣೆ ಫೋನ್ ನಂಬರ್ ಹಾಗೂ ಇಮೇಲ್ ಐಡಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
https://www.instagram.com/p/B5cZd–HF3p/?utm_source=ig_embed
ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಲಾರಿ ಡ್ರೈವರ್ ಆರೀಫ್ ಮತ್ತು ಇನ್ನುಳಿದ ಮೂವರು ಕ್ಲೀನರ್ ಗಳಾದ ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂಟ ಚೆನ್ನಾಕೇಶಾವುಲು ಅನ್ನು ಪೊಲೀಸ್ ಅರೆಸ್ಟ್ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದೆ.