– ಸಮಾನತೆ, ಅನ್ವೇಷಣೆ, ಸಂವಿಧಾನ, ಸಂಭಾಷಣೆ ಕಾರ್ಯಕ್ರಮ
– ಅತಿಥಿಗಳಾಗಲಿದ್ದಾರೆ ಕನ್ಹಯ್ಯ ಕುಮಾರ್, ಓವೈಸಿ
– ಪ್ರಿಯಾಂಕ್ ಖರ್ಗೆ ವಿರುದ್ಧ ಭಾರೀ ಟೀಕೆ
ಬೆಂಗಳೂರು: ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆಯನ್ನು ಘೋಷಣೆ ಮಾಡಲಾಗಿದೆ. ಆದರೆ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.
ಸಮಾಜ ಕಲ್ಯಾಣ ಇಲಾಖೆ ಎರಡು ದಿನಗಳ ಕಾಲ ಸಮಾನತೆ ಅನ್ವೇಷಣೆ ಸಂವಿಧಾನ ಸಂಭಾಷಣೆ ಕಾರ್ಯಕ್ರಮಕ್ಕೆ ಬೆಂಗಳೂರಿನ ಅಶೋಕ ಹೋಟೆಲ್ ನಲ್ಲಿ ಇಂದು ಚಾಲನೆ ಸಿಕ್ಕಿದೆ. ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಲಿಂಗೈಕ್ಯರಾದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಒಂದು ನಿಮಿಷ ಶ್ರೀಗಳಿಗೆ ಮೌನಾಚರಣೆ ಸಲ್ಲಿಸಿದ್ದಾರೆ.

ಸಂವಿಧಾನದ ಸಂವಾದದ ಸಭೆಗೆ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಹಾಜರಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಕೇಂದ್ರ ಸಚಿವೆ ಅಂಬಿಕಾ ಸೋನಿ ಸೇರಿ ಹಲವರು ಭಾಗಿಯಾಗಿದ್ದಾರೆ.
ಇತ್ತ ಅಶೋಕ ಹೊಟೇಲ್ ಮುಂದೆ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಕ್ಕೆ ಕರುನಾಡ ಸೇವಕರು ಸಂಘಟನೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕಾರ್ಯಕ್ರಮವನ್ನು ರದ್ದು ಮಾಡುವಂತೆ ಆಗ್ರಹಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.
ಕನ್ನಯ್ಯ ಕುಮಾರ್, ಓವೈಸಿ ಕಾರ್ಯಕ್ರಮಕ್ಕೆ ಆಗಮನ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಬಿಜೆಪಿ ಗೋ ಮಧುಸೂದನ್ ವಾಪಸ್ ಆಗಿದ್ದಾರೆ. ಆದರೆ ಓವೈಸಿ ಆಗಮನಕ್ಕೆ ಕರುನಾಡ ಸೇನೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ರೀ ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಾಡಬಾರದಿತ್ತು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕರುನಾಡ ಸೇವಕರು ಮತ್ತು ಸಂಘಟನೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಅಶೋಕ ಹೊಟೇಲ್ ಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನೂ ಸಮಾಜ ಕಲ್ಯಾಣ ಇಲಾಖೆ ಕಾರ್ಯಕ್ರಮಕ್ಕೆ ಬಿಜೆಪಿ ಬಹಿಷ್ಕಾರ ಸೂಚಿಸಿದೆ.
ಗೋ ಮಧುಸೂದನ್, ಲೆಹರ್ ಸಿಂಗ್ ಕಾರ್ಯಕ್ರಮದಿಂದ ವಾಪಸ್ಸಾಗಿದ್ದು, ಸರ್ಕಾರದ ವಿರುದ್ಧ ಇಬ್ಬರು ವಾಗ್ದಾಳಿ ಮಾಡಿದ್ದಾರೆ. ದೇಶದ ವಿರುದ್ಧ ಘೋಷಣೆ ಕೂಗಿದವರನ್ನ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಓವೈಸಿಯಂತಹ ದೇಶ ವಿರೋಧಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ. ಸಿದ್ದಗಂಗಾ ಶ್ರೀಗಳ ಅಂತಿಮ ಯಾತ್ರೆ ನಡೆಯುತ್ತಿದ್ದರೂ ಸರ್ಕಾರ ಈ ಕಾರ್ಯಕ್ರಮವನ್ನು ಮಾಡುತ್ತಿದೆ. ಇದು ಸರಿಯಾದ ಪದ್ಧತಿ ಅಲ್ಲ ಎಂದು ಗೋ ಮಧುಸೂದನ್ ಹೇಳಿದರು.
ಲೆಹರ್ ಸಿಂಗ್ ಕಿಡಿ: ಸಂವಿಧಾನದ ಬಗ್ಗೆ ಗೊತ್ತಿಲ್ಲದ ಜುಜುಬಿಗಳನ್ನ ಕರೆದುಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಹಣ ಮಾಡಲು ಈ ಕಾರ್ಯಕ್ರಮವನ್ನು ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಒಂದು ಸ್ಕ್ಯಾಮ್ ಆಗಿದ್ದು, ನಾವು ಆರ್ ಟಿಐನಲ್ಲಿ ಮಾಹಿತಿ ಪಡೆದು ಈ ಹಗರಣ ಹೊರಗೆ ಹಾಕುತ್ತೇವೆ. ಸಂವಿಧಾನ ಗೊತ್ತಿಲ್ಲದವರು ಕಾರ್ಯಕ್ರಮ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸರ್ಕಾರ ತನಿಖೆ ನಡೆಯಬೇಕು. ನಾಡಿನ ಜನ ಶೋಕದಲ್ಲಿ ಇದ್ರೆ, ಸಚಿವರು ಕಾರ್ಯಕ್ರಮ ಮಾಡಿ ಮಜಾ ಮಾಡುತ್ತಿದ್ದಾರೆ. ಸರ್ಕಾರದ ಈ ವರ್ತನೆಗೆ ಯಾವ ಪದ ಬಳಕೆ ಮಾಡಬೇಕು ಗೊತ್ತಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಪರಿಷತ್ ಸದಸ್ಯ ಲೆಹರ್ ಸಿಂಗ್ ವಾಗ್ದಾಳಿ ಮಾಡಿದ್ದಾರೆ.

ಕಾರ್ಯಕ್ರಮ ಮಾಡಲು ಇಂತಹ ಫೈವ್ ಸ್ಟಾರ್ ಹೋಟೆಲ್ ಬೇಕಾ? ಅಂಬೇಡ್ಕರ್ ಭವನ, ಇನ್ನಿತರ ಸರ್ಕಾರದ ಸ್ಥಳ ಇದ್ದರೂ ಇಂತಹ ಕಡೆ ಕಾರ್ಯಕ್ರಮ ಮಾಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. ಅವರಿಗೆ ಕೊಡುವುದಕ್ಕೆ ಹಣ ಇಲ್ಲ. ಇಂತಹ ಕಾರ್ಯಕ್ರಮ ಮಾಡಿ ದುಡ್ಡು ಹೊಡೆಯೋದು ಸಚಿವರ ಪ್ಲಾನ್. ರೆಸಾರ್ಟ್ ನಲ್ಲಿ ಹೊಡೆದಾಡಿಕೊಂಡ ಕಾಂಗ್ರೆಸ್ ನವರು ಸಂವಿಧಾನದ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೆಹರ್ ಸಿಂಗ್ ಕಿಡಿಕಾರಿದರು.
ಕನ್ನಯ್ಯ, ಓವೈಸಿ ಕಾರ್ಯಕ್ರಮ ರದ್ದಿಲ್ಲ ಏಕೆ? ಸಮಾಜ ಕಲ್ಯಾಣ ಎಂಬ ಈ ಇಲಾಖೆಯ ಅಜೆಂಡಾ ಏನು? ಎಂದು ಬಿಜಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ.
https://www.youtube.com/watch?v=8iVnMTXiYcI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv