Tag: Social media head

  • ಸಾಮಾಜಿಕ ಜಾಲತಾಣದ ಜವಾಬ್ದಾರಿ ನೀಡಲು ಹೊಸ ತಂಡಕ್ಕೆ ‘ಕೈ’ ಮಣೆ- ರಮ್ಯಾ ಔಟ್?

    ಸಾಮಾಜಿಕ ಜಾಲತಾಣದ ಜವಾಬ್ದಾರಿ ನೀಡಲು ಹೊಸ ತಂಡಕ್ಕೆ ‘ಕೈ’ ಮಣೆ- ರಮ್ಯಾ ಔಟ್?

    – ಕಡೆಗೂ 8 ಕೋಟಿ ರೂ. ಲೆಕ್ಕ ಕೊಡಲಿಲ್ಲ ರಮ್ಯಾ!

    ನವದೆಹಲಿ: ಪಕ್ಷದ ಸಾಮಾಜಿಕ ಜಾಲತಾಣದ ಜವಾಬ್ದಾರಿ ನೀಡಲು ಕಾಂಗ್ರೆಸ್ ಹೈಕಮಾಂಡ್ ಹೊಸ ತಂಡಕ್ಕೆ ಮಣೆ ಹಾಕಲು ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅಲೆಯಿಂದಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದರಿಂದಾಗಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಈಗ ಪಕ್ಷದ ಸಾಮಾಜಿಕ ಜಾಲತಾಣ ತಂಡವನ್ನು ಬಲಪಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಮಾಜಿ ಸಂಸದೆ ರಮ್ಯಾ ಅವರನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸ್ಥಾನದಿಂದ ಕೈಬಿಡಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಕಾಂಗ್ರೆಸ್ ಹೈಕಮಾಂಡ್ ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ಯುವ ಜನತೆ ಹಾಗೂ ಮತದಾರರನ್ನು ಪಕ್ಷಕ್ಕೆ ಸೇರುವಂತೆ ಪ್ರೋತ್ಸಾಹಿಸಲು ಸಕಲ ಸಿದ್ಧತೆ ನಡೆದಿದೆ. ಆದರೆ ಇದು ಸದ್ಯವಿರುವ ಸಾಮಾಜಿಕ ಜಾಲತಾಣ ತಂಡದಿಂದ ಸಾಧ್ಯವಿಲ್ಲ ಎಂದು ಅರಿತ ಕಾಂಗ್ರೆಸ್ ಹೈಕಮಾಂಡ್ ಹೊಸ ತಂಡ ರಚನೆಗೆ ಚಿಂತನೆ ನಡೆಸಿದೆ ಎನ್ನಲಾಗುತ್ತದೆ.

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಮೀಕ್ಷೆ ಮಾಡಲು ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ವಹಿಸಿದ್ದ ಪ್ರವೀಣ್ ಚಕ್ರವರ್ತಿ ಅವರಿಗೆ 24 ಕೋಟಿ ರೂ. ಸಂದಾಯ ಆಗಿತ್ತು. ಈ ಹಣದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಜವಾಬ್ದಾರಿ ವಹಿಸಿಕೊಂಡಿದ್ದ ರಮ್ಯಾ ಅವರಿಗೆ 8 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ಅವರು ಯಾವುದೇ ರೀತಿಯ ಲೆಕ್ಕ ಕೊಟ್ಟಿಲ್ಲ ಎಂದು ದಿ ಸಂಡೇ ಗಾರ್ಡಿಯನ್ ವರದಿ ಪ್ರಕಟಿಸಿತ್ತು.

    ಚುನಾವಣೆಯ ಫಲಿತಾಂಶದ ಬಳಿಕ ಪ್ರವೀಣ್ ಚಕ್ರವರ್ತಿ ಹಾಗೂ ಕಾಂಗ್ರೆಸ್ ಪಕ್ಷದ ಶಕ್ತಿ ಆ್ಯಪ್ ಸೇರಿದಂತೆ ವಿವಿಧ ಉಸ್ತುವಾರಿಗಳಿಂದ ರಮ್ಯಾ ದೂರವಾಗಿದ್ದಾರೆ. ಅಲ್ಲದೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಸಂಗ್ರಹಿಸಿದ್ದ ಮಾಹಿತಿಯನ್ನು ಕೂಡ ಸಲ್ಲಿಕೆ ಮಾಡಿಲ್ಲ. ಇದಕ್ಕಾಗಿ ಸುಮಾರು 24 ಕೋಟಿ ರೂ. ವೆಚ್ಚ ಮಾಡಿದ್ದರು. ಇದರೊಂದಿಗೆ ರಮ್ಯಾ ಅವರು ಕೂಡ 8 ರೂ. ಪಡೆದಿದ್ದರು. ಆದರೆ ಈ ಹಣದ ಕುರಿತು ರಮ್ಯಾ ಅವರು ಇನ್ನೂ ಯಾವುದೇ ಲೆಕ್ಕವನ್ನು ನೀಡಿಲ್ಲ ಎನ್ನಲಾಗಿದೆ.

    ಲೋಕಸಭಾ ಚುನಾವಣೆ ಬಳಿಕ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದ ರಮ್ಯಾ ಅವರು ಇದೇ ಕಾರಣಕ್ಕೆ ಟ್ವಿಟ್ಟರ್ ತೊರೆದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿತ್ತು. ಅಲ್ಲದೆ ಹಣದ ಬಗ್ಗೆ ಸರಿಯಾದ ಲೆಕ್ಕ ನೀಡದ ಕಾರಣದಿಂದಲೇ ಎಐಸಿಸಿ ಅವರನ್ನು ಸಾಮಾಜಿಕ ಜಾಲತಾಣದಿಂದ ದೂರ ಇಟ್ಟಿದೆಯಾ ಎಂಬ ಪ್ರಶ್ನೆಯೂ ದೆಹಲಿ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ರಮ್ಯಾ ಅವರು ಇನ್ನೂ ಪಕ್ಷಕ್ಕೆ ಯಾವುದೇ ಲೆಕ್ಕವನ್ನು ನೀಡಿಲ್ಲ ಎಂದು ವರದಿಯಾಗಿದೆ.

    ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದ ರಾಹುಲ್ ಆಪ್ತರು, ಅಖಿಲೇಶ್ ಯಾದವ್, ಎಂಕೆ ಸ್ಟಾಲಿನ್, ಓಮರ್ ಅಬ್ದುಲ್ಲ ಸೇರಿದಂತೆ ಹಲವು ನಾಯಕರೊಂದಿಗೆ ಯುಪಿಎ ಮೈತ್ರಿ ರಚಿಸಲು ಸಿದ್ಧತೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಸಮೀಕ್ಷೆಗಳು ನೀಡುವ ಮಾಹಿತಿಯಂತೆ ಕಾಂಗ್ರೆಸ್ 164ಕ್ಕೂ ಹೆಚ್ಚು ಸ್ಥಾನ ಪಡೆದು ಮೈತ್ರಿ ಮೂಲಕ ಅಧಿಕಾರ ರಚಿಸಲು ಸಿದ್ಧತೆ ನಡೆಸಿತ್ತು ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಅಲ್ಲದೆ ಚುನಾವಣೆಯಲ್ಲಿ ಗೆಲುವು ಪಡೆದರೆ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸುವ ಪ್ಲ್ಯಾನ್ ಕೂಡ ಮಾಡಿತ್ತು.