Tag: Social Distancing

  • ಹೋಟೆಲ್, ಸೂಪರ್ ಮಾರ್ಕೆಟ್ ಮೇಲೆ ದಿಢೀರ್ ದಾಳಿ – 20 ಉದ್ದಿಮೆಗಳು ಬಂದ್, ಭಾರೀ ದಂಡ

    ಹೋಟೆಲ್, ಸೂಪರ್ ಮಾರ್ಕೆಟ್ ಮೇಲೆ ದಿಢೀರ್ ದಾಳಿ – 20 ಉದ್ದಿಮೆಗಳು ಬಂದ್, ಭಾರೀ ದಂಡ

    ಬೆಂಗಳೂರು: ಕೋವಿಡ್ 19 ಮಾರ್ಗಸೂಚಿಯನ್ನು ಪಾಲಿಸದ ಹಿನ್ನೆಲೆಯಲ್ಲಿ ಹೋಟೆಲ್, ಅಂಗಡಿ, ಸೂಪರ್ ಮಾರ್ಕೆಟ್ ಸೇರಿ ಒಟ್ಟು 20 ಅಂಗಡಿ ಮುಗ್ಗಟ್ಟುಗಳನ್ನು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಬಂದ್ ಮಾಡಿದ್ದಾರೆ.

    ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಇಡಬೇಕು, ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿದ ಗ್ರಾಹಕರಿಗೆ ಮಾತ್ರ ಒಳಗಡೆ ಪ್ರವೇಶಿಸಲು ಅನುಮತಿ ನೀಡಬೇಕು, ಒಳಗಡೆ ಸಾಮಾಜಿಕ ಅಂತರಗಳನ್ನು ಕಾಪಾಡಬೇಕು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ.

    ಈ ನಿಯಮನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಂದು ಅಂಗಡಿ, ಹೋಟೆಲ್‍ಗಳ ಮೇಲೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ದಿಢೀರ್ ದಾಳಿ ಮಾಡಿ ಬಂದ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ 15 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ. ಬೆಂಗಳೂರಿನ ಕೋರಮಂಗಲ, ಹೆಚ್‍ಎಸ್‍ಆರ್ ಲೇಔಟ್ ವ್ಯಾಪ್ತಿಯ ಐದು ಹೋಟೆಲ್‍ಗಳ ಮೇಲೆ ದಂಡ ಹಾಕಿ ಬಂದ್ ಮಾಡಿಸಿದ್ದಾರೆ.

    ಎಲ್ಲಿ ಎಷ್ಟು?
    ಯಲಹಂಕ 1, ಮಹದೇವಪುರ 4, ಬೆಂಗಳೂರು ಪಶ್ಚಿಮ 3, ಬೆಂಗಳೂರು ದಕ್ಷಿಣ 4, ಬೊಮ್ಮನಹಳ್ಳಿ 2, ಬೆಂಗಳೂರು ಪೂರ್ವ 3, ರಾಜರಾಜೇಶ್ವರಿ ನಗರ 3 ಸೇರಿದಂತೆ ಒಟ್ಟು 20 ಉದ್ದಿಮೆಗಳನ್ನು ಬಂದ್ ಮಾಡಲಾಗಿದೆ.

  • ಕೊರೊನಾ ನಿಯಮ ಉಲ್ಲಂಘನೆ – ಬೆಂಗಳೂರಿನಲ್ಲಿ 9.46 ಕೋಟಿ ದಂಡ ವಸೂಲಿ

    ಕೊರೊನಾ ನಿಯಮ ಉಲ್ಲಂಘನೆ – ಬೆಂಗಳೂರಿನಲ್ಲಿ 9.46 ಕೋಟಿ ದಂಡ ವಸೂಲಿ

    ಬೆಂಗಳೂರು: ಸರ್ಕಾರದ ಕೊರೊನಾ ಮಾರ್ಗಸೂಚಿಯನ್ನು ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಿದವರಿಂದ ಸೋಮವಾರದವರೆಗೆ ಒಟ್ಟು 9.46 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿದೆ.

    ಬೆಂಗಳೂರು ನಗರದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಜನ ಮಾಸ್ಕ್ ಧರಿಸದೇ ರಸ್ತೆಗೆ ಇಳಿಯುತ್ತಿದ್ದಾರೆ ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಮಾರ್ಷಲ್‍ಗಳು ಗಲ್ಲಿ ಗಲ್ಲಿಗಳಲ್ಲಿ ನಿಂತು ದಂಡ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ.

    ಒಟ್ಟು 3,75,917 ಮಾಸ್ಕ್ ಧರಿಸದ ಪ್ರಕರಣಗಳು ವರದಿಯಾಗಿದ್ದು ಒಟ್ಟು 8,90,68,197 ರೂ. ದಂಡ ಸಂಗ್ರಹವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದ 25,073 ಪ್ರಕರಣಗಳು ವರದಿಯಾಗಿದ್ದು, ಒಟ್ಟು 55,95,060.24 ರೂ. ದಂಡ ಸಂಗ್ರಹವಾಗಿದೆ.

    ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಮತ್ತು ಮಾಸ್ಕ್ ಧರಿಸದೇ ಇರುವ ಒಟ್ಟು 4,00,990 ಪ್ರಕರಣಗಳಿಂದ ಒಟ್ಟು 9,46,63,257.92 ರೂ. ದಂಡ ಸಂಗ್ರಹವಾಗಿದೆ.

    ಇಂದು ಬೆಂಗಳೂರಿನಲ್ಲಿ 3,728 ಮಂದಿಗೆ ಕೊರೊನಾ ಸೋಂಕು ಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ4,50,759ಕ್ಕೆ ಏರಿಕೆಯಾಗಿದೆ. ಇಂದು ಒಟ್ಟು 1,026 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 30,782 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ ಒಟ್ಟು 4,15,309 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು 18 ಮಂದಿ ಸೇರಿ ಒಟ್ಟು 4,667 ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ.

  • ನಂದಿಬೆಟ್ಟದಲ್ಲಿ ಕೊರೋನಾ ರೂಲ್ಸ್ ಕಂಪ್ಲೀಟ್ ಬ್ರೇಕ್

    ನಂದಿಬೆಟ್ಟದಲ್ಲಿ ಕೊರೋನಾ ರೂಲ್ಸ್ ಕಂಪ್ಲೀಟ್ ಬ್ರೇಕ್

    – ಎಂಜಾಯ್ ಮೂಡ್‍ನಲ್ಲಿ ಪ್ರವಾಸಿಗರು
    – ಸಾಮಾಜಿಕ ಅಂತರ ದೂರದ ಮಾತು

    ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ವಾರಾಂತ್ಯ ಹಿನ್ನೆಲೆ ಇಂದು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸಿದ್ದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

    ಇಂದು ಬೆಳ್ಳಂಬೆಳಿಗ್ಗೆ ಎಂದಿನಂತೆ ಸಾವಿರಾರು ಮಂದಿ ಪ್ರೇಮಧಾಮ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಆದರೆ ಬಹುತೇಕು ಪ್ರವಾಸಿಗರು ಮಾಸ್ಕ್ ಧರಿಸಿರಲಿಲ್ಲ. ಇನ್ನೂ ಸಾಮಾಜಿಕ ಅಂತರ ಅನ್ನೋ ನಿಯಮ ಪಾಲನೆ ಅನ್ನೋದು ದೂರದ ಮಾತು ಅನ್ನೋ ಹಾಗೆ ಪ್ರವಾಸಿಗರು ವರ್ತಿಸಿದ್ದಾರೆ.

    ನಂದಿಬೆಟ್ಟಕ್ಕೆ ಆಗಮಿಸಿದ ಬಹುತೇಕರು ಮಾಸ್ಕ್ ಧರಿಸದೆ ನಂದಿಬೆಟ್ಟದಲ್ಲಿ ಒಡಾಡುತ್ತಿದ್ದು ಸರ್ವೆ ಸಾಮಾನ್ಯವಾಗಿತ್ತು. ಕೆಲವರು ಧರಿಸಿದ್ರೂ ಅದನ್ನ ಸಂಪೂರ್ಣವಾಗಿ ಬಾಯಿ ಮೂಗು ಮುಚ್ಚುವಂತಿರಲಿಲ್ಲ. ಬದಲಾಗಿ ಅಧರ್ಂಬರ್ಧ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬೇಕಾಬಿಟ್ಟಿ ಒಡಾಡಿದ್ದಾರೆ.

    ನಂದಿಬೆಟ್ಟದಲ್ಲಿ ಮೂಲೆ ಮೂಲೆಯಲ್ಲೂ ಪ್ರವಾಸಿಗರು ತುಂಬಿ ತುಳುಕುತ್ತಿದ್ದರೂ ಕೊರೋನಾ ರೂಲ್ಸ್ ಫಾಲೋ ಮಾಡದೆ ಪ್ರವಾಸಿಗರು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿರುವುದು ಕಂಡು ಬಂದಿದೆ. ಇಷ್ಟು ದಿನ ಕೊರೋನಾ ಎಂದರೆ ಅಲ್ಪ ಸ್ವಲ್ಪ ಮಟ್ಟದ ಭಯ ಆದರೂ ಇತ್ತು. ಈಗ ಅದ್ಯಾವುದರ ಭಯವೂ ಪ್ರವಾಸಿಗರಿಗೆ ಇಲ್ಲದಂತಾಗಿದೆ.

    ಕೊರೋನಾನೇ ಇಲ್ಲ ಎಲ್ಲವೂ ಮುಗಿದು ಹೋಗಿದೆ ಅನ್ನೋ ಮನಸ್ಥಿತಿಗೆ ಜನ ಬಂದು ತಲುಪಿದಂತೆ ಭಾಸವಾಗುತ್ತಿತ್ತು. ಕೆಲವರು ಮಾಸ್ಕ್ ತಂದಿದ್ದರೂ ಜೇಬಲ್ಲಿ ಇಟ್ಕೊಂಡು ಅಡ್ಡಾಡುತ್ತಿದ್ದರು. ಇನ್ನೂ ಕ್ಯಾಮರಾ ಕಂಡಾಗ, ಇಲ್ಲ ಪ್ರಶ್ನೆ ಮಾಡಿದಾಗ ಮಾತ್ರ ಪ್ರವಾಸಿಗರು ಮಾಸ್ಕ್ ಧರಿಸುತ್ತಿದ್ದರು.

    ಕೊರೋನಾ ಸಂಖ್ಯೆ ಇಳಿಮುಖ ಆಗುತ್ತಿದೆ. ಆದರೂ ಎರಡನೇ ಅಲೆ ಆಗಮಿಸುವ ಸಾಧ್ಯತೆ ಇದೆ ಜನರೇ ಎಚ್ಚರ ಅಂತ ಸರ್ಕಾರ ಎಚ್ಚರಿಕೆ ಕೊಡ್ತಿದೆ. ಆದರೂ ಕೊರೋನಾ ಇಷ್ಟೇ ನಮಗೇನು ಆಗಲ್ಲ ಅನ್ನೋ ಉದ್ಧಟತನದಲ್ಲೇ ಪ್ರವಾಸಿಗರು ಫೋಟೋ ಸೆಲ್ಫಿ ತೆಗೆದುಕೊಂಡು ತಮ್ಮಿಷ್ಟದಂತೆ ಎಂಜಾಯ್ ಮೂಡ್‍ನಲ್ಲಿದ್ದರು.

  • 6 ಅಡಿ ಅಂತರ ಇರೋ ಡ್ರೆಸ್ ತಯಾರಿಸಿದ ಡಿಸೈನರ್ – ವಿಡಿಯೋ ನೋಡಿ

    6 ಅಡಿ ಅಂತರ ಇರೋ ಡ್ರೆಸ್ ತಯಾರಿಸಿದ ಡಿಸೈನರ್ – ವಿಡಿಯೋ ನೋಡಿ

    ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಪಾರಾಗಲು ಸಾಮಾಜಿಕ ಅಂತರವೇ ಸದ್ಯಕ್ಕೆ ಇರುವ ಏಕೈಕ ಔಷಧಿ. ಇದನ್ನೇ ಸ್ಫೂರ್ತಿ ಪಡೆದ ಡಿಸೈನರ್ ಶೇ ಸಾಮಾಜಿಕ ಅಂತರದ ಉಡುಗೆಯನ್ನು ತಯಾರಿಸಿದ್ದಾರೆ.

    ಸಾಮಾಜಿಕ ಅಂತರ ಮಾನದಂಡಗಳಿಗೆ ಅನುಗುಣವಾಗಿ ಆರು ಅಡಿ ತ್ರಿಜ್ಯವನ್ನು ಹೊಂದಿರುವ ಉಡುಪನ್ನು ತಯಾರಿಸಲಾಗಿದೆ. ಈ ಉಡುಪು ಹಗುರ ಮತ್ತು ಚಕ್ರಗಳಲ್ಲಿ ಉರುಳುತ್ತದೆ. ಈ ಉಡುಪಿನ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by ♡ Shay ♡ (@crescentshay)

    12-ಅಡಿ ಹೂಪ್‍ಸ್ಕರ್ಟ್‍ಗಾಗಿ ಟ್ಯೂಲ್ ನೆಟಿಂಗ್ ಅನ್ನು ಬಳಸಲಾಗಿದೆ. ಏಕೆಂದರೆ ಹಗುರ ಮತ್ತು ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ನೆಟಿಂಗ್ ಬಟ್ಟೆಯನ್ನು ಬಳಸುವುದರಿಂದ ಸುತ್ತಲು ವೃತ್ತಾಕಾರದಲ್ಲಿ ಹರಡಿಕೊಳ್ಳುತ್ತದೆ. ಇಷ್ಟು ದೊಡ್ಡ ಗಾತ್ರದ ಸ್ಕರ್ಟ್ ಮಾಡಲು ಸಾಕಷ್ಟು ಫ್ಯಾಬ್ರಿಕ್ ನನ್ನು ಬಳಸಲಾಗಿದೆ. ಈ ಬಟ್ಟೆಯನ್ನು ತೊಟ್ಟು ನಡೆಯಲು ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ಉಡುಪಿನ ಕೆಳ ಭಾಗದಲ್ಲಿ ಚಕ್ರವನ್ನು ಅಳವಡಿಸಲಾಗಿದೆ.

    ಹೆಜ್ಜೆ ಹಾಕಿ ಮುಂದೆ ಹೋದಂತೆ ಬಟ್ಟೆಗೆ ಹಾಕಿರುವ ಚುಕ್ರಗಳು ಮುಂದೆ ಹೋಗುತ್ತವೆ. ಒಬ್ಬರಿಂದ ಇನ್ನೊಬ್ಬರು 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದಾಗಿದೆ. ಅಷ್ಟೊಂದು ದೊಡ್ಡ ಗಾತ್ರದಲ್ಲಿ ಬಟ್ಟೆ ಹರಡಿಕೊಳ್ಳುತ್ತದೆ. ಎಡ ಭಾಗದಲ್ಲಿ 6 ಅಡಿ ಅಂತರ ಮತ್ತು ಬಲ ಭಾಗದಲ್ಲಿ 6 ಅಡಿ ಅಂತರವನ್ನು ಹೊಂದಿದೆ.

     

    View this post on Instagram

     

    A post shared by ♡ Shay ♡ (@crescentshay)

    ಶೇ ಉಡುಪನ್ನು ತಯಾರಿಸುವ ವಿಡಿಯೋ ಮತ್ತು ಫೋಟೋ ಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಉಡುಗೆ ತನ್ನ ಮನೆಯ ಒಳಗಡೆ ತಯಾರಿಸಲು ಆಗದ ಕಾರಣ ತನ್ನ ಮನೆಯ ಹೊರಗೆ ಉಡುಪನ್ನು ಜೋಡಿಸಿ ತೋರಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬೇಕಾಗುವ ಮಾದರಿಯನ್ನು ಈ ಉಡುಪು ಹೊಂದಿದೆ ಎಂದು ಶೀರ್ಷಿಕೆ ನೀಡುವ ಮೂಲಕವಾಗಿ ಶೇ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಬಟ್ಟೆಯನ್ನು ತಯಾರಿಸಲು ಎರಡು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಆದರೂ ಹಿಡಿದ ಕೆಲಸವನ್ನು ಬಿಡದೆ ಸಾಮಾಜಿಕ ಅಂತರ ಕಾಪಾಡುವ ಉಡುಪನ್ನು ಮಾಡುವಲ್ಲಿ ಮೂರನೇ ಪ್ರಯತ್ನದಲ್ಲಿ ಅಂತಿಮವಾಗಿ ಯಶಸ್ವಿಯಾಗಿದ್ದಾರೆ. ಸತತ 2 ತಿಂಗಳು ಸಮಯ ತೆಗೆದುಕೊಂಡು ಈ ಉಡುಪನ್ನು ತಯಾರಿಸಿದ್ದಾರೆ.

  • ಸಾಮಾಜಿಕ ಅಂತರದ ಪಾಠ ಮಾಡುತ್ತೆ ‘ಡಿಸ್ಟೋಸೀಟ್’- ಹುಬ್ಬಳ್ಳಿ ಟೆಕ್ಕಿಯ ಹೊಸ ತಂತ್ರ

    ಸಾಮಾಜಿಕ ಅಂತರದ ಪಾಠ ಮಾಡುತ್ತೆ ‘ಡಿಸ್ಟೋಸೀಟ್’- ಹುಬ್ಬಳ್ಳಿ ಟೆಕ್ಕಿಯ ಹೊಸ ತಂತ್ರ

    ಹುಬ್ಬಳ್ಳಿ: ಕೊರೊನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದರು ಹಲವು ಕಡೆ ಜನರು ಸೋಂಕಿನ ಭಯ ಬಿಟ್ಟು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುವುದನ್ನ ಮರೆಯುತ್ತಿದ್ದಾರೆ. ಹೀಗಾಗಿ ಹುಬ್ಬಳ್ಳಿಯ ಟೆಕ್ಕಿಯೊಬ್ಬರು ಸಾಮಾಜಿಕ ಅಂತರ ಕಾಪಾಡಲು ಹೊಸ ತಂತ್ರ ಮಾಡಿದ್ದಾರೆ.

    ಜನರು ಸಾಮಾಜಿ ಅಂತರ ಪಾಲಿಸಲು ಎಷ್ಟೇ ಪ್ರಯತ್ನಪಟ್ಟರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಮಾಡುವ ತಪ್ಪಿನಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಹುಬ್ಬಳ್ಳಿಯ ಟೆಕ್ಕಿ ಶ್ರೀರಾಮ ವಿನೂತನ ಪ್ರಯೋಗ ಮಾಡಿದ್ದು, ಕಡಿಮೆ ವೆಚ್ಚದಲ್ಲಿ ಡಿಸ್ಟೋಸೀಟ್ ಅನ್ನೋ ಉಪಕರಣದ ಮೂಲಕ ಸಾಮಾಜಿಕ ಅಂತರ ಕಾಪಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಹುಬ್ಬಳ್ಳಿಯಲ್ಲಿ ಮೈಟೆಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ನಡೆಸುತ್ತಿರುವ ಶ್ರೀರಾಮ ಅವರು, ಎಂಟೆಕ್‍ನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ. ಇತ್ತೀಚೆಗೆ ಇವರು ಬ್ಯಾಂಕ್‍ಗೆ ತೆರಳಿದ ವೇಳೆ ಸಾಮಾಜಿಕ ಅಂತರ ಇಲ್ಲದೇ ಜನರು ಮುಗಿಬಿದ್ದಿದ್ದನ್ನ ಕಂಡು ಡಿಸ್ಟೋಸೀಟ್ ಉಪಕರಣ ಯಂತ್ರ ಕಂಡುಹಿಡಿದಿದ್ದಾರೆ.

    ಮೈಕ್ರೋ ಕಂಟ್ರೋಲರ್ ಹಾಗೂ ಸ್ಥಳೀಯವಾಗಿ ಸಿಗುವ ವಿದ್ಯುತ್ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಅಂದ್ರೆ ಕೇವಲ 250 ರೂಪಾಯಿ ವೆಚ್ಚದಲ್ಲಿ ಈ ಡಿಸ್ಟೋಸೀಟ್ ಉಪಕರಣ ಕಂಡುಹಿಡಿದಿದ್ದಾರೆ. ಈ ಡಿಸ್ಟೋಸೀಟ್ ಅಳವಡಿಸಿದರೆ ಒಂದು ಮೀಟರ್ ಅಕ್ಕಪಕ್ಕದಲ್ಲಿ ಯಾರಾದ್ರು ಕೂತರೇ ರೆಡ್ ಬಝರ್ ಭಾರಿಸುತ್ತದೆ.

    ಡಿಸ್ಟೋಸೀಟ್ ಉಪಕರಣವನ್ನು ವಿಶೇಷವಾಗಿ ಬ್ಯಾಂಕ್, ಶಾಲಾ-ಕಾಲೇಜು, ಚಿತ್ರಮಂದಿರ, ಮೆಟ್ರೋ ಹಾಗೂ ಆಸ್ಪತ್ರೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಳಸಬಹುದಾಗಿದೆ.

    ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಡಿಸ್ಟೋಸೀಟ್ ಉಪಕರಣ ಸಾಕಷ್ಟು ಉಪಯೋಗಕಾರಿಯಾಗಿದೆ. ಅಲ್ಲದೆ ಕಡಿಮೆ ವೆಚ್ಚದಲ್ಲಿ ಈ ಡಿಸ್ಟೋಸೀಟ್ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಬಹುದಾಗಿದೆ ಎಂದು ಶ್ರೀರಾಮ ತಿಳಿಸಿದ್ದಾರೆ.

  • ಸಾಮಾಜಿಕ ಅಂತರ ಮರೆತು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಬಿಜೆಪಿ ಮಾಜಿ ಶಾಸಕ!

    ಸಾಮಾಜಿಕ ಅಂತರ ಮರೆತು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಬಿಜೆಪಿ ಮಾಜಿ ಶಾಸಕ!

    ತುಮಕೂರು: ಕೊರೊನಾ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದ್ದ ಮಾಜಿ ಶಾಸಕರೊಬ್ಬರು ನಿಯಮಗಳನ್ನು ಮರೆತು ಸಂಭ್ರಮಾಚರಣೆ ನಡೆಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸಾಮಾಜಿ ಅಂತರ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

    ತುಮಕೂರಿನ ತಾಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆ ಇಂದು ನಿಗದಿಯಾಗಿತ್ತು. ಚುನಾವಣೆಯಲ್ಲಿ ಬಿಜೆಪಿಯ ಕವಿತಾ ರಮೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು ಸಂಭ್ರಮಾಚರಣೆ ಮಾಡಿದ್ದರು. ಇದನ್ನು ಕಂಡು ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಲು ಮನವಿ ಮಾಡಿದ ಎಸ್‍ಐ ಮಂಜುನಾಥ್ ಅವರ ಮೇಲೂ ಮಾಜಿ ಶಾಸಕರು ಗರಂ ಆಗಿದ್ದರು.

    ಮಾಜಿ ಶಾಸಕ ಸುರೇಶ್ ಗೌಡ ಮತ್ತು ಅವರ ಕಾರ್ಯಕರ್ತರು ಜೊತೆಗೆ ಸೇರಿ ಜೈಕಾರವನ್ನು ಕೂಗಿ ಸಾಮಾಜಿಕ ಅಂತರ ಮರೆದು ಗುಂಪುಗೂಡಿದ್ದರು. ಸಾಮಾಜಿಕ ಅಂತರವನ್ನ ಮರೆತು ಗುಂಪು ಗುಂಪಾಗಿ ನಿಂತು ಸಂಭ್ರಮಾಚರಣೆ ಮಾಡಿದ್ದು ಅಲ್ಲದೇ ಹಲವರು ಮಾಸ್ಕ್ ಧರಿಸದೆ ಇರುವುದು ಕಂಡು ಬಂದಿತ್ತು.

    ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಸರ್ಕಾರ, ಸಾರ್ವಜನಿಕರು ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣ ಮಾಡುವುದರ ಬಗ್ಗೆ ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಸ್ವಯಂ ಜವಾಬ್ದಾರಿ ವಹಿಸಿಕೊಂಡು ತಮ್ಮ ಹಿಂಬಾಲಕರಿಗೆ ಮಾದರಿಯಾಗ ಬೇಕಿದ್ದ ಮಾಜಿ ಶಾಸಕರು ಮಾತ್ರ ತಮ್ಮ ಕರ್ತವ್ಯವನ್ನು ಮರೆತಿದ್ದರು. ಈಗಾಗಲೇ ಕೊರೊನಾ ಸಮುದಾಯದ ಹಂತಕ್ಕೆ ತಲುಪಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇಂತಹ ಸಂಭ್ರಮಾಚರಣೆಗಳಿಂದ ಮತ್ತಷ್ಟು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

  • ವಿಕೆಟ್ ಕಬಳಿಸಿದರೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ: ರಹಾನೆ

    ವಿಕೆಟ್ ಕಬಳಿಸಿದರೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ: ರಹಾನೆ

    ಮುಂಬೈ: ಕೊರೊನಾ ವೈರಸ್ ಕಾರಣದಿಂದ ಮುಂದಿನ ದಿನಗಳಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಾಮಾಜಿಕ ಅಂತರ ಪಾಲಿಸಲು ಈಗಾಗಲೇ ದೇಶೀಯ ಕ್ರಿಕೆಟ್ ಸಂಸ್ಥೆಗಳು ಸೂಚನೆ ನೀಡಿವೆ. ಅಲ್ಲದೇ ಚೆಂಡಿನ ಹೊಳಪು ಕಾಪಾಡಲು ಕ್ರಿಕೆಟಿಗರು ಎಂಜಲು ಬಳಸಬಾರದು ಎಂದು ಐಸಿಸಿ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿಬಂಧನೆಗಳು ಜಾರಿಯಾಗಿರುವ ಅವಕಾಶಗಳು ಕಾಣಿಸುತ್ತಿದ್ದು, ಸದ್ಯ ಬೌಲರ್ ಗಳು ವಿಕೆಟ್ ಪಡೆದ ವೇಳೆ ಹ್ಯಾಂಡ್‍ಶೇಕ್ ಬದಲು ನಮಸ್ಕಾರ ಮಾಡಿ ಎಂದು ಟೀಂ ಇಂಡಿಯಾ ಆಟಗಾರ ರಹಾನೆ ಹೊಸ ಸಲಹೆಯನ್ನು ನೀಡಿದ್ದಾರೆ.

    ಕ್ರಿಕೆಟ್ ಮತ್ತೆ ಆರಂಭವಾದ ಬಳಿಕ ಬೌಲರ್ ವಿಕೆಟ್ ಪಡೆದರೆ ನಮಸ್ಕಾರ ಅಥವಾ ಬೇರೆ ವಿಧಾನದ ಮೂಲಕ ಸಂಭ್ರಮ ಮಾಡಬೇಕು. ಅಲ್ಲದೇ ಎಲ್ಲ ಆಟಗಾರರು ಪಿಚ್ ಬಳಿ ಬಂದು ಅಭಿನಂದನೆ ಹೇಳುವ ಅವಕಾಶವೂ ಇರುವುದಿಲ್ಲ. ಬೌಂಡರಿ ಲೈನ್‍ನಿಂದಲೇ ಫೀಲ್ಡರ್ ನಮಸ್ಕರಿಸಿ ಅಭಿನಂದನೆ ಸಲ್ಲಿಸಬೇಕಿದೆ. ಇದು ಬರಿ ಕ್ರಿಕೆಟ್‍ನಲ್ಲಿ ಮಾತ್ರವಲ್ಲ ಸಾಮಾಜಿಕವಾಗಿಯೂ ಆಚರಣೆ ಮಾಡಬೇಕಿದೆ ಎಂದು ರಹಾನೆ ತಿಳಿಸಿದ್ದಾರೆ.

    ಟೀಂ ಇಂಡಿಯಾ ಪರ ಏಕದಿನ ಹಾಗೂ ಟಿ20 ಮಾದರಿ ಕ್ರಿಕೆಟ್‍ನಿಂದ ದೂರವಾಗಿರುವ ರಹಾನೆ, ಟೆಸ್ಟ್ ಕ್ರಿಕೆಟ್‍ನಲ್ಲಿ ತಂಡದ ಉಪನಾಯಕರಾಗಿದ್ದಾರೆ. 2019ರ ಐಪಿಎಲ್ ಟೂರ್ನಿವರೆಗೂ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ರಹಾನೆಯನ್ನು 2020ರ ಆವೃತ್ತಿಯಲ್ಲಿ ಡೆಲ್ಲಿ ತಂಡ ಖರೀದಿ ಮಾಡಿದೆ. ಸದ್ಯ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ ಆರಂಭವಾಗುವ ಕುರಿತು ಅನುಮಾನಗಳು ಅಭಿಮಾನಿಗಳಲ್ಲಿ ಹೆಚ್ಚಾಗುತ್ತಿದೆ.

  • ಆಟೋದಲ್ಲಿ ಸಾಮಾಜಿಕ ಅಂತರ – ಚಾಲಕನ ಐಡಿಯಾಗೆ ಆನಂದ್ ಮಹೀಂದ್ರಾ ಫಿದಾ

    ಆಟೋದಲ್ಲಿ ಸಾಮಾಜಿಕ ಅಂತರ – ಚಾಲಕನ ಐಡಿಯಾಗೆ ಆನಂದ್ ಮಹೀಂದ್ರಾ ಫಿದಾ

    ನವದೆಹಲಿ: ವಿದ್ಯುತ್ ಚಾಲಿತ ಆಟೋದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡ ಆಟೋ ಚಾಲಕನ ಐಡಿಯಾಗೆ ಉದ್ಯಮಿ ಆನಂದ್ ಮಹೀಂದ್ರಾ ಫಿದಾ ಆಗಿದ್ದಾರೆ.

    ದೇಶದಲ್ಲಿ ಕೊರೊನಾ ವೈರಸ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಟೋ ಚಾಲಕನೋರ್ವ ತನ್ನ ಆಟೋದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳುವಂತೆ ತನ್ನ ಆಟೋದ ಹಿಂಬದಿಯ ಸೀಟುಗಳನ್ನು ಪ್ರತ್ಯೇಕವಾಗಿ ಡಿಸೈನ್ ಮಾಡಿದ್ದಾನೆ.

    ಈ ಇ-ಆಟೋ ಚಾಲಕನ ಐಡಿಯಾ ನೋಡಿ ಮೆಚ್ಚಿಕೊಂಡಿರುವ ಆನಂದ್ ಮಹೀಂದ್ರಾ ಅವರು, ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸಮಾಜದಲ್ಲಿ ಸೃಷ್ಟಿಯಾಗುವ ಚಿತ್ರ ವಿಚಿತ್ರ ಪರಿಸ್ಥಿತಿಗೆ ತಕ್ಕಂತೆ ಬಹುಬೇಗ ನಮ್ಮ ಜನರು ಹೊಂದಿಕೊಳ್ಳುತ್ತಾರೆ. ಜೊತೆಗೆ ಹೊಸ ಹೊಸ ಐಡಿಯಾವನ್ನು ಆವಿಷ್ಕಾರ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ಆನಂದ್ ಮಹೀಂದ್ರಾ ಅವರು ಈ ಟ್ವೀಟ್‍ನಲ್ಲಿ ಮಹೀಂದ್ರಾ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಜೊತೆಗೆ ನಾವು ಈ ಆಟೋ ಚಾಲಕನನ್ನು ನಮ್ಮ ಆರ್.ಡಿ ಮತ್ತು ಉತ್ಪನ್ನ ಅಭಿವೃದ್ಧಿ ತಂಡಗಳಿಗೆ ಸಲಹೆಗಾರರಾಗಿ ಸೇರಿಸಿಕೊಳ್ಳಬೇಕು ಎಂದು ಬರೆದು ಆಟೋ ಚಾಲಕನ ವಿಭಿನ್ನ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ.

    ಕೊರೊನಾ ಸೋಂಕಿನಿಂದ ದೂರು ಇರಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಎಷ್ಟೇ ಹೇಳಿದರು ಕೆಲವು ಕಡೆ ಜನರು ಕೇಳುತ್ತಿಲ್ಲ. ಈ ರೀತಿಯ ಸಮಯದಲ್ಲಿ ಸದ್ಯ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಈ ಆಟೋ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಸುಮಾರು ಎರಡು ಸಾವಿರ ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು ಹತ್ತು ಸಾವಿರ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.

  • ಕೊರೊನಾ ಎಫೆಕ್ಟ್ – ಮರದ ಮೇಲೆ ಮನೆ ಮಾಡಿದ ಕರಾವಳಿಯ ಉಪನ್ಯಾಸಕ

    ಕೊರೊನಾ ಎಫೆಕ್ಟ್ – ಮರದ ಮೇಲೆ ಮನೆ ಮಾಡಿದ ಕರಾವಳಿಯ ಉಪನ್ಯಾಸಕ

    ಮಂಗಳೂರು: ಕೊರೊನಾ ಭೀತಿಯಿಂದ ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬರು ಸಾಮಾಜಿಕ ಅಂತರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮರದ ಮೇಲೆಯೇ ಟ್ರೀಹೌಸ್ ನಿರ್ಮಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ವಿವೇಕ್ ಆಲ್ವ ಮರದ ಮೇಲೆ ಮನೆ ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು, ಕೃಷಿ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತನ್ನ ಮನೆಯ ಸಮೀಪವಿರುವ ಕೃತಕ ಕಾಡಿನಲ್ಲಿ 7 ದಿನಗಳ ಕಾಲ ಕೆಲಸ ಮಾಡಿ ಮರದ ಮೇಲೆ ಗುಡಿಸಲನ್ನು ನಿರ್ಮಾಣ ಮಾಡಿದ್ದಾರೆ.

    ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಅದ್ಭುತ ಪ್ರಕೃತಿ ಸೌಂದರ್ಯದ ಅನುಭವವನ್ನು ನೀಡುತ್ತದೆ. ಈ ಮರದ ಮೇಲಿನ ಗುಡಿಸಲಿನಲ್ಲಿ ಹಕ್ಕಿಗಳ ಚಿಲಿಪಿಲಿ, ಪುಸ್ತಕ ಓದುವುದು, ಏಕಾಂತದಲ್ಲಿ ಸಂಗೀತ ಕೇಳುವುದು, ತಂಪಾದ ಗಾಳಿಯೊಂದಿಗೆ ಪ್ರಕೃತಿ ವೀಕ್ಷಣೆ ಮಾಡಬಹುದು. ಜೊತೆಗೆ ಇಲ್ಲಿ ಇವರು ಹಕ್ಕಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವಿವೇಕ್ ಆಳ್ವ ಹೇಳಿದ್ದಾರೆ.

    ಈ ಗುಡಿಸಲಿನ ಸುತ್ತ ಬಿಸಿಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಶಾಡೋ ನೆಟ್ ಹಾಕಲಾಗಿದೆ. ಕುಳಿತುಕೊಳ್ಳಲು ಚೇರ್ ಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯ ಲಾಕ್‍ಡೌನ್ ನಿಂದ ಸಮಯ ಕಳೆಯಲು ಇದು ಉತ್ತಮ ಜಾಗ ಎಂದು ವಿವೇಕ್ ಆಳ್ವ ತಿಳಿಸಿದ್ದಾರೆ.

  • ಕೊರೊನಾ ಎಫೆಕ್ಟ್: ಕಾಲಿಗೆ ನಮಸ್ಕರಿಸಲು ಬಂದ ಪ್ರತಾಪ್ ಸಿಂಹ, ತಡೆದ ಬೋಪಯ್ಯ

    ಕೊರೊನಾ ಎಫೆಕ್ಟ್: ಕಾಲಿಗೆ ನಮಸ್ಕರಿಸಲು ಬಂದ ಪ್ರತಾಪ್ ಸಿಂಹ, ತಡೆದ ಬೋಪಯ್ಯ

    – ‘ಮೈಸೂರಿನವರನ್ನು ಕಂಡ್ರೆ ಭಯ ನಾ ಸರ್..!’

    ಮಡಿಕೇರಿ: ಕೊರೋನಾ ವೈರಸ್‍ನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಸಲು ವಿರಾಜಪೇಟೆಗೆ ಸಂಸದ ಪ್ರತಾಪ್ ಸಿಂಹ, ಸಚಿವ ಸೋಮಣ್ಣ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾಲಿಗೆ ನಮಸ್ಕರಿಸಲು ಮುಂದಾದ ಪ್ರತಾಪ್ ಸಿಂಹ ಅವರನ್ನು ತಡೆದ ಶಾಸಕ ಬೋಪಯ್ಯ ಅವರು ದೂರದಿಂದಲೇ ನಮಸ್ಕರಿಸಲು ತಿಳಿಸಿದ ಘಟನೆ ನಡೆಯಿತು.

    ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರೊಂದಿಗೆ ವಿರಾಜಪೇಟೆಗೆ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕೆ.ಜಿ ಬೋಪಯ್ಯ ಅವರ ಕಾಲಿಗೆ ನಮಸ್ಕರಿಸಲು ಪ್ರತಾಪ್ ಸಿಂಹ ಮುಂದಾದರು. ಕೂಡಲೇ ಸಂಸದರನ್ನು ತಡೆದ ಬೋಪಯ್ಯ ಅವರು, ‘ದೂರವೇ ನಿಂತು ನಮಸ್ಕರಿಸಿ. ನೀವು ಮೈಸೂರಿನವರು ಸ್ವಲ್ಪ ಭಯವಾಗುತ್ತದೆ ಎಂದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಂಸದರು, ‘ಮೈಸೂರಿನವರನ್ನು ಕಂಡ್ರೆ ಭಯ ನಾ ಸರ್..!’ ಎಂದು ಸ್ಥಳದಿಂದ ತೆರಳಿದರು. ಇತ್ತ ಪಕ್ಷದ ಕಾರ್ಯಕರ್ತರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಉಸ್ತುವಾರಿ ಸಚಿವರನ್ನು ಮುಗಿಬಿದ್ದು ಮಾತಾನಾಡಿಸುವ ದೃಶ್ಯ ಕಂಡು ಬಂತು.

    ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ತಿಳುವಳಿಕೆ ನೀಡಲಾಗುತ್ತಿದೆ. ಸಚಿವ ಸೋಮಣ್ಣ ಬಂದಿದ್ದ ವೇಳೆ ಸ್ಥಳೀಯರು, ಕಾರ್ಯಕರ್ತರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಬಿಜೆಪಿ ಕಾರ್ಯಕರ್ತರು ಮತ್ತು ಅಧಿಕಾರಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪದೇ ಪದೇ ಸೂಚನೆ ನೀಡಿದರು. ಪೊಲೀಸರ ಸೂಚನೆಯ ಬಳಿಕವೂ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಷ್ಯ ವಹಿಸಲಾಗಿತ್ತು.