ಬೆಂಗಳೂರು: ಕೊರೊನಾ ಒಕ್ಕರಿಸಿದಾಗಿನಿಂದ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಿ ಸಾರಿ ಹೇಳಲಾಗುತ್ತಿದೆ. ಆದರೆ ಜನ ಮಾತ್ರ ಡೋಂಟ್ ಕೇರ್ ಎನ್ನುವಂತೆ ವರ್ತಿಸಿದ್ದು, ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಸಹ ದಂಡ ಹಾಕುತ್ತಿದೆ.
ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಇರುವವರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಜೂನ್ 25 ರಂದು 2.64 ಲಕ್ಷ ರೂ. ದಂಡ ಸಂಗ್ರಹವಾಗಿದೆ. ಮಾಸ್ಕ್ ಧರಿಸದಿರುವ ಒಟ್ಟು 1,268 ಜನರಿಂದ 2.53 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ 52 ಜನರಿಗೆ 10,400 ರೂ.ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿದ ಒಟ್ಟು 1320 ಜನರಿಗೆ 2.64 ಲಕ್ಷ ರೂ. ದಂಡ ವಿಧಿಸಲಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಒಡಾಡುವವರಿಗೆ ಬಿಬಿಎಂಪಿ ನೇಮಿಸಿದ್ದ ಮಾರ್ಷಲ್ ಗಳು ದಂಡ ಸಂಗ್ರಹ ಮಾಡಿದ್ದಾರೆ.
ರಾಜ್ಯದಲ್ಲಿ ಇಂದು ಒಂದೇ ದಿನ 442 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 10,560ಕ್ಕೆ ಏರಿಕೆಯಾಗಿದೆ. ಇಂದು ಒಟ್ಟು 6 ಮಂದಿ ಮೃತಪಟ್ಟಿದ್ದು, ಒಟ್ಟು 519 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅತಿ ಹೆಚ್ಚು ಪ್ರಕರಣ ಎಂದಿನಂತೆ ಬೆಂಗಳೂರಿನಲ್ಲಿ ಕಂಡು ಬಂದಿದ್ದು, 113 ಮಂದಿಗೆ ಸೋಂಕು ಬಂದಿದೆ. 81 ಅಂತರಾಜ್ಯ ಪ್ರಯಾಣಿಕರಿಗೆ ಸೋಂಕು ಬಂದಿದ್ದರೆ, 23 ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸೋಂಕು ಬಂದಿದೆ.
ಬೆಂಗಳೂರು: ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸುತ್ತಿರುವ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಕೋವಿಡ್ 19 ಹೆಚ್ಚಾಗುತ್ತಿದ್ದು, ಜನಪ್ರತಿನಿಧಿಗಳು ಹೆಚ್ಚು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಿಐಎಲ್(ಸಾರ್ವಜನಿಕಾ ಹಿತಾಸಕ್ತಿ ಅರ್ಜಿ) ಸಲ್ಲಿಕೆಯಾಗಿತ್ತು.
ಇಂದು ಈ ಅರ್ಜಿಯ ವಿಚಾರಣೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ನಡೆಯಿತು. ನಿಯಮ ಉಲ್ಲಂಘನೆ ಮಾಡುವ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ ಪೀಠ, ಸಾರ್ವಜನಿಕರು ವಾಟ್ಸಪ್, ದೂರವಾಣಿ ಕರೆ, ಎಸ್ ಎಂಎಸ್ ಮೂಲಕ ದೂರು ನೀಡಲು ʼಕುಂದು ಕೊರತೆ ಪರಿಹಾರʼ ಕಾರ್ಯ ತಂತ್ರವನ್ನು ರೂಪಿಸುವಂತೆ ಸರ್ಕಾರಕ್ಕೆ ಆದೇಶಿಸಿತು.
ಒಂದು ವಾರದೊಳಗೆ ಕುಂದು ಕೊರತೆ ಪರಿಹಾರ(Grievance Redress) ರೂಪಿಸಬೇಕು. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪೊಲೀಸರು ಸಾರ್ವಜನಿಕರು ನೀಡಿದ ದೂರನ್ನು ದಾಖಲಿಸಬೇಕು. ಅಲ್ಲಿ ದಾಖಲಾಗುವ ದೂರು ಆಧರಿಸಿ ಪೋಲೀಸರು ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿತು. ಅಷ್ಟೇ ಅಲ್ಲದೇ ಈ ಆದೇಶ ಪಾಲನೆ ಬಗ್ಗೆ ಎರಡು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ.
– ಪಬ್ಲಿಕ್ ಟಿವಿಯಲ್ಲಿ ಸರ್ಕಾರಿ ಸಮೀಕ್ಷೆಯ ಇನ್‍ಸೈಡ್ ಮಾಹಿತಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ನಿಯಂತ್ರಣಕ್ಕೆ ಬರೋ ಯಾವ ಮುನ್ಸೂಚನೆಯೂ ಕಾಣಿಸುತ್ತಿಲ್ಲ. ಆದ್ರೆ ಸರ್ಕಾರವೇನೋ ಸೆಪ್ಟೆಂಬರ್‍ನಲ್ಲಿ ಶಾಲೆ ಆರಂಭಿಸೋ ಸುಳಿವು ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಜೂನ್ 10ರಿಂದ 20ರ ತನಕ ಪೋಷಕರ ಸಭೆ ನಡೆಸಿ, ಶಾಲೆ ಓಪನ್ ಕುರಿತಂತೆ ಅಭಿಪ್ರಾಯ ಸಂಗ್ರಹಿಸಿತ್ತು. ಸರ್ಕಾರ ನಡೆಸಿದ ಈ ಸಮೀಕ್ಷೆಯ ಇನ್‍ಸೈಡ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯ ಆಗಿದೆ.
ಇದು ಸರ್ಕಾರದ ವರದಿಯೂ ಅಲ್ಲ. ಎಲ್ಲಾ ಜಿಲ್ಲೆಗಳ ನಮ್ಮ ಪ್ರತಿನಿಧಿಗಳು ಬಹುತೇಕ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು, ಎಸ್‍ಡಿಎಂಸಿಗಳನ್ನು ಸಂಪರ್ಕಿಸಿ, ಮಾಹಿತಿ ಸಂಗ್ರಹಿಸಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದೆ. ಪಬ್ಲಿಕ್ ಟಿವಿಗೆ ಲಭ್ಯವಾದ ಈ ಮಾಹಿತಿಯನ್ನು ಅವಲೋಕಿಸಿದಲ್ಲಿ ಬಹುತೇಕ ಪೋಷಕರು ಕೊರೊನಾ ವೇಳೆ ತಮ್ಮ ಮಕ್ಕಳ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಇದನ್ನೆಲ್ಲಾ ನೋಡ್ತಾ ಇದ್ರೆ ಈ ವರ್ಷ ಶೂನ್ಯ ಶೈಕ್ಷಣಿಕ ವರ್ಷವಾಗಿ ಮಾರ್ಪಡುತ್ತಾ ಎಂಬ ಪ್ರಶ್ನೆ ಏಳುತ್ತದೆ. ಕನಿಷ್ಠ ಒಂದರಿಂದ ಐದನೇ ತರಗತಿವರೆಗೆ ಈ ಬಾರಿ ಶೂನ್ಯ ಶೈಕ್ಷಣಿಕ ವರ್ಷ ಆಗಬಹುದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.
ಪೋಷಕರಿಗೆ ಸರ್ಕಾರ ಕೇಳಿದ 3 ಪ್ರಶ್ನೆ ಪ್ರಶ್ನೆ 1 – ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹಿಂದಿನಂತೆ ತರಗತಿ ಪ್ರಾರಂಭಿಸಬಹುದೇ? ಪ್ರಶ್ನೆ 2 – ಶಿಫ್ಟ್ ಲೆಕ್ಕದಲ್ಲಿ ತರಗತಿಗಳನ್ನು ಪ್ರಾರಂಭಿಸಬಹುದೇ? ಪ್ರಶ್ನೆ 3 – ದಿನ ಬಿಟ್ಟು ದಿನ ತರಗತಿಗಳನ್ನು ಪ್ರಾರಂಭಿಸಬಹುದೇ?
ಸರ್ಕಾರ ಕೇಳಿದ ಈ ಪ್ರಶ್ನೆಗಳಿಗೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಪ್ರಮುಖವಾಗಿ 4 ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖಾಸಗಿ ಶಾಲೆಗಳ ಮಕ್ಕಳ ಪೋಷಕರ 4 ಅಭಿಪ್ರಾಯ ಅಭಿಪ್ರಾಯ 1- ಸ್ಕೂಲಿಗೆ ಕಳುಹಿಸೋದಿಲ್ಲ (ಶೇ.82ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಅಂದಿದ್ದಾರೆ) ಅಭಿಪ್ರಾಯ 2- ಪೋಷಕರಿಗೆ ದ್ವಂದ್ವ (ಶೇ.82ರಷ್ಟು ಪೋಷಕರು ಬೇಡ ಅಂದರೂ, ಇನ್ನುಳಿದವರಿಗೆ ಗೊಂದಲ) ಅಭಿಪ್ರಾಯ 3- 5ನೇ ಕ್ಲಾಸ್‍ವರೆಗೆ ಮಕ್ಕಳನ್ನು ಕಳಿಸಲ್ಲ. (ಕೊರೊನಾ ಕಡಿಮೆ ಆಗಬೇಕು ಅಥವಾ ಲಸಿಕೆ ಕಂಡುಹಿಡಿಯಬೇಕು) ಅಭಿಪ್ರಾಯ 4- 6ನೇ ಕ್ಲಾಸ್‍ನವರಿಗೆ ಮಾಡಲಿ. (6-10 ನೇ ತರಗತಿ ಆಗಸ್ಟ್ ನಂತರ ಬೇಕಾದ್ರೆ ಪರಿಸ್ಥಿತಿ ನೋಡಿಕೊಂಡು ತರಗತಿ ಪ್ರಾರಂಭ ಮಾಡಲಿ.)
ಖಾಸಗಿ ಶಾಲೆಗಳು: ಕೊರೊನಾ ಸಮಯದಲ್ಲಿ ಶಾಲೆ ಪ್ರಾರಂಭಿಸಲು ಮುಂದಾದ್ರೆ ನಮ್ಮ ಬೇಡಿಕೆಗಳನ್ನು ಆಲಿಸಬೇಕು. ಪ್ರಮುಖವಾಗಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಮೂರು ಬೇಡಿಕೆಗಳನ್ನು ಸರ್ಕಾರ ಮತ್ತು ಶಾಲಾ ಆಡಳಿತ ಮಂಡಳಿ ಮುಂದಿಟ್ಟಿದ್ದಾರೆ. ಬೇಡಿಕೆ 1: ಶಾಲೆಗಳ ಆರಂಭಕ್ಕೆ ಮೊದಲು ಮಾರ್ಗಸೂಚಿಗಳನ್ನು ನೀಡಿ ಬೇಡಿಕೆ 2: ಮಾರ್ಗಸೂಚಿಗಳ ಪಾಲನೆ ಬಗ್ಗೆ ನಿಗಾ ವಹಿಸಬೇಕು ಬೇಡಿಕೆ 3: ಶಾಲೆಗೆ ಕಳುಹಿಸಿದ ಮೇಲೆ ಮಕ್ಕಳ ಸಂಪೂರ್ಣ ಜವಾಬ್ದಾರಿ ಸರ್ಕಾರವೇ ತೆಗೆದುಕೊಳ್ಳಬೇಕು.
ಸರ್ಕಾರಿ ಶಾಲೆಗಳು: ಖಾಸಗಿ ಶಾಲೆ ಮಕ್ಕಳ ಅಭಿಪ್ರಾಯ ಒಂದಾದ್ರೆ, ಸರ್ಕಾರಿ ಶಾಲೆಯ ಮಕ್ಕಳ ಪೋಷಕರು ಕೆಲವೊಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. 1. ಕೊರೋನಾ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಶೇ.80ರಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ ಅಂದಿದ್ದಾರೆ. ಕೇವಲ 20ರಷ್ಟು ಪೋಷಕರು ಗೊಂದಲದಲ್ಲಿದ್ದಾರೆ. 2. ಪಾಳಿ ಪದ್ಧತಿ (ಶಿಫ್ಟ್), ದಿನ ಬಿಟ್ಟು ದಿನ ತರಗತಿ ನಡೆಸಿದರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಿಲ್ಲ. 3. ಕೊರೊನಾ ಕಡಿಮೆಯಾದ ಮೇಲೆ ಅಥವಾ ಲಸಿಕೆ ಕಂಡು ಹಿಡಿದ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ಮಕ್ಕಳ ಪೋಷಕರು, ಶಾಲೆ ಆರಂಭಕ್ಕೆ ಸರ್ಕಾರದ ಮುಂದೆ ಐದು ಷರತ್ತುಗಳನ್ನು ಹಾಕಿದ್ದಾರೆ.
1. ಶಾಲೆ ಪ್ರಾರಂಭಿಸಿದ್ರೆ ಮಕ್ಕಳಿಗೆ ಸರ್ಕಾರವೇ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. 2. ಮಕ್ಕಳಿಗೆ ಏನೇ ತೊಂದರೆಯಾದರೂ ಸರ್ಕಾರವೇ ಜವಾಬ್ದಾರಿ ಹೊತ್ತುಕೊಳ್ಳಬೇಕು. 3. ನಿತ್ಯ ಶಾಲಾ ಕೊಠಡಿಗಳನ್ನ, ಶೌಚಾಲಯಗಳನ್ನ ಶುಚಿಯಾಗಿ ಇಟ್ಟುಕೊಳ್ಳಬೇಕು. 4. ಮಕ್ಕಳಿಗೆ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಆರೋಗ್ಯ ತಪಾಸಣೆ ಮಾಡಬೇಕು. 5. ನಿತ್ಯವೂ ಮಕ್ಕಳ ಆರೋಗ್ಯದ ಬಗ್ಗೆ ತಪಾಸಣೆ ಮಾಡಬೇಕು.
ಸರ್ಕಾರಿ, ಖಾಸಗಿ ಮಕ್ಕಳ ಪೇರೆಂಟ್ಸ್ ಶಾಲೆ ಆರಂಭಕ್ಕೆ ‘ರೆಡ್’ ಸಿಗ್ನಲ್ ತೋರಿದ್ದಾರೆ. ಆದ್ರೆ ಇವರಿಗಿಂತ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿರೋದು ನಿತ್ಯ ಕೆಲಸಕ್ಕೆ ಹೋಗೋ ಪೋಷಕರು. ಅವರು ಸಹ ಕೆಲ ಸಲಹೆಗಳನ್ನು ನೀಡಿದ್ದಾರೆ. 1. ಆಗಸ್ಟ್ ನಂತರ ಪರಿಸ್ಥಿತಿ ನೋಡಿಕೊಂಡು ಶಾಲೆ ಪ್ರಾರಂಭಿಸಲು ಬಹುತೇಕ ಪೋಷಕರ ಸಲಹೆ. 2. ಶಿಫ್ಟ್ ವ್ಯವಸ್ಥೆಗಿಂತ ದಿನ ಬಿಟ್ಟು ದಿನ ಶಾಲೆ ನಡೆಸಿದ್ರೆ ಒಳ್ಳೆಯದು ಎಂದು ಸಲಹೆ. 3. ಮಕ್ಕಳ ಜವಾಬ್ದಾರಿ ಸರ್ಕಾರ ಹೊರಬೇಕು. ಮಾಸ್ಕ್, ಗ್ಲೌಸ್ ನೀಡಬೇಕು.
ಫೈನಲ್ ರಿಪೋರ್ಟ್ 1. ಶಾಲೆ ಪ್ರಾರಂಭಕ್ಕೆ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಬಹುತೇಕ ಪೋಷಕರ ವಿರೋಧ. 2. ಕೊರೊನಾ ಲಸಿಕೆ ಬರುವವರೆಗೂ, ಶಾಲೆಗಳನ್ನು ಆರಂಭಿಸುವುದು ಬೇಡ. 3. ಕೊರೊನಾ ಕಡಿಮೆಯಾದ ನಂತರವಷ್ಟೇ ಶಾಲೆಗಳನ್ನು ಆರಂಭಿಸಿ.
– ಹೊಲಗಳಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ವಾಸ
– ಕೊರೊನಾಗೆ ಸೆಡ್ಡು ಹೊಡೆದ ಗ್ರಾಮಸ್ಥರು
ಯಾದಗಿರಿ: ರಾಜಕಾರಣಿಗಳು ಬೇಕಾಬಿಟ್ಟಿಯಾಗಿ ದೊಡ್ಡ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ನಿರ್ಲಕ್ಷಿಸುತ್ತಿದ್ದಾರೆ. ಇನ್ನೊಂದೆಡೆ ಕೊರೊನಾ ತಡೆಗೆ ಲಸಿಕೆ ಸಂಶೋಧನೆಯಾಗಿಲ್ಲ. ಹೀಗಿರುವಾಗ ಸಾಮಾಜಿಕ ಅಂತರವೇ ಮಹಾಮಾರಿ ತಡೆಗೆ ಆಯುಧವಾಗಿದೆ. ಇದನ್ನರಿತ ಗ್ರಾಮಸ್ಥರು ಕೊರೊನಾ ಬಂದ ಹಿನ್ನೆಲೆ ಹಳ್ಳಿ ಬಿಟ್ಟು ಜಮೀನು ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಕೊರೊನಾಗೆ ಸದ್ಯ ಔಷಧಿ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವುದು ಅನಿವಾರ್ಯವಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕೊರೊನಾ ವಿರುದ್ಧ ಹೋರಾಡಬಹುದಾಗಿದೆ. ಈ ಕುರಿತು ಸರ್ಕಾರ ಸಹ ಸಾರಿ ಸಾರಿ ಹೇಳುತ್ತಿದೆ. ಆದರೆ ಸುಕ್ಷಿತರೂ ಸೇರಿದಂತೆ ಹಲವರು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದರೆ ಜಿಲ್ಲೆಯ ಶಹಪುರ ತಾಲೂಕಿನ ಚಂದಾಪುರತಾಂಡಾದ 40ಕ್ಕೂ ಅಧಿಕ ಕುಟುಂಬಗಳು ತಮ್ಮ ಗ್ರಾಮವನ್ನು ತೊರೆದು, ಕಳೆದ ಒಂದು ತಿಂಗಳಿನಿಂದ ಹೊಲಗಳಲ್ಲಿ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡು ಕುಟುಂಬ ಸಮೇತರಾಗಿ ಅಲ್ಲೇ ವಾಸಿಸುತ್ತಿದ್ದಾರೆ.
ಈ ತಾಂಡದ ವ್ಯಕ್ತಿಗೆ ಮೇ 17 ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದರಿಂದ ಗ್ರಾಮದಲ್ಲಿ ಕೊರೊನಾ ವ್ಯಾಪಕವಾಗಿ ಹರಡುವ ಭೀತಿ ಉಂಟಾಗಿತ್ತು. ಸ್ಥಳೀಯ ಗ್ರಾ.ಪಂ.ಯಿಂದ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ತಿಳಿಸಿತ್ತು. ಇದರಿಂದ ಜಾಗೃತಗೊಂಡ ಗ್ರಾಮದ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಜಮೀನಿನಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಂಡು, ಜೀವನ ಸಾಗಿಸುತ್ತಿವೆ.
ಶೆಡ್ ನಲ್ಲಿಯೂ ಮಾಸ್ಕ್ ಧರಿಸುತ್ತಿರುವ ಕುಟುಂಬದ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ. ಸದ್ಯ ಪಾಸಿಟಿವ್ ಬಂದಿದ್ದ ಈ ಗ್ರಾಮದ ವ್ಯಕ್ತಿ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಮ್ಮ ಗ್ರಾಮಕ್ಕೆ ಮರಳಿದ್ದಾರೆ. ಜಿಲ್ಲಾಡಳಿತ ಸಹ ತಮ್ಮ ಮನೆಗಳಿಗೆ ತೆರಳುವಂತೆ ಈ ಕುಟುಂಬಗಳಿಗೆ ಸೂಚನೆ ನೀಡಿದೆ. ಆದರೆ ಈ ಕುಟುಂಬಗಳು ಕೊರೊನಾ ಕಡಿಮೆಯಾಗುವವರಿಗೂ ಜಮೀನಲ್ಲಿಯೇ ವಾಸ ಮಾಡಲು ನಿರ್ಧರಿಸಿವೆ.
ಸ್ಯಾಂಪಲ್ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಯಾದಗಿರಿ ಪ್ರಥಮ ಸ್ಥಾನ
ಕೊರೊನಾ ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆಯಲ್ಲಿ ಯಾದಗಿರಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಯಾದಗಿರಿ ಜಿಲ್ಲಾಡಳಿತ ಕೆಲವು ದಿಟ್ಟ ನಿರ್ಧಾರ ಕೈಗೊಂಡಿತ್ತು. ಇದರ ಪರಿಣಾಮ ಕಳೆದ 10 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿಯೇ ಯಾದಗಿರಿಯಲ್ಲಿ ಅತಿ ಹೆಚ್ಚು ಕೊವಿಡ್ 19 ಟೆಸ್ಟ್ ಆಗಿದೆ. 10 ದಿನದ ಅವಧಿಯಲ್ಲಿ 7,297 ಜನರಿಂದ ಸ್ಯಾಂಪಲ್ ಸಂಗ್ರಹಣೆ ಮಾಡಲಾಗಿದೆ. ಈವರೆಗೆ ಬರೋಬ್ಬರಿ 21,100 ಮಾದರಿಗಳ ಸಂಗ್ರಹ ಮತ್ತು ಪರೀಕ್ಷೆ ನಡೆದಿದ್ದು, ಇದರಲ್ಲಿ 19,500 ನೆಗಟಿವ್ ಮತ್ತು 828 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಈ ವರೆಗೆ 18,000ಕ್ಕೂ ಅಧಿಕ ಕಾರ್ಮಿಕರು ಮಹಾರಾಷ್ಟ್ರದಿಂದ ಜಿಲ್ಲೆಗೆ ವಾಪಸಾಗಿದ್ದು, ಇನ್ನೂ 150 ಜನರ ವರದಿ ಬಾಕಿಯಿದೆ.
ಸೋಂಕು ಹರಡುವದನ್ನು ತಟೆಗಟ್ಟಲು ಜಿಲ್ಲೆಯಲ್ಲಿ ಫೋರ್ ಪ್ರಿನ್ಸಿಪಲ್ಸ್ ಆಫ್ ‘ಟಿ’ ಅಳವಡಿಕೆ ಮಾಡಲಾಗಿತ್ತು. ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್ ಗೆ ಮಹತ್ವದ ಆಧ್ಯತೆ ನೀಡಲಾಗಿದೆ. ಪರಿಣಾಮ ಯಾದಗಿರಿ ಪ್ರಥಯ ಸ್ಥಾನ ಬಳಿಕ ಕಲಬುರಗಿ (4843) ಉಡುಪಿ(4219) ವಿಜಯಪುರ(3891) ಸ್ಥಾನ ಪಡೆದಿವೆ. ಅತಿ ಹೆಚ್ಚು ಟೆಸ್ಟಿಂಗ್ ನೊಂದಿಗೆ ಯಾದಗಿರಿ ಅಗ್ರಸ್ಥಾನದಲ್ಲಿದೆ.
ಭೋಪಾಲ್: ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದಕ್ಕೆ ವರನಿಗೆ ನಗರಸಭೆ ಅಧಿಕಾರಿಗಳು 2,100 ರೂ. ದಂಡ ವಿಧಿಸಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ವರ ಧಮೇಂದ್ರ ನಿರಾಲೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಮಾಸ್ಕ್ ಧರಿಸದಕ್ಕೆ 1 ಸಾವಿರ ರೂ. ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದಕ್ಕೆ 1,100 ರೂ. ದಂಡ ಹಾಕಲಾಗಿದೆ ಎಂದು ಇಂದೋರಿನ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ವಿವೇಕ್ ಗಂಗ್ರೇಡ್ ಹೇಳಿದ್ದಾರೆ.
ಮದುವೆಯಲ್ಲಿ ಕೇವಲ 12 ಜನರು ಭಾಗಿಯಾಗುವಂತೆ ಷರತ್ತು ವಿಧಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ 12 ಜನರು ಒಂದೇ ವಾಹನದಲ್ಲಿ ಬಂದಿದ್ದಾರೆ. ಯಾರು ಸಹ ಮಾಸ್ಕ್ ಧರಿಸಿರಲಿಲ್ಲ. ಇಂದೊರ್ ನಗರದಲ್ಲಿ ಒಟ್ಟು 4,069 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 174 ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಇಂದೋರಿನಲ್ಲಿ ಕಟ್ಟುನಿಟ್ಟಿನ ಕ್ರಮಗಳು ಕೈಗೊಳ್ಳಲಾಗಿದೆ.
ಮಡಿಕೇರಿ: ಕೊರೊನಾ ಮಹಾಮಾರಿಯಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದ ಸರ್ಕಾರ ಬಳಿಕ ಹಂತ ಹಂತವಾಗಿ ಸಡಿಲ ಮಾಡಿತು. ಲಾಕ್‍ಡೌನ್ ಸಡಿಲಿಕೆ ಮಾಡಿ ಸಾರಿಗೆ ಸಂಚಾರ ಆರಂಭವಾಗಿದ್ದರೂ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಮಾತ್ರ ಲಾಕ್‍ಡೌನ್ ನಲ್ಲೇ ಇದ್ದಾರೆ.
ಖಾಸಗಿ ಬಸ್ಸುಗಳ ಸಂಚಾರವನ್ನೇ ನಂಬಿಕೊಂಡಿರುವ ಕೊಡಗಿಗೆ ಅವುಗಳ ಓಡಾಟವಿಲ್ಲದೆ ಜನರು ಪರಿಪಾಟಲು ಪಡುವಂತಾಗಿದೆ. 150ಕ್ಕೂ ಹೆಚ್ಚು ಖಾಸಗಿ ಬಸ್ಸುಗಳಿರುವ ಕೊಡಗಿನಲ್ಲಿ ಗ್ರಾಮೀಣ ಭಾಗಕ್ಕೆ ಅವುಗಳೇ ಸಂಪರ್ಕ ಸೇತುವೆ. ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ ಬಸ್ಸುಗಳಲ್ಲಿ ಸಾರಿಗೆ ಸಂಚಾರ ಮಾಡುವುದಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕು ಅಂತಾ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಹೀಗಾಗಿ ಬಸ್ಸುಗಳಲ್ಲಿ ಅರ್ಧದಷ್ಟು ಸೀಟುಗಳಿಗಿಂತ ಹೆಚ್ಚು ಜನರನ್ನು ಕರೆದೊಯ್ಯುವಂತಿಲ್ಲ.
ಈ ನಿಯಮದಂತೆ ಬಸ್ ಓಡಿಸುವುದಾದರೆ ತಮಗೆ ನಷ್ಟ ಆಗುತ್ತೆ. ಹೀಗಾಗಿ ಸೆಪ್ಟೆಂಬರ್ ತಿಂಗಳ ಕೊನೆಯವರೆಗೂ ಬಸ್ಸುಗಳನ್ನು ಓಡಿಸುವುದಿಲ್ಲ ಅಂತಾ ಖಾಸಗಿ ಬಸ್ ಮಾಲಿಕರ ಸಂಘ ನಿರ್ಧರಿಸಿದೆ.
ಖಾಸಗಿ ಬಸ್ಸಿನಲ್ಲಿ ಇರೋದೆ 45 ಸೀಟುಗಳು ಅದರಲ್ಲಿ ಅರ್ಧ ಪ್ರಮಾಣ ಮಾತ್ರ ಸೀಟು ಹಾಕಿದರೆ ನಮಗೆ ಭಾರಿ ನಷ್ಟವಾಗುತ್ತದೆ. ಆದ್ದರಿಂದ ನಾವು ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಸ್ಸು ಓಡಿಸುವುದಾದರೆ ಸರ್ಕಾರ 6 ತಿಂಗಳ ಟ್ಯಾಕ್ಸ್ ರಿಯಾಯ್ತಿ ನೀಡಲಿ. ಇಲ್ಲದಿದ್ದರೆ ಸೆಪ್ಟೆಂಬರ್ ತಿಂಗಳ ಬಳಿಕವಷ್ಟೇ ಬಸ್ಸುಗಳ ಓಡಿಸಲು ನಿರ್ಧರಿಸಲಾಗುವುದು ಅನ್ನೋದು ಖಾಸಗೀ ಬಸ್ ಮಾಲೀಕರ ಸಂಘದ ನಿರ್ಧಾರ.
ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಬಸ್ಸುಗಳೆ ಓಡಾಡುತ್ತಿದ್ದವು. ಆದರೆ ಇದೀಗ ಅವುಗಳು ಇಲ್ಲದಿದ್ದರೆ ಜಿಲ್ಲಾಡಳಿತ ಸರ್ಕಾರಿ ಸಾರಿಗೆಯನ್ನಾದರೂ ಓಡಿಸಲಿ. ಇಲ್ಲವೆ ಖಾಸಗಿ ಬಸ್ಸುಗಳ ಮಾಲೀಕರ ಸಂಘದವರನ್ನು ಕರೆದು ಅವರ ಸಮಸ್ಯೆಗಳನ್ನು ಆಲಿಸಿ ಬಸ್ ಓಡಿಸಲು ಸೂಚಿಸಲಿ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
– ಕೊರೊನಾ ಮುಕ್ತಿಗಾಗಿ ಮಂತ್ರಾಲಯದಲ್ಲಿ ರಾಯರ ವಿಶೇಷ ದರ್ಶನ
– ನೂರಾರು ಕಾರ್ಯಕರ್ತರ ಜೊತೆ ಕಾಮಗಾರಿ ಪರಿಶೀಲನೆ
ರಾಯಚೂರು: ಕೊರೊನಾ ತಾಂಡವಾಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹತ್ತಾರು ಕಾರ್ಯಕರ್ತರೊಂದಿಗೆ ಮಂತ್ರಾಲಯದ ರಾಯರ ನವವೃಂದಾವನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ನಿಯಮ ಪಾಲಿಸದೆ ಓಡಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಹೆಚ್ಚಿದೆ. ಹೀಗಾಗಿ ಪ್ರಾರ್ಥನೆ ಮಾಡಲು ಮಂತ್ರಾಲಯಕ್ಕೆ ಹೋಗಿದ್ದೆ. ದೇಶದಲ್ಲಿ ಮೋದಿ ಹೀರೋ ಆಗಿದ್ದಾರೆ ಆದರೂ, ಎಲ್ಲರನ್ನೂ ಕಾಪಾಡಬೇಕು ಎಂದು ರಾಯರ ದರ್ಶನ ಮಾಡಿದೆ ಎಂದು ರಾಯಚೂರಿನ ಎಲೆಬಿಚ್ಚಾಲಿಯಲ್ಲಿ ಹೇಳಿದ್ದಾರೆ.
ಸಾರ್ವಜನಿಕರಿಗೆ ದರ್ಶನಕ್ಕೆ ಅನುಮತಿ ಇಲ್ಲ ವಿಶೇಷ ಅನುಮತಿ ಪಡೆದು ರಾಯರ ದರ್ಶನ ಪಡೆದು ಸ್ವಾಮೀಜಿ ಭೇಟಿ ಮಾಡಿದ್ದೇನೆ. ನಾನು ರಾಯರ ಪರಮಭಕ್ತ ಸ್ವಾಮಿಜಿ ಅನುಮತಿ ಪಡೆದು ದರ್ಶನ ಮಾಡಿದ್ದೇನೆ ಎಂದು ಅಂತರಾಜ್ಯ ದೇವಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡು ಬಂದಿರುವುದನ್ನ ಈಶ್ವರಪ್ಪ ಸಮರ್ಥಿಸಿಕೊಂಡರು. ಅಲ್ಲದೆ ಕಾರ್ಯಕರ್ತರೊಂದಿಗೆ ಎಲೆಬಿಚ್ಚಾಲಿಯ ರಾಯರ ನವವೃಂದಾವನದ ದರ್ಶನ ಪಡೆದರು. ಈ ವೇಳೆ ಸಹ ಸಾಮಾಜಿಕ ಅಂತರ ಮಾಯವಾಗಿತ್ತು.
ಅನಿವಾರ್ಯ ಕಾರಣಕ್ಕೆ ಒಟ್ಟಾಗಿರಬೇಕಾಗುತ್ತೆ ಯಾವಾಗಲೂ ಸಾಮಾಜಿಕ ಅಂತರ ಕಾಪಾಡುವುದು ಆಗುವುದಿಲ್ಲ. ಡಿನ್ನರ್ ರಾಜಕೀಯದ ಬಗ್ಗೆ ನನಗೇನೂ ಗೊತ್ತಿಲ್ಲ. ಎಲ್ಲರೂ ಒಂದೆಡೆ ಸೇರಬಾರದಾ, ಊಟಕ್ಕೆ ಸೇರಿದಾರೆ. ಅನಿವಾರ್ಯವಾಗಿ ಕೆಲವು ಆಗಲೇಬೇಕಿದೆ. ರಮೇಶ್ ಕತ್ತಿ, ದಿನೇಶ್ ಕತ್ತಿ ಏನು ಮಾಡಿದಾರೋ ಗೊತ್ತಿಲ್ಲ ಎಂದರು.
ಗ್ರಾಮ ಪಂಚಾಯಿತಿ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಆಡಳಿತಾಧಿಕಾರಿ ನೇಮಕ ಮಾಡಬೇಕಾ, ಸಮಿತಿ ಮಾಡಬೇಕೋ ತೀರ್ಮಾನ ಮಾಡಬೇಕಿದೆ. ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸಲು ನಾವು ಹೇಳಿದ್ದೇವೆ ಆದರೆ, ಕೊರೊನಾ ಕಾರಣಕ್ಕೆ ಆಯೋಗ ಚುನಾವಣೆ ಬೇಡ ಎಂದಿದೆ. ಕಾಂಗ್ರೆಸ್ ಮಾಡುತ್ತಿರುವ ಯಾವುದೇ ಆರೋಪಗಳಿಗೆ ಹುರುಳಿಲ್ಲ ಎಂದರು.
ನರೇಗಾ ಮೂಲಕ ಗ್ರಾಮೀಣ ಭಾಗದ ಬಡವರಿಗೆ ಉದ್ಯೋಗ ಸೃಷ್ಠಿ ಮಾಡಿದ್ದೇವೆ. 5,800ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಟ್ಟಿದ್ದೇವೆ. ಹಿಂದಿನ ಬಾಕಿ ಹಣವನ್ನು ಬಿಡುಗಡೆ ಮಾಡಿ ತೀರಿಸುತ್ತಿದ್ದೇವೆ. ಯಾರೇ ಬಂದರೂ ಜಾಬ್ ಕಾರ್ಡ್ ಮಾಡಿ ಕೆಲಸ ಕೊಡುತ್ತಿದ್ದೇವೆ. ಕೇಂದ್ರದ 20 ಲಕ್ಷ ಕೋಟಿ ರೂ.ಗಳಲ್ಲಿ 40 ಸಾವಿರ ಕೋಟಿ ರೂ. ಹಣವನ್ನ ಬಡವರಿಗೆ ಉದ್ಯೋಗ ಕೊಡಲು ಮೀಸಲಿಟ್ಟಿದ್ದೇವೆ ಎಂದರು. ರಾಯಚೂರು ತಾಲೂಕಿನ ವಿವಿಧೆಡೆ ನರೇಗಾ ಕಾಮಗಾರಿ ವೀಕ್ಷಣೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ಈಶ್ವರಪ್ಪ ಭಾಗವಹಿಸಿ ಯಾದಗಿರಿಗೆ ತೆರಳಲಿದ್ದಾರೆ.
ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಅವಾಂತರವನ್ನೇ ಸೃಷ್ಟಿಸಿದೆ. ರಾಜ್ಯದಲ್ಲಿ ದಿನಕ್ಕೆ ನೂರಾರು ಪ್ರಕರಣಗಳು ಪತ್ತೆಯಾಗುತ್ತಿವೆ. ಈ ನಡುವೆ ಜನರಿಗೆ ಮಾದರಿಯಾಗಬೇಕಾದ ಆರೋಗ್ಯ ಸಚಿವ ಶ್ರೀರಾಮುಲು ಕೋವಿಡ್ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀರಾಮುಲು ಸೇಬಿನ ಹಾರ ಹಾಕಿಸಿಕೊಂಡಿದ್ದಾರೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಅದ್ಧೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ವೇದಾವತಿ ನದಿಗೆ ಬಾಗೀನ ಅರ್ಪಣೆಗೆ ಆಗಮಿಸಿದ್ದ ಶ್ರೀರಾಮುಲು, ಎತ್ತಿನ ಗಾಡಿ ಏರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಪಾಲಿಸದೆ ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮಾಡಿದ್ದಾರೆ.
ಸಚಿವರಿಗೆ ಸಂಸದ ಎ.ನಾರಾಯಣಸ್ವಾಮಿ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಹ ಸಾಥ್ ನೀಡಿದ್ದು, ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ. ಈ ವೇಳೆ ನೂರಾರು ಜನರ ಮಧ್ಯೆ ಸಚಿವರಿಗೆ ಕಾರ್ಯಕರ್ತರು ಕ್ರೇನ್ ಮೂಲಕ ಸೇಬಿನ ಹಾರ, ಜೆಸಿಬಿ ಮೂಲಕ ಹೂವು ಹಾಕಿದ್ದಾರೆ. ಸ್ವತಃ ಸಚಿವರು ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದು, ಮಾತ್ರವಲ್ಲದೆ ಸಚಿವರ ಸಮ್ಮುಖದಲ್ಲೇ ನೂರಾರು ಜನ ಕಾನೂನನ್ನು ಮರೆತಿದ್ದಾರೆ.
ಶಾಸಕ ರಘುಮೂರ್ತಿ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಶಾಸಕನಾದ ನನಗೆ ಈ ಕುರಿತು ಮಾಹಿತಿ ನೀಡಿಲ್ಲ. ಶಿಷ್ಟಾಚಾರ ಪಾಲಿಸಲು ಇಂದು ಬೆಳಗ್ಗೆ ಅಧಿಕಾರಿಗಳು ನನ್ನನ್ನು ಕರೆದಿದ್ದಾರೆ. ಸಚಿವರು ಬಿಡಿ, ಜನ ಈ ಕುರಿತು ಅರಿತುಕೊಳ್ಳಬೇಕಿತ್ತು. ಚಿತ್ರದುರ್ಗ ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡಿದರೆ ಗತಿ ಏನು? ಚಳ್ಳಕೇರೆಯಲ್ಲಿಯೇ ಪ್ರಕರಣಗಳು ಪತ್ತೆಯಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸದೆ ಹಾಸ್ಟೆಲ್‍ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿ ನಮ್ಮ ಕ್ಷೇತ್ರದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನವದೆಹಲಿ: ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್ ಅನ್ನು ಜೂನ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಪ್ರಮುಖ ಹತ್ತು ನಿರ್ದೇಶನಗಳನ್ನು ತಿಳಿಸಿದೆ.
ಲಾಕ್‍ಡೌನ್ 5.0ನಲ್ಲಿ ಪ್ರಮುಖವಾಗಿ ಮಾಲ್ ಹಾಗೂ ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳು ತೆರೆಯಲು ಅನುಮತಿ ನೀಡಲಾಗುತ್ತಿದೆ. ಈಗಾಗಲೇ ಕಂಪನಿ, ಕೈಗಾರಿಕೋದ್ಯಮ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ವಿಧಿಸಿದೆ. ಇದನ್ನೂ ಓದಿ: ಜೂ.30ರವರೆಗೆ ಲಾಕ್‍ಡೌನ್ ವಿಸ್ತರಣೆ- ಜೂನ್ 8ರಿಂದ ಮಾಲ್, ದೇವಸ್ಥಾನ ಓಪನ್
ಕೋವಿಡ್-19 ನಿಯಂತ್ರಣಕ್ಕೆ ನಿರ್ದೇಶನಗಳು:
1. ಮಾಸ್ಕ್: ಸಾರ್ವಜನಿಕ ಸ್ಥಳದಲ್ಲಿ, ಕಚೇರಿಯ ಒಳಗೆ, ಪ್ರಯಾಣದ ವೇಳೆ ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು.
2. ಸಾಮಾಜಿಕ ಅಂತರ: ಒಬ್ಬೊರಿಂದ ಮತ್ತೊಬ್ಬರ ಮಧ್ಯೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು.
3. ಸಭೆ-ಸಮಾರಂಭ: ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಸಭೆ ಸಮಾರಂಭ ನಡೆಸುವಂತಿಲ್ಲ. ಮದುವೆಯಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಅತ್ಯಕ್ರಿಯೆ, ಅಂತಿಮನ ನಮನದ ವೇಳೆ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ.
4. ದಂಡ: ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ವಿಧಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತಾಧಿಕಾರಿಗಳ ಸೂಚನೆಯಂತೆ ದಂಡ ವಿಧಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ
5. ನಿಷೇಧ: ಸಾರ್ವಜನಿಕ ಸ್ಥಳದಲ್ಲಿ ಮದ್ಯ ಕುಡಿಯುವುದು, ಪಾನ್, ಗುಟ್ಕಾ, ತಂಬಾಕು ತಿನ್ನುವುದು, ಸಿಗರೇಟ್ ಸೇದುವುದು ನಿಷೇಧ.
6. ವರ್ಕ್ ಫ್ರಂ ಹೋಮ್: ಕಂಪನಿಗಳು, ಸಂಸ್ಥೆಗಳು ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್ ಅನುಸರಿಸಬೇಕು.
7. ಮುಂಜಾಗ್ರತಾ ಕ್ರಮ: ಕೆಲಸ ಅಥವಾ ವ್ಯವಹಾರದ ಸಮಯದಲ್ಲಿ ಅಧಿಕಾರಿಗಳು, ಕೆಲಸದ ಸ್ಥಳ, ಅಂಗಡಿ, ಮಾರುಕಟ್ಟೆ, ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.
8. ಸ್ಕ್ರೀನಿಂಗ್: ಕಂಪನಿ, ವ್ಯವಹಾರದ ಸ್ಥಳಗಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಇರಲೇಬೇಕು. ಜೊತೆಗೆ ಸಿಬ್ಬಂದಿ ಒಳಗೆ ಹಾಗೂ ಹೊರಗೆ ಹೋಗುವ ಜಾಗದಲ್ಲಿ ಸ್ಯಾನಿಟೈಜರ್ ಇರಿಸಬೇಕು.
9. ಸ್ಯಾನಿಟೈಜೇಷನ್: ಕಚೇರಿಯ ಡೋರ್ ಹ್ಯಾಂಡಲ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಗಾಗ ಸ್ಯಾನಿಟೈಜೇಷನ್ ಮಾಡಬೇಕು.
10. ಕೆಲಸ ವೇಳೆ ಸಾಮಾಜಿಕ ಅಂತರ: ಕಚೇರಿಯಲ್ಲಿ ಕೆಲಸ ಮಾಡುವಾಗ ಸಿಬ್ಬಂದಿಯ ಮಧ್ಯೆ ಅಂತರ ಇರಬೇಕು. ಜೊತೆಗೆ ಶಿಫ್ಟ್ ಗಳ ಮಧ್ಯೆ ಸ್ವಚ್ಛತೆ, ಸ್ಯಾನಿಟೈಜೇಷನ್ ಮಾಡಲು ಅನುಕೂಲವಾಗುವಂತೆ ಸಮಯದ ಅಂತರವಿರಬೇಕು.
ಗದಗ: ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆಯ್ಕೆವೇಳೆ ಶಾಸಕರು ಹಾಗೂ ತಹಶಿಲ್ದಾರರಿಂದ ಸರ್ಕಾರದ ನಿಯಮ ಉಲ್ಲಂಘನೆಯಾಗಿದ್ದು, ಸಾಮಾಜಿಕ ಅಂತರ ಮರೆತು ಬೇಕಾಬಿಟ್ಟಿಯಾಗಿ ವರ್ತಿಸಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ. ಗುರುವಾರ ಲಕ್ಷ್ಮೇಶ್ವರ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು. ಈ ವೇಳೆ ಸಾಮಾಜಿಕ ಅಂತರ, ಕೆಲವರು ಮುಖಕ್ಕೆ ಮಾಸ್ಕ್ ಧರಿಸದೆ ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ, ತಹಶೀಲ್ದಾರ್ ಬ್ರಮರಾಂಭ ಗುಬ್ಬಿಶೆಟ್ಟಿ ಹಾಗೂ ಸಿಬ್ಬಂದಿ, ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು. ನೆರೆದವರೆಲ್ಲರೂ ಸಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸದೆ ಗುಂಪು ಸೇರಿದ್ದಾರೆ. ಈ ಮೂಲಕ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಆಡಳಿತ ಪಕ್ಷದ ಶಾಸಕರು, ಸರ್ಕಾರದ ಪ್ರತಿನಿಧಿ ತಹಶಿಲ್ದಾರರೇ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾ ಅಟ್ಟಹಾಸದ ನಡುವೆ ಈ ಚುನಾವಣೆ ಅಗತ್ಯವಿತ್ತೇ, ಅಲ್ಲದೆ ಕೆಲವೇ ಜನ ಭಾಗವಹಿಸಿ ಚುನಾವಣೆ ಮಾಡಬಹುದಿತ್ತು. ಇಷ್ಟು ಜನ ಸೇರಿದರು ಸಾಮಾಜಿಕ ಅಂತರ ಕಾಪಾಡಲಾಗಿಲ್ಲ. ಮಾಸ್ಕ್ ಧರಿಸಿರಲಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ನೀಲಪ್ಪ ಹತ್ತಿ ಎಪಿಎಂಸಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೋಮಣ್ಣ ಆಯ್ಕೆಯಾಗಿದ್ದಾರೆ.