Tag: snake

  • ಮೈಸೂರು ಮೃಗಾಲಯದಲ್ಲಿ ಕೋಬ್ರಾ, ಹುಲಿ ಸಾವು

    ಮೈಸೂರು ಮೃಗಾಲಯದಲ್ಲಿ ಕೋಬ್ರಾ, ಹುಲಿ ಸಾವು

    ಮೈಸೂರು: ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್(ಮೈಸೂರು ಮೃಗಾಲಯ)ನಲ್ಲಿ ಹುಲಿ ಹಾಗೂ ಕಿಂಗ್ ಕೋಬ್ರಾ ಸಾವನ್ನಪ್ಪಿವೆ. ಕಿಂಗ್ ಕೋಬ್ರಾ ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದರೆ, ಹುಲಿ ಹೃದಯಾಘಾತದಿಂದ ಸಾವನ್ನಪ್ಪಿದೆ ಎನ್ನಲಾಗಿದೆ.

    ಈ ಬಗ್ಗೆ ಮೈಸೂರು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಪ್ರಾಣಿಗಳ ವಿನಿಮಯ ಯೋಜನೆಯಡಿ ಮಂಗಳೂರಿನ ಪಿಲಿಕುಳ ಮೃಗಾಲಯದಿಂದ 2 ಹುಲಿ, 2 ಹಾವುಗಳನ್ನ ಮೈಸೂರು ಮೃಗಾಲಯಕ್ಕೆ ತರಿಸಲಾಗಿತ್ತು. ಆದರೆ ಪ್ರಾಣಿಗಳನ್ನು ಆರೋಗ್ಯ ವಿಚಾರಿಸಲು ಪ್ರತ್ಯೇಕವಾಗಿ ಇಡಲಾಗಿತ್ತು. ಫೆ. 29ರ ಬೆಳಗ್ಗೆ ಪೈಥಾನ್ ಹೆಸರಿನ ಕಿಂಗ್ ಕೋಬ್ರಾ ಸಾವನ್ನಪ್ಪಿತ್ತು. ನಂತರ ಅದರ ಮೃತದೇಹವನ್ನ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಹಾವು ಲಿವರ್ ಸಮಸ್ಯೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು.

    ಭಾನುವಾರ ಬೆಳಗ್ಗೆ ಒಂದು ಹುಲಿ ಸಹ ಮೃಗಾಲಯದಲ್ಲಿ ಮೃತಪಟ್ಟಿದೆ. ಅದರ ಮೃತದೇಹವನ್ನ ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದು ಹೃದಯಾಘಾತದಿಂದ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಪರೀಕ್ಷೆಗೆ ಒಳಪಡಿಸಿದ ತಕ್ಷಣವೇ ವೈದ್ಯರು ಈ ಬಗ್ಗೆ ತಿಳಿಸಿದ್ದಾರೆ.

    ಪ್ರಾಣಿಗಳು ಮೃತಪಡಲು ಆರೋಗ್ಯ ಸಮಸ್ಯೆಯೇ ಕಾರಣವಾ? ಅಥವಾ ಬೇರೆ ವೈರಸ್ ಇದೆಯಾ? ಬ್ಯಾಕ್ಟೀರಿಯಾ ಇದೇಯ ಎಂಬುದನ್ನ ತಿಳಿಯಬೇಕಿದೆ. ಅದಕ್ಕಾಗಿ ಪ್ರಾಣಿಗಳ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿದ್ದೇವೆ. ರಿಪೋರ್ಟ್ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಮೃಗಾಲಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಮೃಗಾಲಯ ನಿರ್ದೇಶಕರು ಹೇಳಿದ್ದಾರೆ.

  • ಮರಿಗಳಿಗಾಗಿ ಹಾವಿನ ಜೊತೆ ಸೆಣಸಾಟಕ್ಕೆ ನಿಂತ ಮರ ಕುಟಿಗ: ವಿಡಿಯೋ

    ಮರಿಗಳಿಗಾಗಿ ಹಾವಿನ ಜೊತೆ ಸೆಣಸಾಟಕ್ಕೆ ನಿಂತ ಮರ ಕುಟಿಗ: ವಿಡಿಯೋ

    – ತಾಯಿ ಪಕ್ಷಿಯ ಪ್ರೀತಿಗೆ ನೆಟ್ಟಿಗರು ಫಿದಾ

    ನವದೆಹಲಿ: ಮರಿಗಳಿಗಾಗಿ ಮರ ಕುಟಿಗ ಪಕ್ಷಿಯೊಂದು ಹಾವಿನ ಜೊತೆ ಪ್ರಾಣವನ್ನು ಲೆಕ್ಕಿಸದೆ ಹೋರಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ತಾಯಿ ಎಂದರೆ ಹಾಗೇ ಎಂಥ ಕಠಿಣ ಪರಿಸ್ಥಿತಿಯಲ್ಲೂ ತನ್ನ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಈ ಮರಕುಟಿಗದ ವಿಡಿಯೋ ತಾಜಾ ಉದಾಹರಣೆಯಾಗಿದೆ. ಭಾರತದ ಅರಣ್ಯಾಧಿಕಾರಿ ಸುಸಂತ್ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಮರ ಕುಟಿಗದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.

    ಈ ವಿಡಿಯೋವನ್ನು ಹಂಚಿಕೊಂಡಿರುವ ಸುಸಂತ್ ನಂದ ಅವರು, ಈ ಗ್ರಹದಲ್ಲಿರುವ ಎಲ್ಲ ಶಕ್ತಿಗಳು ಒಂದುಗೂಡಿದರು ತಾಯಿ ಎಂಬ ಪ್ರೀತಿಯನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ. ಈ ಮರ ಕುಟಿಗ ತನ್ನ ಮರಿಗಳಿಗಾಗಿ ಹಾವಿನ ಜೊತೆ ಜಗಳಕ್ಕೆ ಬಿದ್ದು ಕೊನೆಯಲ್ಲಿ ತನ್ನ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ರೀಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    27 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮರ ಕುಟಿಗ ಮಾಡಿದ ಗೂಡಿನಲ್ಲಿ ಒಂದು ದೊಡ್ಡ ಗಾತ್ರದ ಹಾವು ಬಂದು ಸೇರಿಕೊಂಡಿರುತ್ತದೆ. ಅದನ್ನು ನೋಡಿದ ಪಕ್ಷಿ ಅದನ್ನು ಕುಕ್ಕಲು ಆರಂಭಿಸುತ್ತದೆ. ಆದರೆ ಹಾವು ಬಲಿಷ್ಠವಾಗಿದ್ದ ಕಾರಣ ಮರ ಕುಟಿಗವನ್ನೇ ಕಚ್ಚುತ್ತದೆ. ಆದರೆ ಛಲ ಬಿಡದ ತಾಯಿ ಪಕ್ಷಿ ತನ್ನ ಮರಿಗಳಿಗಾಗಿ ಜೀವವನ್ನೇ ಒತ್ತೆಇಟ್ಟು ಹಾವನ್ನು ಅಲ್ಲಿಂದ ಓಡಿಸುತ್ತದೆ.

    ಈ ವಿಡಿಯೋ ನೋಡಿ ಕೆಲವರು ಕಮೆಂಟ್ ಮಾಡಿದ್ದು, ಅ ತಾಯಿ ಪಕ್ಷಿ ತುಂಬ ಗ್ರೇಟ್. ತಾಯಿ ಅಂದರೆ ಹಾಗೇ ಇರಬೇಕು ಎಂದು ಹೇಳಿದ್ದಾರೆ. ಸುಸಂತ್ ನಂದ ಹಾಕಿರುವ ಈ ವಿಡಿಯೋ ಸುಮಾರು 12 ಸಾವಿರ ಜನ ವೀಕ್ಷಿಸಿದ್ದು, ಹಲವಾರು ಮಂದಿ ರೀಟ್ವೀಟ್ ಮಾಡಿದ್ದಾರೆ.

  • ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ

    ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ

    – ಈಕೆ ಹಿಡಿಯುವ ಹಾವು ನೋಡಿದ್ರೆ ಮೈ ಝಲ್ ಎನ್ನುತ್ತೆ

    ಕಾರವಾರ: ಹಾವು ಎಂದ್ರೆ ಎಂಥವರಿಗೂ ಭಯ. ಆದರೆ ಇಲ್ಲೊಬ್ಬ ಪುಟ್ಟ ಬಾಲಕಿಗೆ ಹಾವು ಅಂದ್ರೆ ಪಂಚಪ್ರಾಣ. ಕಾರ್ಕೋಟಕ ವಿಷದ ಹಾವನ್ನು ಸಹ ಮುದ್ದಿಸುವ ಈ ಬಾಲಕಿ ಹಾವುಗಳ ರಕ್ಷಣೆಗೆ ನಿಂತಿದ್ದಾಳೆ. ಅಷ್ಟಕ್ಕೂ ಈ ಬಾಲಕಿ ಯಾರು ಅವಳ ಕೆಲಸವೇನು ಎಂದು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದು ಗ್ಯಾರಂಟಿ.

    ಯಾರದ್ದೇ ಮನೆಗೆ ಹಾವು ನುಗ್ಗಲಿ, ಇಲ್ಲವೇ ಹಾವೇ ತೊಂದರೆಯಲ್ಲಿರಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಆವರ್ಸಾ ಗ್ರಾಮದ 12 ವರ್ಷದ ಪುಟ್ಟ ಬಾಲಕಿ ಭೂಮಿಕಾ, ಕೈಯಲ್ಲಿ ಸ್ಟಿಕ್ ಹಿಡಿದು ವಿಷ ಸರ್ಪವನ್ನು ತನ್ನ ಕೈಯಲ್ಲಿ ಹಿಡಿದು ರಕ್ಷಿಸುತ್ತಾಳೆ.

    ಈ ಊರಿನ ಸುತ್ತಮುತ್ತ ಯಾರ ಮನೆಗೆ ಹಾವು ಬರಲಿ ಮೊದಲು ಫೋನು ಹೋಗುವುದು ಇವರ ಮನೆಗೆ. ತಂದೆ ಮಹೇಶ್ ನಾಯ್ಕ ಉರುಗತಜ್ಞರಾಗಿದ್ದು, ಹಾವಿಗಳ ರಕ್ಷಣೆ ಮಾಡುತ್ತಾರೆ. ತಂದೆಯನ್ನು ನೋಡಿ ಹಾವುಗಳನ್ನು ಹಿಡಿಯುವುದನ್ನು ಕಲಿತ ಈ ಪುಟ್ಟ ಬಾಲಕಿ ಈಗ ತಮ್ಮ ಊರಿನ ಸುತ್ತಮುತ್ತ ಯಾವುದೇ ಹಾವು ಬರಲಿ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾಳೆ. ಹಾವುಗಳ ಜೊತೆ ಪ್ರೀತಿ ಬೆಳಸಿಕೊಂಡಿರುವ ಈ ಪುಟ್ಟ ಬಾಲಕಿ 50 ಕ್ಕೂ ಹೆಚ್ಚು ವಿಷಸರ್ಪ, ಹೆಬ್ಬಾವುಗಳನ್ನು ರಕ್ಷಣೆ ಮಾಡಿ ತಾನೇ ಸ್ವತಃ ಕಾಡಿಗೆ ಬಿಟ್ಟು ಬಂದಿದ್ದಾಳೆ.

    ಮನೆಯಲ್ಲಿ ನೀನು ಹುಡಗಿ ಹಾಗೆಲ್ಲ ಹಾವು ಹಿಡಿಯಬಾರದು ಎಂದು ಈಕೆಗೆ ತಿಳಿಹೇಳಿ ವಿಷ ಸರ್ಪಗಳನ್ನು ಹಿಡಿಯಬೇಡ ಎನ್ನುತ್ತಾರೆ. ಆದರೂ ಈಕೆ ಮನೆಗೆ ನುಗ್ಗಿ ಬರುವ ಹಾವುಗಳನ್ನು ತಾನೇ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟುಬರುತ್ತಾಳೆ. ಹಾವು ಅಂದರೆ ನನಗೆ ಇಷ್ಟ. ಅಪ್ಪ ಹಾವನ್ನು ಹಿಡಿದು ರಕ್ಷಣೆ ಮಾಡುವುದನ್ನು ನೋಡಿ ಹಾವು ಹಿಡಿಯುವುದನ್ನು ಕಲಿತಿದ್ದೇನೆ. ಎಲ್ಲಾತರದ ಹಾವು ಹಿಡಿಯುತ್ತೇನೆ ಎಂದು ಭೂಮಿಕ ಹೇಳಿದ್ದಾಳೆ.

    ಆವರ್ಸಾದ ಸುತ್ತಮುತ್ತಲೂ ದಟ್ಟ ಕಾಡುಗಳಿವೆ. ಹೀಗಾಗಿ ಈ ಕಾಡಿನಿಂದ ಆಹಾರ ಅರಸಿ ನಾಡಿಗೆ ವಿಷಸರ್ಪಗಳು ಲಗ್ಗೆ ಇಡುತ್ತವೆ. ಇಂತಹ ಸಂದರ್ಭದಲ್ಲಿ ಜನರು ಭಯ ಪಟ್ಟು ಹಾವನ್ನು ಕೊಲ್ಲುತಿದ್ದರು. ಆದರೆ ಈಗ ಈ ಬಾಲಕಿ ಹಾವನ್ನು ಹಿಡಿಯುವುದನ್ನು ನೋಡಿ ಜನರಲ್ಲೂ ಭಯ ಮಾಯವಾಗಿದೆ. ತಮ್ಮ ಮನೆಗಳಿಗೆ ಹಾವು ಬಂದರೆ ಸುತ್ತಮುತ್ತಲ ಊರಿನ ಜನ ಈ ಬಾಲಕಿಗೆ ಫೋನ್ ಮಾಡುತ್ತಾರೆ. ಕೈಯಲ್ಲಿ ಸ್ಟಿಕ್ ಹಾಗೂ ಚೀಲ ಹಿಡಿದು ಹೊರಡುವ ಈ ಪೋರಿ ಎಂಥ ಗಟ ಸರ್ಪವನ್ನೂ ಅಳಕಿಲ್ಲದೇ ಕ್ಷಣಮಾತ್ರದಲ್ಲಿ ಹಿಡಿದು ಹಾವುಗಳನ್ನು ಕಾಡಿಗೆ ಬಿಟ್ಟು ಬರುತ್ತಾಳೆ. ಜೊತೆಗೆ ಜನರಿಗೂ ಹಾವನ್ನು ಕೊಲ್ಲಬೇಡಿ ಎಂದು ತಿಳಿಹೇಳಿ ಬರುವುದು ಈಕೆಯ ಹಾವಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಹೀಗಾಗಿ ನಮಗೂ ಖುಷಿ ಆಗುತ್ತೆ ನಾವೂ ಏನೇ ಇದ್ರು ಈ ಹುಡುಗಿಯನ್ನು ಕರೆಯುತ್ತೇವೆ ಎಂದು ಸ್ಥಳೀಯರು ಹೇಳುತ್ತಾರೆ.

  • ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ

    ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ

    ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತ ಕರಿನಾಗರ ಹಾವನ್ನ ರಕ್ಷಣೆ ಮಾಡಲಾಗಿದೆ.

    ಯಮನಪ್ಪ ಮಾದರ ಮನೆಯಲ್ಲಿ ಹಾವು ಅಡಗಿ ಕುಳಿತಿತ್ತು. ಇವರ ಹಾನಗಲ್ ಡಿಪೋದ ಚಾಲಕನಾಗಿದ್ದು, ಮನೆಯಲ್ಲಿ ಹಾವು ಕಂಡ ತಕ್ಷಣ ಗಾಬರಿಯಾಗಿದ್ದಾರೆ. ಅದೇ ಡಿಪೋದಲ್ಲಿ ಕೆಲಸ ಮಾಡುವ ಚಾಲಕ ಕಂ ಸ್ನೇಕ್ ಕೃಷ್ಣರೆಡ್ಡಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಮನೆಗೆ ಬಂದ ಕೃಷ್ಣರೆಡ್ಡಿ ಮನೆಯಲ್ಲಿ ಅಡಗಿ ಕುಳಿತಿದ್ದ ಕರಿನಾಗರವನ್ನು ಹಿಡಿದಿದ್ದಾರೆ. ಈ ಕರಿನಾಗರ ಹಾವನ್ನು ನೋಡಲು ಅಪಾರ ಜನರು ಬಂದಿದ್ದರು. ನಂತರ ಕೃಷ್ಣರೆಡ್ಡಿ ಸುರಕ್ಷಿತವಾಗಿ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

    ಈಗಾಗಲೇ ಸ್ನೇಕ್ ಕೃಷ್ಣರೆಡ್ಡಿ ಚಾಲಕ ಕೆಲಸ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಹಾವುಗಳನ್ನ ಹಿಡಿದು ಕಾಡಿಗೆ ಬಿಡುವ ಕಾರ್ಯ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 2000ಕ್ಕೂ ಅಧಿಕ ಹಾವುಗಳನ್ನ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಕಾರ್ಯಕ್ಕೆ ಹಾನಗಲ್ ಪಟ್ಟಣ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

  • ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್

    ಶ್ರೀಮಂತಿಕೆಯ ಆಸೆ ತೋರಿಸಿ 2 ತಲೆ ಹಾವು ಮಾರಾಟಕ್ಕೆ ಯತ್ನಿಸಿದ ಮೂವರು ಅಂದರ್

    ಚಿಕ್ಕಬಳ್ಳಾಪುರ: ಮೊಬೈಲ್ ಯುಗದಲ್ಲಿ ಎಲ್ಲವೂ ಫಾಸ್ಟ್, ಫಾಸ್ಟ್. ಬೇಗ ದುಡ್ಡು ಮಾಡಬೇಕು, ಬೇಗ ಶ್ರೀಮಂತನಾಗಬೇಕು ಎಂಬ ತವಕದಲ್ಲಿ ಮನುಷ್ಯ ಅತಿಯಾಸೆಗೆ ಬಲಿಯಾಗುತ್ತಿದ್ದಾನೆ. ಇಂತಹದ್ದೇ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಶ್ರೀಮಂತಿಕೆ ಆಸೆ ತೋರಿಸಿ ಹಾವನ್ನು ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ರೆಡ್ ಸ್ಯಾಂಡ್ ಬೋವಾ ಸ್ನೇಕ್ ಅಂತ ಕರೆಯುವ ಮಣ್ಣು ಮುಕ್ಕುವ ಹಾವಿನ ಹೆಸರಲ್ಲಿ ಅಮಾಯಕರಿಗೆ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸಲು ಹೊಂಚು ಹಾಕಿದ್ದ ಮೂವರನ್ನು ಜಿಲ್ಲೆಯ ಗೌರಿಬಿದನುರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಇಡಗೂರು ಗ್ರಾಮದ ಬಳಿ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ನರಸಿಂಹ, ಅನಿಲ್ ಹಾಗೂ ಹರೀಶ್ ಬಂಧಿತರು.

    ಆಕಸ್ಮಿಕವಾಗಿ ಸಿಕ್ಕ ಹಾವನ್ನು ಬಿಂದಿಗೆಯಲ್ಲಿಟ್ಟುಕೊಂಡು 2 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದರು. ನಮ್ಮ ಬಳಿ ಎರಡು ತಲೆ ಹಾವಿದೆ. ಈ ಹಾವನ್ನು ಮನೆಯಲ್ಲಿ ಇಟ್ಟುಕೊಂಡರೆ ಲಕ್ಷ್ಮೀದೇವಿ ಒಲಿದು ಬರುತ್ತಾಳೆ ಎಂದು ಹೇಳಿ ಅಮಾಯಕರಿಂದ ಹಣ ಪೀಕಲು ಆರೋಪಿಗಳು ಮುಂದಾಗಿದ್ದರು.

    ಎರಡು ತಲೆ ಹಾವು ಮನೆಯಲ್ಲಿ ಇಟ್ಟುಕೊಂಡರೆ ಹಣ ಗಳಿಸಬಹುದು ಎಂದು ಮಾರಾಟ ಮಾಡೋ ಅಸಾಮಿಗಳೇ ಏಕೆ ಮನೆಯಲ್ಲಿ ಹಾವನ್ನು ಇಟ್ಕೊಂಡು ಹಣವಂತರಾಗಬಾರದೆಂದು ನಾಗರಿಕರು ಪ್ರಶ್ನಿಸಿದ್ದಾರೆ. ಕಾಡು ಪ್ರಾಣಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಹಿಂಸಿಸುವವರ ವಿರುದ್ಧ ಕಠಿಣ ಕ್ರಮವಾಗಬೇಕೆನ್ನುತ್ತಾರೆ. ವನ್ಯಜೀವಿ ಸಂರಕ್ಷಕ ಪೃಥ್ವಿರಾಜ್. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ಹಾವನ್ನು ಅರಣ್ಯ ಇಲಾಖಾಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಹಾವನ್ನು ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.

  • ಹಾವು ಕಚ್ಚಿ ಎಂಟು ತಿಂಗಳ ತುಂಬು ಗರ್ಭಿಣಿ ಸಾವು

    ಹಾವು ಕಚ್ಚಿ ಎಂಟು ತಿಂಗಳ ತುಂಬು ಗರ್ಭಿಣಿ ಸಾವು

    ಮಡಿಕೇರಿ: ಕೊಳಕುಮಂಡಲ ಹಾವೊಂದು ಕಚ್ಚಿದ ಪರಿಣಾಮ ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಚಿತ (36) ಮೃತ ದುರ್ದೈವಿ. ಸುಚಿತಗೆ ಶುಕ್ರವಾರ ರಾತ್ರಿ ತಮ್ಮ ಮನೆಯನ ಶೌಚ ಗೃಹದಲ್ಲಿ ಇರುವಾಗ ಕೊಳಕು ಮಂಡಲ ಹಾವು ಕಚ್ಚಿತ್ತು. ಹಾವು ಕಡಿತಕ್ಕೆ ಒಳಗಾದ ಮಹಿಳೆಯನ್ನು ಕುಶಾಲನಗರ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

    ಕುಶಾಲನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ತುಂಬು ಗರ್ಭಿಣಿ ಸುಚಿತಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಸಂಜೆ 7:30 ರ ಸರಿಸುಮಾರಿಗೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

  • ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ಚಿಕ್ಕಮಗಳೂರು: ಬಾವಿಯೊಳಗೆ ಬಿದ್ದ ಹಾವೊಂದು ಇಡೀ ರಾತ್ರಿ ನೀರಿನಲ್ಲಿ ಈಜಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಚಕಮಕಿ ಗ್ರಾಮದ ಕೃಷ್ಣ ಭಟ್ ಎಂಬವರು ಮನೆ ಹಿಂದೆ ಇದ್ದ ಬಾವಿಯಲ್ಲಿ ಶುಕ್ರವಾರ ಸಂಜೆ ಏನೂ ಇರಲಿಲ್ಲ. ಆದರೆ ಶನಿವಾರ ಬೆಳಗ್ಗೆ ಹೋಗಿ ನೋಡಿದಾಗ ಹಾವೊಂದು ಈಜುತ್ತಾ ಮೇಲೆ ಬರಲು ಯತ್ನಿಸುತ್ತಿತ್ತು. ಬಾವಿಗೆ ಸುತ್ತಲೂ ಸಿಮೆಂಟ್‍ನಿಂದ ಪ್ಲಾಸ್ಟರ್ ಮಾಡಿರುವುದರಿಂದ ಹಾವು ತೆವಳಲಾಗದೆ ನೀರಿನಲ್ಲಿ ಈಜುತ್ತಿತ್ತು. ಕೂಡಲೇ ಕೃಷ್ಣ ಭಟ್ ಅವರು ಹಾವನ್ನು ಕೋಲಿನಿಂದ ಮೇಲೆ ಎತ್ತಲು ಪ್ರಯತ್ನಿಸಿದ್ದಾರೆ.

    ಹಾವು ಎಡೆ ಬಿಟ್ಟುಕೊಂಡು ಜೋರಾಗಿ ಉಸಿರು ಬಿಡುತ್ತಿದ್ದರಿಂದ ಕೃಷ್ಣ ಭಟ್ ಅವರಿಗೆ ಧೈರ್ಯ ಸಾಕಾಗಿಲ್ಲ. ಕೂಡಲೇ ಉರಗ ತಜ್ಞ ಆರೀಫ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆರೀಫ್ ಐದೇ ನಿಮಿಷಕ್ಕೆ ಬಾವಿಯಲ್ಲಿ ಈಜುತ್ತಿದ್ದ ಹಾವನ್ನ ಮೇಲೆ ಎತ್ತಿದರು. ಸುಸ್ತಾಗಿ ಜೋರಾಗಿ ಉಸಿರು ಬಿಡುತ್ತಿದ್ದ ಹಾವನ್ನು ಸ್ವಲ್ಪ ಹೊತ್ತು ನೆಲದ ಮೇಲೆ ಬಿಟ್ಟರು. ತದನಂತರ ಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಇಡೀ ರಾತ್ರಿ ನೀರಿನಲ್ಲಿ ಈಜಿರುವ ಹಾವನ್ನ ಕಂಡು ಕೆಲವರು ಮರುಕ ವ್ಯಕ್ತಪಡಿಸಿದರು.

  • ಮಹಿಳೆಯ ನಾಗಿಣಿ ಅವತಾರ ನೋಡಿ ಜನ ದಂಗು: ವಿಡಿಯೋ

    ಮಹಿಳೆಯ ನಾಗಿಣಿ ಅವತಾರ ನೋಡಿ ಜನ ದಂಗು: ವಿಡಿಯೋ

    ಕೊಪ್ಪಳ: ಮಹಿಳೆಯ ನಾಗಿಣಿ ಅವತಾರ ನೋಡಿ ಜನರು ದಂಗಾದ ಘಟನೆ ಕೊಪ್ಪಳದಲ್ಲಿ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನಡೆದಿದೆ.

    ಗದಗ ಜಿಲ್ಲೆಯ ಕೋಟುಮುಚಗಿ ಗ್ರಾಮದ ಶೀಲಮ್ಮ ಕೆರೆ ಹಾವು ಕೊರಳಿಗೆ ಹಾಕಿಕೊಂಡಿದ್ದ ಮಹಿಳೆ. ಶೀಲಮ್ಮ ಹಿರೇಬಗನಾಳ ಗ್ರಾಮದ ಹೊರವಲಯದಲ್ಲಿರುವ ಕೋಳಿ ಫಾರಂವೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಇಂದು ಮಧ್ಯಾಹ್ನ ಕೋಳಿ ಫಾರಂನಲ್ಲಿ ಕೆರೆ ಹಾವು ಬಂದಿದೆ. ಇದನ್ನು ಗಮನಿಸಿದ ಶೀಲಮ್ಮ ಹಾವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹಿರೇಬಗನಾಳ ಗ್ರಾಮಕ್ಕೆ ಬಂದು ಬಿಟ್ಟಳು. ಈ ವೇಳೆ ಶೀಲಮ್ಮ ಹಾವನ್ನು ತನ್ನ ಕೊರಳಿನಲ್ಲಿ ಹಾಕಿಕೊಂಡು ಗ್ರಾಮದ ಗವಿಸಿದ್ದೇಶ್ವರ ಮಠದಲ್ಲಿ ನೃತ್ಯ ಮಾಡಿದ್ದಾಳೆ.

    ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಕೋಳಿ ಫಾರಂನಿಂದ ಶೀಲಮ್ಮ ಹಾವನ್ನು ಹಿಡಿದುಕೊಂಡು ಬಂದಿದ್ದಾಳೆ. ಇದನ್ನು ಗಮನಿಸಿದ ಗ್ರಾಮಸ್ಥರು ಶೀಲಮ್ಮನನ್ನು ಹಿಂಬಾಲಿಸಿದರು. ಬಳಿಕ ಶೀಲಮ್ಮ ಗವಿಸಿದ್ದೇಶ್ವರ ಮಠಕ್ಕೆ ಬಂದು ಅಲ್ಲಿ ಹಾವಿಗೆ ಪೂಜೆ ಮಾಡಿದ್ದಳು. ಈ ವೇಳೆ ದೇವಸ್ಥಾನದ ಹೊರಗಡೆ ಇರುವ ನಾಗಪ್ಪನ ಕಲ್ಲಿನ ಮೂರ್ತಿಯ ಬಳಿ ಹಾವನ್ನು ಕೊರಳಿಗೆ ಹಾಕಿಕೊಂಡು ನೃತ್ಯ ಮಾಡಿದ್ದಾಳೆ.

    ಈ ವೇಳೆ ಗ್ರಾಮಸ್ಥರು ಹಾವನ್ನು ಬಿಡು ಎಂದು ಮನವಿ ಮಾಡಿದರೂ ಸಹ ಶೀಲಮ್ಮ ಬಿಡಲಿಲ್ಲ. ಕೊನೆಗೆ ಗ್ರಾಮಸ್ಥರು ಶೀಲಮ್ಮ ಮನವೊಲಿಸಿ ಗ್ರಾಮದ ಹೊರವಲಯದ ಸಣ್ಣ ದೇವಸ್ಥಾನವೊಂದರಲ್ಲಿ ಬಿಟ್ಟು ಬಂದಿದ್ದಳು. ಬಳಿಕ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಓಂ ನಮಃ ಶಿವಾಯ ಎಂದು ಪ್ರಾರ್ಥನೆ ಸಲ್ಲಿಸದಳು. ನಂತರ ಗ್ರಾಮಸ್ಥರೆಲ್ಲರೂ ಶೀಲಮ್ಮಳನ್ನು ಹಾವು ಬಿಟ್ಟು ಬಂದಿದ್ದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಿಸುವಲ್ಲಿ ಯಶಸ್ವಿಯಾದರು. ಶೀಲಮ್ಮ ಹಾವಿನೊಂದಿಗೆ ವರ್ತಿಸಿದ ರೀತಿ ಅಚ್ಚರಿಪಟ್ಟರು.

    ಶೀಲಮ್ಮ ಕೊರಳಿನಲ್ಲಿ ಹಾಕಿಕೊಂಡಿದ್ದ ಹಾವು ಕೆರೆ ಹಾವಾಗಿದ್ದು, ಪೊರೆ ಬಂದಿತ್ತು ಎನ್ನಲಾಗಿದೆ. ಶೀಲಮ್ಮ ಹಾವನ್ನು ತನ್ನ ಕೊರಳಿನಲ್ಲಿ ಹಾಕಿಕೊಂಡು ಎರಡು ಗಂಟೆಗಳ ಕಾಲ ಇದ್ದದ್ದು ನಿಜಕ್ಕೂ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಶೀಲಮ್ಮ ಕೊರಳಿನಲ್ಲಿ ಹಾವು ಹಾಕಿಕೊಂಡಿರುವುದನ್ನು ಗ್ರಾಮಸ್ಥರು ಟಿಕ್ ಟ್ಯಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಮಾಡಿದ್ದಾರೆ. ಶೀಲಮ್ಮ ಹಾವಿನೊಂದಿಗೆ ಈ ರೀತಿ ವರ್ತನೆಗೆ ಕಾರಣ ಏನು ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

  • ಗಿರ್ಗಿಟ್ಲೆ ರೀತಿ ನಾಗಪ್ಪನನ್ನು ತಿರುಗಿಸಿ, ಕತ್ತಿಗೆ ಸುತ್ಕೊಂಡ ಕುಡುಕ

    ಗಿರ್ಗಿಟ್ಲೆ ರೀತಿ ನಾಗಪ್ಪನನ್ನು ತಿರುಗಿಸಿ, ಕತ್ತಿಗೆ ಸುತ್ಕೊಂಡ ಕುಡುಕ

    ಜೈಪುರ: ಮದ್ಯದ ನಶೆಯಿದ್ದ ಜನರು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆದರೆ ರಾಜಸ್ಥಾನದಲ್ಲೊಬ್ಬ ಕುಡುಕ ಮದ್ಯದ ನಶೆಯಲ್ಲಿ ನಾಗರ ಹಾವಿನೊಂದಿಗೆ ಸರಸಕ್ಕಿಳಿದಿದ್ದಾನೆ. ಹಾವಿನ ಮುಂದೆ ನಿಂತು ನಾನಾ, ನೀನಾ ನೋಡೇ ಬಿಡಣಾ ಎಂದು ನಾಗನಿಗೆ ಸವಾಲ್ ಹಾಕಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಸಾಮಾನ್ಯವಾಗಿ ನಾಗರ ಹಾವನ್ನು ಕಂಡರೇ ಭಯಬಿದ್ದು ಜನ ಜಾಗ ಖಾಲಿ ಮಾಡುತ್ತಾರೆ. ಆದರೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ನಾಗರ ಹಾವಿನೊಂದಿಗೆ ಆಟವಾಡಿದ್ದಾನೆ. ಈ ಕುಡುಕನನ್ನು ಪ್ರಕಾಶ್ ಮಹಾವರ್ ಎಂದು ಗುರುತಿಸಲಾಗಿದೆ. ಹಾವನ್ನು ಕೈಯಲ್ಲಿ ಹಿಡಿದು ಗಿರ ಗಿರನೇ ಗಿರ್ಗಿಟ್ಲೆ ರೀತಿ ತಿರುಗಿಸಿ, ಸುಮಾರು 1 ಗಂಟೆಯ ಕಾಲ ಹಾವನ್ನು ಹಿಡಿದುಕೊಂಡು ಕುಡುಕ ಸತಾಯಿಸಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಕುಡುಕನ ಹುಚ್ಚಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆ.

    ದೌಸಾ ಜಿಲ್ಲೆಯ ಗದ್ದೆಯೊಂದರಲ್ಲಿ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿದ್ದ ನಾಗರ ಹಾವಿನ ಕಂಡ ಪ್ರಕಾಶ್ ಅದರ ದಾರಿಯನ್ನು ತಡೆದಿದ್ದಾನೆ. ಕೆಲ ಸಮಯದ ಬಳಿಕ ಅದನ್ನು ಹಿಡಿದು ಗಿರ ಗಿರನೇ ತಿರುಗಿಸಿ, ತನ್ನ ಕೊರಳಿಗೆ ಧರಿಸಿಕೊಂಡು ಹುಚ್ಚಾಟವಾಡಿದ್ದಾನೆ. ನೀನಾ, ನಾನಾ ನೋಡೇ ಬಿಡಣಾ ಎಂದು ನಾಗಪ್ಪನಿಗೆ ಸವಾಲ್ ಹಾಕಿಕೊಂಡು ರಂಪಾಟ ಮಾಡಿದ್ದಾನೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಬಾರಿ ಹಾವು ಆತನಿಗೆ ಕಚ್ಚಿದೆ. ಆದರೂ ಆತ ಮಾತ್ರ ಎಣ್ಣೆ ಏಟಲ್ಲಿ ಹುಚ್ಚಾಟ ಮುಂದುವರಿಸಿದ್ದ. ಈ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

    ಹಾವು ಕಚ್ಚಿದ ಪರಿಣಾಮ ಪ್ರಕಾಶ್ ಶರೀರ ನೀಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದರು. ಸದ್ಯ ಪ್ರಕಾಶ್ ಸ್ಥಿತಿ ಹೇಗಿದೆ ಎನ್ನುವ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಹಾವಿಗೆ ಕಿಸ್ ಕೊಡಲು ಹೋಗಿ ಆಸ್ಪತ್ರೆ ಸೇರಿದ

    ಹಾವಿಗೆ ಕಿಸ್ ಕೊಡಲು ಹೋಗಿ ಆಸ್ಪತ್ರೆ ಸೇರಿದ

    ಶಿವಮೊಗ್ಗ: ನಾಗರ ಹಾವಿಗೆ ಮುತ್ತು ಕೊಡಲು ಹೋದ ವ್ಯಕ್ತಿಯೊಬ್ಬ ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿ ನಡೆದಿದೆ.

    ಭದ್ರಾವತಿಯ ತಮ್ಮಣ್ಣ ಕ್ಯಾಂಪ್‍ನ ಸೋನು ಹಾವಿನಿಂದ ಕಚ್ಚಿಸಿ ಕೊಂಡು ಆಸ್ಪತ್ರೆಗೆ ಸೇರಿದ ವ್ಯಕ್ತಿ. ಹೊಸಮನೆ ಬಡಾವಣೆಯಲ್ಲಿ ನಾಗರ ಹಾವೊಂದು ಕಾಣಿಸಿ ಕೊಂಡಿತ್ತು. ಈ ವೇಳೆ ಸ್ಥಳೀಯರು ಸೋನುವನ್ನು ಹಾವು ಹಿಡಿಯಲು ಕರೆಯಿಸಿದ್ದಾರೆ. ಪಾನಮತ್ತನಾಗಿ ಆಗಮಿಸಿದ್ದ ಸೋನು ಹಾವು ಹಿಡಿಯುವಾಗ ಚಮಕ್ ಮಾಡಲು ಮುತ್ತು ಕೊಡಲು ಹೋದಾಗ ಹಾವು ಆತನ ತುಟಿಗೆ ಕಚ್ಚಿದೆ.

    ಹಾವು ಕಚ್ಚಿದ ತಕ್ಷಣ ಸೋನುವಿನ ತುಟಿಯಿಂದ ರಕ್ತ ಬಂದಿದೆ. ತಕ್ಷಣ ಸೋನುನನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.