Tag: Smriti Mandhana

  • ಹಲವು ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್!

    ಹಲವು ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್!

    ವಿಶಾಖಪಟ್ಟಣಂ: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ (ICC Women’s World Cup) ಕ್ರಿಕೆಟ್‌  ಟೂರ್ನಿಯಲ್ಲಿಂದು ತನ್ನ 4ನೇ ಪಂದ್ಯವಾಡಿದ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ಮಹಿಳಾ ತಂಡದ ಬಿರುದ್ಧ ಭರ್ಜರಿ ಬ್ಯಾಟಿಂಗ್‌ ಮಾಡಿದೆ. 48.5 ಓವರ್‌ಗಳಲ್ಲಿ 330 ರನ್‌ ಗಳಿಸಿ, ಆಸೀಸ್‌ಗೆ 331 ರನ್‌ಗಳ ಬೃಹತ್‌ ಗುರಿ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ (Smriti Mandhana) ಹಲವು ವಿಶ್ವದಾಖಲೆಗಳನ್ನ ಬರೆದಿದ್ದಾರೆ.

    ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಮಂದಾನ 66 ಎಸೆತಗಳಲ್ಲಿ 80 ರನ್‌ (3 ಸಿಕ್ಸರ್‌, 9 ಬೌಂಡರಿ) ಚಚ್ಚಿದರು. ಈ ಮೂಲಕ ಹಲವು ವಿಶ್ವದಾಖಲೆಗಳನ್ನ ಮುಡಿಗೇರಿಸಿಕೊಂಡರು. ಅಲ್ಲದೇ ಕ್ಯಾಲೆಂಡರ್‌ ವರ್ಷದಲ್ಲಿ 1,000 ರನ್‌ ಪೂರೈಸಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇನ್ನ ಹಲವು ವಿಶ್ವದಾಖಲೆಗಳ ಬಗ್ಗೆ ನೋಡೋಣ…

    ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌
    * 1,068 – ಸ್ಮೃತಿ ಮಂಧಾನ (ಭಾರತ), 18 ಇನ್ನಿಂಗ್ಸ್‌ – 2025
    * 970 – ಬೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ), 14 ಇನ್ನಿಂಗ್ಸ್‌ – 1997
    * 882 – ಲಾರಾ ವೋಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ), 18 ಇನ್ನಿಂಗ್ಸ್‌ – 2022
    * 880 – ಡೆಬ್ಬಿ ಹಾಕ್ಲಿ (ನ್ಯೂಜಿಲೆಂಡ್), 16 ಇನ್ನಿಂಗ್ಸ್‌ – 1997
    * 853 – ಆಮಿ ಸ್ಯಾಟರ್ತ್‌ವೈಟ್ (ನ್ಯೂಜಿಲೆಂಡ್), 14 ಇನ್ನಿಂಗ್ಸ್‌ – 2016

    5,000 ರನ್ನರ್ಸ್‌ ಕ್ಲಬ್‌ಗೆ ಮಂದಾನ
    ಅಷ್ಟೇ ಅಲ್ಲದೇ ಮಹಿಳಾ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಕೂಡ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ 2ನೇ ಭಾರತೀಯ ಮತ್ತು ವಿಶ್ವದ 5ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸ್ಮೃತಿ ಕೇವಲ 112 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರು. 211 ಇನ್ನಿಂಗ್ಸ್‌ಗಳಲ್ಲಿ 7,805 ರನ್‌ ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್‌ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರು
    * 7,805 – ಮಿಥಾಲಿ ರಾಜ್ (ಭಾರತ), 211 ಇನ್ನಿಂಗ್ಸ್‌
    * 5,992 – ಷಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್), 180 ಇನ್ನಿಂಗ್ಸ್‌
    * 5,925 – ಸುಜಿ ಬೇಟ್ಸ್ (ನ್ಯೂಜಿಲೆಂಡ್), 167 ಇನ್ನಿಂಗ್ಸ್‌
    * 5.873 – ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್), 163 ಇನ್ನಿಂಗ್ಸ್‌
    * 5,022 – ಸ್ಮೃತಿ ಮಂಧಾನ (ಭಾರತ), 112 ಇನ್ನಿಂಗ್ಸ್‌

  • ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    ಕೊನೆಯಲ್ಲಿ ಸ್ನೇಹ್‌ ರಾಣಾ ಹೋರಾಟ ವ್ಯರ್ಥ – ವಿರೋಚಿತ ಸೋಲಿನೊಂದಿಗೆ ಆರ್‌ಸಿಬಿ ಮನೆಗೆ

    – ಯುಪಿ ವಾರಿಯರ್ಸ್‌ಗೆ 12 ರನ್‌ಗಳ ರೋಚಕ ಜಯ

    ಲಕ್ನೋ: ಕೊನೆಯಲ್ಲಿ ಸ್ನೇಹ್‌‌ ರಾಣಾ ಭರ್ಜರಿ ಸಿಕ್ಸರ್‌, ಬೌಂಡರಿ ಆಟದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್‌ ವಿರುದ್ಧ 12 ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಮೂಲಕ ಡಬ್ಲ್ಯೂಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ. ಮಾರ್ಚ್‌ 11 ರಂದು ಮುಂಬೈ ಇಂಡಿಯನ್ಸ್‌ ವಿರುದ್ಧ ಬಾಕಿ ಇರುವ ಒಂದು ಪಂದ್ಯವನ್ನಾಡಿ 2025ರ ಮಹಿಳಾ ಪ್ರೀಮಿಯರ್‌ ಲೀಗ್‌ ಅಭಿಯಾನಕ್ಕೆ ವಿದಾಯ ಹೇಳಲಿದೆ.

    ಇನ್ನೂ 2025ರ ಆವೃತ್ತಿಯ ಲೀಗ್‌ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಯುಪಿ ವಾರಿಯರ್ಸ್‌ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

    ಕೊನೆಯ 12 ಎಸೆತಗಳಲ್ಲಿ ಆರ್‌ಸಿಬಿ ಗೆಲುವಿಗೆ 42 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಸ್ನೇಹ್‌ರಾಣಾ ನಿರೀಕ್ಷೆಗೂ ಮೀರಿದ ಬ್ಯಾಟಿಂಗ್‌ ಪ್ರದರ್ಶಿಸಿದರು. ದೀಪ್ತಿ ಶರ್ಮಾ ಅವರ ಬೌಲಿಂಗ್‌ಗೆ ಒಂದೇ ಓವರ್‌ನಲ್ಲಿ 28 ರನ್‌ (1, 4, 6, 6, 5nb, 6) ರನ್‌ ಸಿಡಿಸಿದರು. ಆದ್ರೆ 19ನೇ ಓವರ್‌ನ ಕೊನೇ ಎಸೆತದಲ್ಲಿ ಸಿಕ್ಸರ್‌ ಸಿಡಿಸಲು ಯತ್ನಿಸಿ ಕ್ಯಾಚ್‌ ನೀಡಿದರು. ಅಲ್ಲಿಯವರೆಗೂ ಗೆಲುವಿನ ಕನಸು ಕಂಡಿದ್ದ ಆರ್‌ಸಿಬಿ ಆಸೆಗೆ ತಣ್ಣೀರು ಎರಚಿದಂತಾಯ್ತು.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಯುಪಿ ತಂಡ 5 ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಆರ್‌ಸಿಬಿ 19.3 ಓವರ್‌ಗಳಲ್ಲಿ 123ರನ್‌ ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು. ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಮಾಡಲು ಆರಂಭಿಸಿದ ಆರ್‌ಸಿಬಿ ಒಂದೆಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಆದ್ರೆ ನಿರ್ಣಾಯಕ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ, ಎಲ್ಲಿಸ್‌ ಪೆರ್ರಿ ಅವರ ಬ್ಯಾಟಿಂಗ್‌ ವೈಫಲ್ಯಕ್ಕೆ ತಂಡ ಬೆಲೆ ತೆರಬೇಕಾಯಿತು.

    ರಿಚಾ, ರಾಣಾ ಹೋರಾಟ ವ್ಯರ್ಥ:
    ಒಂದೆಡೆ ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ರಿಚಾ ಘೋಷ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದ್ದರು. ಕೇವಲ 33 ಎಸೆತಗಳಲ್ಲಿ 69 ರನ್‌ (6 ಬೌಂಡರಿ, 5 ಸಿಕ್ಸ್‌) ಗಳಿಸಿ ಔಟಾದರು. ಇದರೊಂದಿಗೆ ಪೆರ್ರಿ 28 ರನ್‌, ಜಾರ್ಜಿಯಾ 17 ರನ್‌, ಶಬ್ನೇನಿ ಮೇಘನಾ 27 ರನ್‌, ಕೊನೆಯಲ್ಲಿ ಸ್ನೇಹ್‌ ರಾಣಾ 6 ಎಸೆತಗಳಲ್ಲಿ 26 ರನ್‌ ಕೊಡುಗೆ ನೀಡಿದರು.

    WPL ಇತಿಹಾಸದಲ್ಲೇ ದಾಖಲೆಯ ರನ್‌:
    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು‌ ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಬೆಂಡೆತ್ತಲು ಶುರು ಮಾಡಿತು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 225 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಇನ್ನಿಂಗ್ಸ್‌ವೊಂದರಲ್ಲಿ ತಂಡವೊಂದರಿಂದ ದಾಖಲಾದ ಗರಿಷ್ಠ ರನ್‌ ಸಹ ಆಗಿದೆ. ಮತ್ತೊಂದೆಡೆ ಅಜೇಯ 99 ರನ್ ಗಳಿಸಿದ ಜಾರ್ಜಿಯಾ, ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು.

    ಆರಂಭಿಕರಾಗಿ ಕಣಕ್ಕಿಳಿದ ಯುಪಿಗೆ ಗ್ರೇಸ್ ಹ್ಯಾರಿಸ್ ಹಾಗೂ ಜಾರ್ಜಿಯಾ ವೊಲ್ ಸ್ಫೋಟಕ ಆರಂಭ ತಂದುಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 7.1 ಓವರ್‌ಗಳಲ್ಲೇ 77 ರನ್‌ಗಳ ಜೊತೆಯಾಟ ಕಟ್ಟಿದರು. ಹ್ಯಾರಿಸ್ 22 ಎಸೆತಗಳಲ್ಲಿ 39 ರನ್ ಗಳಿಸಿದರು. ಬಳಿಕ ಕ್ರೀಸಿಗಿಳಿದ ಕಿರಣ್ ನವಗಿರೆ ಕೇವಲ 16 ಎಸೆತಗಳಲ್ಲಿ ಸ್ಫೋಟಕ 46 ರನ್ (5 ಸಿಕ್ಸರ್, 2 ಬೌಂಡರಿ) ಗಳಿಸಿ ಅಬ್ಬರಿಸಿದರು. ವಿಕೆಟ್‌ನ ಇನ್ನೊಂದು ತುದಿಯಿಂದ ಬಿರುಸಿನ ಆಟವಾಡಿದ ಜಾರ್ಜಿಯಾ, ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಇನಿಂಗ್ಸ್‌ನ ಕೊನೆಯ ಎಸೆತದವರೆಗೂ ಸ್ಫೋಟಕ ಪ್ರದರ್ಶನ ನೀಡಿದ ಜಾರ್ಜಿಯಾ ಕೇವಲ ಒಂದು ರನ್ನಿನಿಂದ ಶತಕ ವಂಚಿತರಾದರು.

    56 ಎಸೆತಗಳನ್ನು ಎದುರಿಸಿದ ಜಾರ್ಜಿಯಾ ಇನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸ‌ರ್‌ನೊಂದಿಗೆ 99 ರನ್‌ಗಳಿಸಿ ಅಜೇಯರಾಗುಳಿದರು.

  • WPL 2025 | ಗುಜರಾತ್‌ ವಿರುದ್ಧ ರಿಚಾ ಘರ್ಜನೆ – ಆರ್‌ಸಿಬಿ ಗೆಲುವಿನ ಶುಭಾರಂಭ

    WPL 2025 | ಗುಜರಾತ್‌ ವಿರುದ್ಧ ರಿಚಾ ಘರ್ಜನೆ – ಆರ್‌ಸಿಬಿ ಗೆಲುವಿನ ಶುಭಾರಂಭ

    ವಡೋದರ: ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ಎಲ್ಲೀಸ್ ಪೆರ್ರಿ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

    ವಡೋದರಾದಲ್ಲಿ ಶುಕ್ರವಾರ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿಯು ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ. ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಗುಜರಾತ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳನ್ನು ಪೇರಿಸಿತು. ಗೆಲ್ಲಲು ಬೃಹತ್ ಗುರಿ ಪಡೆದ ಆರ್ ಸಿಬಿ ವನಿತೆಯರ ಬಳಗ ಇನ್ನೂ 9 ಎಸೆತಗಳು ಬಾರಿ ಇರುವಾಗಲೇ 202 ರನ್‌ ಸಿಡಿಸಿ ಗೆದ್ದು ಬೀಗಿತು.

    ಗೆಲುವಿಗೆ ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    14ನೇ ಓವರ್‌ ಕಳೆಯುತ್ತಿದ್ದಂತೆ ರಿಚಾ – ಕನಿಕಾ ಹೊಡಿ ಬಡಿ ಆಟಕ್ಕೆ ಮುಂದಾದರು. ವಿಕೆಟ್‌ ಬಿಟ್ಟುಕೊಡದೇ ಗುಜರಾತ್‌ ಬೌಲರ್‌ಗಳನ್ನ ಬೆಂಡೆತ್ತಿದ್ದರು. ಇವರಿಬ್ಬರ ಸ್ಫೋಟಕ ಆಟದಿಂದ ಕೊನೆಯ 27 ಎಸೆತಗಳಲ್ಲಿ ತಂಡಕ್ಕೆ 79 ರನ್‌ ಸೇರ್ಪಡೆಯಾಯಿತು. 15, 16, 17, 18, 19ನೇ ಓವರ್‌ಗಳಲ್ಲಿ ಕ್ರಮವಾಗಿ 16, 23, 16, 17, 7 ರನ್‌ ಸೇರ್ಪಡೆಯಾಯಿತು. ಇದು ಆರ್‌ಸಿಬಿ ಗೆಲುವಿಗೆ ಕಾರಣವಾಯಿತು.

    ದಾಖಲೆಯ ಚೇಸಿಂಗ್‌:
    ಗುಜರಾತ್‌ ವಿರುದ್ಧದ ಗೆಲುವಿನೊಂದಿಗೆ ಡಬ್ಲ್ಯೂಪಿಎಲ್‌ನಲ್ಲಿ ಆರ್‌ಸಿಬಿ ದಾಖಲೆಯ ಜಯಕ್ಕೆ ಪಾತ್ರವಾಯಿತು. ಕಳೆದ ಎರಡು ಆವೃತ್ತಿಗಳಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧವೇ ಮುಂಬೈ ಇಂಡಿಯನ್ಸ್‌ 191 ರನ್‌, ಆರ್‌ಸಿಬಿ 189 ರನ್‌, ಯುಪಿ ವಾರಿಯರ್ಸ್‌ 179 ರನ್‌ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಅದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮುಂಬೈ 172 ರನ್‌ಗಳ ಚೇಸಿಂಗ್‌ ಮಾಡಿದ್ದು ದೊಡ್ಡ ಮೊತ್ತದ ಚೇಸಿಂಗ್‌ ಆಗಿತ್ತು. ಇದೀಗ ಆರ್‌ಸಿಬಿ ಎಲ್ಲ ದಾಖಲೆಗಳನ್ನ ನುಚ್ಚುನೂರು ಮಾಡಿದೆ.

    ಆರ್‌ಸಿಬಿಗೆ ಆರಂಭಿಕ ಆಘಾತ:
    ಬೃಹತ್‌ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಲ್ಲೇ ಪ್ರಮುಖ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 2 ಓವರ್‌ಗಳಲ್ಲಿ 14 ರನ್‌ ಗಳಿಸಿದ್ದರೂ ಆರಂಭಿಕ 2 ವಿಕೆಟ್‌ಗಳನ್ನ ಕಳೆದುಕೊಂಡಿತ್ತು. 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಎಲ್ಲಿಸ್‌ ಪೆರ್ರಿ ಆರ್‌ಬಿಗೆ ಆಸರೆಯಾದರು. 25 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಪೆರ್ರಿ ಒಟ್ಟು 34 ಎಸೆತಗಳಲ್ಲಿ 57 ರನ್‌ (2 ಸಿಕ್ಸರ್‌, 6 ಬೌಂಡರಿ) ಚಚ್ಚಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ರಾಘ್ವಿ ಬಿಸ್ಟ್ 25 ರನ್‌ಗಳ ಕೊಡುಗೆ ನೀಡಿದರು.

    97 ರನ್‌ಗಳ ಜೊತೆಯಾಟ:
    ಇವರಿಬ್ಬರ ವಿಕೆಟ್ ಪತನದ ಬಳಿಕ ಒಟ್ಟಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಕೊನೆಯವರೆಗೂ ವಿಕೆಟ್‌ ಬಿಟ್ಟುಕೊಡದೇ ಹೋರಾಟ ನಡೆಸಿದರು. ಗುಜರಾತ್ ಬೌಲರ್ ಗಳನ್ನು ಚೆಂಡಾಡಿದ ಇಬ್ಬರು ಬ್ಯಾಟರ್ ಗಳು ತಂಡವನ್ನು ಗೆಲುವಿನ ದಡ ಸೇರಿಸಿದರು. ಮುರಿಯದ 5ನೇ ವಿಕೆಟ್‌ಗೆ ಕನಿಕಾ ಅಹುಜಾ ಹಾಗೂ ರಿಚಾ ಘೋಷ್‌ ಜೋಡಿ ಕೇವಲ 37 ಎಸೆತಗಳಲ್ಲಿ ಸ್ಫೋಟಕ 93 ರನ್‌ಗಳ ಜೊತೆಯಾಟ ನೀಡಿತು. ಇದರಿಂದ ಆರ್‌ಸಿಬಿಗೆ ಗೆಲುವು ಸುಲಭವಾಯಿತು.

    ‌ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಗುಜರಾತ್‌ ಜೈಂಟ್ಸ್‌ ಮಹಿಳಾ ತಂಡ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತು. ಪವರ್‌ ಪ್ಲೇನಲ್ಲಿ 39 ರನ್‌ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ ಕೇವಲ 68 ರನ್‌ ಗಳಿಸಿತ್ತು. ಇದರಿಂದ ಗುಜರಾತ್‌ 150 ರನ್‌ಗಳ ಗಡಿ ದಾಟುವುದೂ ಕಷ್ಟವೆಂದೇ ಭಾವಿಸಲಾಗಿತ್ತು.

    ಆಶ್ಲೀ ಗಾರ್ಡ್ನರ್ ಆರ್ಭಟ:
    ನಿಧಾನಗತಿಯ ಬ್ಯಾಟಿಂಗ್‌ನಿಂದ ಗುಜರಾತ್‌ ತಂಡಕ್ಕೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಶ್ಲೀ ಗಾರ್ಡ್ನರ್ ಜೀವ ತುಂಬಿದರು. ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳನ್ನ ಹಿಗ್ಗಾಮುಗ್ಗ ಬೆಂಡೆತ್ತಿದ್ದರು. ಕೇವಲ 25 ಎಸೆತಗಳಲ್ಲೇ 3 ಬೌಂಡರಿ, 4 ಸಿಕ್ಸರ್‌ ನೆರವಿನೊಂದಿಗೆ ಸ್ಫೋಟಕ ಫಿಫ್ಟಿ ಸಿಡಿಸಿದರು. 213.51 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಗಾರ್ಡ್ನರ್ ಒಟ್ಟು 37 ಎಸೆತಗಳಲ್ಲಿ 79 ರನ್‌ (8 ಸಿಕ್ಸರ್‌, 3 ಬೌಂಡರಿ) ಚಚ್ಚಿ ಅಜೇಯರಾಗುಳಿದರು. ಇದರೊಂದಿಗೆ ಡಿಯಾಂಡ್ರಾ ಡಾಟಿನ್ 25 ರನ್‌, ಸಿಮ್ರಾನ್‌ ಶೈಕ್‌ 11 ರನ್‌ ಹಾಗೂ ಹರ್ಲೀನ್‌ ಡಿಯೋಲ್‌ 9 ರನ್‌ ಕೊಡುಗೆ ನೀಡಿದರು.

    ಪಂದ್ಯದ ಗತಿ ಬದಲಿಸಿದ ಗಾರ್ಡ್ನರ್ ಸಿಕ್ಸರ್
    13 ಓವರ್‌ ಕಳೆದರೂ ಗುಜರಾತ್‌, 3 ವಿಕೆಟ್‌ಗೆ 98 ರನ್‌ಗಳನ್ನಷ್ಟೇ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪ್ರೇಮಾ ರಾವತ್‌ ಬೌಲಿಂಗ್‌ಗೆ ಆಶ್ಲೀ ಗಾರ್ಡ್ನರ್ ಹ್ಯಾಟ್ರಿಕ್‌ ಸಿಕ್ಸರ್‌ ಚಚ್ಚಿದರು. ಇದರೊಂದಿಗೆ ಒಂದೇ ಓವರ್‌ನಲ್ಲಿ 21 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಅಲ್ಲದೇ ಗುಜರಾತ್‌ ಆಟಗಾರ್ತಿಯರು 18, 19ನೇ ಓವರ್‌ಗಳಲ್ಲಿ ತಲಾ 20 ರನ್‌ ಚಚ್ಚಿದರು. ಇದು ದೊಡ್ಡ ಮೊತ್ತಕ್ಕೆ ಕಾರಣವಾಯಿತು.

    ಆರ್‌ಸಿಬಿ ಪರ ರೇಣುಕಾ ಸಿಂಗ್‌ 2 ವಿಕೆಟ್‌ ಕಿತ್ತರೆ, ಕನಿಕಾ ಅಹುಜಾ, ಜಾರ್ಜಿಯಾ ವೇರ್ಹ್ಯಾಮ್, ಪ್ರೇಮಾ ರಾವತ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • WPL 2025 | ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಪಂದ್ಯ ಎಲ್ಲಿ, ಯಾವಾಗ ಪ್ರಸಾರ?

    WPL 2025 | ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ – ಪಂದ್ಯ ಎಲ್ಲಿ, ಯಾವಾಗ ಪ್ರಸಾರ?

    – ಚಾಂಪಿಯನ್‌ ಆರ್‌ಸಿಬಿಗೆ ಕಠಿಣ ಸವಾಲು, ಫೈನಲ್‌ ಸೋಲಿನ ಹಣೆಪಟ್ಟಿ ಕಳಚಲು ಡೆಲ್ಲಿ ಸಜ್ಜು

    ವಡೋದರಾ: 2024ರ ಆವೃತ್ತಿಯ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಗುಜರಾತ್‌ ಜೈಂಟ್ಸ್‌ ತಂಡಗಳು ಮಹಿಳಾ ಪ್ರೀಮಿಯರ್‌ ಲೀಗ್‌ 3ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಶುಕ್ರವಾರ ಮುಖಾಮುಖಿಯಾಗಲಿವೆ.

    ರಾತ್ರಿ 7:30ಕ್ಕೆ ಗುಜರಾತ್‌ನ ವಡೋದರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ಆರಂಭವಾಗಲಿದೆ. ಇದರೊಂದಿಗೆ ಭಾರತದ ಉದಯೋನ್ಮುಖ ಕ್ರಿಕೆಟ್‌ ಪ್ರತಿಭೆಗಳ ಪೋಷಣೆಗೆ ವೇದಿಗೆ ಸಜ್ಜುಗೊಂಡಿದೆ.

    ಜಾಗತಿಕ ಸೂಪರ್‌ ಸ್ಟಾರ್‌ಗಳು ಸ್ಪರ್ಧೆಗೆ ಅಪಾರ ಮೌಲ್ಯವನ್ನು ತಂದಿದ್ದರೂ ಲೀಗ್‌ನ ನಿಜವಾದ ಯಶಸ್ಸು ದೇಶೀಯ ಆಟಗಾರ್ತಿಯರ ಏಳಿಗೆಯಲ್ಲಡಗಿದೆ. ಮೊದಲ ಎರಡು ಋತುಗಳಲ್ಲಿ ಕನ್ನಡತಿ ಶ್ರೇಯಂಕಾ ಪಾಟೀಲ್‌ ಮತ್ತು ಸೈಕಾ ಇಶಾಕ್‌ ಅವರಂತಹ ಹಲವಾರು ದೇಶೀಯ ಪ್ರತಿಭೆಗಳು ಹೊರಹೊಮ್ಮಿದ್ದು, ರಾಷ್ಟ್ರೀಯ ತಂಡದಿಂದಲೂ ಕರೆ ಸ್ವೀಕರಿಸಿದ್ದಾರೆ.

    ಪ್ರಮುಖ ಆಟಗಾರ್ತಿಯರ ಅನುಪಸ್ಥಿತಿ
    ಪ್ರತಿ ಡಬ್ಲ್ಯೂಪಿಎಲ್‌ ಋತುವಿನಲ್ಲಿ, ಉದಯೋನ್ಮುಖ ಭಾರತೀಯ ಆಟಗಾರ್ತಿಯರ ಪಟ್ಟಿ ಬೆಳೆಯುತ್ತಲೇ ಇದೆ. ಅಲಿಸ್ಸಾ ಹೀಲಿ, ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಅವರಂತಹ ವಿದೇಶಿ ತಾರೆಯರು ಗಾಯಗಳಿಂದಾಗಿ ಈ ಆವೃತ್ತಿಯಿಂದ ಹೊರಗುಳಿದಿರುವುದರಿಂದ, ಮುಂಬರುವ ಋತುವು ಅನುಭವಿ ದೇಶೀಯ ಆಟಗಾರ್ತಿಯರಿಗೆ ಮತ್ತು ಹೊಸ ಪ್ರತಿಭೆಗಳಿಗೆ ಮಿಂಚಲು ಸುವರ್ಣಾವಕಾಶ ಕಲ್ಪಿಸುತ್ತದೆ.

    ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಮತ್ತು ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನೊಂದಿಗೆ ರಾಷ್ಟ್ರೀಯ ತಂಡಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಉತ್ತಮ ಪ್ರದರ್ಶನ ನೀಡಲು ಅವರು ಉತ್ಸುಕರಾಗಿದ್ದಾರೆ. ಇನ್ನೂ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಕಾಶ್ವೀ ಗೌತಮ್‌ ಸಹ ಅತ್ಯುತ್ತಮ ಆಟಗಾರ್ತಿಯರ ವಿರುದ್ಧ ತಮ್ಮನ್ನು ಸಾಬೀತುಪಡಿಸುವ ಅವಕಾಶ ಹೊಂದಿದ್ದಾರೆ. ಟೂರ್ನಿಯಲ್ಲಿ ಮೊದಲ ಬಾರಿಗೆ ವಡೋದರಾ ಮತ್ತು ಲಕ್ನೋ ತಾಣಗಳನ್ನು ಹೊಸದಾಗಿ ಪರಿಚಯಿಸಲಾಗಿದೆ.

    ಚಾಂಪಿಯನ್‌ ಆರ್‌ಸಿಬಿಗೆ ಕಠಿಣ ಸವಾಲು:
    ಕಳೆದ ಬಾರಿಯ ಚಾಂಪಿಯನ್‌ ಆರ್‌ಸಿಬಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದೆ. ಕಳೆದ ಋತುವಿನ ಪ್ರಮುಖ ಆಟಗಾರ್ತಿಯರಾದ ಆಲ್‌ರೌಂಡರ್‌ ಸೋಫಿ ಡಿವೈನ್‌, ಆರೋಗ್ಯಕ್ಕೆ ಆದ್ಯತೆ ನೀಡಲು ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ. ಗಾಯಗೊಂಡಿರುವ ಸೋಫಿ ಮೊಲಿನೆಕ್ಸ್‌ ಮತ್ತು ಕೇಟ್‌ ಕ್ರಾಸ್‌ ಈ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಸ್ಟಾರ್‌ ಆಲ್‌ರೌಂಡರ್‌ ಎಲಿಸ್‌ ಪೆರ್ರಿ, ಶ್ರೇಯಂಕಾ ಪಾಟೀಲ್‌ ಮತ್ತು ಆಶಾ ಶೋಭನಾ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿ ಆರ್‌ಸಿಬಿ ತಂಡದ ಆತಂಕಕ್ಕೆ ಕಾರಣವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಯಶಸ್ವಿಯಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

    ಕಳೆದ ವರ್ಷ 11 ರ ಬಳಗದಲ್ಲಿದ್ದ ನಮ್ಮ ಹೆಚ್ಚಿನ ಆಟಗಾರ್ತಿಯರು ಗಾಯಗಳಿಂದಾಗಿ ಈ ಋತುವಿನಲ್ಲಿ ಅಲಭ್ಯರಾಗಿದ್ದಾರೆ. ಅದರಲ್ಲೂ ಸೋಫಿ ಅಲಭ್ಯತೆ ಖಂಡಿತವಾಗಿಯೂ ತಂಡವನ್ನು ಕಾಡಲಿದೆ ಎಂದು ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.

    ಈ ಮಧ್ಯೆ, ಎರಡು ಬಾರಿ ರನ್ನರ್‌ ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ಟೂರ್ನಿಯಲ್ಲಿ ಅತ್ಯಂತ ಸ್ಥಿರ ತಂಡವಾಗಿದ್ದು, ಫೈನಲ್‌ನಲ್ಲಿ ಸೋತ ದಾಖಲೆಯನ್ನು ಮುರಿಯಲು ಉತ್ಸುಕವಾಗಿದೆ. ಟೂರ್ನಿಯು ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ.

    ಯಾವುದರಲ್ಲಿ ನೇರ ಪ್ರಸಾರ?
    ಎಲ್ಲಾ ಪಂದ್ಯಗಳು ರಾತ್ರಿ 7:30ಕ್ಕೆ ಸರಿಯಾಗಿ ಪ್ರಾರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ನೇರ ಪ್ರಸಾರ ಇರಲಿದೆ. ಇನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

  • ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ದಾಖಲೆ – ಐರ್ಲೆಂಡ್‌ ವಿರುದ್ಧ ಸರಣಿ ಗೆದ್ದ ಸಿಂಹಿಣಿಯರು

    ರಾಜ್‌ಕೋಟ್‌: ಐರ್ಲೆಂಡ್‌ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು (Team India Womens) ಇತಿಹಾಸ ನಿರ್ಮಿಸಿದ್ದಾರೆ.

    50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 435 ರನ್‌ ಗಳಸಿದ ಭಾರತದ ವನಿಯರು 304 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿದ್ದಾರೆ.

    ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 435 ರನ್‌ ಸಿಡಿಸಿತ್ತು. 436 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಐರ್ಲೆಂಡ್‌ ಮಹಿಳಾ ತಂಡ (Ireland Womens Team) 131 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

    ಸ್ಮೃತಿ, ಪ್ರತಿಕಾ ಶತಕಗಳ ಆರ್ಭಟ:
    ಆರಂಭಿಕರಾಗಿ ಕಣಕ್ಕಳಿದ ಪ್ರತೀಕಾ ರಾವಲ್ (Pratika Rawal) ಹಾಗೂ ಸ್ಮೃತಿ ಮಂಧಾನ (Smriti Mandhana) ಜೋಡಿ ಮೊದಲ ವಿಕೆಟ್‌ಗೆ 233 ರನ್‌ ಗಳ ಭರ್ಜರಿ ಜೊತೆಯಾಟ ನೀಡಿತು. ಆರಂಭದಿಂದಲೇ ಈ ಜೋಡಿ ಐರ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿತು. ಪ್ರತೀಕಾ 129 ಎಸೆತಗಳಲ್ಲಿ 154 ರನ್‌ (20 ಬೌಂಡರಿ, 1 ಸಿಕ್ಸರ್)‌ ಚಚ್ಚಿದ್ರೆ, ಮತ್ತೋರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 80 ಎಸೆತಗಳಲ್ಲಿ ಸ್ಫೋಟಕ 135 ರನ್‌ (12 ಬೌಂಡರಿ, 7 ಸಿಕ್ಸರ್)‌ ಸಿಡಿಸಿ ಮಿಂಚಿದರು. ಇದು ತಂಡದ ಬೃಹತ್‌ ಮೊತ್ತಕ್ಕೆ ಕಾರಣವಾಯ್ತು. ಇದರೊಂದಿಗೆ ರಿಚಾ ಘೋಷ್‌ 59 ರನ್‌, ತೇಜಲ್ ಹಸಬ್ನಿಸ್ 28 ರನ್‌, ಹರ್ಲಿನ್‌ ಡಿಯೋಲ್‌ 15 ರನ್‌, ದೀಪ್ತಿ ಶರ್ಮಾ 11 ರನ್‌ ಹಾಗೂ ಜೆಮಿಮಾ ರೊಡ್ರಿಗ್ಸ್‌ 4 ರನ್‌ಗಳ ಕೊಡುಗೆ ನೀಡಿದರು.

    ಭಾರತದ ಇತಿಹಾಸದಲ್ಲೇ ಅತ್ಯಧಿಕ ರನ್‌:
    ಐರ್ಲೆಂಡ್‌ ವಿರುದ್ಧ ಸರಣಿಯ ಕೊನೇ ಪಂದ್ಯದಲ್ಲಿ ಭಾರತೀಯ ವನಿತೆಯರು 435 ರನ್‌ ಗಳಿಸಿದ್ದು, ಭಾರತೀಯ ಏಕದಿನ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ರನ್‌ ಆಗಿದೆ. ಪುರುಷರ ಏಕದಿನ ಕ್ರಿಕೆಟ್‌ನಲ್ಲಿ 2011ರಲ್ಲಿ ಭಾರತ ವೆಸ್ಟ್‌ಇಂಡೀಸ್‌ ವಿರುದ್ಧ 418 ರನ್‌ ಗಳಿಸಿದ್ದು, ಈವರೆಗಿನ ದಾಖಲಾಗಿತ್ತು.

    ಐತಿಹಾಸಿಕ ಜಯ
    ಭಾರತೀಯ ವನಿಯರು 304 ರನ್‌ಗಳ ಅಂತರದಲ್ಲಿ ಐರ್ಲೆಂಡ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಂದ ಗೆಲುವು ಶಾಧಿಸಿದ 7ನೇ ತಂಡವೆಂಬ ವಿಶೇಷ ಸಾಧನೆಗೆ ಪಾತ್ರರಾದರು. ಇದಕ್ಕೂ ಮುನ್ನ ನ್ಯೂಜಿಲೆಂಡ್‌ (408 ರನ್‌), ಆಸೀಸ್‌ (374 ರನ್‌), ಆಸೀಸ್‌ (363 ರನ್‌), ನ್ಯೂಜಿಲೆಂಡ್‌ (347 ರನ್‌), ನ್ಯೂಜಿಲೆಂಡ್‌ (306 ರನ್‌), ನ್ಯೂಜಿಲೆಂಡ್‌ (305 ರನ್‌) ಕ್ರಮವಾಗಿ ಮೊದಲ 6 ಸ್ಥಾನಗಳಲ್ಲಿವೆ.

    ವಿಶ್ವದ 4ನೇ ತಂಡ:
    ಇನ್ನೂ ಭಾರತೀಯ ಮಹಿಳಾ ತಂಡ, ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ ಅತ್ಯಧಿಕ ರನ್‌ ಗಳಿಸಿದ 4ನೇ ತಂಡವಾಗಿಯೂ ಹೊರಹೊಮ್ಮಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್‌ (491 ರನ್‌, 455 ರನ್‌, 440 ರನ್‌) ಮೊದಲ ಮೂರು ಸ್ಥಾನಗಳಲ್ಲಿದೆ.

  • India vs Ireland: ಪ್ರತೀಕಾ ಅಬ್ಬರ – ಐರ್ಲೆಂಡ್‌ ವಿರುದ್ಧ ಟೀಂ ಇಂಡಿಯಾಗೆ 6 ವಿಕೆಟ್‌ಗಳ ಜಯ

    India vs Ireland: ಪ್ರತೀಕಾ ಅಬ್ಬರ – ಐರ್ಲೆಂಡ್‌ ವಿರುದ್ಧ ಟೀಂ ಇಂಡಿಯಾಗೆ 6 ವಿಕೆಟ್‌ಗಳ ಜಯ

    ಸ್ಮೃತಿ ಮಂಧಾನ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಮಹಿಳೆಯರ ತಂಡ ಐರ್ಲೆಂಡ್‌ ವಿರುದ್ಧ ಸುಲಭ ಜಯ ಸಾಧಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡಿದೆ.

    ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಐರ್ಲೆಂಡ್‌ ವಿರುದ್ಧ ಗೆಲುವು ದಾಖಲಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: Champions Trophy 2025 | ಜನವರಿ 12ರ ಒಳಗೆ ಟೀಂ ಇಂಡಿಯಾ ಪ್ರಕಟ

    ಪ್ರತಿಕಾ, ತೇಜಲ್‌ ಫಿಫ್ಟಿ
    ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್‌ ಅರ್ಧಶತಕ ಸಿಡಿಸಿ ಮಿಂಚಿದರು. 96 ಎಸೆತಗಳಿಗೆ 89 ರನ್‌ (10 ಫೋರ್‌, 1 ಸಿಕ್ಸರ್‌) ಗಳಿಸಿದರು. ಇವರಿಗೆ ನಾಯಕಿ ಸ್ಮೃತಿ ಮಂಧಾನ ಸಾಥ್‌ ನೀಡಿದರು. ಮೊದಲ ವಿಕೆಟ್‌ ನಷ್ಟಕ್ಕೆ ಜೋಡಿ 70 ರನ್‌ ಸೇರಿಸಿತು. ಸ್ಮೃತಿ 41 ರನ್‌ (6 ಫೋರ್‌, 1 ಸಿಕ್ಸರ್‌) ಗಳಿಸಿ ಔಟಾದರು.

    ನಂತರ ಬಂದ ಹರ್ಲೀನ್‌ ಡಿಯೋಲ್‌ 20 ರನ್‌ ಗಳಿಸಿದರು. ತೇಜಲ್‌ ಹಸಬ್ನಿಸ್‌ 46 ಎಸೆತಕ್ಕೆ 53 ರನ್‌ ಗಳಿಸಿ (9 ಫೋರ್‌) ಗಮನ ಸೆಳೆದರು. ಜೆಮಿಮಾ ರೋಡ್ರಿಗಸ್ ಹಾಗೂ ರಿಚಾ ಘೋಷ್ ತಲಾ 8 ರನ್‌ ಗಳಿಸಿದರು. ಇದನ್ನೂ ಓದಿ: ಕೊಡಗಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ 50 ಓವರ್‌ಗೆ 7 ವಿಕೆಟ್‌ ನಷ್ಟಕ್ಕೆ 238 ರನ್‌ ಗಳಿಸಿದರು. ಕ್ಯಾಪ್ಟನ್‌ ಗ್ಯಾಬಿ ಲೂಯಿಸ್ 92 ರನ್‌ (15 ಫೋರ್‌), ಲಿಯಾ ಪಾಲ್ 59 ರನ್‌ (7 ಫೋರ್‌) ಬಾರಿಸಿ ಗಮನ ಸೆಳೆದರು. ಅರ್ಲೀನ್ ಕೆಲ್ಲಿ 28, ಕ್ರಿಸ್ಟಿನಾ ಕೌಲ್ಟರ್ ರೀಲಿ 15 ರನ್‌ ಗಳಿಸಿ ತಂಡದ ಮೊತ್ತ 200 ಗಡಿ ದಾಟಲು ನೆರವಾದರು.

    ಟೀಂ ಇಂಡಿಯಾ ಪರ ಪ್ರಿಯಾ ಮಿಶ್ರಾ 2, ಟೈಟಾಸ್ ಸಾಧು, ಸಯಾಲಿ ಸತ್ಘರೆ, ದೀಪ್ತಿ ಶರ್ಮಾ ತಲಾ 1 ವಿಕೆಟ್‌ ಕಿತ್ತರು.

  • WPL 2025 | 3ನೇ ಆವೃತ್ತಿಗೆ ಭರ್ಜರಿ ತಯಾರಿ – ರೀಟೆನ್‌ ಪಟ್ಟಿ ರಿಲೀಸ್‌

    WPL 2025 | 3ನೇ ಆವೃತ್ತಿಗೆ ಭರ್ಜರಿ ತಯಾರಿ – ರೀಟೆನ್‌ ಪಟ್ಟಿ ರಿಲೀಸ್‌

    ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 2025ರ (IPL 2025) ಆವೃತ್ತಿಗೆ ಮೆಗಾ ಹರಾಜು ನಡೆಸಲು ಕೆಲವೇ ದಿನಗಳು ಬಾಕಿಯಿದೆ. ಈ ಹೊತ್ತಿನಲ್ಲೇ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2025) ತನ್ನ 3ನೇ ಆವೃತ್ತಿಗೆ ಕಾಲಿಡಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.

    ಐಪಿಎಲ್‌ ಮೆಗಾ ಹರಾಜಿಗೆ ರೀಟೆನ್‌ ಆಟಗಾರರ ಪಟ್ಟಿ ಬಿಡುಗಡೆ ಮಾಡಿದಂತೆ, ಮಹಿಳಾ ಪ್ರೀಮಿಯರ್‌ ಲೀಗ್‌ನ ಮಿನಿ ಹರಾಜಿಗೆ 5 ಫ್ರಾಂಚೈಸಿಗಳು ರೀಟೆನ್‌ ಆಟಗಾರ್ತಿಯರ ಪಟ್ಟಿ ಬಿಡುಗಡೆ ಮಾಡಿವೆ. ಇದನ್ನೂ ಓದಿ: WPL Champions: ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ – ಆರ್‌ಸಿಬಿ ಚೊಚ್ಚಲ ಚಾಂಪಿಯನ್‌!

    ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB Womens) 13 ಆಟಗಾರ್ತಿಯರನ್ನು ಉಳಿಸಿಕೊಂಡಿದ್ದು (Retentions), ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ 6 ಆಟಗಾರ್ತಿಯರನ್ನು ಹೊರದಬ್ಬಿದೆ. ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ತಲಾ 14 ಆಟಗಾರ್ತಿಯರನ್ನ ಉಳಿಸಿಕೊಂಡಿದ್ದು, ನಾಲ್ವರನ್ನ ಬಿಡುಗಡೆಗೊಳಿಸಿವೆ. ಇನ್ನುಳಿದಂತೆ ಯುಪಿ ವಾರಿಯರ್ಸ್‌ 15 ಹಾಗೂ ಗುಜರಾತ್‌ ಜೈಂಟ್ಸ್‌ ಫ್ರಾಂಚೈಸಿ 14 ಆಟಗಾರ್ತಿಯರನ್ನು ರೀಟೆನ್‌ ಮಾಡಿಕೊಂಡಿವೆ.

    ಒಟ್ಟಾರೆ 5 ತಂಡಗಳು ಒಟ್ಟು 71 ಮಂದಿಯನ್ನು ತಂಡದಲ್ಲಿ ಉಳಿಸಿಕೊಂಡಿದ್ದು, 19 ಸ್ಥಾನಗಳು ಬಾಕಿಯಿವೆ. ಸ್ಮೃತಿ ಮಂಧಾನ, ಹರ್ಮನ್‌ ಪ್ರೀತ್‌ ಕೌರ್‌, ಮೆಗ್‌ ಲ್ಯಾನಿಂಗ್‌, ಹಲಿಸ್ಸಾ ಹೀಲಿ, ಬೆತ್‌ ಮೂನಿ ಕ್ಯಾಪ್ಸನ್‌ಗಳಾಗಿ ಮುಂದುವರಿದಿದ್ದಾರೆ.

    ಪರ್ಸ್‌ನಲ್ಲಿ ಉಳಿದಿರುವುದೆಷ್ಟು?
    * ಆರ್‌ಸಿಬಿ – 3.25 ಕೋಟಿ ರೂ.
    * ಡೆಲ್ಲಿ ಕ್ಯಾಪಿಟಲ್ಸ್‌ – 2.50 ಕೋಟಿ ರೂ.
    * ಮುಂಬೈ ಇಂಡಿಯನ್ಸ್‌ – 2.65 ಕೋಟಿ ರೂ.
    * ಯುಪಿ ವಾರಿಯರ್ಸ್‌ – 3.90 ಕೋಟಿ ರೂ.
    * ಗುಜರಾತ್‌ ಜೈಂಟ್ಸ್‌ – 4.40 ಕೋಟಿ ರೂ.

    ಮಂಧಾನ ದುಬಾರಿ:
    ಮಹಿಳಾ ಪ್ರೀಮಿಯರ್‌ ಲೀಗ್‌ನ ಕಳೆದ ಎರಡೂ ಆವೃತ್ತಿಗಳಲ್ಲೂ ಸ್ಮೃತಿ ಮಂಧಾನ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ. ಮೊದಲ 2023ರಲ್ಲಿ ನಡೆದ ಮೊದಲ ಆವೃತ್ತಿಗೆ ಆರ್‌ಸಿಬಿ ಫ್ರಾಂಚೈಸಿ ಮಂಧಾನರನ್ನ 3.40 ಕೋಟಿ ರೂ.ಗೆ ಖರೀದಿ ಮಾಡಿತ್ತು. ಇದನ್ನೂ ಓದಿ: WPL 2024: ಆರ್‌ಸಿಬಿ ಸ್ಟಾರ್‌ ಶ್ರೇಯಾಂಕ ಪಾಟೀಲ್‌ಗೆ ಮದುವೆ ಪ್ರಪೋಸಲ್‌ ಕೊಟ್ಟ ಅಭಿಮಾನಿ

    ಚೊಚ್ಚಲ ಚಾಂಪಿಯನ್‌ ಆರ್‌ಸಿಬಿ:
    ಮಹಿಳಾ ಪ್ರೀಮಿಯರ್‌ ಲೀಗ್‌ನ (WPL 2024) ಮೊದಲ ಆವೃತ್ತಿಯಲ್ಲಿ ಸತತ ಹೀನಾಯ ಸೋಲುಗಳೊಂದಿಗೆ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಹಿಳಾ ತಂಡ 2ನೇ ಆವೃತ್ತಿಯಲ್ಲೇ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿತು. ಈ ಮೂಲಕ ʻಹೆಣ್ಮಕ್ಕಳೇ ಸ್ಟ್ರಾಂಗು ಗುರುʼ ಎಂಬ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದರು.

    ಕನ್ನಡತಿಯ ಕೈಚಳಕ:
    ಟಫ್‌ ಫೈಟ್‌ ನೀಡುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಅಂದು ಕನ್ನಡತಿ ಶ್ರೇಯಾಂಕ ಪಾಟೀಲ್‌ ಯಶಸ್ವಿಯಾಗಿದ್ದರು. ಆರ್‌ಸಿಬಿ ಪರ ಬೌಲಿಂಗ್‌ ಕೈಚಳಕ ತೋರಿ 3.3 ಓವರ್‌ಗಳಲ್ಲಿ ಕೇವಲ 12 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರು. ಇದರೊಂದಿಗೆ ಸೋಫಿ ಮೊಲಿನೆಕ್ಸ್ 3 ವಿಕೆಟ್‌ ಹಾಗೂ ಆಶಾ ಸೋಭನಾ 2 ವಿಕೆಟ್‌ ಪಡೆದು ಮಿಂಚಿದ್ದರು. ಇದನ್ನೂ ಓದಿ: ಕೆಕೆಆರ್‌ನಿಂದ 13 ಕೋಟಿಗೆ ರಿಟೇನ್‌ ಬೆನ್ನಲ್ಲೇ ಐಷಾರಾಮಿ ಬಂಗಲೆ ಖರೀದಿಸಿದ ರಿಂಕು ಸಿಂಗ್‌

  • ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಬೀಗಿದ ಭಾರತ; ಪಾಕ್‌ ವಿರುದ್ಧ 6 ವಿಕೆಟ್‌ ಜಯ – ಸೆಮಿಸ್‌ ಕನಸು ಜೀವಂತ

    ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಬೀಗಿದ ಭಾರತ; ಪಾಕ್‌ ವಿರುದ್ಧ 6 ವಿಕೆಟ್‌ ಜಯ – ಸೆಮಿಸ್‌ ಕನಸು ಜೀವಂತ

    ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿ ಕಣದಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನ (Ind vs Pak) ಮಹಿಳಾ ತಂಡದ ವಿರುದ್ಧ 6 ವಿಕೆಟ್‌ಗಳ ಅಮೋ ಗೆಲುವು ಸಾಧಿಸಿದೆ. ಇದರೊಂದಿಗೆ ಟಿ20 ವಿಶ್ವಕಪ್‌ (Women’s T20 World Cup) ಪ್ರಸಕ್ತ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆದು ಸೆಮಿಸ್‌ ಕನಸು ಜೀವಂತವಾಗಿರಿಸಿಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿತ್ತು. ಅಲ್ಪಮೊತ್ತದ ಗುರಿ ಬೆನ್ನಟ್ಟಿದ್ದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 106 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

    ಅಲ್ಪ ಮೊತ್ತದ ಗುರಿ ಪಡೆದು ಇನ್ನಿಂಗ್ಸ್‌ ಆರಂಭಿಸಿದ ಭಾರತ ನಿಧಾನಗತಿಯ ಬ್ಯಾಟಿಂಗ್‌ ಆರಂಭಿಸಿತ್ತು. ಒಂದೆಡೆ ರನ್‌ ಕಲೆಹಾಕುತ್ತಿದ್ದರೂ ಮತ್ತೊಂದು ಕಡೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. ಆದ್ರೆ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗ್ಸ್‌, ನಾಯಕಿ‌ ಹರ್ಮನ್‌ ಪ್ರೀತ್‌ ಕೌರ್‌ ಅವರ ಸಂಘಟಿತ ಪ್ರದರ್ಶನ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಯಿತು.

    ಪಾಕ್‌ಗೆ ಟರ್ನಿಂಗ್‌ ಸಿಕ್ಕಿದ್ದೆಲ್ಲಿ?
    ಒಂದೆಡೆ ರನ್‌ ಕಲೆಹಾಕುತ್ತಾ ಸಾಗಿದ ಭಾರತ ಮಹಿಳಾ ತಂಡಕ್ಕೆ ಪಾಕ್‌ ಕಠಿಣ ಪೈಪೋಟಿ ನೀಡಿತ್ತು. 16ನೇ ಓವರ್‌ನಲ್ಲಿ ನಾಯಕಿ ಫಾತಿಮಾ ಸನಾ ಅವರು ರೊಡ್ರಿಗ್ಸ್‌ ಹಾಗೂ ರಿಚಾಘೋಷ್‌ ಅವರ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ ಪಡೆದರು. ಇದರಿಂದ ಪಾಕ್‌ ಗೆಲುವಿನ ಕನಸು ಕಂಡಿತ್ತು. ಬಳಿಕ ಕಣಕ್ಕಿಳಿದ ಹರ್ಮನ್‌ಪ್ರೀತ್‌ ಪಂದ್ಯದ ದಿಕ್ಕನ್ನೇ ಬದಲಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು.

    ಟೀಂ ಇಂಡಿಯಾ ಪರ ಶಫಾಲಿ ವರ್ಮಾ 32 ರನ್‌, ಜೆಮಿಮಾ ರೊಡ್ರಿಗ್ಸ್‌ 23 ರನ್‌, ಹರ್ಮನ್‌ ಪ್ರೀತ್‌ ಕೌರ್‌ 29 ರನ್‌ ಗಳಿಸಿದ್ರೆ, ದೀಪ್ತಿ ಶರ್ಮಾ 7 ರನ್‌, ಸಜೀವನ್‌ ಸಜನಾ 4 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಪಾಕ್‌ ಪರ ಫಾತಿಮಾ ಸನಾ 2 ವಿಕೆಟ್‌ ಕಿತ್ತರೆ, ಒಮೈಮಾ ಸೋಹಾಲ್‌, ಸೈದಾ ಇಕ್ಬಾಲ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಪಾಕ್‌ ತಂಡದ ಆಟಗಾರ್ತಿಯರನ್ನು ಭಾರತದ ಬೌಲರ್‌ಗಳು ಇನ್ನಿಲ್ಲದಂತೆ ಕಾಡಿದರು. ಆರಂಭಿಕ ಬ್ಯಾಟರ್ ಗುಲ್ ಫಿರೋಜಾ ಅವರು ಖಾತೆ ತೆರೆಯುವ ಮುನ್ನವೇ, ವೇಗಿ ರೇಣುಕಾ ಠಾಕೂರ್ ಸಿಂಗ್ ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಅಟ್ಟಿದರು. ನಂತರ ಕಣಕ್ಕಿಳಿದ ಸಿದ್ರಾ ಅಮಿನ್ (8) ಅವರನ್ನು ದೀಪ್ತಿ ಶರ್ಮಾ ಹೆಚ್ಚು ಹೊತ್ತು ಉಳಿಯದಂತೆ ನೋಡಿಕೊಂಡರು. ನಿದಾ ದರ್ (28 ರನ್) ಹೊರತುಪಡಿಸಿ ಉಳಿದವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವಲ್ಲಿ ವಿಫಲರಾದರು.

    ಪಾಕಿಸ್ತಾನ ಪರ ಬ್ಯಾಟಿಂಗ್ ನಲ್ಲಿ ಮುನೀಬಾ ಅಲಿ 17, ನಿದಾ ದಾರ್ 28 ಮತ್ತು ಸೈದಾ ಶಾ ಅಜೇಯ 14 ರನ್ ಪೇರಿಸಿದರು. ಭಾರತ ಪರ ಬೌಲಿಂಗ್ ನಲ್ಲಿ ಅರುಂಧತಿ ರೆಡ್ಡಿ 3, ಶ್ರೇಯಾಂಕಾ ಪಟೇಲ್ 2, ರೇಣುಕಾ ಸಿಂಗ್, ದೀಪ್ತಿ ಶರ್ಮಾ, ಆಶಾ ಶೋಭನ ತಲಾ 1 ವಿಕೆಟ್ ಪಡೆದರು.

    ಭಾರತದ ಪರ ಅರುಂಧತಿ ರೆಡ್ಡಿ 3 ವಿಕೆಟ್ ಪಡೆದರೆ, ಕರ್ನಾಟಕದ ಶ್ರೇಯಂಕಾ ಪಾಟೀಲ್ 2 ವಿಕೆಟ್ ಉರುಳಿಸಿದರು. ರೇಣುಕಾ, ದೀಪ್ತಿ ಹಾಗೂ ಆಶಾ ಶೋಬನಾ ತಲಾ ಒಂದೊಂದು ವಿಕೆಟ್ ಉರುಳಿಸಿದರು.

  • Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    Women’s T20 World Cup; ಭಾರತ vs ಪಾಕಿಸ್ತಾನ ಫೈಟ್‌ – ಟೀಂ ಇಂಡಿಯಾಗೆ ಇಂದು ನಿರ್ಣಾಯಕ ಪಂದ್ಯ

    ದುಬೈ: ಮಹಿಳಾ ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಟೀಂ ಇಂಡಿಯಾ ಇಂದು (ಭಾನುವಾರ) ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಆರಂಭಿಕ ಪಂದ್ಯದಲ್ಲೇ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾಗೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ.

    ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಹಿಳೆಯರ ಟೀಂ ಇಂಡಿಯಾ, ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನವನ್ನು ಎದುರಿಸಲಿದೆ. ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದ ವನಿತೆಯರು ಸೋಲನುಭವಿಸಿದ್ದರು. ನಂತರ ಶ್ರೀಲಂಕಾ ವಿರುದ್ಧ ಜಯ ಗಳಿಸಿತ್ತು.

    ಶುಕ್ರವಾರ ಕೀವಿಸ್‌ ವಿರುದ್ಧ ಭಾರತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವೈಫಲ್ಯದಿಂದ 58 ರನ್‌ಗಳಿಂದ ಸೋಲೊಪ್ಪಿಕೊಂಡಿತು. ತಂಡವು ಈಗ ಕಳಪೆ ನೆಟ್‌ ರನ್‌ರೇಟ್‌ ಹೊಂದಿದ್ದು, 5 ತಂಡಗಳಿರುವ ‘ಎ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ.

    ಪಾಕ್‌ ವಿರುದ್ಧ ಪಂದ್ಯ ಸೇರಿ ಇನ್ನೂ ಒಟ್ಟು 3 ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. ಈ ಎಲ್ಲಾ ಪಂದ್ಯಗಳಲ್ಲೂ ಗೆಲ್ಲುವ ಅಗತ್ಯ ಇದೆ. ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಕದನವಾಗಿದೆ. ಒಂದು ವೇಳೆ ಪಾಕ್‌ ವಿರುದ್ಧ ಸೋತರೆ ಭಾರತ ಸೆಮಿಫೈನಲ್‌ನಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

    ಭಾರತ-ಪಾಕಿಸ್ತಾನ ನಡುವೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇದು 8 ನೇ ಪಂದ್ಯ. ಈ ಹಿಂದಿನ 7 ಪಂದ್ಯಗಳಲ್ಲಿ ಭಾರತ 5 ರಲ್ಲಿ ಜಯ ಸಾಧಿಸಿದ್ದು, 2ರಲ್ಲಿ ಸೋಲನುಭವಿಸಿದೆ. ಇಂದು ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದೆ.

    ಟೀಂ ಇಂಡಿಯಾ ಆಟಗಾರರು: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೇಟ್‌ ಕೀಪರ್), ಪೂಜಾ ವಸ್ತ್ರಾಕರ್, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಶ್ರೇಯಾಂಕ ಪಾಟೀಲ್, ಆಶಾ ಸೋಭಾನಾ, ರೇಣುಕಾ ಸಿಂಗ್‌.

    ಪಾಕ್‌ ಆಟಗಾರರು: ಮುನೀಬಾ ಅಲಿ (ವಿಕೇಟ್‌ ಕೀಪರ್), ಗುಲ್ ಫಿರೋಜಾ, ಸಿದ್ರಾ ಅಮೀನ್, ಒಮೈಮಾ ಸೊಹೈಲ್, ನಿದಾ ದಾರ್, ತುಬಾ ಹಸನ್, ಫಾತಿಮಾ ಸನಾ (ಕ್ಯಾಪ್ಟನ್), ಅಲಿಯಾ ರಿಯಾಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.‌

  • ಭಾರತದ ವನಿತೆಯರಿಗೆ ಆರಂಭಿಕ ಸೋಲು – ಸೋಫಿ ಸ್ಫೋಟಕ ಫಿಫ್ಟಿ; ಕಿವೀಸ್‌ಗೆ 58 ರನ್‌ಗಳ ಜಯ

    ಭಾರತದ ವನಿತೆಯರಿಗೆ ಆರಂಭಿಕ ಸೋಲು – ಸೋಫಿ ಸ್ಫೋಟಕ ಫಿಫ್ಟಿ; ಕಿವೀಸ್‌ಗೆ 58 ರನ್‌ಗಳ ಜಯ

    ಅಬುಧಾಬಿ: 2024ರ ಮಹಿಳಾ ಟಿ20 ವಿಶ್ವಕಪ್‌ನ (Womens T20 World Cup) ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್‌ ಮಹಿಳಾ ತಂಡ (New Zealand Womens Team) ಭಾರತ ಮಹಿಳಾ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಸೋಫಿ ಡಿವೈನ್‌ ಸ್ಫೋಟಕ ಅರ್ಧಶತಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದಾಗಿ ಭಾರತ ಮಹಿಳಾ ತಂಡದ ವಿರುದ್ಧ ಕಿವೀಸ್‌ ಗೆಲುವಿನ ನಗೆ ಬೀರಿದೆ.

    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲೆಂಡ್‌ ಮಹಿಳಾ ತಂಡ 4 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿತ್ತು. 161 ರನ್‌ಗಳ ಸವಾಲಿನ ಗುರಿ ಪಡೆದ ಭಾರತ ಮಹಿಳಾ ತಂಡ (India Womens Team) 19 ಓವರ್‌ಗಳಲ್ಲೇ 102 ರನ್‌ಗಳಿಗೆ ಸರ್ವಪತನ ಕಂಡಿತು.

    ಗೆಲುವಿನ ವಿಶ್ವಾಸದೊಂದಿಗೆ ಸವಾಲಿನ ಗುರಿ ಬೆನ್ನತ್ತಿದ ಭಾರತದ ವನಿತೆಯರು ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಶುರು ಮಾಡಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪ ಮೊತ್ತಕ್ಕೆ ನೆಲ ಕಚ್ಚಿದರು. ಪರಿಣಾಮ ಭಾರತ ಮೊದಲ 10 ಓವರ್‌ಗಳಲ್ಲಿ ಕೇವಲ 63 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತ್ತು. ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್‌ಗಳೂ ಉತ್ತಮ ಇನ್ನಿಂಗ್ಸ್‌ ಕಟ್ಟುವಲ್ಲಿ ವಿಫರಾದರು. ಇದರ ಪರಿಣಾಮ ಕಿವೀಸ್‌ ಮೇಲುಗೈ ಸಾಧಿಸಿತು.

    ಭಾರತದ ಪರ ಸ್ಮೃತಿ ಮಂಧಾನ 12 ರನ್‌, ಶಫಾಲಿ ವರ್ಮಾ 2 ರನ್‌, ಹರ್ಮನ್‌ ಪ್ರೀತ್‌ಕೌರ್‌ 15 ರನ್‌, ಜೆಮಿಮಾ ರೊಡ್ರಿಗ್ಸ್‌ 13 ರನ್‌, ರಿಚಾ ಘೋಷ್‌ 12 ರನ್‌, ದೀಪ್ತಿ ಶರ್ಮಾ 13 ರನ್‌ಗಳ ಕೊಡುಗೆ ನೀಡಿದರು.

    ಕಿವೀಸ್‌ ಪರ ರೋಸ್ಮರಿ ಮೈರ್ 4 ವಿಕೆಟ್‌ ಕಿತ್ತರೆ, ಲಿಯಾ ತಾಥುಥು 3 ವಿಕೆಟ್‌, ಇಡನ್‌ ಕಾರ್ಸನ್‌ 2 ವಿಕೆಟ್‌ ಹಾಗೂ ಅಮೇಲಿಯ ಕೇರ್‌ 1 ವಿಕೆಟ್‌ ಪಡೆದು ಮಿಂಚಿದರು.

    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಕ್ರೀಸ್‌ಗಿಳಿದ ಕಿವೀಸ್‌ ಮಹಿಳಾ ತಂಡದ ಆಟಗಾರ್ತಿಯರು ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾದರು. ಮೊದಲ ವಿಕೆಟ್‌ಗೆ ಸುಜಿ ಬೇಟ್ಸ್ ಹಾಗೂ ಜಾರ್ಜಿಯಾ ಪ್ಲಿಮ್ಮರ್ ಜೋಡಿ 46 ಎಸೆತಗಳಲ್ಲಿ 67 ರನ್‌ಗಳ ಜೊತೆಯಾಟ ನೀಡಿತ್ತು. ಇದರೊಂದಿಗೆ ನಾಯಕಿ ಸೋಫಿ ಡಿವೈನ್‌ ಅವರ ಸ್ಫೋಟಕ ಅರ್ಧಶತಕ ತಂಡಕ್ಕೆ ಇನ್ನಷ್ಟು ಬಲ ನೀಡಿತು.

    ಕಿವೀಸ್‌ ಪರ‌ ನಾಯಕಿ ಸೋಫಿ ಡಿವೈನ್‌ ಅಜೇಯ 57 ರನ್‌ (36 ಎಸೆತ, 7 ಬೌಂಡರಿ), ಸುಜಿ ಬೇಟ್ಸ್ 27 ರನ್ ಹಾಗೂ ಜಾರ್ಜಿಯಾ ಪ್ಲಿಮ್ಮರ್ 34 ರನ್‌, ಅಮೇಲಿಯ ಕೇರ್‌ 13 ರನ್‌, ಬ್ರೂಕಿ 16 ರನ್‌ ಗಳಿಸಿದ್ರೆ, ಮಾಡಿ ಗ್ರೀನ್‌ 5 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಟೀಂ ಇಂಡಿಯಾ ಪರ ವೇಗಿ ರೇಣುಕಾ ಸಿಂಗ್‌ 2 ವಿಕೆಟ್‌ ಕಿತ್ತರೆ, ಅರುಂಧತಿ ರೆಡ್ಡಿ, ಆಶಾ ಶೋಭಾನಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.