Tag: Smart Phone Restriction

  • ಕಾರವಾರ ನಗರದಲ್ಲಿ ದಿಢೀರ್ ಬೇಸಿಕ್ ಮೊಬೈಲ್‍ಗೆ ಹೆಚ್ಚಾಯ್ತು ಬೇಡಿಕೆ

    ಕಾರವಾರ ನಗರದಲ್ಲಿ ದಿಢೀರ್ ಬೇಸಿಕ್ ಮೊಬೈಲ್‍ಗೆ ಹೆಚ್ಚಾಯ್ತು ಬೇಡಿಕೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಬಳಿ ಇರುವ ಕದಂಬ ನೌಕಾನೆಲೆ ಸೇರಿದಂತೆ ಭಾರತೀಯ ನೌಕಾದಳದಲ್ಲಿ ಇಂದಿನಿಂದಲೇ ಜಾರಿ ಬರುವಂತೆ ಸ್ಮಾರ್ಟ್ ಫೋನ್ ಬಳಕೆ, ಫೇಸ್‍ಬುಕ್ ಬಳಕೆ ಹಾಗೂ ಇಂಟರ್ನೆಟ್ ಬಳಕೆಗೆ ನೌಕಾಪಡೆ ನಿಷೇಧ ಹೇರಿದೆ. ಈ ಹಿನ್ನಲೆಯಲ್ಲಿ ಕಾರವಾರ ಕದಂಬ ನೌಕಾ ನೆಲೆಯ ಸಿಬ್ಬಂದಿ ಬೇಸಿಕ್ ಸೆಟ್ ಕೊಂಡುಕೊಳ್ಳಲು ನಗರದಲ್ಲಿ ಮುಗಿಬಿದ್ದಿದ್ದು ಅಂಗಡಿಗಳಲ್ಲಿ ಮೊಬೈಲ್ ಸೆಟ್ ಸಿಗದೇ ನೌಕಾ ಸಿಬ್ಬಂದಿ ಪರದಾಡಿದ್ದಾರೆ.

    ಪಾಕಿಸ್ತಾನದ ಹನಿಟ್ರ್ಯಾಪ್ ಬಲೆಗೆ ಸಿಲುಕಿ ಭಾರತದ ಭದ್ರತೆಗೆ ಸಂಬಂಧಿಸಿದ ಬಹುಮುಖ್ಯ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಕಾರವಾರದ ಕದಂಬ ನೌಕಾನೆಲೆಯ ಇಬ್ಬರು ಸೇರಿದಂತೆ ಭಾರತೀಯ ನೌಕಾಪಡೆಯ ಒಟ್ಟು 7 ಸಿಬ್ಬಂದಿ ಹಾಗೂ ಓರ್ವ ಹವಾಲ ವ್ಯವಹಾರದ ವ್ಯಕ್ತಿಯನ್ನು ಕೆಲ ದಿನಗಳ ಹಿಂದೆ ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದರು.

    ಇದರ ಬೆನ್ನಲ್ಲೇ ಭಾರತೀಯ ನೌಕಾಪಡೆ ಮಹತ್ವದ ನಿರ್ಧಾರ ತೆಗೆದುಕೊಂಡದ್ದು, ನೌಕಾ ಸಿಬ್ಬಂದಿ ಸಮುದ್ರ ನೆಲೆಯಲ್ಲಿ ಸಾಮಾಜಿಕ ಜಾಲತಾಣ ಹಾಗೂ ಸ್ಮಾರ್ಟ್ ಫೋನ್ ಬಳಸುವುದನ್ನು ನಿಷೇಧಿಸಿದೆ. ಈ ಹಿಂದೆ ಇಂಟರ್‍ನೆಟ್, ಸ್ಮಾರ್ಟ್ ಫೋನ್ ಬಳಸುವುದಕ್ಕೆ ಯಾವುದೇ ಅಡ್ಡಿ ಇರಲಿಲ್ಲ. ಆದರೇ ಏಳು ಜನ ನೌಕಾ ಸಿಬ್ಬಂದಿ ಬಂಧನದ ನಂತರ ಮೊಬೈಲ್ ಬಳಕೆಯಿಂದಲೇ ದೊಡ್ಡ ದೊಡ್ಡ ಮಾಹಿತಿ ಪಾಕಿಸ್ತಾನ ಗುಪ್ತ ದಳಕ್ಕೆ ಹಂಚಿಕೆಯಾಗಿತ್ತು. ಇದಲ್ಲದೇ ದೊಡ್ಡ ಅಧಿಕಾರಿಗಳು ಸಹ ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಪಾಕಿಸ್ತಾನ ಗುಪ್ತದಳ ಇಲಾಖೆ ನೌಕಾದಳದವರಿಂದ ಹಲವು ಮಾಹಿತಿ ಪಡೆದಿತ್ತು. ಈ ಹಿನ್ನಲೆಯಲ್ಲಿ ಭಾರತೀಯ ನೌಕಾದಳ ಈ ನಿರ್ಧಾರ ಕೈಗೊಂಡಿದೆ.

    ನೌಕಾದಳದ ಸಿಬ್ಬಂದಿ ಬೇಡಿಕೆಗಾಗಿ ಹೋಲ್‍ಸೇಲ್ ಡೀಲರ್ ಗಳು ನೆರೆಯ ಗೋವಾ, ಮಹಾರಾಷ್ಟ್ರದಿಂದ ಮೊಬೈಲ್ ತಂದು ಮಾರಾಟ ಮಾಡುತ್ತಿದ್ದು, ಹಲವು ಮೊಬೈಲ್ ಶಾಪ್ ಗಳಲ್ಲಿ ಬೇಸಿಕ್ ಸೆಟ್‍ಗಳು ಸಿಗದೇ ನೌಕಾದಳದ ಸಿಬ್ಬಂದಿಗಳು ಪರದಾಡಿದ್ದಾರೆ. ಕಾರವಾರ ನಗರದಲ್ಲಿಯೇ ಒಂದು ದಿನಕ್ಕೆ 20 ಸಾವಿರಕ್ಕೂ ಹೆಚ್ಚು ಬೇಸಿಕ್ ಮೊಬೈಲ್ ಸೆಟ್ ಬಿಕರಿಯಾಗಿದೆ.

    ನಿನ್ನೆ ರಾತ್ರಿಯೇ ಸಾಕಷ್ಟು ಜನ ನೌಕಾ ಸಿಬ್ಬಂದಿ ಮೊಬೈಲ್ ಖರೀದಿಸಿದ್ದಾರೆ. ಹಾಗಾಗಿ ಈ ನಿರೀಕ್ಷೆಯನ್ನೇ ಇಟ್ಟುಕೊಳ್ಳದ ಮೊಬೈಲ್ ಶಾಪ್ ನವರು ಹೆಚ್ಚು ಬೇಡಿಕೆ ಇಲ್ಲದ ಬೇಸಿಕ್ ಸೆಟ್ ಗಳನ್ನು ತರಿಸಿರಲಿಲ್ಲ. ಹೀಗಾಗಿ ಏಕಾಏಕಿ ಬೇಡಿಕೆ ಬಂದಿದ್ದು ಮೊಬೈಲ್ ಪೂರೈಕೆ ಮಾಡಲು ಅಂಗಡಿಯವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.