Tag: Smart City Project

  • ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

    ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

    ಬೆಳಗಾವಿ: ನಗರದ ಅನಗೋಳದಲ್ಲಿರುವ ಬೆಮ್ಕೊ ಹೈಡ್ರಾಲಿಕ್ಸ್‌ನಿಂದ 4ನೇ ರೈಲ್ವೇ ಗೇಟ್ ವರೆಗಿನ ರಸ್ತೆಯನ್ನು ʼಬಸವರಾಜ ಬೊಮ್ಮಾಯಿ ರಸ್ತೆʼ (Basavaraj Bommai Road) ಎಂದು ನಾಮಕರಣ ಮಾಡಲಾಗಿದೆ.

    ನಗರದ ಕೆ.ಎಲ್.ಇ. ಸಂಸ್ಥೆಯ ಡಾ.ಶೇಷಗಿರಿ ಎಂಜಿನಿಯರಿಂಗ್ ಕಾಲೇಜ್ ಎದುರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವ ಭೈರತಿ ಬಸವರಾಜ್ ಅವರು, ‘ಬಸವರಾಜ ಬೊಮ್ಮಾಯಿ’ ರಸ್ತೆ ಫಲಕವನ್ನು ಅನಾವರಣಗೊಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ (Smart City Project) ಅಭಿವೃದ್ಧಿಪಡಿಸಲಾಗಿರುವ ರಸ್ತೆಗೆ ನಾಮಕರಣ ಮಾಡುವುದರ ಜೊತೆಗೆ ಅಲಂಕೃತ ವಿದ್ಯುದ್ದೀಪಗಳಿಗೂ ಸಚಿವರು ಚಾಲನೆ ನೀಡಿದರು. ಇದನ್ನೂ ಓದಿ: ಸ್ಪೆಷಲ್ ಮಾಸ್ಕ್ ರಿಲೀಸ್ – ಬಾರ್, ಪಬ್‌ಗಳಲ್ಲಿ ಮಾಸ್ಕ್ ಹಾಕಿಕೊಂಡೇ ಡ್ರಿಂಕ್ಸ್ ಮಾಡ್ಬೋದು: ಆರ್.ಅಶೋಕ್

    ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ವಿವರಿಸಿದರು. ಮಹಾನಗರ ಪಾಲಿಕೆ ಸದಸ್ಯ ಶ್ರೀಶೈಲ ಕಾಂಬಳೆ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ್ ಬಾಗೇವಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಹೂಡಿಕೆಗೆ ಅಮೆರಿಕದ ರಾಕ್ ಸ್ಪೇಸ್ ಕಂಪನಿ ಆಸಕ್ತಿ – ಸಚಿವರರೊಂದಿಗೆ ಮಾತುಕತೆ

    Live Tv
    [brid partner=56869869 player=32851 video=960834 autoplay=true]

  • ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿ ವಿಫಲ- ಗುತ್ತಿಗೆದಾರರಿಗೆ 1.53 ಕೋಟಿ ರೂ. ದಂಡ

    ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿ ವಿಫಲ- ಗುತ್ತಿಗೆದಾರರಿಗೆ 1.53 ಕೋಟಿ ರೂ. ದಂಡ

    ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ 11 ಗುತ್ತಿಗೆದಾರರಿಗೆ ಒಟ್ಟು 1.53 ಕೋಟಿ ರೂ. ದಂಡ ವಿಧಿಸಲಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣವಾಗಬೇಕೆಂಬ ಸೂಚನೆ ಇದ್ದರೂ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ ಕಾಮಗಾರಿಗಳ ಪ್ರಗತಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಕಾಮಗಾರಿ ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಬಾಲನ್ ತಿಳಿಸಿದ್ದಾರೆ.

    ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆದೇಶಿಸಲಾಗಿತ್ತು. ಆದರೂ ನಿರ್ಲಕ್ಷ್ಯ ತೋರಿದ್ದಾರೆ. ಆದೇಶ ಉಲ್ಲಂಘಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇದೀಗ ಕಾಮಗಾರಿ ವಿಳಂಬ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಗುತ್ತಿಗೆದಾರರಿಗೆ 69 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದರು.

    ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದ ಆರ್‍ಎಂಎನ್ ನಿರ್ಮಾಣ ಸಂಸ್ಥೆಗೆ 50.41 ಲಕ್ಷ ರೂ., ಅಶೋಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದ ಸಿದ್ಧಾರ್ಥ್ ಸಿವಿಲ್ ವರ್ಕ್ ಸಂಸ್ಥೆಗೆ 26.97 ಲಕ್ಷ ರೂ., ಅಮಾನಿಕೆರೆ ರಕ್ಷಣೆ ಮತ್ತು ಅಭಿವೃದ್ಧಿ ಸರಿಯಾಗಿ ನಿರ್ವಹಿಸದ ಆರ್‍ಎನ್‍ಎನ್ ಸಂಸ್ಥೆಗೆ 23.42 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಅಲ್ಲದೆ ಡಾ.ರಾಧಾಕೃಷ್ಣ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುತಿದ್ದ ಶ್ರೀನಿವಾಸ್ ನಿರ್ಮಾಣ ಸಂಸ್ಥೆ, ಭಗವಾನ್ ಮಹಾವೀರ ರಸ್ತೆ ಅಭಿವೃದ್ಧಿ ಸುಧಾಕರ್ ಪೆರಿಟಾಲ, ಮಹಿಳಾ ಥೀಮ್ ಪಾರ್ಕ್ ರಾಜೇಗೌಡ, ಟ್ರಾಮಾ ಸೆಂಟರ್ ಕೆಪಿಆರ್ ಸಂಸ್ಥೆ ಸೇರಿದಂತೆ ಒಟ್ಟು 11 ಸಂಸ್ಥೆಗಳಿಗೆ ದಂಡ ಹಾಕಲಾಗಿದೆ. ಈ ಮೂಲಕ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲಾಗಿದೆ.

  • ದೇಶದಲ್ಲೇ ಪ್ರಥಮ – ಬೆಣ್ಣೆನಗರಿಯನ್ನು ಕಾಪಾಡಲು ಬಂದಿವೆ ಬ್ಲಾಕ್ ಕಮಾಂಡೋಗಳು

    ದೇಶದಲ್ಲೇ ಪ್ರಥಮ – ಬೆಣ್ಣೆನಗರಿಯನ್ನು ಕಾಪಾಡಲು ಬಂದಿವೆ ಬ್ಲಾಕ್ ಕಮಾಂಡೋಗಳು

    ದಾವಣಗೆರೆ: ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆ ಜಿಲ್ಲಾ ಪೊಲೀಸ್‍ಗೆ ಕಮಾಂಡರ್ ಗಳನ್ನು ಪರಿಚಯಿಸಲಾಗಿದ್ದು, ವಿಶೇಷ ತಂತ್ರಜ್ಞಾನ ಹೊಂದಿದ ವಾಹನಗಳನ್ನು ಖರೀದಿಸಲಾಗಿದೆ.

    ನಗರದಲ್ಲಿ ಆಗಾಗ ಸಣ್ಣ ಪುಟ್ಟ ಕ್ರೈಂಗಳು ಸಂಭವಿಸುತ್ತಲೇ ಇರುತ್ತವೆ. ಜನಸಂಖ್ಯೆ ದೊಡ್ಡದಾಗುತ್ತಿದ್ದಂತೆ ಕ್ರೈಂ ಪ್ರಕರಣಗಳು ಸಹ ಬೆಳೆಯುತ್ತಿವೆ. ಹೀಗಾಗಿ ಅಪರಾಧ ಪ್ರಕರಣಗಳ ಪತ್ತೆಗೆ ಪೊಲೀಸರು ಈಗ ಹೈಟೆಕ್ ತಂತ್ರಜ್ಞಾನ ಬಳಕೆ ಮೊರೆ ಹೋಗಿದ್ದಾರೆ. ಇದರ ಭಾಗವಾಗಿ ಮೂರು ಕಮಾಂಡೊ ವೆಹಿಕಲ್‍ಗಳು ಜಿಲ್ಲಾ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿವೆ.

    ಇಡೀ ದೇಶದಲ್ಲೇ ಮೊದಲ ಬಾರಿಗೆ ಎಂಬಂತೆ ಕಮಾಂಡೋ ವಾಹನಗಳನ್ನು ದಾವಣಗೆರೆ ಪೊಲೀಸರಿಗೆ ಸ್ಮಾರ್ಟ್ ಸಿಟಿ ಯೋಜನೆ ಯಡಿ ನೀಡಲಾಗಿದೆ. ಸ್ಮಾರ್ಟ್‍ಸಿಟಿಗೆ ಆಯ್ಕೆಯಾಗಿರುವ ಯಾವ ಜಿಲ್ಲೆಯಲ್ಲಿಯೂ ಈ ಕಮಾಂಡೋ ವಾಹನ ನೀಡಿಲ್ಲ. ಆದರೆ ಸ್ಮಾರ್ಟ್ ಸಿಟಿ ಯೋಜನೆ ಎಂಡಿ ರವೀಂದ್ರ ಮಲ್ಲಾಪುರ ಅವರು ಸಿಸಿ ಪೂರ್ವವಲಯದ ಐಜಿಪಿ ಎಸ್.ರವಿ ಅವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾರ್ಪಾಡು ಆಗಬೇಕಿದ್ದು, ಅವುಗಳ ಪೂರೈಕೆಗೆ ಐಜಿಪಿ ಸ್ಮಾರ್ಟ್‍ಸಿಟಿ ಎಂಡಿಗೆ ಮನವಿ ಮಾಡಿದ್ದಾರೆ.

    ಹೊಸ ತಂತ್ರಜ್ಞಾನವನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೆ ದೊಡ್ಡ ಸಭೆ, ಸಮಾರಂಭ, ಪ್ರತಿಭಟನೆ ಸೇರಿದಂತೆ ಹೆಚ್ಚು ಜನ ಸೇರುವ ಸಮಾರಂಭಗಳ ಮೇಲೆ ಹದ್ದಿನ ಕಣ್ಣಿಡಲು ಈ ವಾಹನ ಸಹಕಾರಿಯಾಗಲಿದೆ.

    ವಿಶೇಷತೆ ಏನು?
    ಈ ಕಮಾಂಡೋ ವಾಹನದಲ್ಲಿ ಐದು ಮಂದಿ ಕೂರಬಹುದು. 2500 ಸಿಸಿ ಸಾಮರ್ಥ್ಯದ ಎಂಜಿನ್‍ವುಳ್ಳ ಈ ವೆಹಿಕಲ್ ಗುಡ್ಡಗಾಡು ಪ್ರದೇಶದಲ್ಲಿ ಕೂಡ ಸಾಗುತ್ತದೆ. ಇದರಲ್ಲಿ ಡ್ರೋನ್ ಕ್ಯಾಮೆರಾ ವ್ಯವಸ್ಥೆ ಸಹ ಇದ್ದು, ಕ್ಯೂಆರ್ ಕೋಡ್ ಸಹ ಅಳವಡಿಸಲಾಗಿದೆ. ಈ ಕ್ಯೂಆರ್ ಕೋಡ್‍ನಿಂದಾಗಿ ಡ್ರೋನ್ ಎಲ್ಲೇ ಹೋದರೂ ವೆಹಿಕಲ್ ಇರುವ ಜಾಗಕ್ಕೆ ಮತ್ತೆ ಬರುತ್ತದೆ. ಅಲ್ಲದೆ ಗನ್ ಟೈ ಪ್ಯಾಡ್, ಡಬಲ್ ಬ್ಯಾಟರಿ ಬಾಕ್ಸ್, ಸಿಗ್ನಲ್ ಜಾಮರ್, ಗನ್ ಇಡಲು ಆಮೋ ಬಾಕ್ಸ್, ಸರ್ವಲೆನ್ಸ್ ಕ್ಯಾಮೆರಾ, ಫೈರ್ ಪೂಫ್, ಬೆಂಕಿ ನಿಯಂತ್ರಣ ಸಾಧನ, ಗಲಭೆಯಲ್ಲಿ ವಾಹನಕ್ಕೆ ಕಲ್ಲು ಬೀಳದಂತೆ ತಡೆಯಲು ಮೆಸ್, ಫೋಕಸ್ ಲೈಟ್ ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಅಳವಡಿಸಲಾಗಿದೆ. ಇನ್ನೂ ವಿಶೇಷವೆಂದರೆ ಆಟೋಮೋಟಿವ್ ವೆಹಿಕಲ್ ಲೊಕೇಷನ್ ಸಿಸ್ಟಂ ಸಹ ಇದೆ. ಇದರಿಂದ ಪೊಲೀಸರು ಪ್ರತಿ ಬಾರಿ ಕಂಟ್ರೋಲ್ ರೂಮ್ ಸಂಪರ್ಕಿಸಬೇಕಿಲ್ಲ. ಘಟನಾ ಸ್ಥಳಕ್ಕೆ ಬೇಗ ತಲುಪಬಲ್ಲದು. ಅಲ್ಲದೆ ಘಟನಾ ಸ್ಥಳದ ಚಿತ್ರಣವನ್ನು ಎಸ್‍ಪಿ ಕಚೇರಿಯಲ್ಲಿ ಕುಳಿತುಕೊಂಡೇ ವೀಕ್ಷಿಸಬಹುದಾಗಿದೆ.

    ದೇಶದಲ್ಲಿಯೇ ಈ ವ್ಯವಸ್ಥೆ ಅಳವಡಿಸಿಕೊಳ್ಳಲಿರುವ ಪ್ರಥಮ ನಗರ ದಾವಣಗೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈಗಾಗಲೇ ಖಾಲಿ ಕಮಾಂಡೊ ವಾಹನಗಳು ಬಂದಿವೆ. ವಾಹನಕ್ಕೆ ಬೇಕಾದ ಸಾಮಗ್ರಿ ಅಳವಡಿಸಲು ಸ್ಟಾರ್ಟ್‍ಸಿಟಿ ತಂಡ ಮುಂದಾಗಿದೆ. ಇದಕ್ಕೆ ಆರ್ ಟಿಓ ಅನುಮತಿ ಬೇಕಿದ್ದು, ಇದಾದ ಬಳಿಕ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  • ತುಮಕೂರು ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ- ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ. ವೆಚ್ಚ

    ತುಮಕೂರು ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ- ಸ್ಮಾರ್ಟ್ ಸಿಟಿ ಯೋಜನೆಯಡಿ 82.18 ಕೋಟಿ ರೂ. ವೆಚ್ಚ

    ತುಮಕೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವು ಸ್ಮಾರ್ಟ್ ಸಿಟಿ ಯೋಜನೆ ಅಡಿ ಹೈಟೆಕ್ ಸ್ಪರ್ಶ ಪಡೆಯಲಿದೆ. 82.18 ಕೋಟಿ ರೂ. ವೆಚ್ಚದಲ್ಲಿ ಬಹುಮಡಿ `ಸ್ಮಾರ್ಟ್ ಬಸ್ ಟರ್ಮಿನಲ್’ ನಿರ್ಮಿಸಲಾಗುತ್ತಿದೆ.

    ನಗರದ ಹೃದಯಭಾಗದಲ್ಲಿ ಏರ್‌ಪೋರ್ಟ್‌ ಮಾದರಿಯಲ್ಲಿ ತಲೆ ಎತ್ತಲಿರುವ ಬಸ್ ನಿಲ್ದಾಣವು ಹತ್ತು ಹಲವು ಸ್ಮಾರ್ಟ್ ವಿಶೇಷತೆ ಹೊಂದಿದೆ. ಬಿ1, ಬಿ2, ನೆಲಮಹಡಿ ಹಾಗೂ 3 ಅಂತಸ್ತಿನ ಬಸ್ ನಿಲ್ದಾಣವು ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ.

    ರಾಜ್ಯ ರಾಜಧಾನಿ ಬೆಂಗಳೂರು ಹೆಬ್ಬಾಗಿಲು ತುಮಕೂರು ಜಿಲ್ಲೆ. ಜಿಲ್ಲೆಯ ಮೂಲಕ ಮಧ್ಯಕರ್ನಾಟಕ ಹಾಗೂ ಉತ್ತರಕರ್ನಾಟಕ ಭಾಗದ ಬಸ್ಸುಗಳು ಹಾದುಹೋಗಲಿದ್ದು, ಪ್ರತಿನಿತ್ಯ 2,400 ಬಸ್ಸುಗಳು ಸಾರಿಗೆ ಬಸ್ ನಿಲ್ದಾಣವನ್ನು ಹಾದುಹೋಗಲಿವೆ. ಬಸ್ ಸಂಚಾರದ ಒತ್ತಡದ ದಟ್ಟಣೆಗೆ ಪರಿಹಾರವಾಗಿ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

    ಬಹುಮಹಡಿ ಬಸ್ ಟರ್ಮಿನಲ್:
    ವಿಮಾನ ನಿಲ್ದಾಣ ಮಾದರಿಯಂತೆ ಬಹುಮಹಡಿ ಬಸ್ ಟರ್ಮಿನಲ್ ನಿರ್ಮಿಸುವ ಯೋಜನೆಯನ್ನು ಸ್ಮಾರ್ಟ್ ಸಿಟಿ ಕೈಗೆತ್ತಿಕೊಂಡಿದೆ. ಎರಡೂವರೆ ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡು ಕೆಎಸ್ಆರ್‌ಟಿಸಿಗೆ ಹಸ್ತಾಂತರಿಸಲಾಗುವುದು. ವೈಫೈ, ಇಂಟರ್‌ನೆಟ್ ಸಹಿತ ಅತ್ಯಾಧುನಿಕ ಸಂಪರ್ಕ ಸೌಲಭ್ಯ ಬಸ್ ನಿಲ್ದಾಣದಲ್ಲಿ ಇರಲಿದೆ. ಗುಜರಾತ್ ವಡೋದರದಲ್ಲಿನ ಬಸ್ ಟಿರ್ಮಿನಲ್‍ನಂತೆ ತುಮಕೂರು ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.

    ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ:
    ಹೈಟೆಕ್ ಬಸ್ ಟಿರ್ಮಿನಲ್‍ನ ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ ಇರಲಿದೆ. ಸದ್ಯ 50 ಸಿಟಿ ಬಸ್ಸುಗಳು ನಗರದಲ್ಲಿ ಕಾರ್ಯಾಚರಣೆಯಲ್ಲಿದ್ದು, 30 ಬಸ್ಸುಗಳು ನಿಲ್ಲುವ ವ್ಯವಸ್ಥೆ ನಿಲ್ದಾಣದಲ್ಲಿ ಇರಲಿದೆ. ಪ್ರತಿನಿತ್ಯ ನಗರ ಸಾರಿಗೆಯ 1,200 ಟ್ರಿಪ್‍ಗಳನ್ನು ಈ ಬಸ್ಸುಗಳು ಮಾಡಲಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಗರ ಸಾರಿಗೆ ಬಸ್ಸುಗಳನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ.

    ಬಿ1, ಬಿ2ನಲ್ಲಿ ವಾಹನ ಪಾರ್ಕಿಂಗ್:
    ಬೇಸ್ 1, ಬೇಸ್ 2ನಲ್ಲಿ ವಿಶಾಲವಾದ ಅತ್ಯಾಧುನಿಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬೇಸ್ 1ನಲ್ಲಿ ಕಾರು ಪಾರ್ಕಿಂಗ್‍ಗಾಗಿ ವ್ಯವಸ್ತೆ ಮಾಡಲಾಗುತ್ತದೆ. 167 ನಾಲ್ಕು ಚಕ್ರದ ವಾಹನಗಳನ್ನು ಒಟ್ಟಿಗೆ ಇಲ್ಲಿ ಪಾರ್ಕ್ ಮಾಡಬಹುದು. ಏಕಕಡೆ ಪ್ರವೇಶ ಹಾಗೂ ನಿರ್ಗಮನ ಇರಲಿದ್ದು, 4 ಲಿಫ್ಟ್ ಹಾಗೂ 4 ಕಡೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಸಬ್‍ವೇ ಸಂಪರ್ಕ ವ್ಯವಸ್ಥೆ ಕೂಡ ಮಾಡಲಾಗುವುದು.

    ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್:
    ಮೊದಲ ಅಂತಸ್ತು ಎಕ್ಸ್‌ಪ್ರೆಸ್‌, ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಮೀಸಲಿರಿಸಲಾಗಿದೆ. 35 ಬಸ್ಸುಗಳು ಒಟ್ಟಿಗೆ ಬಂದು ನಿಲ್ಲುವ ವ್ಯವಸ್ಥೆ ಇರಲಿದೆ. ಜೊತೆಗೆ ಆಡಳಿತ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಲಗ್ಗೇಜ್ ಕೊಠಡಿ ಸೇರಿದಂತೆ ಶೌಚಾಗೃಹ ಸೌಲಭ್ಯ, ಲಿಫ್ಟ್, ಎಸ್ಕಲೇಟರ್ ಸಹ ಪ್ರಯಾಣಿಕರಿಗಾಗಿ ನಿರ್ಮಿಸಲಾಗುತ್ತದೆ.

    ಅಂಗಡಿ-ಮಳಿಗೆಗಳು:
    2 ಹಾಗೂ 3ನೇ ಅಂತಸ್ತಿನಲ್ಲಿ ಮಾಲ್‍ಗಳು, ಖಾಸಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ 65 ಕೆವಿ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ.

    ಸಾರಿಗ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣವಾಗುವವರೆಗೂ ಈಗಿರುವ ಬಸ್ ನಿಲ್ದಾಣವನ್ನು ಹತ್ತಿರದಲ್ಲಿರುವ ಜೆ.ಸಿ ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕೆಎಸ್ಆರ್‌ಟಿಸಿ ಬಸ್ ಡಿಪೋ-1ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಜ. 8ರಿಂದ ಈ ಬಸ್ ನಿಲ್ದಾಣ ಕಾರ್ಯಾರಂಭವಾಗಿದ್ದು, ಅಶೋಕ ರಸ್ತೆಯಿಂದ ಬಸವೇಶ್ವರ ರಸ್ತೆ ಮೂಲಕ ನಿಲ್ದಾಣ ಪ್ರವೇಶಿಸುವ ಬಸ್ಸುಗಳು ಗುಬ್ಬಿ ವೀರಣ್ಣ ಕಲಾಕ್ಷೇತ್ರ ಭಾಗದಲ್ಲಿ ನಿರ್ಗಮಿಸಲಿವೆ. 2 ನಿರ್ಗಮನ ದ್ವಾರಗಳಿರಲಿವೆ.

  • ಆತನ ಮುಖ ನೋಡಲು ಇಷ್ಟವಿಲ್ಲ, ಸಭೆಗೂ ಬರಲ್ಲ: ಈಶ್ವರಪ್ಪ

    ಆತನ ಮುಖ ನೋಡಲು ಇಷ್ಟವಿಲ್ಲ, ಸಭೆಗೂ ಬರಲ್ಲ: ಈಶ್ವರಪ್ಪ

    ಶಿವಮೊಗ್ಗ: ಆ ಅಯೋಗ್ಯ ಇರುವವರೆಗೆ ಯಾವುದೇ ಸಭೆಗೆ ಬರೋದಿಲ್ಲ ಎಂದು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಹರಿಹಾಯ್ದಿದ್ದಾರೆ.

    ಇಂದು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಈಶ್ವರಪ್ಪ ಅವರು ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಸದ ರಾಘವೇಂದ್ರ ಅವರು ಸಚಿವ ಈಶ್ವರಪ್ಪ ಅವರಿಗೆ ಫೋನ್ ಕರೆ ಮಾಡಿ ನಗರದ ವೈದ್ಯಕೀಯ ಸಂಸ್ಥೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಸಂಸದರೊಂದಿಗೆ ಮಾತನಾಡುತ್ತಿದ್ದ ವೇಳೆ ಸಚಿವರು ಆ ಅಯೋಗ್ಯ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ. ಲೇಪಾಕ್ಷಿ ನಿರ್ದೇಶಕನ ಹುದ್ದೆಯಲ್ಲಿ ಇರುವವರೆಗೆ ನಾನು ವೈದ್ಯಕೀಯ ಸಂಸ್ಥೆಯ ಯಾವುದೇ ಕಾರ್ಯಕ್ರಮ, ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಿಡಿಕಾರಿದರು.

    ಆತನ ಮುಖ ನೋಡುವುದಕ್ಕೂ ನನಗೆ ಇಷ್ಟವಿಲ್ಲ. ಆ ಅಯೋಗ್ಯನನ್ನು ಮೊದಲು ತೆಗೆದು ಹಾಕು. ಆ ಮೇಲೆ ನೀನು ಕರೆಯುವ ವೈದ್ಯಕೀಯ ಸಂಸ್ಥೆಯ ಎಲ್ಲಾ ಕಾರ್ಯಕ್ರಮ, ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಹಾಗೂ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ. ಲೇಪಾಕ್ಷಿ ನಡುವೆ ಮನಸ್ತಾಪವಿದೆ ಎಂಬುದು ಸಾಬೀತಾದಂತಾಗಿದೆ. ಅಷ್ಟಕ್ಕು ಜಿಲ್ಲಾ ಉಸ್ತುವಾರಿ ಸಚಿವರಿಗೆ ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಿಸಲು ಸಾಧ್ಯವಾಗುತ್ತಿಲ್ಲವಾ ಎಂಬ ಅನುಮಾನ ಸಹ ಘಟನೆ ಬಳಿಕ ನಾಗರೀಕರಲ್ಲಿ ಕಾಡಲಾರಂಭಿಸಿದೆ.