Tag: small break in pillar

  • ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು

    ನಮ್ಮ ಮೆಟ್ರೋ ಕಂಬದಲ್ಲಿ ಬಿರುಕು ಮೂಡಿದ್ಯಾಕೆ : ಇಲ್ಲಿದೆ ಪ್ರಮುಖ ಕಾರಣಗಳು

    ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಕಳಪೆ ಕಾಮಗಾರಿ ನಡೆದಿದ್ಯಾ ಎನ್ನುವ ಅನುಮಾನ ಈಗ ಎದ್ದಿದೆ.

    ಮೆಟ್ರೋ ಮಾರ್ಗದ ಒಂದು ಕಂಬದಲ್ಲಿ ಬಿರುಕು ಮೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಜ್ಞರು ವಿವಿಧ ವಿಶ್ಲೇಷಣೆ ನೀಡಿದ್ದು ಕಳಪೆ ಕಾಮಗಾರಿಯೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

    ಬಿರುಕು ಮೂಡಲು ಕಾರಣವಾದ ಅಂಶಗಳು ಏನಿರಬಹುದು?
    – ಮೆಟ್ರೋ ಕಾಮಗಾರಿ ಅತ್ಯಂತ ಗುಣಮಟ್ಟದಿಂದ ಕೂಡಿರಲೇಬೇಕು. ಇದರ ಪಿಲ್ಲರ್, ಜಾಯಿಂಟ್ ಭಾಗ, ಟ್ರ್ಯಾಕ್ ಆಯಸ್ಸು ಬರೋಬ್ಬರಿ 60 ವರ್ಷ ಇರಬೇಕು. ಹೀಗಾಗಿ ಉದ್ಘಾಟನೆಯಾದ 7 ವರ್ಷಕ್ಕೆ ಬಿರುಕು ಬಿಡಲು ಸಾಧ್ಯವೇ ಇಲ್ಲ. ಆದರೆ ಇದು ಕಳಪೆ ಕಾಮಗಾರಿಯ ಸಂಕೇತ ಎನ್ನುವುದು ಸ್ಪಷ್ಟವಾಗುತ್ತದೆ.

    – ಮೆಟ್ರೋ ಪಿಲ್ಲರ್ ಮೇಲಿನ ಲೋಡ್ ನಿಗದಿತ ಸಾಮರ್ಥ್ಯ ಕ್ಕಿಂತ ಹೆಚ್ಚಾಗಿದೆ. ಮೆಟ್ರೋ ರೈಲಿಗೆ ಹೆಚ್ಚುವರಿ ಕೋಚ್ ಈಗ ಹಾಕಲಾಗಿದೆ. ಲಾಭದ ದೃಷ್ಟಿಯಿಂದ ಭಾರೀ ಪ್ರಮಾಣದಲ್ಲಿ ಮೆಟ್ರೋ ಓಡಾಟದಿಂದ ಪಿಲ್ಲರ್ ಗಳ ಮೇಲಿನ ಒತ್ತಡ ಹೆಚ್ಚಾಗಿರಬಹುದು. ಇದರಿಂದಾಗಿ ಬಿರುಕು ಬಿಟ್ಟಿರಬಹುದು.

    – ಪ್ರತಿ ವರ್ಷಕ್ಕೆ ಪಿಲ್ಲರ್ ಬೀಮ್, ಟ್ರ್ಯಾಕ್, ಪಿಲ್ಲರ್ ಗಳ ಗುಣಮಟ್ಟದ ಪರಿಶೀಲನೆ ಮಾಡಬೇಕು. ಆದರೆ ಬಿರುಕು ಬಿಟ್ಟ ಮೇಲೆ ನಮ್ಮ ಮೆಟ್ರೋ ಎಚ್ಚೆತ್ತುಕೊಂಡಿದೆ. ಇವರೆಗೂ ಯಾವುದೇ ಗುಣಮಟ್ಟವನ್ನು ಪರಿಶೀಲನೆ ಮಾಡಿಲ್ಲ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೆಟ್ರೋ ಕಾಮಗಾರಿಯಲ್ಲಿ ಗೋಲ್‍ಮಾಲ್ ನಡೆದಿದೆ.

    – ಕೇವಲ ಟ್ರಿನಿಟಿ ಸರ್ಕಲ್‍ನ 155 ಪಿಲ್ಲರ್ ಬಳಿ ಮಾತ್ರವಲ್ಲ. ಟ್ರಿನಿಟಿ ಪಕ್ಕದ ಪಿಲ್ಲರ್ ಕೂಡ ಶಿಥಿಲವಾಸ್ಥೆಯಲ್ಲಿದ್ದು, ಸಿಮೆಂಟ್ ಕಿತ್ತು ಹೋಗಿದೆ. ಕೆಲವಡೆ ತೇಪೆ ಹಚ್ಚಿರುವ ಕಾಮಗಾರಿಯೂ ಕಾಣುತ್ತದೆ. ಅಷ್ಟೇ ಅಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಇರುವ ಕಾರಣ ಪಿಲ್ಲರ್ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿರುವ ಸಾಧ್ಯತೆಯಿದೆ.

    ರಾತ್ರಿ ಕಾರ್ಯಾಚರಣೆ:
    ಮೆಟ್ರೋ ದುರಸ್ತಿ ಆರಂಭವಾಗಲಿದ್ದು, ಸಂಚಾರಕ್ಕೆ ಅಸ್ತವ್ಯಸ್ತವಾಗದಂತೆ ಮಧ್ಯರಾತ್ರಿಯೇ ಕಾಮಗಾರಿ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈಗ ಕಾಮಗಾರಿ ನಡೆಸಿದರೆ ಮೆಟ್ರೋ ಸಂಚಾರಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ರಾತ್ರಿ ಹನ್ನೊಂದು ಗಂಟೆಗೆ ಮೆಟ್ರೋ ಸಂಪೂರ್ಣ ಸಂಚಾರ ನಿಲ್ಲಲ್ಲಿದೆ. ಈ ವೇಳೆ ದುರಸ್ತಿ ಕಾರ್ಯ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿ ಮೂಲಗಳು ತಿಳಿಸಿವೆ.

    https://youtu.be/KoPKGJPuua8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv