Tag: Slum People

  • ಸ್ಲಂ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಹುಟ್ಟುಹಬ್ಬ ಆಚರಿಸಿದ ಪ್ರಣಿತಾ

    ಸ್ಲಂ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಹುಟ್ಟುಹಬ್ಬ ಆಚರಿಸಿದ ಪ್ರಣಿತಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಪ್ರಣಿತಾ ಸುಭಾಷ್ ಇಂದು ತಮ್ಮ 28ನೇ ವರ್ಷದ ಹುಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಗರದ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.

    ಪ್ರಣಿತಾ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಹುಟ್ಟುಹಬ್ಬದಂದು ಪ್ರಣಿತಾ ಸರ್ಕಾರಿ ಶಾಲೆ ದತ್ತು ಪಡೆದುಕೊಂಡು, 5 ಲಕ್ಷ ರೂ. ಹಣವನ್ನು ನೀಡಿದ್ದರು. ಈ ಬಾರಿ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.

    ಪ್ರಣಿತಾ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ‘ಪ್ರಣಿತಾ ಫೌಂಡೇಶನ್ ಸಂಸ್ಥೆ’ ಆರಂಭಿಸಿದ್ದಾರೆ. ಈ ಸಂಸ್ಥೆಯಿಂದ ಮೊದಲ ಬಾರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯವನ್ನು ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಂಡ ಮೊದಲ ಬಾರಿಗೆ ಸ್ವತಂತ್ರವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ತಂಡದ ಎಲ್ಲಾ ಸದಸ್ಯರಿಗೆ ಧನ್ಯವಾದ. ಇಂತಹ ಕಾರ್ಯಗಳು ಮತ್ತಷ್ಟು ಮಾಡುವ ಆಸೆ ಇದೆ ಎಂದು ತಿಳಿಸಿದರು.

    ಪ್ರಣಿತಾ ಫೌಂಡೇಶನ್ ಸಂಸ್ಥೆ ಕೈಗೊಳ್ಳುವ ಎಲ್ಲಾ ಸಾಮಾಜಿಕ ಕಾರ್ಯಗಳ ಮಾಹಿತಿ ಒಳಗೊಂಡ www.pranithafoundation.org ವೆಬ್ ಸೈಟ್ ಕೂಡ ಬಿಡುಗಡೆ ಮಾಡಿದ್ದಾರೆ. ಇವರೊಂದಿಗೆ ಕೈಜೋಡಿಸಲು ಇಷ್ಟಪಡುವವರು ವೆಬ್ ಸೈಟ್ ಮೂಲಕ ಸಂಪರ್ಕಿಬಹುದು.

    ದರ್ಶನ್ ಅಭಿನಯದ ‘ಪೊರ್ಕಿ’ ಸಿನಿಮಾದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದ ಪ್ರಣಿತಾ ಆ ಬಳಿಕ ಜರಾಸಂಧ, ಸ್ನೇಹಿತರು, ಬ್ರಹ್ಮ, ಸೆಕೆಂಡ್ ಹ್ಯಾಡ್ ಲವರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಪ್ರಣಿತಾ ಬಾಲಿವುಡ್‍ಗೂ ಎಂಟ್ರಿ ನೀಡಿದ್ದು, ಅಜಯ್ ದೇವಗನ್ ಅಭಿನಯದ `ಭುಜ್: ದಿ ಪ್ರೈಡ್ ಆಫ್ ಇಂಡಿಯಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೇ 2017ರಲ್ಲಿ ಬಿಡುಗಡೆಯಾಗಿದ್ದ `ಮಾಸ್ ಲೀಡರ್’ ಪ್ರಣಿತಾರ ಕೊನೆಯ ಕನ್ನಡ ಸಿನಿಮಾ ಆಗಿದೆ. ಕನ್ನಡಕ್ಕಿಂತಲೂ ಹೆಚ್ಚು ಬೇರೆ ಬೇರೆ ಭಾಷೆಗಳಲ್ಲಿ ನಟಿಸಿರುವ ಅವರು ಕರ್ನಾಟಕದ ಜನರ ಬಗ್ಗೆ ಇರುವ ಸಾಮಾಜಿಕ ಕಳಕಳಿಯನ್ನು ಮಾತ್ರ ಮರೆತಿಲ್ಲ.