Tag: sleep

  • ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ನಿದ್ದೆ ಗುಂಗಲ್ಲಿ ಮಗುವನ್ನೇ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಂದ ತಾಯಿ!

    ಜೈಪುರ: ರಾತ್ರಿ ವೇಳೆ ನಿದ್ದೆ ಗುಂಗಿನಲ್ಲಿ ತಾಯಿಯೊಬ್ಬರು 6 ತಿಂಗಳ ಮಗುವನ್ನು ನೀರಿನ ಟ್ಯಾಂಕಿನಲ್ಲಿ ಮುಳುಗಿಸಿ ಹತ್ಯೆಗೈದ ಭಯಾನಕ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

    35 ವರ್ಷದ ಆರೋಪಿ ದೀಪಿಕಾ ಗುಜ್ಜಾರ್ ಈ ಕೃತ್ಯವೆಸೆಗಿದ್ದಾರೆ. ಈ ಘಟನೆಯೂ ಭಾನುವಾರ ನಡೆದಿದ್ದು, ತಾಯಿಯೇ ಆರೋಪಿ ಎನ್ನುವುದು ಮಂಗಳವಾರ ತಿಳಿದಿದೆ. ಭಾನುವಾರ ರಾತ್ರಿ ಪತಿ ಹಾಗೂ ಮಗುವಿನ ಜೊತೆ ಮನೆಯ ಎರಡನೇ ಮಹಡಿಯಲ್ಲಿ ಆರೋಪಿ ಮಲಗಿದ್ದಳು. ಆದೇನಾಯ್ತೋ ಗೊತ್ತಿಲ್ಲ. ರಾತ್ರಿ ನಿದ್ದೆಯಿಂದ ಎದ್ದ ಮಹಿಳೆ ಮಗುವನ್ನು ಎತ್ತುಕೊಂಡು ಹೋಗಿ ಎರಡನೇ ಮಹಡಿಯಯಲ್ಲಿರುವ ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ, ತನ್ನ ಪಾಡಿಗೆ ವಾಪಸ್ ಬಂದು ಮಲಗಿದ್ದಾಳೆ.

    ರಾತ್ರಿ 1.30 ಗಂಟೆ ಸುಮಾರಿಗೆ ಪತಿಗೆ ಎಚ್ಚರವಾದಾಗ ಮಗುವನ್ನು ಕಾಣದೆ ಗಾಬರಿಯಾಗಿದ್ದಾರೆ. ಈ ಬಗೆ ಪತ್ನಿ ಬಳಿ ಕೇಳಿದ್ದಾನೆ. ಆಕೆ ಕೂಡ ನನಗೆ ಗೊತ್ತಿಲ್ಲ ಎಂದಿದ್ದಾಳೆ. ನಂತರ ಮನೆಮಂದಿ ಎಲ್ಲರೂ ಸೇರಿ ರಾತ್ರಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಜ್ಜಿಗೆ ನೀರಿನ ಟ್ಯಾಂಕ್‍ನಲ್ಲಿ ಮುಳುಗಿರುವ ಮಗು ಕಾಣಿಸಿದ್ದು, ಮಗುವನ್ನು ರಕ್ಷಿಸುವ ಮುನ್ನವೇ ಕಂದಮ್ಮ ಸಾವನ್ನಪ್ಪಿತ್ತು.

    ಸೀತಾರಾಮ್ ಗುಜ್ಜಾರ್ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಆರೋಪಿ ತಾಯಿ ಗೃಹಿಣಿಯಾಗಿದ್ದರು. ಸೀತಾರಾಮ್ ದಂಪತಿ ಮನೆಯಲ್ಲಿ ಪೋಷಕರು ಹಾಗೂ ಅಜ್ಜಿ ಜತೆ ವಾಸವಾಗಿದ್ದರು. ಈ ಕೃತ್ಯದ ಬಗ್ಗೆ ಬೋರೆಖೇಡಾ ಪೊಲೀಸ್ ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದರು. ಆಗ ಪೊಲೀಸರು ವಿಚಾರಣೆ ನಡೆಸಿದಾಗ ತಾಯಿಯೇ ಕೊಲೆ ಮಾಡಿರುವುದು ತಿಳಿದು ಬಂದಿದ್ದು, 302ರ ಕಾಯ್ದೆಯ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ತಾಯಿಯೇ ಕೊಲೆ ಮಾಡಿರುವ ಬಗ್ಗೆ ತಿಳಿದ ಬಳಿಕ ಆಕೆಯನ್ನು ಪ್ರಶ್ನಿಸಿದಾಗ ನಿದ್ದೆಯಿಂದ ಎದ್ದಿದ್ದಾಗಲಿ, ಮಗುವನ್ನು ತೆಗೆದುಕೊಂಡು ಹೋಗಿ ನೀರಿನ ಟ್ಯಾಂಕ್‍ನಲ್ಲಿ ಹಾಕಿ ಬಂದ ವಿಚಾರ ನನಗೆ ಗೊತ್ತಾಗಲಿಲ್ಲ ಎಂದು ಹೇಳುತ್ತಿದ್ದಾಳೆ. ಆದರೆ ಈ ಕೃತ್ಯ ಎಸಗಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ.

    ಸದ್ಯ ಈ ಬಗ್ಗೆ ಪೊಲೀಸರು  ತನಿಖೆ ನಡೆಸುತ್ತಿದ್ದು, ಆರೋಪಿಗೆ ಯಾವುದೇ ಮಾನಸಿಕ ಕಾಯಿಲೆ ಇಲ್ಲ ಎಂಬುದು ತಿಳಿದಿದೆ. ಅಲ್ಲದೆ ಈ ಹಿಂದೆ ಮಹಿಳೆಯ ಎರಡು ಮಕ್ಕಳು ಕೂಡ ತೀರಿಹೋಗಿದ್ದರು ಎಂದು ವರದಿಯಾಗಿದೆ.

  • ವೇದಿಕೆಯಲ್ಲಿ ನಿದ್ದೆಗೆ ಜಾರಿದ ಸಚಿವ ರೇವಣ್ಣ

    ವೇದಿಕೆಯಲ್ಲಿ ನಿದ್ದೆಗೆ ಜಾರಿದ ಸಚಿವ ರೇವಣ್ಣ

    ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಮಾವೇಶದಲ್ಲಿ ತಮ್ಮ ಮಾತನ್ನು ಮುಗಿಸಿ ವೇದಿಕೆಯಲ್ಲಿ ಲೋಕೋಪಯೋಗಿ ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.

    ಹಾಸನದಲ್ಲಿ ಜೆಡಿಎಸ್ ಸಮಾವೇಶ ನಡೆಯುತ್ತಿದೆ. ಈ ವೇಳೆ ಸಚಿವ ರೇವಣ್ಣ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಭಾಷಣವನ್ನು ಶುರುಮಾಡಿದ್ದಾರೆ. ಆದರೆ ತಂದೆಯ ಭಾಷಣದ ವೇಳೆಯು ಸಚಿವ ರೇವಣ್ಣ ನಿದ್ದೆಗೆ ಜಾರಿದ್ದಾರೆ.

    ಕಾಂಗ್ರೆಸ್ ಪಕ್ಷದ ಮಧ್ಯೆ ಸಿಕ್ಕಾಕಿಕೊಂಡ ಕರ್ನಾಟಕ ಸಿಎಂ ಕ್ಲರ್ಕ್ ನಂತಾಗಿದ್ದಾರೆಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಎಚ್‍ಡಿಡಿ, ಮೋದಿ ಬಗ್ಗೆ ಬೆಳಗ್ಗೆಯಿಂದ ಸಂಜೆಯವರೆಗೂ ತಮಾಷೆ ಮಾಡಬೇಡಿ. ಅದೇನು ದೊಡ್ಡ ವಿಷಯವಲ್ಲ ಬಿಟ್ಟಾಕಿ ಎಂದು ಹೇಳಿ ವ್ಯಂಗ್ಯ ಮಾಡಿದ್ದಾರೆ.

    56 ವರ್ಷ ಈ ಜಿಲ್ಲೆಯಲ್ಲಿ ನನ್ನನ್ನ ರಾಜಕೀಯವಾಗಿ ಬೆಳೆಸಿದ್ದೀರಿ. ನನಗೆ ಯಾರೂ ಶತ್ರುಗಳಿಲ್ಲ, ನಾನು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ನಾನು ಯಾರ ಮನಸನ್ನೂ ನೋಯಿಸಿಲ್ಲ. ಅದೇ ರೀತಿ ಪಕ್ಷ ನನ್ನ ಮನೆಯ ಆಸ್ತಿಯಲ್ಲ. ಇದು ಎಲ್ಲರಿಗೂ ಸೇರಿದ ಪಕ್ಷವಾಗಿದೆ. ಕುಮಾರಸ್ವಾಮಿ 38 ಜನರನ್ನ ಕಟ್ಟಿಕೊಂಡು ಸಿಎಂ ಆಗಿದ್ದು, ಅವರ ನೋವೇನು ಎಂದು ನನಗೆ ಗೊತ್ತಿದೆ. ಕಾಂಗ್ರೆಸ್ಸಿನ 78 ಜನರನ್ನ ಕಟ್ಟಿಕೊಂಡು ಸರ್ಕಾರ ನಡೆಸಬೇಕು. ಮೈತ್ರಿ ಸರ್ಕಾರದಲ್ಲಿ ಪಕ್ಷವೂ ಉಳಿಯಬೇಕು ಎಂದು ದೇವೇಗೌಡರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೋದ ಹೋದಲ್ಲೆಲ್ಲಾ ನಿದ್ರೆ ಹೋಗ್ತಾರೆ, ಹೀಗೊಂದು ವಿಚಿತ್ರ ಊರಿನ ರಿಯಲ್ ಕಥೆ!

    ಹೋದ ಹೋದಲ್ಲೆಲ್ಲಾ ನಿದ್ರೆ ಹೋಗ್ತಾರೆ, ಹೀಗೊಂದು ವಿಚಿತ್ರ ಊರಿನ ರಿಯಲ್ ಕಥೆ!

    ಇದು ಕಜಕಿಸ್ತಾನದ ಸುಂದರವಾದ ಪ್ರದೇಶ ಕಲಾಚಿ. ತನ್ನಲ್ಲಿರೋ ನೈಸರ್ಗಿಕ ಸಂಪತ್ತಿನಿಂದ ಹಾಗೂ ಪ್ರಾಕೃತಿಕ ಸೌಂದರ್ಯದಿಂದಾಗಿ ಕಲಾಚಿ ಪ್ರಸಿದ್ಧಿಯನ್ನ ಹೊಂದಿದೆ. ಇಲ್ಲಿ ನೆಲೆಸಿರೋ ಜನ ಕೂಡಾ ಅಷ್ಟೇ ನೆಮ್ಮದಿಯಿಂದ ಜೀವನ ಕಂಡುಕೊಂಡಿದ್ದಾರೆ. ಇಲ್ಲಿಯೇ ಹುಟ್ಟಿ ಬೆಳೆದು ತಮ್ಮ ಹಳ್ಳಿ ತಮ್ಮ ಜನ ಅಂತ ದಿನಗಳನ್ನು ದೂಡ್ತಿದ್ದವರಿಗೆ ಈಗ ಒಂದು ವಿಚಿತ್ರ ಸಮಸ್ಯೆ ಕಾಡೋಕೆ ಶುರುವಾಗಿದೆ. ಅದು ನಿದ್ದೆ.

    ನಾವು ನೀವೆಲ್ಲಾ ಬೆಳಗ್ಗೆಯಿಂದ ಸಂಜೆತನಕ ದುಡಿದು ಒಮ್ಮೆ ಮನೆ ಸೇರಿ ನೆಮ್ಮದಿಯಾಗಿ ನಿದ್ರಾದೇವಿಯ ಮಡಿಲು ಸೇರೋ ತವಕದಲ್ಲಿರ್ತೀವಿ. ಆದ್ರೆ, ಕಜಕಿಸ್ತಾನದ ಕಲಾಚಿ ಗ್ರಾಮದವ್ರಿಗೆ ನಿದ್ರಾದೇವಿಯೇ ಶಾಪವಾಗಿ ಪರಿಣಮಿಸಿದ್ದಾಳೆ. ಇವರಿಗೆ ನಿದ್ದೆ ಅಂದ್ರೆ ಬೆಚ್ಚಿಬೀಳೋ ಪರಿಸ್ಥಿತಿ ಉಂಟಾಗಿದ್ಯಂತೆ. ಕೇಳೋಕೆ ವಿಚಿತ್ರ ಅಂತಾ ಅನ್ಸಿದ್ರೂ ಇದು ಖಂಡಿತಾ ನಿಜ.

    ಕಲಾಚಿ ಅನ್ನೋ ಈ ಸುಂದರ ಹಳ್ಳಿಯ ಜನರಿಗೆ ನಿದ್ದೆಯ ರೋಗ ಇನ್ನಿಲ್ಲದಂತೆ ಕಾಡ್ತಾ ಇದೆ. ಕಳೆದ ನಾಲ್ಕೈದು ವರ್ಷಗಳಿಂದ ಇಂತಹಾ ತೊಂದ್ರೆ ಕಾಣಿಸ್ಕೊಳ್ಳೋದಕ್ಕೆ ಶುರುವಾಗಿದೆ. ಇಲ್ಲಿ ನಿದ್ರೆಗೆ ಹೊತ್ತು ಗೊತ್ತಿಲ್ಲ. ಯಾವ್ ಟೈಮಲ್ಲಿ, ಏನೇ ಕೆಲ್ಸ ಮಾಡ್ತಿದ್ರೂ ಸಡನ್ ಆಗಿ ತೂಕಡಿಸೋದಕ್ಕೆ ಶುರುವಾಗುತ್ತೆ. ನೀವು ಒಂದು ಪಕ್ಷ ಕುಂಭಕರ್ಣನನ್ನ ಬೇಕಾದ್ರೂ ಎಬ್ಬಿಸ್ಬೋದೇನೊ. ಆದ್ರೆ, ಇಲ್ಲಿ ಒಮ್ಮೆ ಮಲಗಿದೋರು ಅವ್ರಾಗೇ ಏಳೋವರೆಗೂ ಎಬ್ಬಿಸೋದಕ್ಕೆ ಸಾಧ್ಯಾನೇ ಇಲ್ಲ. ಇಲ್ಲಿ ಕೆಲವರ ನಿದ್ದೆಯಂತೂ ಕೆಲವು ಗಂಟೆಗಳಿಂದ ಹಿಡಿದು ತಿಂಗಳವರೆಗೂ ನಡೆಯುತ್ತೆ.

    ಅಂದ್ಹಾಗೆ, ಈ ಕಾಯಿಲೆ ಆರಂಭವಾಗಿರೋದು ಸುಮಾರು 2010ರ ಏಪ್ರಿಲ್ ತಿಂಗಳಲ್ಲಿ. ಮೊದ ಮೊದಲು ಇದನ್ನ ಹಗುರವಾಗಿ ಪರಿಗಣಿಸಿದ ಜನಕ್ಕೆ ಬರ್ತಾ ಬರ್ತಾ ಇದ್ರ ತೀವ್ರತೆ ಅರ್ಥವಾಗ್ತಾಹೋಯ್ತು. ಕೂತಲ್ಲಿ, ನಿಂತಲ್ಲಿ, ಯಾವುದೋ ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋದಲ್ಲಿ, ಸ್ಕೂಲಲ್ಲಿ, ದೇವಸ್ಥಾನದಲ್ಲಿ ಹೀಗೆ ಎಲ್ಲೆಂದ್ರಲ್ಲಿ ಧಡಾರ್ ಅಂತಾ ನಿದ್ರಾ ದೇವಿ ಅಟ್ಯಾಕ್ ಮಾಡಿಬಿಡ್ತಾ ಇದ್ಲು. ಸರಿ ಸುಮಾರು 800 ಜನ ಇರೋ ಈ ಗ್ರಾಮದಲ್ಲಿ 15% ಜನ ಈ ರೋಗಕ್ಕೆ ತುತ್ತಾಗಿರೋದು ನಿಜಕ್ಕೂ ಭಯಹುಟ್ಟಿಸಿಬಿಟ್ಟಿತ್ತು.

    ನಿದ್ದೆ ಬರ್ದೇ ಇದ್ರೆ, ಡಾಕ್ಟರ್ ಬಳಿ ಹೋಗೋದನ್ನ ನೋಡಿರ್ತೀವಿ. ಆದ್ರೆ, ಇಲ್ಲಿನ ಜನ ಮಾತ್ರ ತಮಗೆ ನಿದ್ದೆ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ವೈದ್ಯರ ಬಳಿ ಧಾವಿಸೋದಕ್ಕೆ ಶುರು ಮಾಡಿಬಿಟ್ಟಿದ್ರು. ಡಾಕ್ಟರ್ ಕೂಡಾ ಕಾರಣ ಗೊತ್ತಾಗದೆ ಕೈಚೆಲ್ಲಿದಾಗ, ವಿಜ್ಞಾನಿಗಳ ಮೊರೆ ಹೋದ್ರು ಇಲ್ಲಿನ ಜನ. ರಹಸ್ಯವನ್ನು ಹೇಗಾದ್ರೂ ಬೇಧಿಸ್ಲೇಬೇಕು ಅಂತಾ ಡಿಸೈಡ್ ಮಾಡಿದ ವಿಜ್ಞಾನಿಗಳ ತಂಡವೊಂದು ಈ ಕಾಯಿಲೆ ಯಾಕೆ ಹರಡುತ್ತೆ ಅಂತಾ ಕಾರಣ ಹುಡುಕ್ತಾ ಸಾಗಿದ್ರು. ಈ ನಿದ್ರೆಯ ಜಾಡು ಹಿಡಿದವರಿಗೆ ಇಲ್ಲೊಂದು ಮಹತ್ವದ ಸುಳಿವು ಸಿಕ್ಕಿತ್ತು. ಈ ರೋಗಕ್ಕೆ ತುತ್ತಾದವ್ರ ಮೆದುಳಿನಲ್ಲಿ ದ್ರವ ರೂಪದ ಪದಾರ್ಥ ಹೆಚ್ಚಾಗ್ತಾ ಹೋಗ್ತಿತ್ತು. ಆದ್ರೆ, ದ್ರವ ರೂಪದ ಪದಾರ್ಥ ಹೆಚ್ಚಾಗ್ತಿರೋದ್ಯಾಕೆ ಅಂತಾ ನೋಡಿದಾಗ ಅಂತಿಮವಾಗಿ ಸಿಕ್ಕ ಕಾರಣವೇ ಕಲುಷಿತ ನೀರು.

    ಕಜಕಿಸ್ಥಾನದ ಕಲಾಚಿ ಅನ್ನೋ ಈ ಗ್ರಾಮದ ಬಳಿ ಹಿಂದೆ ಒಂದು ಯುರೇನಿಯಂ ಗಣಿ ಇತ್ತು. ಆದ್ರೀಗ ಆ ಗಣಿ ಬಂದ್ ಆಗಿದ್ರೂ, ಅದ್ರಿಂದಾಗಿ ವಿಷಕಾರಿ ರೇಡಿಯೇಷನ್ ಉತ್ಪತ್ತಿಯಾಗುತ್ತೆ. ಇದೇ ರೇಡಿಯೇಶನ್ ನಿಂದಾಗಿ ಜನರಿಗೆ ಒಂದು ರೀತಿಯ ಮಂಪರು ಆವರಿಸುತ್ತಿದೆ ಅನ್ನೋದಾಗಿ ವಿಜ್ಞಾನಿಗಳು ಹೇಳ್ತಾರೆ. ಆದ್ರೆ, ಕಾರಣ ಇಂದಿಗೂ ಅಸ್ಪಷ್ಟವಾಗೇ ಉಳಿದಿದೆ. ಇಂದಿಗೂ ಜನ ಇದೇ ಮಂಪರಿನಲ್ಲಿ ದಿನ ದೂಡ್ತಿದ್ದಾರೆ.

    ಕ್ಷಮಾ ಭಾರದ್ವಾಜ್, ಉಜಿರೆ

  • ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ರೈಲ್ವೇ ಪ್ರಯಾಣಿಕರು ನಿದ್ದೆ ಮಾಡ್ಬೇಕು!

    ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ರೈಲ್ವೇ ಪ್ರಯಾಣಿಕರು ನಿದ್ದೆ ಮಾಡ್ಬೇಕು!

    ನವದೆಹಲಿ: ಭಾರತೀಯ ರೈಲ್ವೇ ಪ್ರಯಾಣಿಕರ ನಿದ್ದೆಯ ಅವಧಿಯಲ್ಲಿ 1 ಗಂಟೆ ಕಡಿತಗೊಳಿಸಿದ್ದು, ಇನ್ನು ಮುಂದೆ ರಾತ್ರಿ 10 ರಿಂದ  ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಮಾಡಬೇಕು.

    ಹೌದು. ಕೆಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯಾಣಿಕರು 8 ಗಂಟೆ ಮಾತ್ರ ನಿದ್ರಿಸಬೇಕು ಎಂದು ಭಾರತೀಯ ರೈಲ್ವೇ ಅಧಿಕೃತವಾಗಿ ಸುತ್ತೋಲೆ ಹೊರಡಿಸಿದೆ.

    ಈ ಹಿಂದೆ ರಾತ್ರಿ 9 ರಿಂದ 6 ಗಂಟೆಯವರೆಗೆ ರೈಲಿನಲ್ಲಿ ನಿದ್ರೆ ಮಾಡಬಹುದಾಗಿತ್ತು. ಆದರೆ ಮಧ್ಯದ ಸೀಟ್ ನವರು ನಿದ್ದೆ ಮಾಡಿದ್ದರೆ ಕೆಳಗಿನ ಸೀಟ್ ನವರಿಗೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಈ ವಿಚಾರದ ಬಗ್ಗೆ ಸಾಕಷ್ಟು ದೂರುಗಳ ಬಂದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

    ಈ ಸುತ್ತೋಲೆಯಲ್ಲಿ ಕೆಲವು ಪ್ರಯಾಣಿಕರಿಗೆ ವಿನಾಯಿತಿಯನ್ನು ನೀಡಲಾಗಿದೆ. ಅಂಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ಗರ್ಭಿಣಿ ಪ್ರಯಾಣಿಕರಿಗೆ ಹೆಚ್ಚಿನ ಸಮಯ ನಿದ್ರಿಸುವ ಅವಕಾಶ ನೀಡಲಾಗಿದೆ.

    ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಸಮಯ ನಿದ್ದೆ ಮಾಡುತ್ತಿದ್ದರು. ಟಿಕೆಟ್ ಇಲ್ಲದೇ ಇದ್ದಲ್ಲಿ ಟಿಟಿಇ ಬಂದಾಗ ಪ್ರುಯಾಣಿಕರು ಕಳ್ಳ ನಿದ್ದೆಗೆ ಜಾರುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಕೆಲವೊಮ್ಮೆ ಪ್ರಯಾಣಿಕರು ಕೆಳಗಿನ ಬರ್ತ್ ಮೇಲೆ ಕುಳಿತು ಪ್ರಯಾಣಿಸುತ್ತಿರುತ್ತಾರೆ. ಅವರ ಜೊತೆ ಬಂದಂತಹ ಸಹ ಪ್ರಯಾಣಿಕರು ಮೇಲಿನ ಮತ್ತು ಮಧ್ಯದ ಬರ್ತ್‍ಗಳ ಮೇಲೆ ಮಲಗಿರುತ್ತಾರೆ. ತಮ್ಮ ನಿಲ್ದಾಣ ಬಂದಾಗ ಹಲವು ಬಾರಿ ಕೆಳಗೆ ಕುಳಿತಿದ್ದ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ನಡೆಯುತ್ತಿರುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಇವುಗಳನ್ನು ನಿವಾರಿಸಲು ರೈಲಿನ ನಿದ್ದೆಯ ಅವಧಿಯನ್ನು 1 ಗಂಟೆ ಕಡಿತಗೊಳಿಸಲಾಗಿದೆ ಎಂದು ಸಚಿವಾಯಲದ ವಕ್ತಾರ ಅನಿಲ್ ಸಕ್ಸೇನಾ ತಿಳಿಸಿದರು.

  • ಕ್ಲಾಸ್‍ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸ್ದ- ಮುಂದೇನಾಯ್ತು ಅನ್ನೋದು ಶಾಕಿಂಗ್

    ಕ್ಲಾಸ್‍ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸ್ದ- ಮುಂದೇನಾಯ್ತು ಅನ್ನೋದು ಶಾಕಿಂಗ್

    ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ನಿದ್ದೆ ಮಾಡ್ತಿದ್ದ ಶಿಕ್ಷಕರ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ್ದ. ಆದ್ರೆ ಆತ ಮಾಡಿದ ಈ ಕೆಲಸಕ್ಕೆ ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಇಲ್ಲಿನ ಮಹಬೂಬ್‍ನಗರದಲ್ಲಿ ಶನಿವಾರದಂದು ಈ ಘಟನೆ ನಡೆದಿದೆ. ಬಾಲಕ ತನ್ನ ತರಗತಿಯಲ್ಲಿ ನಿದ್ರಿಸುತ್ತಿದ್ದ ಗಣಿತ ಶಿಕ್ಷಕರ ಫೋಟೋ ಕ್ಲಿಕ್ಕಿಸಿ ಅದನ್ನ ವಾಟ್ಸಪ್‍ನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಕಳಿಸಿದ್ದ ಎನ್ನಲಾಗಿದೆ. ಬಳಿಕ ಆ ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕೆರಳಿದ ಶಾಲೆಯ ಇತರೆ ಶಿಕ್ಷಕರು ಶನಿವಾರದಂದು ಪೊಲೀಸರನ್ನ ಸಂಪರ್ಕಿಸಿದ್ದರು.

    ನಾನು ಸ್ನೇಹಿತರ ಜೊತೆ ಕುಳಿತು ತಂಪು ಪಾನೀಯ ಕುಡಿಯುತ್ತಿದ್ದೆ. ಆಗ ನನ್ನನ್ನು ಹಿಡಿದು ಶಾಲೆಯ ಗ್ರೌಂಡ್‍ನಲ್ಲಿರುವ ಕಂಬಕ್ಕೆ ಕಟ್ಟಿ ಥಳಿಸಿದ್ರು. ಇಬ್ಬರು ಪೊಲೀಸರು ಕೋಲಿನಿಂದ ಹೊಡೆಯುತ್ತಿದ್ರೆ ಶಿಕ್ಷಕರು ನಿಂತು ನೋಡ್ತಿದ್ರು ಎಂದು ಬಾಲಕ ಆರೋಪಿಸಿದ್ದಾನೆ. ಬಾಲಕನ ಮೈಮೇಲೆ ಗಾಯಗಳಾಗಿದ್ದು, ತನ್ನ ಸ್ನೇಹಹಿತರು ಹೇಗೋ ಅಲ್ಲಿಂದ ಓಡಿ ಹೋದ್ರು ಎಂದು ಹೇಳಿದ್ದಾನೆ.

    ಆದ್ರೆ ಈ ಆರೋಪವನ್ನ ತಳ್ಳಿಹಾಕಿರೋ ಪೊಲೀಸರು ಆತ ಶಾಲೆಯ ಆವರಣದಲ್ಲಿ ಮದ್ಯಪಾನ ಮಾಡುತ್ತಾ ಸಿಕ್ಕಿಬಿದ್ದಿದ್ದ ಎಂದಿದ್ದಾರೆ.