Tag: sleep

  • ಮಂಟಪದಲ್ಲಿಯೇ ನಿದ್ದೆಗೆ ಜಾರಿದ ವಧು- Viral Video

    ಮಂಟಪದಲ್ಲಿಯೇ ನಿದ್ದೆಗೆ ಜಾರಿದ ವಧು- Viral Video

    ಮುಂಬೈ: ಬೆಳಗ್ಗಿನವರೆಗೂ ಮದುವೆ ಸಂಪ್ರದಾಯ ನಡೆದಿರುವ ಹಿನ್ನೆಲೆಯಲ್ಲಿ ಮಂಟಪದಲ್ಲೇ ವಧು ನಿದ್ದೆಗೆ ಜಾರಿದ ವೀಡಿಯೋವೊಂದು ವೈರಲ್ ಆಗಿದೆ.

    Battered Suitcase ಹೆಸರಿನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಧು ನಿದ್ರಿಸುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇಲ್ಲಿ ನೋಡಿ ವಧು ನಿದ್ರಿಸುತ್ತಿದ್ದಾಳೆ. ಈಗಾಗಲೇ ಸಮಯ ಬೆಳಗ್ಗೆ 6.30 ಆಗಿದೆ ಆದರೂ ಮದುವೆಯ ಸಂಪ್ರದಾಯ ಇನ್ನು ಮುಗಿದಿಲ್ಲ ಎಂದು ಬರೆದು ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ತನ್ನ ಮದುವೆಯ ಮಂಟಪದಲ್ಲೇ ವಧು ನಿದ್ದೆಯಿಂದ ತೂಕಾಡಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:  ಗೋ ಹತ್ಯೆ ನಿಷೇಧ ಕಾಯ್ದೆ ನಂತ್ರ ಸಾವಿರಾರು ಗೋವುಗಳನ್ನ ರಕ್ಷಣೆ ಮಾಡಲಾಗಿದೆ: ಪ್ರಭು ಚೌವ್ಹಾಣ್

    ಈ ವಿಡಿಯೋದಲ್ಲಿ ವಧು ಸುಂದರವಾದ ಕೆಂಪು ಹಾಗೂ ಕೇಸರಿ ಮಿಶ್ರಿತ ಬಣ್ಣದ ಲೆಹೆಂಗಾ ಧರಿಸಿ ಸೋಫಾದಲ್ಲಿ ಕುಳಿತಿದ್ದಾರೆ. ಇವರ ಪಕ್ಕದಲ್ಲೇ ವರನ್ನು ಇದ್ದಾನೆ. ಈ ವೇಳೆ ವಧು ಕುಳಿತಲ್ಲಿಂದಲೇ ಬರುವ ನಿದ್ದೆಯನ್ನು ತಡೆದುಕೊಳ್ಳಲಾಗದೇ ತೂಕಾಡಿಸುತ್ತಿದ್ದಾಳೆ. ನಿದ್ದೆಗೆ ಜಾರಿದ ಈ ವೇಳೆ ಆಕೆಯ ಸ್ನೇಹಿತರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಒಳಚರಂಡಿಯಲ್ಲಿ ಅನಿಲ ಸ್ಫೋಟ 14 ಮಂದಿ ಸಾವು

  • ಸುಖದ ನಿದ್ದೆಯಲ್ಲಿದ್ದ ನನಗೆ ಈಗ ಪೊಲೀಸರು ನಿದ್ದೆ ಮಾಡಲು ಬಿಡುತ್ತಿಲ್ಲ – ಅರಗ ಜ್ಞಾನೇಂದ್ರ

    ಸುಖದ ನಿದ್ದೆಯಲ್ಲಿದ್ದ ನನಗೆ ಈಗ ಪೊಲೀಸರು ನಿದ್ದೆ ಮಾಡಲು ಬಿಡುತ್ತಿಲ್ಲ – ಅರಗ ಜ್ಞಾನೇಂದ್ರ

    – ಪೊಲೀಸ್ ಪಡೆ ನನ್ನ ಸುತ್ತ ಕೋಟೆಯಂತೆ ಸುತ್ತುವರಿದಿದೆ
    – ನಿತ್ಯದ ಜೀವನ ಬದಲಾದ ಬಗ್ಗೆ ಅರಗ ಮಾತು

    ಶಿವಮೊಗ್ಗ: “ಕೆಲ ದಿನಗಳ ಹಿಂದೆ ಸುಖದ ನಿದ್ದೆಯಲ್ಲಿ ಇದ್ದೆ. ಈಗ ಸರಿಯಾಗಿ ನಿದ್ದೆ ಆಗುತ್ತಿಲ್ಲ. ಸರಿಯಾಗಿ ನಿದ್ದೆ ಮಾಡಲು ಪೊಲೀಸರು ಬಿಡುತ್ತಿಲ್ಲ. ಇದರಿಂದ ಕಿರಿಕಿರಿ ಆಗುತ್ತಿದೆ” – ಇದು ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮಾತುಗಳು.

    ಶಿವಮೊಗ್ಗದಲ್ಲಿ ಅಡಿಕೆ ಬೆಳೆಗಾರರ ಸಹಕಾರ ಸಂಘಗಳ ಮಹಾಮಂಡಳ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಗೃಹ ಸಚಿವರು ಈ ರೀತಿ ಮಾತನಾಡಲು ಕಾರಣವಿದೆ. ಈ ಹುದ್ದೆಯನ್ನು ಅಲಂಕರಿಸಿದ ಬಳಿಕ ತನ್ನ ನಿತ್ಯದ ಜೀವನ ಹೇಗೆ ಬದಲಾಗಿದೆ ಎಂಬುದನ್ನು ವಿವರಿಸಿದ್ದಾರೆ.

    ಅರಗ ಹೇಳಿದ್ದೇನು?
    ನಾನು ಕೃಷಿ, ತೋಟಗಾರಿಕೆ ಸಚಿವ ಸ್ಥಾನ ಸಿಗಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ, ನಮ್ಮ ಮುಖಂಡರು ಭರವಸೆ ಇಟ್ಟು ಗೃಹ ಖಾತೆಯನ್ನು ನೀಡಿದ್ದಾರೆ.

    ಗೃಹ ಖಾತೆ ವಹಿಸಿಕೊಂಡ ದಿನದಿಂದ ಸರಿಯಾಗಿ ನಿದ್ರೆ ಮಾಡಲು ಸಹ ಆಗುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಮಧ್ಯರಾತ್ರಿ, ಬೆಳಗಿನ ಜಾವ ಸಹ ಕರೆ ಮಾಡಿ ಮಾಹಿತಿ ಕೊಡುತ್ತಿರುತ್ತಾರೆ. ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ವಿಶ್ವಾಸವಿದೆ. ದೊಡ್ಡಸ್ತಿಕೆಗಾಗಿ ನಾನು ಶಾಸಕ ಅಥವಾ ಸಚಿವನಾಗಲಿಲ್ಲ. ಸಚಿವ ಸ್ಥಾನವನ್ನು ಎಂಜಾಯ್ ಮಾಡಲೂ ಆಗುವುದಿಲ್ಲ.  ಇದನ್ನೂ ಓದಿ: ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ: ಅರಗ ಜ್ಞಾನೇಂದ್ರ

    ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ‘ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನೂ ಅಲ್ಲ’ ಎನ್ನುತ್ತಿರುತ್ತಾರೆ. ನಾನು ಯಾವುದೇ ಸಭೆ ಸಮಾರಂಭಗಳಿಗೆ ನಿಗದಿತ ಸಮಯಕ್ಕೆ ಮುನ್ನವೇ ಹೋಗುವ ವ್ಯಕ್ತಿ. ಆದರೆ ಈಗ ನಿಗದಿತ ಸಮಯಕ್ಕೆ ತಲುಪಲು ಆಗುತ್ತಿಲ್ಲ. ಏಕೆಂದರೆ ಇದ್ದಕ್ಕಿದ್ದಂತೆ ನಾನು ಬಹಳ ದೊಡ್ಡವನಾಗಿದ್ದೇನೆ. ನಾನೇನು ಇಷ್ಟಪಟ್ಟು ದೊಡ್ಡವನಾಗಿದ್ದಲ್ಲ.

    ಹಿಂದೆ ನಾನು ನಿಗಮ ಮಂಡಳಿ ಅಧ್ಯಕ್ಷನಾಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿದ್ದರೂ ಇಂತಹ ಭದ್ರತೆ ಇರಲಿಲ್ಲ . ಆದರೆ ಈಗ ಗೃಹ ಸಚಿವನಾಗುತ್ತಿದ್ದಂತೆ ಪೊಲೀಸ್ ಪಡೆ ನನ್ನ ಸುತ್ತ ಕೋಟೆಯಂತೆ ಸುತ್ತುವರಿದಿದೆ. ನನ್ನ ಸುತ್ತ ಅಷ್ಟೆ ಅಲ್ಲದೇ ಮನೆ ತುಂಬಾ ಪೊಲೀಸರನ್ನು ಹಾಕಿದ್ದಾರೆ. ನಾನು ಬೇಡ ಎಂದರೂ ಕೇಳುತ್ತಿಲ್ಲ. ಮನೆ ಬಾಗಿಲಿಗೆ ಮೆಟಲ್ ಡಿಟೆಕ್ಟರ್ ಹಾಕಿದ್ದಾರೆ. ಅಗ್ನಿ ಶಾಮಕದಳ ವಾಹನ ಬಂದು ನಿಂತಿದೆ. ಇದನ್ನೂ ಓದಿ: ಗೃಹ ಸಚಿವರಿಗೆ ಶ್ರೀರಾಮಾಯಣ ದರ್ಶನಂ ಪುಸ್ತಕ ನೀಡಿ ಗೌರವ ಸಲ್ಲಿಸಿದ ಪೊಲೀಸರು

    ಯಾರಾದರೂ ದಾಳಿ ಮಾಡಿ ಗಾಯಗೊಂಡರೆ ಆಸ್ಪತ್ರೆಗೆ ಸಾಗಿಸಲು ಎಂಬಂತೆ ನನ್ನ ಕಾರಿನ ಹಿಂದೆ ಯಾವಾಗಲೂ ಅಂಬುಲೆನ್ಸ್ ಇರುತ್ತದೆ. ಇದೆಲ್ಲ ಬೇಡ ಅಂದ್ರೂ ಕೇಳದೇ ಪ್ರೋಟೋಕಾಲ್ ನೆಪದಲ್ಲಿ ಇವೆಲ್ಲವನ್ನು ಮಾಡುತ್ತಿದ್ದಾರೆ ಎಂದು ಅರಗ ಜ್ಞಾನೇಂದ್ರ ತಮಗೆ ಈಗ ಆಗುತ್ತಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.

  • ರಾತ್ರಿ ಹೊತ್ತು ದಿವ್ಯಾ, ಅರವಿಂದ್ ಪಿಸುಗುಸು – ನಿದ್ರೆ ಇಲ್ಲದೇ ಮನೆಮಂದಿ ಒದ್ದಾಟ

    ರಾತ್ರಿ ಹೊತ್ತು ದಿವ್ಯಾ, ಅರವಿಂದ್ ಪಿಸುಗುಸು – ನಿದ್ರೆ ಇಲ್ಲದೇ ಮನೆಮಂದಿ ಒದ್ದಾಟ

    ದೊಡ್ಮನೆಯ ಜೋಡಿ ಹಕ್ಕಿ ಅಂದರೆ ಅದು ದಿವ್ಯಾ ಹಾಗೂ ಅರವಿಂದ್. ಬಿಗ್‍ಬಾಸ್ ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಹಗಲಲ್ಲಿ ಅಷ್ಟೇ ಅಲ್ಲದೇ ರಾತ್ರಿ ಕೂಡ ಮಾತನಾಡುತ್ತಿರುತ್ತಾರೆ ಎಂದು ಮನೆಯ ಮಂದಿ ಆರೋಪಿಸಿದ್ದಾರೆ. ಜೊತೆಗೆ ಇವರಿಬ್ಬರ ಪಿಸು ಮಾತಿನಿಂದ ರಾತ್ರಿ ಹೊತ್ತು ನಿದ್ರೆ ಮಾಡಲು ಆಗುತ್ತಿಲ್ಲ ಎಂದು ಸ್ಪರ್ಧಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಸದ್ಯ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ  ಕೊನೆಯ ಫನ್ ಡೇ ವಿತ್ ಕಿಚ್ಚ ಎಪಿಸೋಡ್‍ನಲ್ಲಿ ಸುದೀಪ್‍ರವರು, ರಾತ್ರಿ ಹೊತ್ತು ಬೆಡ್ ರೂಂನಲ್ಲಿ ದಿವ್ಯಾ ಯು ಆಡುವ ಪಿಸು ಮಾತುಗಳು ಎಷ್ಟು ಬೇರೆಯವರಿಗೆ ತೊಂದರೆ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ವೈಷ್ಣವಿ ನನಗೆ ಯಾವತ್ತು ತೊಂದರೆಯಾಗಿಲ್ಲ. ಆದರೆ ಶುಭಾಗೆ ಇವರ ಮಾತಿನಿಂದ ತುಂಬಾ ತೊಂದರೆಯಾಗಿದೆ. ಆಗ ಕೋಪದಿಂದ ಬೈದು ಬಿಡುತ್ತಾರೆ. ಎಷ್ಟೇ ಬಾರಿ ಮಾತನಾಡಬೇಡಿ ಅಂದರೂ, ಅವರು ಚರ್ಚೆಯನ್ನು ಮುಗಿಸಿಯೇ ಮಲಗುವುದು. ನನ್ನ ಬಳಿ ಅರವಿಂದ್‍ಗೆ ಗುಡ್ ನೈಟ್ ಹೇಳಿ ಬರುತ್ತೇನೆ ಎಂದು ಅರ್ಧಗಂಟೆ ನಂತರ ಬರುತ್ತಾರೆ ಎನ್ನುತ್ತಾರೆ.

    ನಂತರ ಪ್ರಶಾಂತ್ ರಾತ್ರಿ 10 ನಿಮಿಷ ಮಾತನಾಡಿ ಹೋಗು ಎಂದು ಹೇಳುತ್ತೇನೆ. ಆಗ ಸರಿ ಹತ್ತು ನಿಮಿಷ ಮಾತನಾಡಿ ಹೋಗುತ್ತೇನೆ ಎಂದು ಮಾತನಾಡುತ್ತಲೇ ಇರುತ್ತಾರೆ. ನನಗೆ ಅವರು ಗುಸುಗುಸು ಮಾತುಗಳು, ಇಬ್ಬರು ಏನು ಜೋಕ್ ಮಾಡುತ್ತಾರೆ ಗೊತ್ತಿಲ್ಲ ಆದರೆ ಇಬ್ಬರು ಸಿಕ್ಕಾಪಟ್ಟೆ ಜೋರಾಗಿ ನಗುವುದು ಇದೆಲ್ಲಾ ಕೇಳಿ ಅಭ್ಯಾಸ ಆಗಿ ಹೋಗಿದೆ. 5 ನಿಮಿಷ ಎಂದು ಹೇಳಿ 20 ನಿಮಿಷ ಮಾತನಾಡುತ್ತಲೇ ಇರುತ್ತಾರೆ. ಕೊನೆಗೆ ಹೋಗಬೇಕಾದರೆ ಮಕ್ಕಳಂತೆ ಎರಡು ಕೆನ್ನೆಯನ್ನು ಮುದ್ದಾಗಿ ಮುಟ್ಟುತ್ತಾ ನಂತರ ಹೋಗಿ ಮಲಗುತ್ತಾರೆ ಎಂದಿದ್ದಾರೆ.

    ಆಗ ಅರವಿಂದ್ ದಿವ್ಯಾ ಬಂದಿದ ತಕ್ಷಣವೇ ನಾನು ಹೋಗಿ ಮಲಗಿಕೋ ಎಂದು ಹೇಳುತ್ತೇನೆ. ಎಷ್ಟು ಬಾರಿ ಹೇಳಿದರೂ ಅದು ಹೇಳುವುದನ್ನು ಕೇಳುವ ಜಾತಿ ಅಲ್ಲ. ಕೈ ಮುಗಿದು ಹೋಗಿ ಮಲಗಿಕೋ ಅಂತ ಹೆಳುತ್ತೇನೆ. ಆದರೂ ಹೋಗಿ ಮಲಗುವುದಿಲ್ಲ. 2 ನಿಮಿಷ, 3 ನಿಮಿಷ, 5 ನಿಮಿಷ ಎಂದು ಮಾತನಾಡುತ್ತಿರುತ್ತಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಇವಾಗ್ಲೇ ಮದ್ವೆಗೆ ರೆಡಿ ಅಗಿದ್ದೀರಲ್ರೀ..

  • ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

    ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ರಾತ್ರಿ ಹೊತ್ತು ಬಿಟ್ಟರೆ ಹಗಲಿನಲ್ಲಿ ಸ್ಪರ್ಧಿಗಳು ನಿದ್ರೆ ಮಾಡುವಂತಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೂ ಮನಸ್ಸಿನಲ್ಲಿ ನಿದ್ದೆ ಮಾಡಬಾರದು ಅಂತ ಅಂದುಕೊಂಡರೂ ಕಣ್ಣುಗಳು ಮಾತು ಕೇಳಬೇಕಲ್ವಾ? ಆಗಾಗ ಕಣ್ಣುಗಳು ನಿದ್ರೆಗೆ ಜಾರಿಯೇ ಬಿಡುತ್ತದೆ. ಇನ್ನೂ ದೊಡ್ಮನೆಯಲ್ಲಿ ಸ್ಪರ್ಧಿಗಳು 5 ನಿಮಿಷ ನಿದ್ರೆಗೆ ಜಾರುವಂತಿಲ್ಲ, ಅಷ್ಟರಲ್ಲಿ ಎದ್ದೇಳು ಮಂಜುನಾಥ ಸಾಂಗ್ ಪ್ಲೇ ಮಾಡಿ ಬಿಗ್‍ಬಾಸ್ ಎದ್ದೇಳುವಂತೆ ಎಚ್ಚರಿಸುತ್ತಾರೆ. ಆದ್ರೆ ಈ ಬಾರಿ ನಿದ್ದೆ ಗುಂಗಲ್ಲಿ ಇದ್ದ ಮಂಜು ಹಾಗೂ ವೈಷ್ಣವಿಗೆ ಬಿಗ್‍ಬಾಸ್ ವಿಭಿನ್ನವಾಗಿ ಟ್ವಿಸ್ಟ್ ನೀಡುವ ಮೂಲಕ ನಿದ್ದೆ ಹೋಗಿಸಿದ್ದಾರೆ.

    ಹೌದು, ನಿದ್ರೆ ಕಣ್ಣಿನಲ್ಲಿದ್ದ ಮಂಜುಗೆ ಬಿಗ್‍ಬಾಸ್ ಕರೆ ಮಾಡಿ, ನಿಮಗೆ ನಿದ್ದೆ ಬರುತ್ತಿದ್ಯಾ? ನಿಮಗೆ ಅಷ್ಟೇನಾ ಅಥವಾ ಇನ್ನೂ ಯಾರಿಗಾದರೂ ನಿದ್ರೆ ಬರುತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ. ಆಗ ಮಂಜು ನನಗೆ ಹಾಗೂ ವೈಷ್ಣವಿ, ಶುಭಾಗೆ ನಿದ್ರೆ ಬರುತ್ತಿದೆ ಎಂದಿದ್ದಾರೆ. ಇದಕ್ಕೆ ಬಿಗ್‍ಬಾಸ್ ನಿಮಗೆ ಹಾಗೂ ವೈಷ್ಣವಿಗೆ ನಿದ್ದೆ ಹೋಗಿಸಲು ಚಟುವಟಿಕೆ ನೀಡಲಾ ಎಂದು ಕೇಳಿದ್ದಾರೆ. ಅದಕ್ಕೆ ಮಂಜು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸ್ಟೋರ್ ರೂಮ್‍ನಲ್ಲಿ ಕೆಲವು ಚಟುವಟಿಕೆ ಸಾಮಾಗ್ರಿ ಹಾಗೂ ವಿವರಗಳನ್ನು ಕಳುಹಿಸಿಕೊಡುವುದಾಗಿ ಬಿಗ್‍ಬಾಸ್ ತಿಳಿಸಿದ್ದಾರೆ.

    ಅದರಂತೆ ಸ್ಟೋರ್ ರೂಮ್‍ಗೆ ಹೋಗಿ ನೋಡಿದ ಮಂಜುಗೆ ಅಕ್ಕಿ ಹಾಗೂ ಜೀರಿಗೆ ಕಂಡಿದೆ. ಅದನ್ನು ಎತ್ತಿಕೊಂಡು ಬಂದ ಮಂಜು ಅಕ್ಕಿ ಹಾಗೂ ಜೀರಿಗೆ ಕೊಟ್ಟು ಬೇರೆ ಮಾಡಿ ಅಂತ ಹೇಳಿದ್ದಿರಲ್ಲ ಬಿಗ್‍ಬಾಸ್ ಎಂದು ಗೋಳಾಡಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲಾ ಎದ್ದು ಬಿದ್ದು ನಗುತ್ತಾ, ಅಕ್ಕಿ ಮತ್ತು ಜೀರಿಗೆಯನ್ನು ಬೇರೆ, ಬೇರೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ನಂತರ ಅಕ್ಕಿ ಹಾಗೂ ಜಿರಿಗೆ ಸೋಸುವುದಕ್ಕೆ ಕುಳಿತ ಮಂಜು ಸುಸ್ತಾಗಿ, ಒಳ್ಳೆ ಶಿಕ್ಷೆ ಕೊಟ್ರಿ ಬಿಗ್‍ಬಾಸ್, ಕತ್ತು ನೋವು ಬರುತ್ತಿದೆ, ಬಿಗ್‍ಬಾಸ್ ಸ್ವಲ್ಪ ಶಿಕ್ಷೆ ಕಡಿಮೆ ಮಾಡಿ ಎಂದು ಮಂಜು ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಬಿಗ್‍ಬಾಸ್ ಅಕ್ಕಿ- ಜಿರಿಗೆಯನ್ನು ಬೇರ್ಪಡಿಸಿರುವುದು ಆಗಿದ್ದರೆ, ಮಂಜು, ವೈಷ್ಣವಿ ನಿದ್ದೆ ಹೋಗಿದ್ದರೆ ಎರಡನ್ನು ಹಿಂದಿರುಗಿಸುವಂತೆ ಸೂಚಿಸಿದ್ದಾರೆ.  ಇದನ್ನೂ ಓದಿ:ಹಾಲು ಕರೆದು, ಒಲೆ ಹಚ್ಚಿ ಖಡಕ್ ರೊಟ್ಟಿ ಮಾಡಿದ ಅದಿತಿ ಪ್ರಭುದೇವ

  • ತಡರಾತ್ರಿ ನಿದ್ರೆ ಕಣ್ಣಿನಲ್ಲಿ ಪಕ್ಕದ ಮನೆಗೆ ನುಗ್ಗಿದ್ರಂತೆ ಮಂಜು!

    ತಡರಾತ್ರಿ ನಿದ್ರೆ ಕಣ್ಣಿನಲ್ಲಿ ಪಕ್ಕದ ಮನೆಗೆ ನುಗ್ಗಿದ್ರಂತೆ ಮಂಜು!

    ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾದಗನಿಂದ ಮನೆಮಂದಿ ಹಲವು ವಿಚಾರಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ. ಸದ್ಯ ನಿನ್ನೆ ಲ್ಯಾಗ್ ಮಂಜು ಇಷ್ಟು ದಿನ ಮುಚ್ಚಿಟ್ಟ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.

    ಲೀವಿಂಗ್ ಏರಿಯಾದಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ವಿಶ್ವನಾಥ್ ಜೊತೆ ಕುಳಿತಿದ್ದ ಮಂಜು ತಮಗೆ ನಿದ್ರೆಗಣ್ಣಿನಲ್ಲಿ ಓಡಾಡುವ ಅಭ್ಯಾಸವಿದೆ ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ನಾನು ಯಾವಾಗಲೂ ಒಂದೇ ರೀತಿ ಮಲಗಿರುವುದಿಲ್ಲ. ಯಾವಾಗಲೂ ಒದ್ದಾಡುತ್ತಲೆ ಇರುತ್ತೇನೆ. ಅಲ್ಲದೆ ನನಗೆ ನಿದ್ರೆ ಕಣ್ಣಿನಲ್ಲಿ ಓಡಾಡುವ ಅಭ್ಯಾಸವಿತ್ತು ಆದರೆ ಈಗ ಬಿಟ್ಟಿದ್ದೇನೆ ಅಷ್ಟೇ ಎಂದು ಹೇಳುತ್ತಾರೆ.

    ಇದನ್ನು ಕೇಳಿ ಅಚ್ಚರಿಗೊಂಡ ದಿವ್ಯಾ ಸುರೇಶ್ ನಿಜಾನಾ ಎಂದು ಪ್ರಶ್ನಿಸಿದಾಗ, ಹೌದು ನಾನು ಚಿಕ್ಕವನಿದ್ದಾಗ ಊರಿನಲ್ಲಿ ನಿದ್ರೆ ಕಣ್ಣಿನಲ್ಲಿ ಹೋಗಿ ಬೇರೆಯವರ ಮನೆಯಲ್ಲಿ ಮಲಗಿದ್ದೇನೆ. ಬಾಗಿಲು ಹೇಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದು ದಿವ್ಯಾ ಸುರೇಶ್ ಕೇಳಿದಾಗ, ನಮ್ಮ ಊರಿನಲ್ಲಿ ಬೇಸಿಗೆ ಕಾಲದಲ್ಲಿ ಬಾಗಿಲು ಹಾಕಿಕೊಂಡು ಯಾರು ಮಲಗುತ್ತಿರಲಿಲ್ಲ. ಹೊರಗಡೆ, ಒಳಗಡೆ, ಅಲ್ಲಿ, ಇಲ್ಲಿ ಮಲಗಿಕೊಳ್ಳುತ್ತಿದ್ದರು ಈ ವೇಳೆ ನಾನು ನಿದ್ರೆ ಕಣ್ಣಿನಲ್ಲಿ ಹೋಗಿ ಮಲಗುತ್ತಿದ್ದೆ ಎಂದು ಹೇಳುತ್ತಾರೆ.

    ಬಳಿಕ ದಿವ್ಯಾ ಸುರೇಶ್ ಹಾಗಾದರೆ ಈಗಲಾದರೂ ಅದು ಸರಿ ಹೋಗಿದ್ಯಾ ಎಂದಾಗ, ಈಗ ಆ ಸಮಸ್ಯೆ ಇಲ್ಲ. ಆದರೆ ಯಾವಾಗಲಾದರೂ ಒಂದು ಸಾರಿ ಹೋದರೂ ಹೋಗಬಹುದೇನೋ ಎಂದು ಮಂಜು ಹಾಸ್ಯ ಮಾಡುತ್ತಾರೆ. ಈ ವೇಳೆ ದಿವ್ಯಾ ಉರುಡುಗ, ವಿಶ್ವನಾಥ್, ದಿವ್ಯಾ ಸುರೇಶ್ ಜೋರಾಗಿ ನಗುತ್ತಾರೆ.

  • ಆ ಭೀಕರ ಕನಸು ಬಿದ್ದರೆ ಬದುಕೋದೇ ಡೌಟು!

    ಆ ಭೀಕರ ಕನಸು ಬಿದ್ದರೆ ಬದುಕೋದೇ ಡೌಟು!

    ಧ್ಯರಾತ್ರಿ ನೀವು ಅಂಗಾತ ಮಲಗಿಕೊಂಡಿರುತ್ತೀರಿ. ಜಗತ್ತಿನ ಯಾವ ಚಿಂತೆಯೂ ಸುಳಿಯದಂತಹ ನಿದಿರೆಯ ಸುಖ ನಿಮ್ಮನ್ನಾವರಿಸಿಕೊಂಡಿರುತ್ತೆ. ಅಂತಹ ಗಾಢ ನಿದ್ದೆಯಲ್ಲಿ ಯಾರೋ ಸೈತಾನ ಎದೆ ಮೇಲೆ ಕೂತು ಬಲವಾಗಿ ಕತ್ತು ಹಿಸುಕಿದಂತಾಗುತ್ತೆ. ಕುತ್ತಿಗೆಯ ನರಗಳು ಮಿಸುಕಲೂ ಬಿಡದಂತೆ ಹಿಡಿದ ಕೈಗಳ ಸ್ಪಷ್ಟ ಅನುಭವವಾಗುತ್ತೆ. ಎದೆ ಮೇಲೆ ಕೂತಂತಹ ಭಾವವನ್ನು ಆ ಭಾರದ ಅನುಭವ ಸ್ಪಷ್ಟೀಕರಿಸುತ್ತೆ. ಮಿಸುಕಲು ಪ್ರಯತ್ನಿಸಿದರೆ ದೇಹ ಸ್ಪಂದಿಸೋದಿಲ್ಲ. ಕಿರುಚಲು ನೋಡಿದರೆ ಧ್ವನಿ ಹೊರಡೋದಿಲ್ಲ.

    ಅಂಥಾದ್ದೊಂದು ಕನಸು ಬಿದ್ದರೆ ಎಂಥಾ ಧೈರ್ಯಶಾಲಿಯೇ ಆದರೂ ಕಿಟಾರನೆ ಕಿರುಚಿ ಎದ್ದು ಕೂತು ಬಿಡುತ್ತಾರೆ. ಇರೋಬರೋ ಹೊದಿಕೆಯನ್ನೆಲ್ಲ ಗಟ್ಟಿಯಾಗಿ ಹೊದ್ದುಕೊಂಡು ಎಲ್ಲ ಒದ್ದೆಯಾಗುವಂತೆ ಬೆವರಾಡಿ ಬಿಡುತ್ತಾರೆ. ಇಂಥಾ ಕನಸು ಬಹುಪಾಲು ಜನರಿಗೆ ಒಂದಲ್ಲ ಒಂದು ಸಲ ಬೀಳುತ್ತೆ. ಅದರ ಅನುಭವ ಅದೆಷ್ಟು ಭೀಕರವಾಗಿರುತ್ತದೆಯೆಂದರೆ, ಕನಸಿನ ಅನುಭವ ಎದೆಯೇ ನಾಟಿದಂತಾಗಿ ಹಾಸಿಗೆಯಲ್ಲಿಯೇ ಅದೆಷ್ಟೋ ಮಂದಿ ಜೀವ ಬಿಟ್ಟಿದ್ದಿದೆ.

    ಕನಸು ಯಾಕೆ ಬೀಳುತ್ತೆ? ನಿದಿರೆಯಲ್ಲಿ ಕದಲೋ ಕನಸಿನ ಸಿನಿಮಾಗಳ ಹಿಂದೆ ಯಾವ ಶಕ್ತಿ ಇದೆ ಅನ್ನೋದಕ್ಕೆ ವಿಜ್ಞಾನ ಲೋಕದಲ್ಲಿ ಒಂದಷ್ಟು ಉತ್ತರಗಳಿವೆ. ಆದರೆ ಈ ಕನಸುಗಳೊಂದಿಗೆ ನಮ್ಮಲ್ಲಿ ಗಾಢವಾದ ಮೌಢ್ಯವೇ ಹೊಸೆದುಕೊಂಡಿದೆ. ಅದಕ್ಕೆ ಪೂರಕವಾದ ಒಂದಷ್ಟು ಸಂಗತಿಗಳು ಇಲ್ಲಿನ ಆಚಾರ ವಿಚಾರಗಳಲ್ಲಿಯೇ ಸೇರಿಕೊಂಡಿದೆ. ಅದರ ಫಲವಾಗಿಯೇ ಕನಸುಗಳ ಬಣ್ಣಕ್ಕೆ ಶಕುನಗಳ ಚಿತ್ತಾರ ಮೂಡಿಕೊಂಡಿದೆ.

    ಹಾಗಿದ್ದ ಮೇಲೆ ಆರಂಭದಲ್ಲಿ ಹೇಳಿದಂತಹ ಭೀಕರ ಕನಸುಗಳಿಗೆ ಕಾರಣ ಇದ್ದೇ ಇರಬೇಕಲ್ಲಾ? ಈ ಬಗ್ಗೆ ಹುಡುಕಿದರೆ ಬಂಗಾಳಿಗಳ ನಡುವೆ ಇಂತಹ ಭಯಾನಕ ಕನಸಿಗೆ ಒಂದಷ್ಟು ವಿವರಣೆಗಳಿವೆ. ಅಲ್ಲಿ ಇಂತಹ ಕನಸಿಗೆ ಬೂಬಾ ಅಂತಾರೆ. ಬೂಬಾ ಅಂದ್ರೆ ಮಾತಾಡಲಾರದ, ಮೂಕ ಎಂಬೆಲ್ಲ ಅರ್ಥಗಳಿವೆ. ಅಲ್ಲಿ ಇಂಥಾ ಕೆಟ್ಟ ಕನಸು ಬೂಬಾ ಅವತಾರದಲ್ಲಿ ಎಲ್ಲರ ಬೆನ್ನ ಹಿಂದೆ ಹೊಂಚಿ ಕುಳಿತಿರುತ್ತದೆ ಎಂಬ ನಂಬಿಕೆಯಿದೆ. ಅದೇನಾದರೂ ಅಮರಿಕೊಂಡರೆ ಸಾವು ಖಚಿತ ಎಂಬಂಥಾ ಭಯವೂ ಅಲ್ಲಿದೆ. ಅದಕ್ಕೆ ಒಂದಷ್ಟು ಮಂದಿ ಬಲಿಯಾಗಿದ್ದಾರೆ.

    ಹಾಗಾದರೆ ನಿಜಕ್ಕೂ ಇಂತಹ ಬೆಚ್ಚಿ ಬೀಳಿಸೋ ಕನಸು ಯಾಕೆ ಬೀಳುತ್ತೆ ಅನ್ನೋದಕ್ಕೂ ಒಂದಷ್ಟು ವಿವರಗಳೂ ಇವೆ. ಕೆಲವೊಮ್ಮೆ ಉಸಿರಾಟದ ಏರುಪೇರೂ ಕೂಡ ಅದಕ್ಕೆ ಕಾರಣವಾಗೋದಿದೆ. ಇನ್ನುಳಿದಂತೆ ಯಾವುದೋ ನೆನಪು, ಬಯಕೆ ಮತ್ತು ಭಯಗಳೇ ಕನಸಾಗಿ ರೀಲು ಬಿಚ್ಚಿಕೊಳ್ಳುತ್ತವೆ. ನಮ್ಮಲ್ಲಿರುವ ಅಂತರ್ಗತ ಭಯವೇ ಬೂಬಾ ಅವತಾರವಾಗಿ ಆಗಾಗ ಕಾಡಿ ಬಲಿ ತೆಗೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ. ಆದ್ದರಿಂದಲೇ ಮೌಢ್ಯ ತುಂಬಿದ ಭಯಗಳಿಂದ ದೂರವಿರೋದೊಳಿತು. ಭಯ ತುಂಬಿಕೊಂಡರೆ ಅದು ಸೈತಾನನ ಅವತಾರವೆತ್ತಿ ಕನಸಲ್ಲಿ ಬಂದು ಎದೆ ಹತ್ತಿ ಕೂರುತ್ತೆ. ಕತ್ತು ಹಿಸುಕುತ್ತೆ. ಯಾಮಾರಿದರೆ ಜೀವವನ್ನೂ ತೆಗೆಯುತ್ತೆ.

    https://www.youtube.com/watch?v=2Ms5XvqEOKE

  • ‘ನಿದ್ರೆಗೆ ಜಾರಿದ್ದೇ ತಪ್ಪಾಯ್ತು’- ಕೊನೆಯ ಫ್ಲೈಟ್ ಮಿಸ್ ಮಾಡ್ಕೊಂಡ ಟೆಕ್ಕಿ

    ‘ನಿದ್ರೆಗೆ ಜಾರಿದ್ದೇ ತಪ್ಪಾಯ್ತು’- ಕೊನೆಯ ಫ್ಲೈಟ್ ಮಿಸ್ ಮಾಡ್ಕೊಂಡ ಟೆಕ್ಕಿ

    ಅಬುಧಾಬಿ: ಕೊರೊನಾ ಭೀತಿ ರಾಷ್ಟ್ರಾದ್ಯಂತ ಹಬ್ಬುತ್ತಿದ್ದು, ಈ ಹಿನ್ನೆಲೆಯಲ್ಲಿ ದೂರದ ಊರಿನಲ್ಲಿದ್ದವರು ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ. ಅಂತೆಯೇ ದುಬೈನಲ್ಲಿದ್ದ ಭಾರತೀಯ ಮೂಲದ ಟೆಕ್ಕಿಯೊಬ್ಬರು ತಾಯ್ನಾಡಿಗೆ ಹೊರಟಿದ್ದು, ಆದ್ರೆ ಫ್ಲೈಟ್ ಗೆ ಕಾದು ನಿದ್ರೆಗೆ ಜಾರಿದ್ದರಿಂದ ವಿಮಾನ ಮಿಸ್ ಆದ ಪ್ರಸಂಗ ನಡೆದಿದೆ.

    ಪುಣೆ ಮೂಲದ ಅರುಣ್ ಸಿಂಗ್(37) ದುಬೈನಲ್ಲೇ ಉಳಿದ ಭಾರತೀಯ. ಟೆಕ್ಕಿಯಾಗಿರುವ ಇವರು ದುಬೈನಲ್ಲಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ಅರುಣ್ ಭಾನುವಾರ ರಾತ್ರಿ ತಾಯ್ನಾಡಿಗೆ ಹೊರಟಿದ್ದರು. ಹೀಗಾಗಿ ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ಅಹಮದಾಬಾದ್ ಕಡೆ ಹೊರಟಿದ್ದ ಕೊನೆಯ ವಿಮಾನವನ್ನು ಏರಬೇಕಿತ್ತು. ಆದರೆ ಅರುಣ್ ವಿಸಿಟಿಂಗ್ ಏರಿಯಾದಲ್ಲಿ ನಿದ್ದೆಗೆ ಜಾರಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಅರುಣ್, ಇದೊಂದು ನನ್ನಿಂದಾದ ದೊಡ್ಡ ತಪ್ಪು. ಬಹಳ ದಣಿದಿದ್ದ ಪರಿಣಾಮ ನಿದ್ದೆ ಬಂತು. ಹಾಗಾಗಿ ನಿದ್ದೆ ಮಾಡಿದೆ. ವಿಚ್ಚೇದನ ಪಡೆಯೋದಕ್ಕಾಗಿ ನಾನು ಅರ್ಜಿ ಸಲ್ಲಿಸಲು ಭಾರತಕ್ಕೆ ಮರಳುತ್ತಿದ್ದೆ. ಬುಧವಾರದ ನಂತರ ವಿಮಾನ ನಿಲ್ದಾಣ ಮುಚ್ಚಲಿದ್ದು ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ಗಲ್ಫ್ ನ್ಯೂಸ್ ಬಳಿ ತೋಡಿಕೊಂಡಿದ್ದಾರೆ.

    ಅಲ್ಲದೆ ಈ ಬಗ್ಗೆ ದುಬೈನಲ್ಲಿರುವ ಭಾರತೀಯ ದೂತವಾಸವನ್ನು ಸಂಪರ್ಕಿಸಿದೆ. ಆದರೆ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಮದು ಬೇಸರ ವ್ಯಕ್ತಪಡಿಸಿದರು.

  • ಮನೆಗೆ ನುಗ್ಗಿದ ಕಳ್ಳನನ್ನು ನಿದ್ದೆ ಮಾಡುವಂತೆ ಮಾಡಿದ ತುಳುನಾಡ ದೈವ!

    ಮನೆಗೆ ನುಗ್ಗಿದ ಕಳ್ಳನನ್ನು ನಿದ್ದೆ ಮಾಡುವಂತೆ ಮಾಡಿದ ತುಳುನಾಡ ದೈವ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಕಳ್ಳನೊಬ್ಬ ಮನೆಗೆ ನುಗ್ಗಿ ಅಲ್ಲಿಯೇ ಮಲಗಿ ನಿದ್ರಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಹಾರ ಮೂಲದ ಕಳ್ಳ ಅನಿಲ್ ಸಹಾನಿ, ಕಪಾಟಿನ ಬೀಗದ ಕೈಯನ್ನು ತೆಗೆದುಕೊಂಡಿದ್ದರೂ ಕಳ್ಳತನ ಮಾಡದೇ, ಅದೇ ಮನೆಯ ಸೋಫಾದಲ್ಲಿ ಮಲಗಿದ್ದನು. ಇದಕ್ಕೆ ಕಾರಣ ಆ ಮನೆಯಲ್ಲಿದ್ದ ದೈವದ ಶಕ್ತಿ ಎಂಬ ಮಾತುಗಳು ಕೇಳಿಬಂದಿದೆ.

    ಕಳ್ಳ ಕಪಾಟಿನಲ್ಲಿದ್ದ ಚಿನ್ನದ ಒಡವೆಗಳನ್ನು ಕದ್ದು ನಿರಾಯಾಸವಾಗಿ ಪರಾರಿ ಆಗಬಹುದಿತ್ತು. ಆದರೆ ಬೀಗದ ಕೈಯನ್ನು ಜೊತೆಗಿರಿಸಿಕೊಂಡೇ ಮಲಗಿದ್ದಲ್ಲದೆ, ಬೆಳಗ್ಗೆವರೆಗೂ ನಿದ್ರಿಸಿ ಮನೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದ. ಹೀಗೆ ಕಳ್ಳತನಕ್ಕೆಂದು ಬಂದು ಕಳ್ಳ ಮನೆಯಲ್ಲೇ ಮಲಗಿ ನಿದ್ದೆಗೆ ಜಾರಲು ಮನೆಯಲ್ಲಿದ್ದ ದೈವ ಶಕ್ತಿಯೇ ಕಾರಣ ಎನ್ನಲಾಗುತ್ತಿದೆ.

    ಮನೆಯ ಮಾಲೀಕ ಸುದರ್ಶನ್ ಪೂರ್ವಜರ ಕಾಲದಿಂದಲೂ ಮನೆಯಲ್ಲಿ ಕಲ್ಲುರ್ಟಿ ಮತ್ತು ಗುಳಿಗ ದೈವದ ಆರಾಧನೆ ಮಾಡುತ್ತಾ ಬಂದಿದ್ದರು. ಇದೇ ದೈವದ ಶಕ್ತಿ ಕಳ್ಳನನ್ನು ತಡೆದಿದ್ದು, ಆತ ಮನೆಯಲ್ಲೇ ಮಲಗಿ ಸಿಕ್ಕಿಬೀಳುವಂತೆ ಮಾಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಈ ಬಿಹಾರದ ಕಳ್ಳ ಸಿಕ್ಕಿಬೀಳುವ ಹತ್ತು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಮನೆಯ ಹೊರಗಿನ ದೈವದ ಗುಡಿಗೆ ನುಗ್ಗಿದ ಕಳ್ಳನೊಬ್ಬ ಕಾಣಿಗೆ ಡಬ್ಬಿ ಎಗರಿಸಲು ಯತ್ನಿಸಿದ್ದ. ಆದರೆ ಗುಡಿಗೆ ನುಗ್ಗಿದ್ದ ಕಳ್ಳ ಹೊರಗೆ ಬರಲಾಗದೇ ಸಿಕ್ಕಿಬಿದ್ದಿದ್ದ. ಇದು ಕೂಡ ದೈವದ ಪವಾಡ ಎನ್ನುವ ಮಾತು ಕೇಳಿಬಂದಿತ್ತು. ಅಂದು ಕೂಡ ಕಳ್ಳನನ್ನು ಮನೆಯವರೇ ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದರು.

    ಈಗ ಮತ್ತೊಬ್ಬ ಕಳ್ಳ ಮನೆಗೆ ನುಗ್ಗಿ ಮನೆಯಲ್ಲೇ ನಿದ್ರಿಸಿ ಸಿಕ್ಕಿಬಿದ್ದಿದ್ದಾನೆ. ಮನೆಯ ಹಂಚು ತೆಗೆದು ಒಳನುಗ್ಗಿ, ಬೀಗದ ಕೈಯನ್ನು ಎಗರಿಸಿದ್ದರೂ ಕಳವು ಮಾಡದೇ ಸುಮ್ಮನೆ ಮಲಗಿದ್ದು ದೈವಿ ಶಕ್ತಿಯ ಪವಾಡ ಎನ್ನುವ ಮಾತು ಕೇಳಿಬಂದಿದೆ. ಮನೆಯ ಯಜಮಾನ ಸುದರ್ಶನ್ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ.

  • ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಕಳ್ಳತನಕ್ಕೆಂದು ಮನೆ ಹೊಕ್ಕು ನಿದ್ದೆಗೆ ಜಾರಿ ಸಿಕ್ಕಿಬಿದ್ದ ಯುವಕ

    ಮಂಗಳೂರು: ಹೊಟ್ಟೆ ತುಂಬಾ ತಿಂದು ಕುಳಿತಲ್ಲೇ ನಿದ್ದೆಗೆ ಜಾರಿದವರನ್ನು ನೋಡಿರಬಹುದು. ಆದರೆ ಇನ್ನೊಬ್ಬರ ಮನೆಯಲ್ಲಿ ಕಳ್ಳತನ ಮಾಡುಲು ಹೋಗಿ ನಿದ್ದೆಗೆ ಜಾರಿದ್ದನ್ನು ಕೇಳಿದ್ದೀರಾ? ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು, ಆರೋಪಿ ಮನೆ ಮಾಲೀಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಬಿಹಾರದ ಮಜೀಪುರ್ ಜಿಲ್ಲೆಯ ಅನಿಲ್ ಸಹಾನಿ (34) ಕಳ್ಳತನಕ್ಕೆ ಯತ್ನಿಸಿ, ಸಿಕ್ಕಿಬಿದ್ದ ಆರೋಪಿ. ಉಪ್ಪಿನಂಗಡಿಯ ಸುದರ್ಶನ್ ಎಂಬವರ ಮನೆಗೆ ಅನಿಲ್ ಸಹಾನಿ ಮಂಗಳವಾರ ಮಧ್ಯರಾತ್ರಿ ನುಗ್ಗಿದ್ದ. ಮನೆಯ ಹಂಚು ತೆಗೆದು ಒಳನುಗ್ಗಿದ್ದ ಅನಿಲ್ ಮನೆ ಛಾವಣಿಯ ದಿವಾನದಲ್ಲಿ ಮಲಗಿ ನಿದ್ದೆಗೆ ಜಾರಿದ್ದ.

    ಬುಧವಾರ ಬೆಳಗ್ಗೆ ಎದ್ದ ಸುದರ್ಶನ್ ಅವರು ದಿವಾನದಲ್ಲಿ ಮಲಗಿದ್ದ ಅನಿಲ್‍ನನ್ನು ಕಂಡು ಗಾಬರಿಗೊಂಡಿದ್ದರು. ಬಳಿಕ ಎರಡೇಟು ಬಿಗಿದಾಗ ನಿಜ ಬಾಯಿಬಿಟ್ಟ ಆರೋಪಿಯನ್ನು ಸುದರ್ಶನ್ ಅವರು ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಅನಿಲ್ ಸಹಾನಿ ಬೀಗದ ಕೀಲಿಕೈ ಹಿಡಿದುಕೊಂಡೇ ಮಲಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

  • ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಬೆಂಗಳೂರು: ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಭಾರತೀಯ ಕಂಪನಿಯೊಂದು 1 ಲಕ್ಷ ರೂ. ನೀಡಲಿದೆ.

    ಕಳೆದ ನವೆಂಬರ್ ತಿಂಗಳಿನಲ್ಲಿ ವೇಕ್ ಫಿಟ್ ಕಂಪನಿ ನಿದ್ದೆ ಮಾಡಲು ಇಷ್ಟ ಇರುವ ಮಂದಿಗೆ 1 ಲಕ್ಷ ರೂ. ನೀಡುವುದಾಗಿ ತಿಳಿಸಿತ್ತು. ಈ ಸಂಬಂಧ ಅರ್ಜಿ ಆಹ್ವಾನಿಸಿತ್ತು. ಒಟ್ಟು 1.7 ಲಕ್ಷ ಮಂದಿ ನಿದ್ದೆ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಅಂತಿಮವಾಗಿ ಮೊದಲ ಬ್ಯಾಚಿಗೆ 23 ಮಂದಿಯನ್ನು ಆಯ್ಕೆ ಮಾಡಲಾಗಿದೆ.

    ಈ ಪೈಕಿ ಭಾರತದ 8 ನಗರಗಳಿಂದ 19 ಮಂದಿ, ಅಮೆರಿಕ ಮತ್ತು ಸ್ಲೋವಾಕಿಯಾದಿಂದ ಇಬ್ಬರು ಆಯ್ಕೆ ಆಗಿದ್ದಾರೆ. ಅಂತಿಮ ಪಟ್ಟಿಯಲ್ಲಿ ಬೆಂಗಳೂರಿನ 7 ಮಂದಿ ಆಯ್ಕೆ ಆಗಿರುವುದು ವಿಶೇಷ. 100 ದಿನಗಳ ಕಾಲ ಈ ವ್ಯಕ್ತಿಗಳು ಪ್ರತಿ ರಾತ್ರಿ 9 ಗಂಟೆಗಳ ಕಾಲ ನಿರಂತರ 100 ದಿನ ನಿದ್ದೆ ಮಾಡಿದರೆ ಕಂಪನಿ 1 ಲಕ್ಷ ರೂ. ನೀಡಲಿದೆ.

    ಜಾಹೀರಾತು ನೀಡುವಾಗ ಕಂಪನಿ ನಿದ್ದೆ ಮಾಡುವವರು ಪೈಜಾಮಾ ಹಾಕಿಕೊಂಡೆ ಮಲಗಬೇಕು ಎಂದು ಷರತ್ತು ವಿಧಿಸಿತ್ತು.

    ಜೀವನದಲ್ಲಿ ನಿದ್ದೆಯನ್ನು ಆದ್ಯತೆಯನ್ನಾಗಿ ಮಾಡಲು ಯಾವುದೇ ಹಂತಕ್ಕೆ ಹೋಗುವ ಅಭ್ಯರ್ಥಿಗಾಗಿ ನಾವು ಹುಡುಕುತ್ತಿದ್ದೇವೆ. ಮನುಷ್ಯನ ಮಲಗುವ ಹವ್ಯಾಸ ಹಾಗೂ ಅದರಿಂದ ಅವರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ನಮ್ಮ ಕಂಪನಿಯ ಉದ್ದೇಶ ಎಂದು ವೇಕ್‍ಫಿಟ್ ಕಂಪನಿಯ ನಿರ್ದೇಶಕ ಹಾಗೂ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅಂದು ತಿಳಿಸಿದ್ದರು.

    ಕಂಪನಿ ಇಂಟರ್ನಿಗಳು ಮಲಗುವ ಮಾದರಿಗಳನ್ನು ಗಮನಿಸುತ್ತದೆ. ಅಲ್ಲದೆ ಕೌನ್ಸಿಲಿಂಗ್ ಸೆಷನ್ಸ್ ಹಾಗೂ ಸ್ಲೀಪ್ ಟ್ರ್ಯಾಕರ್ಸ್‍ಗಳನ್ನು ನೋಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯಲು ಇದು ಕಂಪನಿಗೆ ಸಹಾಯ ಮಾಡುತ್ತದೆ. ಕೆಲಸದ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ರೀತಿಯ ಪ್ರಯೋಗ ಮಾಡಲಾಗಿದೆ ಎಂದು ಅವರು ವಿವರಿಸಿದ್ದರು.