Tag: Slave

  • ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    – 17 ಮಂದಿ ಮಹಿಳೆಯರು ಸೇರಿ 52 ಜನರ ರಕ್ಷಣೆ
    – ತೋಟದಿಂದ ಹೊರಕ್ಕೆ ಹೋದರೆ ಬೆತ್ತದಿಂದ ಏಟು

    ಹಾಸನ: ಇದು ನಾಗರೀಕ ಸಮಾಜ ತಲೆತಗ್ಗಿಸುವ ಅನಾಗರೀಕ ರೀತಿಯಲ್ಲಿ 52ಮಂದಿ ಕೂಲಿ ಕಾರ್ಮಿಕರನ್ನು ಜೀತಕ್ಕಾಗಿ ಇಟ್ಟುಕೊಂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹಾಸನ ತಾಲೂಕಿನ ಸಾವಂಕನಹಳ್ಳಿಯ ಹೊರವಲಯದಲ್ಲಿರುವ ತೆಂಗಿನ ತೋಟದಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ದಬ್ಬಾಳಿಕೆ ನಡೆಸಲಾಗುತಿತ್ತು. ನಾಲ್ವರು ಪುಟ್ಟ ಮಕ್ಕಳು, 17 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 52 ಮಂದಿಯನ್ನು ಜೀತ ಬಂಧನದಿಂದ ಮುಕ್ತಗೊಳಿಸಲಾಗಿದೆ.

    ರಾಜ್ಯದ ವಿವಿಧ ಭಾಗದಲ್ಲಿ ಬಿಕ್ಷೆ ಬೇಡುವವರನ್ನು, ಬೀದಿ ಬದಿಯ ವಾಸಿಗಳನ್ನು ಹೆಚ್ಚಿನ ಕೂಲಿ ಕೊಡುವುದಾಗಿ ನಂಬಿಸುವ ತಂಡವೊಂದನ್ನು ರಚಿಸಿಕೊಂಡಿದ್ದ ಪ್ರಮುಖ ಆರೋಪಿ ಮುನೇಶ್ ಈಗ ತಲೆ ಮರೆಸಿಕೊಂಡಿದ್ದಾನೆ. ರಾಜ್ಯದ ಮತ್ತು ಬೇರೆ ರಾಜ್ಯಗಳಿಂದ ಬಂದ ಬಡ ಕೂಲಿ ಕಾರ್ಮಿಕರು ಮತ್ತು ಬಿಕ್ಷುಕರೇ ಇವರ ಟಾರ್ಗೆಟ್ ಆಗಿದ್ದರು. ಜೀವನಕ್ಕಾಗಿ ಊರೂರು ಅಲೆಯುವರನ್ನು ಹೊಂಚು ಹಾಕಿ ಈ ತೋಟಕ್ಕೆ ಕರೆದುಕೊಂಡು ಬರುತ್ತಿದ್ದರು.

    ಟೊಮೆಟೋ ಕೀಳುವ ಕೆಲಸ ತುಂಬಾ ಸುಲಭವಾದ ಕೆಲಸ ಮತ್ತು ಉತ್ತಮ ಸಂಬಳ ಬೇರೆ ಸಿಗುತ್ತೆ ಎನ್ನುವ ಆಸೆಯಿಂದ ಇಲ್ಲಿಗೆ ಬಂದವರು ಮತ್ತೆ ಹೊರಕ್ಕೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಪ್ರಾಣಿಗಳಂತೆ ಅವರನ್ನು ಬೇರೆ ತೋಟಗಳಿಗೆ ಕೂಲಿಗೆ ಕರೆದುಕೊಂಡು ಹೋಗಿ ಮತ್ತೆ ಈ ತೋಟಕ್ಕೆ ವಾಪಸ್ ಕರೆದುಕೊಂಡು ಬಂದು ಒಂದು ಕಡೆ ಕೂಡಿಹಾಕಲಾಗುತಿತ್ತು. ಕೆಲವರು ಎರಡು ವರ್ಷಗಳಿಂದ ಇಲ್ಲಿಯೇ ಇದ್ದಾರೆ. ಇನ್ನೂ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಇಲ್ಲಿಗೆ ಬಂದು ತಿಂಗಳುಗಳೇ ಕಳೆದಿವೆ. ಸಂಬಳವೂ ಇಲ್ಲ, ಊರಿಗೆ ವಾಪಸ್ ಹೋಗಲು ಸಾಧ್ಯವಾಗದೇ ನರಕಯಾತನೆ ಅನುಭವಿಸುತ್ತಿದ್ದರು.

    ತೆಂಗಿನಮರದ ಸೋಗೆ ನಿರ್ಮಿತ ಒಂದೇ ಕೊಠಡಿಯಲ್ಲಿ ಎಲ್ಲಾ ಕಾರ್ಮಿಕರನ್ನು ಕೂಡಿಹಾಕಿ ರಾತ್ರಿಹೊತ್ತು ಕಾವಲು ಕಾಯುತ್ತಿದ್ದರು. ನಿತ್ಯ ಕರ್ಮಗಳಿಗೆ ಸಹ ಹೊರಕ್ಕೆ ಹೋಗುವಂತಿರಲಿಲ್ಲ. ತೋಟ ಬಿಟ್ಟು ಹೊರಕ್ಕೆ ಹೋಗುವಂತಿರಲಿಲ್ಲ. ಯಾರಾದರೂ ಹೊರಕ್ಕೆ ಹೋಗಲು ಪ್ರಯತ್ನಿಸಿದರೆ ಅವರನ್ನು ಬೆತ್ತದ ಕೋಲುಗಳಿಂದ ಹೊಡೆಯಲಾಗುತಿತ್ತು. ಎಲ್ಲ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಮುಂಜಾನೆ 5 ಗಂಟೆಯಿಂದ ಅವರನ್ನು ಬೇರೆ ಕಡೆ ಶುಂಠಿ ಬೆಳೆ ಕೀಳಲು ಕರೆದುಕೊಂಡು ರಾತ್ರಿಯವರೆಗೂ ದುಡಿಸಿಕೊಂಡು ಮತ್ತೆ ಇದೇ ತೋಟಕ್ಕೆ ವಾಪಾಸ್ ಕರೆದುಕೊಂಡು ಬಂದು ಕೂಡಿಹಾಕುತ್ತಿದ್ದರು.

    ಹಲವು ವರ್ಷಗಳಿಂದ ನಡೆಯುತಿದ್ದ ದುಷ್ಕರ್ಮಿಗಳ ತಂಡದ ಕೃತ್ಯ ಇದೀಗ ಬೆಳಕಿಗೆ ಬಂದಿದ್ದು, ಎಲ್ಲ ನಿರಾಶ್ರಿತರನ್ನು ಅಲ್ಲಿಂದ ಬಂಧಮುಕ್ತಗೊಳಿಸಲಾಗಿದೆ. ಪ್ರಮುಖ ಆರೋಪಿ ಮುನೇಶ್ ಮತ್ತು ಆತನ ಸಹಚರರು ತಲೆ ಮರೆಸಿಕೊಂಡಿದ್ದಾರೆ. ಮುನೇಶ್ ಜಿಲ್ಲೆಯ ಅರಸೀಕೆರೆಯ ನಿವಾಸಿಯಾಗಿದ್ದು, ಸಾವಂಕನಹಳ್ಳಿಯ ಈ ತೋಟವನ್ನು ಭೋಗ್ಯ ಮಾಡಿಕೊಂಡಿದ್ದಾನೆ. ಇದೀಗ ಹಾಸನ ಪೊಲೀಸರು ಈತನ ಪಾಪಿಕೃತ್ಯವನ್ನು ಭೇದಿಸಿ 52 ಮಂದಿ ಅಮಾಯಕರನ್ನು ಜೀತದಿಂದ ಬಂಧಮುಕ್ತಗೊಳಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪತಿಯ ಸಾಲ ತೀರಿಸಲು ಜೀತವಿರಲು ಒಪ್ಪದ ಪತ್ನಿಯನ್ನು ಹೊತ್ತೊಯ್ದ ಕೈ ಸದಸ್ಯ!

    ಪತಿಯ ಸಾಲ ತೀರಿಸಲು ಜೀತವಿರಲು ಒಪ್ಪದ ಪತ್ನಿಯನ್ನು ಹೊತ್ತೊಯ್ದ ಕೈ ಸದಸ್ಯ!

    ಮಂಡ್ಯ: ಪತಿ ಮಾಡಿರುವ ಸಾಲಕ್ಕೆ ಜೀತವಿರಲು ಒಪ್ಪದ ಮಹಿಳೆಯೊಬ್ಬರನ್ನು ಬಲವಂತವಾಗಿ ಮಾಲೀಕರು ಕಾರಿನಲ್ಲಿ ಹೊತ್ತೊಯ್ದ ಘಟನೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮದಲ್ಲಿ ನಡೆದಿದ್ದು, ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ತಮಿಳುನಾಡು ಮೂಲದ ಜಾನಕಮ್ಮ (27) ಮಾಲೀಕರ ದೌರ್ಜನ್ಯಕ್ಕೆ ತುತ್ತಾದ ಮಹಿಳೆ. ಮದ್ದೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷ ಸ್ಥಳೀಯ ನಾಯಕನಾಗಿರುವ ಕುದರಗುಂಡಿ ಗ್ರಾಮದ ನಿವಾಸಿ ನಾಗೇಶ್ ಮಹಿಳೆಯನ್ನು ಬಲವಂತವಾಗಿ ಹೊತ್ತೊಯ್ದಿದ್ದಾನೆ.

    ನಡೆದದ್ದು ಏನು?
    ತಮಿಳುನಾಡು ಮೂಲದ ಜಾನಕಮ್ಮ ಹಾಗೂ ಪತಿ ಚಿನ್ನತಂಬಿ ಅವರು ಕೆಲಸಕ್ಕಾಗಿ ಮಂಡ್ಯ ಜಿಲ್ಲೆಗೆ ಬಂದಿದ್ದರು. ಈ ದಂಪತಿ ಹಲವು ವರ್ಷಗಳಿಂದ ಕುದರಗುಂಡಿ ಗ್ರಾಮದ ನಾಗೇಶ್ ಮನೆ ಮತ್ತು ತೋಟದಲ್ಲಿ ಜೀತವಿದ್ದು, ಕೆಲಸ ಮಾಡುತ್ತಿದ್ದರು. 3 ವರ್ಷದ ಹಿಂದೆ ಗಂಡ ಚಿನ್ನತಂಬಿ ಮೃತಪಟ್ಟಿದ್ದಾರೆ.

    ಇತ್ತ ಚಿನ್ನತಂಬಿ ನಾಗೇಶ್ ಬಳಿ 30 ಸಾವಿರ ರೂ. ಸಾಲ ಪಡೆದಿದ್ದರಂತೆ. ಸಾಲದ ಹಣವನ್ನು ತೀರಿಸಲಾಗದೇ ಜಾನಕಮ್ಮ 9 ತಿಂಗಳ ಹಿಂದೆ ಬೆಕ್ಕಳಲೆಗೆ ಬಂದು ನೆಲೆಸಿದ್ದರು. ಜಾನಮಕ್ಕ ಬೆಕ್ಕಳಲೆಯಲ್ಲಿ ವಾಸವಾಗಿದ್ದಾರೆ ಎಂದು ಅರಿತ ನಾಗೇಶ್ ಆತನ ಸಹಚರರಾದ ಕರಿಯಪ್ಪ ಹಾಗೂ ಪಾಂಡು ಕೆಎ 11, ಎಂ-2598 ಕೆಂಪು ಕಾರಿನಲ್ಲಿ ಗ್ರಾಮಕ್ಕೆ ಬಂದಿದ್ದಾರೆ. ನಾನು ಬರುವುದಿಲ್ಲ, ಬಿಟ್ಟು ಬಿಡಿ ಅಂತ ಎಷ್ಟೇ ಹಠ ಮಾಡಿದರೂ, ನಾಗೇಶ್ ಜಾನಕಮ್ಮನನ್ನು  ಕಾರಿನಲ್ಲಿ ಹೊತ್ತೊಯ್ದಿದ್ದಾರೆ.

    ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು. ಈ ವಿಡಿಯೋ ನೋಡಿದ್ದ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕ ಒಕ್ಕೂಟದ ಮದ್ದೂರು ಘಟಕದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಕುದರಗುಂಡಿ ಗ್ರಾಮಕ್ಕೆ ಬಂದ ಪೊಲೀಸರು ಜಾನಕಮ್ಮ ಅವರನ್ನು ರಕ್ಷಿಸಿ, ನಾಗೇಶ್‍ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 14 ತಿಂಗಳು ನರಕ ಅನುಭವಿಸಿ ತವರಿಗೆ ಮರಳಿದ ಜೆಸಿಂತಾ

    14 ತಿಂಗಳು ನರಕ ಅನುಭವಿಸಿ ತವರಿಗೆ ಮರಳಿದ ಜೆಸಿಂತಾ

    ಉಡುಪಿ: ಸಂಸಾರದ ಭಾರ ಹೊತ್ತು, ಸೌದಿ ಅರೆಬಿಯಾದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ಜೆಸಿಂತಾ ಉಡುಪಿಗೆ ವಾಪಸ್ಸಾಗಿದ್ದಾರೆ. ಡಾ. ರವೀಂದ್ರನಾಥ ಶಾನುಭಾಗ್ ನೇತೃತ್ವದ ಮಾನವ ಹಕ್ಕುಗಳ ಪ್ರತಿಷ್ಟಾನದ ಹೋರಾಟಕ್ಕೆ ಜಯಗಳಿಸಿದೆ. ಕ್ರೂರಿ ಅರಬ್ಬಿಯ ಮನೆಯಲ್ಲಿ ಎಂಜಲು ತಿಂದ ದಿನಗಳನ್ನು ನೆನೆದು ಅವರು ಕಣ್ಣೀರಿಡುತ್ತಿದ್ದಾರೆ.

    ವೇದಿಕೆಯ ಮೇಲೆ ಕುಳಿತು ಕಣ್ಣೀರಿಡುತ್ತಿರುವ ಇವರು ಜೆಸಿಂತಾ. ಉಡುಪಿ ಜಿಲ್ಲೆಯ ಮುದರಂಗಡಿಯವರು. ಇವರು ಜೂನ್ 19, 2016 ರಂದು ಖತಾರ್‍ನಲ್ಲಿ ಮಕ್ಕಳ ಪೋಷಣೆಗೆಂದು ಹೋರಾಟ ಮಾಡಿದವರು. ಆದರೆ ಆರಂಭದಲ್ಲೇ ಇವರು ಮೋಸ ಹೋಗಿ ಇಳಿದದ್ದು ಸೌದಿ ಅರೆಬಿಯಾದಲ್ಲಿ. ಮಂಗಳೂರಿನ ಏಜೆಂಟ್ ಜೇಮ್ಸ್ ಡಿಮೆಲ್ಲೋ ಜೆಸಿಂತಾ ಅವರನ್ನು ಅರಬ್ಬಿಯರಿಗೆ ಮಾರಲು ಸಿದ್ಧತೆ ಮಾಡಿದ್ದರು. ಕೊನೆಗೂ ಜೀತದಾಳುವಾಗಿ 5 ಲಕ್ಷ ರೂಪಾಯಿಗೆ ಹರಾಜು ಹಾಕಿ ಅಕ್ಷರಶಃ ಮಾರಿದ್ದರು. 14 ತಿಂಗಳುಗಳ ಕಾಲ ಸರಿಯಾಗಿ ಊಟವಿಲ್ಲದೆ – ಚಿತ್ರಹಿಂಸೆಯನ್ನು ಅನುಭವಿಸಿದ್ದಾರೆ. ಟಿಬಿ, ಕಫದಲ್ಲಿ ರಕ್ತ ಕಾರುತ್ತಿದ್ದರೂ ಅವರಿಗೆ ಔಷಧಿ ನೀಡದೆ- ಮನೆಗೆ ಫೋನ್ ಮಾಡದಂತೆ ನಿರ್ಬಂಧ ಹೇರಿ ಅರಬ್ಬೀಗಳ ಮನೆಯಲ್ಲಿ ಎಂಜಲನ್ನು ಕೊಡುತ್ತಿದ್ದರು. ಮಾನವ ಹಕ್ಕುಗಳ ಹೋರಾಟಗಾರ ರವೀಂದ್ರನಾಥ ಶಾನುಭಾಗ್ ಅವಿರತ ಪ್ರಯತ್ನದಿಂದ ಇಂದು ಬದುಕಿ ತವರಿಗೆ ವಾಪಸ್ಸಾಗಿದ್ದಾರೆ.

    ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ- ಅಲ್ಲಿನ ಎನ್‍ಜಿಒಗಳು, ಶಾನುಭಾಗ್ ಅವರ ಹಳೆ ವಿದ್ಯಾರ್ಥಿಗಳ ಸಹಾಯದಿಂದ ಜೆಸಿಂತಾ ಉಡುಪಿಗೆ ಮರಳಿದ್ದಾರೆ. ಸುಮಾರು 4.50 ಲಕ್ಷ ರೂಪಾಯಿಯನ್ನು ಮರು ಪಾವತಿಸುವ ಮೂಲಕ ಈಕೆಯನ್ನು ರಣಹದ್ದುಗಳ ಕೈಯಿಂದ ಬಿಡಿಸಿಕೊಂಡು ಬರಲಾಯಿತು. 65 ಸಾವಿರ ರೂಪಾಯಿ ಹಣವನ್ನು ಪೆನಾಲ್ಟಿಯಾಗಿ ನೀಡಲಾಯಿತು. ಇಲ್ಲದಿದ್ದರೆ ಅಬ್ದುಲ್ಲಾ ಅಲ್ಮುತಾಯ್ರಿ ಎಂಬ ಅರೆಬ್ಬೀಯ ಮೂರು ಮನೆ, ಮೂವರು ಹೆಂಡತಿಯರು ಮತ್ತು 28 ಮಕ್ಕಳ ಪಾಲನೆ ಪೋಷಣೆ ಮಾಡುವಾಗ ಅವರು ಅರೆ ಜೀವವಾಗಿ ಬಿಡುತ್ತಿದ್ದರು.

    ಮಂಗಳೂರು ಪೊಲೀಸರ ಉದಾಸೀನದಿಂದ ಇವರು 14 ತಿಂಗಳು ನರಕದಲ್ಲೇ ಒದ್ದಾಡುವ ಸ್ಥಿತಿ ಬಂದಿತ್ತು. ಮಾನವ ಕಳ್ಳ ಸಾಗಾಟದ ರೂವಾರಿ ಮುಂಬೈಯ ಶಾಬಾಜ್ ಖಾನ್, ಅಮೀರ್ ಭಾಯ್ ನನ್ನು ವಿಚಾರಣೆಯೂ ಮಾಡಿಲ್ಲ. ಕರಾವಳಿ ಜಿಲ್ಲೆಗಳಿಂದ ವರ್ಷಕ್ಕೆ 2000 ಮಂದಿಯ ಕಳ್ಳಸಾಗಣೆ ಆದರೆ ದೇಶದಿಂದ ಎಷ್ಟಾಗುತ್ತದೆ ಎಂಬೂದೇ ಆತಂಕಕಾರಿ ವಿಷಯವಾಗಿದೆ.

    ಸೌದಿ ಅರೇಬಿಯಾದ ನರಕ ನೋಡಿ ಬಂದ ಜೆಸಿಂತಾ ಮಾತನಾಡಿ, ನನಗೆ ಎಂಜಲು ತಿನ್ನಲು ಕೊಡುತ್ತಿದ್ದರು. ತಿಂಗಳ ಸಂಬಳವನ್ನೂ ಸರಿಯಾಗಿ ಕೊಟ್ಟಿಲ್ಲ. ಚಿತ್ರಹಿಂಸೆ ಕೊಡುತ್ತಿದ್ದರು. ಮನೆಯವರ ಜೊತೆ ಫೋನ್ ಮಾಡಿ ಮಾತನಾಡುವ ಅವಕಾಶವೂ ಇರಲಿಲ್ಲ. 40 ಮಂದಿಯ ಚಾಕರಿ ಮಾಡಿ ನಿದ್ದೆ ಮಾಡುತ್ತಿದ್ದರೆ, ಆಗಲೂ ನೀರು ಹಾಕಿ ಎಬ್ಬಿಸಿ ಕೆಲಸ ಕೊಡುತ್ತಿದ್ದರು. ಟಿಬಿ ಇದೆ ಅಂತ ಕಾಲು ಹಿಡಿದುಕೊಂಡು ಮದ್ದು ಕೊಡಿಸಿ ಅಂತ ಅಂಗಲಾಚಿದರೂ ಯಾರೂ ಕೇಳಲಿಲ್ಲ ಎಂದು ಆ ದಿನಗಳನ್ನು ನೆನೆದು ಕಣ್ಣೀರಿಟ್ಟರು.

    ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ ಶಾನುಭಾಗ್ ಜೆಸಿಂತಾರನ್ನು ಸೌದಿಯಿಂದ ಊರಿಗೆ ಕರೆತರಿಸುವಲ್ಲಿ ಅವಿರತ ಶ್ರಮಪಟ್ಟದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು. 50ಕ್ಕೂ ಹೆಚ್ಚು ಮಂದಿ ಈಗಾಗಲೇ ನನ್ನನ್ನು ಸಂಪರ್ಕ ಮಾಡಿದ್ದಾರೆ. 14 ತಿಂಗಳ ಗುಲಾಮಗಿರಿಯಿಂದ ಜೆಸಿಂತಾ ಅವರು ಉಡುಪಿಗೆ ಬಂದಿದ್ದಾರೆ. ಕಾನೂನು ಪ್ರಕಾರವೇ ಅವರನ್ನು ಕರೆದುಕೊಂಡು ಬಂದಿದ್ದೇವೆ. ಮಹಿಳೆಯರು ಗಲ್ಫ್ ದೇಶಗಳಿಗೆ ಹೋಗುವಾಗ ಜಾಗೃತೆ ವಹಿಸಬೇಕು. ಕುಟುಂಬದವರಿಂದ ಮಾಹಿತಿಗಳನ್ನು ಪಡೆದುಕೊಂಡು ಕೆಲಸಕ್ಕೆ ಹೋಗಬೇಕು. ರಿಕ್ರೂಟಿಂಗ್ ಏಜನ್ಸಿಗಳು ಮಾನವ ಕಳ್ಳಸಾಗಣಾ ಕೇಂದ್ರಗಳಾಗಿದೆ. ಅಕ್ಟೋಬರ್ 5ರ ವರೆಗೆ ಕ್ಷಮಾಧಾನ ಯೋಜನೆಯನ್ನು ಮಾಡಲಾಗಿದೆ. ಕೆಲವು ಸಾವಿರ ರೂಪಾಯಿ ಪೆನಾಲ್ಟಿ ಕೊಡಬೇಕಾಗುತ್ತದೆ. ಉಡುಪಿಯ ಮಾನವಹಕ್ಕುಗಳ ಆಯೋಗಕ್ಕೆ ಬಂದು ದೂರು ನೀಡಿದರೆ ಸಮಸ್ಯೆಯಲ್ಲಿರುವವರನ್ನು ವಾಪಾಸ್ ಕರೆಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಉಡುಪಿಯ ದೊಡ್ಡಣಗುಡ್ಡೆ ಎ.ವಿ ಬಾಳಿಗಾ ಆಸ್ಪತ್ರೆಯಲ್ಲಿ ಜೆಸಿಂತಾ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನಸಿಕ ಸ್ಥೈರ್ಯ ಕಳೆದುಕೊಂಡಿರುವ ಅವರಿಗೆ ಮನೋವೈದ್ಯರು ಧೈರ್ಯ ತುಂಬುವ, ಹಾಗೂ ಹಿಂದಿನಂತಾಗುವ ಹಾದಿಯಲ್ಲಿದ್ದಾರೆ.