Tag: slaughterhouse

  • ಕಸಾಯಿಖಾನೆ ಮೇಲೆ ದಾಳಿ – 3 ಲಕ್ಷ ರೂ ಮೌಲ್ಯದ ಎಮ್ಮೆ ಮಾಂಸ ವಶಕ್ಕೆ

    ಕಸಾಯಿಖಾನೆ ಮೇಲೆ ದಾಳಿ – 3 ಲಕ್ಷ ರೂ ಮೌಲ್ಯದ ಎಮ್ಮೆ ಮಾಂಸ ವಶಕ್ಕೆ

    ಮುಂಬೈ: ಅಕ್ರಮವಾಗಿ ನಡೆಸುವ ಕಸಾಯಿಖಾನೆ ಮೇಲೆ ದಾಳಿ ನಡೆಸಿದ ನಗರ ಸಭೆ ಅಧಿಕಾರಿಗಳು 3 ಲಕ್ಷ ಮೌಲ್ಯದ 2 ಸಾವಿರ ಕೆಜಿ ಎಮ್ಮೆ ಮಾಂಸವನ್ನು ವಶಪಡಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ದೂರಿನ ಮೇರೆಗೆ ಥಾಣೆ ಮುನ್ಸಿಪಲ್ ಕಾರ್ಪೋರೇಶನ್ (ಟಿಎಂಸಿ) ಅಧಿಕಾರಿಗಳು ಮುಂಬ್ರಾ ಪ್ರದೇಶದ ಕೌಸಾದಲ್ಲಿರುವ ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 2 ಸಾವಿರ ಕೆಜಿ ಎಮ್ಮೆ ಮಾಂಸವನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಈ ಸಂಬಂಧ ಒಬ್ಬನನ್ನು ಬಂಧಿಸಿದ್ದಾರೆ.

    ಯಾವುದೇ ಪರವಾನಿಗೆ ಇಲ್ಲದೆ ಕಸಾಯಿಖಾನೆ ನಡೆಸಲಾಗುತ್ತಿತ್ತು ಎಂದು ಟಿಎಂಸಿಯ ಪಶುವೈದ್ಯಕೀಯ ವಿಭಾಗದ ಉಸ್ತುವಾರಿ ಅಧಿಕಾರಿ ಶಾಮಾ ಶಿರೋಡ್ಕರ್ ಹೇಳಿದ್ದಾರೆ.

    ದಾಳಿಯಲ್ಲಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 2 ಸಾವಿರ ಕೆಜಿ ಎಮ್ಮೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಮತ್ತು ಈ ಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿರುವ ಇತರ ಕಸಾಯಿಖಾನೆಗಳನ್ನು ಪತ್ತೆಹಚ್ಚಲು ಮುಂಬ್ರಾದಲ್ಲಿ ಇನ್ನು ಹಲವು ಕಡೆ ದಾಳಿ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ-ಇಬ್ಬರ ಬಂಧನ

    ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ-ಇಬ್ಬರ ಬಂಧನ

    ರಾಮನಗರ: ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 20ಕ್ಕೂ ಹೆಚ್ಚು ಗೋವುಗಳನ್ನು ಸಾರ್ವಜನಿಕರೇ ರಕ್ಷಣೆ ಮಾಡಿರುವ ಘಟನೆ ಚನ್ನಪಟ್ಟಣದ ಸುಣ್ಣಘಟ್ಟ ಬಳಿ ನಡೆದಿದೆ.

    ಇಂದು ಚನ್ನಪಟ್ಟಣದ ಸಾತನೂರು-ಹಲಗೂರು ರಸ್ತೆಯಲ್ಲಿ ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಟೆಂಪೋವನ್ನು ಪರಿಶೀಲನೆ ನಡೆಸಲಾಗಿದ್ದು, 20ಕ್ಕೂ ಹೆಚ್ಚು ಗೋವುಗಳನ್ನು ಹಗ್ಗಗಳಿಂದ ಕಟ್ಟಿ, ಚೀಲದಲ್ಲಿ ಕಟ್ಟಿ ಹಾಕಿದ್ದು ಕಂಡುಬಂದಿದೆ.

    ಕೂಡಲೇ ಟೆಂಪೋದಲ್ಲಿದ್ದವರನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಯಾವುದಕ್ಕೂ ಉತ್ತರಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಗೋವುಗಳನ್ನು ಕೇರಳಕ್ಕೆ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಅಲೀಮ್ ಹಾಗೂ ಅಬ್ಬಾಸ್ ಎಂಬವರನ್ನು ಬಂಧಿಸಿದ್ದಾರೆ. ಟೆಂಪೋ ಚಾಲಕ ಅಯಾಜ್ ಎಂಬಾತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಕ್ಷಿಸಿದ ಗೋವುಗಳನ್ನು ರಾಮನಗರದಲ್ಲಿನ ಗೋವು ಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ.

  • ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು – ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಪೈಪ್‍ಲೈನ್ ಪರಿಶೀಲನೆ

    ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು – ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಪೈಪ್‍ಲೈನ್ ಪರಿಶೀಲನೆ

    ಧಾರವಾಡ: ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಬರುತ್ತಿರುವ ಸುದ್ದಿ ಪಬ್ಲಿಕ್ ಟಿವಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ಭೇಟಿಯಾಗಿ ಪರಿಶೀಲನೆ ನಡೆಸಿದ್ದಾರೆ.

    ಇಂದು ಬೆಳಗ್ಗೆ ಪಬ್ಲಿಕ್ ಟಿವಿಯಲ್ಲಿ ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯ ನಲ್ಲಿಗಳಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿರುವ ಬಗ್ಗೆ ಸುದ್ದಿ ಪ್ರಸಾರವಾಗುತಿತ್ತು. ಪಬ್ಲಿಕ್ ಟಿವಿ ವರದಿ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಕಾರ್ಯನಿರ್ವಾಹಕ ಅಭಿಯಂತರ ವೆಂಕಟರಾವ್ ನೇತೃತ್ವದಲ್ಲಿ ಅಧಿಕಾರಿಗಳು ಕಾಲೋನಿಗೆ ಹೋಗಿ ನೀರು ಸರಬರಾಜು ಪೈಪ್‍ಲೈನ್ ಪರಿಶೀಲನೆ ಮಾಡಿದ್ದಾರೆ. ಕಸಾಯಿಖಾನೆಯಿಂದ ಬರುವ ನೀರನ್ನು ಬೇರೆ ಪೈಪ್‍ಲೈನ್ ಮೂಲಕ ಹೋಗುವಂತೆ ಮಾಡುತ್ತೇವೆ. ಕುಡಿಯುವ ನೀರು ಪೂರೈಕೆ ಮತ್ತು ಕಸಾಯಿ ಖಾನೆ ನೀರಿ ಪೈಪ್‍ಲೈನ್ ಸಂಪರ್ಕ ಹೊಂದದಂತೆ ಕ್ರಮ ಕೈಗೊಳ್ಳುತ್ತೇವೆ. ಸಂಜೆ ವೇಳೆಗೆ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಕಳೆದ 15 ದಿನದಿಂದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಹಾಕಲಾಗಿದ್ದ ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಹೊರ ಬರುತಿತ್ತು. ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನು ನೀಡಿದ್ದರು. ಆದರೆ ಸಮಸ್ಯೆಗೆ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಕೂಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತಿತ್ತು.

  • ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ

    ನೀರಿಗಾಗಿ ಕಾದು ಕುಳಿತಿದ್ದವರು ನಲ್ಲಿ ತಿರುವಿದ ತಕ್ಷಣ ಬಂತು ರಕ್ತ

    ಧಾರವಾಡ: ಸಾಮಾನ್ಯವಾಗಿ ನಲ್ಲಿಯನ್ನ ತಿರುವಿದರೆ ನೀರು ಬರುತ್ತದೆ. ಆದರೆ ಧಾರವಾಡದ ಒಂದು ಕಾಲೋನಿಯ ಜನರು ನಲ್ಲಿಯನ್ನ ತಿರುವಿದರೆ ಅಲ್ಲಿ ಕೆಂಪು ಬಣ್ಣದ (ರಕ್ತದ ರೀತಿ) ನೀರು ಬರುತ್ತಿದೆ.

    ಧಾರವಾಡದ ಗೊಲ್ಲರ ಕಾಲೋನಿ ಹಾಗೂ ಹೂಗಾರ ಓಣಿಯಲ್ಲಿ ಮಂಗಳವಾರ ನೀರು ಬರಬೇಕಿತ್ತು. ಅದನ್ನೆ ಕಾಯುತ್ತಾ ಕುಳಿತಿದ್ದ ಜನರು ನಲ್ಲಿ ತಿರುಗಿಸಿದ ತಕ್ಷಣವೇ ನೀರಿನ ಬದಲು ರಕ್ತದ ಬಣ್ಣವಿರುವ ನೀರು ಬಂದಿದೆ.

    ಇದನ್ನ ನೋಡಿದ ಗ್ರಾಮಸ್ಥರು ಕೂಡಲೇ ಜಲ ಮಂಡಳಿಗೆ ದೂರನ್ನ ನೀಡಿದ್ದಾರೆ. ಅಸಲಿಗೆ ನಲ್ಲಿ ಪಕ್ಕದಲ್ಲೇ ಇರುವ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲೀಜು ನೀರು ಕೂಡುತ್ತಿರುವುದರಿಂದ ಕುಡಿಯುವ ನೀರಿನಲ್ಲಿ ರಕ್ತದ ನೀರು ಬರುತ್ತಿದೆ. ಈ ಹಿಂದೆ ಕೂಡಾ ರಸ್ತೆಯ ಮೇಲೆಯೇ ಕಸಾಯಿ ಖಾನೆಯ ನೀರು ಹರಿಯುತ್ತಿತ್ತು. ಆದರೆ ಈಗ ಅದೇ ಕಸಾಯಿ ಖಾನೆ ಹಾಗೂ ಮೀನು ಮಾರುಕಟ್ಟೆಯ ಗಲಿಜು ನೀರು ಜನರ ಮನೆಗೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಒಂದೆಡೆ ಬರಗಾಲದಿಂದ ಕುಡಿಯಲು ನೀರಿಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಇಲ್ಲಿಯ ಜನರಿಗೆ ಕುಡಿಯುವ ನೀರು ಹೋಗಲಿ ಬಳಸಲು ಕೂಡ ನೀರಿಲ್ಲದಂತೆ ಆಗಿದೆ. ಇದಕ್ಕೆಲ್ಲ ಪಾಲಿಕೆ ಹಾಗೂ ಜಲ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

  • ಕಸಾಯಿಖಾನೆಗೆ ಸಾಗಿಸಿದ್ದ 15 ಹಸುಗಳ ರಕ್ಷಣೆ – ಠಾಣೆಯಲ್ಲಿಯೇ ಮೇವು ಹಾಕಿ ಸಾಕುತ್ತಿದ್ದಾರೆ ಪೊಲೀಸರು

    ಕಸಾಯಿಖಾನೆಗೆ ಸಾಗಿಸಿದ್ದ 15 ಹಸುಗಳ ರಕ್ಷಣೆ – ಠಾಣೆಯಲ್ಲಿಯೇ ಮೇವು ಹಾಕಿ ಸಾಕುತ್ತಿದ್ದಾರೆ ಪೊಲೀಸರು

    ರಾಯಚೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದ ಜಾನುವಾರುಗಳನ್ನು ರಾಯಚೂರು ಪೊಲೀಸರು ರಕ್ಷಿಸಿ, ಅವುಗಳನ್ನು ಎಲ್ಲಿ ಬಿಡುವುದು ಅಂತ ತಿಳಿಯದೇ ಠಾಣೆಯಲ್ಲೇ ಈಗ ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ನಗರದಲ್ಲಿ ಬಿಡಾಡಿ ದನಗಳ ಹಾವಳಿ ನಗರದಲ್ಲಿ ಮಿತಿಮೀರಿದ್ದರೆ, ಇನ್ನೊಂದೆಡೆ ಕಸಾಯಿಖಾನೆಯಲ್ಲಿ ಸಿಕ್ಕಸಿಕ್ಕವರು ಜಾನುವಾರುಗಳನ್ನ ತಂದು ಕತ್ತರಿಸುತ್ತಿದ್ದಾರೆ. ಕಸಾಯಿಖಾನೆ ಗುತ್ತಿಗೆಯನ್ನು ಇದುವರೆಗೂ ನಗರಸಭೆ ಅಧಿಕಾರಿಗಳು ಯಾರಿಗೂ ನೀಡಿಲ್ಲ. ಆದರೆ ಜಾನುವಾರುಗಳನ್ನು ತರುವ ಕಟುಕರಿಂದ ದುಡ್ಡುವಸೂಲಿ ಮಾಡುತ್ತಿದ್ದಾರೆ. ಇದರಿಂದಾಗಿ ಸಿಕ್ಕ ಸಿಕ್ಕ ಜಾನುವಾರುಗಳನ್ನು ಕಸಾಯಿಖಾನೆಗೆ ತರಲಾಗುತ್ತಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಸದರಬಜಾರ್ ಠಾಣೆಯ ಪೊಲೀಸರು 70 ಜಾನುವಾರುಗಳಲ್ಲಿ 15 ದನ ಹಾಗೂ ಕರುಗಳನ್ನು ರಕ್ಷಿಸಿದ್ದಾರೆ.

    ನಗರದಲ್ಲಿರುವ ಬಿಡಾಡಿ ದನಗಳನ್ನೇ ಕೆಲವರು ನೇರವಾಗಿ ಕಸಾಯಿಖಾನೆಗೆ ಸಾಗಣೆ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳದೇ ನಗರಸಭೆ ಕೈಕಟ್ಟಿ ಕುಳಿತಿದೆ. ಗುತ್ತಿಗೆ ಪಡೆಯದೇ ಸಿಕ್ಕಸಿಕ್ಕವರು ಕಸಾಯಿಖಾನೆಯಲ್ಲಿ ಜಾನುವಾರುಗಳನ್ನು ಕತ್ತರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ದನದ ಮಾಂಸ ಹಾಗೂ ಚರ್ಮ ಪಡೆದು ಉಳಿದ ತ್ಯಾಜ್ಯಗಳನ್ನು ಹಾಗೇ ಬಿಡುತ್ತಿದ್ದಾರೆ. ಇದರಿಂದಾಗಿ ಕೆಟ್ಟವಾಸನೆ ಬರುತ್ತಿದೆ. ಕಸಾಯಿಖಾನೆಯನ್ನೇ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ನಗರದಲ್ಲಿ ಓಡಾಡಿ ಪ್ಲಾಸ್ಟಿಕ್ ನಂತ ಪದಾರ್ಥಗಳನ್ನು ತಿನ್ನುವ ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿಕೊಳ್ಳಲು ಅಲ್ಲಿನ ಆಡಳಿತ ಮಂಡಳಿ ಹಿಂದೇಟು ಹಾಕುತ್ತಿದೆ. ಇದರಿಂದಾಗಿ ಪೊಲೀಸ್ ಠಾಣೆಯಲ್ಲಿಯೇ ಹಸುಗಳು ಉಳಿದಿವೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರಸಭೆ ಆಯುಕ್ತ ರಮೇಶ್ ನಾಯಕ್ ಅವರು, ಕಸಾಯಿಖಾನೆಯಲ್ಲಿ 70 ಹಸುಗಳು ಇರುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಅಲ್ಲಿನ ಕೆಲಸಗಾರರಿಂದ ಮಾಹಿತಿ ಪಡೆದು ಹಾಗೂ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಪಶು ಸಂಗೋಪನಾ ಇಲಾಖೆಯ ಜೊತೆಗೆ ಸೇರಿ ಬಿಡಾಡಿ ದನಗಳನ್ನು ರಕ್ಷಿತ ಸ್ಥಳಕ್ಕೆ ಸಾಗಿಸುವಂತೆ ನಮ್ಮ ಸಿಬ್ಬಂದಿಗೆ ತಿಳಿಸಿದ್ದೇನೆ ಎಂದು ಹೇಳಿದರು.

    ನಗರಸಭೆ ಗೋವು ರಕ್ಷಣೆಯಲ್ಲಿ ಕ್ರಮಕೈಗೊಳ್ಳುತ್ತಿಲ್ಲ. ನಗರ ಕಸಾಯಿಖಾನೆಯನ್ನು ನಿರ್ದಿಷ್ಟ ವ್ಯಕ್ತಿಗೆ ಗುತ್ತಿಗೆ ನೀಡಿಲ್ಲ. ಇದರಿಂದಾಗಿ ಅಲ್ಲಿ ಅಕ್ರಮ ನಡೆಯುತ್ತಿದೆ. ಈ ಕುರಿತು ಅನೇಕ ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ಹಸುಗಳನ್ನು ರಕ್ಷಿಸಿದ್ದಾರೆ. ಆದರೂ ಕಟುಕರು ತಮ್ಮ ಅಕ್ರಮವಾಗಿ ದನಗಳನ್ನು ಕತ್ತರಿಸವುದನ್ನು ನಿಲ್ಲಿಸಿಲ್ಲ ಎಂದು ಸ್ಥಳೀಯರಾದ ಸಂದೀಪ್ ಅವರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಸಾಯಿಖಾನೆಗೆ ಹಣ ಕೊಟ್ಟಿದ್ದು ಯಾಕೆ: ಕಟೀಲ್‍ಗೆ ಸವಾಲು ಎಸೆದು ಸಮರ್ಥನೆ ಕೊಟ್ಟ ಖಾದರ್

    ಕಸಾಯಿಖಾನೆಗೆ ಹಣ ಕೊಟ್ಟಿದ್ದು ಯಾಕೆ: ಕಟೀಲ್‍ಗೆ ಸವಾಲು ಎಸೆದು ಸಮರ್ಥನೆ ಕೊಟ್ಟ ಖಾದರ್

    ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ 15 ಕೋಟಿ ರೂಪಾಯಿ ಅನುದಾನವನ್ನು ಮಂಗಳೂರಿನ ಕಸಾಯಿಖಾನೆಗೆ ನೀಡಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸಮರ್ಥನೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕುದ್ರೋಳಿಯಲ್ಲಿರುವ ಕಸಾಯಿಖಾನೆ ಬಹಳ ಹಳೆಯದ್ದಾಗಿದೆ. ಕಸಾಯಿಖಾನೆ ಅಭಿವೃದ್ಧಿಗೆ ಜನ ಬೇಡಿಕೆಯನ್ನಿಟ್ಟಿದ್ದರು. ಈ ವಿಚಾರ ಬಿಜೆಪಿಯವರಿಗೂ ಗೊತ್ತಿದೆ. ಸ್ಮಾರ್ಟ್ ಸಿಟಿಯಿಂದ ಹಣ ಬರೋದು ಸ್ವಚ್ಛತೆಗಾಗಿ. ಹೀಗಾಗಿ ಘನ ತಾಜ್ಯ ನಿಯಂತ್ರಣ ಬರಬೇಕಾದರೆ ಕಸಾಯಿಖಾನೆಯ ಅಭಿವೃದ್ಧಿ ಆಗಬೇಕಿದೆ. ಬಿಜೆಪಿಯವರು ಈ ವಿಚಾರದಲ್ಲಿ ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರಕ್ಕೆ ಪತ್ರ ಬರೆದು ಅನುದಾನ ನಿಲ್ಲಿಸಲಿ ಅಂತ ಯುಟಿ ಖಾದರ್ ಸವಾಲು ಹಾಕಿದ್ದಾರೆ. ಇದನ್ನು ಓದಿ: ಸ್ಮಾರ್ಟ್ ಸಿಟಿಯ 15 ಕೋಟಿ ರೂ. ಕಸಾಯಿಖಾನೆಗೆ ನೀಡಿದ್ರು ಸಚಿವ ಖಾದರ್!

    ಮಂಗಳೂರಿನ ಸ್ವಚ್ಛತೆಗೆ ಕಸಾಯಿಖಾನೆಗೆ 15 ಕೋಟಿ ರೂ ನೀಡಲಾಗಿದೆ. ಕಸಾಯಿಖಾನೆಯಲ್ಲಿ ಡಾಕ್ಟರ್‍ಗಳಿಗೆ ಕೂರುವ ವ್ಯವಸ್ಥೆ ಇಲ್ಲ. ಘನತಾಜ್ಯದ ವಿಲೇವಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ 15 ಕೋಟಿ ರೂಪಾಯಿ ನೀಡಲಾಗಿದೆ. ಬಿಜೆಪಿಯವರಿಗೆ ಆಡಳಿತದ ಅನುಭವ ಕಡಿಮೆ ಇದೆ ಎಂದು ತಿರುಗೇಟು ನೀಡಿದರು.

    ಈ ವಿಚಾರವಾಗಿ ಬೋರ್ಡ್ ಮೀಟಿಂಗ್ ನಲ್ಲಿ ತೀರ್ಮಾನಿಸಿ ನಿರ್ಧಾರ ಮಾಡಲಾಗಿದೆ. ಬೋರ್ಡ್ ಮೀಟಿಂಗ್ ನಲ್ಲಿ ಬಿಜೆಪಿಯವರೂ ಇದ್ದಾರೆ. ಮೀಟಿಂಗ್ ನಲ್ಲಿ ಯಾಕೆ ಬಿಜೆಪಿಯವರು ಚಕಾರ ಎತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಬಿಜೆಪಿಯವರು ಬೇಕಿದ್ದರೆ ಪ್ರಸ್ತಾವನೆ ನಿಲ್ಲಿಸಲಿ. ಕೇಂದ್ರ ಸರ್ಕಾರಕ್ಕೆ ಅನುದಾನ ಕಡಿತಗೊಳಿಸುವಂತೆ ಪತ್ರ ಬರೆಯಿರಿ. ವಿರುದ್ಧ ಮಾತನಾಡಿದ ಎಲ್ಲಾ ಬಿಜೆಪಿ ನಾಯಕರು ಪತ್ರ ಬರೆದು ಅನುದಾನ ನಿಲ್ಲಿಸಲಿ. ಗೋಶಾಲೆಗಳಿಗೆ ಅನುದಾನ ನೀಡಲು ಕೇಂದ್ರಕ್ಕೆ ಪತ್ರ ಬರೆಯಲಿ. ಬಿಜೆಪಿಯವರು ಪತ್ರ ಬರೆಯುದಿಲ್ಲ ಎಂದರೆ ಛೀಮಾರಿ ಹಾಕುತ್ತಾರೆ ಎಂದು ಪತ್ರ ಬರೆಯುತ್ತಿಲ್ಲ. ಕೇಂದ್ರ ಅನುದಾನ ಕೊಟ್ಟರೆ ಗೋಶಾಲೆಗೆ ಎರಡು ಪಟ್ಟು ಜಾಸ್ತಿ ಹಣ ನೀಡುತ್ತೇವೆ ಎಂದರು. ಇದನ್ನು ಓದಿ: ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್

    ಸಚಿವ ಖಾದರ್‌ಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಯೇ ಮುಖ್ಯ: ಸುನೀಲ್ ಕುಮಾರ್

    ಉಡುಪಿ: ವಸತಿ ಸಚಿವ ಯು.ಟಿ.ಖಾದರ್ ಅವರಿಗೆ ಸ್ಮಾರ್ಟ್ ಸಿಟಿಗಿಂತ ಕಸಾಯಿಖಾನೆಗಳ ಬಗ್ಗೆ ಜಾಸ್ತಿ ಆಸಕ್ತಿ ಇದೆ ಅಂತ ವಿಧಾನ ಸಭೆಯ ವಿಪಕ್ಷ ಮುಖ್ಯ ಸಚೇತಕ ಹಾಗೂ ಶಾಸಕ ಸುನೀಲ್ ಕುಮಾರ್ ಆರೋಪ ಮಾಡಿದ್ದಾರೆ.

    ಕಾರ್ಕಳದಲ್ಲಿ ಮಾತನಾಡಿದ ಅವರು, ರಾಜ್ಯದ ಜನ ಸುಂದರ ನಗರವನ್ನು ಬಯಸುತ್ತಾರೆ. ಆದರೆ ಕಸಾಯಿಖಾನೆ ಮುಚ್ಚಲು, ಅಕ್ರಮ ಗೋವು ಸಾಗಾಟ ತಡೆಯಲು ರಾಜ್ಯ ಸರ್ಕಾರಕ್ಕೆ ತಾಕತ್ತಿಲ್ಲ. ಸ್ಮಾರ್ಟ್ ಸಿಟಿಯ ಅನುದಾನ ಹಣವನ್ನು ಅಭಿವೃದ್ಧಿಗೆ ಬಳಸಬೇಕಾಗಿತ್ತು. ಅದರ ಬದಲು ಕಸಾಯಿಖಾನೆಗೆ ಹಣ ಬಳಸಿರುವ ಹಿಂದೆ ದೊಡ್ಡ ಹುನ್ನಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೂಡಲೇ ಸಚಿವ ಯು.ಟಿ.ಖಾದರ್ ಇದಕ್ಕೆ ಸ್ಪಷ್ಟನೆ ಕೊಡಬೇಕು. 15 ಕೋಟಿ ರೂಪಾಯಿ ಹಣವನ್ನು ನಾವು ಕಸಾಯಿಖಾನೆಗೆ ಬಳಕೆ ಮಾಡಲು ಬಿಡಲ್ಲ. ಇದು ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ವಿಷಯವಲ್ಲ. ಮೂರು ಜಿಲ್ಲೆಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ಹಿಂದೂ ವಿರೋಧಿ ನೀತಿಯನ್ನು ತಕ್ಷಣ ಕೈಬಿಟ್ಟು, ಅವರ ನಿಲುವನ್ನು ಸ್ಪಷ್ಟ ಪಡಿಸಬೇಕೆಂದು ಆಗ್ರಹಿಸಿದರು.

    ಖಾದರ್ ಮತ್ತು ಬೆಂಬಲಿಗರು ಅಪರಾಧಿ ಚಟುವಟಿಕೆಗೆ ಬೆಂಬಲಿಸುತ್ತಿದ್ದಾರೆ. ಸರ್ಕಾರಿ ಹಣ ಅಭಿವೃದ್ಧಿಗೆ ಉಪಯೋಗವಾಗಲಿ. ಅಲ್ಲದೇ ಮಹಾನಗರಪಾಲಿಕೆ ಅಧಿಕಾರಿಗಳೂ ಸಹ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

    ಕಾರವಾರ: ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ವಶಪಡಿಸಿಕೊಂಡ ಘಟನೆ ಕುಮಟಾದ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್‍ನಲ್ಲಿ ನಡೆದಿದೆ.

    ಆರೋಪಿಗಳು ತಪ್ಪಿಸಿಕೊಂಡಿದ್ದು, ಮಾರುತಿ ಇಗ್ನೀಸ್ ಕಾರನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡ ರಕ್ಷಿಸಿದೆ.

    ಶುಕ್ರವಾರ ಮುಂಜಾನೆ ರಿಜಿಸ್ಟರ್ ಆಗದ ಹೊಸ ಮಾರುತಿ ಇಗ್ನೀಸ್ ಕಾರಿನಲ್ಲಿ ಕಳ್ಳರು ಬಂದಿದ್ದರು. ಕುಮಟಾದ ಹರಕಾರ್ ನ ಹರಿಕಾಂತ್ರ ಕೇರಿಯಲ್ಲಿ ಹಸುಗಳನ್ನು ಕದ್ದು, ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿದ್ದರು. ರಾತ್ರಿ ಪಾಳೆಯ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡವು ಇದನ್ನು ಗಮನಿಸಿ ಕಾರನ್ನು ಬೆನ್ನು ಹತ್ತಿದ್ದರು. ಆದರೆ ದಾರಿ ಮಧ್ಯದಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಅಲ್ಲಿಯೇ ಬಿಟ್ಟು ಕಳ್ಳರು ತಪ್ಪಿಸಿಕೊಂಡಿದ್ದಾರೆ.

    ಸದ್ಯ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಹಸುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ

    ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಸಚಿವೆ ಮನೇಕಾ ಗಾಂಧಿ ಭೇಟಿ

    ಬೆಳಗಾವಿ: ನಗರದಲ್ಲಿನ ಅನಧಿಕೃತ ಕಸಾಯಿಖಾನೆಗಳಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವೆ ಮನೇಕಾ ಗಾಂಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹಲವಾರು ವರ್ಷಗಳಿಂದ ಅನಧಿಕೃತ ಕಸಾಯಿಖಾನೆಗಳು ನಡೆಯುತ್ತಿವೆ. ಈ ಕುರಿತು ಸ್ಥಳೀಯರು ಅಕ್ಟೋಬರ್ ನಲ್ಲಿ ದೂರು ದಾಖಲಿಸಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

    ತಮಗೆ ದೊರಕಿರುವ ಮೂಲಗಳ ಮಾಹಿತಿ ಪ್ರಕಾರ ಗೋವುಗಳ ಕಳ್ಳ ಸಾಗಾಣೆ ಮಾಡಲಾಗುತ್ತಿದೆ. ಆಕ್ರಮ ಬಾಂಗ್ಲಾ ವಲಸಿಗರು ಅಲ್ಲದೇ ಪರಿಸರ ನಾಶ ಮಾಡುವಂತಹ ಎಲ್ಲಾ ಆಕ್ರಮಗಳು ಇಲ್ಲಿ ನಡೆಯುತ್ತಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇದನ್ನು ತಡೆಯಲು ಯತ್ನಿಸದ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ಸೂಚನೆ ನೀಡುವುದಾಗಿ ತಿಳಿಸಿದರು. ಅಲ್ಲದೇ ಸ್ಥಳದಲ್ಲೇ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು.

    ಇದೇ ವೇಳೆ ಆಕ್ರಮ ಕಸಾಯಿ ಖಾನೆ ನಡೆಯುತ್ತಿರುವುದರ ಹಿಂದೆ ಪೊಲೀಸರು ಹಾಗೂ ಸ್ಥಳೀಯ ಶಾಸಕರ ಕೈವಾಡವಿದೆ. ಅಲ್ಲದೇ ಬೆಳಗಾವಿ ಅಟೋ ನಗರದಲ್ಲಿ ಸರಿ ಸುಮಾರು 11 ಕ್ಕೂ ಹೆಚ್ಚು ಅನಧಿಕೃತ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಪೊಲೀಸರು ಸುಮ್ಮನಿದ್ದಾರೆ ಎಂದು ಆರೋಪಿಸಿದರು.

    ಈ ವೇಳೆ ಕೇಂದ್ರ ಸಚಿವರಿಗೆ ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ್ ಜೋಷಿ ಸಾಥ್ ನೀಡಿದರು. ಅಲ್ಲದೇ ಅನಧಿಕೃತ ಕಸಾಯಿಖಾನೆಯ ಪ್ರವೇಶ ದ್ವಾರದ ಬಳಿ ಕೆಲ ನಿಮಿಷ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ನಂತರ ನಗರ ಪೊಲೀಸ್ ಆಯುಕ್ತ ಡಿಸಿ ರಾಜಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಘಟನೆ ಕುರಿತು ಮಾಹಿತಿ ನೀಡಿದರು.

    ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನಧಿಕೃತ ಕಸಾಯಿ ಕಾರ್ಖಾನೆಗಳು ನಡೆಯುತ್ತಿದ್ದು, ಆಕ್ರಮವಾಗಿ ಗೋವುಗಳ ಮಾರಣ ಹೊಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆಕ್ರಮದ ಕುರಿತು ಮಾಹಿತಿ ಪಡೆದ ಪೊಲೀಸರು ಘಟಕಗಳನ್ನು ಸೀಜ್ ಮಾಡಿದ್ದರು. ಆದರೆ ಕಸಾಯಿಖಾನೆ ಮಾಲೀಕರು ಮತ್ತೊಂದು ದ್ವಾರದಿಂದ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಸ್ತುತ ಕಸಾಯಿಖಾನೆ ಮಾಲೀಕರು ತಲೆ ಮರೆಸಿಕೊಂಡಿದ್ದು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಿಂದೂಗಳ ಗುಡಿಯಿರೋ ಜಾಗದಲ್ಲೇ ಕಸಾಯಿಖಾನೆ- ಸಿದ್ದು ಸರ್ಕಾರದ ನಡೆಗೆ ‘ಕೈ’ನಲ್ಲೇ ವಿರೋಧ

    ಹಿಂದೂಗಳ ಗುಡಿಯಿರೋ ಜಾಗದಲ್ಲೇ ಕಸಾಯಿಖಾನೆ- ಸಿದ್ದು ಸರ್ಕಾರದ ನಡೆಗೆ ‘ಕೈ’ನಲ್ಲೇ ವಿರೋಧ

    ಬೆಳಗಾವಿ: ರಾಜ್ಯದಲ್ಲಿ ಎರಡು ಹೈಟೆಕ್ ಕಸಾಯಿಖಾನೆ ಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್‍ನಲ್ಲೇ ವಿರೋಧ ವ್ಯಕ್ತವಾಗಿದೆ. ಹಿಂದೂಗಳ ಗುಡಿಯಿರುವ ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಕಸಾಯಿಖಾನೆ ನಿರ್ಮಾಣ ವಿರೋಧಿಸಿ ಕುಂದಾನಗರಿಯಲ್ಲಿ ಪ್ರತಿಭಟನೆ ನಡೆದಿದೆ.

    ಟ್ರ್ಯಾಕ್ಟರ್ ಮೂಲಕ ಆಗಮಿಸಿ ಚನ್ನಮ್ಮ ಸರ್ಕಲ್‍ನಲ್ಲಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಪಾಲ್ಗೊಂಡಿದ್ದರು. ಅಲ್ಲದೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ರು. ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಕಸಾಯಿಖಾನೆ ಸ್ಥಾಪನೆಯಿಂದ ಸೌಹಾರ್ದತೆಗೆ ಧಕ್ಕೆ ಬರಬಹುದು ಅಂತಾ ಲಕ್ಷ್ಮಿ ಹೆಬ್ಬಾಳ್ಕರ್ ಆತಂಕ ವ್ಯಕ್ತಪಡಿಸಿದ್ರು.

    ಎರಡು ಕಡೆಗಳಲ್ಲಿ 28 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಕಸಾಯಿಖಾನೆ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿತ್ತು. ಹಿರೇಬಾಗೇವಾಡಿಯಲ್ಲಿ 20 ಎಕರೆ ಗೋಮಾಳ ಭೂಮಿಯಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ. ಆದ್ರೆ ಸರ್ಕಾರದ ನಿರ್ಧಾರದ ವಿರುದ್ಧ ಗ್ರಾಮ ಪಂಚಾಯಿತಿ ವಿಶೇಷ ಸಭೆ ನಡೆಸಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.