Tag: Slaughter

  • ಹೊಟ್ಟೆತುಂಬಾ ತಿಂದು, ಊಟ ಚೆನ್ನಾಗಿಲ್ಲ ಅಂತಾ ಹೋಟೆಲ್ ಸಿಬ್ಬಂದಿಯನ್ನ ಥಳಿಸಿದ್ರು!

    ಹೊಟ್ಟೆತುಂಬಾ ತಿಂದು, ಊಟ ಚೆನ್ನಾಗಿಲ್ಲ ಅಂತಾ ಹೋಟೆಲ್ ಸಿಬ್ಬಂದಿಯನ್ನ ಥಳಿಸಿದ್ರು!

    ಹುಬ್ಬಳ್ಳಿ: ಕಳಪೆ ಊಟ ನೀಡಿದ್ದೀರಿ ಎಂದು ಆರೋಪಿಸಿ ಹೋಟೆಲ್ ಮಾಲೀಕ ಹಾಗೂ ಸಹಾಯಕರ ಮೇಲೆ ಹಲ್ಲೆ ನಡೆಸಿ ಪುಂಡ ಗ್ರಾಹಕರಿಬ್ಬರು ಪರಾರಿಯಾದ ಘಟನೆ ನಗರದ ಹೋಟೆಲ್‍ವೊಂದರಲ್ಲಿ ನಡೆದಿದೆ.

    ಹೋಟೆಲ್ ಮಾಲೀಕ ನಾರಾಯಣಶೆಟ್ಟಿ ಮತ್ತು ಸಿಬ್ಬಂದಿ ಪ್ರಕಾಶ್ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಸಮೀಪದ ಬ್ರಹ್ಮ ಶ್ರೀ ಹೋಟೆಲ್ ನಲ್ಲಿ ಘಟನೆ ನಡೆದಿದೆ. ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯಗಳು ಸೆರೆಯಾಗಿದೆ.

    ನಡೆದಿದ್ದು ಏನು?
    ಬುಧವಾರ ರಾತ್ರಿ ಹೋಟೆಲ್ ಊಟಕ್ಕೆಂದು ಬಂದಿದ್ದ ನಾಲ್ವರು ಊಟ ಸರಿಯಾಗಿಲ್ಲವೆಂದು ಆರೋಪಿಸಿ ಮೂವರು ಹೊರಹೋಗಿದ್ದಾರೆ. ಆದರೆ ಅವರಲ್ಲಿ ಒಬ್ಬ ಹಣ ಪಡೆಯುತ್ತಿದ್ದ ಹೋಟೆಲ್ ಸಿಬ್ಬಂದಿ ಪ್ರಕಾಶ್ ಜೊತೆಗೆ ವಾಗ್ವಾದಕ್ಕೆ ಮುಂದಾಗಿದ್ದಾನೆ. ಮಾತಿನ ಚಕಮಕಿ ಹೆಚ್ಚಾಗಿದ್ದು, ಹೊರಗಿದ್ದ ಮೂವರು ಒಳಗೆ ಬಂದು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹೋಟೆಲ್‍ನಲ್ಲಿದ್ದ ಹೆಲ್ಮೆಟ್, ಬಾಟಲ್ ಬಾಕ್ಸ್ ಎತ್ತಿಕೊಂಡು ಪ್ರಕಾಶ್ ಗೆ ಮನಬಂದಂತೆ ಥಳಿಸಿದ್ದು, ಇದನ್ನು ತಡೆಯಲು ಬಂದ ಮಾಲೀಕ ನಾರಾಯಣ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ನಂತರ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಕಿತ್ತುಹಾಕಿ ಪರಾರಿಯಾಗಿದ್ದಾರೆ.

    ಹೋಟೆಲ್ ಸಿಬ್ಬಂದಿ ಪ್ರಕಾಶ್ ತಲೆಗೆ ಗಂಭೀರಗಾಯವಾಗಿದ್ದು, ಸದ್ಯ ಕಿಮ್ಸ್‍ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬಾಲಿವುಡ್ ನಟನಿಂದ ಸಂಗಾತಿ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

    ಬಾಲಿವುಡ್ ನಟನಿಂದ ಸಂಗಾತಿ ಮೇಲೆ ಮಾರಣಾಂತಿಕ ಹಲ್ಲೆ: ಪ್ರಕರಣ ದಾಖಲು

    ಮುಂಬೈ: ಲೀವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದ ಬಾಲಿವುಡ್ ನಟನೊಬ್ಬ ತನ್ನ ಸಂಗಾತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಮುಂಬೈನ ಸಂತಾಕ್ರೂಜ್‍ನಲ್ಲಿ ನಡೆದಿದೆ.

    ಬಾಲಿವುಡ್‍ನ ನಟ ಅರ್ಮಾನ್ ಕೊಹ್ಲಿ ಮೇಲೆ ಹಲ್ಲೆಯ ಆರೋಪಗಳು ಕೇಳಿ ಬಂದಿವೆ. ಫ್ಯಾಶನ್ ಡಿಸೈನರ್ ಆಗಿರೋ ನಿರು ರಂಧ್ವಾನಿ ಹಲ್ಲೆಗೊಳಗಾದ ಸಂಗಾತಿ.

    ಏನಿದು ಪ್ರಕರಣ?
    ನಟ ಅರ್ಮಾನ್ ಮತ್ತು ನಿರು ಒಳ್ಳೆಯ ಸ್ನೇಹಿತರಾಗಿದ್ದು, 2015ರಿಂದ ಲೀವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದರು. ಭಾನುವಾರ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ, ಅರ್ಮಾನ್ ಗೆಳತಿ ನಿರುರನ್ನು ಮೆಟ್ಟಿಲಿನಿಂದ ತಳ್ಳಿ, ಕೂದಲನ್ನು ಹಿಡಿದು ಗೋಡೆಗೆ ಗುದ್ದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

    ಘಟನೆಯಿಂದಾಗಿ ತಲೆಗೆ ಗಾಯಗಳಾಗಿದ್ದರಿಂದ ನಿರು ಮುಂಬೈನ ಕೋಕಿನಬೇನ್‍ನ ಧೀರುಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ನಿರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗೆಳೆಯ ಅರ್ಮಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಅರ್ಮಾನ್ ಮೇಲೆ ಐಪಿಸಿ ಸೆಕ್ಷನ್ 323, 326, 504 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ನಟ ಅರ್ಮಾನ್ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

    ಅರ್ಮಾನ್ ಈ ಮೊದಲು ಬಿಗ್‍ಬಾಸ್ ಖ್ಯಾತಿಯ ನಟಿ ತನೀಷಾ ಮುಖರ್ಜಿ ಜೊತೆಗೂ ಡೇಟಿಂಗ್ ನಡೆಸುತ್ತಿದ್ದರಂತೆ. ಇವರ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಇಬ್ಬರು ಬೇರ್ಪಟ್ಟಿದ್ದರು ಎಂದು ತಿಳಿದು ಬಂದಿದೆ.

    ಯಾರು ಈ ನಟ?:
    ಅರ್ಮಾನ್ ಕೊಹ್ಲಿಯವರು ಬಾಲಿವುಡ್‍ನ ಖ್ಯಾತ ಚಿತ್ರ ನಿರ್ಮಾಪಕ ರಾಜಕುಮಾರ್ ಕೊಹ್ಲಿಯವರ ಮಗ. ರಾಜಕುಮಾರ್‍ರವರು 1992ರಲ್ಲಿ ನಿರ್ಮಿಸಿದ `ವಿರೋಧಿ’ ಚಿತ್ರದ ಮೂಲಕ ಅರ್ಮಾನ್‍ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಜಾನಿ ದುಶ್ಮನ್ (2002), ಎಲ್‍ಓಸಿ: ಕಾರ್ಗಿಲ್ (2003) ಚಿತ್ರಗಳು ಚಿತ್ರರಂಗ ಮರೆಯದಂತಹ ಚಿತ್ರಗಳಾಗಿವೆ. ಅರ್ಮಾನ್ ಕೊನೆಯದಾಗಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‍ಬಾಸ್ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು.

  • ತನ್ನ ಮೇಕೆ ಬಳಿ ಹೋಗಿದ್ದ ವಿದ್ಯಾರ್ಥಿಯ ಕೈ ಕತ್ತರಿಸಿದ ಮಾಲೀಕ

    ತನ್ನ ಮೇಕೆ ಬಳಿ ಹೋಗಿದ್ದ ವಿದ್ಯಾರ್ಥಿಯ ಕೈ ಕತ್ತರಿಸಿದ ಮಾಲೀಕ

    ಬೀದರ್: ಕುಡಿದ ಅಮಲಿನಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ ಘಟನೆ ಬೀದರ್ ತಾಲೂಕಿನ ಕಾಡವಾದ ಗ್ರಾಮದಲ್ಲಿ ನಡೆದಿದೆ.

    9ನೇ ತರಗತಿಯ ಅನಿಲ್ ಕುಮಾರ್ ಹಲ್ಲೆಗೊಳಗಾದ ವಿದ್ಯಾರ್ಥಿ. ಸಾಬಣ್ಣ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. ಸಾಬಣ್ಣನ ಮೇಕೆ ಮನೆಗೆ ಅನಿಲ್ ಕುಮಾರ್ ಹೋಗಿದ್ದರಿಂದ ಕೋಪಗೊಂಡ ಸಾಬಣ್ಣ ಕುಡಿದ ಅಮಲಿನಲ್ಲಿ ಅನಿಲ್ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿದ್ದಾನೆ.

    ಹಲ್ಲೆಗೊಳಗಾದ ಅನಿಲ್ ಕುಮಾರ್‍ನ ಕೈ ಬಹುತೇಕ ತುಂಡಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೇರೆ ಊರಿನಿಂದ ಸಿನಿಮಾ ನೋಡಲು ಬಂದ ವ್ಯಕ್ತಿ ಮೇಲೆ ಹಲ್ಲೆ

    ಬೇರೆ ಊರಿನಿಂದ ಸಿನಿಮಾ ನೋಡಲು ಬಂದ ವ್ಯಕ್ತಿ ಮೇಲೆ ಹಲ್ಲೆ

    ತುಮಕೂರು: ಪರ ಊರಿನಿಂದ ಚಲನಚಿತ್ರ ನೋಡಲು ಬಂದಿದ್ದ ವ್ಯಕ್ತಿಯ ಮೇಲೆ ಮೂರು ಜನ ಅಪರಿಚಿತರು ದಾಳಿ ಮಾಡಿ ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ರಾತ್ರಿ ನಡೆದಿದೆ.

    ಕೊರಟಗೆರೆ ಪಟ್ಟಣದ ದೇವಾಂಗ ಬೀದಿಯ ನಿವಾಸಿ ಇನಾಯತ್ (25) ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವ್ಯಕ್ತಿ. ಇವರು ರಾತ್ರಿ ಖಾಸಗಿ ಬಸ್ ನಿಲ್ದಾಣದ ಹೋಟೆಲ್ ಒಂದರ ಬಳಿ ಊಟ ಸೇವಿಸುತ್ತಾ ಕುಳಿತ್ತಿದ್ದರು. ಇದನ್ನು ಗಮನಿಸಿ ಬೈಕ್ ನಲ್ಲಿ ಬಂದ ಮೂವರು ಅಪರಿಚಿತರು ಇನಾಯತ್ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಳಿಸಿ ಅವರ ಬಳಿ ಇದ್ದ ಎರಡು ಸಾವಿರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.

    ಹಲ್ಲೆ ನಡೆಸಿದರ ಪರಿಣಾಮ ಇನಾಯತ್ ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ. ತಕ್ಷಣ ಈತನನ್ನು ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಧುಗಿರಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

     

  • ಲವ್ ಮಾಡಿ ಮದ್ವೆಯಾಗಿ ಮಾವನಿಂದನೇ ಕೋಮಾಗೆ ಜಾರಿದ್ದ ಟೆಕ್ಕಿ ಅಳಿಯ ಸಾವು

    ಲವ್ ಮಾಡಿ ಮದ್ವೆಯಾಗಿ ಮಾವನಿಂದನೇ ಕೋಮಾಗೆ ಜಾರಿದ್ದ ಟೆಕ್ಕಿ ಅಳಿಯ ಸಾವು

    ಶಿವಮೊಗ್ಗ: ಲವ್ ಮಾಡಿ ಮದುವೆಯಾಗಿ ನಂತರ ಮಾವನಿಂದಲೇ ಹಲ್ಲೆಗೆ ಒಳಗಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅಳಿಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಕೋಮಾಕ್ಕೆ ಜಾರಿದ್ದ ರಜತ್ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.

    ಏನಿದು ಪ್ರಕರಣ?
    ಟೆಕ್ಕಿ ಜೋಡಿ ಶಿವಮೊಗ್ಗದ ರಜತ್ ಹಾಗೂ ಶ್ವೇತಾ ವಾಲಿ 6 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ದಂಪತಿ ನಡುವೆ ಅದೇನಾಯಿತೋ ಗೊತ್ತಿಲ್ಲ. ಆರೇ ತಿಂಗಳಲ್ಲಿ ಶ್ವೇತಾ, ಶಾಶ್ವತವಾಗಿ ತವರು ಮನೆ ಸೇರಿದ್ದಳು.

    ಮಗಳು ತವರು ಮನೆಗೆ ಸೇರಿದ ಹಿನ್ನೆಲೆ ದಂಪತಿಯನ್ನು ಒಂದು ಮಾಡಲು ಶ್ವೇತಾ ತಂದೆ, ವೀರಶೈವ ಸಮಾಜದ ಪ್ರಭಾವಿ ಮುಖಂಡ ಅನಂದ ವಾಲಿ ಅಳಿಯನ ಮನೆಗೆ ಹೋಗಿದ್ದರು. ಈ ವೇಳೆ ಇವರಿಬ್ಬರು ಹಲ್ಲೆ ಮಾಡಿದ ಪರಿಣಾಮ ರಜತ್ ಕೋಮಾ ಸ್ಥಿತಿಗೆ ತಲುಪಿದ್ದರು. ರಜತ್‍ಗೆ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಈ ಮೊದಲು ತಿಳಿಸಿದ್ದರು.

    ಸದ್ಯ ಕೊಲೆ ಯತ್ನ ಕೇಸ್‍ನಲ್ಲಿ ಕಾಂಗ್ರೆಸ್ ಮುಖಂಡರಾಗಿರುವ ಆನಂದ ವಾಲಿ ಹಾಗೂ ಪುತ್ರ ಸಂದೀಪ್ ವಾಲಿ ಜೈಲು ಪಾಲಾಗಿದ್ದಾರೆ. ನಾಪತ್ತೆಯಾಗಿರುವ ಮಗಳು ಶ್ವೇತಾ ಹಾಗೂ ಪತ್ನಿ ಜಯಂತಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

  • ಊಟ ಮುಗಿಸಿ ಮನೆಗೆ ಹೊರಟಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ಊಟ ಮುಗಿಸಿ ಮನೆಗೆ ಹೊರಟಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ಹುಬ್ಬಳ್ಳಿ: ನಗರದ ಕೇಶವಾಪುರದ ಶಾಂತಿನಗರ ಚರ್ಚ್ ಬಳಿ ಸ್ನೇಹಿತರ ಜೊತೆ ಊಟ ಮಾಡಿ ಮನಗೆ ತೆರಳುವಾಗ ಬಿಜೆಪಿ ರಾಜ್ಯ ಸ್ಲಮ್ ಮೋರ್ಚಾ ಕಾರ್ಯದರ್ಶಿ ಲಕ್ಷ್ಮಣ್ ಕೊರಪಾಟಿ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

    ಲಕ್ಷ್ಮಣ್ ಕೊರಪಾಟಿ ತಮ್ಮ ಬೈಕ್ ನಲ್ಲಿ ಮನೆಗೆ ತೆರಳುವಾಗ ಬೈಕ್‍ನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಮಚ್ಚು ಲಾಂಗ್ ಮತ್ತು ಹಾಕಿ ಸ್ಟಿಕ್ ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರು ಲಕ್ಷ್ಮಣ್ ಕೊರಪಾಟಿ ಅವರ ಸಹಾಯಕ್ಕೆ ಬಂದ್ದಿದ್ದಾರೆ. ಕೂಡಲೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

    ನಾನು ಕಳೆದ 22 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನ ಅಭಿವೃದ್ಧಿಯನ್ನು ಸಹಿಸದ ವಿರೋಧಿಗಳು ನನ್ನ ಮೇಲೆ ದಾಳಿ ನಡೆಸಿರಬಹುದು. ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಹಲ್ಲೆ ಮಾಡಿದ ದುಷ್ಕರ್ಮಿಗಳೆಲ್ಲಾ ಯುವಕರೇ, ಆದ್ರೆ ಅವರು ಯಾರೆಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ದಾಳಿಯ ನಂತರ ನಾನು ಬದುಕಿ ಬಂದಿರುವುದೇ ಒಂದು ಪವಾಡವಾಗಿದೆ ಎಂದು ಹಲ್ಲೆಗೊಳಗಾದ ಲಕ್ಷ್ಮಣ್ ಹೇಳಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಲಕ್ಷ್ಮಣ್ ಅವರನ್ನು ನಗರದ ಕಿಮ್ಸ್ ಗೆ ದಾಖಲು ಮಾಡಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಹಿಳಾ ಅಧಿಕಾರಿ ಮೇಲೆ ಪ್ರಾದೇಶಿಕ ವಲಯಾರಣ್ಯಾಧಿಕಾರಿ ಹಲ್ಲೆ

    ಮಹಿಳಾ ಅಧಿಕಾರಿ ಮೇಲೆ ಪ್ರಾದೇಶಿಕ ವಲಯಾರಣ್ಯಾಧಿಕಾರಿ ಹಲ್ಲೆ

    ದಾವಣಗೆರೆ: ಮಹಿಳಾ ಅಧಿಕಾರಿ ಮತ್ತು ಅವರ ತಂದೆ ಮೇಲೆ ಪ್ರಾದೇಶಿಕ ವಲಯಾರಣ್ಯಾಧಿಕಾರಿ ಹಲ್ಲೆ ಮಾಡಿದ ಘಟನೆ ದಾವಣಗೆರೆಯ ಜಿಲ್ಲೆಯ ಜಗಳೂರು ತಾಲೂಕು ವಲಯಾರಣ್ಯಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ನಡೆದಿದೆ.

    ಉಪ ವಲಯಾರಣ್ಯಾಧಿಕಾರಿ ರಶ್ಮಿ ಮತ್ತು ತಂದೆ ತಿಮ್ಮರಾಜು ಹಲ್ಲೆಗೊಳಗಾದವರು. ಮಹಿಳಾ ಅಧಿಕಾರಿ ರಶ್ಮಿಗೆ ಪ್ರಾದೇಶಿಕ ವಲಯದಿಂದ ಸಾಮಾಜಿಕ ವಲಯಕ್ಕೆ ವರ್ಗವಾಗಿತ್ತು. ವರ್ಗಾವಣೆ ಬಳಿಕ ಬಾಕಿ ಇದ್ದ ಎಚ್‍ಆರ್‍ಎ, ಟಿಎ-ಡಿಎ ಕೇಳಲು ಕಚೇರಿಗೆ ಬಂದಾಗ ಜಗಳೂರು ಪ್ರಾದೇಶಿಕ ವಲಯಾರಣ್ಯಾಧಿಕಾರಿ ರಾಮಮೂರ್ತಿ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.

    ಮಗಳ ಮೇಲೆ ಹಲ್ಲೆ ನಡೆಸಿದ್ದನ್ನು ರಶ್ಮಿ ತಂದೆ ತಿಮ್ಮರಾಜು ಬಂದಾಗ ಅವರ ಮೇಲೇನೂ ಹಲ್ಲೆ ನಡೆಸಿದ್ದರು. ಆಗ ಬಿಡಿಸಿಕೊಳ್ಳಲು ಹೋದ ರಶ್ಮಿ ಮೇಲೂ ಹಲ್ಲೆ ಮಾಡಿ ಕೊಠಡಿಯಲ್ಲಿ ಕೂಡಿಹಾಕಲು ಯತ್ನಿಸಿದ್ದಾರೆ.

    ಕಳೆದ ಕೆಲ ತಿಂಗಳ ಹಿಂದೆ ರಶ್ಮಿ ಹೆರಿಗೆ ರಜೆ ತೆರಳಿದ್ದಾಗ ಆರ್‍ಎಫ್‍ಒ ಬೇರೆಯವರಿಗೆ ಚಾರ್ಜ್ ಕೊಟ್ಟಿದ್ದರು. ಆಗ ರಶ್ಮಿಗೆ ಬರಬೇಕಿದ್ದ ಹಣ ಅಕ್ರಮವಾಗಿ ಡ್ರಾ ಮಾಡಿಕೊಂಡು ಬಳಕೆ ಮಾಡಿಕೊಂಡಿದ್ದಾರೆ.


    8 ತಿಂಗಳಾದ್ರೂ ಎಲ್‍ಎಸ್‍ಪಿಸಿ ಮತ್ತು ಎಸ್‍ಆರ್ ಲೇಟರ್ ಸಹ ಬಂದಿಲ್ಲ. ಇನ್ನೂ ಅರಣ್ಯದಲ್ಲಿ ಮುಂಗಡ ಕಾಮಗಾರಿ ಮಾಡಿದ್ದ 8 ಲಕ್ಷ ಅನುದಾನ ಬಂದಿದೆ ಅದನ್ನು ಕೇಳಿದ್ರೆ ಅವಾಚ್ಯ ಶಬ್ಧಗಳಿಂದ ಮಾತಾಡ್ತಾರೆ ಅಂತ ರಶ್ಮಿ ಆರೋಪಿಸಿದ್ದಾರೆ.

    ಹಲ್ಲೆಗೊಳಗಾದ ರಶ್ಮಿ ಹಾಗೂ ತಂದೆ ತಿಮ್ಮರಾಜು ಜಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಗಳೂರು ಪೊಲೀಸ್ ಠಾಣೆಗೆ ಹೋಗಿ ಆರ್‍ಎಫ್‍ಒ ವಿರುದ್ಧ ದೂರು ನೀಡಿದ್ದಾರೆ.

  • ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ 7 ಜನರ ಮೇಲೆ ಮಾರಣಾಂತಿಕ ಹಲ್ಲೆ

    ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ 7 ಜನರ ಮೇಲೆ ಮಾರಣಾಂತಿಕ ಹಲ್ಲೆ

    ಕಲಬುರಗಿ: ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ ಏಳು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

    ಜಿಲ್ಲೆಯ ಹತಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಾದೇವಪ್ಪ ಕುಟುಂಬದ ಏಳು ಜನ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ರೌಡಿಶೀಟರ್ ರಾಜು ಕಪನೂರ ಮತ್ತು ಅವನ ತಂಡದವರು ಹಲ್ಲೆ ಮಾಡಿದ್ದಾರೆ ಅಂತ ಗಾಯಾಳುಗಳು ಆರೋಪಿಸಿದ್ದಾರೆ.

    ಶುಕ್ರವಾರದಂದು ಗ್ರಾಮದ ಲಕ್ಷ್ಮಿದೇವರ ಜಾತ್ರೆಯ ಸಂದರ್ಭದಲ್ಲಿ ಮಹದೇವಪ್ಪ ಕುಟುಂಬ ಮತ್ತು ಗ್ರಾಮದ ನಾಮದೇವ ಲಂಡನಕರ್ ಕುಟುಂಬದ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಲಂಡನಕರ್ ಕುಟುಂಬದ ಪರವಾಗಿ ಕಲಬುರಗಿ ತಾಲೂಕಿನ ಕಪನೂರು ಗ್ರಾಮದ ನಿವಾಸಿಯಾದ ರೌಡಿಶೀಟರ್ ರಾಜು ಕಪನೂರ್ ಮತ್ತು ಗ್ಯಾಂಗ್ ಬಂದು ರಾಡ್, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಮಾತನಾಡಿದ ರಾಜು, ನಾನು ಜಾತ್ರೆಗೆ ಹೋಗಿದ್ದು ನಿಜ. ಆದ್ರೆ ನಾನು ಹಲ್ಲೆ ಮಾಡಿಲ್ಲ. ನನಗೆ ಆಗದವರು ಈ ರೀತಿಯ ಕುಮ್ಮಕ್ಕು ನೀಡ್ತಿದ್ದಾರೆ ಅಂತ ಹೇಳುತ್ತಿದ್ದಾನೆ.

    ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.