Tag: SL Bhairappa

  • ಎಸ್‍ಎಲ್ ಭೈರಪ್ಪಗೆ ಕೋಟ ಶಿವರಾಮ ಕಾರಂತ ಪ್ರಶಸ್ತಿ

    ಎಸ್‍ಎಲ್ ಭೈರಪ್ಪಗೆ ಕೋಟ ಶಿವರಾಮ ಕಾರಂತ ಪ್ರಶಸ್ತಿ

    ಉಡುಪಿ: ಈ ಸಾಲಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಮೈಸೂರಿನ ಪ್ರಮತಿ ಸ್ಕೂಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನಿಸಿ ಗೌರವಿಸಲಾಯಿತು.

    ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯ ರೂವಾರಿ, ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಶಸ್ತಿ ನೀಡಿದರು. ಕಡಲತಡಿಯ ಭಾರ್ಗವ ಡಾ. ಕೋಟ ಶಿವರಾಮ ಕಾರಂತ ಅವರ ಜನ್ಮದಿನದಂದು ಕೋಟತಟ್ಟು ಗ್ರಾಮ ಪಂಂಚಾಯತ್ ಹಾಗೂ ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ನೀಡುತ್ತಿರುವ ಪ್ರತಿಷ್ಠಿತ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಮೊದಲ ಬಾರಿಗೆ ಪ್ರಶಸ್ತಿ ಪುರಸ್ಕೃತರ ಊರಿನಲ್ಲಿಯೇ ಪ್ರಶಸ್ತಿ ನೀಡಲಾಯಿತು.

    ಕಳೆದ 15 ವರ್ಷಗಳಿಂದ ಪ್ರತೀ ವರ್ಷ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕಾರಂತರ ಹುಟ್ಟೂರು ಕೋಟದಲ್ಲಿಯೇ ಗಣ್ಯರಿಗೆ ಪ್ರಧಾನಿಸಲಾಗುತ್ತಿದೆ. ಆದರೆ ಈ ಬಾರಿ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಮಹತ್ವದ ಬದಲಾವಣೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಊರಿಗೆ ತೆರಳಿ ಅಲ್ಲಿ ಸರಳ ಕಾರ್ಯಕ್ರಮ ನಡೆಸಿ, ರಜತ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.

    ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಮೈಸೂರು ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕೋಟ ಕಾರಂತ ಪ್ರತಿಷ್ಠಾನದ ಯು.ಎಸ್. ಶೆಣೈ, ಸುಬ್ರಾಯ ಆಚಾರ್ಯ ಕೋಟತಟ್ಟು ಪಂಚಾಯತ್ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.

  • ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ: ಎಸ್.ಎಲ್.ಭೈರಪ್ಪ

    ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ: ಎಸ್.ಎಲ್.ಭೈರಪ್ಪ

    ಮೈಸೂರು: ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಏಕೆ ಜನ ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ ಎಂದು ಕಳೆದ ವರ್ಷ ದಸರಾ ಉದ್ಘಾಟಿಸಿದ್ದ ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.

    ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಜಂಬೂಸವಾರಿಯನ್ನು ಮಾವುತರು ಮಾಡುತ್ತಾರೆ. ಇದಕ್ಕೆ ಜನ ಯಾಕೆ ಬೇಕು ಬೇಕು? ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಜನರೂ ಬೇಡ. ಎಲ್ಲರೂ ಅವರ ಮನೆಯಲ್ಲೇ ದಸರಾ ಪೂಜೆ ಮಾಡಿಲಿ. ಬೆಟ್ಟದಲ್ಲಿ ಪೂಜೆ ನಡೆಯಲಿ. ಇದಕ್ಕೆ ಯಾಕೆ 200 ಮಂದಿ ಭಾಗಿಯಾಗಬೇಕು. ಕೊರೊನಾ ಹೆಚ್ಚಾದರೆ ಹೊಣೆ ಯಾರು ಎಂದು ದಸರಾಗೆ ಜನ ಸೇರುವುದಕ್ಕೆ ಎಸ್.ಎಲ್.ಭೈರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಜಂಬೂ ಸವಾರಿ ನಡೆಸೋದು ಮಾವುತರು, ಇದಕ್ಕೆ ಜನ ಬೇಕಾಗಿಲ್ಲ. ಕೆಲವರು ದಸರಾದಿಂದ ಬ್ಯುಸಿನೆಸ್ ಅಂತಾರೆ. ಜನರನ್ನ ಒಟ್ಟಾಗಿ ಸೇರಿಸಿದರೆ ಕೊರೊನಾ ಹರಡುವುದಿಲ್ಲವೆ? ಬ್ಯುಸಿನೆಸ್ ಎಲ್ಲ ಬಿಟ್ಟು ಜನರ ಆರೋಗ್ಯದ ಬಗ್ಗೆ ಯೋಚಿಸಿ ಎಂದು ಅವರು ಸಲಹೆ ನೀಡಿದ್ದಾರೆ.

  • ಕತಾರ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಭೈರಪ್ಪ, ಪುನೀತ್‍ಗೆ ಬಿರುದು ನೀಡಿ ಸನ್ಮಾನ

    ಕತಾರ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಭೈರಪ್ಪ, ಪುನೀತ್‍ಗೆ ಬಿರುದು ನೀಡಿ ಸನ್ಮಾನ

    ದೋಹಾ: ಕತಾರ್‌ನಲ್ಲಿರುವ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಮತ್ತು ನಟ ಪುನೀತ್‍ ರಾಜ್‍ಕುಮಾರ್ ಅವರಿಗೆ ಬಿರುದು ನೀಡಿ ಸನ್ಮಾನಿಸಿದೆ.

    ಅಲ್ ವಕ್ರಾದಲ್ಲಿ ಇರುವ ಡಿ.ಪಿ.ಎಸ್-ಎಂ.ಐ.ಎಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಕಾದಂಬರಿಕಾರ ಪದ್ಮಶ್ರೀ ಡಾ. ಎಸ್.ಎಲ್ ಭೈರಪ್ಪರವರಿಗೆ 2019ನೇ ಸಾಲಿನ `ಕತಾರ್ ಕನ್ನಡ ಸಮ್ಮಾನ್’ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು. ಪುನೀತ್ ಅವರಿಗೆ ‘ಕಲಾ ಸಾರ್ವಭೌಮ’ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಪುನೀತ್ ದಂಪತಿ ಹಾಗೂ ಭೈರಪ್ಪನವರನ್ನು ವಾದ್ಯಗೋಷ್ಠಿಯ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತಂದು ಸನ್ಮಾನಿಸಿದ್ದು ವಿಶೇಷವಾಗಿತ್ತು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರಾಯಭಾರಿಯಾದ ಪಿ. ಕುಮರನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಮಣಿಕಂಠನ್, ನಿಕಟಪೂರ್ವ ಅಧ್ಯಕ್ಷೆ ಮಿಲನ್ ಅರುಣ್, ಐ.ಸಿ.ಬಿ.ಫ್.ನ ಉಪಾಧ್ಯಕ್ಷರಾದ ಮಹೇಶ ಗೌಡ ಹಾಗೂ ಅದರ ಜಂಟಿ ಕಾರ್ಯದರ್ಶಿಯಾದ ಸುಬ್ರಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸಂಘದ ಸ್ಮರಣ ಸಂಚಿಕೆ ‘ಶ್ರೀಗಂಧ’ವನ್ನು ಕೂಡ  ಅತಿಥಿಗಳಿಂದ ಅನಾವರಣ ಮಾಡಲಾಯಿತು.

    ಸಂಘವು ಅಂಗೀಕೃತಗೊಂಡು 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಟಿವಿ ನಟ ಹಾಗೂ ನಿರೂಪಕ ವಿಜಯೇಂದ್ರ ಅಥಣೀಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಹಿನ್ನೆಲೆ ಗಾಯಕರಾದ ಹರ್ಷಾ ಹಾಗೂ ಕು. ಮೈತ್ರಿ ಐಯ್ಯರ್ ಅವರು ಹಾಡಿ ರಂಜಿಸಿದರು. ಡಾ. ಸಂಜಯ್ ಶಾಂತಾರಾಮ್‍ರವರ ಶಿವಪ್ರಿಯ ತಂಡ ನೃತ್ಯ ರೂಪಕವನ್ನು ಪ್ರದರ್ಶಿಸಿತು.

    ಕರ್ನಾಟಕ ಮೂಲದ ಸಂಘ ಸಂಸ್ಥೆಗಳಾದ ತುಳು ಕೂಟ, ಬಂಟ್ಸ್ ಕತಾರ್, ಎಸ್. ಕೆ.ಎಮ್. ಡಬ್ಲ್ಯೂ, ಕೆ.ಎಮ್.ಸಿ.ಎ., ಎಂ.ಸಿ.ಸಿ, ಕತಾರ್ ಬಿಲ್ಲವಾಸ್ ಹಾಗೂ ಎಂ.ಸಿ.ಎ ಸಂಘಟನೆಗಳ ಅಧ್ಯಕ್ಷರು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಪ್ರಸ್ತುತರಿದ್ದರು.

    ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಹಾಗೂ ಮಕ್ಕಳು ಅಪ್ಪು ಅಭಿನಯಿಸಿದಂತಹ ಸಿನಿಮಾ ಹಾಡುಗಳ ಮೆಡ್ಲೆ ಹಾಗೂ ರಾಜಕುಮಾರ್ ರವರ ಕುರಿತು ನೃತ್ಯರೂಪಕವನ್ನು ಪ್ರದರ್ಶಿಸಿ ಪುನೀತ್‍ರವರ ಮೆಚ್ಚುಗೆಯನ್ನು ಪಡೆದರು. ಬಂಟ್ಸ್ ಕತಾರ್‌ನ ಸದಸ್ಯರು ಲಿಂಗೈಕ್ಯರಾದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು, ತುಳು ಕೂಟದ ಸದಸ್ಯರು ಪಂಚಭೂತಗಳು ಹಾಗು ಅವುಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಬಗೆಗೆ, ಕತಾರ್ ಬಿಲ್ಲವಾಸ್‍ರವರು ಪರಿಸರ / ಕಾಡುಗಳ ಸಂರಕ್ಷಣೆಯ ಕುರಿತು ಹೀಗೆ ಕಾರ್ಯಕ್ರಮವನ್ನು ಪ್ರದರ್ಶಿಸಿದರು. 1 ಸಾವಿರಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

  • ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಎಸ್.ಎಲ್ ಭೈರಪ್ಪ ಚಾಲನೆ

    ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ಎಸ್.ಎಲ್ ಭೈರಪ್ಪ ಚಾಲನೆ

    ಮೈಸೂರು: ಇಂದು ಸಾಹಿತಿ ಎಸ್.ಎಲ್. ಭೈರಪ್ಪ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ಕೊಟ್ಟಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ 2019ರ ದಸರಾ ಉತ್ಸವಕ್ಕೆ ಭೈರಪ್ಪ ಅವರು ಚಾಲನೆ ನೀಡಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

    ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ವಿಶ್ವವನ್ನೇ ತನ್ನತ್ತ ಸೆಳೆದುಕೊಂಡು ತನ್ನ ವೈವಿಧ್ಯಮಯವಾದ ಆಚರಣೆಗಳನ್ನು ಜಗತ್ತಿಗೆ ತೋರ್ಪಡಿಸುವ ಆಚರಣೆ ಅಂದರೆ ಅದೇ ಮೈಸೂರು ದಸರಾ ಮಹೋತ್ಸವ.

    ಅರಮನೆಯಲ್ಲಿ ರಾಜಪರಂಪರೆಯ ನವರಾತ್ರಿ ಉತ್ಸವಕ್ಕೂ ಇವತ್ತು ಚಾಲನೆ ಸಿಗಲಿದೆ. ಬೆಳಗ್ಗೆ 5:10 ರಿಂದ 5:30ರ ನಡುವೆ ರತ್ನಖಚಿತ ಆಸನಕ್ಕೆ ಸಿಂಹ ಜೋಡಣೆ ಮಾಡಲಾತ್ತದೆ. ಬೆಳಗ್ಗೆ 8:05 ರಿಂದ 8:55ರ ನಡುವೆ ಅರಮನೆ ಒಳ ಆವರಣದ ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 9:30ಕ್ಕೆ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದ್ದು, ಬೆಳಗ್ಗೆ 9:50 ರಿಂದ 10:35 ಕಳಸ ಪೂಜೆ ನೆರವೆರಿಸಲಾಗುತ್ತದೆ. ನಂತರ ಸಿಂಹಾಸನರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ನಡೆಯಲಿದೆ. ಬಳಿಕ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಚಾಮುಂಡೇಶ್ವರಿ ತರಲಾಗುವುದು. ಈ ಮೂಲಕ ಮೊದಲ ದಿನದ ಅರಮನೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

    ಇಂದಿನಿಂದ 10 ದಿನಗಳ ಕಾಲ ಮೈಸೂರು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿರುತ್ತದೆ. ಅರಮನೆ ಸೇರಿದಂತೆ ಐತಿಹಾಸಿಕ ಕಟ್ಟಡಗಳು, ಸರ್ಕಾರಿ ಕಟ್ಟಡಗಳು ಹಾಗೂ ಮೈಸೂರಿನ ಬಹುಪಾಲು ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುತ್ತವೆ. ಜೊತೆಗೆ ಕುಸ್ತಿ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಾಹಸ ಕ್ರೀಡೆಗಳು, ಚಲನಚಿತ್ರೋತ್ಸವ, ವಸ್ತು ಪ್ರದರ್ಶನ, ಪುಸ್ತಕ ಮೇಳ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ದಸರಾಗೆ ಮತ್ತಷ್ಟು ರಂಗು ತುಂಬಲಿವೆ.

  • ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸಿದೆ: ಎಸ್.ಎಲ್.ಭೈರಪ್ಪ

    ಬ್ರಿಟಿಷರಂತೆ ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸಿದೆ: ಎಸ್.ಎಲ್.ಭೈರಪ್ಪ

    ಧಾರವಾಡ: ಬ್ರಿಟಿಷರಂತೆಯೇ ಕಾಂಗ್ರೆಸ್ ಕೂಡ ಮುಸ್ಲಿಂ ತುಷ್ಟೀಕರಣ ಮಾಡುತ್ತ ಒಡೆದು ಆಳುವ ನೀತಿ ಅನುಸರಿಸಿದೆ ಎಂದು ಸಂಶೋಧಕ, ಸಾಹಿತಿ ಎಸ್.ಎಲ್.ಭೈರಪ್ಪ ಅವರು ಕಾಂಗ್ರೆಸ್ ಹಾಗೂ ನೆಹರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಧಾರವಾಡದಲ್ಲಿ ನಡೆದ ಆವರಣ ಕೃತಿಯ 40ನೇ ಮುದ್ರಣದ ಸಂಭ್ರಮದಲ್ಲಿ ಮಾತನಾಡಿದ ಅವರು, ನೆಹರು ನೇರವಾಗಿಯೇ ಮುಸ್ಲಿಮರಿಗೆ ಧಮ್ಕಿ ಹಾಕಿ ನೀವು ನಮಗೆ ಮತ ಹಾಕಬೇಕು ಅಂದಿದ್ದರು. ಅದನ್ನೇ ಮಾದರಿಯಾಗಿ ಕಾಂಗ್ರೆಸ್ ಅನುಸರಿಸಿಕೊಂಡು ಬಂದಿದೆ. ಅದೇ ಕಾರಣಕ್ಕೆ ಇಂದು ರಾಹುಲ್‍ಗಾಂಧಿ 370ನೇ ವಿಧಿ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದ್ದಾರೆ. ಇದನ್ನು ವಿರೋಧಿಸದೇ ಹೋದರೆ ನನ್ನ ಮುತ್ತಜ್ಜ ನೆಹರೂ ಮಾಡಿದ್ದೆಲ್ಲ ತಪ್ಪಾಗಿ ಬಿಡುತ್ತದೆ ಎನ್ನುವುದು ರಾಹುಲ್‍ಗೆ ಗೊತ್ತಿದೆ, ಹೀಗಾಗಿಯೇ ವಿರೋಧಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ನೆಹರು ಕುಟಂಬಕ್ಕೆ ತುಂಬಾ ಸೊಕ್ಕು ಇತ್ತು. ಡಿಸ್ಕವರಿ ಆಫ್ ಇಂಡಿಯಾದಲ್ಲಿ ನೆಹರು ಔರಂಗಜೇಬನ ಇತಿಹಾಸ ಮರೆಮಾಚಿದ್ದಾರೆ. ಔರಂಗಜೇಬ್ ಖುರಾನ್ ಪ್ರತಿಗಳನ್ನು ನಕಲು ಮಾಡಿ ಮಾರಿ ಆ ದುಡ್ಡಿನಲ್ಲಿ ಮಾತ್ರ ಊಟ ಮಾಡುತಿದ್ದ ಎಂದು ಬರೆದಿದ್ದಾರೆ. ಇಷ್ಟು ದೇವಸ್ಥಾನ ಒಡೆದ, ಇಷ್ಟು ಜನರನ್ನು ಮತಾಂತರ ಮಾಡಿಸಿದ ಎಂದು ಎಲ್ಲಿಯೂ ಬರೆದಿಲ್ಲ ಎಂದು ನೆಹರು ವಿರುದ್ಧ ಕಿಡಿಕಾರಿದರು.

    ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ದೇಶವನ್ನು ಯಾರ ಕೈಗೆ ಕೊಡಬೇಕೆಂದು ಕಾಂಗ್ರೆಸ್‍ಗೆ ಕೇಳಿದರು. ಆಗ ಕಾಂಗ್ರೆಸ್‍ನ 15 ಪ್ರಾದೇಶಿಕ ಕಮೀಟಿಗಳ ಪೈಕಿ ನೆಹರು ಹೆಸರನ್ನು ಒಬ್ಬರೂ ಹೇಳಿರಲಿಲ್ಲ. ಆದರೆ ಸರ್ದಾರ ವಲ್ಲಭಾಯ್ ಪಟೇಲ್‍ರ ಹೆಸರನ್ನು 12 ಕಮೀಟಿ ಹೇಳಿದ್ದವು. ನೆಹರು ನಾನು ಆದರೆ ಪ್ರಧಾನಿಯೇ ಆಗುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಪಟ್ಟು ಹಿಡಿದಿದ್ದರು. ಆಗ ಗಾಂಧೀಜಿ ಸರ್ದಾರ್ ವಲ್ಲಭಾಯ್ ಪಟೇಲರಿಗೆ ಹಿಂದೆ ಸರಿಯುವಂತೆ ಸೂಚಿಸಿದರು ಎಂದು ವಿವರಿಸಿದರು.

    ಇದಕ್ಕೂ ಮೊದಲು ನೇತಾಜಿ ಸುಭಾಷ್ ಚಂದ್ರ ಭೋಸ್ ಅವರು ಭೂಗತರಾಗಬೇಕಾದಲ್ಲಿ ಗಾಂಧೀಜಿಯೆ ಕಾರಣವಾಗಿದ್ದರು. ಹಾಗೆಯೇ ನನ್ನ ಸ್ಥಿತಿಯೂ ಆಗದಿರಲಿ ಎಂದು ಸರ್ದಾರ್ ವಲ್ಲಭಾಯ್ ಪಟೇಲರು ಹಿಂದೆ ಸರಿದಿದ್ದರು ಎಂದು ತಿಳಿಸಿದರು.

  • ಖ್ಯಾತ ಕಾದಂಬರಿಕಾರ ಎಸ್‍ಎಲ್ ಭೈರಪ್ಪ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ

    ಖ್ಯಾತ ಕಾದಂಬರಿಕಾರ ಎಸ್‍ಎಲ್ ಭೈರಪ್ಪ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ

    ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೀಡುವ 2017ನೇ ಸಾಲಿನ ನೃಪತುಂಗ ಪ್ರಶಸ್ತಿಗೆ ಖ್ಯಾತ ಕಾದಂಬರಿಗಾರ ಎಸ್ ಎಲ್ ಭೈರಪ್ಪ ಭಾಜನರಾಗಿದ್ದಾರೆ.

    ನೃಪತುಂಗ ಪ್ರಶಸ್ತಿಯು ಏಳು ಲಕ್ಷ ನಗದು, ಫಲಕ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಡಾ. ಎಸ್‍ಎಲ್ ಭೈರಪ್ಪ ಅವರನ್ನು ಆಯ್ಕೆ ಮಾಡಿರುವುದಾಗಿ ಕಸಾಪ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ನೃಪತುಂಗ ಸಾಹಿತ್ಯ ಪ್ರಶಸ್ತಿ ಯನ್ನು ಕನ್ನಡದ ಜ್ಞಾನಪೀಠ ಪ್ರಶಸ್ತಿಯೆಂದೇ ಕರೆಯಲಾಗುತ್ತದೆ. ಈ ಪ್ರಶಸ್ತಿಯನ್ನು 2008 ರಿಂದ ಪ್ರತಿ ವರ್ಷ ನೀಡಲಾಗುತ್ತಿದೆ.

    ಇನ್ನು 2017 ರ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಶ್ರೀ ರಾಮಲಿಂಗೇಶ್ವರ(ಸಿಸಿರಾ), ಡಾ. ನಂದಿನಿ ಸಿ. ಹಾಗೂ ಶ್ರೀಮತಿ ಶಾಂತಿ ಕೆ.ಅಪ್ಪಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು, ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.