Tag: skype

  • ತಾಯಿಯ ಕೊನೆ ಆಸೆ ಈಡೇರಿಸಲು ಆಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹವಾದ!

    ತಾಯಿಯ ಕೊನೆ ಆಸೆ ಈಡೇರಿಸಲು ಆಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹವಾದ!

    ಕೋಲ್ಕತ್ತಾ: ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಾವು ಬದುಕಿನ ನಡುವಿನ ನಡುವೆ ಹೋರಾಟ ನಡೆಸುತ್ತಿದ್ದ ತಾಯಿಯ ಕೊನೆ ಆಸೆ ಈಡೇರಿಸಲು ಯುವಕನೊಬ್ಬ ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹ ಮಾಡಿಕೊಂಡಿರುವ ಘಟನೆ ಕೋಲ್ಕತ್ತಾದ ರೂಬಿ ಆಸ್ಪತ್ರೆಯಲ್ಲಿ ನಡೆದಿದೆ.

    ಅಮೆರಿಕದ ಜೆನೆಸಿಯೊ ನೆವಾರ್ಕ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ್ ರಾಯ್ ಬರ್ಧಾನ್ (33) ಹಾಗೂ ಅಮೆರಿಕದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿರುವ ಚಂದ್ರಿಮಾ ಚಟರ್ಜಿ ಅವರ ವಿವಾಹವು ಡಿಸೆಂಬರ್ 15 ರಂದು ನಿಗದಿಯಾಗಿತ್ತು.

    ಈ ಮಧ್ಯೆ ಭಾಸ್ಕರ್ ಅವರ ತಾಯಿ ಭಶ್ವತಿ (61) ಅವರು ಕ್ಯಾನ್ಸರ್ ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಗನ ಮದುವೆ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ವೈದ್ಯರು ಸಹ ಡಿ.15ರ ವರೆಗೆ ತಾಯಿ ಬದುಕುವುದು ಅನುಮಾನ. ಹೀಗಾಗಿ ಬೇಗನೇ ಮದುವೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದರು.

    ಇದರಿಂದ ತಾಯಿ ಕೊನೆ ಆಸೆ ನೆರವೇರಿಸಲು ಮುಂದಾದ ಭಾಸ್ಕರ್ ಅವರು ತಾಯಿ ಅವರಿಗೆ ಚಿಕಿತ್ಸೆ ನೀಡುತಿದ್ದ ಕೊಲ್ಕತ್ತಾದ ರೂನಿ ಆಸ್ಪತ್ರೆ ಕೊಠಟಿಯಲ್ಲೇ ಗುರುವಾರ ಮದುವೆಗೆ ಸಿದ್ಧತೆ ನಡೆಸಿ, ಸ್ಕೈಪ್ ಮೂಲಕ ಅಮೆರಿಕದಲ್ಲಿದ್ದ ಚಂದ್ರಿಮಾ ಅವರನ್ನು ಮದುವೆಯಾಗಿದ್ದಾರೆ. ಇವರ ವಿವಾಹ ಮಹೋತ್ಸವವು ಬೆಂಗಾಲಿ ಸಾಂಪ್ರದಾಯದಂತೆ ನಡೆಯಿತು.

    ಈ ವೇಳೆ ಮದುಮಗನ ವೇಷದಲ್ಲಿದ್ದ ಮಗನನ್ನು ತಾಯಿ ಕಣ್ತುಂಬಿಕೊಂಡರು. ಇಬ್ಬರ ಮದುವೆ ನೋಡಿದ ಅವರು ಮನ ತುಂಬಿ ಆರ್ಶೀವಾದಿಸಿದ್ದಾರೆ.

    ಈ ವೇಳೆ ಮಾತನಾಡಿದ ಭಾಸ್ಕರ್ ಅವರು, ತಮ್ಮ ತಾಯಿ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ, ಆದರೆ ಅವರ ಮುಖದ ಮೇಲಿನ ನಗು ಹಾಗೂ ಕಣ್ಣಂಚಿನ ಸಂತೋಷದ ನೀರನ್ನು ನಾವು ನೋಡಬಹುದು. ಇದುವೆ ನಮಗೇ ಆರ್ಶೀವಾದ ಎಂದು ಹೇಳಿದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಭಶ್ವತಿ ಪರಿಸ್ಥಿತಿ ಚಿಂತಜನಕವಾಗಿದ್ದು, ಈ ವೇಳೆ ಮಗನ ಮದುವೆ ನೋಡಲು ಆಸೆಪಟ್ಟಿದ್ದರು. ಅದ್ದರಿಂದ ಆಡಳಿತ ಮಂಡಳಿ ಇತರೇ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮದುವೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿತ್ತು ಎಂದು ಆಸ್ಪತ್ರೆಯ ವೈದ್ಯ ಅರಂಧಮ್ ರಾಯ್ ಚೌಧರಿ ತಿಳಿಸಿದ್ದಾರೆ.