Tag: Skull Breaker Challenge

  • ಪೋಷಕರೇ ಎಚ್ಚರ – ಟ್ರೆಂಡ್ ಆಗಿದೆ ತಲೆಬುರುಡೆ ಒಡೆಯುವ ಚಾಲೆಂಜ್

    ಪೋಷಕರೇ ಎಚ್ಚರ – ಟ್ರೆಂಡ್ ಆಗಿದೆ ತಲೆಬುರುಡೆ ಒಡೆಯುವ ಚಾಲೆಂಜ್

    – ಏನಿದು ಸ್ಕಲ್ ಬ್ರೇಕರ್ ಚಾಲೆಂಜ್?

    ನವದೆಹಲಿ: ಸಾಮಾಜಿಕ ಜಾಲತಾಣ ಎಂಬುದು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು. ಇದಕ್ಕೆ ನಿದರ್ಶನ ಎಂಬಂತೆ ಈಗ ಸ್ಕಲ್ ಬ್ರೇಕರ್ ಚಾಲೆಂಜ್ (ತಲೆಬುರುಡೆ ಒಡೆಯುವ ಸವಾಲು) ಎಂಬ ಹೊಸ ಸ್ಪರ್ಧೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‍ನಲ್ಲಿ ಇದ್ದು, ಇದು ಪೋಷಕರ ನಿದ್ದೆಗೆಡಿಸಿದೆ.

    ಇತ್ತೀಚೆಗೆ ಯುವಕ ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುತ್ತಾರೆ. ಫೇಸ್ ಬುಕ್, ವಾಟ್ಸಪ್ ಮತ್ತು ಟಿಕ್ ಟಾಕ್ ಎಂದು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ಈಗ ಈ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಪ್ರಾಣ ತೆಗೆಯುವ ಹೊಸ ಚಾಲೆಂಜ್ ಬಂದಿದ್ದು, ಈ ಚಾಲೆಂಜ್ ಸಖತ್ ಟ್ರೆಂಡ್ ಸೆಟ್ ಮಾಡುತ್ತಿದೆ. ಪ್ರಾಣಕ್ಕೆ ಕುತ್ತು ತರುವ ಈ ಚಾಲೆಂಜ್ ಮಾಡಿ ಯುವಕ ಯುವತಿಯರು ಪ್ರಾಣ ಕೆಳದುಕೊಳುತ್ತಿದ್ದಾರೆ.

    ಏನಿದು ಸ್ಕಲ್ ಬ್ರೇಕರ್ ಚಾಲೆಂಜ್?
    ಸ್ಕಲ್ ಬ್ರೇಕರ್ ಚಾಲೆಂಜ್ (ತಲೆಬುರುಡೆ ಒಡೆಯುವ ಸವಾಲು) ಎಂಬುದು ಒಂದು ಡೆಡ್ಲಿ ಚಾಲೆಂಜ್ ಆಗಿದೆ. ಈ ಚಾಲೆಂಜ್‍ನಲ್ಲಿ ಮೂವರು ನಿಂತಿರುತ್ತಾರೆ ಈ ಮೂವರಲ್ಲಿ ಮಧ್ಯದ ವ್ಯಕ್ತಿ ಮೇಲಕ್ಕೆ ಜಿಗಿದಾಗ ಅಕ್ಕ ಪಕ್ಕ ನಿಂತಿರುವವರು ಜಿಗಿದವನ ಕಾಲುಗಳಿಗೆ ಒದೆಯುತ್ತಾರೆ. ಆಗ ಜಿಗಿದ ವ್ಯಕ್ತಿ ತನ್ನ ಸಮತೋಲನ ಕಳೆದುಕೊಂಡು ನೆಲದ ಮೇಲೆ ಬಿದ್ದಾಗ ಆತನ ತಲೆಗೆ ಬೀಳುವ ಏಟಿನೊಂದಿಗೆ ಈ ಚಾಲೆಂಜ್ ಮುಗಿಯುತ್ತದೆ. ಒಂದು ವೇಳೆ ಜೋರಾಗಿ ಬಿದ್ದರೆ ಆ ವ್ಯಕ್ತಿಯ ತಲೆಬುರುಡೆ ಒಡೆಯುವ ಅಥವಾ ಜೀವಕ್ಕೆ ಕಂಟಕ ಉಂಟಾಗುವ ಸಂಭವವಿರುತ್ತದೆ.

    ಈ ರೀತಿಯ ಭಯಾನಕ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತದೆ. ಇತ್ತೀಚೆಗೆ ಯುವಕ-ಯುವತಿಯ ಜೊತೆಗೆ ಮಕ್ಕಳು ಬಳಸುವ ಟಿಕ್ ಟಾಕ್‍ನಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿ ಇದೆ. ಇದನ್ನು ಕಂಡ ಬೆಚ್ಚು ಬಿದ್ದಿರುವ ಪೋಷಕರು ಈ ಸ್ಕಲ್ ಬ್ರೇಕರ್ ಚಾಲೆಂಜ್‍ನ್ನು ಶಾಲಾ ಆವರಣದಲ್ಲಿ ನಿಷೇಧಿಸಬೇಕು. ಜೊತೆಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.

    https://twitter.com/britishchickAD/status/1228335700132712450

    ಅಮೆರಿಕಾ, ಯೂರೋಪ್ ರಷ್ಯಾನಂತಹ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೊದಲಿಗೆ ಶುರುವಾಗುವ ಈ ರೀತಿಯ ಡೆಡ್ಲಿ ಚಾಲೆಂಜ್‍ಗಳು, ಸೋಶಿಯಲ್ ಮೀಡಿಯಾದ ಮೂಲಕ ಎಲ್ಲಾ ಕಡೆ ಪಸರಿಸುತ್ತವೆ. ಈ ಚಾಲೆಂಜ್‍ಗಳಿಗೆ ಆಕರ್ಷಣೆಯಾಗಿ ಈ ಸವಾಲನ್ನು ಸ್ವೀಕರಿಸಿದ ಮಕ್ಕಳು ತಲೆಗೆ ಬೆನ್ನಿಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಈ ರೀತಿಯ ಚಾಲೆಂಜ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿಷೇಧ ಮಾಡಬೇಕು ಎಂಬ ಮಾತುಗಳು ಈಗ ಸಖತ್ ಸದ್ದು ಮಾಡುತ್ತಿವೆ.

    ಸೋಷಿಯಲ್ ಮೀಡಿಯಾದ ಈ ಹಿಂದೆಯು ಇದೇ ರೀತಿಯ ಕೆಲ ಡೆಡ್ಲಿ ಚಾಲೆಂಜ್‍ಗಳು ಬಂದು ಸಾಕಷ್ಟು ಅವಾತರ ಸೃಷ್ಟಿಸಿದ್ದವು. ಕೆಲವೇ ತಿಂಗಳ ಹಿಂದೆ ಪಬ್ ಜೀ, ಕೀಕೀ ಚಾಲೆಂಜ್ ಮತ್ತು ಬ್ಲೂ ವೇಲ್ ಚಾಲೆಂಜ್ ಮಾಡಿ ಕೆಲ ಮಕ್ಕಳು ಮತ್ತು ಯುವಕರು ಜೀವತೆತ್ತಿದ್ದರು. ಅಲ್ಲದೇ ಟಿಕ್‍ಟಾಕ್ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದರು.