Tag: Sivani

  • ಉದ್ಘಾಟನೆಗೂ ಮುನ್ನ ಕೊಚ್ಚಿ ಹೋದ ಸೇತುವೆ

    ಉದ್ಘಾಟನೆಗೂ ಮುನ್ನ ಕೊಚ್ಚಿ ಹೋದ ಸೇತುವೆ

    – ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣ
    – ಭ್ರಷ್ಟಾಚಾರಕ್ಕೆ ಉದಾಹರಣೆ ಎಂದ ನೆಟ್ಟಿಗರು

    ಭೋಪಾಲ್: ಮಧ್ಯಪ್ರದೇಶ ಸಿವನಿ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ತಾಜಾ ಉದಾಹರಣೆ ಸಿಕ್ಕಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಮಧ್ಯ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಸಿವನಿ ಜಿಲ್ಲೆಯ ಸುನ್ವಾರಾ ಗ್ರಾಮದಲ್ಲಿ ವೆನ್‍ಗಂಗಾ ನದಿಗೆ ಅಡ್ಡಲಾಗಿ ಈ ಸೇತುವೆಯನ್ನ ನಿರ್ಮಿಸಲಾಗಿತ್ತು.

    ಉದ್ಘಾಟನೆಗೂ ಮುನ್ನವೇ ಸಾರ್ವಜನಿಕರ ಸಂಪರ್ಕಕ್ಕೆ ಸೇತುವೆಯನ್ನ ಮುಕ್ತಗೊಳಿಸಲಾಗಿತ್ತು. ನದಿಯ ಪ್ರವಾಹಕ್ಕೆ ಸೇತುವೆ ಮಧ್ಯ ಭಾಗದ ನಾಲ್ಕು ಪಿಲ್ಲರ್ ಗಳು ಕುಸಿತಗೊಂಡು ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ.

    ಸೇತುವೆ ಬರೋಬ್ಬರಿ ಮೂರು ಕೋಟಿ ಏಳು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಸೆಪ್ಟೆಂಬರ್ 1, 2018 ರಂದು ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆಗಸ್ಟ್ 30, 2020ಕ್ಕೆ ಕಾಮಗಾರಿ ಪೂರ್ಣಗೊಳಿಸಲು ಅವಧಿಯನ್ನ ನಿಗದಿ ಸಹ ಮಾಡಲಾಗಿತ್ತು. ಅವಧಿಗೂ ಮುನ್ನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರಿಂದ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಸಂಚರಿಸುತ್ತಿದ್ದರು.

    ಆಗಸ್ಟ್ 29ರ ರಾತ್ರಿ ಸೇತುವೆ ಕುಸಿತವಾಗಿದೆ. ಘಟನೆ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾವಗುವುದು ಎಂದು ಜಿಲ್ಲಾಧಿಕಾರಿ ರಾಹುಲ್ ಹರಿದಾಸ್ ಹೇಳಿದ್ದಾರೆ.

    ಈ ಸೇತುವೆ ಬಿಜೆಪಿ ಶಾಸಕ ರಾಕೇಶ್ ಪಾಲ್ ಅವರ ಕೆವಲಾರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಸೇತುವೆ ನಿರ್ಮಾಣಗೊಂಡ ಬಗ್ಗೆ ಸಂತಸದಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೇತುವೆಯ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸರ್ಕಾರದ ಭ್ರಷ್ಟಾಚಾರಕ್ಕೆ ತಾಜಾ ಉದಾಹರಣೆ ಆಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.