Tag: Site dispute

  • ಸೈಟ್ ವಿಚಾರಕ್ಕೆ ಎರಡು ಕುಟುಂಬಗಳ ಮಾರಾಮಾರಿ -ವೃದ್ಧೆ ಸಾವು

    ಸೈಟ್ ವಿಚಾರಕ್ಕೆ ಎರಡು ಕುಟುಂಬಗಳ ಮಾರಾಮಾರಿ -ವೃದ್ಧೆ ಸಾವು

    ತುಮಕೂರು: ಸೈಟ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಪರಿಣಾಮ ಓರ್ವ ವೃದ್ಧೆ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕುಣಿಗಲ್ ತಾಲೂಕಿನ ರಾಯಗೋನಹಳ್ಳಿಯಲ್ಲಿ ನಡೆದಿದೆ.

    ರಾಯಗೋನಹಳ್ಳಿಯ ಲಕ್ಷ್ಮಮ್ಮ (60) ಮೃತ ವೃದ್ಧೆ. ಲಕ್ಷ್ಮಮ್ಮ ಅವರ ಮಗಳು ನರಸಮ್ಮ, ಮಗ ರಂಗಸ್ವಾಮಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗ್ರಾಮದ ದಾಸೇಗೌಡ ಹಾಗೂ ಲಕ್ಷ್ಮಮ್ಮ ಕುಟುಂಬ ನಡುವೆ ಸೈಟ್ ವಿಚಾರಕ್ಕೆ ಜಗಳ ಶುರುವಾಗಿದ್ದು, ದಾಸೇಗೌಡ ಕುಟುಂಬ ಲಕ್ಷ್ಮಮ್ಮನ ಕುಟುಂಬಸ್ಥರಿಗೆ ದೊಣ್ಣೆ ಮತ್ತು ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಆರೋಪಿಗಳಾದ ಕೃಷ್ಣಪ್ಪ, ದಾಸೇಗೌಡ, ನಾಗರಾಜು, ಹೇಮಂತ ಕುಮಾರ್, ಕಿರಣ್ ಹಾಗೂ ಮುನಿಕೃಷ್ಣ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಆರೋಪಿಗಳನ್ನು ಬಂಧಿಸುವವರೆಗೂ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಯಗೋನಹಳ್ಳಿ ಗ್ರಾಮದಲ್ಲಿ ಲಕ್ಷ್ಮಮ್ಮ ಅವರ ಮೃತ ದೇಹವಿಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕುಟುಂಬಸ್ಥರ ಮನವೊಲಿಸಿ ತಿಳಿಗೊಳಿಸಿ ಅಂತ್ಯಸಂಸ್ಕಾರ ನಡೆಸಲು ಮನವಿ ಮಾಡಿಕೊಂಡರು.