Tag: SIT< Roshan Baig

  • ಜುಲೈ 19ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗಿ – ಬೇಗ್ ವಿಚಾರಣೆ ಅಂತ್ಯ

    ಜುಲೈ 19ಕ್ಕೆ ಮತ್ತೆ ವಿಚಾರಣೆಗೆ ಹಾಜರಾಗಿ – ಬೇಗ್ ವಿಚಾರಣೆ ಅಂತ್ಯ

    ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಅವರ ಎಸ್‍ಐಟಿ ವಿಚಾರಣೆ ಅಂತ್ಯವಾಗಿದ್ದು, ಜುಲೈ 19ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಸೂಚನೆ ನೀಡಿದೆ.

    ಸೋಮವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದಿರುವ ಎಸ್‍ಐಟಿ, ಇದೀಗ ಸುದೀರ್ಘ ವಿಚಾರಣೆಗಳ ಬಳಿಕ ಅವರನ್ನು ಬಿಡುಗಡೆ ಮಾಡಿದೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ನನ್ನನ್ನು ಎಸ್‍ಐಟಿಯವರು ವಿಚಾರಣೆ ಕರೆದಿದ್ದರು. ಇದೀಗ ವಿಚಾರಣೆ ಮಾಡಿ ಕಳುಹಿಸಿದ್ದಾರೆ. ಸದ್ಯ ನಾನು ಮನೆಗೆ ಹೋಗುತ್ತಿದ್ದೇನೆ. ನಿಮಗೆ ನನ್ನಿಂದ ಏನು ಸಹಕಾರ ಬೇಕೋ ಅದನ್ನು ನಾನು ಕೊಡುತ್ತೇನೆ ಎಂದು ಎಸ್‍ಐಟಿಗೆ ಹೇಳಿದ್ದೇನೆ ಎಂದು ತಿಳಿಸಿದರು.

    ನಿನ್ನೆ ನಾನು ಪುಣೆಗೆ ತೆರಳಬೇಕಿತ್ತು. ಆದರೆ ನಾನು ಎಲ್ಲೋ ಓಡಿ ಹೋಗುತ್ತೇನೆ ಎಂದು ಕೆಲವರು ನನ್ನ ವಿರುದ್ಧ ಪಿತೂರಿ ಮಾಡಿದರು. ಆದರೆ ನಾನು ಯಾರ ಮೇಲೂ ಆರೋಪ ಮಾಡಲು ಹೋಗಲ್ಲ. ಯಾಕೋ ಅವರಿಗೆ ಗೊಂದಲವಾಗಿದೆ ಅನಿಸುತ್ತದೆ ಎಂದು ತಿಳಿಸಿದರು.

    ನನ್ನನ್ನು ವಿಚಾರಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಇದೇ ತಿಂಗಳ 19ರಂದು ನಾನು ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ. ನಿನ್ನೆ ನನಗೆ ಪತ್ರ ಕೊಟ್ಟಿದ್ದರು. ಅದರಲ್ಲಿ 19ರಂದು ಹಾಜರಾಗಬೇಕು ಎಂದು ನಿನ್ನೆ ಮಧ್ಯಾಹ್ನ ಎಸ್‍ಐಟಿಯವರೇ ಕೊಟ್ಟಿದ್ದರು. ಆ ಪತ್ರ ನನ್ನ ಬಳಿ ಇದೆ. ಅದಕ್ಕೆ ನಾನು ಬರುತ್ತೇನೆ ಎಂದು ಹೇಳಿದ್ದೆ ಎಂದರು.

    ಐಎಂಎ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ಕ್ಷೇತ್ರದ ಶಾಸಕ ಮಾಜಿ ಸಚಿವ ಆರ್ ರೋಷನ್ ಬೇಗ್‍ರನ್ನ ಎಸ್‍ಐಟಿ ತಂಡ ಸಿನಿಮಾ ಸ್ಟೈಲಲ್ಲಿ ವಶಕ್ಕೆ ಪಡೆದಿತ್ತು. ಎಸ್‍ಐಟಿ ನೀಡಿದ್ದ ನೋಟಿಸ್ ಪ್ರಕಾರ ಸೋಮವಾರ ರೋಷನ್ ಬೇಗ್ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಮುಂಬೈಗೆ ಹಾರೋ ಪ್ಲಾನ್‍ನಲ್ಲಿದ್ದ ರೋಷನ್ ಬೇಗ್ 10 ಗಂಟೆ 35 ನಿಮಿಷಕ್ಕೆ ಸರಿಯಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

    ಇದೇ ವೇಳೆ ಸ್ಥಳಕ್ಕೆ ಎಂಟ್ರಿ ಕೊಟ್ಟ ಡಿಸಿಪಿ ಗಿರೀಶ್ ನೇತೃತ್ವದ ಎಸ್‍ಐಟಿ ತಂಡ 11 ಗಂಟೆ ಸುಮಾರಿಗೆ ರೋಷನ್ ಬೇಗ್‍ರನ್ನು ವಶಕ್ಕೆ ಪಡೆದಿತ್ತು. ಅಲ್ಲದೆ ಸುಮಾರು 2 ಗಂಟೆ ಕಾಲ ವಿಐಪಿ ಲಾಂಜ್‍ನಲ್ಲೇ ವಿಚಾರಣೆ ನಡೆಸಿ, ಕಾನೂನಾತ್ಮಕ ಪ್ರಕ್ರಿಯೆಗಳನ್ನ ಮುಗಿಸಿದ್ದರು. ನಂತರ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಬೇಗ್‍ರನ್ನು ಬೆಂಗಳೂರಿಗೆ ಕರೆತಂದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದರು.