Tag: sisters

  • ರಾತ್ರಿ ಮದ್ವೆಗೆ ಹೋದ ಸಹೋದರಿಯರು ಮುಂಜಾನೆ ಶವವಾಗಿ ಪತ್ತೆ!

    ರಾತ್ರಿ ಮದ್ವೆಗೆ ಹೋದ ಸಹೋದರಿಯರು ಮುಂಜಾನೆ ಶವವಾಗಿ ಪತ್ತೆ!

    ಲಕ್ನೋ: ಇಬ್ಬರು ಅಪ್ರಾಪ್ತ ಸಹೋದರಿಯರನ್ನ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.

    ಮೃತರನ್ನ 17 ವರ್ಷದ ಸಂಧ್ಯಾ ಹಾಗೂ 13 ವರ್ಷದ ಶಾಲು ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಇಬ್ಬರು ಸಹೋದರಿಯರ ಮೃತದೇಹ ಕೆಲಾಮು ಗ್ರಾಮದಿಂದ ಸುಮಾರು 500 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮೃತ ದೇಹಗಳನ್ನು ನೋಡಿದ ತಕ್ಷಣ ಸ್ಥಳೀಯರು ಅವರ ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ದೇಹಗಳ ಸ್ಥಳದಲ್ಲಿ ಗುಂಡುಗಳು ಮತ್ತು ಚಪ್ಪಲಿಗಳು ಕಂಡು ಬಂದಿದೆ.

    ಸಹೋದರಿಯರಿಬ್ಬರು ಸೋಮವಾರ ಸಂಜೆ ಶೌಚಾಯಲಕ್ಕೆಂದು ತೆರಳಿದ್ದರು. ಆದರೆ ತುಂಬಾ ಸಮಯವಾದರೂ ಮನೆಗೆ ಹಿಂದಿರುಗಿರಲಿಲ್ಲ. ಬಳಿಕ ಕುಟುಂಬದವರು ಗ್ರಾಮದಲ್ಲಿ ನಡೆಯುತ್ತಿರುವ ಮದುವೆಗೆ ಹೋಗಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಮುಂಜಾನೆ ಮಕ್ಕಳ ಶವವನ್ನು ಕಂಡು ಆಘಾತಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದೇವೆ. ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದೇವೆ. ಆದರೆ ಗ್ರಾಮಸ್ಥರು ಇಬ್ಬರು ಹುಡುಗಿಯರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಅಂತ ಶಂಕಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಶೋಕ್ ತ್ರಿಪಾಠಿ ತಿಳಿಸಿದ್ದಾರೆ.

    ಬೆಳಿಗ್ಗೆ ಕರೆ ನಮ್ಮ ಮಕ್ಕಳ ಹತ್ಯೆಯ ಬಗ್ಗೆ ತಿಳಿಸಿದಾಗ ನಮಗೆ ಆಘಾತವಾಯಿತು. ನಾವು ಯಾರೊಂದಿಗೂ ಯಾವುದೇ ದ್ವೇಷವನ್ನು ಇಟ್ಟುಕೊಂಡಿಲ್ಲ. ಆದರೆ ಯಾಕೆ ನಮ್ಮ ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದಾರೆ ಅಂತ ತಿಳಿದಿಲ್ಲ ಎಂದು ಹುಡುಗಿಯರ ತಂದೆ ನೋವಿನಲ್ಲಿ ಹೇಳಿದ್ದಾರೆ.

    ಪೊಲೀಸರು ಅಪರಿಚಿತರ ವಿರುದ್ಧ ದೂರು ದಾಖಲು ಮಾಡಿ ತನಿಖೆ ಆರಂಭಿಸಿದ್ದು ಈಗ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಸ್ಥಳದಲ್ಲಿ ಬಿದ್ದಿದ್ದ ಬುಲೆಟ್ ಹಾಗೂ ಚಪ್ಪಲಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಶೋಕ್ ತ್ರಿಪಾಠಿ ತಿಳಿಸಿದ್ದಾರೆ.

    ಇಟವಾ ಕ್ಷೇತ್ರದ ಶಾಸಕರಾಗಿರುವ ಸರಿತಾ ಭದೌರಿಯಾ ಪ್ರತಿಕ್ರಿಯಿಸಿ, ನಿಷ್ಪಕ್ಷಪಾತ ತನಿಖೆಯನ್ನು ಮಾಡಲಾಗುತ್ತದೆ. ಆರೋಪಿಗಳನ್ನ ಶೀಘ್ರವಾಗಿ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

  • ತಂಗಿಗೆ ಮದ್ವೆ ನಿಶ್ಚಯಿಸಿದ್ರು – ಸಹೋದರಿಯರಿಬ್ಬರು ಮನೆ ಬಿಟ್ಟು ಹೋಗಿ ಆತ್ಮಹತ್ಯೆಗೆ ಶರಣಾದ್ರು!

    ತಂಗಿಗೆ ಮದ್ವೆ ನಿಶ್ಚಯಿಸಿದ್ರು – ಸಹೋದರಿಯರಿಬ್ಬರು ಮನೆ ಬಿಟ್ಟು ಹೋಗಿ ಆತ್ಮಹತ್ಯೆಗೆ ಶರಣಾದ್ರು!

    ಹೈದರಾಬಾದ್: ಮದುವೆ ನಿಶ್ಚಯ ಮಾಡಿದ್ದಕ್ಕೆ ಸಹೋದರಿಯರಿಬ್ಬರು ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಅದಿಲಾಬಾದ್ ಜಿಲ್ಲೆಯ ನಾರಡಿಗಂಡ ಮಂಡಲಮ್ ನ ಬಂಡಿಡಿ ಗ್ರಾಮದ ಕಮಲ್ ಸಿಂಗ್ ಮಕ್ಕಳಾದ ಅಂಜುಲಾ (18) ಮತ್ತು ಅರ್ಚನಾ (19) ಆತ್ಮಹತ್ಯೆಗೆ ಶರಣಾದ ಸಹೋದರಿಯರು ಎಂದು ಗುರುತಿಸಲಾಗಿದೆ.

    ಕಿರಿಯ ಸಹೋದರಿ ಅಂಜುಲಾ 7ನೇ ತರಗತಿವರೆಗೆ ಓದಿದ್ದರೆ, ಅರ್ಚನಾ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಇವರ ಪೋಷಕರು ಅಂಜುಲಾಗೆ ವರನನ್ನು ನೋಡಿ ವಿವಾಹ ನಿಶ್ಚಯ ಮಾಡಿದ್ದರು. ಆದರೆ ಅಂಜುಲಾ, ನನಗೆ ಹುಡುಗ ಇಷ್ಟ ಇಲ್ಲ. ನಾನು ಆತನನ್ನು ಮದುವೆ ಆಗುವುದಿಲ್ಲ ಎಂದು ತಂದೆ ಬಳಿ ಹೇಳಿದ್ದಾಳೆ. ಆದರೆ ಪೋಷಕರು ಆಕೆಯ ಮಾತಿಗೆ ಕಿವಿಗೊಡಲಿಲ್ಲ. ಅಷ್ಟೇ ಅಲ್ಲದೇ ನಾನು ನೋಡಿದ ವರನನ್ನು ನೀನು ಮದುವೆಯಾಗಬೇಕೆಂದು ಒತ್ತಾಯಿಸಿದ್ದಾರೆ.

    ಅಂಜುಲಾ ಮದುವೆ ವಿಚಾರದಿಂದ ಖಿನ್ನತೆಗೆ ಒಳಗಾಗಿದ್ದು, ಅರ್ಚನಾ ನನ್ನು ಜೊತೆಗೆ ಕರೆದುಕೊಂಡು ಪೋಷಕರಿಗೆ ಹೊರಗೆ ಹೋಗುತ್ತಿದ್ದೇವೆ ಎಂದು ಹೇಳಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ತುಂಬಾ ಸಮಯವಾದರೂ ಇಬ್ಬರು ಮನೆಗೆ ಹಿಂದಿರುಗಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಮಾಹಿತಿ ತಿಳಿಸಿದ್ದಾರೆ ಎಂದು ಎಸ್.ಐ ವೆಂಕಣ್ಣ ತಿಳಿಸಿದ್ದಾರೆ.

    ಪೊಲೀಸರು ಇಬ್ಬರು ಸಹೋದರಿಯರಿಗಾಗಿ ಹುಡುಕಾಟ ಪ್ರಾರಂಭಿಸಿದ್ದು, ಇಬ್ಬರೂ ಸಹೋದರಿಯರು ಹೈದರಾಬಾದ್ ಗೆ ಬಂದು ಅಲ್ಲಿಂದ ಇಕೋಡಾ ಮತ್ತು ಸಿರ್ಕೊಂಡಾಗೆ ಹೋಗಿದ್ದಾರೆ. ಸಿರ್ಕೊಂಡಾದಲ್ಲಿ ಇಬ್ಬರು ಕೀಟನಾಶಕವನ್ನು ಸೇವಿಸಿದ್ದಾರೆ. ಇದನ್ನು ಗ್ರಾಮಸ್ಥರು ನೋಡಿದ್ದು, ತಕ್ಷಣ ಪೋಷಕರು ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಸಮೀಪದ ಆರ್‍ಐಎಂಎಕ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಈ ಘಟನೆ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮಾಡುತ್ತಿದ್ದಾರೆ.

  • ಕಪ್ ಕೇಕ್ ತಗೆದುಕೊಂಡನೆಂದು 3 ವರ್ಷದ ತಮ್ಮನನ್ನೇ ಕೊಂದ ಸಹೋದರಿಯರು!

    ಕಪ್ ಕೇಕ್ ತಗೆದುಕೊಂಡನೆಂದು 3 ವರ್ಷದ ತಮ್ಮನನ್ನೇ ಕೊಂದ ಸಹೋದರಿಯರು!

    ನ್ಯೂಯಾರ್ಕ್: ಕಪ್ ಕೇಕ್ ಕದ್ದನೆಂದು ಸಹೋದರಿಯರೇ 3 ವರ್ಷದ ತಮ್ಮನನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಅಮೆರಿಕದ ಅಟ್ಲಾಂಟಾದಲ್ಲಿ ನಡೆದಿದೆ.

    ಕೇಜುವಾನ್ ಮೇಸನ್(3) ಕೊಲೆಯಾದ ಬಾಲಕ. ಕೇಜುವಾನ್ ತನ್ನ ಸಹೋದರಿಯರಾದ ಲ್ಯಾಶಿರ್ಲಿ ಮೋರಿಸ್(27) ಮತ್ತು ಗ್ಲೆಂಡ್ರಿಯಾ ಮೋರಿಸ್(25) ಜೊತೆ ಮನೆಯಲ್ಲಿದ್ದನು. ಆಗ ಅಡುಗೆ ಮನೆಗೆ ಹೋಗಿ ಕಪ್ ಕೇಕ್ ತೆಗೆದುಕೊಂಡಿದ್ದಾನೆ ಎಂದು ಪೊಲೀಸರು ಅಲ್ಲಿನ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕಪ್ ಕೇಕ್ ತೆಗೆದುಕೊಂಡನೆಂದು ಲ್ಯಾಶಿರ್ಲಿ ಬೇಸ್ ಬಾಲ್ ಬ್ಯಾಟ್‍ನಿಂದ ಕೇಜುವಾನ್‍ಗೆ ಹೊಡೆದಿದ್ದಾಳೆ. ಆಗ ಗ್ಲೆಂಡ್ರಿಯಾ ಕೂಡ ತನ್ನ ಕೈಯಿಂದ ಹೊಡೆದಿದ್ದಾಳೆ. ಜೋರಾಗಿ ತಲೆಗೆ ಹೊಡೆದ ಕಾರಣ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಬಾಲಕ ಕಪ್ ಕೇಕ್ ತುಂದು ಉಸಿರುಗಟ್ಟಿ ಸತ್ತ ಎಂದು ಸಹೋದರಿಯರು ಮೊದಲಿಗೆ ನಾಟಕವಾಡಿದ್ದರು. ಆದ್ರೆ ತಾಯಿಗೆ ಈ ಬಗ್ಗೆ ಅನುಮಾನ ಬಂದು ತನಿಖೆ ನಡೆಸಿದ ನಂತರ ಸಹೋದರಿಯರ ಕೃತ್ಯ ಬಯಲಾಗಿದೆ.

    ಇಬ್ಬರು ಸಹೋದರಿಯರ ಮೇಲೂ ಕೊಲೆ ಹಾಗೂ ಮಾರಣಾಂತಿಕವಾಗಿ ಹಲ್ಲೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇವರ ಆರೋಪ ಸಾಬೀತಾದರೆ ಪೆರೋಲ್ ಇಲ್ಲದೇ ತಮ್ಮ ಜೀವನ ಪರ್ಯಂತ ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದು ವರದಿಯಾಗಿದೆ.

  • ತಮ್ಮನ ಸಾವು, ಅಪ್ಪ ಇನ್ನೊಂದು ಮದ್ವೆಯಾಗಿಬಿಡ್ತಾರೆಂದು ನವಜಾತ ಗಂಡುಮಗುವನ್ನ ಅಪಹರಿಸಿದ ಸಹೋದರಿಯರು!

    ತಮ್ಮನ ಸಾವು, ಅಪ್ಪ ಇನ್ನೊಂದು ಮದ್ವೆಯಾಗಿಬಿಡ್ತಾರೆಂದು ನವಜಾತ ಗಂಡುಮಗುವನ್ನ ಅಪಹರಿಸಿದ ಸಹೋದರಿಯರು!

    ಲಕ್ನೋ: ರಾಜಸ್ಥಾನದ ಭರತ್‍ಪುರ್‍ನ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶುವನ್ನ ಕಳ್ಳತನ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿ ಪೊಲೀಸರು ಇಬ್ಬರು ಮಹಿಳೆಯರನ್ನ ಬಂಧಿಸಿದ್ದಾರೆ.

    ಮಹಿಳೆಯರು ಕಳ್ಳತನ ಮಾಡಿ ಮೂರು ದಿನಗಳ ಬಳಿಕ ಫೀಡಿಂಗ್ ಬಾಟಲ್ ಮತ್ತು ಒಂದು ಪತ್ರದ ಜೊತೆಗೆ ಮಗುವನ್ನ ರಸ್ತೆ ಬದಿಯಲ್ಲಿ ಬಿಟ್ಟುಹೋಗಿದ್ದರೆಂದು ವರದಿಯಾಗಿದೆ. ಆರೋಪಿಗಳನ್ನ ಶಿವಾನಿ ದೇವಿ(23) ಹಾಗೂ ಪ್ರಿಯಾಂಕಾ ದೇವಿ(20) ಎಂದು ಗುರುತಿಸಲಾಗಿದೆ. ತಮ್ಮ 12 ವರ್ಷದ ಸಹೋದರ 2 ವರ್ಷಗಳ ಹಿಂದೆ ಮೃತಪಟ್ಟಿದ್ದ. ಹೀಗಾಗಿ ತಂದೆ ಎರಡನೇ ಮದುವೆಯಾಗಲು ಮುಂದಾಗಿದ್ದು, ಇದರಿಂದ ನಮ್ಮ ತಾಯಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಗಂಡು ಮಗುವೊಂದನ್ನ ಉಡುಗೊರೆಯಾಗಿ ನೀಡಬೇಕೆಂದಿದ್ದೆವು ಎಂದು ಆರೋಪಿಗಳು ಪೊಲೀಸರ ಬಳಿ ಹೇಳಿದ್ದಾರೆ.

     

    ಜನವರಿ 10ರಂದು ಮಹಿಳೆಯರು ಮಗುವನ್ನ ಕಳ್ಳತನ ಮಾಡಿದ್ದರು. ಆದ್ರೆ ಪೊಲೀಸರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ ಎಂದು ದಿನಪತ್ರಿಕೆಯಲ್ಲಿ ಓದಿದ ನಂತರ ಭಯಗೊಂಡಿದ್ದರು. ಹೀಗಾಗಿ ಜನವರಿ 13ರಂದು, ಈ ಮಗುವನ್ನ ಪತ್ತೆ ಮಾಡಿದವರು ಜನವರಿ 10ರಂದು ಮಗು ಕಳ್ಳತನವಾಗಿತ್ತು ಎಂದು ಪೊಲೀಸರಿಗೆ ತಿಳಿಸಿ ಎಂದು ಕಾಗದದಲ್ಲಿ ಬರೆದು ರಾರಾಹ್ ಗ್ರಾಮದ ಬಳಿ ಮಗುವನ್ನ ಬಿಟ್ಟುಹೋಗಿದ್ದರು.

    ಆಸ್ಪತ್ರೆಯ ಸಿಸಿಟಿವಿ ದೃಶ್ಯವಳಿಗಳ ಆಧಾರದ ಮೇಲೆ ಸಹೋದರಿಯರನ್ನ ಗುರುತಿಸಲಾಯ್ತು. ಇಬ್ಬರೂ ಸಹೋದರಿಯರು ಸ್ಕೂಟರ್‍ನಲ್ಲಿ ಬಂದಿದ್ದರು. ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಇದ್ದ ವ್ಯಕ್ತಿ ವಾಹನದ ನೋಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಂಡಿದ್ದರು. ನಾವು ಯುವತಿಯರನ್ನ ಅವರ ಸ್ವಗ್ರಾಮವಾದ ಮಥುರಾದ ಸ್ವರೂಪ ನೌಗಾಂವ್‍ನಿಂದ ಬಂಧಿಸಿದ್ದೇವೆ. ಐಪಿಸಿ ಸೆಕ್ಷನ್ 363ರ ಅಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಭರತ್‍ಪುರ್ ಎಸ್‍ಪಿ ಅನಿಲ್ ಕುಮಾರ್ ಹೇಳಿದ್ದಾರೆ.

    ಮಹಿಳೆಯರು ಭರತ್‍ಪುರ್‍ನಲ್ಲಿ ಹುಡುಕಾಡಿ 30 ವರ್ಷದ ಮನೀಷ್ ಎಂಬವರ ಮಗನನ್ನ ಟಾರ್ಗೆಟ್ ಮಾಡಿದ್ದರು. ಮನೀಷ್ ಪತ್ನಿ ಜನವರಿ 10ರಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಪಹಾರಿ ಟೌನ್ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಹೆಚ್ಚಿನ ಆರೈಕೆಗೆ ತಾಯಿ-ಮಗುವನ್ನ ಮಥುರಾ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಧ್ಯಾಹ್ನ 2.30ರ ವೇಳೆಯಲ್ಲಿ ತಾಯಿ ಮಲಗಿದ್ದ ವೇಳೆ ಮಹಿಳೆಯರು ಮಗುವನ್ನ ಕಳ್ಳತನ ಮಾಡಿದ್ದರು. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಮನೀಷ್ ಅವರ ಮಾವ ಸಾಧಿಕ್ ಮೇವ್ ಈ ಬಗ್ಗೆ ದೂರು ದಾಕಲಿಸಿದ್ದರು.

    ಮಹಿಳೆಯರು ಮೊದಲಿಗೆ ಮಗುವನ್ನ ದತ್ತು ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಆ ಮೂಲಕ ತನ್ನ ತಂದೆ ಲಕ್ಷ್ಮಣ್ ಸಿಂಗ್ ಗಂಡು ಮಗುವಿಗಾಗಿ ಮತ್ತೊಂದು ಮದುವೆಯಾಗೋದನ್ನ ತಡೆಯಬಹುದು ಎಂದುಕೊಂಡಿದ್ದರು. ಇದಕ್ಕಾಗಿ ಬಡವರಿಂದ ಯಾವುದಾದ್ರೂ ಮಗುವನ್ನ ಕೊಂಡುಕೊಳ್ಳಬಹುದಾ ಎಂದು ಹಲವು ಅಸ್ಪತ್ರೆಗಳಲ್ಲಿ ನರ್ಸ್‍ಗಳನ್ನ ವಿಚಾರಿಸಿದ್ದರು. ಆದ್ರೆ ದತ್ತು ಪಡೆಯಲು ದೀರ್ಘವಾದ ಕಾನೂನು ಪ್ರಕ್ರಿಯೆ, ಕಠಿಣವಾದ ನಿಯಮಗಳು ಹಾಗೂ ಮಗು ಮಾರಾಟಕ್ಕೆ ಶಿಕ್ಷೆ ಈ ಎಲ್ಲವನ್ನೂ ಮನಗಂಡು ದತ್ತು ತೆಗೆದುಕೊಳ್ಳೋ ಯೋಚನೆಯನ್ನ ಕೈಬಿಟ್ಟಿದ್ದರು ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

    ಆರೋಪಿ ಶಿವಾನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತನ್ನ ಪತಿಯೊಂದಿಗೆ ವಾಸವಿದ್ದಾಳೆ. ಮತ್ತೋರ್ವ ಆರೋಪಿ ಪ್ರಿಯಾಂಕಾ ಕೂಡ ಮದುವೆಯಾಗಿದ್ದು, ಆಗ್ರಾದಲ್ಲಿ ವಾಸವಿದ್ದಾಳೆ. ಪದವಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ವರದಿಯಾಗಿದೆ.

  • ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

    ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

    ಬಾಗಲಕೋಟೆ: ಅವರಿಬ್ಬರೂ ಪ್ರತಿಭಾವಂತ ಯುವತಿಯರು, ಅವರಿಗೆ ಇರಲಿಕ್ಕೆ ಒಂದು ಸ್ವಂತ ಮನೆಯೂ ಇಲ್ಲ. ಸದ್ಯ ಅಜ್ಜಿಯ ಮನೆಯಲ್ಲೇ ವಾಸಿಸ್ತಿರೋ ಆ ಯುವತಿಯರು, ಫೇಮಸ್ ಕಿಕ್ ಬಾಕ್ಸರ್ ಆಗಬೇಕು, ನಂತ್ರ ಒಳ್ಳೆಯ ಕೆಲಸ ಹಿಡಿದು ತಮ್ಮ ಬದುಕಿಗಾಗಿ ಜೀವನ ಸವೆಸುತ್ತಿರೋ ಅಣ್ಣ, ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ಹೊಂದಿದ್ದಾರೆ. ಆದ್ರೆ ಸದ್ಯ ಆ ಯುವತಿಯರ ಸಾಧನೆಗೆ ಬಡತನ ಮುಳುವಾಗಿದೆ. ತಂಗಿಯರ ಓದಿಗಾಗಿ ಕಲಿಕೆ ಬಿಟ್ಟ ಅಣ್ಣ, ಕೂಲಿ ಮಾಡ್ತಾ ಇಬ್ಬರು ತಂಗಿಯರಿಗೆ ಶಿಕ್ಷಣ ಕೊಡಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸ್ತಿದ್ದಾರೆ. ತಂಗಿಯರ ಮುಂದಿನ ಶಿಕ್ಷಣಕ್ಕೆ ಕೊಡುವಷ್ಟು ಅಣ್ಣನ ಬಳಿ ದುಡ್ಡಿಲ್ಲ. ತಂಗಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಸಹಾಯ ಬೇಡ್ತಿದ್ದಾರೆ.

    ಸಾಧನೆಯ ಕನಸ್ಸುಗಳನ್ನೇ ಹೊತ್ತ ಸೋದರಿಯರಿಬ್ಬರ ಶಿಕ್ಷಣಕ್ಕಾಗಿ ಅಣ್ಣ ಕಲಿಕೆ ಬಿಟ್ಟು ಕೂಲಿ ಮಾಡಲು ಮುಂದಾಗಿದ್ದಾರೆ. ಎಳೆಯ ವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡು ಅಣ್ಣ-ತಂಗಿಯರು ಅಜ್ಜಿಯ ಮನೆಯಲ್ಲೇ ವಾಸಿಸುತ್ತಿದ್ದಾರೆ. ಅಂದಹಾಗೆ ಸಾಧನೆಯ ಮೆಡಲ್ ಹಾಗೂ ಸರ್ಟಿಫೀಕೆಟ್ ಹಿಡಿದ ಈ ಸೋದರಿಯರ ಹೆಸರು ಶಿಲ್ಪಾ ಹಾಗೂ ಲಕ್ಷ್ಮಿ. ಇವರ ಸಾಧನೆಯ ಹಿಂದಿರುವ ಶಕ್ತಿಯೇ ಅಣ್ಣ ವಿಠ್ಠಲ್ ಹಣಮರ್. ಈ ಮೂವರು ಒಡಹುಟ್ಟಿದ್ದ ಅಣ್ಣ, ತಂಗಿಯರು. ಸದ್ಯ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದ ಅಜ್ಜಿ ಮಲ್ಲಮ್ಮ ಮನೆಯಲ್ಲಿ ವಾಸಿಸುತ್ತಿದ್ದಾರೆ.

    ಹತ್ತು ವರ್ಷದ ಹಿಂದೆ ವಿಠ್ಠಲ್ ಹನಮರ್ ತಂದೆ ತಾಯಿ ತೀರಿ ಹೋದ್ರು. ಆಗ ಸಂಸಾರದ ನೊಗ ಹೊತ್ತ ವಿಠ್ಠಲ್, ಸೆಕೆಂಡ್ ಪಿಯುಸಿಯಲ್ಲಿ ತನ್ನ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು, ತಮ್ಮ ತಂಗಿಯರಾದ ಶಿಲ್ಪಾ ಹಾಗೂ ಲಕ್ಷ್ಮಿಗೆ ಶಿಕ್ಷಣ ಕೊಡಿಸಲು, ಕೂಲಿ ಕೆಲ್ಸಕ್ಕೆ ಇಳಿದ್ರು. ಸ್ವಂತ ಮನೆಯೂ ಇಲ್ಲದ ಈ ಬಡಪಾಯಿಗಳಿಗೆ ಅಜ್ಜಿಯ ಮನೆಯೇ ಜೀವನಾಧಾರ. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ, ಕಿಕ್ ಬಾಕ್ಸಿಂಗ್‍ನಲ್ಲಿ ರಾಜ್ಯ ಮಟ್ಟದಲ್ಲಿ ಸಾಕಷ್ಟು ಮೆಡಲ್ ಗಳಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಭಾಗವಹಿಸಿ ಸಾಧನೆ ಮಾಡಿದ್ದಾರೆ. ಆದ್ರೆ ಇದೀಗ ತಂಗಿಯರ ಮುಂದಿನ ಶಿಕ್ಷಣಕ್ಕೆ ಅಣ್ಣನ ಬಳಿ ದುಡ್ಡಿಲ್ಲ.

    ಹೌದು. ಒಂದು ಕಡೆ ಬೆಂಬಿಡದೇ ಕಾಡ್ತಿರೋ ಬಡತನ, ಮತ್ತೊಂದೆಡೆ ಫೇಮಸ್ ಕಿಕ್ ಬಾಕ್ಸರ್ ಆಗಬೇಕು ನಂತ್ರ ಒಳ್ಳೆಯ ಕೆಲಸ ಹಿಡಿಯಬೇಕೆಂಬ ಕನಸು ಹೊಂದಿರುವ ತಂಗಿಯರ ಸಾಧನೆಗೆ ಹೆಗಲಾಗಬೇಕೆಂಬ ಮಹಾದಾಸೆ ಹೊಂದಿರುವ ವಿಠ್ಠಲ್, ಮದುವೆಯಾಗದೇ ಕೂಲಿ ಮಾಡಿ ಜೀವ ಸಾಗಿಸ್ತಿದ್ದಾರೆ. ಕಲಾ ವಿಭಾದ ಮೂರನೇಯ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ಶಿಲ್ಪಾ ಹಾಗೂ ಲಕ್ಷ್ಮಿ ಮುಂದೆ ಬಿಪಿಎಡ್ಡ್ ಮಾಡಿ, ದೈಹಿಕ ಶಿಕ್ಷಕಿಯರಾಗಬೇಕು ಅಥವಾ ಯಾವುದಾದರೂ ಒಳ್ಳೆಯ ಕೆಲಸ ಹಿಡಿದು, ಅಣ್ಣ ಹಾಗೂ ಅಜ್ಜಿಯನ್ನ ಚೆನ್ನಾಗಿ ನೋಡಿಕೊಳ್ಬೇಕೆಂಬ ಬೆಟ್ಟದಷ್ಟು ಆಸೆ ಹೊಂದಿದ್ದಾರೆ.

    ಆದ್ರೆ ಅಣ್ಣ ವಿಠ್ಠಲ್ ಹನಮರ್ ಬಳಿ ದುಡ್ಡಿಲ್ಲ. ಹಾಗಾಗಿ ತಂಗಿಯರಿಬ್ಬರ ಮುಂದಿನ ವಿದ್ಯಾಭ್ಯಾಕ್ಕಾಗಿ ಸಹಾಯ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಇತ್ತ ಅಜ್ಜಿ ಇರೋವರೆಗೂ ಅವರ ಮನೆಯಲ್ಲಿದ್ದೇವೆ. ಒಂದು ವೇಳೆ ಅಜ್ಜಿ ತೀರಿ ಹೋದ್ರೆ ನಾವು ಅನಾಥರಾಗುತ್ತೇವೆ. ಹಾಗಾಗಿ ಸರ್ಕಾರ ಅಥವಾ ಸಂಘ ಸಂಸ್ಥೆಯವರು ಸಹಾಯದಿಂದ ನಮಗೆ ಒಂದು ಆಶ್ರಯ ಮನೆಯನ್ನು ಒದಗಿಸಿ ಎಂದು ಮನವಿ ಮಾಡಿಕೊಳ್ತಿದ್ದಾರೆ. ಇನ್ನು ಇದೇ ತಿಂಗಳು 20ರಂದು ಶಿವಮೊಗ್ಗಾದಲ್ಲಿ ನಡೆಯೋ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಶಿಲ್ಪಾ ಹಾಗೂ ಲಕ್ಷ್ಮಿಗೆ ಆರ್ಥಿಕ ಸಹಾಯ ಮಾಡಿ ಅಂತ ಊರಿನ ಜನ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಸಾಧನೆಯ ಕನಸುಗಳನ್ನೇ ಹೊತ್ತ ಸೋದರಿಯರು, ಈ ಸೋದರಿಯರಿಬ್ಬರ ಸಾಧನೆಗೆ ಹೆಗಲಾಬೇಕೆಂಬ ಅಣ್ಣ. ಒಟ್ಟಿನಲ್ಲಿ ಈ ಮಾದರಿ ಅಣ್ಣ ತಂಗಿಯರ ಸ್ಥಿತಿಗೆ ಯಾರಾದ್ರೂ ತಕ್ಕಮಟ್ಟಿನ ಸಹಾಯಹಸ್ತ ಚಾಚಲಿ ಅನ್ನೋದು ನಮ್ಮ ಮನವಿ.

    https://www.youtube.com/watch?v=IrNmFWFRj5M

  • ಮನೆ ಹೊರಗಡೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಯರ ಶವ ಪತ್ತೆ

    ಮನೆ ಹೊರಗಡೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಹೋದರಿಯರ ಶವ ಪತ್ತೆ

    ನೊಯ್ಡಾ: ಮನೆ ಹೊರಗಡೆ ಇದ್ದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆಯಾದ ಘಟನೆ ಇಂದು ಬೆಳಗ್ಗೆ ದೆಹಲಿ ಬಳಿಯ ನೋಯ್ಡಾದಲ್ಲಿ ನಡೆದಿದೆ.

    ಇಲ್ಲಿನ ಬರೋಲಾ ಗ್ರಾಮದಲ್ಲಿ ಸೆಕ್ಟರ್ 49 ರಲ್ಲಿ ವಾಸವಿದ್ದ 18 ಹಾಗೂ 13 ವರ್ಷದ ಸಹೋದರಿಯರು ಸಾವನ್ನಪ್ಪಿದ್ದಾರೆ. ಮುಂಜಾನೆ 4 ಗಂಟೆ ವೇಳೆಯಲ್ಲಿ ಪೋಷಕರಿಗೆ ಶವ ಪತ್ತೆಯಾಗಿದೆ. ದೂರದ ಸಂಬಂಧಿ ರವಿ ಹಾಗೂ ಆತನ ಕುಟುಂಬಸ್ಥರು ಹುಡುಗಿಯರನ್ನ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

    ರವಿಗೆ ಈಗಾಗಲೇ ಮದುವೆಯಾಗಿದ್ದು, ಹಿರಿಯ ಸಹೋದರಿಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎಂದು ಹುಡುಗಿಯರ ಪೋಷಕರು ಹೇಳಿದ್ದಾರೆ. ಕಳೆದ ಸಂಜೆಯೂ ಜಗಳವಾಗಿದ್ದು, ರವಿ ಕುಟುಂಬಸ್ಥರು ಹುಡುಗಿಯರಿಗೆ ತೊಂದರೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಹಿರಿಯ ಅಧಿಕಾರಿ ಲವ್ ಕುಮಾರ್, ನಾವು ಈ ಬಗ್ಗೆ ತನಿಖೆ ಮಾಡುತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದೇವೆ. ಇದು ಕೊಲೆಯೋ ಆತ್ಮಹತ್ಯೆಯೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ಹುಡುಗಿಯರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಹುಡುಗಿಯರ ಸಾವಿನಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.