ವಾಷಿಂಗ್ಟನ್: ಕೆಲ ಅವಳಿ ಸಹೋದರರು, ಸಹೋದರಿಯರು ಒಂದೇ ದಿನ ಮದುವೆಯಾಗುವುದು ಸಾಮಾನ್ಯವಾಗಿದೆ. ಆದರೆ ಅಮೆರಿಕದ ಇಬ್ಬರು ಅವಳಿ ಸಹೋದರಿಯರು ಒಂದೇ ದಿನ ಅವಳಿ ಸಹೋದರರನ್ನು ವಿವಾಹವಾಗಿದ್ದರು. ಇದೀಗ ಇಬ್ಬರು ಸಹೋದರಿಯರು ಒಂದೇ ದಿನ ಗರ್ಭಿಣಿಯಾಗಿರುವುದನ್ನು ಘೋಷಣೆ ಮಾಡಿರುವುದು ವಿಶೇಷವಾಗಿದೆ.
ಬ್ರಿಟಾನಿ ಮತ್ತು ಬ್ರಿಯಾನಾ ಡೀನ್ ಇಬ್ಬರು ಅವಳಿ ಸಹೋದರಿಯರು ಒಟ್ಟಿಗೆ ಗರ್ಭಿಣಿಯಾಗಿದ್ದಾರೆ. ಇವರಿಬ್ಬರು ಒಂದೇ ದಿನ ಜೋಶ್ ಮತ್ತು ಜೆರೆಮಿ ಸ್ಯಾಲಿಯರ್ಸ್ ಎಂಬ ಇಬ್ಬರು ಅವಳಿ ಸಹೋದರರನ್ನು ಮದುವೆಯಾಗಿದ್ದರು. ಈ ದಂಪತಿ @salyerstwins ಎಂಬ ಇನ್‍ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಇಲ್ಲಿ ತಮ್ಮ ಟ್ಬಿನ್ಸ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ಜೋಡಿಗಳು ಫೋಟೋವನ್ನು ಶೇರ್ ಮಾಡುವ ಮೂಲಕ ಇಬ್ಬರು ಒಟ್ಟಿಗೆ ಗರ್ಭಿಣಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ದಂಪತಿ ಈ ಪೋಸ್ಟನ್ನು ಆಗಸ್ಟ್ 14 ರಂದು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ನಾಲ್ವರು ಒಂದೇ ಬಣ್ಣದ ಬಿಕಿನಿ ಉಡುಪನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. “ಗೆಸ್ ಮಾಡಿ, ಇಬ್ಬರೂ ದಂಪತಿ ಗರ್ಭಿಣಿಯಾಗಿದ್ದಾರೆ” ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ಅಲ್ಲದೇ “ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ರೋಮಾಂಚನಗೊಂಡಿದ್ದೇವೆ ಮತ್ತು ಕೃತಜ್ಞರಾಗಿರುತ್ತೇವೆ. ನಮ್ಮ ಮಕ್ಕಳು ಸೋದರಸಂಬಂಧಿಗಳು ಮಾತ್ರವಲ್ಲದೆ ಒಡಹುಟ್ಟಿದವರು ಆಗುತ್ತಾರೆ. ನಾವು ಅವರ ಭೇಟಿಗಾಗಿ ಕಾಯಲು ಸಾಧ್ಯವಾಗುತ್ತಿಲ್ಲ” ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮಾಡಿ ಮೂರು ದಿನಗಳಾಗಿದ್ದು, ಇವರೆಗೂ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.
ನೂರಾರು ಮಂದಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಕೆಲವರು “ನಿಮಗಿಬ್ಬರಿಗೂ ಅವಳಿ ಮಕ್ಕಳು ಆಗುವ ಸಾಧ್ಯತೆಗಳಿವೆಯೇ” ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಒಂದೇ ವೇಳೆ ಅವಳಿ ಮಕ್ಕಳಾದರೆ ಅದು ಅದ್ಭುತವಾಗುತ್ತದೆ ಎಂದು ಹೇಳಿದ್ದಾರೆ. ಎರಡು ಜೋಡಿಗಳು 2018ರಲ್ಲಿ ಒಟ್ಟಿಗೆ ಒಂದೇ ದಿನ ಮದುವೆಯಾಗಿದ್ದರು.
ಲಕ್ನೋ: ಧಾರಾವಾಹಿ ನೋಡುವ ವಿಚಾರಕ್ಕೆ ಜಗಳವಾಡಿಕೊಂಡು ಮೂವರು ಸಹೋದರಿಯರು ವಿಷ ಸೇವಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ ಜಿಲ್ಲೆಯ ಭಲಸ್ವ ಗ್ರಾಮದಲ್ಲಿ ನಡೆದಿದೆ.
ವಿಷ ಸೇವಿಸಿದ ಸಹೋದರಿಯರನ್ನು ರೀಟಾ, ಶೀತಲ್ ಮತ್ತು ತನು ಎಂದು ಗುರುತಿಸಲಾಗಿದೆ. ಇದರಲ್ಲಿ ವಿಷ ಸೇವಿಸಿ ರೀಟಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶೀತಲ್ ಮತ್ತು ತನು ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ವರದಿಯ ಪ್ರಕಾರ, ಈ ಮೂವರು ಯುವತಿಯರು ಓರ್ವ ಕೂಲಿ ಕಾರ್ಮಿಕನ ಮಕ್ಕಳಾಗಿದ್ದು, ತಂದೆ ಪಿಒಪಿ ಕೆಲಸಗಾರರಾಗಿದ್ದಾರೆ. ಈ ಮೂವರು ಎಂದಿನಂತೆ ಮನೆ ಕೆಲಸ ಮುಗಿಸಿ ಟಿವಿ ನೋಡಲು ಕುಳಿತುಕೊಂಡಿದ್ದಾರೆ. ಈ ವೇಳೆ ಮೂವರು ತನ್ನ ನೆಚ್ಚಿನ ಧಾರಾವಾಹಿಯನ್ನೇ ನೋಡಬೇಕು ಎಂದು ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಜಗಳ ಅತಿರೇಕಕ್ಕೆ ಹೋಗಿ ಮನೆಯಲ್ಲೇ ಇದ್ದ ವಿಷವನ್ನು ತೆಗೆದುಕೊಂಡು ತನ್ನ ನೆಚ್ಚಿನ ಧಾರಾವಾಹಿ ಹಾಕದಿದ್ದರೆ, ವಿಷ ಕುಡಿಯುತ್ತೇನೆ ಎಂದು ಒಬ್ಬರಿಗೊಬ್ಬರು ಬೆದರಿಕೆ ಹಾಕಿಕೊಂಡಿದ್ದಾರೆ.
ಈ ವೇಳೆ ಬೆದರಿಕೆ ಹಾಕುವಾಗ ರೀಟಾ ನಿಜವಾಗಿಯೇ ವಿಷ ಕುಡಿದಿದ್ದಾಳೆ. ಆ ನಂತರ ಉಳಿದ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಇದನ್ನು ತಿಳಿದ ಊರಿನವರು ಹಾಗೂ ಕುಟುಂಬಸ್ಥರು ಮೂವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ರೀಟಾ ಸಾವನ್ನಪ್ಪಿದರೆ, ಶೀತಲ್ ಮತ್ತು ತನು ಸ್ಥಿತಿ ಗಂಭೀರವಾಗಿದೆ. ಈ ವಿಚಾರ ತಿಳಿದ ಊರಿನ ಗ್ರಾಮಸ್ಥರು ಶಾಕ್‍ಗೆ ಒಳಗಾಗಿದ್ದು, ಎಲ್ಲರೂ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ರೀಟಾ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದೇವೆ. ವರದಿ ಬಂದ ನಂತರ ಹೆಚ್ಚಿನ ತನಿಖೆ ಮಾಡುತ್ತೇನೆ. ಇನ್ನಿಬ್ಬರ ಪರಿಸ್ಥಿತಿ ತೀರ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ. ಈ ಸಂಬಂಧ ನಂಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವೊಮ್ಮೆ ತೀವ್ರವಾಗಿ ಹಂಬಲಿಸಿ ಸಾಕಷ್ಟು ತಯಾರಿ ನಡೆಸಿದರೂ ಸಿನಿಮಾ ಅವಕಾಶವೆಂಬುದು ಅದೆಷ್ಟೋ ನಟ ನಟಿಯರ ಪಾಲಿಗೆ ಸತಾಯಿಸಿ ಬಿಡುತ್ತೆ. ಇದೀಗ ಯಶಸ್ವಿಯಾಗಿರೋ ಅದೆಷ್ಟೋ ಕಲಾವಿದರ ಹಿನ್ನೆಲೆಯಲ್ಲಿ ಅಂಥಾದ್ದೇ ಸೈಕಲ್ಲು ಹೊಡೆದ ಕಥಾನಕಗಳಿದ್ದಾವೆ. ಆದರೆ ಇನ್ನೂ ಕೆಲ ಅದೃಷ್ಟವಂತರ ಪಾಲಿಗೆ ಅದೃಷ್ಟವೆಂಬುದು ಇದ್ದಲ್ಲಿಗೇ ಸಾಗಿ ಬಂದು ಬರಸೆಳೆದುಕೊಳ್ಳುತ್ತದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ಮೂಲಕ ನಟಿಯರಾಗೋ ಅವಕಾಶ ಗಿಟ್ಟಿಸಿಕೊಂಡು ಈಗ ಬೇಡಿಕೆಯ ನಾಯಕಿಯರಾಗಿರುವ ಅದ್ವಿತಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಎಂಬ ಅವಳಿ ಸಹೋದರಿಯರು ಆ ಸಾಲಿಗೆ ಸೇರಿಕೊಳ್ಳುತ್ತಾರೆ. ಇದೀಗ ಎಲ್ಲರ ಕುತೂಹಲಕ್ಕೆ ಕಾರಣರಾಗಿರುವ ಈ ಅವಳಿ ಸೋದರಿಯರ ಬಗೆಗಿನ ಕೆಲ ಅಚ್ಚರಿಯ ಸಂಗತಿಗಳು ಇಲ್ಲಿವೆ.
ಸಿನಿಮಾ ನಟಿಯರಾಗೋದೆಂದರೆ ಅದೇನು ಸಲೀಸಿನ ಸಂಗತಿಯಲ್ಲ. ಅದೇನೇ ಟ್ಯಾಲೆಂಟಿದ್ದರೂ ಕೂಡಾ ಮೊದಲ ಅವಕಾಶ ಗಿಟ್ಟಿಸಿಕೊಳ್ಳಲು ಅದೆಷ್ಟೋ ಗಾವುದ ದೂರ ಸಾಗಿ ಬರಬೇಕಾಗುತ್ತೆ. ಅಲ್ಲೆದುರಾಗೋ ನೋವು, ನಿರಾಸೆಗಳನ್ನು ನುಂಗಿಕೊಂಡು ಮುಂದುವರೆದರಷ್ಟೇ ಬದುಕು ಗುರಿಯ ನೇರಕ್ಕೆ ಬಂದು ನಿಲ್ಲುತ್ತದೆ. ಆದರೆ ಯಾವುದೋ ದಾರಿ ಮತ್ಯಾವುದೋ ನಿರೀಕ್ಷಿಸದ ನಿಲ್ದಾಣಕ್ಕೆ ತಂದು ಬಿಡುವಂಥ ಮಿರ್ಯಾಕಲ್‍ಗಳೂ ವಿರಳವೆಂಬಂತೆ ಘಟಿಸುತ್ತಿರುತ್ತವೆ. ಬಹುಶಃ ಅಂಥಾದ್ದೊಂದು ಪವಾಡದಂಥಾ ಅವಕಾಶ ಅರಸಿ ಬರದೇ ಇದ್ದಿದ್ದರೆ ಈವತ್ತಿಗೆ ಮಂಗಳೂರು ಮೂಲದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿಯೆಂಬ ಅವಳಿಗಳು ಎಂಎನ್‍ಸಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಅನಾಮಿಕರಾಗಿಯೇ ಉಳಿದು ಬಿಡುತ್ತಿದ್ದರೇನೋ.
ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರವನ್ನು ನೋಡಿದ ಯಾರೇ ಆದರೂ ಅದ್ವಿತಿ ಮತ್ತು ಅಶ್ವಿತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅದರಲ್ಲಿ ರಾಧಿಕಾ ಪಂಡಿತ್ ಸ್ನೇಹಿತೆಯರಾಗಿ ನಟಿಸಿದ್ದ ಇವರದ್ದು ಡಬಲ್ ರೋಲ್ ಅಂತ ಬಹುತೇಕರು ಅಂದುಕೊಂಡಿದ್ದರೆ ಅದರಲ್ಲಿ ಅಚ್ಚರಿಯಾಗುವಂಥಾದ್ದೇನೂ ಇಲ್ಲ. ಅಂಥಾ ಅಪರೂಪದ ಚಹರೆಯೊಂದಿಗೆ ಈ ಸೋದರಿಯರು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಯಾರೇ ಕಲಾವಿದರಾದರೂ ಸಾಮಾಜಿಕ ಜವಾಬ್ದಾರಿಗಳಿರುತ್ತವೆ. ತಮ್ಮ ಕಷ್ಟಕೋಟಲೆಗಳಾಚೆಗೂ ಸಿನಿಮಾ ನೋಡಿ ಆರಾಧಿಸುವ ಜನರ ಸಂಕಷ್ಟಗಳಿಗೆ ಮಿಡಿಯುವವರೇ ನಿಜವಾದ ನಾಯಕ ನಾಯಕಿಯರಾಗಿಯೂ ಬಿಂಬಿತರಾಗುತ್ತಾರೆ. ಈ ನಿಟ್ಟಿನಲ್ಲಿ ನೋಡ ಹೋದರೆ ಕೊರೋನಾ ಬಾಧೆಯಿಂದ ಗೃಹ ಬಂಧನಕ್ಕೀಡಾಗಿ ದಿಕ್ಕೆಟ್ಟವರಿಗೆ ಸಹಾಯ ಮಾಡುವ ಮೂಲಕವೂ ಅದ್ವಿತಿ ಮತ್ತು ಅಶ್ವಿತಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.
ಅದ್ವಿತಿ ಮತ್ತು ಅಶ್ವಿತಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಚೆಂದಗೆ ಅರಿತುಕೊಂಡಿದ್ದಾರೆ. ಆದ್ದರಿಂದಲೇ ತಮ್ಮ ಸಿನಿಮಾ ತಯಾರಿಯೂ ಸೇರಿದಂತೆ ಎಲ್ಲವನ್ನೂ ಬದಿಗೊತ್ತಿ ಇತ್ತೀಚೆಗೆ ಸ್ಲಂ ಏರಿಯಾಗಳ ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ. ಈಗ ಎಲ್ಲೆಡೆ ಒಂದಷ್ಟು ಮಾನವೀಯ ಮನಸುಗಳು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿವೆ. ಆದರೆ ಅದರಾಚೆಗೂ ಅಗತ್ಯವಿರುವವರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಇವರಿಬ್ಬರೂ ಒಳ ಪ್ರದೇಶಗಳ ಸ್ಲಂ ಏರಿಯಾಗಳನ್ನು ಹುಡುಕಿ ಸಹಾಯಹಸ್ತ ಚಾಚಿದ್ದಾರೆ. ಪ್ರತಾಪ್, ಶಿವಾಜಿ ಮತ್ತು ಚೇತನ್ ಎಂಬವರ ಸಹಾಯದೊಂದಿಗೆ ಈ ಸಾರ್ಥಕ ಕೆಲಸವನ್ನು ಅವಳಿ ಸಹೋದರಿಯರು ಮಾಡಿದ್ದಾರೆ.
ಹೀಗೆ ಸಹಾಯ ಹಸ್ತ ನೀಡುವ ಪ್ರಸ್ತಾಪವನ್ನು ಸಾಮಾಜಿಕ ಜಾಲತಾಣದ ಮೂಲಕ ಅದ್ವಿತಿ ಮತ್ತಯು ಅಶ್ವಿತಿ ಅಭಿಮಾನಿಗಳ ಮುಂದಿಟ್ಟಿದ್ದರಂತೆ. ಅದಕ್ಕೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಅದನ್ನು ಅವಶ್ಯಕತೆ ಇರುವವರಿಗೆ ಮುಟ್ಟಿಸಲಾಗಿದೆ. ಹಾಗಂತ ಅವರು ಅಷ್ಟಕ್ಕೇ ಸುಮ್ಮನಾಗಿಲ್ಲ. ಮುಂದೆ ಇನ್ನೊಂದಷ್ಟು ನೆರವು ನೀಡಲೂ ಕಾರ್ಯ ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ. ಅದರನ್ವಯ ಸ್ಲಂ ಪ್ರದೇಶದ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಪೌಂಶ್ಟಿಕಾಂಶಯುಕ್ತ ಆಹಾರದ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ಕೂ ನೀಲನಕ್ಷೆ ಸಿದ್ಧಗೊಂಡಿದೆ. ಈ ಮೂಲಕ ಸದ್ದಿಲ್ಲದೆ ಕೊರೋನಾ ಕಾಲದಲ್ಲಿ ದಿಕ್ಕೆಟ್ಟವರಿಗೆ ನೆರವಾಗಿವ ಮಹತ್ಕಾರ್ಯವನ್ನೂ ಚಾಲನೆಯಲ್ಲಿಟ್ಟಿದ್ದಾರೆ.
ಹೀಗೆ ಸಿನಿಮಾ, ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾಗಿರುವ ಈ ಅವಳಿ ಸೋದರಿಯರು ಸಾಗಿ ಬಂದ ಹಾದಿಯೇ ಭಿನ್ನವಾಗಿದೆ. ಸಾಮಾನ್ಯವಾಗಿ ಯಾರೇ ನಟನ ನಟಿಯರ ಹಿನ್ನೆಲೆ ಕೆದಕಿದರೆ ಅದಕ್ಕಾಗಿ ಅದೆಷ್ಟೋ ವರ್ಷಗಳಿಂದ ಕಂಡ ಕನಸಿನ ಕಥೆಯಿರುತ್ತದೆ. ಆದರೆ ಅದ್ವಿತಿ ಮತ್ತು ಅಶ್ವಿತಿಗೆ ಅಂಥಾ ಯಾವ ಇರಾದೆಯೂ ಇರಲಿಲ್ಲ. ಮಂಗಳೂರು ಸೀಮೆಯವರಾಗಿ ಅಲ್ಲಿಯೇ ವ್ಯಾಸಂಗ ಪೂರೈಸಿದ್ದ ಇವರಿಬ್ಬರಿಗೂ ಪ್ರತಿಷ್ಠಿತ ಕಂಪೆನಿಯ ಹೆಚ್‍ಆರ್ ಕೆಲಸ ಸಿಕ್ಕಿತ್ತು. ಆ ಪ್ರಪಂಚದಲ್ಲಿ ಮುಳುಗಿದ್ದವರಿಗೆ ನಟಿಯರಾಗಬೇಕೆಂಬ ಯಾವ ಮೋಹವೂ ಇರಲಿಲ್ಲ. ಆ ಕ್ಷೇತ್ರದಲ್ಲಿಯೇ ಮಹತ್ತರವಾದುದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದವರಿಗೆ ಅನಿರೀಕ್ಷಿತವಾಗಿ ಒದಗಿಬಂದಿದ್ದು ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ನಟಿಸೋ ಆಫರ್!
ಹಾಗೆ ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲಿ ಇವರಿಬ್ಬರೂ ಟ್ವಿನ್ಸ್ ಎಂಬ ಕಾರಣದಿಂದಲೇ ನಟಿಸೋ ಅವಕಾಶ ಒದಗಿ ಬಂದಿತ್ತು. ಆದರೆ ಆರಂಭದಲ್ಲಿ ಅದನ್ನು ನಿರಾಕರಿಸಿದದ್ದರಂತೆ. ಆ ಪಾತ್ರಕ್ಕೆ ಇವರಿಬ್ಬರೂ ಹೇಳಿ ಮಾಡಿಸಿದಂತಿದ್ದದ್ದರಿಂದ ಕಡೆಗೂ ನಿರ್ದೇಶಕರು ಒಪ್ಪಿಸಿದ್ದರಂತೆ. ನಂತರದ್ದೆಲ್ಲವೂ ಹೊಸಾ ಅನುಭವ. ರಾಧಿಕಾ ಸೇರಿದಂತೆ ಎಲ್ಲರೂ ಹೆಜ್ಜೆ ಹೆಜ್ಜೆಗೂ ಜೊತೆಗಿದ್ದು ಪೊರೆದಿದ್ದರಿಂದಾಗಿ ಅದ್ವಿತಿ ಮತ್ತು ಅಶ್ವಿತಿಗೆ ಸಿನಿಮಾ ನಟನೆಯ ಬಗ್ಗೆ ಮೆಲ್ಲಗೆ ಮೋಹ ಮೂಡಿಕೊಂಡಿತ್ತು. ಆ ಚಿತ್ರವೇ ಅವರಿಬ್ಬರಿಗೂ ವ್ಯಾಪಕ ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು. ಆ ನಂತರದಲ್ಲಂತೂ ಪ್ರತೀ ನಟಿಯರೂ ಬಯಸುವಂಥಾ ಅಪರೂಪದ ಅವಕಾಶವೇ ಈ ಅವಳಿ ಅಕ್ಕ ತಂಗಿಯರ ಕೈ ಹಿಡಿದಿತ್ತು.
ಪಿ.ಎಚ್ ವಿಶ್ವನಾಥ್ ನಿರ್ದೇಶನದ ಸುಳಿ ಎಂಬ ಕಲಾತ್ಮಕ ಚಿತ್ರದಲ್ಲಿ ಅದ್ವಿತಿ ಮತ್ತು ಅಶ್ವಿತಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು. ಅದು ಅವರ ಪಾಲಿಗೆ ಎರಡನೇ ಚಿತ್ರ. ಹಿರಿಯ ನಟ ಶ್ರೀನಾಥ್ ಮಕ್ಕಳಾಗಿ ನಟಿಸಿದ್ದ ಅವರಿಗೆ ಇದೊಂದು ಸವಾಲು. ಯಾಕೆಂದರೆ ಅದು ಹೆಜ್ಜೆ ಹೆಜ್ಜೆಗೂ ಭಿನ್ನ ಅಭಿವ್ಯಕ್ತಿಯನ್ನು ಬಯಸುವಂಥಾ ಪಾತ್ರ. ಇದಕ್ಕಾಗಿ ನಿರ್ದೇಶಕರು ನೀನಾಸಂ ತಂಡದಿಂದ ಒಂದು ತಿಂಗಳ ಕಾಲ ನಟನಾ ತರಬೇತಿ ಕೊಡಿಸಿದ್ದರಂತೆ. ಅದಾದ ನಂತರ ಮಂಗಳೂರು ಶೈಲಿಯ ಕನ್ನಡದಾಚೆಗಿನ ಮತ್ತೊಂದು ಧಾಟಿಯ ಕನ್ನಡವನ್ನು ಅಭ್ಯಸಿಸಿ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಅನ್ನೂ ಮಾಡಿದ್ದರಂತೆ. ಇದು ಇವರಿಬ್ಬರನ್ನೂ ಕೂಡಾ ಪಳಗಿದ ನಟಿಯರನ್ನಾಗಿ ರೂಪಾಂತರಿಸಿತ್ತು. ಆ ಸಿನಿಮಾಗಾಗಿ ಹಲವಾರು ಪ್ರಶಸ್ತಿಗೂ ಅರಸಿ ಬಂದಿದ್ದವು.
ಅದಾದ ನಂತರ ಅದ್ವಿತಿ ದೊಡ್ಮನೆ ಹುಡುಗ ಸೇರಿದಂತೆ ಕೆಲ ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಸೀರಿಯಲ್‍ನಲ್ಲಿಯೂ ಕಾಣಿಸಿಕೊಂಡಿದ್ದರು. ತದ ನಂತರ ಫ್ಯಾನ್ ಮತ್ತು ಕಾರ್ಮೋಡ ಸರಿದು ಎಂಬ ಚಿgತ್ರಗಳಲ್ಲಿಯೂ ಬಣ್ಣ ಹಚ್ಚಿದ್ದರು. ಸದ್ಯ 188 ಮತ್ತು ಧೀರ ಸಾಮ್ರಾಟ್ ಎಂಬ ಚಿತ್ರಗಳಲ್ಲಿ ಅದ್ವಿತಿ ನಟಿಸುತ್ತಿದ್ದಾರೆ. ಸೈಕೋ ಖ್ಯಾತಿಯ ನಿರ್ದೇಶಕರ ಎಸ್ ಎಂಬ ಚಿತ್ರದಲ್ಲಿಯೂ ಅವರದ್ದು ಮಹತ್ವದ ಪಾತ್ರ. ಇದೆಲ್ಲವೂ ಲಾಕ್‍ಡೌನ್ ಮುಗಿದಾದ ನಂತರವಷ್ಟೇ ಟೇಕಾಫ್ ಆಗಲಿದೆ. ಇನ್ನುಳಿದಂತೆ ಮಹಾನ್ ಹುತಾತ್ಮ ಎಂಬ ಶಾರ್ಟ್ ಮೂವಿ ಅದ್ವಿತಿ ಪಾಲಿಗೆ ರಾಷ್ಟ್ರಪ್ರಶಸ್ತಿಯ ಸವಿಯೂಡಿದೆ. ಮತ್ತೊಂದಷ್ಟು ಕಿರುಚಿತ್ರಗಳೂ ಅವರನ್ನು ನಟಿಯಾಗಿ ಪೊರೆದಿವೆ.
ಇನ್ನುಳಿದಂತೆ ಅಶ್ವಿತಿ ಶೆಟ್ಟಿಯೂ ತಮ್ಮದೇ ರೀತಿಯಲ್ಲಿ ಸಕ್ರಿಯರಾಗಿದ್ದಾರೆ. ಸುಳಿಯ ನಂತರದಲ್ಲಿ ಏನ್ ಬರ್ತೀಯಾ ಎಂಬ ಶಾರ್ಟ್ ಮೂವಿಯಲ್ಲಿಯೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಇದಕ್ಕಾಗಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಚಂದನ್ ಶೆಟ್ಟಿಯ ಶೋಕಿಲಾಲ ಎಂಬ ಆಲ್ಬಂ ಸಾಂಗ್ ಕೂಡಾ ಅವರಿಗೆ ಮೈಲೇಜು ತಂದುಕೊಟ್ಟಿದೆ. ಜೈನ್ ಯುನಿವರ್ಸಿಟಿಯ ವಿಮೆನ್ ಅಚೀವರ್ಸ್ ಅವಾರ್ಡನ್ನೂ ಅಶ್ವಿತಿ ತಮ್ಮದಾಗಿಸಿಕೊಂಡಿದ್ದಾರೆ. ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿನ ಪಾತ್ರಕ್ಕಾಗಿಯೂ ಅವರನ್ನು ಪ್ರಶಸ್ತಿ ಅರಸಿ ಬಂದಿದೆ. ಈ ಕ್ಷಣದವರೆಗೂ ಹೀಗೆ ಸಾಗಿ ಬಂದಿರುವ ಈ ಅವಳಿ ಸಹೋದರಿಯರ ಪ್ರಧಾನ ಆಸಕ್ತಿ ಡ್ಯಾನ್ಸ್. ಈಗಾಗಲೇ ಹಲವಾರು ಶೋಗಳನ್ನು ನೀಡಿರೋ ಅವರಿಗೆ ಆ ಕ್ಷೇತ್ರದಲ್ಲಿಯೂ ಸಾಧಿಸೋ ಹಂಬಲವಿದೆಯಾದರೂ ನಟನೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
ಹೀಗೆ ಈವತ್ತಿಗೆ ಕನ್ನಡ ಸಿನಿಮಾ ರಂಗದಲ್ಲಿಮೆಲ್ಲಗೆ ನೆಲೆ ಕಂಡುಕೊಳ್ಳುತ್ತಿರೋ ಅದ್ವಿತಿ-ಅಶ್ವಿತಿ ಶೆಟ್ಟಿ ತಕ್ಷಣಕ್ಕೆ ಗುರುತಿಸಲು ತುಣಿಕಾಡುವಷ್ಟು ಹೋಲಿಕೆಗಳಿರೋ ಅಪರೂಪದ ಅವಳಿಗಳು. ಈ ಇಬ್ಬರ ನಡುವೆ ಯಾರು ದೊಡ್ಡವರೆಂಬ ಕುತೂಹಲವಿದ್ದರೆ, ಅದಕ್ಕೆ ಕೇವಲ ಐದಾರು ಸೆಕೆಂಡುಗಳ ಸೀನಿಯಾರಿಟಿಯಷ್ಟೇ ಗೋಚರಿಸುತ್ತದೆ. ಅದರನ್ವಯ ಹೇಳೋಡಾದರೆ ಅದ್ವಿತಿ ಆಶ್ವಿತಿಗಿಂತ ಐದು ಸೆಕೆಂಡ್ ದೊಡ್ಡವರು ಅನ್ನಲಡ್ಡಿಯಿಲ್ಲ!
ಮಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಅದ್ವಿತಿ ಮತ್ತು ಆಶ್ವಿತಿ ಸದಾ ಸುತ್ತಲಿನವರಿಗೆ ನಡೆದಾಡುವ ಅಚ್ಚರಿಯಂತಿದ್ದವರು. ಹೇಳಿಕೊಳ್ಳುವಂಥಾ ಸಾಂಸ್ಕೃತಿಕ ಚಟುವಟಿಕೆಗಳ ಗುಂಗಿಲ್ಲದ ಇವರಿಬ್ಬರೂ ಅಚಾನಕ್ಕಾಗಿ ಶಾಲಾ ದಿನಗಳಲ್ಲಿ ಕೋಟಿ ಚೆನ್ನಯರಾಗಿ ಅಭಿನಯಿಸುವ ಸಂದರ್ಭ ಎದುರಾಗಿತ್ತು. ತುಳುನಾಡಿನ ಪರಂಪರೆಯ ಅಸ್ಮಿತೆಯಂತಿರೋ ಕೋಟಿ ಚೆನ್ನಯರಾಗಿ ಅಭಿನಯಿಸಿದ್ದೇ ತಮ್ಮ ಬದುಕಿನ ಕಲಾ ಯಾನಕ್ಕೆ ಶ್ರೀಕಾರ ಹಾಡಿದೆ ಎಂಬ ಸುಳಿವು ಈ ಸಹೋದರಿಯರಿಗೆ ಅಚಾನಕ್ಕಾದ ಅವಕಾಶ ಕೂಡಿ ಬರುವವರೆಗೂ ತಿಳಿದಿರಲಿಲ್ಲ. ತಾವು ಎತ್ತ ಹೊರಳಿಕೊಂಡರೂ ತಮ್ಮನ್ನು ತೆಕ್ಕೆಗೆಳೆದುಕೊಂಡಿರೋ ಕಲೆಗೆ ಈ ಸಹೋದರಿಯರೀಗ ಶರಣಾಗಿದ್ದಾರೆ. ನಟನೆಗೆ ಅವಕಾಶವಿರೋ ಪಾತ್ರಗಳಲ್ಲಿ ನಟಿಸುತ್ತಾ ಮತ್ತಷ್ಟು ಪ್ರೇಕ್ಷಕರಿಗೆ ಹತ್ತಿರಾಗಬೇಕೆಂಬ ಸಮಾನ ಆಸಕ್ತಿಯನ್ನೂ ಹೊಂದಿದ್ದಾರೆ.
ಮುಂಬೈ: ಕೊರೊನಾ ಎಫೆಕ್ಟ್ ನಿಂದ ಆಹಾರವಿಲ್ಲದೆ ಬಳಲುತ್ತಿದ್ದ ಬೀದಿ ನಾಯಿಗಳಿಗೆ ಊಟ ಹಾಕಿ ಮಹಾರಾಷ್ಟ್ರದ ನಾಗ್ಪುರದ ಸಹೋದರಿಯರು ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ದೇಶವನ್ನು ಕಾಪಾಡಲು ಪ್ರಧಾನಿ ಮೋದಿ ಲಾಕ್‍ಡೌನ್ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ಜನರಿಗೆ ತಿನ್ನಲು ಆಹಾರ ಸಿಗದೆ ಪರಾದಡುತ್ತಿದ್ದಾರೆ. ಇನ್ನೂ ಬೀದಿ ಶ್ವಾನಗಳು, ಪಕ್ಷಿಗಳು ಕೂಡ ಆಹಾರ ಸಿಗದೇ ಸಂಕಷ್ಟಕ್ಕೆ ಸಿಲುಕಿವೆ.
Maharashtra:2 sisters,Kajal&Disha provided food to stray dogs in Nagpur amid #CoronavirusLockdown. One of them says,"Since all eateries are closed&few people are coming outside,dogs are finding hard to get food. It's our responsibility to feed them in this difficult time".(26.03) pic.twitter.com/qa549YgIJg
ಹೀಗೆ ಆಹಾರವಿಲ್ಲದೇ ಸಂಕಷ್ಟದಲ್ಲಿ ಸಿಲುಕಿರುವ ಶ್ವಾನಗಳಿಗೆ ಮಹಾರಾಷ್ಟ್ರದ ಸಹೋದರಿಯರಾದ ಕಾಜಲ್ ಮತ್ತು ದಿಶಾ ನಾಗ್ಪುರದಲ್ಲಿರುವ ಬೀದಿ ನಾಯಿಗಳಿಗೆ ತಮ್ಮ ಮನೆಯಿಂದ ಬಾಕ್ಸ್‍ಗಳಲ್ಲಿ ಊಟವನ್ನು ತೆಗೆದುಕೊಂಡು ಹೋಗಿ ನೀಡುತ್ತಿದ್ದಾರೆ. ತಮ್ಮ ಬಗ್ಗೆ ಮಾತ್ರ ಯೋಚಿಸುವ ಜನರ ಮಧ್ಯೆ ಬೀದಿಶ್ವಾನಗಳ ಕಷ್ಟವನ್ನು ಅರ್ಥ ಮಾಡಿಕೊಂಡ ಸಹೋದರಿಯರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ವಿಚಾರವಾಗಿ ಮಾತನಾಡಿರುವ ಸಹೋದರಿಯರು, ಲಾಕ್ ಡೌನ್ ಆಗಿರುವುರಿಂದ ಯಾವ ಜನರು ಹೊರಗೆ ಬರುತ್ತಿಲ್ಲ. ಹೀಗಾಗಿ ಬೀದಿಯಲ್ಲಿರುವ ಶ್ವಾನಗಳಿಗೆ ಆಹಾರ ಸಿಗುತ್ತಿಲ್ಲ. ನಾವು ನಮ್ಮ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ನಮಗಾಗಿ ಸರ್ಕಾರ ಊಟದ ವ್ಯವಸ್ಥೆ ಮಾಡುತ್ತದೆ. ಆದರೆ ಈ ಶ್ವಾನಗಳು ಹಸಿವಿನಿಂದ ಸಾಯಬೇಕಾ? ಕೇವಲ ನಮ್ಮ ಬಗ್ಗೆ ನಾವು ಯೋಚಿಸಿದರೆ ಸಾಲದು ಇವುಗಳ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಎದುರುಸುತ್ತಿದ್ದೇವೆ. ಆದರೆ ಈ ಪ್ರಾಣಿಗಳು ಹಸಿವಿನಿಂದ ಸಾಯುವುದನ್ನು ಹೇಗೆ ನೋಡುವುದು. ಈ ರೀತಿಯ ಸಮಯದಲ್ಲಿ ನಾವು ಅವುಗಳನ್ನು ಹಸಿವಿನಿಂದ ಸಾಯಲು ಬಿಡಬಾರದು. ಕಷ್ಟದ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ನೀಡುವುದು ಮತ್ತು ಅವುಗಳನ್ನು ಪೋಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕಾಜಲ್ ಮತ್ತು ದಿಶಾ ತಿಳಿಸಿದ್ದಾರೆ.
ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರಗೆ ಲಾಕ್‍ಡೌನ್ ಮಾಡಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಭಾರತದಲ್ಲಿ ಇಲ್ಲಿಯವರಗೆ 20 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 761 ಜನರಿಗೆ ಈ ವೈರಸ್ ತಗುಲಿದೆ.
ವಿಜಯಪುರ: ಸಾಕಿದ ಅಕ್ಕನ ಮಗಳೇ ದಿನಬೆಳಗಾದರೆ ಅಣುಕಿನ ಮಾತನಾಡುತ್ತಾಳೆ ಎಂದು ಬೇಸರಗೊಂಡು ಮಹಿಳೆಯೋರ್ವಳು ತನ್ನ ವಯಸ್ಕ ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಮೂಲತಃ ಬಾಗಕೋಟೆ ಜಿಲ್ಲೆ ಮಧೋಳ ತಾಲೂಕಿನ ಮಳಲಿ ನಿವಾಸಿಯಾದ ತಾಯಿ ರೇಣುಕಾ ಹವಾಲ್ದಾರ (45), ಮಗಳು ಐಶ್ವರ್ಯ ಹವಾಲ್ದಾರ(23), ಮಗ ಅಖಿಲೇಶ ಹವಾಲ್ದಾರ(18) ಎಂದು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂಕಿನ ಕೃಷ್ಣಾ ಸೇತುವೆ ಮೇಲಿನಿಂದ ತನ್ನೆರಡು ಮಕ್ಕಳೊಂದಿಗೆ ನದಿಗೆ ಹಾರಿ ಪ್ರಾಣಬಿಟ್ಟಿದ್ದಾರೆ.
ರೇಣುಕಾ ತನ್ನ ಗಂಡ ಅಶೋಕನೊಂದಿಗೆ ಚೆನ್ನಾಗಿ ಜೀವನ ನಡೆಸುತ್ತಿದ್ದರು. ಆದರೆ ಕಳೆದ ಹಲವು ವರ್ಷಗಳಿಂದ ತನ್ನ ಅಕ್ಕ ಉಷಾಳಿಗೆ ಮಹಾಮಾರಿ ಕ್ಯಾನ್ಸರ್ ಕಾಯಿಲೆ ಬಂದಿದೆ ಎಂದು ಗೊತ್ತಾಗಿತ್ತು. ಹಾಗಾಗಿ ಆಕೆಯನ್ನು ಆರೈಕೆ ಮಾಡಲೆಂದು ರೇಣುಕಾ ತನ್ನ ಪತಿ ಅಶೋಕನನ್ನು ಮಳಲಿಯಲ್ಲೇ ಬಿಟ್ಟು ತನ್ನೆರಡು ಮಕ್ಕಳೊಂದಿಗೆ ವಿಜಯಪುರದಲ್ಲಿರುವ ಅಕ್ಕನ ಮನೆಗೆ ಬಂದಿದ್ದಳು. ಆದರೆ ಕಾಲನ ಕೆರೆಗೆ ಓಗೊಟ್ಟು ಅಕ್ಕ ವಿಧಿವಶರಾಗಿದ್ದರು. ಆ ಬಳಿಕ ಅಕ್ಕನ ಮಗಳು ದೀಪಾ ಮತ್ತು ಅಕ್ಕನ ಗಂಡ ನಾರಾಯಣ ಅವರನ್ನು ನೋಡುವವರು ಯಾರೂ ಇಲ್ಲ ಎಂದು ಅವರ ಆರೈಕೆಯಲ್ಲಿ ತೊಡಗಿಕೊಂಡರು. ಕಾಲಕ್ರಮೇಣ ಕಳೆದ ಮೂರು ವರ್ಷಗಳ ಹಿಂದೆ ಅಕ್ಕನ ಗಂಡ ನಾರಾಯಣ ಸಹ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಇದಾದ ನಂತರ ಮನೆಯಲ್ಲಿ ಕಲಹ ಶುರುವಾಗಿತ್ತು. ಎಲ್ಲಿಂದಲೋ ಬಂದು ನಮ್ಮ ಮನೆಯಲ್ಲೇ ಉಳಿದುಕೊಂಡು ನೀವು ನಮ್ಮ ಹಂಗಿನಲ್ಲಿ ಜೀವನ ನಡೆಸುತ್ತಿದೀರಾ ಎಂದು ಅಕ್ಕನ ಮಗಳು ಮತ್ತು ಮನೆಯವರು ಹಂಗಿಸಿದ್ದಾರೆ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಫೆಬ್ರುವರಿ 16 ರಂದು ರೇಣುಕಾ ತನ್ನ ಇಬ್ಬರು ಮಕ್ಕಳಾದ ಐಶ್ವರ್ಯ ಹಗೂ ಅಖಿಲೇಶರೊಂದಿಗೆ ಮನೆಬಿಟ್ಟು ತೆರಳಿದ್ದರು. ನಂತರ ರೇಣುಕಾ ಸಹೋದರ ವಿಲಾಸ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದರ ಬಗ್ಗೆ ಮಾಹಿತಿ ನೀಡಿದ್ದರು.
ವಿಜಯಪುರ ಜಿಲ್ಲೆಯ ಕೋಲ್ಹಾರ ಸೇತುವೆಯ ಕೃಷ್ಣಾ ನದಿಯಲ್ಲಿ ಫೆಬ್ರುವರಿ 19 ರಂದು ಒಂದು ಮಹಿಳೆಯ ಶವ ಪತ್ತೆಯಾಗಿದೆ. ತದ ನಂತರ 25 ರಂದು ಯುವತಿ ಮತ್ತು ಯುವಕನ ಶವ ಪತ್ತೆಯಾಗಿದೆ. ಆದರೆ ಕೊಲ್ಹಾರ ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇರದ ಕಾರಣ ಅನಾಥ ಶವಗಳೆಂದು ಭಾವಿಸಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನರವೇರಿಸಿ ಬಿಟ್ಟಿದ್ದಾರೆ. ತದನಂತರ ಗಾಂಧಿ ಚೌಕ್ ಪೊಲೀಸರು ಶಂಕೆ ವ್ಯಕ್ತಪಡಿಸಿ, ರೇಣುಕಾ ಸಹೋದರ ವಿಲಾಸರನ್ನು ಒಂದು ಬಾರಿ ಶವಗಳ ಸಾಮಗ್ರಿಗಳನ್ನು ನೋಡಿ ಗುರುತಿಸಲು ಹೇಳಿದ್ದಾರೆ. ಆಗ ವಿಲಾಸ ಅವರು ರೇಣುಕಾ ಸೀರೆ ಮತ್ತು ಮಕ್ಕಳ ಉಡುಪು ಮತ್ತು ಉಂಗುರ ನೋಡಿ ಗುರುತಿಸಿದ್ದಾರೆ.
ಹಲವು ವರ್ಷಗಳ ಕಾಲ ಅಕ್ಕನ ಆರೈಕೆ, ಅಕ್ಕನ ಮಗಳ ಹಾಗೂ ಅಕ್ಕನ ಗಂಡನ ಪೋಷಣೆ ಮಾಡುತ್ತ ಬಂದ ರೇಣುಕಾಳಿಗೆ ಇದೀಗ ತಿರಸ್ಕಾರದ ಮಾತುಗಳನ್ನು ಕೇಳಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಕೋಲ್ಹಾರ-ಕೊರ್ತಿ ಸೇತುವೆಯಿಂದ ಜಿಗಿದು ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈಗ ಕುಟುಂಬಸ್ಥರಿಗೆ ತಿಳಿದಿದೆ. ತನ್ನೆರಡು ಮಕ್ಕಳು ವಯಸ್ಕರಿದ್ದರೂ ಸಹ ಅದ್ಯಾಕೆ ಇಂತಹ ಕಟು ನಿರ್ಧಾರ ಮಾಡಿದಳು ಎಂದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಆಂತರಿಕ ಕಲಹ ಏನೇ ಇದ್ರೂ ಸಹ ಮಾತನಾಡಿ ಪರಿಹರಿಸಿಕೊಳ್ಳಬಹುದಿತ್ತು. ಆದರೆ ತಾನು ಪ್ರಾಣ ಕಳೆದುಕೊಳ್ಳುವುದರ ಜೊತೆಗೆ ಎರಡು ಮಕ್ಕಳನ್ನು ಆತ್ಮಹತ್ಯೆ ಮಾಡುವಂತೆ ಮಾಡಲು ಅಂತಹದ್ದು ಏನಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.
ಬೆಂಗಳೂರು: ಅಂಧ ಸಹೋದರಿಯರ ಕಷ್ಟವನ್ನು ಆಲಿಸಿದ ನವರಸ ನಾಯಕ ಜಗ್ಗೇಶ್ ಅವರ ಬಡ ಕುಟುಂಬಕ್ಕೆ ಸಹಾಯದ ಹಸ್ತವನ್ನು ಚಾಚಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಇದೀಗ ಈ ಅಂಧ ಸಹೋದರಿಯರ ಬದುಕಿಗೆ ನವರಸ ಜಗ್ಗೇಶ್ ಬೆಳಕಾಗಿದ್ದಾರೆ.
ಸಹೋದರಿಯ ನೋವಿನ ಕಥೆ ಕೇಳಿದ ನವರಸ ನಾಯಕ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದಾರೆ. ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದಾರೆ.
ಜಗ್ಗೇಶ್ ಅವರ ಈ ಮಾನವೀಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಕೂಡ ಸಹೋದರಿಯರ ಸಹಾಯಕ್ಕೆ ಮುಂದಾಗಿದ್ದಾರೆ. ನನಗೆ ಶಕ್ತಿ ಇರುವವರೆಗೂ ನಿಮ್ಮ ಮನೆಗೆ ಪ್ರತಿ ತಿಂಗಳ ಊಟಕ್ಕೆ ಏನು ಬೇಕು ಅದು ನನ್ನ ಕಡೆಯಿಂದ ಸಿಗಲಿದೆ ಎಂದು ಭರವಸೆ ಕೊಟ್ಟಿದ್ದಾರೆ.
ಸಹೋದರಿಯರಿಗೆ ಹುಟ್ಟಿನಿಂದ ಕಣ್ಣಿಲ್ಲ. ಇವರು ಒಟ್ಟು ನಾಲ್ಕು ಜನ ಮಕ್ಕಳು, ಅವರಲ್ಲಿ ಇಬ್ಬರಿಗೆ ಕಣ್ಣಿಲ್ಲ. ಗಂಡು ಮಗ ಇದ್ದನು. ಆತನೂ ಕೂಡ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ತಾಯಿಯೂ ಕೂಡ ಸಾವನ್ನಪ್ಪಿದು, ಅಜ್ಜಿ ಜೊತೆ ವಾಸವಾಗಿದ್ದಾರೆ. ತಂದೆಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಷ್ಟದಲ್ಲೂ ಅಂಧ ಸಹೋದರಿಯರು ಸಂಸಾರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಊಟಕ್ಕಾಗಿ ರತ್ಮಮ್ಮ ಮತ್ತು ಮಂಜಮ್ಮ ಊರಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡು ಹೇಳಲು ಶುರು ಮಾಡಿದರು. ಅಲ್ಲಿಗೆ ಬರುವ ಭಕ್ತರು ನೀಡುವ ಹಣದಿಂದ ಸಂಸಾರವನ್ನು ನಡೆಸುತ್ತಿದ್ದಾರೆ.
ಚಂಡೀಗಢ: ನೇಪಾಳಿಗಳಂತೆ ಕಾಣುತ್ತೀರಾ ಎಂದು ಯುವತಿಯರಿಗೆ ಅಧಿಕಾರಿಗಳು ಪಾಸ್‍ಪೋರ್ಟ್ ಅರ್ಜಿ ನಿರಾಕರಣೆ ಮಾಡಿರುವ ಘಟನೆ ಚಂಡೀಗಢದ ಅಂಬಾಲದಲ್ಲಿ ನಡೆದಿದೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಯುವತಿ, ನಾನು ಮತ್ತು ನನ್ನ ತಂಗಿ ಪಾಸ್‍ಪೋರ್ಟ್ ಮಾಡಿಸಬೇಕು ಎಂದು ಅರ್ಜಿ ಹಾಕಲು ಹೋಗಿದ್ದೆವು. ಅಲ್ಲಿ ನಮ್ಮನ್ನು ನೋಡಿದ ಅಧಿಕಾರಿಗಳು ನೀವು ನೇಪಾಳಿಗಳಂತೆ ಕಾಣುತ್ತೀರಾ, ನಿಮ್ಮ ರಾಷ್ಟ್ರೀಯತೆಯನ್ನು ಮೊದಲು ಸಾಬೀತು ಮಾಡಿ ಎಂದು ಹೇಳಿದರು ಎಂದು ಹೇಳಿದ್ದಾರೆ.
ನಾವು ತೆಗೆದುಕೊಂಡು ಹೋಗಿದ್ದ ಅರ್ಜಿ ಮೇಲೆ ಅಲ್ಲಿನ ಪಾಸ್‍ಪೋರ್ಟ್ ಮಾಡಿಕೊಡುವ ಅಧಿಕಾರಿಗಳು ಅರ್ಜಿದಾರರು ನೇಪಾಳಿಗಳಂತೆ ಕಾಣುತ್ತಾರೆ ಎಂದು ಬರೆದುಕೊಟ್ಟರು. ಮತ್ತು ನಮ್ಮ ರಾಷ್ಟ್ರೀಯತೆಯನ್ನು ಸಾಬೀತು ಮಾಡಿ ಎಂದು ಹೇಳಿದರು. ಆಗ ನಾವು ಈ ವಿಷಯವನ್ನು ಸಚಿವರಾದ ಅನಿಲ್ ವಿಜ್ ಅವರಿಗೆ ಹೇಳಿದ ನಂತರ ನಮ್ಮ ಪಾಸ್‍ಪೋರ್ಟ್ ಮಾಡಿಕೊಡುವ ಪ್ರಕ್ರಿಯೆಯನ್ನು ಆರಂಭಿಸಿದರು ಎಂದು ಯುವತಿ ಮಾಹಿತಿ ನೀಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಅಂಬಾಲದ ಜಿಲ್ಲಾಧಿಕಾರಿ ಅಶೋಕ್ ಶರ್ಮಾ, ಭಗತ್ ಬಹದ್ದೂರ್ ಎಂಬ ವ್ಯಕ್ತಿ ತನ್ನ ಹೆಣ್ಣುಮಕ್ಕಳಾದ ಸಂತೋಷ್ ಮತ್ತು ಹೆನ್ನಾಳೊಂದಿಗೆ ಪಾಸ್‍ಪೋರ್ಟ್ ಗಾಗಿ ಚಂಡೀಗಢದ ಪಾಸ್‍ಪೋರ್ಟ್ ಕಚೇರಿಗೆ ಹೋಗಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಪಾಸ್‍ಪೋರ್ಟ್ ಕೊಡಲು ನಿರಾಕರಿಸಿ ಅರ್ಜಿಯ ಮೇಲೆ ಅರ್ಜಿದಾರರು ನೇಪಾಳಿಗಳಂತೆ ಕಾಣುತ್ತಾರೆ ಎಂದು ಬರೆದು ಕಳುಹಿಸಿದ್ದಾರೆ ಎಂದು ಹೇಳಿದರು.
ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಆ ಇಬ್ಬರು ಸಹೋದರಿಯರನ್ನು ಕರೆಸಿ, ಅಧಿಕಾರಿಗಳಿಗೆ ಅವರ ಪಾಸ್‍ಪೋರ್ಟ್ ಮಾಡಿಕೊಡಿ ಎಂದು ಸೂಚಿಸಿದ್ದೇನೆ. ಅವರಿಬ್ಬರಿಗೂ ಶ್ರೀಘದಲ್ಲೇ ಪಾಸ್‍ಪೋರ್ಟ್ ಮಾಡಿಕೊಡಲಾಗುತ್ತದೆ. ಜೊತೆಗೆ ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ಶರ್ಮಾ ತಿಳಿಸಿದ್ದಾರೆ.
ತಿರುವನಂತಪುರಂ: ಕೇರಳದಲ್ಲಿ 2017 ರಲ್ಲಿ ನಡೆದಿದ್ದ ವಲಯರ್ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಕೆಲ ಜನರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ವಲಯರ್ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಧು ಎಂಬವನ ಮೇಲೆ ಐದು ಜನರ ಗುಂಪೊಂದು ದಾಳಿ ಮಾಡಿ ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆರೋಪಿಯು ಪಲಕ್ಕಾಡ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ವಲಯರ್ ಪೊಲೀಸ್ ಠಾಣೆಯ ಅಧಿಕಾರಿಗಳು, ಮೊದಲಿಗೆ ಐದು ಜನರ ಗುಂಪೊಂದು ಆರೋಪಿ ಮಧುವಿನ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಆರೋಪಿಯನ್ನು ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಐದು ಮಂದಿಯಲ್ಲಿ ಮೂವರನ್ನು ನಾವು ವಶಕ್ಕೆ ಪಡೆದಿದ್ದೇವೆ. ಆಸ್ಪತ್ರೆಗೆ ಹೋಗಿ ಹಲ್ಲೆಗೊಳಾಗದ ಆರೋಪಿಯ ಬಳಿ ಹೇಳಿಕೆಯನ್ನು ಪಡೆದು ಬಂದಿದ್ದೇವೆ ಎಂದು ಹೇಳಿದ್ದಾರೆ.
ಏನಿದು ವಲಯರ್ ಅತ್ಯಾಚಾರ ಪ್ರಕರಣ?
2017 ರಲ್ಲಿ ಕೇರಳದ ಪಲಕ್ಕಾಡ್ ಜಿಲ್ಲೆಯ ವಲಯರ್ ಪ್ರದೇಶದ ಹಳೆಯ ಮನೆಯೊಂದರಲ್ಲಿ 13 ವರ್ಷದ ಅಪ್ರಾಪ್ತೆಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆದರೆ ಮೃತಪಡುವುದಕ್ಕೂ ಮುನ್ನ ಆಕೆಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಈ ಸಾವಿನ ಪ್ರಕರಣದಲ್ಲಿ ಸಂತ್ರಸ್ತೆಯ 9 ವರ್ಷದ ತಂಗಿ ಅಕ್ಕ ಸಾವನ್ನಪ್ಪಿದ ದಿನ ನಮ್ಮ ಮನೆ ಬಳಿ ಇಬ್ಬರು ಅನುಮಾಸ್ಪದವಾಗಿ ಓಡಾಡುತ್ತಿದ್ದರು ಎಂದು ಸಾಕ್ಷಿ ಹೇಳಿದ್ದಳು.
ಈ ಘಟನೆಯಾದ ಎರಡು ತಿಂಗಳ ಬಳಿಕ 9 ವರ್ಷದ ತಂಗಿಯೂ ಸಹ ಅದೇ ಜಗದಲ್ಲಿ ಅದೇ ರೀತಿಯಾಗಿ ಕೊಲೆಯಾಗಿದ್ದಳು. ಆಕೆಯ ಮರಣೋತ್ತರ ಪರೀಕ್ಷೆಯ ನಂತರ ಸಂತ್ರಸ್ತೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ವರದಿ ಬಂದಿತ್ತು. ಈ ಸಹೋದರಿಯರ ಪ್ರಕರಣವು ಕೇರಳದಲ್ಲಿ ಕೋಲಾಹಲನ್ನು ಸೃಷ್ಟಿಸಿತ್ತು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕಲಾಗಿತ್ತು.
ಸಾರ್ವಜನಿಕರ ಒತ್ತಡಕ್ಕೆ ಮಣಿದ ಪೊಲೀಸ್ ಸಂತ್ರಸ್ತ ಸಹೋದರಿಯರ ಮನೆಗೆ ಸದಾ ಬರುತ್ತಿದ್ದ ಮೂವರನ್ನು ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದರು. ಆದರೆ ಸ್ಥಳೀಯ ನ್ಯಾಯಾಲಯವು ಈ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ವಿಚಾರವಾಗಿ ಹೈಕೋರ್ಟಿನಲ್ಲಿ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಘಾತದಲ್ಲಿ ಮೃತಪಟ್ಟ ಅಭಿಮಾನಿಯ ಸಹೋದರಿಯರ ಮದುವೆ ಖರ್ಚು ವಹಿಸಿಕೊಂಡಿದ್ದಾರೆ.
ಇತೀಚೆಗಷ್ಟೇ ದರ್ಶನ್ ಅವರ ಪುತ್ರ ವಿನೀಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ದರ್ಶನ್ ಕಳೆದ ವರ್ಷ ಅಪಘಾತದಲ್ಲಿ ಮೃತಪಟ್ಟಿದ್ದ ಅಭಿಮಾನಿ ರಾಕೇಶ್ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದರು.
ಕಳೆದ ವರ್ಷ ವಿನೀಶ್ ಹುಟ್ಟುಹಬ್ಬ ಆಚರಿಸಲು ರಾಕೇಶ್ ರಾಜರಾಜೇಶ್ವರಿ ನಗರಕ್ಕೆ ಬರುತ್ತಿದ್ದರು. ಆ ವೇಳೆ ಅಪಘಾತವಾಗಿ ರಾಕೇಶ್ ಮೃತಪಟ್ಟಿದ್ದರು. ಹೀಗಾಗಿ ಮಗನ ಹುಟ್ಟುಹಬ್ಬದ ದಿನ ಈ ರೀತಿಯ ಘಟನೆ ನಡೆದಿರುವುದರಿಂದ ದರ್ಶನ್ ತುಂಬಾ ಬೇಸರ ಮಾಡಿಕೊಂಡಿದ್ದರು. ಇದನ್ನೂ ಓದಿ: ವಾಹನ ಚಾಲನೆ ವೇಳೆ ಜಾಗೃತರಾಗಿರಿ: ಅಭಿಮಾನಿಗಳಲ್ಲಿ ದಚ್ಚು ಮನವಿ
ಅಂದು ದರ್ಶನ್ ಅಭಿಮಾನಿ ರಾಕೇಶ್ ಕುಟುಂಬಕ್ಕೆ ಎರಡು ಲಕ್ಷ ರೂ. ಸಹಾಯ ಕೂಡ ಮಾಡಿದ್ದರು. ಈಗ ಅದೇ ಕುಟುಂಬಕ್ಕೆ ದರ್ಶನ್ ಆಸರೆ ಆಗಿ ನಿಂತಿದ್ದಾರೆ. ಅಕ್ಟೋಬರ್ 31 ರಂದು ನಡೆದ ವಿನೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಕೇಶ್ ಕುಟುಂಬದವರನ್ನು ದರ್ಶನ್ ಕರೆಯಿಸಿಕೊಂಡಿದ್ದರು. ಆಗ ರಾಕೇಶ್ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಹಣ ಸಹಾಯ ಮಾಡುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ.
ರಾಕೇಶ್ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈತನಿಗೆ ಕೀರ್ತನಾ ಮತ್ತು ನಾಗವೇಣಿ ಎಂಬ ಸಹೋದರಿಯರು ಇದ್ದಾರೆ. ಹೀಗಾಗಿ ಇಂದು ರಾಕೇಶ್ ಅಗಲಿರುವ ಕಾರಣ ದರ್ಶನ್ ಇಬ್ಬರು ಸಹೋದರಿಯರ ಮದುವೆ ಖರ್ಚನ್ನು ವಹಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ದರ್ಶನ್ ಮಾನವೀಯತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ತಿರುವನಂತಪುರ: ಸಹೋದರಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಊರಿಗೆ ಬಂದಿದ್ದ ಯೋಧರೊಬ್ಬರು ಭೂಕುಸಿತಕ್ಕೆ ಬಲಿಯಾದ ಘಟನೆ ಕೇರಳದಲ್ಲಿ ನಡೆದಿದೆ.
ವಿಷ್ಣು ವಿಜಯನ್ ಮೃತ ದುರ್ದೈವಿ ಯೋಧ. ಇವರು ಪಶ್ಚಿಮಬಂಗಾಳದ ಬೆಂಗಾಲ್ ಸ್ಯಾಪರ್ಸ್ ರೆಜಿಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲ ದಿನಗಳ ರಜೆಯ ಮೇಲೆ ಊರಿಗೆ ವಾಪಸ್ಸಾಗಿದ್ದರು.
ಕಳೆದ ವಾರದಲ್ಲಿ ವಿಷ್ಣು ಸಹೋದರಿಯ ನಿಶ್ಚಿತಾರ್ಥ ಕಾರ್ಯಕ್ರಮವಿತ್ತು. ಆದರೆ ಕಳೆದ ಗುರುವಾರ ರಾತ್ರಿ ಮಲಪ್ಪುರಂ ಜಿಲ್ಲೆಯ ಕವಲಪ್ಪರ ಗ್ರಾಮದಲ್ಲಿ ಭಾರೀ ಗಾತ್ರದಲ್ಲಿ ಭೂಕುಸಿತ ಉಂಟಾಗಿದೆ. ಈ ದುರ್ಘಟನೆಯಲ್ಲಿ ವಿಷ್ಣು ಹಾಗೂ ಕುಟುಂಬ ಸೇರಿ ಸರಿಸುಮಾರು 60 ಮಂದಿ ಮಣ್ಣಿನಡಿ ಸಿಲುಕಿದ್ದಾರೆ.
ವಿಷ್ಣು, ತಂದೆ ವಿಜಯನ್, ತಾಯಿ, ಸಹೋದರಿ ಜಿಶ್ನಾ ಹಾಗೂ ಇತರ ಇಬ್ಬರು ಸಂಬಂಧಿಕರು ಮನೆಯೊಳಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸದ್ಯ ಇವರ ಮೃತದೇಹಕ್ಕಾಗಿ ಸತತ 4 ದಿನಗಳಿಂದ ಕಾರ್ಯಾಚರಣೆ ನಡೆದಿದ್ದು, ನಿನ್ನೆ ಮನೆಯ ಅವಶೇಷಗಳು ದೊರೆತಿವೆ. ಹೀಗಾಗಿ 6 ಮಂದಿ ಮೃತಪಟ್ಟಿರುವ ಸಾಧ್ಯತೆಗಳಿವೆ ಎಂಬುದಾಗಿ ವರದಿಯಾಗಿದೆ. ಘಟನೆಯಲ್ಲಿ ವಿಷ್ಣು ಸಹೋದರ ಜಿಷ್ಣು ಭಾರೀ ಅವಘಡದಿಂದ ಪಾರಾಗಿದ್ದಾರೆ.
ಜಿಷ್ಣು ತನ್ನ ಗೆಳಯರೊಂದಿಗೆ ಮತ್ತೊಂದೆಡೆ ಭೂಕುಸಿತ ಉಂಟಾದ ಪ್ರದೇಶದಲ್ಲಿ ಅಲ್ಲಿನ ಜನರಿಗೆ ಸಹಾಯ ಮಾಡಲು ತೆರಳಿದ್ದರು. ಹೀಗಾಗಿ ಅವರು ಬಚಾವ್ ಆಗಿದ್ದಾರೆ. ಹೀಗೆ ಸಹಾಯ ಮಾಡಿ ತನ್ನ ಮನೆಯ ಕಡೆ ಜಿಷ್ಣು ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಭಾರೀ ಗಾತ್ರದಲ್ಲಿ ಮತ್ತೆ ಭೂ ಕುಸಿತವಾಗಿದೆ. ಪರಿಣಾಮ ಜಿಷ್ಣು ಕುಟುಂಬ ಅದರಲ್ಲಿ ಸಿಲುಕಿಕೊಂಡಿದ್ದು, ಜಿಷ್ಣು ತಮ್ಮ ಕುಟುಂಬಸ್ಥರಿಗಾಗಿ ಕಣ್ಣೀರಿಡುತ್ತಾ ಹುಡುಕಾಟ ನಡೆಸಿದ್ದಾರೆ.
ಕೂಡಲೇ ಜಿಷ್ಣು ಗೆಳೆಯ ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ತಂಡಕ್ಕೆ ಮನೆಗಳಿರುವ ಪ್ರದೇಶಗಳನ್ನು ರಾಜೇಶ್ ತೋರಿಸಿಕೊಟ್ಟರು.
ಸೋಮವಾರ ನಾವು ವಿಷ್ಣು ಮನೆಯನ್ನು ಗುರುತಿಸಿದ್ದೇವೆ. ಮನೆಯ ಮೇಲೆ ಸಾಕಷ್ಟು ಅಡಿ ಮಣ್ಣು ಬಿದ್ದಿದೆ. ಹೀಗಾಗಿ ಮಂಗಳವಾರ ಮಣ್ಣನ್ನು ಸ್ಲ್ಯಾಬ್ ಗಳ ರೀತಿಯಲ್ಲಿ ಕಟ್ ಮಾಡಿ ಶೋಧ ಕಾರ್ಯ ಮುಂದುವರಿಸುತ್ತೇವೆ. ಇಂದು ಮೃತದೇಹಗಳನ್ನು ಹೊರತೆಗೆಯುವುದಾಗಿ ರಾಜೇಶ್ ಭರವಸೆ ನೀಡಿದ್ದಾರೆ.
ಸದ್ಯ ಕವಲಪ್ಪರ ಪ್ರದೇಶದಲ್ಲಿ ಸೋಮವಾರ ಸುಮಾರು 19 ಮೃತದೇಹಗಳನ್ನು ಮಣ್ಣಿನಡಿಯಿಂದ ಹೊರತೆಗೆದಿದ್ದಾರೆ.