Tag: sister

  • ನಾದಿನಿ ಮನೆಗೆ ಹೋಗಿದ್ದಕ್ಕೆ ಗರ್ಭಿಣಿ ಪತ್ನಿಯನ್ನೇ ಕೊಂದ

    ನಾದಿನಿ ಮನೆಗೆ ಹೋಗಿದ್ದಕ್ಕೆ ಗರ್ಭಿಣಿ ಪತ್ನಿಯನ್ನೇ ಕೊಂದ

    – ಪತಿ ಬರೋ ಮುನ್ನ ಮನೆಗೆ ಬರದಿದ್ದೇ ತಪ್ಪಾಯ್ತು
    – ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋದ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಭೇಟಿಯಾಗಲು ಹೋಗಿದ್ದ ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಹೇಮಲತಾ (30) ಮೃತ ಮಹಿಳೆ. ಆರೋಪಿ ವಿಜಯ್ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಘಟನೆ ದಕ್ಷಿಣಪುರಿಯಲ್ಲಿರುವ ಅಂಬೇಡ್ಕರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಭಾನುವಾರ ಮಧ್ಯರಾತ್ರಿ ಸುಮಾರು 12.30ಕ್ಕೆ ಆರೋಪಿ ವಿಜಯ್ ಪೊಲೀಸ್ ಠಾಣೆಗೆ ಹೋಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ತಕ್ಷಣ ಪೊಲೀಸ್ ಅಧಿಕಾರಿಗಳ ತಂಡ ಆರೋಪಿ ಮನೆಗೆ ಹೋಗಿ ನೋಡಿದ್ದಾರೆ. ಅಲ್ಲಿ ಬೆಡ್‍ರೂಮಿನಲ್ಲಿ ಹೇಮಲತಾಳ ಮೃತದೇಹ ಪತ್ತೆಯಾಗಿದೆ. ಅಲ್ಲದೇ ಹೇಮಲತಾ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತು ಪತ್ತೆಯಾಗಿದೆ.

    ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಆರೋಪಿ ವಿಜಯ್‍ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ನನ್ನ ಜೊತೆ ವಾದ ಮಾಡುತ್ತಿದ್ದಳು. ಹೀಗಾಗಿ ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಮೃತ ಹೇಮಲತಾ ಐದು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿ ಪತಿ ವಿಜಯ್ ಸಹೋದರಿ ಪಕ್ಕದಲ್ಲಿಯೇ ವಾಸಿಸುತ್ತಿದ್ದರು. ಶನಿವಾರ ಸಂಜೆ ಕೆಲ ಮನೆಯ ವಸ್ತುಗಳನ್ನು ಖರೀದಿಸಲು ವಿಜಯ್ ಹೊರಗೆ ಹೋಗಿದ್ದಾನೆ. ಈ ವೇಳೆ ಹೇಮಲತಾ ನಾದಿನಿಯನ್ನು ಭೇಟಿಯಾಗಲು ಹೋಗಿದ್ದರು. ಆದರೆ ಹೇಮಲತಾ ಮನೆಗೆ ಹಿಂತಿರುಗುವ ಮೊದಲು ವಿಜಯ್ ಮನೆಗೆ ಬಂದಿದ್ದಾನೆ. ನಂತರ ಮನೆಯಲ್ಲಿ ಪತ್ನಿಯನ್ನು ಹುಡುಕಾಡಿದ್ದಾನೆ. ಆದರೆ ಹೇಮಲತಾ ಎಲ್ಲೂ ಕಾಣಿಸಿಲಿಲ್ಲ. ಇದರಿಂದ ಆರೋಪಿ ವಿಜಯ್ ಕೋಪ ಮಾಡಿಕೊಂಡಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರಾತ್ರಿ ಹೇಮಲತಾ ಮನೆಗೆ ವಾಪಸ್ ಬಂದಿದ್ದಾಳೆ. ಆಗ ದಂಪತಿಯ ಮಧ್ಯೆ ಜಗಳ ಉಂಟಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ಕೋಪದಿಂದ ವಿಜಯ್, ಹೇಮಲತಾಳ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದಾನೆ.

    ವಿಜಯ್ ನನ್ನ ಸಹೋದರಿಗೆ ಪ್ರತಿ ದಿನ ಕಿರುಕುಳ ನೀಡುತ್ತಿದ್ದನು. ಆತ ಯಾರನ್ನೂ ಭೇಟಿಯಾಗಲು ಬಿಡುತ್ತಿರಲಿಲ್ಲ ಎಂದು ಹೇಮಲತಾ ಸೋದರಿ ಆಶಾ ಆರೋಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

  • ಅಣ್ಣನ ಚಿತೆಗೆ ತಂಗಿಯಿಂದಲೇ ಅಂತ್ಯಕ್ರಿಯೆ- ಸ್ಮಶಾನದಲ್ಲಿದ್ದ ಅರೆಸುಟ್ಟ ಕಟ್ಟಿಗೆ ಆಯ್ದು ತಂದ ತಾಯಿ

    ಅಣ್ಣನ ಚಿತೆಗೆ ತಂಗಿಯಿಂದಲೇ ಅಂತ್ಯಕ್ರಿಯೆ- ಸ್ಮಶಾನದಲ್ಲಿದ್ದ ಅರೆಸುಟ್ಟ ಕಟ್ಟಿಗೆ ಆಯ್ದು ತಂದ ತಾಯಿ

    -ಕೊರೊನಾ ಭೀತಿಯಿಂದ ಸಹಾಯಕ್ಕೆ ಬಾರದ ಜನ
    -ಸ್ಮಶಾನಕ್ಕೆ ಶವ ಸಾಗಿಸಿ ಕೈ ತೊಳೆದುಕೊಂಡ ಅಧಿಕಾರಿಗಳು

    ಬೆಳಗಾವಿ: ಅಣ್ಣನ ಚಿತೆಗೆ ತಂಗಿಯೇ ಅಂತ್ಯಕ್ರಿಯೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ ಯಾರು ಮುಂದಾಗಿದ್ದಾಗ ಸೋದರಿಯೇ ಕೊನೆಯ ವಿಧಿವಿಧಾನಗಳನ್ನ ನೆರೆವೇರಿಸಿದ್ದಾಳೆ.

    ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದ ಸಾಗರ್ ಸಿಂಘೆ (32) ಸಾವನ್ನಪ್ಪಿದ ವ್ಯಕ್ತಿ. ಸಾಗರ್ ಸಿಂಘೆ ವಿಕಲಚೇತನನಾಗಿದ್ದು, ಕೆಲವು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಗ್ರಾಮದಲ್ಲಿಯ ಜನರ ಪಡಿತರ ಚೀಟಿ, ಪಿಂಚಣಿ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಮಾಡಿಸುವ ಕೆಲಸ ಮಾಡುತ್ತಿದ್ದರು. ಕೊರೊನಾ ಲಾಕ್‍ಡೌನ್ ನಿಂದಾಗಿ ಕೆಲ ದಿನಗಳಿಂದ ಮನೆಯಲ್ಲಿ ಇದ್ದರು. ಶಸ್ತ್ರಚಿಕಿತ್ಸೆ ಬಳಿಕ ಸಾಗರ್ ಸಿಂಘೆಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.

    ನೆರವಿಗೆ ಯಾರೂ ಬರಲಿಲ್ಲ: ಭಾನುವಾರ ಸಾಗರ್ ಅವರ ತಾಯಿ ಮತ್ತು ತಂಗಿ ಆತನನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಸಾಗರ್ ಸಾವನ್ನಪ್ಪಿದ್ದರು. ಬೆಳಗಾವಿಯಿಂದ ಊರಿಗೆ ತೆರಳಲು ನಮ್ಮ ಬಳಿ ಹಣವಿಲ್ಲ. ಯಾರಾದ್ರೂ ಸಹಾಯ ಮಾಡಿ ಎಂದು ತಾಯಿ-ಮಗಳು ಕಣ್ಣೀರಿಟ್ಟಿದ್ದಾರೆ. ಇನ್ನು ಕೆಲವರು ಕೊರೊನಾದಿಂದಲೇ ಸಾವನ್ನಪ್ಪಿರಬಹುದು ಎಂದು ಸಹಾಯ ಮಾಡಲು ಹಿಂದೇಟು ಹಾಕಿದ್ದಾರೆ.

    12 ರೂ.ಯೂ ಇರಲಿಲ್ಲ: ಜಿಲ್ಲಾಸ್ಪತ್ರೆ ಸಿಬ್ಬಂದಿ ಶವವನ್ನು ಅಂಬುಲೆನ್ಸ್ ಮುಖಾಂತರ ಬೆಳಗಾವಿಯ ಸದಾಶಿವನಗರದಲ್ಲಿರುವ ಸ್ಮಶಾನಕ್ಕೆ ಸಾಗಿಸಿ ಕೈ ತೊಳೆದುಕೊಂಡಿದ್ದಾರೆ. ಇನ್ನು ಸ್ಮಶಾನದಲ್ಲಿಯೂ ತಾಯಿ-ಮಗಳ ಸಹಾಯಕ್ಕೆ ಯಾರು ಮುಂದಾಗಿಲ್ಲ. ಶವ ಸಂಸ್ಕಾರಕ್ಕೆ ಬಳಸುವ ಕಟ್ಟಿಗೆ ಸುಮಾರು 1,200 ರೂ. ನೀಡಬೇಕು. ತಾಯಿ-ಮಗಳ ಬಳಿ 12 ರೂ. ಇಲ್ಲದಷ್ಟು ಬಡತನ. ಸಾಗರ್ ಸಾವಿನ ಸುದ್ದಿ ತಿಳಿಸಲು ಇವರ ಬಳಿ ಒಂದು ಮೊಬೈಲ್ ಸಹ ಇಲ್ಲ.

    ಅರೆಸುಟ್ಟ ಕಟ್ಟಿಗೆ ಆಯ್ದ ತಾಯಿ: ಊರಿಗೆ ತೆರಳಲು ಹಣವಿಲ್ಲ. ಸಹಾಯಕ್ಕೂ ಯಾರು ಬರುತ್ತಿಲ್ಲ. ಹೇಗಾದ್ರೂ ಮಾಡಿ ಇಲ್ಲಿಯೇ ಪುತ್ರನ ಅಂತ್ಯಕ್ರಿಯೆ ಮಾಡಬೇಕೆಂದು ನಿರ್ಧರಿಸಿದ ತಾಯಿ ಅಲ್ಲಿಯೇ ಬಿದ್ದಿದ್ದ ಅರೆಸುಟ್ಟ ಕಟ್ಟಿಗೆಗಳನ್ನ ಆಯ್ದು ಚಿತೆಗೆ ಸಿದ್ಧತೆ ನಡೆಸಿದರು. ಇಬ್ಬರು ಸೇರಿ ಕಟ್ಟಿಗೆ ತಂದು ಚಿತೆ ಮಾಡಿ, ಪುತ್ರನ ಶವವನ್ನು ಮೇಲೆತ್ತಿಟ್ಟಿದ್ದಾರೆ.

    ಮಾನವೀಯತೆ ಮೆರೆದ ಕರವೇ ಕಾರ್ಯಕರ್ತರು: ಈ ವಿಷಯ ತಿಳಿದು ಪಬ್ಲಿಕ್ ಟಿವಿ ಮತ್ತು ಕರವೇ ಕಾರ್ಯಕರ್ತರು ಸ್ಮಶಾನಕ್ಕೆ ತೆರಳಿದ್ದರು. ಕರವೇ ಕಾರ್ಯಕರ್ತರು ಶವವನ್ನು ಊರಿಗೆ ಸಾಗಿಸಲು ಸಹ ಮುಂದಾಗಿದ್ದರು. ಆದ್ರೆ ಒಮ್ಮೆ ಶವ ಚಿತೆಯ ಮೇಲಿಟ್ಟ ಮೇಲೆ ಎತ್ತಬಾರದು ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಕರವೇ ಕಾರ್ಯಕರ್ತರು ಮುಂಜಾಗ್ರತ ಕ್ರಮವಾಗಿ ಪಿಪಿಇ ಕಿಟ್ ಧರಿಸಿ ಅಂತ್ಯಸಂಸ್ಕಾರದಲ್ಲಿ ತಾಯಿ-ಮಗಳಿಗೆ ಸಹಾಯವಾದರು. ಕೊನೆಗೆ ವಿಕಲಾಂಗ ಸೋದರ ಚಿತೆಗೆ ತಂಗಿಯೇ ಬೆಂಕಿ ಇಟ್ಟು, ವಿಧಿ ವಿಧಾನ ಪೂರ್ಣಗೊಳಿಸಿದ್ದಾರೆ.

    ಮಗನನ್ನು ಕಳೆದುಕೊಂಡ ದುಃಖ ತಾಯಿಗೆ, ಆಸರೆಯಾಗಿದ್ದ ಅಣ್ಣನನ್ನು ಕಳೆದುಕೊಂಡ ದುಃಖ ತಂಗಿಗೆ. ಇಬ್ಬರ ಕಣ್ಣೀರು ಕಲ್ಲುಹೃದಯವಿದ್ದವರ ಕಣ್ಣಲ್ಲಿಯೂ ನೀರು ಬರುವಂತಿತ್ತು. ತಾಯಿ ಮಗಳಿಗೆ, ಮಗಳು ತಾಯಿ ಸಮಾಧಾನ ಹೇಳುತ್ತಾ ಕಣ್ಣೀರು ಹಾಕುತ್ತಿರುವ ದೃಶ್ಯ ನೋಡಿದ್ರೆ ದೇವರೆಷ್ಟು ಕ್ರೂರಿ ಎಂಬ ಭಾವ ಮೂಡುತ್ತೆ. ಬಡ ಕುಟುಂಬಕ್ಕೆ ಸಹಾಯವಾಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಜಿಲ್ಲಾಡಳಿತ ಶವವನ್ನು ಸ್ಮಶಾನಕ್ಕೆ ಸಾಗಿಸಿ ಕೈ ತೊಳೆದುಕೊಂಡಿದ್ದು ನಿಜಕ್ಕೂ ದೊಡ್ಡ ದುರಂತ.

    ಈ ಸಂಬಂಧ ಪ್ರತಿಕ್ರಿಯೆ ಕೇಳಲು ಪಬ್ಲಿಕ್ ಟಿವಿ ಸಂಬಂಧಿಸಿದ ಅಧಿಕಾರಿಗಳ ಸಂಪರ್ಕಕ್ಕೆ ಮುಂದಾದ್ರೆ ಯಾರು ಫೋನ್ ರಿಸೀವ್ ಮಾಡುತ್ತಿಲ್ಲ. ಬಡವರ ಸಹಾಯಕ್ಕೆ ನಾವಿದ್ದೇವೆ ಅನ್ನೋ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆ ಸ್ಥಿತಿ ತಿಳಿದುಕೊಳ್ಳುವಲ್ಲಿ ವಿಫಲರಾದ್ರಾ ಅನ್ನೋ ಪ್ರಶ್ನೆ ಮೂಡುತ್ತದೆ.

    ಅಂತ್ಯಕ್ರಿಯೆ ಬಳಿಕ ತಾಯಿ-ಮಗಳು ಬೆಳಗಾವಿಯಲ್ಲಿ ಅನಾಥರಾಗಿದ್ದರು. ಕೊನೆಗೆ ಬೆಳಗಾವಿ ಎಸ್‍ಪಿ ಇಬ್ಬರ ಸಹಾಯಕ್ಕೆ ಆಗಮಿಸಿ, ತಾಯಿ-ಮಗಳನ್ನು ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ವಿಕಲಾಂಗನಾಗಿದ್ದರೂ ಎಷ್ಟೋ ಬಡವರಿಗೆ ಪಡಿತರ ಚೀಟಿ, ಪಿಂಚಣಿ, ಸಾಲ ಸೌಲಭ್ಯ, ಸರ್ಕಾರದ ಯೋಜನೆಗಳನ್ನು ಮಾಡಿಸಿಕೊಡುತ್ತಿದ್ದ ಸಾಗರ್ ಇಂದು ಅನಾಥನಾಗಿ ಬಾರದ ಲೋಕಕ್ಕೆ ತೆರಳಿದ್ದಾರೆ.

  • ತಂಗಿಯನ್ನು ಕರ್ಕೊಂಡು ಬರಲು 1000ಕಿ.ಮೀ ಬೈಕ್ ಚಲಾಯಿಸಿಕೊಂಡು ಹೋದ ಸಹೋದರ

    ತಂಗಿಯನ್ನು ಕರ್ಕೊಂಡು ಬರಲು 1000ಕಿ.ಮೀ ಬೈಕ್ ಚಲಾಯಿಸಿಕೊಂಡು ಹೋದ ಸಹೋದರ

    – ಪಾಟ್ನಾ ಬದಲು ಜೈಪುರ ಟ್ರೈನ್ ಹತ್ತಿ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆ
    – ಜೈಪುರದಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿದಾಗ ಸಹಾಯ ಮಾಡಲು ನಿರಾಕರಣೆ

    ಜೈಪುರ: ಕೊರೊನಾ ವೈರಸ್‍ನಿಂದಾಗಿ ಇಡೀ ದೇಶ ಲಾಕ್‍ಡೌನ್ ಆಗಿದೆ. ಎಲ್ಲರೂ ತಮ್ಮ ಮನೆಯಲ್ಲಿ ಬಂಧಿಯಾಗಿದ್ದಾರೆ. ಈ ನಡುವೆ ಸಹೋದರನೊಬ್ಬ ತನ್ನ ತಂಗಿಯನ್ನು ಕರೆದುಕೊಂಡು ಬರಲು 1000 ಕಿ.ಮೀ ಬೈಕಿನಲ್ಲಿ ಹೋದ ಸುದ್ದಿಯೊಂದು ವೈರಲ್ ಆಗುತ್ತಿದೆ.

    ಅಸ್ಮಿತಾ ತನ್ನ ನಾಲ್ಕು ವರ್ಷದ ಮಗುವಿನ ಜೊತೆ ರೈಲು ಹತ್ತಿದ್ದಳು. ಅಸ್ಮಿತಾ ಪಾಟ್ನಾಗೆ ಹೋಗಬೇಕಿತ್ತು. ಆದರೆ ಆಕೆ ಪಾಟ್ನಾ ರೈಲು ಹತ್ತುವುದರ ಬದಲು ಜೈಪುರ ರೈಲು ಹತ್ತಿದ್ದಾಳೆ. ಜೈಪುರದಲ್ಲಿ ಇಳಿದ ತಕ್ಷಣ ಆಕೆ ಸಹಾಯ ಕೇಳಲು ತನ್ನ ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ಆದರೆ ಕೊರೊನಾ ಭಯದಿಂದ ಮಹಿಳೆಗೆ ಸಹಾಯ ಮಾಡಲು ಯಾರು ಮುಂದಾಗಲಿಲ್ಲ. ಈ ವಿಷಯ ಮಹಿಳೆಯ ಅಣ್ಣನಿಗೆ ಗೊತ್ತಾಗುತ್ತಿದ್ದಂತೆ ಅವರು ತನ್ನ ಬೈಕಿನಲ್ಲಿ ತಂಗಿಯನ್ನು ಕರೆದುಕೊಂಡು ಬಂದಿದ್ದಾರೆ.

    ಪಾಟ್ನಾ ನಿವಾಸಿಯಾಗಿರುವ ಅಸ್ಮಿತಾ ಮಾರ್ಚ್ 22ರ ಮೊದಲೇ ತನ್ನ ನಾಲ್ಕು ವರ್ಷದ ಮಗುವಿನ ಜೊತೆ ತವರು ಮನೆಗೆ ಬಂದಿದ್ದಳು. 22ರಂದು ಅಸ್ಮಿತಾ ಪಾಟ್ನಾದಲ್ಲಿರುವ ತನ್ನ ಮನೆಗೆ ಹೊರಟ್ಟಿದ್ದಳು. ಇದಕ್ಕಾಗಿ ಆಕೆಯ ಕುಟುಂಬಸ್ಥರು ಟ್ರೈನ್ ಟಿಕೆಟ್ ಬುಕ್ ಮಾಡಿದ್ದರು. ವರದಿಗಳ ಪ್ರಕಾರ, ಅಸ್ಮಿಕಾ ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ‘ಬಾಗ್‍ಮಿತ್ ಎಕ್ಸ್ ಪ್ರೆಸ್’ ಟ್ರೈನಿನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಆಕೆ ‘ಮೈಸೂರು-ಜೈಪುರ ಎಕ್ಸ್ ಪ್ರೆಸ್’ ರೈಲಿನಲ್ಲಿ ಹತ್ತಿದ್ದಳು.

    ಅಸ್ಮಿತಾ ತಾನು ತಪ್ಪು ರೈಲು ಹತ್ತಿದ್ದೀನಿ ಎಂದು ಅರಿವಾಗುವಷ್ಟರಲ್ಲಿ ಆಕೆ ಜೈಪುರ ಸ್ಟೇಷನ್ ತಲುಪಿದ್ದಳು. ರೈಲ್ವೆ ನಿಲ್ದಾಣದಲ್ಲಿ ಆಕೆ ಇಳಿಯುತ್ತಿದ್ದಂತೆ ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ಬಗ್ಗೆ ವಿವರಿಸಿ ಸಹಾಯ ಕೇಳಿದ್ದಾಳೆ. ಆಗ ಸಿಬ್ಬಂದಿ ಆಕೆಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರು. ಅಲ್ಲದೆ ಆಕೆಯನ್ನು ವಿಶ್ರಾಂತಿ ರೂಮಿನಲ್ಲಿ ಕೂರಿಸಿ ಊಟ ನೀಡಿದರು. ಈ ವೇಳೆ ಅಸ್ಮಿತಾ ಜೈಪುರದಲ್ಲಿರುವ ತನ್ನ ಸಂಬಂಧಿಕರಿಗೆ ಸಹಾಯ ಕೇಳಿದ್ದಾಳೆ. ಆದರೆ ಕೊರೊನಾ ಭಯದಿಂದ ಸಂಬಂಧಿಕರು ಸಹಾಯ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

    ಸಂಬಂಧಿಕರು ಸಹಾಯ ಮಾಡಲು ನಿರಾಕರಿಸುತ್ತಿದ್ದಂತೆ ಮಹಿಳೆ ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಕೊರೊನಾದಿಂದ ಎಲ್ಲಾ ರೈಲು ಹಾಗೂ ಬಸ್‍ಗಳನ್ನು ರದ್ದುಗೊಳಿಸಲಾಗಿತ್ತು. ಹೀಗಿರುವಾಗ ಸಹೋದರ ತನ್ನ ತಂಗಿಯನ್ನು ಕರೆತರಲು ಬೈಕಿನಲ್ಲೇ ಪ್ರಯಾಣಿಸಿದ್ದಾರೆ. ಸಹೋದರ ನಾಗ್ಪುರದಿಂದ 1000 ಕಿ.ಮೀ ದೂರದಲ್ಲಿರುವ ಜೈಪುರದವರೆಗೂ ಬೈಕಿನಲ್ಲಿ ತೆರಳಿ ತನ್ನ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ನಾಗ್ಪುರದಿಂದ ಜೈಪುರಕ್ಕೆ 30 ಗಂಟೆ ಪ್ರಯಾಣಿಸಬೇಕಾಗುತ್ತದೆ.

  • ದೆಹಲಿಯ ಸಿಎಎ ಪ್ರತಿಭಟನೆ ಆಯೋಜಕರ ಸೋದರಿಗೆ ಕೊರೊನಾ

    ದೆಹಲಿಯ ಸಿಎಎ ಪ್ರತಿಭಟನೆ ಆಯೋಜಕರ ಸೋದರಿಗೆ ಕೊರೊನಾ

    – ತಂಗಿ ಭೇಟಿ ಮಾಡಿ ಪ್ರತಿಭಟನಾ ಸ್ಥಳಕ್ಕೆ 2 ಬಾರಿ ಭೇಟಿ

    ನವದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಸಿಎಎ ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರು ತಮ್ಮ ಸಹೋದರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ನಂತರ ತಾವೂ ಕೂಡ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾರೆ.

    ಆಯೋಜಕರ ಸೋದರಿ ಮಾರ್ಚ್ 11 ರಂದು ಸೌದಿ ಅರೇಬಿಯಾದಿಂದ ವಾಪಸ್ ಬಂದಿದ್ದಾರೆ. ನಂತರ ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಆಕೆ ಉಮ್ರಾ ಯಾತ್ರೆ ಸಂಬಂಧ ಸೌದಿ ಅರೇಬಿಯಾ ದೇಶಕ್ಕೆ ಭೇಟಿ ನೀಡಿದ್ದರು.

    ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣಕ್ಕೆ ಸೌದಿ ಅರೇಬಿಯಾ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಆದರೆ ಪ್ರವೇಶ ನಿಷೇಧ ಮಾಡುವ ಮೊದಲೇ ಅವರು ಸೌದಿ ಅರೇಬಿಯಾಕ್ಕೆ ಹೋಗಿದ್ದರು.

    ನನ್ನ ಸಹೋದರಿ ಮರಳಿದ ಎರಡು ದಿನಗಳ ನಂತರ ಅಂದರೆ ಮಾರ್ಚ್ 13 ರಂದು ಭೇಟಿ ಮಾಡಿದ್ದೆ. ಅಲ್ಲಿಂದ ಒಂದೆರಡು ಬಾರಿ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ಆ ಸಮಯದಲ್ಲಿ ನನಗೆ ರೋಗದ ಯಾವುದೇ ಲಕ್ಷಣಗಳನ್ನು ಕಂಡು ಬಂದಿಲ್ಲ. ಆದ್ದರಿಂದ ನಾನು ಎಂದಿನಂತೆ ಪ್ರತಿಭಟನೆಗೆ ಹೋಗಿದ್ದೆ ಎಂದು 35 ವರ್ಷದ ಆಯೋಜಕ ತಿಳಿಸಿದ್ದಾರೆ.

    ನಾನು ಭೇಟಿಯಾದ ಎರಡು ದಿನಗಳ ನಂತರ ಸಹೋದರಿ ಕೊರೊನಾ ಪರೀಕ್ಷೆ ಮಾಡಿಸಿದ್ದಾಳೆ. ಆಗ ವರದಿಯಲ್ಲಿ ಪಾಸಿಟಿವ್ ಬಂದಿದೆ. ಸದ್ಯಕ್ಕೆ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    “ಸಹೋದರಿಗೆ ಕೊರೊನಾ ಪಾಸಿಟಿವ್ ಬಂದ ನಂತರ ನಾನು ಕೊರೊನಾ ವೈರಸ್ ಸೋಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದೇನೆ. ಹೀಗಾಗಿ ಈ ವಿಚಾರವನ್ನು ವೈದ್ಯರಿಗೆ ತಿಳಿಸುವುದು ಜಾಗೃತ ನಾಗರಿಕನಾಗಿ ನನ್ನ ಜವಾಬ್ದಾರಿ ಎಂದು ನಾನು ಭಾವಿಸಿದ್ದೇನೆ” ಎಂದು ಅವರು ಹೇಳಿದರು.

    ನನಗೆ ಕೊರೊನಾ ವೈರಸ್‍ನ ಯಾವುದೇ ಲಕ್ಷಣ ಕಂಡು ಬಂದಿಲ್ಲ. ಆದರೆ ಮಾರ್ಚ್ 16 ರಂದು ಕೆಮ್ಮು ಬಂದಿತ್ತು. ಹೀಗಾಗಿ ನಾನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎನಿಸಿತು ಎಂದರು. ಸದ್ಯಕ್ಕೆ ಆಯೋಜಕ ದೆಹಲಿಯ ಲೋಕ ನಾಯಕ್ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ವೈದ್ಯರು ಅವರ ರಿಪೋರ್ಟ್‍ಗಾಗಿ ಕಾಯುತ್ತಿದ್ದಾರೆ.

    ದೆಹಲಿಯಲ್ಲಿ ಈವರೆಗೆ 11 ಜನರು ಕೊರೊನಾ ವೈರಸ್ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ 169ಕ್ಕೆ ಏರಿಕೆಯಾಗಿದೆ.

  • ಸಹೋದರಿ ಸಾವನ್ನಪ್ಪಿದ್ರೂ ಶವ ತೆಗೆದುಕೊಂಡು ಹೋಗಲು ಯಾರೂ ಇಲ್ಲ: ಯುವಕ ಕಣ್ಣೀರು

    ಸಹೋದರಿ ಸಾವನ್ನಪ್ಪಿದ್ರೂ ಶವ ತೆಗೆದುಕೊಂಡು ಹೋಗಲು ಯಾರೂ ಇಲ್ಲ: ಯುವಕ ಕಣ್ಣೀರು

    – ಎರಡು ದಿನಗಳಿಂದ ಶವದೊಂದಿಗೆ ಇದ್ದೇನೆ
    – ವೈದ್ಯರು, ಕೆಲಸಗಾರರು ಯಾರೂ ಸಹಾಯ ಮಾಡ್ತಿಲ್ಲ
    – ಫೇಸ್ಬುಕ್ ವಿಡಿಯೋ ಮೂಲಕ ಯುವಕ ಅಳಲು

    ರೋಮ್: ಕೊರೊನಾ ವೈರಸ್ ತಾಂಡವ ವಿಶ್ವಾದ್ಯಂತ ಜೋರಾಗಿದ್ದು, ಇಟಲಿಯಲ್ಲಿ ಸಂಪೂರ್ಣ ಬಂದ್ ಮಾಡಿದ್ದರೂ 1,441 ಜನ ಸಾವನ್ನಪ್ಪಿದ್ದಾರೆ. 21 ಸಾವಿರಕ್ಕೂ ಅಧಿಕ ಜನ ಸೋಂಕಿಗೊಳಗಾಗಿದ್ದಾರೆ. ಈ ಮಧ್ಯೆ ಯುವಕನೊಬ್ಬ ತನ್ನ ತಂಗಿ ಸಾವನ್ನಪ್ಪಿ ಎರಡು ದಿನ ಆಗಿದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಫೇಸ್ಬುಕ್‍ನಲ್ಲಿ ವಿಡಿಯೋ ಮಾಡಿದ್ದಾನೆ. ಆದರೆ ಇಟಲಿಯನ್ನು ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆ ಶವ ತೆಗೆದುಕೊಂಡು ಹೋಗಲು ಸಹ ಯಾರೂ ಇಲ್ಲದಂತಾಗಿದೆ.

    ಇಟಲಿಯ ನೇಪಲ್ಸ್ ನ ದಕ್ಷಿಣ ನಗರದ ನಿವಾಸಿ ಲೂಕಾ ಫ್ರಾಂಜೀಸ್ ಈ ವಿಡಿಯೋ ಪೋಸ್ಟ್ ಮಾಡಿದ್ದು, ಫುಲ್ ವೈರಲ್ ಆಗಿದೆ. ‘ನನ್ನ ಸಹೋದರಿ ಕೊರೊನಾ ವೈರಸ್ ನಿಂದಾಗಿ ಮೃತಪಟ್ಟಿದ್ದಾಳೆ. ಕಳೆದೆರಡು ದಿನಗಳಿಂದ ಆಕೆಯ ಶವದೊಂದಿಗೆ ಮನೆಯಲ್ಲಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಒಬ್ಬನೇ ಇರುವುದರಿಂದ ಆಕೆಯ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಟಲಿ ಸರ್ಕಾರದ ಅಧಿಕಾರಿಗಳು ಬಂದು ಆಕೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾನೆ.

    ಯುವಕನ ಸಹೋದರಿ ತೇರೆಸಾ ಫ್ರಾಂಜೀಸ್(47)ಳಲ್ಲಿ ಕಳೆದ ವಾರ ಕೊರೊನಾ ವೈರಸ್ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಅವಳ ಆರೋಗ್ಯ ಬಹುಬೇಗ ಹದಗೆಟ್ಟಿತು. ಹೀಗಾಗಿ ವೈದ್ಯಕೀಯ ಪರೀಕ್ಷೆ ಮಾಡಿಸುವುದಕ್ಕೂ ಮೊದಲೇ ತೀರಿಕೊಂಡಳು. ಅಲ್ಲದೆ ತೇರೆಸಾಗೆ ಮೂರ್ಛೆ ರೋಗ ಸಹ ಇತ್ತು. ಹೀಗಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಯುವಕ ತಿಳಿಸಿದ್ದಾರೆ.

    ಇಟಲಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಹೀಗಾಗಿ ಯಾರೂ ಹೊರಗೆ ಬರದಂತಹ ವಾತಾವರಣ ನಿರ್ಮಾಣವಾಗಿದೆ. ಕೆಲಸಗಾರರು ಹಾಗೂ ಆಸ್ಪತ್ರೆಯವರು ಸಹ ಶವವನ್ನು ತೆಗೆಯಲು ಮುಂದಾಗುತ್ತಿಲ್ಲ. ಹೀಗಾಗಿ ವಿಡಿಯೋ ಮೂಲಕ ಯುವಕ ತನ್ನ ಅಳಲು ತೋಡಿಕೊಂಡಿದ್ದಾನೆ. ಫಿಟ್ನೆಸ್ ತರಬೇತುದಾರನಾಗಿರುವ ಫ್ರಾಂಜೀಸ್ ತನ್ನ ಸಹೋದರಿಯ ದೇಹ ತನ್ನ ಹಿಂದಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾನೆ.

    ನಾವು ಹಾಳಾಗಿದ್ದೇವೆ, ಇಟಲಿ ನಮ್ಮನ್ನು ಕಡೆಗಣಿಸಿದೆ. ನಾವು ಒಟ್ಟಿಗೆ ದೃಢವಾಗಿರಬೇಕಿದೆ, ದಯವಿಟ್ಟು ಈ ವಿಡಿಯೋವನ್ನು ಎಲ್ಲೆಡೆ ಹಂಚಿಕೊಳ್ಳಿ ಎಂದು ಫ್ರಾಂಜೀಸ್ ಮನವಿ ಮಾಡಿದ್ದಾನೆ. ಅಂತಿಮವಾಗಿ 36 ಗಂಟೆಗಳ ನಂತರ ರಕ್ಷಣಾತ್ಮಕ ಬಟ್ಟೆ ಧರಿಸಿದ ಕೆಲಸಗಾರರು ಆಗಮಿಸಿ, ದೇಹವನ್ನು ನೇರವಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ಮಾಡಿದ್ದಾರೆ. ಈ ವೇಳೆ ಮನೆಯವರಾರೂ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿಲ್ಲ. ಏಕೆಂದರೆ ಅವರಿಗೂ ಸೋಂಕು ತಗುಲಬಹುದೆಂಬ ಭಯವಿತ್ತು.

    ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಈವರೆಗೆ 5 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 1.56 ಲಕ್ಷಕ್ಕೂ ಅಧಿಕ ಜನರಲ್ಲಿ ವೈರಸ್ ಕಾಣಿಸಿಕೊಂಡಿದೆ. ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಇಟಲಿ, ಡೆನ್ಮಾರ್ಕ್ ಹಾಗೂ ಕುವೈತ್ ಸಂಪೂರ್ಣ ಬಂದ್ ಮಾಡಲಾಗಿದೆ.

  • ವಿಧವೆ ಸೋದರಿಯ ಕೊಂದು, ಅಂತ್ಯಸಂಸ್ಕಾರ ಮಾಡಿದ್ರು

    ವಿಧವೆ ಸೋದರಿಯ ಕೊಂದು, ಅಂತ್ಯಸಂಸ್ಕಾರ ಮಾಡಿದ್ರು

    – ಪ್ರೀತಿಸ್ತಿದ್ದವನ ಜೊತೆ ಮದ್ವೆ ಕನಸು ಕಂಡಿದ್ಳು
    – 2 ವರ್ಷದ ಹಿಂದೆ ಪತಿ ಸಾವು

    ಲಕ್ನೋ: ಸಹೋದರರಿಬ್ಬರು 35 ವರ್ಷದ ವಿಧವೆ ಸಹೋದರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ.

    ಕುಕ್ಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಯ ನಂತರ ಆರೋಪಿಗಳೇ ಸಹೋದರಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಮೃತ ಸಹೋದರಿ ಕುಕ್ಡಾ ಗ್ರಾಮದಲ್ಲಿ ಬೇರೆ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಇದನ್ನು ಸಹೋದರು ವಿರೋಧಿಸಿದ್ದರು. ಹೀಗಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಮಹಿಳೆಯ ಸಹೋದರರಾದ ಸುಮಿತ್ ಕುಮಾರ್ ಮತ್ತು ಸೋನು ವಿರುದ್ಧ ನ್ಯೂ ಮಂಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಗುರುವಾರ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

    ಪೊಲೀಸರಿಗೆ ಯಾವುದೇ ಮಾಹಿತಿ ನೀಡಿದೆ ಕೊಲೆ ಮಾಡಿ ಆಕೆಯ ಅಂತ್ಯಸಂಸ್ಕಾರ ಕೂಡ ಮಾಡಿದ್ದಾರೆ ಎಂದು ಮೃತ ಮಹಿಳಾ ಪ್ರಿಯತಮ ಜುಲ್ಫಿಕರ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

    ಮೃತ ಮಹಿಳೆ ಏಳು ವರ್ಷಗಳ ಹಿಂದೆ ದೆಹಲಿಯ ಮೂಲದ ವ್ಯಕ್ತಿಯ ಜೊತೆ ಮದುವೆಯಾಗಿದ್ದಳು. ಆದರೆ ಎರಡು ವರ್ಷಗಳ ಹಿಂದೆ ಮಹಿಳೆಯ ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಹೀಗಾಗಿ ಆಕೆ ಅಂದಿನಿಂದ ಕುಕ್ಡಾ ಗ್ರಾಮದಲ್ಲಿದ್ದ ತನ್ನ ಪೋಷಕರ ಮನೆಗೆ ಬಂದು ವಾಸಿಸುತ್ತಿದ್ದಳು.

    ಈ ವೇಳೆ ಅದೇ ಗ್ರಾಮದ ಜುಲ್ಫಿಕರ್ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ ಮೃತ ಮಹಿಳೆ ಆತನನ್ನೇ ಮದುವೆಯಾಗಬೇಕೆಂದು ಬಯಸಿದ್ದಳು. ಆದರೆ ಜುಲ್ಫಿಕರ್ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಆಕೆಯ ಸಹೋದರರು ಇವರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಆಸ್ತಿಗಾಗಿ ತಂದೆ-ತಾಯಿ, ಒಡಹುಟ್ಟಿದ ಅಕ್ಕನನ್ನ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ

    ಆಸ್ತಿಗಾಗಿ ತಂದೆ-ತಾಯಿ, ಒಡಹುಟ್ಟಿದ ಅಕ್ಕನನ್ನ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ

    ವಿಜಯಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ಅಕ್ಕನನ್ನು ಬರ್ಬರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿದೆ.

    ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿಯ ತೋಟದ ಮನೆಯಲ್ಲಿ ಘಟನೆ ನಡೆದಿದ್ದು, ಸಿದ್ದಪ್ಪ ಅರಕೇರಿ ಕೊಲೆ ಮಾಡಿದ ಪಾಪಿ. ತಂದೆ ಗುರುಲಿಂಗಪ್ಪ ಅರಕೇರಿ (82), ತಾಯಿ ನಾಗವ್ವ ಅರಕೇರಿ (75) ಹಾಗೂ ಅಕ್ಕ ಸಮುದ್ರಾಬಾಯಿ (60) ಕೊಲೆಯಾದ ದುರ್ದೈವಿಗಳು.

    ಆಸ್ತಿಯ ವಿಚಾರವಾಗಿ ಸಿದಪ್ಪ ಆಗಾಗ ತಂದೆ-ತಾಯಿ ಹಾಗೂ ಅಕ್ಕನ ಜೊತೆಗೆ ಜಗಳ ಮಾಡುತ್ತಿದ್ದ. ಬುಧವಾರ ಜಗಳ ತಾರಕಕ್ಕೇರಿದ ಪರಿಣಾಮ ಸಿದ್ದಪ್ಪ ಕೊಡಲಿಯಿಂದ ಮೂವರನ್ನೂ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಸಮೀಪದ ಉಮದಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉಮದಿ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತ ದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.

  • ಅಂತರ್ಜಾತಿ ಮದ್ವೆಯಾದ ತಂಗಿ – 11 ವರ್ಷದ ಬಳಿಕ ಸೋದರಿ ಪತಿ ಮೇಲೆ ಅಣ್ಣಂದಿರಿಂದ ಹಲ್ಲೆ

    ಅಂತರ್ಜಾತಿ ಮದ್ವೆಯಾದ ತಂಗಿ – 11 ವರ್ಷದ ಬಳಿಕ ಸೋದರಿ ಪತಿ ಮೇಲೆ ಅಣ್ಣಂದಿರಿಂದ ಹಲ್ಲೆ

    ಯಾದಗಿರಿ: ತಂಗಿ ಅಂತರ್ಜಾತಿ ವಿವಾಹವಾದ ಹಳೆ ದ್ವೇಷ ಹಿನ್ನೆಲೆ 11 ವರ್ಷದ ಬಳಿಕ ತಂಗಿ ಪತಿಯ ಮೇಲೆ ಅಣ್ಣಂದಿರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಹಳಿಗೇರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 11 ವರ್ಷದ ಹಿಂದೆ ಗ್ರಾಮದ ಶರಣಮ್ಮ ಮತ್ತು ವಿಶ್ವನಾಥ್ ಅಂತರ್ಜಾತಿ ವಿವಾಹವಾಗಿದ್ದರು. ಈಗಾಗಲೇ ಈ ಇಬ್ಬರಿಗೆ ಎರಡು ಮಕ್ಕಳಿದ್ದಾರೆ. ಆದರೆ ಮೊದಲಿಂದಲೂ ಶರಣಮ್ಮ ಮತ್ತು ವಿಶ್ವನಾಥ್ ಮೇಲೆ ಶರಣಮ್ಮನ ಮನೆಯವರು ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ.

    ಬುಧವಾರ ವಿನಾಕಾರಣ ವಿಶ್ವನಾಥ್‍ನ ಜೊತೆಗೆ ಜಗಳ ಮಾಡಿದ ಶರಣಮ್ಮನ ಅಣ್ಣಂದಿರು ಹಿಗ್ಗಾ-ಮುಗ್ಗ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿದ್ದ ವಿಶ್ವನಾಥ್‍ನನ್ನು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಮಯದಲ್ಲೂ ಕೂಡ ಜಿಲ್ಲಾಸ್ಪತ್ರೆಗೆ ಬಂದ ಶರಣಮ್ಮ ಅಣ್ಣಂದಿರು ಮತ್ತೊಮ್ಮೆ ಹಿಗ್ಗಾ ಮುಗ್ಗಾ ವಿಶ್ವನಾಥ್‍ನಿಗೆ ಥಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿಗೆ ಸೇರಿದ ತಮ್ಮ

    ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿಗೆ ಸೇರಿದ ತಮ್ಮ

    -ಹೆತ್ತವರಿಲ್ಲದೇ ಸಹಾಯ ಹಸ್ತ ಬಯಸುತ್ತಿರುವ ಬಡ ಜೀವಗಳು

    ಮೈಸೂರು: ಅಕ್ಕ-ತಮ್ಮ ಬಾಂಧವ್ಯ, ಅಣ್ಣ-ತಂಗಿಯ ಬಾಂಧವ್ಯ ಯಾವತ್ತೂ ಅಮರ. ಅಕ್ಕನಿಗಾಗಿ, ತಂಗಿಗಾಗಿ ಸಹೋದರ ಏನೂ ಬೇಕಾದರೂ ಮಾಡುತ್ತಾನೆ. ಯಾವ ತ್ಯಾಗಕ್ಕೂ ಬೇಕಾದರೂ ಸಿದ್ಧನಾಗುತ್ತಾನೆ. ಈ ಮಾತಿಗೆ ಸಾಕ್ಷಿ ಎನ್ನುವಂತಹ, ಮನ ಕಲುಕುವ ಸುದ್ದಿ ಇದಾಗಿದ್ದು, ತಂದೆ ತಾಯಿಯನ್ನು ಕಳೆದುಕೊಂಡ ಬಾಲಕ, ಪಾರ್ಶ್ವವಾಯು ರೋಗಕ್ಕೆ ಒಳಗಾದ ಅಕ್ಕನ ಆರೈಕೆಗಾಗಿ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಾನೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಅಲನಹಳ್ಳಿ ಗ್ರಾಮದ ಮಂಜುಳಾ ಮತ್ತು ಕುಮಾರ್ ದಂಪತಿ ಪುತ್ರ ಆಕಾಶ್(15) ತನ್ನ ಅಕ್ಕ ಅನುಷಾ(17) ಆರೈಕೆಗಾಗಿ ಓದು ಬಿಟ್ಟು ಕೂಲಿಗೆ ಇಳಿದಿದ್ದಾನೆ. ಅನಾರೋಗ್ಯದಿಂದ ಇವರ ತಂದೆ ತಾಯಿ ಮೃತಪಟ್ಟಿದ್ದಾರೆ. ಗ್ರಾಮದ ಟಿ.ಎಸ್ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಆಕಾಶ್ 8ನೇ ತರಗತಿ ಓದುತ್ತಿದ್ದ. ಹೆತ್ತವರು ಮೃತಪಟ್ಟ ಕಾರಣ ರೋಗ ಪೀಡಿತ ಅಕ್ಕನ ನೋಡಿಕೊಳ್ಳಲು ಯಾರು ಇಲ್ಲದೆ, ಮನೆ ನಿರ್ವಹಣೆಗೆ ದಾರಿಯೂ ಇಲ್ಲದ ಕಾರಣ ಶಾಲೆ ಬಿಟ್ಟು ಕೂಲಿ ಮಾಡುತ್ತಿದ್ದಾನೆ.

    ಅಕ್ಕನಿಗೆ ಕೈ ಕಾಲುಗಳು ಸ್ವಾಧೀನ ಇಲ್ಲ. ಆಕೆಯ ನಿತ್ಯ ಕರ್ಮ ಪೂರೈಸಲು, ಊಟ ಮಾಡಿಸಲು, ಬಟ್ಟೆ ಬದಲಿಸಲು ತಮ್ಮ ನೆರವಾಗುತ್ತಿದ್ದಾನೆ. ಅಕ್ಕನ ಕೆಲಸ ಮುಗಿಸಿ ಕೂಲಿಗೆ ಹೋಗುತ್ತಿದ್ದಾನೆ. ಸಂಜೆ ಮನೆಗೆ ಬಂದು ಅಡುಗೆ ಮಾಡಿ ಅಕ್ಕನಿಗೆ ಊಟ ಮಾಡಿಸುತ್ತಾನೆ. ಈ ಅನಾಥ ಅಕ್ಕ-ತಮ್ಮನಿಗೆ ಉಳ್ಳವರ ಸಹಾಯ ಬೇಕಿದೆ.

    ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲ್ಲೂಕಿನ ಹಾಲಹಳ್ಳಿ ಆಕಾಶ್ ಮನೆಗೆ ತಹಸೀಲ್ದಾರ್ ಆರ್ ಮಂಜುನಾಥ್ ಭೇಟಿ ನೀಡಿದ್ದರು. ಅನುಷಾಳಿಗೆ ಮೆದುಳು ನಿಷ್ಕ್ರಿಯ ಕಾಯಿಲೆ(ಸೆಬರ್ ಪಾಲ್ಸಿ) ಎಂಬ ಕಾಯಿಲೆ ಇದ್ದು, ಆಕೆಗೆ ಯಾವುದೇ ಸ್ವಾಧೀನ ಇರುವುದಿಲ್ಲ ಹೀಗಾಗಿ ಆಕೆಯನ್ನು ಮೈಸೂರಿನ ಕರುಣಾಲಯ ಟ್ರಸ್ಟ್ ಗೆ ಸ್ಥಳಾಂತರಿಸಿ ಆಕೆಯ ಶುಶ್ರೂಷೆಯನ್ನು ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

    ಇತ್ತ ಆಕಾಶ್‍ನನ್ನು ಮೈಸೂರಿನ ಬಾಲಮಂದಿರಕ್ಕೆ ಸೇರಿಸಿ ಶಿಕ್ಷಣ ಕೊಡಿಸಲಾಗುವುದು ಎಂದು ತಿಳಿಸಿದಾಗ, ಬಾಲಕ ಆಲನಹಳ್ಳಿಯ ಶಾಲೆಯಲ್ಲಿ ಓದುತ್ತೇನೆ ನನಗೆ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಿ ಎಂದು ಹೇಳಿದ್ದಾನೆ. ಆತನ ಇಚ್ಛೆಯಂತೆ ಕ್ಯಾತನಹಳ್ಳಿಯಲ್ಲಿ ಹಾಸ್ಟೆಲ್ ಇದ್ದು ಆತನನ್ನು ಅಲ್ಲಿಗೇ ಸೇರಿಸಿ ಶಿಕ್ಷಣ ಮುಂದುವರಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

  • ಪ್ರಿಯಕರನನ್ನೇ ಮದ್ವೆ ಆಗ್ತೇನೆ ಎಂದಿದ್ದಕ್ಕೆ ಸಹೋದರಿಯ ಗುಪ್ತಾಂಗಕ್ಕೆ ಗುಂಡಿಕ್ಕಿದ

    ಪ್ರಿಯಕರನನ್ನೇ ಮದ್ವೆ ಆಗ್ತೇನೆ ಎಂದಿದ್ದಕ್ಕೆ ಸಹೋದರಿಯ ಗುಪ್ತಾಂಗಕ್ಕೆ ಗುಂಡಿಕ್ಕಿದ

    – ಕೊಲೆ ಮಾಡಿ 3 ಗಂಟೆ ವಿಷಯ ಮುಚ್ಚಿಟ್ಟಿದ್ದ ಕುಟುಂಬಸ್ಥರು
    – ಆಸ್ಪತ್ರೆಗೆ ಹೋದಾಗ ಪ್ರಕರಣ ಬೆಳಕಿಗೆ

    ಲಕ್ನೋ: ಸಹೋದರಿ ಪ್ರೀತಿಸುತ್ತಿರುವ ವಿಷಯ ತಿಳಿದು ಸಹೋದರ ಸಂಬಂಧಿ ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‍ನಲ್ಲಿ ನಡೆದಿದೆ.

    ಟೀನಾ ಚೌಧರಿ ಕೊಲೆಯಾದ ಯುವತಿ. 12ನೇ ತರಗತಿಯಲ್ಲಿ ಓದುತ್ತಿರುವ ಟೀನಾ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಆಕೆ ಸಹೋದರ ಸಂಬಂಧಿ ಪ್ರಶಾಂತ್ ರೊಚ್ಚಿಗೆದ್ದು ಆಕೆಯ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಕುಟುಂಬಸ್ಥರು ಈ ಕೊಲೆ ವಿಷಯವನ್ನು ಮೂರು ಗಂಟೆಗಳ ಕಾಲ ಮುಚ್ಚಿಟ್ಟಿದ್ದರು. ಬಳಿಕ ಟೀನಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಈ ವಿಷಯ ಪೊಲೀಸರಿಗೆ ತಿಳಿದು ಬಂತು. ಇದನ್ನೂ ಓದಿ: ಅವಳನ್ನ ಕರ್ಕೊಂಡು ಹೋಗ್ತೀನಿ, ಇಲ್ಲಾಂದ್ರೆ ಶೂಟ್ ಮಾಡ್ಕೋತಿನಿ: ಪಾಗಲ್ ಪ್ರೇಮಿಯ ಹುಚ್ಚಾಟ

    ದರೋಡೆಕೋರರು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಬಂದು ಕೊಲೆ ಮಾಡಲು ಯತ್ನಿಸಿದರು ಎಂದು ಮೊದಲು ಕುಟುಂಬಸ್ಥರು ಸುಳ್ಳು ಹೇಳಲು ಪ್ರಯತ್ನಿಸಿದರು. ಈ ಮೂಲಕ ಸಾಕ್ಷಿಗಳನ್ನು ನಾಶ ಮಾಡಲು ಕುಟುಂಬಸ್ಥರು ಪ್ರಯತ್ನಿಸಿದ್ದರು. ಮರಣೋತ್ತರ ವರದಿ ಬಂದಾಗ ಯುವತಿಗೆ ಮೂರು ಗುಂಡು ತಗುಲಿದ ವಿಷಯ ಬೆಳಕಿಗೆ ಬಂತು. ಮೊದಲ ಗುಂಡು ಟೀನಾಳ ತೊಡೆಯ ಭಾಗದಲ್ಲಿ, ಎರಡನೇಯ ಗುಂಡು ಆಕೆಯ ಗುಪ್ತಾಂಗದಲ್ಲಿ ಹಾಗೂ ಮೂರನೇ ಗುಂಡು ಆಕೆಯ ಸೊಂಟದಲ್ಲಿ ಪತ್ತೆಯಾಗಿತ್ತು.

    ಸದ್ಯ ಪೊಲೀಸರು ಪ್ರಶಾಂತ್, ಆತನ ಪೋಷಕರ ಹಾಗೂ ಟೀನಾಳ ಪೋಷಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಎಸ್‍ಪಿ ಅವಿನಾಶ್ ಪಾಂಡೆ ಪ್ರತಿಕ್ರಿಯಿಸಿ, ಘಟನೆ ನಡೆದ ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದ್ದು, ಯಾರೋ ಅದನ್ನು ಕ್ಲೀನ್ ಮಾಡಲು ಪ್ರಯತ್ನಿಸಿದ್ದರು. ಸ್ಥಳದಲ್ಲಿ ಬಳೆಗಳ ಚೂರು ಪತ್ತೆಯಾಗಿದೆ. ಇದರಿಂದ ಟೀನಾಳನ್ನು ಬಲವಂತ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಸದ್ಯ ಪ್ರಶಾಂತ್, ಆತನ ಪೋಷಕರನ್ನು ಹಾಗೂ ಟೀನಾಳ ಪೋಷಕರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

    ಟೀನಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಇದು ಆಕೆಯ ಕುಟುಂಬಸ್ಥರಿಗೆ ಇಷ್ಟವಿರಲಿಲ್ಲ. ಅಲ್ಲದೆ ಈ ಸಂಬಂಧವನ್ನು ಅವರು ನಿರಾಕರಿಸಿದ್ದರು. ಟೀನಾ ನಾನು ಆ ಯುವಕನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಾಗ ಆಕೆಯ ಪೋಷಕರು ಆಕೆಯನ್ನು ರೂಮಿನಲ್ಲಿ ಲಾಕ್ ಮಾಡಿದ್ದರು. ಟೀನಾಳ ಮನೆಯ ಹತ್ತಿರದಲ್ಲೇ ಪ್ರಶಾಂತ್ ಮನೆ ಕೂಡ ಇತ್ತು. ಹಲವು ದಿನಗಳಿಂದ ಪ್ರಶಾಂತ್‍ಗೆ ಈ ಸಂಬಂಧ ಇಷ್ಟವಿರಲಿಲ್ಲ.

    ಶನಿವಾರ ಟೀನಾ ಯಾವುದೋ ಕೆಲಸದ ಮೇಲೆ ಪ್ರಶಾಂತ್ ಮನೆಗೆ ಹೋಗಿದ್ದಳು. ಈ ವೇಳೆ ಪ್ರಶಾಂತ್, ಟೀನಾಳಿಗೆ ಪ್ರೀತಿ-ಪ್ರೇಮದಿಂದ ದೂರ ಇರುವಂತೆ ಹೇಳಿದ್ದಾನೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಟೀನಾ, ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪ್ರಶಾಂತ್ ಆಕೆಯ ಮೇಲೆ ಮೂರು ಬಾರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಪರಿಣಾಮ ಟೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.