Tag: sister

  • ಕೊರೊನಾ ಗೆದ್ದ ಸಹೋದರಿಯನ್ನು ಭರ್ಜರಿಯಾಗಿ ಸ್ವಾಗತಿಸಿದ ಯುವತಿ- ವಿಡಿಯೋ ವೈರಲ್

    ಕೊರೊನಾ ಗೆದ್ದ ಸಹೋದರಿಯನ್ನು ಭರ್ಜರಿಯಾಗಿ ಸ್ವಾಗತಿಸಿದ ಯುವತಿ- ವಿಡಿಯೋ ವೈರಲ್

    – ಯುವತಿಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ

    ಪುಣೆ: ಮಹಾಮಾರಿ ಕೊರೊನಾ ವೈರಸ್ ಗೆದ್ದವರ ಮೇಲೆ ಹೂಮಳೆ ಸುರಿಸಿ ಆತ್ಮೀಯವಾಗಿ ಸ್ವಾಗತಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಯುವತಿ ಚೀನಿ ವೈರಸ್ ಗೆದ್ದು ಬಂದ ತನ್ನ ಸಹೋದರಿಯನ್ನು ವಿಭಿನ್ನವಾಗಿ ಸ್ವಾಗತಿಸುವ ಮೂಲಕ ಸಖತ್ ಸುದ್ದಿಯಾಗಿದ್ದಾಳೆ.

    ಹೌದು. ಪುಣೆ ಮೂಲದ ಸಲೋನಿ ಸತ್ಪೂಟ್ ಎಂಬ ಯುವತಿ ತನ್ನ ಸಹೋದರಿಯನ್ನು ಹಿಂದಿಯ ಚಿಲ್ಲರ್ ಪಾರ್ಟಿ ಸಿನಿಮಾದ ಹಾಡಿಗೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ್ದಾಳೆ. ಯುವತಿ ಡ್ಯಾನ್ಸ್ ಮಾಡುವ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ತನ್ನ ಸಹೋದರಿ ಚೀನೀ ವೈರಸ್ ಕೋವಿಡ್ 19 ನಿಂದ ಗುಣಮುಖರಾಗಿ ಮನೆಗೆ ವಾಪಸ್ ಆಗುತ್ತಿದ್ದಾರೆ. ಈ ವೇಳೆ ಸಲೋನಿ ಸಖತ್ ಸ್ಟೆಪ್ಸ್ ಹಾಕಿ ಸ್ವಾಗತಿಸಿದ್ದಾರೆ. ಈ ವೇಳೆ ಗುಣಮುಖರಾದವರು ಕೂಡ ಸಲೋನಿಗೆ ಸಾಥ್ ನೀಡಿದ್ದು, ಇಬ್ಬರೂ ಸಖತ್ತಾಗಿ ಡ್ಯಾನ್ಸ್ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇತ್ತೀಚೆಗೆ ಸಲೋನಿಯನ್ನು ಬಿಟ್ಟು ಆಕೆಯ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್ ಬಂದಿತ್ತು. ಮೊದಲು ಸಲೋನಿ ತಂದೆಗೆ ಕೊರೊನಾ ಪಾಸಟಿವ್ ಬಂದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆ ಬಳಿಕ ಮನೆಯವರನ್ನು ಟೆಸ್ಟ್ ಗೆ ಕರೆದೊಯ್ಯಲಾಯಿತು. ಈ ವೇಳೆ ಮನೆಯ ನಾಲ್ವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಹೀಗಾಗಿ ಎಲ್ಲರನ್ನೂ ಆಸ್ಪತ್ರೆಯಲ್ಲಿ ದಾಖಲಿಸಿಲಾಯಿತು. ಇತ್ತ ಸಲೋನಿ ವರದಿ ಮಾತ್ರ ನೆಗೆಟಿವ್ ಎಂದು ಬಂದಿದ್ದು, ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು.

    ಈ ಮಧ್ಯೆ ಮೊದಲು ಸಲೋನಿ ತಂದೆ-ತಾಯಿ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದು, ಆ ನಂತರ ಕೆಲ ದಿನಗಳ ಬಳಿಕ ಸಹೋದರಿ ಕೊರೊನಾ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಸಹೋದರಿ ಮನೆಗೆ ಪಾಸ್ಸಾಗುತ್ತಿದ್ದಂತೆಯೇ ಸಲೋನಿ ಸಖತ್ ಡ್ಯಾನ್ಸ್ ಮಾಡುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡಳು.

    ಸದ್ಯ ಸಲೋನಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈಕೆಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ತನ್ನ ಸಹೋದರಿಯ ಮೇಲೆ ಆಕೆಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾಳೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

  • ಅಕ್ಕನನ್ನು ಚುಡಾಯಿಸಿದ್ದಕ್ಕೆ ವ್ಯಕ್ತಿಯ ತಲೆಯನ್ನು ಜಜ್ಜಿ ಕೊಲೆ ಮಾಡಿದ ತಮ್ಮ

    ಅಕ್ಕನನ್ನು ಚುಡಾಯಿಸಿದ್ದಕ್ಕೆ ವ್ಯಕ್ತಿಯ ತಲೆಯನ್ನು ಜಜ್ಜಿ ಕೊಲೆ ಮಾಡಿದ ತಮ್ಮ

    ತುಮಕೂರು: ಅಕ್ಕನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಹಾಡಹಗಲೇ ತಮ್ಮನೊಬ್ಬ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಮಂಡಿಪೇಟೆಯ ಜಾಮಿಯಾ ಮಸೀದಿ ಬಳಿ ನಡೆದಿದೆ.

    ದಾದಾಪೀರ್ (55) ಕೊಲೆಯಾಗಿದ್ದು, ಮಧುಕುಮಾರ್ ಕೊಲೆಗೈದ ಆರೋಪಿ. ಆರೋಪಿ ಮಧುಕುಮಾರ್ ಅಕ್ಕ ಲಕ್ಷ್ಮಿ ನಗರದ ಚರ್ಚ್ ವೃತ್ತದ ಬಳಿ ಕ್ಯಾಂಟೀನ್ ನಡೆಸುತ್ತಿದ್ದು, ಇಂದು ಮಧ್ಯಾಹ್ನ ಅಲ್ಲಿಗೆ ಬಂದ ದಾದಾಪೀರ್ ಬಿಸ್ಕೆಟ್ ಪ್ಯಾಕೇಟ್ ಹೇಳಿದ್ದಾನೆ. ಲಕ್ಷ್ಮಿಯವರು ಹಣ ಕೇಳಿದ್ದಾರೆ. ನಾನೇನು ದುಡ್ಡು ಪ್ರಿಂಟ್ ಮಾಡುತ್ತೇನಾ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾನೆ.

    ಇಷ್ಟಕ್ಕೆ ಸುಮ್ಮನಾಗದ ದಾದಾಪೀರ್ ಲಕ್ಷ್ಮಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಗ ಅಲ್ಲೇ ಕುಳಿತು ಟೀ ಕುಡಿಯುತ್ತಿದ್ದ ತಮ್ಮ ಮಧು ದಾದಾಪೀರ್ ಗೆ ಸರಿಯಾಗಿ ಮಾತನಾಡುವಂತೆ ಹೇಳಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಡಿದ್ದಾರೆ. ಆಗ ಸ್ಥಳೀಯರು ಆ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಮೃತ ದಾದಾಪೀರ್ ಮಧುವನ್ನು ಹಿಂಬಾಲಿಸಿಕೊಂಡು ಬಂದು ಜಾಮಿಯಾ ಮಸೀದಿಯ ಬಳಿ ಅಡ್ಡಗಟ್ಟಿ ಜಗಳ ತೆಗೆದಿದ್ದಾನೆ.

    ಅಲ್ಲು ಕೂಡ ದಾದಾಪೀರ್ ಮಧುಗೆ ಆವಾಜ್ ಹಾಕಿದ್ದಾನೆ. ಮಾತ್ರವಲ್ಲದೆ ಮಧುಕುಮಾರ್ ಕೆನ್ನೆಗೆ ಬಾಸುಂಡೆ ಬರುವ ಹಾಗೆ ಹೊಡೆದು, ಏನು ಹೊಡೆಯುತ್ತೀಯ ಎಂದು ಗಲಾಟೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮಧು ಅಲ್ಲೇ ಇದ್ದ ಕಲ್ಲಿನಿಂದ ದಾದಾಪೀರ್ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಅಣ್ಣ ಸಾವು

    ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಅಣ್ಣ ಸಾವು

    – ಪೊಲೀಸರ ಲಾಠಿ ಏಟಿಗೆ ಸಾವು ಆರೋಪ

    ವಿಜಯಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಅಣ್ಣ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ಸಾವನ್ನಪ್ಪಿದ ಯುವಕನನ್ನು ಸಾಗರ್ (19) ಎಂದು ಗುರುತಿಸಲಾಗಿದೆ. ಜಿಲ್ಲೆಯ ಬಸವನಬಾ ಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಸಾಗರ್ ತನ್ನ ತಂಗಿಯನ್ನು ಕರೆದುಕೊಂಡು ಬಂದಿದ್ದ. ತಂಗಿಯನ್ನು ಪರೀಕ್ಷೆಗೆ ಕಳುಹಿಸಿ ಪರೀಕ್ಷೆ ಮುಗಿಯುವರೆಗೂ ಶಾಲೆಯ ಬಳಿಯೇ ಕಾದು ಕುಳಿತ್ತಿದ್ದ.

    ಈ ವೇಳೆ ಸಾಗರ್ ತಂಗಿಗೆ ನಕಲು ಪತ್ರ ಕೊಡಲು ಹೋದಾಗ ಪೊಲೀಸರು ಬೆನ್ನಟ್ಟಿದ್ದಾರೆ. ಆಗ ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಾಗರ ಹೆದರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಆದರೆ ಈ ಹೇಳಿಕೆಯನ್ನು ಯುವಕನ ಕುಟುಂಬದವರು ತಳ್ಳಿ ಹಾಕಿದ್ದು, ಪೊಲೀಸರು ಲಾಠಿಯಿಂದ ಹೊಡೆದ ಕಾರಣ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.

    ಜೊತೆ ಇದ್ದ ಪ್ರತ್ಯಕ್ಷದರ್ಶಿ ಈ ವಿಚಾರವಾಗಿ ಮಾಹಿತಿ ನೀಡಿದ್ದು, ನಾವು ಪರೀಕ್ಷಾ ಕೇಂದ್ರದ ಹೊರಗಡೆ ಕುಳಿತಿದ್ದೆವು. ಆಗ ಅಲ್ಲಿಗೆ ಪೊಲೀಸ್ ಬಂದು ಪರೀಕ್ಷೆ ಮುಗಿಯುವವರೆಗೂ ಇಲ್ಲಿ ಕುಳಿತುಕೊಳ್ಳಬಾರದು ಎಂದು ಹೇಳಿದರು. ಆಗ ನಾವು ಬೈಕ್ ಹತ್ತಿ ಹೊರಟಿದ್ದೆವು. ಆ ಸಂದರ್ಭದಲ್ಲಿ ಪೇದೆಯೊಬ್ಬರು ನನಗೂ ಕಾಲಿಗೆ ಒಂದು ಏಟು ಹೊಡೆದರು. ನಂತರ ಬೈಕ್‍ನಲ್ಲಿ ನನ್ನ ಹಿಂದೆ ಕುಳಿತಿದ್ದ ಸಾಗರ್ ಬೆನ್ನಿಗೆ ಹೊಡೆದರು. ಆಗ ಆತ ಕೆಳಗಡೆ ಬಿದ್ದ. ನಂತರ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆವು ಎಂದು ಹೇಳಿದ್ದಾರೆ.

    ಸದ್ಯ ಸಾಗರ್ ಹೃದಯಾಘಾತದಿಂದ ಸಾವನ್ನಪ್ಪಿದನೋ ಅಥವಾ ಪೊಲೀಸ್‍ರ ಲಾಠಿ ಏಟಿಗೆ ಸಾವನ್ನಪ್ಪಿದನೋ ಎಂಬುದು ಸೂಕ್ತ ತನಿಖೆಯ ನಂತರ ತಿಳಿಯಬೇಕಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ‘ಆ’ ದಿನಗಳನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೇನೆ: ಕಿಚ್ಚ ಸುದೀಪ್

    ‘ಆ’ ದಿನಗಳನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೇನೆ: ಕಿಚ್ಚ ಸುದೀಪ್

    ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಬಾಲ್ಯದಲ್ಲಿ ಕುಟುಂಬದ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಆ ದಿನಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ಹೇಳಿದ್ದಾರೆ.

    ಸುದೀಪ್ ತಮ್ಮ ತಾಯಿ ಸರೋಜಾ, ಸಹೋದರಿಯರಾದ ಸುರೇಖಾ ಹಾಗೂ ಸುಜಾತಾ ಅವರೊಂದಿಗೆ ತೆಗೆಸಿಕೊಂಡ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈಗಿನ ದಿನಗಳಲ್ಲಿ ಕುಟುಂಬದ ಜೊತೆಗೆ ಇಂತಹ ಅಪರೂಪದ ಫೋಟೋಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಕಷ್ಟವಾಗುತ್ತಿದೆ. ಆ ಗಳಿಗೆಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ” ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/CB7cwjKn-sW/

    ವಿಶೇಷವೆಂದರೆ ಕಿಚ್ಚನ ತಂದೆ-ತಾಯಿ ಹಾಗೂ ಸಹೋದರಿಯರ ಹೆಸರು ಇಂಗ್ಲಿಷ್‍ನ ‘ಎಸ್’ ಅಕ್ಷರದಿಂದ ಪ್ರಾರಂಭವಾಗುತ್ತದೆ. ಸುಜಾತಾ-ಸಂಜೀವ್ ದಂಪತಿಯ ಮೊದಲ ಮಗಳು ಸುರೇಖಾ, ಎರಡನೇ ಸುಜಾತಾ ಕೊನೆಯ ಹಾಗೂ ಮೂರನೇ ಮಗ ಅಭಿಯನ ಚಕ್ರವರ್ತಿ ನಟ ಕಿಚ್ಚ ಸುದೀಪ್.

    ಕೊರೊನಾ ವೈರಸ್ ಭೀತಿಯಿಂದಾಗಿ ಸಿನಿಮಾ ಚಿತ್ರೀಕರಣ ಸ್ತಬ್ಧವಾಗಿದ್ದು, ನಟ-ನಟಿ, ಕಲಾವಿದರು, ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ನಟ ಸುದೀಪ್ ಕೂಡ ಪತ್ನಿ ಹಾಗೂ ಮಗಳ ಜೊತೆಗೆ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕಳೆದ ತಿಂಗಳ 20ರಂದು ಸಾನ್ವಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದರು.

     

  • ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಅಣ್ಣ-ತಂಗಿ ಆತ್ಮಹತ್ಯೆ

    ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಅಣ್ಣ-ತಂಗಿ ಆತ್ಮಹತ್ಯೆ

    ಮಂಗಳೂರು: ಅಣ್ಣ- ತಂಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ನೀಲಯ್ಯ ಶೆಟ್ಟಿಗಾರ್(42) ಹಾಗೂ ತಂಗಿ ಕೇಸರಿ(39) ಮೃತಪಟ್ಟವರು. ಇಬ್ಬರೂ ಅವಿವಾಹಿತರಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ ಸುಮಾರು 11 ಗಂಟೆಯ ಬಳಿಕ ತಮ್ಮ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮನೆಯಲ್ಲಿ ನೀಲಯ್ಯ ಅವರ ಸಹೋದರ ಮತ್ತು ಅವರ ಪತ್ನಿ, ಮಗ ವಾಸವಿದ್ದು ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ನರಳಾಟದ ಶಬ್ದ ಕೇಳಿ ಕೂಡಲೇ ಬಂದು ಬೆಂಕಿ ನಂದಿಸಿದರೂ ಅಣ್ಣ-ತಂಗಿ ಇಬ್ಬರೂ ಮೃತಪಟ್ಟಿದ್ದರು.

    ಕೇಸರಿ 30 ವರ್ಷಗಳಿಂದ ಮಾನಸಿಕ ವಾಗಿ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗಿದೆ. ಕೆಲ ತಿಂಗಳ ಹಿಂದೆ ಇವರ ತಂದೆ ಹಾಗೂ ತಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಾಳೆ ಮದುವೆ ಆಗಬೇಕಿದ್ದ ವಧುವಿನ ತಂದೆ, ತಂಗಿಗೆ ಕೊರೊನಾ ಪಾಸಿಟಿವ್

    ನಾಳೆ ಮದುವೆ ಆಗಬೇಕಿದ್ದ ವಧುವಿನ ತಂದೆ, ತಂಗಿಗೆ ಕೊರೊನಾ ಪಾಸಿಟಿವ್

    – ಮದ್ವೆ ಮನೆಯ ಸಂತಸಕ್ಕೆ ಕೊಳ್ಳಿಯಿಟ್ಟ ಮಹಾಮಾರಿ

    ಯಾದಗಿರಿ: ಜಿಲ್ಲೆಯಲ್ಲಿ ಇಷ್ಟು ದಿನ ಕ್ವಾರೆಂಟೈನ್ ಕೇಂದ್ರಗಳಿಗೆ ಸೀಮಿತವಾಗಿದ್ದ ಡೆಡ್ಲಿ ಕೊರೊನಾ ವೈರಸ್, ಈಗ ಜಿಲ್ಲೆಯ ಮದುವೆ ಮನೆಯೊಂದರ ಬಾಗಿಲು ತಟ್ಟಿದೆ. ನಾಳೆ ಮದುವೆಯಾಗಬೇಕಿದ್ದ ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ವಕ್ಕರಿಸಿದೆ.

    ಯಾದಗಿರಿ ತಾಲೂಕಿನ ಅಲ್ಲಿಪೂರತಾಂಡಾದ ಯುವತಿ ಜೊತೆ ನಾಲ್ವಾರತಾಂಡಾದ ಯುವಕನ ನಾಳೆ(ಗುರುವಾರ) ಮದುವೆ ನಿಗದಿಯಾಗಿತ್ತು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರತಾಂಡಾದಲ್ಲಿ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ ಕೊರೊನಾ ಎಂಬ ಮಾಹಾಮಾರಿ ಈ ಮದುವೆ ಮನೆಯ ಸಂತಸವನ್ನು ಕಿತ್ತುಕೊಂಡಿದೆ. ಮದುವೆ ಮನೆಯಲ್ಲಿ ಈಗ ಆತಂಕದ ಛಾಯೆ ಆವರಿಸಿದೆ. ಆದ್ದರಿಂದ ಮದುವೆಯನ್ನು ಮುಂದಕ್ಕೆ ಹಾಕಲಾಗಿದೆ.

    ವಧು ಮತ್ತು ಕುಟುಂಬಸ್ಥರು, ಸದ್ಯ ಆಂಧ್ರಪ್ರದೇಶದ ನೆಲ್ಲೂರನಲ್ಲಿ ವಾಸವಿದ್ದಾರೆ. ಮಗಳ ಮದುವೆ ಮಾಡುವ ಹಿನ್ನೆಲೆ ಈ ಕುಟುಂಬ ಕಳೆದ 10 ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿತ್ತು. ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಈ ಕುಟುಂಬಸ್ಥರ ಎಲ್ಲರಿಗೂ ಪರೀಕ್ಷೆ ಮಾಡಿ ಸಾಂಪಲ್‍ಗಳನ್ನು ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇವರೆಲ್ಲರನ್ನು ಏಳು ದಿನ ಕ್ವಾರೆಂಟೈನ್ ನಲ್ಲಿಟ್ಟು ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿತ್ತು. ಸದ್ಯ ಇವರ ಫಲಿತಾಂಶ ಹೊರ ಬಿದ್ದಿದ್ದು, ಇದರಲ್ಲಿ ತಂದೆ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ.

    ಇದರ ಜೊತೆಗೆ ಅಲ್ಲಿಪೂರತಾಂಡಾದಲ್ಲಿ 11 ಜನರಿಗೆ ಕೊರೊನಾ ಧೃಡಪಟ್ಟಿದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸೋಂಕಿತ 11 ಜನ ವಾಪಸ್ ಕೋವಿಡ್ ಆಸ್ಪತ್ರೆಗೆ ಸೇರಲು ಉದ್ಧಟತನ ತೋರುತ್ತಿದ್ದಾರೆ. ಅಧಿಕಾರಿಗಳು ಇವರನ್ನು ಕರೆತರಲು ಕಳೆದ ರಾತ್ರಿಯಿಂದ ಹರಸಾಹಸ ಪಡುತ್ತಿದ್ದಾರೆ. ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ಪತ್ತೆಯಾಗಿದ್ದು, ಈ ಇಬ್ಬರ ಜೊತೆ ವಧು ಪ್ರಾಥಮಿಕ ಸಂಪರ್ಕ ಹೊಂದಿರುವ ಕಾರಣ, ವಧು ಹಾಗೂ ಕುಟುಂಬಸ್ಥರನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ.

  • ಅಪ್ಪಿಕೊಂಡೇ ಪ್ರಾಣ ಬಿಟ್ಟ ಅಣ್ಣ-ತಂಗಿ

    ಅಪ್ಪಿಕೊಂಡೇ ಪ್ರಾಣ ಬಿಟ್ಟ ಅಣ್ಣ-ತಂಗಿ

    ಬೆಳಗಾವಿ/ಚಿಕ್ಕೋಡಿ: ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಸಹೋದರ-ಸಹೋದರಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ನಡೆದಿದೆ.

    ಪಾರಿಸನಾಥ ಕುಪವಾಡ (15) ಸನ್ಮತಿ ಕುಪವಾಡ (13) ಮೃತ ದುರ್ದೈವಿಗಳು. ಈಜು ಕಲಿಯಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ.

    ಮೃತ ಸನ್ಮತಿ ಕೃಷಿ ಹೊಂಡದಲ್ಲಿ ಈಜು ಕಲಿಯಲು ಹೋಗಿದ್ದಳು. ಈ ಸಂದರ್ಭದಲ್ಲಿ ಸನ್ಮತಿ ಸೊಂಟಕ್ಕೆ ಕಟ್ಟಿದ್ದ ಡಬ್ಬಿ ಹರಿದಿದೆ. ಈ ವೇಳೆ ಸಹೋದರಿಯನ್ನು ರಕ್ಷಿಸಲು ಹೋದ ಅಣ್ಣ ಕೂಡ ನೀರಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ.

    ಅಣ್ಣ-ತಂಗಿಯ ಸಾವು ಕಂಡು ಗ್ರಾಮದ ಜನರು ಕಣ್ಣೀರು ಹಾಕಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಅಥಣಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ವಿಕಲಚೇತನ ಸಹೋದರಿಗೆ ಸಹಾಯ- ವಿಡಿಯೋ ನೋಡಿದ ನೆಟ್ಟಿಗರು ಫುಲ್ ಫಿದಾ

    ವಿಕಲಚೇತನ ಸಹೋದರಿಗೆ ಸಹಾಯ- ವಿಡಿಯೋ ನೋಡಿದ ನೆಟ್ಟಿಗರು ಫುಲ್ ಫಿದಾ

    ವಾಷಿಂಗ್ಟನ್: ಬಾಸ್ಕೆಟ್‍ಗೆ ಬಾಲ್ ಹಾಕಲು ಸಹೋದರನೊಬ್ಬ ತನ್ನ ತಂಗಿಗೆ ಸಹಾಯ ಮಾಡಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಾಲಕನ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅಮೆರಿಕದ ಬ್ಯಾಸ್ಕೆಟ್‍ ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಈ ವೀಡಿಯೊವನ್ನು ಟ್ವೀಟ್ ಮಾಡಿ, “ಈ ಸಹೋದರ ತನ್ನ ಸಹೋದರಿಗೆ ಬಾಸ್ಕೆಟ್‍ಗೆ ಬಾಲ್ ಹಾಕಲು ಸಹಾಯ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಅಂಗವಿಕಲ ಪೋರನ ಪ್ರತಿಭೆಗೆ ವಿವಿಎಸ್ ಲಕ್ಷ್ಮಣ್ ಸೆಲ್ಯೂಟ್

    https://twitter.com/RexChapman/status/1264684122808758276

    14 ಸೆಕೆಂಡುಗಳ ವಿಡಿಯೋದಲ್ಲಿ ಬಾಲಕ ಬಾಸ್ಕೆಟ್ ಪೋಲ್ ಹಿಡಿದು ಕೆಳಗೆ ಬಾಗಿಸುತ್ತಾನೆ. ಈ ಮೂಲಕ ವಿಕಲಚೇತನ ಸಹೋದರಿ ಬಾಸ್ಕೆಟ್‍ನಲ್ಲಿ ಬಾಲ್ ಹಾಕಲು ಶ್ರಮಿಸುತ್ತಾರೆ. ಸಹೋದರಿ ಬಾಸ್ಕೆಟ್‍ನಲ್ಲಿ ಬಾಲ್ ಹಾಕಿದಾಗ ಬಾಲಕ ಸಂಭ್ರಮ ಮುಗಿಲು ಮುಟ್ಟಿತ್ತು.

    ರೆಕ್ಸ್ ಚಾಪ್ಮನ್ ಅವರು ಟ್ವೀಟ್ ಮಾಡಿದ ವಿಡಿಯೋ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ 3.5 ಮಿಲಿಯನ್ ನೆಟ್ಟಿಗರು ವೀಕ್ಷಿಸಿದ್ದು, 43 ಸಾವಿರಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಕೆಲವರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಅಂತರ್ಜಾಲದಲ್ಲಿ ಇದು ಇಂದಿನ ಅತ್ಯಂತ ಸುಂದರವಾದ ವಿಷಯ. ಇಂತಹ ಸಹೋದರ ಸಿಗಲು ಪುಣ್ಯ ಮಾಡಿರಬೇಕು. ಈ ದೃಶ್ಯ ಮನಸ್ಸಿಗೆ ತುಂಬಾ ಹತ್ತಿರವಾಗಿದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಹೃದಯಸ್ಪರ್ಶಿ ವಿಡಿಯೋಗಳನ್ನು ರಿಟ್ವೀಟ್ ಮಾಡಿದ್ದಾರೆ.

  • ಸೋದರನ ಅಂತ್ಯಕ್ರಿಯೆಗೆ ತೆರಳಲು ಸಾಧ್ಯವಾಗದೇ ಮಹಿಳೆಯ ಕಣ್ಣೀರು

    ಸೋದರನ ಅಂತ್ಯಕ್ರಿಯೆಗೆ ತೆರಳಲು ಸಾಧ್ಯವಾಗದೇ ಮಹಿಳೆಯ ಕಣ್ಣೀರು

    ಚಾಮರಾಜನಗರ: ಸೋದರನ ಅಂತ್ಯಕ್ರಿಯೆಗೆ ತೆರಳಲಾಗದೇ ಮಹಿಳೆ ಕಣ್ಣೀರು ಹಾಕಿರುವ ಮನಕಲಕುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಮಹಿಳೆಯ ತಮ್ಮ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮೃತಪಟ್ಟಿದ್ದರು. ಇಂದು ಸಾರಿಗೆ ವಾಹನಗಳ ಸಂಚಾರ ಸುದ್ದಿ ತಿಳಿದು ಚಾಮರಾಜನಗರದ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಆದ್ರೆ ಚಾಮರಾಜನಗರದಿಂದ ಬೇರೆ ಜಿಲ್ಲೆಗಳಿಗೆ ಬಸ್ ಸಂಚರಿಸಲಿ ಜಿಲ್ಲಾಧಿಕಾರಿಗಳು ಅನುಮತಿ ನೀಡಿಲ್ಲ. ಹಾಗಾಗಿ ಬಸ್ ಗಳು ಜಿಲ್ಲೆಯೊಳಗಡೆ ಮಾತ್ರ ಸಂಚರಿಸುತ್ತಿವೆ. ಅಂತರ್ ಜಿಲ್ಲೆಗೆ ಬಸ್ ಸಂಚಾರವಿಲ್ಲ ಎಂಬ ವಿಷಯ ತಿಳಿದ ಮಹಿಳೆ, ಬೇಕಾದ್ರೆ ತಮ್ಮ ಸಾವನ್ನಪ್ಪಿರೋ ಬಗ್ಗೆ ಫೋಟೋ ತರಿಸುತ್ತೇನೆ. ಪ್ರಯಾಣಕ್ಕೆ ಅವಕಾಶ ನೀಡಬೇಕೆಂದು ಕಣ್ಣೀರು ಹಾಕಿದರು. ಕೊನೆಗೆ ಬಸ್ ಆರಂಭವಾಗದ ಹಿನ್ನೆಲೆಯಲ್ಲಿ ಕಣ್ಣೀರು ಹಾಕುತ್ತಾ ವಾಪಸ್ ಹೋಗುವಂತಾಯ್ತು.

    ಅಂತರ್ ಜಿಲ್ಲಾ ಪ್ರಯಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದರೂ, ಜಿಲ್ಲಾಡಳಿತ ಈ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ. ವಿಷಯ ತಿಳಿಯದೇ ಇಂದು ಬೆಳಗ್ಗೆ ಚಾಮರಾಜನಗರದ ಬಸ್ ನಿಲ್ದಾಣಕ್ಕೆ ನೂರಾರು ಜನ ಆಗಮಿಸಿ, ಗಂಟೆಗಟ್ಟಲೇ ಕಾದು ನಿರಾಶರಾಗಿ ವಾಪಸ್ ತೆರಳಿದರು.

  • ಸಹೋದರಿ ಸೇರಿ ಆಕೆಯ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ – ಪೊಲೀಸರಿಗೆ 8ರ ಪೋರನಿಂದ ದೂರು

    ಸಹೋದರಿ ಸೇರಿ ಆಕೆಯ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ – ಪೊಲೀಸರಿಗೆ 8ರ ಪೋರನಿಂದ ದೂರು

    – ಬಾಲಕನ ಮನೆಗೆ ಬಂದು ಪ್ರಕರಣ ಬಗೆಹರಿಸಿದ ಪೊಲೀಸರು

    ತಿರುವಂತಪುರಂ: ನನ್ನ ಸಹೋದರಿ ಸೇರಿ ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಉಮಾರ್ ನಿಧಾರ್ ಕೋವಿಡ್ 19 ಲಾಕ್‍ಡೌನ್ ವೇಳೆ ತನ್ನ ಜೊತೆ ಆಟವಾಡಲು ಬಾರದಕ್ಕೆ ಸಹೋದರಿ ಮತ್ತು ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು ಕಂಪ್ಲೇಟ್ ಕೊಟ್ಟಿದ್ದಾನೆ. ಇವರು ಲಾಕ್‍ಡೌನ್ ಎಂದು ನನ್ನ ಜೊತೆ ಲುಡೋ, ಶೆಟಲ್ ಕಾಕ್ ಮತ್ತು ಕಳ್ಳ ಪೊಲೀಸ್ ಆಟವಾಡಲು ಬರುತ್ತಿಲ್ಲ ಎಂದು ದೂರಿದ್ದಾನೆ.

    ಲಾಕ್‍ಡೌನ್ ಇರುವ ಕಾರಣ ಉಮಾರ್ ಜೊತೆ ಯಾರು ಆಟವಾಡಲು ಬಂದಿಲ್ಲ. ಜಗಳ ನಡೆದಾಗ ನೀನು ಹುಡುಗ ನಮ್ಮ ಜೊತೆ ಆಟವಾಡಬೇಡ ಎಂದು ಆತನ ಸಹೋದರಿ ಸಿಟ್ಟಿನಲ್ಲಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಉಮಾರ್ ಮೊದಲು ತನ್ನ ತಂದೆಯ ಬಳಿ ದೂರು ನೀಡಿದ್ದಾನೆ. ಈ ವೇಳೆ ತಂದೆ ತಮಾಷೆಗೆ ಅವರ ವಿರುದ್ಧ ಪೊಲೀಸರಲ್ಲಿ ದೂರು ನೀಡು ಎಂದಿದ್ದಾರೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಮುಗ್ಧ ಬಾಲಕ ಪೊಲೀಸರಿಗೆ ದೂರು ನೀಡಿದ್ದಾನೆ.

    ಮೇ 10ರಂದು ಯಾವುದೋ ಬೇರೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್ ಅಧಿಕಾರಿಗಳು ಉಮಾರ್ ನಿಧಾರ್ ಮನೆಯ ಹತ್ತಿರ ಬಂದಿದ್ದಾರೆ. ಈ ವೇಳೆ ಈ ಪೋರ ತನ್ನ ಕೈಯಾರೆ ಇಂಗ್ಲಿಷ್‍ನಲ್ಲಿ ದೂರನ್ನು ಬರೆದು ಪೊಲೀಸರಿಗೆ ನೀಡಿದ್ದಾನೆ. ಆಗ ಸ್ವಲ್ಪ ಬ್ಯುಸಿ ಇದ್ದ ಪೊಲೀಸರು ಲೆಟರ್ ತೆಗೆದುಕೊಂಡು ಹೋಗುತ್ತಾರೆ. ಆದರೆ ನಂತರ ಆ ಲೆಟರ್ ಓದಿ ಮತ್ತೆ ಆತನ ಮನೆಗೆ ಬಂದು ಅವನ ಸಮಸ್ಯೆ ಬಗೆಹರಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಿವಿಲ್ ಪೊಲೀಸ್ ಅಧಿಕಾರಿ ಉಮೇಶ್, ಆತ ಕಂಪ್ಲೇಟ್ ಕೊಟ್ಟಾಗ ತಡವಾಗಿದ್ದ ಕಾರಣ ನಾವು ವಾಪಸ್ ಹೋಗಿದ್ದೇವು. ಆದರೆ ನಂತರ ಬೆಳಗ್ಗೆ ವಾಪಸ್ ಬಂದು ಸಮಸ್ಯೆ ಬಗೆಹರಿಸಿದ್ದೇವೆ. ಅವರ ಸಹೋದರಿ ಮತ್ತು ಆಕೆಯ ಸ್ನೇಹಿತರನ್ನು ಕರೆದು ಮುಂದಿನ ಬಾರಿ ಆಟವಾಡಲು ಹೋದಾಗ ಉಮಾರ್ ನನ್ನು ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

    ಆಗ ಸ್ಥಳದಲ್ಲೇ ಇದ್ದ ಉಮಾರ್ ಇಲ್ಲ ನಾನು ಬಹಳ ಬಾರಿ ಅವರಿಗೆ ನನ್ನ ಆಟವಾಡಲು ಕರೆದುಕೊಂಡು ಹೋಗಿ ಎಂದು ಹೇಳಿದ್ದೇನೆ ಆದರೆ ಅವರಂತು ಕರೆದುಕೊಂಡು ಹೋಗಲ್ಲ ಎಂದಿದ್ದಾನೆ. ಆದರೆ ಪೊಲೀಸರು ಇಲ್ಲ ನಾವು ಅವರಿಗೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಆಗ ಅವರ ಸಹೋದರಿ ಅವನು ಈ ರೀತಿ ದೂರು ನೀಡುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಮುಂದಿನ ಬಾರಿ ಆಟವಾಡಲು ಖಂಡಿತ ಕರೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದ್ದಾಳೆ.