Tag: Sirsi

  • ಏನು ನಿಮ್ಮ ಶಾಸಕರೇನಾದ್ರು ಸತ್ತೋದ್ರ- ಕೇಂದ್ರ ಸಚಿವ ಹೆಗಡೆ

    ಏನು ನಿಮ್ಮ ಶಾಸಕರೇನಾದ್ರು ಸತ್ತೋದ್ರ- ಕೇಂದ್ರ ಸಚಿವ ಹೆಗಡೆ

    ಉತ್ತರಕನ್ನಡ: ಶಿರಸಿ ತಾಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಸ್ಥಳೀಯ ಶಾಸಕರ ವಿರುದ್ಧ ಹರಿಹಾಯ್ದಿದ್ದಾರೆ.

    ಇಂದು ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂಕ ಕುಮಾರ ಹೆಗಡೆ ಪಾಲ್ಗೊಂಡಿದ್ದರು. ಈ ವೇಳೆ ಗ್ರಾಮದ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಿಲ್ಲ, ವೈದ್ಯರನ್ನು ನೇಮಕ ಮಾಡಿಕೊಡಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮಹಿಳೆಗೆ ಉತ್ತರಿಸುತ್ತಾ ನಿಮ್ಮ ಶಾಸಕರೇನಾದ್ರೂ ಸತ್ತು ಹೋದ್ರ? ಎಂದು ಪ್ರಶ್ನಿಸಿ, ಸ್ಥಳೀಯ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಮೇಲಿನ ಕೋಪವನ್ನು ಕಾರ್ಯಕ್ರಮದಲ್ಲೇ ಹೊರಹಾಕಿದ್ದಾರೆ. ಅಲ್ಲದೇ ಇದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಬರುತ್ತದೆ ಎಂದು ತಿಳಿಸಿ ಕದಂಬ ಗಿಡ ನೆಟ್ಟು ಕಾರ್ಯಕ್ರಮದಿಂದ ತೆರಳಿದ್ದಾರೆ.

  • ಶಿರಸಿಯ ಅರಣ್ಯ ಮಹಾವಿದ್ಯಾಲಯದಿಂದ ಜಂಗಲ್ ಫ್ರೂಟ್ ಫೆಸ್ಟಿವಲ್

    ಶಿರಸಿಯ ಅರಣ್ಯ ಮಹಾವಿದ್ಯಾಲಯದಿಂದ ಜಂಗಲ್ ಫ್ರೂಟ್ ಫೆಸ್ಟಿವಲ್

    ಕಾರವಾರ: ಪಶ್ಚಿಮಘಟ್ಟದ ಕಾಡು ಹಣ್ಣುಗಳನ್ನು ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ಮಹಾವಿದ್ಯಾಲಯವು ಕಾಡುಹಣ್ಣುಗಳ ಒಂದು ದಿನದ ಪ್ರದರ್ಶನವನ್ನು ಏರ್ಪಡಿಸಿತ್ತು.

    ಪಶ್ಚಿಮಘಟ್ಟದ ಕಾಡುಗಳಲ್ಲಿ 170 ಜಾತಿಯ ವಿವಿಧ ಹಣ್ಣುಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 130 ಜಾತಿಯ ಕಾಡು ಹಣ್ಣುಗಳು ಉತ್ತರಕನ್ನಡ ಜಿಲ್ಲೆಯಲ್ಲಿದ್ದು, ಸುಮಾರು 100 ಕ್ಕೂ ಹೆಚ್ಚು ಹಣ್ಣುಗಳು ಹಾಗೂ ಸಸಿಗಳನ್ನು ಶಿರಸಿಯ ಅರಣ್ಯ ಮಹಾವಿದ್ಯಾಲಯದ ಆವರಣದಲ್ಲಿ ಪ್ರದರ್ಶನ ಮಾಡಲಾಯ್ತು.

    ಕಾಡು ಹಣ್ಣುಗಳಾದ ಬೇಲ, ಅಂಕೋಲೆ, ಅಲೆಹಣ್ಣು, ಉಪ್ಪಾಗೆ, ಇಳ್ಳಿಹೊಳೆತುಮರಿ, ರಾಮಪತ್ರೆಗಳಂತಹ ವಿಶೇಷ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದಲ್ಲದೇ ಸ್ಥಳೀಯವಾಗಿ ಸಿಗುವ ನೇರಳೆ, ಕೆಂಪುಮುರುಗಲ, ದ್ಯಾವಣಗಿ, ಅತ್ತಿ, ಅನಲೆಕಾಯಿ, ಕುಂಟು ನೇರಲೆ, ಬಿಳಿಸೂಲಿ, ನೀರ ಸೇಬು ಸೇರಿದಂತೆ 50 ಕ್ಕೂ ಹೆಚ್ಚು ಹಣ್ಣುಗಳನ್ನು ಪ್ರದರ್ಶಿಸಲಾಯಿತು. ಇನ್ನು ಕೇವಲ ಪ್ರದರ್ಶನವಲ್ಲದೇ ಮಾಹಿತಿಯನ್ನು ಕೂಡ ಆಗಮಿಸಿದ ಜನರಿಗೆ ನೀಡಿದ್ದಾರೆ.

  • ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಉತ್ತರ ಕನ್ನಡದಲ್ಲಿ ಉತ್ತರೋತ್ತರ ಅಭಿವೃದ್ಧಿ ಮಾಡೋರು ಯಾರು..?

    ಗೋವಾ, ಬೆಳಗಾವಿ, ಧಾರವಾಡ, ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನ ಹಂಚಿಕೊಂಡಿದೆ ಉತ್ತರ ಕನ್ನಡ ಜಿಲ್ಲೆ. ಹಚ್ಚ ಹಸುರಿನ ಸೀರೆಯುಟ್ಟು ಸದಾ ಮದುವಣಗಿತ್ತಿಯಂತೆ ಕಂಗೊಳಿಸೋ ಈ ಜಿಲ್ಲೆಗೆ ಅರಬ್ಬೀ ಸಮುದ್ರ ಕಿರೀಟಕ್ಕೊಂದು ಗರಿ ಇಟ್ಟಂತೆ. ರವೀಂದ್ರ ನಾಥರಿಗೆ ಗೀತಾಂಜಲಿ ಬರೆಯೋದಕ್ಕೆ ಸ್ಪೂರ್ತಿ ನೀಡಿದ್ದು ಕಾರವಾರದ ಕಡಲ ತೀರವಂತೆ. ಆದ್ರೆ, ಅಭಿವೃದ್ಧಿ ಅನ್ನೋ ವಿಚಾರ ಬಂದಾಗ ಮಾತ್ರ ಉತ್ತರ ಕನ್ನಡ ಜಿಲ್ಲೆ ನಿರುತ್ತರವಾಗಿ ಬಿಡುತ್ತದೆ. ಸಮೃದ್ಧವಾದ ನೈಸರ್ಗಿಕ ಸಂಪನ್ಮೂಲ ಜಿಲ್ಲೆಯ ಪ್ಲಸ್ ಪಾಯಿಂಟ್ ಆಗಿದ್ರೂ ಕೈಗೆಟುಕದೇ ಇರೋ ಅಭಿವೃದ್ಧಿಯೇ ಈ ಜಿಲ್ಲೆಗೆ ತಟ್ಟಿದ ಮಹಾನ್ ಶಾಪ. ಇಂತಿಪ್ಪ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಚುನಾವಣೆ ರಂಗು ರಂಗೇರಿದೆ.

    ಹಸಿರ ಕಾನನದ ನಡುವೆ ರಮ್ಯ ತಾಣಗಳ ವೈಭವ
    ಉತ್ತರ ಕರ್ನಾಟಕಕ್ಕೆ ಹೋಗೋರು ಬನವಾಸಿಗೆ ಹೋಗಿಲ್ಲ ಅಂದ್ರೆ ನಿಮ್ಮ ಪ್ರವಾಸ ಪರಿಪೂರ್ಣವಾಗೋಕೆ ಸಾಧ್ಯಾನೇ ಇಲ್ಲ. ಮಹಾಕವಿ ಪಂಪನೇ ವರ್ಣಿಸಿರುವಂತೆ ಆರಂಕುಶ ವಿಟ್ಟೊಡಂ ನೆನೆವುದೆನ್ನ ಮನ ಬನವಾಸಿ ದೇಶಮಂ ಅಂತಾ ಈ ಸ್ಥಳವನ್ನು ಮನಬಿಚ್ಚಿ ವರ್ಣಿಸಿದ್ದಾನೆ.

    ಇನ್ನು ಬೇಲೆಕೇರಿಯ ಅದಿರು ನಾಪತ್ತೆ ಪ್ರಕರಣವನ್ನು ಯಾರಾದ್ರೂ ಮರೆಯೋದುಂಟೇ..? ಬೇಲೆಕೇರಿ ಅತ್ಯಂತ ಹಳೆಯ ಹಾಗೂ ಸುಂದರ ಬಂದರು. ಉತ್ತರ ಕನ್ನಡದ ಭಟ್ಕಳ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹೆಬ್ಬಾಗಿಲಾಗಿತ್ತಂತೆ. ಭಯೋತ್ಪಾದಕ ಚಟುವಟಿಕೆಗಳು ಈ ಊರಿಗೆ ಕಪ್ಪು ಮಸಿ ಬಳೀತಾದ್ರೂ ಇಂದಿಗೂ ಭಟ್ಕಳ ಶಾಂತ ಸಮುದ್ರದಂತೆ ಕಂಗೊಳಿಸುತ್ತದೆ.

    ಕಾರವಾರದಿಂದ ಕೇವಲ 40 ಕಿಲೋಮೀಟರ್ ದೂರದಲ್ಲಿದೆ ದಾಂಡೇಲಿ. ಸಿಂಥೇರಿ ರಾಕ್ಸ್, ನಾಗಝರಿ ವ್ಯಾಲಿ, ಕಾವಲಾ ಕೇವ್ಸ್ ಹಗೆ ದಾಂಡೇಲಿಯಲ್ಲಿ ನೋಡೋದಕ್ಕೆ ಅನೇಕ ಸ್ಥಳಗಳಿವೆ. ಅರಣ್ಯದಲ್ಲಿರೋ ವಸತಿ ಗೃಹದಲ್ಲಿ ಉಳಿದುಕೊಂಡು ಪ್ರವಾಸವನ್ನ ಕೂಲಾಗಿ ಅನುಭವಿಸಬಹುದು.

    ಕಾರವಾರದಿಂದ ಸರಿ ಸುಮಾರು 60 ಕಿಲೋಮೀಟರ್ ದೂರದಲ್ಲಿರೋ ಪುಣ್ಯ ಕ್ಷೇತ್ರವೇ ಗೋಕರ್ಣ. ಶಿವನ ಆತ್ಮಲಿಂಗದ ಒಂದು ತುಣುಕು ಇಲ್ಲಿದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಈ ಕ್ಷೇತ್ರ ವಾರಣಾಸಿಯಷ್ಟೇ ಪವಿತ್ರ ಅನ್ನೋದು ಭಕ್ತರ ಅಂಬೋಣ. ಇನ್ನುಳಿದಂತೆ ಕಾರವಾರ ಸಮುದ್ರ ತೀರ, ಶಿರಸಿಯ ಮಾರಿಕಾಂಬ ದೇವಾಲಯ, ಶ್ಯಾಮಲೆಯ ತಟದಲ್ಲಿರೋ ಸೊಂದಾ ಮಠ, ಹಾಗೆಯೇ ಪ್ರಸಿದ್ಧ ಪ್ರವಾಸೀ ತಾಣವಾಗಿರೋ ಯಾಣ ಕೂಡಾ ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತೆ.

    ದಕ್ಷಿಣ ಕನ್ನಡದಲ್ಲಿ ತೆಂಕು ತಿಟ್ಟು, ಉತ್ತರ ಕನ್ನಡದಲ್ಲಿ ಬಡಾ ಬಡಗುತಿಟ್ಟಿನ ತಾಳ ಮೇಳ..!
    ಯಕ್ಷಗಾನದಲ್ಲಿ ತೆಂಕು ತಿಟ್ಟು, ಬಡಗು ತಿಟ್ಟು ಹಾಗೂ ಬಡಾ ಬಡಗುತಿಟ್ಟು ಅನ್ನೋ ಪ್ರಬೇಧಗಳಿವೆ. ಇದ್ರಲ್ಲಿ ಉತ್ತರ ಕನ್ನಡದವರು ಬಡಾ ಬಡಗು ತಿಟ್ಟನ್ನಾಡುತ್ತಾರೆ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್ ಹೀಗೆ ಉತ್ತರಕನ್ನಡ ಘಟಾನುಘಟಿ ಯಕ್ಷಕರ್ಮಿಗಳ ತವರೂರು. ಇಂದಿಗೂ ಮನೋರಂಜನೆಗಾಗಿ ಸಿನಿಮಾ, ಟಿವಿ ಮಾಧ್ಯಮಗಳಿದ್ರೂನೂ ಉತ್ತರ ಕನ್ನಡದ ಮಂದಿ ಮಾತ್ರ ಯಕ್ಷಗಾನವನ್ನ ತಮ್ಮ ಉಸಿರಲ್ಲಿ ಉಸಿರಾಗಿಸ್ಕೊಂಡಿದ್ದಾರೆ.

    ಉತ್ತರ ಕನ್ನಡದಲ್ಲಿ ಉತ್ತರವೇ ಇಲ್ಲದ ಪ್ರಶ್ನೆಗಳು ಹಲವಾರು..!
    ಇಷ್ಟೆಲ್ಲಾ ವೈಶಿಷ್ಟ್ಯತೆಗಳ ನಡುವೆ ಉತ್ತರ ಕನ್ನಡದಲ್ಲಿ ಈ ಬಾರಿ ಅತೀ ಹೆಚ್ಚು ಸದ್ದು ಮಾಡಿದ್ದು ಪರೇಶ್ ಮೇಸ್ತಾ ಸಾವು. ಇದು ದೊಡ್ಡ ಮಟ್ಟದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಪರಿಣಾಮ ಬೀರೋ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇನ್ನು, ಅಭಿವೃದ್ಧಿ ಹಾಗೂ ಉತ್ತರ ಕನ್ನಡ ಒಂದು ರೀತಿಯಲ್ಲಿ ಎಣ್ಣೆ ಸೀಗೆ ಇದ್ದಂತೆ. ಅಭಿವೃದ್ಧಿ ಅನ್ನೋದನ್ನ ನೋಡಿಯೇ ಕಾಲವಾಗಿದೆ. ಹಾಗಾದ್ರೆ, ಕ್ಷೇತ್ರವಾರು ಲೆಕ್ಕಾಚಾರಗಳು, ಕಳೆದ ಬಾರಿಯ ಫಲಿತಾಂಶ ಹಾಗೂ ಈ ಬಾರಿಯ ಕ್ಯಾಂಡಿಡೇಟ್ ಗಳ ವಿವರಗಳನ್ನು ನೋಡೋಣ ಬನ್ನಿ.

    ಕಾರವಾರ ಈ ಬಾರಿ ಯಾರ ಪಾಲಿನ ವರ..?

    ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾ ಕಾರವಾರದಲ್ಲಿದೆ. ಕರ್ನಾಟಕದ ಎರಡನೇ ಅತೀ ಪ್ರಮುಖ ಬಂದರೂ ಕೂಡಾ ಹೌದು. ಇಲ್ಲಿನ ಜನ ಪಕ್ಷ ನೋಡೋರೇ ಅಲ್ಲ. ಯಾವ ವ್ಯಕ್ತಿ ಸೂಕ್ತ, ಯಾರ ವರ್ಚಸ್ಸು ಇಲ್ಲಿ ವರ್ಕೌಟ್ ಆಗುತ್ತೋ ಅವರಿಗೇ ಇಲ್ಲಿನ ಮತದಾರ ಜೈ ಅಂತಾನೆ. 2013ರಲ್ಲಿ ಕಾಂಗ್ರೆಸ್ ನಿಂದ ಬಿಜೆಪಿಗೆ ಜಂಪ್ ಆಗಿದ್ದ ಆನಂದ್ ಅಸ್ನೋಟಿಕರ್ ಇಲ್ಲಿ ಮಕಾಡೆ ಮಲಗಿದ್ರು. ಈ ಬಾರಿ ಆಸ್ನೋಟಿಕರ್ ಜೆಡಿಎಸ್ ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಜೆಡಿಎಸ್ ಇಲ್ಲಿ ಇದ್ದೂ ಇಲ್ಲದಂತಿದ್ರೂ ಆಸ್ನೋಟಿಕರ್ ಹೆಸರು ಸ್ವಲ್ಪ ಮಟ್ಟಿಗೆ ಪರಿಗಣಿತಗೊಳ್ಬೋದು. ಇನ್ನುಳಿದಂತೆ ಬಿಜೆಪಿಯಿಂದ ರೂಪಾಲಿ ನಾಯ್ಕ್, ಕಾಂಗ್ರೆಸ್ ನಿಂದ ಸತೀಶ್ ಸೈಲ್ ಕೃಷ್ಣ ಕಣದಲ್ಲಿದ್ದಾರೆ. ಸೋ ಇಲ್ಲಿ ಮತದಾರ ಯಾರಿಗೆ ಜೈ ಅಂತಾನೆ ಅನ್ನೋದೇ ಸದ್ಯದ ಕುತೂಹಲ.

    ಕುಮಟಾದಲ್ಲಿ ಗೆಲುವಿನ ತಮಟೆ ಹೊಡೆಯೋರು ಯಾರು..?
    ಕುಮಟಾ ಹೊನ್ನವರ ಕ್ಷೇತ್ರದ ಹಾಲಿ ಶಾಸಕಿ ಶಾರದಾ ಮೋಹನ ಶೆಟ್ಟಿ. ಈ ಬಾರಿಯೂ ಇವರೇ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ. ಜೆಡಿಎಸ್ ನಿಂದ ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ್ ನಾಯ್ಕ್ ಬಿರುಸಿನ ಪ್ರಚಾರ ನಡೆಸ್ತಾ ಇದ್ದಾರೆ. 2013ರಲ್ಲಿ ಜೆಡಿಎಸ್ ನಿಂದ ಕಂಟೆಸ್ಟ್ ಮಾಡಿ ಕೇವಲ 420 ಮತಗಳಿಂದ ಸೋಲು ಕಂಡಿದ್ದ ದಿನಕರ್ ಶೆಟ್ಟಿ ಈ ಬಾರಿ ಭಾಜಪಾದ ಹುರಿಯಾಳು. ಕಳೆದ ಬಾರಿ ಶಾರದ ಮೋಹನ್ ಶೆಟ್ಟಿ 36,756 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ರು. ಜೆಡಿಎಸ್ ನ ದಿನಕರ್ ಕೇಶವ್ ಶೆಟ್ಟಿ 36,336 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತರಾಗ್ಬೇಕಾಯ್ತು.

    ಭಟ್ಕಳದಲ್ಲಿ ಗೆಲುವಿನ ಅಟ್ಟಕ್ಕೇರೋರು ಯಾರು..?
    ಕಳೆದ ಬಾರಿ ಪಕ್ಷೇತರವಾಗಿ ನಿಂತು ಗೆದ್ದು ಬೀಗಿದ್ದ ಮಂಕಾಳ ವೈದ್ಯ ಈ ಬಾರಿ ಕಾಂಗ್ರೆಸ್ ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸುನಿಲ್ ನಾಯ್ಕ್ ಈ ಬಾರಿ ಬಿಜೆಪಿಯ ಕಟ್ಟಾಳು. ಜೆಡಿಎಸ್ ಇನಾಯಿತುಲ್ಲಾ ಷಾ ಬಂದ್ರಿಯವರಿಗೆ ಟಿಕೆಟ್ ಕೊಡೋದಕ್ಕೆ ಬಯಸಿದ್ರೂ ಕೊನೆಗೆ ಯಾರನ್ನೂ ಕಣಕ್ಕಿಳಿಸದೆ ಸೈಲೆಂಟಾಗಿದೆ.

    ಹಳಿಯಾಳದಲ್ಲಿ ಗೆಲುವಿನ ಹಳಿಯಲ್ಲಿ ಓಡೋರು ಯಾರು..?
    ಹಳಿಯಾಳ ಕ್ಷೇತ್ರ ಸಚಿವ ಆರ್.ವಿ ದೇಶಪಾಂಡೆಯವ್ರ ಸಾಮ್ರಾಜ್ಯ. 1983ರಿಂದ ಸತತ ಆರು ಎಲೆಕ್ಷನ್ ಗೆದ್ದಿರೋ ದೇಶಪಾಂಡೆಗೆ ಇಲ್ಲಿ ಸೋಲಿನ ರುಚಿ ತೋರಿಸೋರು ಯಾರು ಇಲ್ಲ ಅನ್ನೋ ಪರಿಸ್ಥಿತಿ ಇತ್ತು. ಆದ್ರೆ, 2008ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿಸಿದ್ದ ಸುನಿಲ್ ಹೆಗಡೆ ದೇಶಪಾಂಡೆಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ರು. ಆದ್ರೆ, 2013ರಲ್ಲಿ ಮತ್ತೆ ದೇಶಪಾಂಡೆ ಗೆಲುವಿನ ನಗೆ ಬೀರಿದ್ರು. ಈಗ ಇಬ್ಬರೂ ಮತ್ತೆ ಮುಖಾಮುಖಿಯಾಗ್ತಿದ್ದಾರೆ. ಜೆಡಿಎಸ್ ನಿಂದ ಕೆ. ರಮೇಶ್ ಈ ಬಾರಿ ಕಣದಲ್ಲಿದ್ದಾರೆ.

    ಶಿರಸಿಯಲ್ಲಿ ಯಾರ ಶಿರಕ್ಕೆ ಗೆಲುವಿನ ಮುಕುಟ..?
    ಬಿಜೆಪಿಯಿಂದ ಶಿರಸಿಯನ್ನು ಹೇಗಾದ್ರೂ ಮಾಡಿ ಕಸಿಯಲೇಬೇಕು ಅನ್ನೋ ಪಣಕ್ಕೆ ಬಿದ್ದಿವೆ ಕಾಂಗ್ರೆಸ್ ಹಾಗೂ ಜೆಡಿಎಸ್. 1999ರಿಂದಲೂ ಇಲ್ಲಿ ಬಿಜೆಪಿಯದ್ದೇ ಅಬ್ಬರ. ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ. ದಿ.ರಾಮಕೃಷ್ಣ ಹೆಗಡೆ ಕುಟುಂಬದ ಶಶಿಭೂಷಣ ಹೆಗಡೆ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದು ಕದನ ಕಣ ಕುತೂಹಲ ಮೂಡಿಸಿದೆ. ಹೀಗಾಗಿ, ಶಿರಸಿ ಹವ್ಯಕರ ಮತ ಬ್ಯಾಂಕ್ ಒಡೆದು ಹೋಗುವ ಸಾಧ್ಯತೆ ದಟ್ಟವಾಗಿದೆ. ದಿ.ಎಸ್ ಬಂಗಾರಪ್ಪ ಅವ್ರ ದೂರದ ಸಂಬಂಧಿ ಭೀಮಣ್ಣ ನಾಯ್ಕ್ ಕೂಡಾ ಕಣದಲ್ಲಿದ್ದು ಈ ಬಾರಿ ಘಟಾನುಘಟಿ ನಾಯಕ್ರ ಸಂಬಂಧಿಕರದ್ದೇ ಚರ್ಚೆ ಶಿರಸಿಯಲ್ಲಿ ಜೋರಾಗಿದೆ.

    ಯಲ್ಲಾಪುರದ ಅರಸ ಯಾರಾಗ್ತಾರೆ..?
    ಯಲ್ಲಾಪುರದ ಜನರಿಗೆ ಬಿಜೆಪಿ ಫೆವರೇಟ್ ಅನ್ನೋದು ಸದ್ಯಕ್ಕಿರೋ ಟ್ರೆಂಡ್. ಯಾಕಂದ್ರೆ ಇಲ್ಲಿ ಜನಪ್ರತಿನಿಧಿಗಳು ಯಾರಾಗ್ಬೇಕು ಅನ್ನೋದನ್ನ ನಿರ್ಧರಿಸೋರೇ ಹವ್ಯಕ ಬ್ರಾಹ್ಮಣ, ಲಿಂಗಾಯತ ಹಾಗೂ ನಾಮಧಾರಿಗಳು. ಆದ್ರೆ, 2013ರಲ್ಲಿ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಹೋಗಿತ್ತು. ಹಾಲಿ ಶಾಸ್ ಕಾಂಗ್ರೆಸ್ ನ ಶಿವರಾಮ ಹೆಬ್ಬಾರ್ ಈ ಬಾರಿಯೂ ಕಣದಲ್ಲಿದ್ದಾರೆ. ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ತೆನೆ ಹೊತ್ತಿದ್ದ ರವೀಂದ್ರನಾಥ್ ಈ ಬಾರಿ ಜೆಡಿಎಸ್ ನಿಂದ ಪೈಪೋಟಿ ಕೊಡೋಕೆ ನಿಂತಿದ್ದಾರೆ. ಇನ್ನು ಬಿಜೆಪಿಯಿಂದ ವಿಎಸ್ ಪಾಟೀಲ್ ರಣಕಣಕ್ಕೆ ಧುಮುಕಿದ್ದಾರೆ. ಆದ್ರೆ, ಮತದಾರ ಈ ಬಾರಿ ಯಾರಿಗೆ ಕೃಪಾಕಟಾಕ್ಷ ತೋರ್ತಾನೆ ಅನ್ನೋದಕ್ಕೆ ಮೇ 15ರವರೆಗೆ ಕಾಯ್ಲೇಬೇಕು.

  • ಎಲೆಕ್ಷನ್ ಹೊತ್ತಲ್ಲಿ ಶಿರಸಿ ಕಾಂಗ್ರೆಸ್ ಅಭ್ಯರ್ಥಿಗೆ ಐಟಿ ಶಾಕ್

    ಎಲೆಕ್ಷನ್ ಹೊತ್ತಲ್ಲಿ ಶಿರಸಿ ಕಾಂಗ್ರೆಸ್ ಅಭ್ಯರ್ಥಿಗೆ ಐಟಿ ಶಾಕ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಅವರ ಆಪ್ತರಿಗೆ ಐ.ಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

    ಆರ್.ವಿ ದೇಶಪಾಂಡೆಯವರ ಆಪ್ತ ಹಾಗೂ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೀಮಣ್ಣ ನಾಯ್ಕರವರ ಶಿರಸಿಯ ಅಯ್ಯಪ್ಪ ನಗರದಲ್ಲಿರುವ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳವಾರ ರಾತ್ರಿ ದಿಡೀರ್ ದಾಳಿ ನಡೆಸಿದ ಅಧಿಕಾರಿಗಳು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

    ಬೀಮಣ್ಣ ನಾಯ್ಕ್ ರವರು ಕೃಷಿಕರಾಗಿರುವುದಲ್ಲದೇ ಬಾರ್ ಆಂಡ್ ರೆಸ್ಟೋರೆಂಟ್ ಸೇರಿದಂತೆ ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿದ್ದರು. ಇನ್ನು ಕಳೆದ ಮೂರು ದಿನಗಳ ಹಿಂದೆ ಕೂಡ ಐಟಿ ಅಧಿಕಾರಿಗಳು ಆರ್.ವಿ.ದೇಶಪಾಂಡೆಯವರ ಆಪ್ತ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉದ್ಯಮಿ ಸುಭಾಷ್ ಕೂರವೇಕರ್ ಎಂಬವವರ ಮನೆಯ ಮೇಲೆ ಸಹ ಐ.ಟಿ ದಾಳಿ ನಡೆಸಿ ಮಹತ್ವದ ದಾಖಲೆ ಪತ್ರ ವಶಪಡಿಸಿಕೊಂಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರಾಗಿದ್ದ ಹಾಗೂ ಶಿರಸಿ ಕಾಂಗ್ರೆಸ್ ಅಭ್ಯರ್ಥಿ ಬೀಮಣ್ಣ ನಾಯ್ಕ ರವರ ಮನೆಯ ಮೇಲೆ ದಾಳಿ ನಡೆಸಿರುವುದು ಅನೇಕ ಕುತೂಹಲಕ್ಕೆ ಕಾರಣವಾಗಿದೆ.

  • ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಶುದ್ಧಗೊಳಿಸಿದ ಬಿಜೆಪಿ

    ಪ್ರಕಾಶ್ ರೈ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು ಶುದ್ಧಗೊಳಿಸಿದ ಬಿಜೆಪಿ

    ಕಾರವಾರ: ಶಿರಸಿಯಲ್ಲಿ ನಡೆದ `ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಎನ್ನುವ ರಾಜ್ಯಮಟ್ಟದ ವಿಚಾರಗೋಷ್ಠಿಯಲ್ಲಿ ನಟ ಪ್ರಕಾಶ್ ರೈ ಪಾಲ್ಗೊಂಡಿದ್ದ ವೇದಿಕೆಯನ್ನು ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರು ಗೋ ಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದಾರೆ.

    ಶಿರಸಿ ನಗರದ ಶ್ರೀ ರಾಘವೇಂದ್ರ ಮಠದ ಸಭಾ ಮಂಟಪದಲ್ಲಿ `ಪ್ರೀತಿ ಪದಗಳ ಪಯಣ’ ಎಂಬ ಸಮಿತಿ ಶನಿವಾರ ವಿಚಾರಗೋಷ್ಠಿ ಏರ್ಪಡಿಸಿತ್ತು. ಈ ಸಮಾರಂಭವನ್ನು ನಟ ಪ್ರಕಾಶ ರೈ ಉದ್ಘಾಟನೆ ಮಾಡಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತರು ಗೋಮೂತ್ರ ಸಿಂಪಡಿಸುವ ಮೂಲಕ ವೇದಿಕೆಯನ್ನು ಸ್ವಚ್ಛಗೊಳಿಸಿದರು.

    ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ವಿಶಾಲ್ ಮರಾಠೆ, ಸ್ವಯಂ ಘೋಷಿತ ಬುದ್ದಿಜೀವಿಗಳು, ಸೋಗಲಾಡಿ ಹಾಗೂ ಎಡಬಿಡಂಗಿಗಳು ಕಾರ್ಯಕ್ರಮ ಮಾಡಿ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳವನ್ನು ಶುದ್ಧೀಕರಣವನ್ನು ಮಾಡಿದ್ದೇವೆ ಎಂದು ತಿಳಿಸಿದರು.

    ಅಲ್ಲದೇ ಹಿಂದೂ ಸಮಾಜದವರು ಗೋವನ್ನು ಪೂಜನೀಯ ಸ್ಥಾನದಲ್ಲಿ ಆರಾಧಿಸುತ್ತಾರೆ. ಗೋಮಾಂಸವನ್ನು ಭಕ್ಷಣೆ ಮಾಡುವ ಹಾಗೂ ಹಿಂದೂ ದೇವತೆಗಳನ್ನು ಅಪಮಾನ ಮಾಡುವ ವ್ಯಕ್ತಿಗಳ ಆಗಮನದಿಂದ ಶಿರಸಿ ನಗರವೇ ಅಪವಿತ್ರವಾದಂತಾಗಿದೆ. ಇಂತಹ ಸೋಗಲಾಡಿ ಬುದ್ಧಿಜೀವಿ ಪ್ರಕಾಶ ರೈ ಯನ್ನು ಸಮಾಜ ಕ್ಷಮಿಸದು. ಇಂತಹ ಸಮಾಜಘಾತುಕರನ್ನು ಪರಿಗಣಿಸುವುದು ಮಹಾ ಪಾಪ. ಹೀಗಾಗಿ ನಗರ ಯುವ ಮೋರ್ಚಾ ವತಿಯಿಂದ ಕ್ಷೇತ್ರದ ಶುದ್ಧೀಗೊಳಿಸಲಾಯಿತು ಎಂದು ತಿಳಿಸಿದರು.

  • ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    ಮೊಟ್ಟೆ ಎಂದು ತಿಳಿದು ಪೈಪನ್ನೇ ನುಂಗಿದ ನಾಗರಹಾವು!

    ಕಾರವಾರ: ನಾಗರಹಾವು ಕೋಳಿ, ಕುರಿ, ನಾಯಿ ನುಂಗುವುದನ್ನು ಕೇಳಿರುತ್ತೀರಿ ಅಥವಾ ನೋಡಿರುತ್ತೀರಿ. ಆದರೆ ಇಲ್ಲಿ ನಾಗರಹಾವೊಂದು ಮೊಟ್ಟೆ ಎಂದು ತಪ್ಪಾಗಿ ತಿಳಿದು ಪೈಪನ್ನ ನುಂಗಿದ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಹೊಟ್ಟೆ ಹಸಿವು ತಾಳಲಾರದೆ ಬೇಟೆ ಅರಸಿ ಬಂದ ಹಾವೊಂದು ಶಿರಸಿಯ ಚಿಪ್ಪಗಿ ಗ್ರಾಮದ ಅಬ್ದುಲ್ ಎಂಬುವವರ ಮನೆಗೆ ಬಂದಿದೆ. ಕೋಳಿ ಗೂಡಿಗೆ ನುಗ್ಗಿದ ಹಾವು, ಮೊಟ್ಟೆ ಎಂದುಕೊಂಡು ಪಕ್ಕದಲ್ಲೇ ಇದ್ದ ಎರಡೂವರೆ ಅಡಿ ಉದ್ದದ ಪೈಪನ್ನು ನುಂಗಿದೆ.

    ಬಳಿಕ ತುಂಬಾ ಸಮಯ ಒದ್ದಾಡಿದ ಹಾವನ್ನು ಉರಗ ತಜ್ಞ ಪ್ರಶಾಂತ್ ಹುಲೇಕಲ್ ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ.

    https://www.youtube.com/watch?v=23e5Ur5e-qs&feature=youtu.be

  • ಖಾಸಗಿ ಬಸ್ ಪಲ್ಟಿ: ಓರ್ವನ ದುರ್ಮರಣ

    ಖಾಸಗಿ ಬಸ್ ಪಲ್ಟಿ: ಓರ್ವನ ದುರ್ಮರಣ

    ಕಾರವಾರ: ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 35 ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಇಳಸೂರಿನಲ್ಲಿ ನೆಡೆದಿದೆ.

    ಮೃತರನ್ನು 35 ವರ್ಷದ ದಿನೇಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಈ ಸಂಬಂಧ ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬಸ್ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ 35 ಜನ ಪ್ರಯಾಣಿಕರನ್ನು ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಕಾರವಾರ: ಹಸಿವು ನೀಗಿಸಿಕೊಳ್ಳಲು ನಾಯಿಮರಿಯನ್ನೇ ನುಂಗಲು ಯತ್ನಿಸಿದ ನಾಗರಹಾವು

    ಕಾರವಾರ: ಹಸಿವು ನೀಗಿಸಿಕೊಳ್ಳಲು ನಾಯಿಮರಿಯನ್ನೇ ನುಂಗಲು ಯತ್ನಿಸಿದ ನಾಗರಹಾವು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ರಸ್ತೆಯ ಶನೀಶ್ವರ ದೇವಸ್ಥಾನದ ಬಳಿ ನಾಗರಹಾವೊಂದು ತನ್ನ ಹಸಿವನ್ನು ನೀಗಿಸಿಕೊಳ್ಳಲು ನಾಯಿಮರಿಯನ್ನು ನುಂಗಲು ವ್ಯರ್ಥ ಪ್ರಯತ್ನ ಪಟ್ಟಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಕಿರಣ್ ಫರ್ನಾಂಡಿಸ್ ಎಂಬವರು ಸಾಕಿದ ನಾಯಿ ಒಂದು ತಿಂಗಳ ಹಿಂದೆ ಆರು ಮರಿಗಳಿಗೆ ಜನ್ಮ ನೀಡಿತ್ತು. ಸೋಮವಾರ ರಾತ್ರಿ ನಾಯಿಮರಿಗಳು ಓಡಾಡಿಕೊಂಡಿದ್ದನ್ನು ಕಂಡ ಹಸಿದ ನಾಗರಹಾವು ಇವುಗಳತ್ತ ಬಂದಿದೆ. ಆದರೆ ಗಾತ್ರದಲ್ಲಿ ತನ್ನ ಬಾಯಿಗಿಂತ ದೊಡ್ಡದಿದ್ದ ನಾಯಿ ಮರಿಯನ್ನ ನುಂಗಲಾಗದೇ ಮೂರು ಮರಿಗಳನ್ನ ಕಚ್ಚಿ ಸಾಯಿಸಿದೆ.

    ನಾಗರಹಾವು ನಾಯಿಮರಿಯನ್ನು ನುಂಗುತ್ತಿರುವ ದೃಶ್ಯವನ್ನು ಕಿರಣ್ ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಕೊನೆಗೆ ಉರಗ ತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ತಿಳಿಸಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಇದನ್ನೂ ಓದಿ:ನೀರನ್ನು ಅರಸಿ ನಾಡಿಗೆ ಬಂದ ಕಾಳಿಂಗ: ವಿಡಿಯೋ ನೋಡಿ

    ಇದನ್ನೂ ಓದಿ: ನೀರಿನ ಮೂಲ ಹುಡುಕಿ ನಾಡಿಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    https://www.youtube.com/watch?v=_AEInlLP15Q